Tag: doctor

  • ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಮಂಡ್ಯ: ರಾಜ್ಯಾದ್ಯಂತ ವೈದ್ಯರು ಮುಷ್ಕರ ಮಾಡುತ್ತಿದ್ದರೆ, ಮಂಡ್ಯದ ಡಾಕ್ಟರ್ ಶಂಕರೇಗೌಡ ಮಾತ್ರ ತಮ್ಮ ಪಾಡಿಗೆ ತಾವು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡ್ತಾರೆ. ಮಂಡ್ಯದ ತಮ್ಮ ಕ್ಲೀನಿಕ್‍ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ.

    ಮಂಡ್ಯದ ತಮ್ಮ ಕ್ಲಿನಿಕ್ ನಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ರಮೇಶ್ ಕುಮಾರ್ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು ತರಲು ಮುಂದಾಗಿರೋದು ಒಳ್ಳೆಯದೇ ಆಗಿದೆ. ರಮೇಶ್ ಕುಮಾರ್ ಅವರು ಬಡ ಜನರ ಮೇಲೆ ಕಾಳಜಿ ತೋರಿಸುತ್ತಿರುವುದು ನನಗೆ ಸಂತೋಷವುಂಟು ಮಾಡಿದೆ ಅಂತ ಖಾಸಗಿ ವೈದ್ಯರ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಮುಷ್ಕರ ಒಂದು ಲಾಬಿ. ಮುಷ್ಕರದಲ್ಲಿ ಪಾಲ್ಗೊಳ್ಳಲು ನನಗೆ ಇಷ್ಟವಿಲ್ಲ. ಅಲ್ಲದೆ ಸರ್ಕಾರ ಈ ರೀತಿ ಕಾಯ್ದೆಯನ್ನ ಈ ಹಿಂದೆಯೇ ಮಾಡಬೇಕಿತ್ತು. ಆದ್ರೆ ಈಗ ತಿದ್ದುಪಡಿ ಮಾಡಲು ಹೊರಟಿರೋದು ಪ್ರತಿಭಟನೆಗೆ ಕಾರಣವಾಗಿದೆ. ನೂರಕ್ಕೆ ಎಪ್ಪತ್ತು ಭಾಗ ಜನರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿ ಇಲ್ಲದಿರುವುದೇ ಕಾರಣ ಅಂದ್ರು.

    ಖಾಸಗಿ ವೈದ್ಯರು ಮುಷ್ಕರ ಶುರುಮಾಡಿದಾಗಿನಿಂದ್ಲೂ, 5 ರೂ ಶಂಕರೇಗೌಡ್ರು ಮಾತ್ರ ಒಂದು ದಿನವು ರಜೆ ಮಾಡದೇ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಿಗಾಗಿ ಇವರ ಸೇವೆಗೆ ಮಂಡ್ಯ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ವಿಜಯಪುರ: ವೈದ್ಯನ ಚುಚ್ಚುಮದ್ದಿಗೆ ಬಾಲಕಿ ಸಾವು

    ವಿಜಯಪುರ: ವೈದ್ಯನ ಚುಚ್ಚುಮದ್ದಿಗೆ ಬಾಲಕಿ ಸಾವು

    ವಿಜಯಪುರ: ವೈದ್ಯನ ಎಡವಟ್ಟಿನಿಂದ ಬಾಲಕಿ ಸಾನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದಲ್ಲಿ ನಡೆದಿದೆ.

    8 ವರ್ಷದ ರೂಪಾ ರಾಮಣ್ಣ ಬಂಡಿವಡ್ಡರ ಮೃತಪಟ್ಟಿರುವ ಬಾಲಕಿ. ಅಲಮೇಲ ಪಟ್ಟಣದ ನಿವಾಸಿ ರಾಮು ಬಂಡಿವಡ್ಡರ ಎಂಬವರು ಮಗಳು. ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದಳು.

    ತೀವ್ರ ಜ್ವರದಿಂದ ಬಳಲುತ್ತಿದ್ದ ತಮ್ಮ ಮಗಳು ರೂಪಾಳನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯ ಚಂದ್ರಶೇಖರ ರೂಪಾಗೆ ಚುಚ್ಚುಮದ್ದು ನೀಡಿದ್ದಾನೆ. ಆದರೆ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿ ಬಾಲಕಿ ರೂಪಾ ಇಂದು ಸಾವನ್ನಪ್ಪಿದ್ದಾಳೆ. ರೂಪಾಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಹಿನ್ನೆಲೆಯಲ್ಲಿ ಆಲಮೇಲ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ನೀಡಲಾಗಿದೆ. ಆದರೆ ಎಡವಟ್ಟು ಮಾಡಿದ ವೈದ್ಯ ಪರಾರಿಯಾಗಿದ್ದಾನೆ.

    ಇದನ್ನು ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ

  • ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ

    ವೈದ್ಯರ ನಿರ್ಲಕ್ಷ್ಯಕ್ಕೆ ರಾತ್ರಿ ಮತ್ತೊಂದು ಮಗು ಸಾವು – ರಾಜ್ಯದಲ್ಲಿ ಸಾವಿನ ಸಂಖ್ಯೆ 33ಕ್ಕೆ ಏರಿಕೆ

    ಬೆಳಗಾವಿ: ಖಾಸಗಿ ವೈದ್ಯರ ಮುಷ್ಕರಕ್ಕೆ ರಾತ್ರಿ ಮತ್ತೊಂದು ಮಗು ಜೀವಬಿಟ್ಟಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದೇ 45 ದಿನಗಳ ಕಂದಮ್ಮ ಅಸುನೀಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಖೋಡದಲ್ಲಿ ಸಂಭವಿಸಿದೆ.

    ಸುರೇಶ ವಡ್ರಾಳೆ ಹಾಗೂ ಶ್ರೀದೇವಿ ವಡ್ರಾಳೆ ದಂಪತಿಯ ಮಗು ವಿಪರೀತ ಜ್ವರದಿಂದ ಬಳಲುತ್ತಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ ಅಂತ ಹಾರೂಗೇರಿ ಹಾಗೂ ಮಂಗಳ ಪಟ್ಟಣದ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಕೊನೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

    ಇನ್ನು ಗುರುವಾರ ರಾತ್ರಿ ಸಿಎಂ ಹಾಗೂ ಆರೋಗ್ಯ ಸಚಿವರು ಸೇರಿ ಹಲವರ ಜೊತೆ ಸಭೆ ನಡೆಸಿದ್ದರು. ಆದರೆ ಕೆಪಿಎಂಇ ಕಾಯ್ದೆಯಲ್ಲಿ ಕೆಲವು ಅಂಶಗಳನ್ನು ಕೈಬಿಡಲು ರಮೇಶ್‍ಕುಮಾರ್ ಒಪ್ಪದೇ ಸಭೆಯಿಂದ ಹೊರಗೆ ಬಂದಿದ್ದಾರೆ. ಯಾವುದೇ ಕಾರಣಕ್ಕೂ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಕಾಯ್ದೆ ಮಂಡಿಸಲೇಬೇಕು. ವೈದ್ಯರ ಪ್ರತಿಭಟನೆಗೆ ನಾನು ಹೆದರೋದಿಲ್ಲ ಎಂದು ಸಿಎಂ ಎದುರು ಗಟ್ಟಿ ಧ್ವನಿಯಲ್ಲಿ ಮಾತಾಡಿದ್ದಾರೆ ಎಂದು ತಿಳಿದು ಬಂದಿದೆ.

    ಇಷ್ಟೆಲ್ಲ ಬೆಳವಣಿಗೆ ಮಧ್ಯೆ ಧರಣಿ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆಗೆ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.

  • ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬುಧವಾರ ರಾತ್ರಿಯೇ ಲಕ್ಷ್ಮಿ ಅವರ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ರೂ, ತಲೆಕೆಡೆಸಿಕೊಳ್ಳದ ಸರ್ಕಾರಿ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ಕುಮಾರೇಶ್ವರ ಆಸ್ಪತ್ರೆಗೆ ತಂದಾಗ, ತಪಾಸನೆ ಮಾಡಿದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಸಿದ್ದಾರೆ.

    ಬಾಣಂತಿ ಲಕ್ಷ್ಮಿ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಖಾಸಗಿ ವೈದ್ಯರ ಮುಷ್ಕರಕ್ಕೆ ಬಿಜೆಪಿ ಮುಖಂಡ ಬಲಿ

    ಖಾಸಗಿ ವೈದ್ಯರ ಮುಷ್ಕರಕ್ಕೆ ಬಿಜೆಪಿ ಮುಖಂಡ ಬಲಿ

    ಹುಬ್ಬಳ್ಳಿ: ಖಾಸಗಿ ವೈದ್ಯರ ಮುಷ್ಕರಕ್ಕೆ ಜನರ ಜೀವ ಬಲಿಯಾಗುವ ಘಟನೆಗಳು ನಡೆಯುತ್ತಿವೆ. ನಿನ್ನೆಯಷ್ಟೇ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಮುಖಂಡ ಚನ್ನು ಹಳಿಯಾಳ ಎಂಬವರು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.

    ಹೃದಯಾಘಾತಕ್ಕೆ ಒಳಗಾದ ಚನ್ನು ಹಳಿಯಾಳ ಅವರನ್ನು ಗೋಕುಲ್ ರಸ್ತೆಯಲ್ಲಿರುವ ಸುಚಿರಾಯು ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಆದ್ರೆ ಮುಷ್ಕರದ ಹಿನ್ನೆಲೆ ಸುಚಿರಾಯು ಆಸ್ಪತ್ರೆಯ ಸಿಬ್ಬಂದಿ ಚನ್ನು ಅವರನ್ನು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ಕಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಚನ್ನು ಹಳಿಯಾಳ ಮೃತಪಟ್ಟಿದ್ದಾರೆ.

    ಮೃತ ಚನ್ನು ಹಳಿಯಾಳ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಪ್ತರಾಗಿದ್ದರು. ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಬಿಜೆಪಿ ಪಕ್ಷ ಬಲವರ್ಧನೆ ಶ್ರಮಿಸುತ್ತಿದ್ದರು.

  • ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಚಳಿಗಾಲ ಅಧಿವೇಶನದಲ್ಲಿ ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ಒತ್ತಾಯಿಸಿ ಇಂದು ಖಾಸಗಿ ವೈದ್ಯರು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ.

    ಇದರ ಹಿನ್ನೆಲೆ ವಿಜಯಪುರದ 120 ಖಾಸಗಿ ಆಸ್ಪತ್ರೆಗಳ ವೈದ್ಯರು ತುರ್ತು ಚಿಕಿತ್ಸೆ, ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ಬೆಳಗಾವಿಯಲ್ಲಿ ನಡೆಯುವ ವೈದ್ಯರ ಮುಷ್ಕರಕ್ಕೆ ತೆರಳಿದ್ದಾರೆ. ಒಟ್ಟು ಜಿಲ್ಲೆಯಿಂದ 460 ಖಾಸಗಿ ವೈದ್ಯರು ಬೆಳಗಾವಿಗೆ ತೆರಳಿದ್ದು, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಂದೆ ವೈದ್ಯಕೀಯ ಸೇವೆ ಇಲ್ಲ ಎಂದು ಬೋರ್ಡ್, ಬ್ಯಾನರ್ ಹಾಕಲಾಗಿದೆ.

    ಮಂಗಳವಾರ ಬೆಳಗ್ಗಿನವರೆಗೆ ಹೊರ ರೋಗಿಗಳಿಗೆ ಚಿಕಿತ್ಸೆ ಬಂದ್ ಮಾಡಲಾಗಿದೆ. ಇನ್ನು ವೈದ್ಯರ ಮುಷ್ಕರ ಹಿನ್ನಲೆ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಗೆ ರಜೆ ರದ್ದು ಮಾಡಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೆ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದಾರೆ.

  • ಮಂಡ್ಯ: ಪ್ರಾಣ ಉಳಿಸಿದ ವೈದ್ಯರಿಗೆ ಸನ್ಮಾನ ಮಾಡಿದ ಮಹಿಳೆ

    ಮಂಡ್ಯ: ಪ್ರಾಣ ಉಳಿಸಿದ ವೈದ್ಯರಿಗೆ ಸನ್ಮಾನ ಮಾಡಿದ ಮಹಿಳೆ

    ಮಂಡ್ಯ: ಸರಿಯಾಗಿ ಚಿಕಿತ್ಸೆ ನೀಡದೇ ರೋಗಿಗಳ ಸಾವಿಗೆ ಕಾರಣವಾಗೋ ವೈದ್ಯರಿಗೆ ಸಾರ್ವಜನಿಕರೇ ಬುದ್ಧಿ ಕಲಿಸಿದ ಅದೆಷ್ಟೋ ಉದಾಹರಣೆಗಳನ್ನ ನೀವು ಕೇಳಿರುತ್ತೀರಿ. ಅದಕ್ಕೆ ಭಿನ್ನ ಎಂಬಂತೆ ರೋಗಗ್ರಸ್ಥವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ತನ್ನನ್ನು ಉಳಿಸಿದ ವೈದ್ಯರಿಗೆ ಮಂಡ್ಯದ ಬಡ ಮಹಿಳೆಯೊಬ್ಬರು ಸನ್ಮಾನ ಮಾಡಿದ್ದಾರೆ. ಈ ಮೂಲಕ ಒಳ್ಳೆ ಕೆಲಸ ಮಾಡಿದರೆ ಸನ್ಮಾನ ತಾನಾಗೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂಬ ಸಂದೇಶವನ್ನು ವೈದ್ಯಲೋಕಕ್ಕೆ ರವಾನಿಸಿದ್ದಾರೆ.

    ಮಂಡ್ಯ ಮಿಮ್ಸ್ ಆಸ್ಪತ್ರೆ ಹಲವು ಬಾರಿ ತನ್ನ ಅವ್ಯವಸ್ಥೆಗಳಿಂದಾಗಿ ಸುದ್ದಿಯಾಗಿತ್ತು. ಆದರೆ ಇದೀಗ ಮಂಡ್ಯ ಮಿಮ್ಸ್ ವೈದ್ಯರ ಕಾಳಜಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರು ಬದುಕುಳಿದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ಮದ್ದೂರು ತಾಲೂಕಿನ ತೊರೆಬೊಮ್ಮನಹಳ್ಳಿ ಗ್ರಾಮದ ದಿವ್ಯರಾಣಿ ಎಂಬ ಮಹಿಳೆಗೆ ಏಳು ತಿಂಗಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದರಿಂದ ಆಗಸ್ಟ್ ತಿಂಗಳಲ್ಲಿ ದಿವ್ಯರಾಣಿ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸ್ಕ್ಯಾನ್ ಮಾಡಿ ನೋಡಿದಾಗ ಮಗುವಿಗೆ ತೊಂದರೆಯಾಗಿದೆ ಎಂಬುದು ಗೊತ್ತಾಗಿತ್ತು. ಜೊತೆಗೆ ಒಂದೂವರೆ ಲೀಟರ್‍ನಷ್ಟು ಪಸ್ ಆಗಿದ್ದು, ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಆಗಿತ್ತು. ದೇಹದ ಕೆಲವು ಭಾಗ ಅದಾಗಲೇ ಕೊಳೆಯಲಾರಂಭಿಸಿತ್ತು. ಗರ್ಭಿಣಿಯ ಪ್ರಾಣಕ್ಕೆ ತೊಂದರೆಯಿರುವುದನ್ನು ಅರಿತ ವೈದ್ಯರು ತಕ್ಷಣ ಆಕೆಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿದ್ದರು.

    ಅಪೆಂಡಿಕ್ಯುಲರ್ ಗ್ಯಾಂಗ್ರಿನ್ ಇಡೀ ಶರೀರಕ್ಕೆ ಹರಡೋ ಇನ್ಫೆಕ್ಷನ್ ಇರೋ ಖಾಯಿಲೆಯಾಗಿದ್ದು, ತಕ್ಷಣ ವೈದ್ಯರು ಇನ್ಫೆಕ್ಷನ್ ಆಗಿರುವ ಸಣ್ಣ ಕರುಳನ್ನು ತೆಗೆದು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಆದರೆ ಮಗು ಹೊಟ್ಟೆಯಲ್ಲೇ ಸತ್ತು ಹೋಗಿತ್ತು. ಶಸ್ತ್ರ ಚಿಕಿತ್ಸೆ ಆದ ನಂತರ ದಿವ್ಯರಾಣಿಗೆ 14 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇರಿಸಿದ್ದರು. ಸತತ 52 ದಿನಗಳ ಕಾಲ ಆಸ್ಪತ್ರೆಯಲ್ಲೇ ವೈದ್ಯರು ದಿವ್ಯರಾಣಿಗೆ ಸೂಕ್ತ ಚಿಕಿತ್ಸೆ ನೀಡಿ ಆಕೆ ಗುಣಮುಖರಾದ ನಂತರ ಡಿಸ್ಚಾರ್ಜ್ ಮಾಡಿದ್ದರು.

    ಸಂಪೂರ್ಣ ಪ್ರಜ್ಞಾಹೀನರಾಗಿದ್ದ ದಿವ್ಯರಾಣಿಗೆ ವೈದ್ಯರು ನೀಡಿದ ಚಿಕಿತ್ಸೆ ಬಗ್ಗೆ ಅರಿವಿಲ್ಲ. ಕುಟುಂಬಸ್ಥರು ದಿವ್ಯರಾಣಿಗೆ ವೈದ್ಯರು ಆಕೆಯನ್ನು ಉಳಿಸಲು ತೆಗೆದುಕೊಂಡ ಕಾಳಜಿ ಬಗ್ಗೆ ವಿವರಿಸಿ ಹೇಳಿದ್ದರು. ಇದರಿಂದ ಮಿಮ್ಸ್ ಆಸ್ಪತ್ರೆಗೆ ಬಂದ ದಿವ್ಯರಾಣಿ ತನ್ನ ಪ್ರಾಣ ಉಳಿಸಿದ ವೈದ್ಯರಿಗೆ ಶಾಲು ಹೊದಿಸಿ, ಹೂ ಮತ್ತು ಸಿಹಿ ನೀಡಿ ತನ್ನ ಕೈಲಾದ ಮಟ್ಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸೋ ವೈದ್ಯರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳೋದು ಎಷ್ಟು ನಿಜವೋ ಅದೇ ರೀತಿ ರೋಗಿಗಳ ಉಳಿವಿಗೆ ಶ್ರಮಿಸೋ ಉತ್ತಮ ವೈದ್ಯರಿಗೆ ಸನ್ಮಾನ ಕೂಡ ಮಾಡಿ ಗೌರವಿಸ್ತಾರೆ ಎನ್ನುವುದಕ್ಕೆ ಮಂಡ್ಯದ ದಿವ್ಯರಾಣಿ ಪ್ರಕರಣ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಬಹುದು.

  • ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು – ಬಾಗಲಕೋಟೆ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ

    ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿ ಸಾವು – ಬಾಗಲಕೋಟೆ ಆಸ್ಪತ್ರೆಯ ಮುಂದೆ ಶವವಿಟ್ಟು ಪ್ರತಿಭಟನೆ

    ಬಾಗಲಕೋಟೆ: ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರು ಶವವನ್ನು ಆಸ್ಪತ್ರೆಯ ಮುಂದೆ ಇಟ್ಟು ಪತ್ರಿಭಟನೆ ಮಾಡುತ್ತಿರುವ ಘಟನೆ ಕುಮಾರೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ.

    ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಗ್ರಾಮದ ನಿವಾಸಿಯಾದ ಪರಮಾನಂದ ಐಗಳಿ (25) ಎಂಬ ಯುವಕನೇ ಮೃತಪಟ್ಟ ದುರ್ದೈವಿ. ನವೆಂಬರ್ 03 ನಡೆದ ವೈದ್ಯರ ಮುಷ್ಕರದ ದಿನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪರಮಾನಂದರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ.

    ಪರಮಾನಂದ ಅವರಿಗೆ ತೀವ್ರ ವಾಂತಿ ಬೇದಿಯಿಂದ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಶನಿವಾರ ತಡರಾತ್ರಿ ಪರಮಾನಂದ ಅವರಿಗೆ ವೈದ್ಯರು ಇಂಜೆಕ್ಷನ್ ನೀಡಿದ ನಂತರ ಮೃತಪಟ್ಟಿದ್ದಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಇರುವ ಕಾರಣದಿಂದಲೇ ಮೃತ ಪಟ್ಟಿದ್ದಾರೆ ಎಂದು ತಾಯಿ ಹಾಗೂ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೇ ಆಸ್ಪತ್ರೆಯ ಮುಂದೇ ಶವವಿಟ್ಟು ಪ್ರತಿಭಟನೆ ನಡೆಸಿ ನ್ಯಾಯಕೊಡಿಸಬೇಕೆಂದು ಕಣ್ಣೀರಿಟ್ಟಿದ್ದಾರೆ.

  • ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

    ವಿಡಿಯೋ: ಮಂಚದ ಸಮೇತ 8 ಕಿ.ಮೀ ದೂರ ಬಾಣಂತಿಯನ್ನು ಹೊತ್ತು ಸಾಗಿದ ಡಾಕ್ಟರ್

    ಭುವನೇಶ್ವರ: ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರದೆ, ಸೂಕ್ತ ಚಿಕಿತ್ಸೆ ನೀಡದೆ ಅಥವಾ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳು ಬಲಿಯಾದ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ವೈದ್ಯರು ಸುಮಾರು 8 ಕಿ.ಮೀ ದೂರ ಬಾಣಂತಿಯೊಬ್ಬರನ್ನು ಮಂಚದ ಸಮೇತ ಹೊತ್ತೊಯ್ದು ಮಾದರಿಯಾಗಿದ್ದಾರೆ.

    ಈ ಘಟನೆ ಒಡಿಶಾದ ಮಲ್ಕಾಂಗಿರಿ ಜಿಲ್ಲೆಯ ಸರಿಗೆಟಾ ಎಂಬ ಕುಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಪಾಪ್ಲುರ್ ಆಸ್ಪತ್ರೆಯಲ್ಲಿ ವೈದ್ಯರಾಗಿರೋ ಡಾ. ಓಂಕಾರ್ ಹೋಟಾ ಅವರು ಬಾಣಂತಿಯನ್ನ 8 ಕಿ.ಮೀ ದೂರದ ಗ್ರಾಮದಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

    ಸರಿಗೇಟಾ ಗ್ರಾಮದ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ತಿಳಿದ ತಕ್ಷಣ ಓಂಕಾರ್ ಅವರು ಅಟೆಂಡೆಂಟ್‍ವೊಬ್ಬರ ಜೊತೆ ಸರಿಗೆಟಾ ಗ್ರಾಮಕ್ಕೆ ದೌಡಾಯಿಸಿದ್ದರು. ಗರ್ಭಿಣಿಗೆ ಅದಾಗಲೇ ಅತಿಯಾದ ರಕ್ತಸ್ರಾವವಾಗಿದ್ದರಿಂದ ಗ್ರಾಮದಲ್ಲೇ ವೈದ್ಯರು ಆಕೆಗೆ ಹೆರಿಗೆ ಮಾಡಿಸಿದ್ರು. ಆದರೆ ಹೆರಿಗೆ ನಂತರ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಆದರೆ ಗ್ರಾಮಸ್ಥರು ಮಹಿಳೆಯನ್ನು ಕರೆದೊಯ್ಯಲು ನಿರಾಕರಿಸಿದ್ದರು.

    ರಸ್ತೆ ಸರಿ ಇಲ್ಲದ ಕಾರಣ ವೈದ್ಯರು ಹಾಗೂ ಕೆಲವು ಗ್ರಾಮಸ್ಥರು ಕಾಲ್ನಡಿಗೆಯಲ್ಲೇ ಹೋಗಬೇಕಿತ್ತು. ಬಾಣಂತಿಯನ್ನು ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿದ್ದ ಡಾ. ಓಂಕಾರ್ ಹಾಗೂ ಮಹಿಳೆಯ ಪತಿ ಬಾಣಂತಿಯನ್ನು ಮಂಚದಲ್ಲಿ ಮಲಗಿಸಿಕೊಂಡು ಸುಮಾರು 8 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲೇ ಹೊತ್ತೊಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಈ ಮೂಲಕ ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಡಾ.ಓಂಕಾರ್ ಸಾಬೀತು ಪಡಿಸಿದ್ದಾರೆ.

    ಚಿಕಿತ್ಸೆ ಹಾಗೂ ಆರೈಕೆಯ ನಂತರ ಬಾಣಂತಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=gmOE2S5WvH4

     

     

     

     

  • ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

    ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

    ಉಡುಪಿ: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಉಡುಪಿ ಜಿಲ್ಲೆಯ 35ಕ್ಕೆ ಹೆಚ್ಚು ಪ್ರಮುಖ ಖಾಸಗಿ ಆಸ್ಪತ್ರೆಗಳು ಎಮರ್ಜೆನ್ಸಿಯನ್ನೂ ಬಂದ್ ಮಾಡಿದೆ. ಒಪಿಡಿಗಳಲ್ಲೂ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ಸಾವಿರಕ್ಕೂ ಮಿಕ್ಕಿ ಕ್ಲಿನಿಕ್‍ಗಳು ಮುಚ್ಚಿದೆ. ಈ ನಡುವೆ ಮಣಿಪಾಲ ಕೆಎಂಸಿ ಆಸ್ಪತ್ರೆ ರೋಗಿಗಳಿಗೆ ತುರ್ತು ಚಿಕಿಕಿತ್ಸೆ ಮಾಡುತ್ತಿದೆ.

    ಹೊರ ಜಿಲ್ಲೆ- ಹೊರ ರಾಜ್ಯಗಳಿಂದ ಬರುವ ಪೇಷಂಟ್‍ಗಳಿಗೆ ಕೆಎಂಸಿಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಿಂದಲೂ ಗಂಭೀರವಾಗಿರುವ ರೋಗಿಗಳನ್ನು ಕೆಎಂಸಿಗೆ ರವಾನೆ ಮಾಡಲಾಗುತ್ತಿದೆ. ಆಸ್ಪತ್ರೆಯ ಒಪಿಡಿ ಮಾತ್ರ ಇಂದು ರೋಗಿಗಳು ಇಲ್ಲದೆ ಖಾಲಿಯಾಗಿತ್ತು. ಹೊರ ರಾಜ್ಯದಿಂದ ಬರುವ ಪೇಷಂಟ್‍ಗಳು ಮಾಹಿತಿಯಿಲ್ಲದೆ ಪರದಾಡುವಂತಾಗಿದೆ.

    ಮುಷ್ಕರದಲ್ಲಿ ನಾವೂ ಪಾಲ್ಗೊಂಡಿದ್ದೇವೆ. ತುರ್ತು ಮತ್ತು ಅಪಘಾತ ಚಿಕಿತ್ಸೆ ಕೊಡುತ್ತಿದ್ದೇವೆ. ಬೆಳಗ್ಗೆಯಿಂದ ತುಂಬಾ ರೋಗಿಗಳು ಆಸ್ಪತ್ರ¬ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನ ಹಿಂದೆಯೇ ಆಸ್ಪತ್ರೆಯಲ್ಲಿ, ಬಸ್ಸುಗಳಲ್ಲಿ, ಎಲ್ಲಾ ಜಿಲ್ಲೆಗಳ ಇನ್ಫಾರ್ಮೆಷನ್ ಸೆಂಟರ್‍ಗಳಲ್ಲಿ ಕೆಎಂಸಿ ಬಂದ್ ಇರುವ ಬಗ್ಗೆ ಮಾಹಿತಿ ಪ್ರಚಾರ ಮಾಡಿದ್ದೆವು. ಬೇರೆ ಬೇರೆ ವಿಭಾಗಗಳ ಮುಖ್ಯಸ್ಥರ ಮೂಲಕ ಬಂದ್ ಇರುವ ಬಗ್ಗೆ ಪ್ರಚಾರ ಕೊಟ್ಟಿದ್ದೆವು. ಈ ಹಿಂದೆ ಅಡ್ಮಿಟಾದ- ಪೇಷಂಟ್‍ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವರ್ಷಪೂರ್ತಿ ನಾವು ಸೇವೆ ಮಾಡುತ್ತೇವೆ. ನಮ್ಮ ನೋವನ್ನು ಸರ್ಕಾರ ಕೇಳಬೇಕು, ಎಂದು ಕೆಎಂಸಿ ಮಣಿಪಾಲ್ ಹಿರಿಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಹೇಳಿದರು.

    ಮಣಿಪಾಲ ಕೆಎಂಸಿಯ ಒಪಿಡಿ ಕೂಡಾ ಬಿಕೋ ಅನ್ನುತ್ತಿತ್ತು. ಪ್ರತಿಭಟನೆಯ ಮಾಹಿತಿಯಿಲ್ಲದವರು ನೂರಾರು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದು ಹೋಗಿದ್ದಾರೆ. ಕೇರಳದಿಂದ ಕೂಡಾ ರೋಗಿಗಳು ಒಪಿಡಿಗೆ ಬಂದಿದ್ದರು. ನಾಳೆ ಬೆಳಗ್ಗೆ ಚಿಕಿತ್ಸೆ ನೀಡುವುದಾಗಿ ಹೇಳಿ ವೈದ್ಯರು ಸೆಕ್ಯೂರಿಟಿ ಗಾರ್ಡ್‍ಗಳನ್ನು ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಣಿಪಾಲ ಕೆಎಂಸಿ ಹಿರಿಯ ವೈದ್ಯ ಡಾ. ಪದ್ಮರಾಜ ಹೆಗ್ಡೆ, ಎಲ್ಲರಿಗೂ ಎಮರ್ಜೆನ್ಸಿ ಟ್ರೀಟ್ ಮೆಂಟ್ ಕೊಟ್ಟಿದ್ದೇವೆ. ಎರಡ್ಮೂರು ಪೇಷಂಟ್ ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದಾರೆ. ಬೈಂದೂರು- ಕುಂದಾಪುರದಿಂದ ಅಪಘಾತದ ಪ್ರಕರಣಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆಯೂ ಆಸ್ಪತ್ರೆಯ ಎಮರ್ಜೆನ್ಸಿ ಓಪನ್ ಇರ್ತದೆ. ಹೆಚ್ಚುವರಿ ವೈದ್ಯರು- ನರ್ಸ್- ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.