Tag: doctor

  • ಮೂರು ಹಲ್ಲು ಕಿತ್ತು ಸಾವು ಕರುಣಿಸಿದ ಹುಬ್ಬಳ್ಳಿ ವೈದ್ಯ !

    ಮೂರು ಹಲ್ಲು ಕಿತ್ತು ಸಾವು ಕರುಣಿಸಿದ ಹುಬ್ಬಳ್ಳಿ ವೈದ್ಯ !

    – ಹುಬ್ಬಳ್ಳಿಯ ಡಾಕ್ಟರ್ ವಿರುದ್ಧ ಆಕ್ರೋಶ

    ಹುಬ್ಬಳ್ಳಿ: ವೈದ್ಯರ ಯಡವಟ್ಟಿನಿಂದಾಗಿ ರೋಗಿ ತನ್ನ ಜೀವವನ್ನೇ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಅಬ್ದುಲ್ ಖಾದರ್ ಸಾವನ್ನಪ್ಪಿದ ರೋಗಿ. ಹುಬ್ಬಳ್ಳಿಯ ರತ್ನಾ ಡೆಂಟಲ್ ಕ್ಲಿನಿಕ್ ವೈದ್ಯ ವಿರೇಶ್ ಮಾಗಳದ್ ಅವರ ಯಡವಟ್ಟಿನಿಂದಾಗಿ ಅಬ್ದುಲ್ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹಲ್ಲು ನೋವು ಎಂದು ಆಸ್ಪತ್ರೆಗೆ ಹೋದ ಅಬ್ದುಲ್ ಅವರ ಮೂರು ಹಲ್ಲುಗಳನ್ನು ವೈದ್ಯರು ಕಿತ್ತಿದ್ದಾರೆ. ಅಷ್ಟೇ ಅಲ್ಲದೇ ಸಮರ್ಪಕ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿತ್ತು.

    ಅಬ್ದುಲ್ ಖಾದರ್ ತೀವ್ರ ರಕ್ತ ಸ್ರಾವದಿಂದ ಪ್ರಜ್ಞೆ ಹೀನ ಸ್ಥಿತಿಗೆ ಹೋಗಿದ್ದರು. ಕೋಮಾ ಸ್ಥಿತಿಯಲ್ಲಿದ್ದ ಅಬ್ದುಲ್ ರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಐದು ದಿನಗಳ ಜೀವನ್ಮರಣದ ಹೋರಾಟ ನಡೆಸಿ ರೋಗಿ ಅಬ್ದುಲ್ ಜೀವ ಬಿಟ್ಟಿದ್ದಾರೆ.

    ಸದ್ಯ ವೈದ್ಯರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

    ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

    ಕಲಬುರಗಿ: ಹೆಣ್ಣು ಮಗು ಹುಟ್ಟಿದರೂ ನಿಮಗೆ ಗಂಡು ಮಗು ಹುಟ್ಟಿದೆ ಎಂದು ವೈದ್ಯರು ದಂಪತಿಗೆ ಹೇಳಿ ಎಡವಟ್ಟು ಮಾಡಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಜೇವರ್ಗಿ ತಾಲೂಕಿನ ಕೋಣಶಿರಸಗಿ ಗ್ರಾಮದ ನಿವಾಸಿ ನಂದಮ್ಮ ಅವರನ್ನು ಎರಡು ದಿನಗಳ ಹಿಂದೆ ಹೆರಿಗೆಗೆಂದು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಗುರುವಾರ ರಾತ್ರಿ ನಂದಮ್ಮಗೆ ಹೆರಿಗೆಯಾಗಿದೆ. ಇದೇ ಸಂದರ್ಭದಲ್ಲಿ ಬೇರೊಬ್ಬ ಗರ್ಭಿಣಿಗೂ ಮಗು ಹುಟ್ಟಿದೆ. ವೈದ್ಯರು ಎರಡು ಮಗುವನ್ನು ಐಸಿಯುನಲ್ಲಿ ಇಟ್ಟಿದ್ದಾರೆ.

    ಹೆರಿಗೆಯಾದ ಬಳಿಕ ನಂದಮ್ಮ ಕುಟುಂಬಸ್ಥರು ಮಗು ತೋರಿಸುವಂತೆ ಕೇಳಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ತಂದು ಕೊಟ್ಟಿದ್ದಾರೆ. ನಂತರ 15 ನಿಮಿಷ ಬಿಟ್ಟು ಬಂದು ಮಗು ನಿಮ್ಮದಲ್ಲ ಟೋಕನ್ ನಂಬರ್ ಬದಲಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬಸ್ಥರು ತಕ್ಷಣ ನೀವು ಸುಳ್ಳು ಹೇಳುತ್ತಿದ್ದೀರಿ ನಮಗೆ ಗಂಡು ಮಗು ಜನಿಸಿರುವುದು ಎಂದು ಆಕ್ರೋಶಗೊಂಡು ಆಸ್ಪತ್ರೆಯ ಸಿಬ್ಬಂದಿ ಜೊತೆ ಜಗಳವಾಡಿದ್ದಾರೆ. ಇಬ್ಬರ ನಡುವೆ ಕೆಲ ಸಮಯ ವಾಗ್ವಾದ ನಡೆದಿದೆ.

    ವೈದ್ಯರು ಬಂದು ಒಂದೇ ಸಮಯಕ್ಕೆ ಎರಡು ಹೆರಿಗೆಯಾಗಿದ್ದರಿಂದ ಗೊಂದಲವಾಗಿದೆ. ಈಗ ವೈದ್ಯಕೀಯ ಪರೀಕ್ಷೆ ನಡೆಸುತ್ತೇವೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಗೊಂದಲ ಬಗೆಹರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಕುಟುಂಬಸ್ಥರು ಕೂಡ ಸಮ್ಮತಿಸಿದ್ದರು. ವೈದ್ಯರು ಪರೀಕ್ಷೆ ಮಾಡಿ ನಿಮಗೆ ಹೆಣ್ಣು ಮಗು ಜನಿಸಿರುವುದು ಎಂದು ಪೋಷಕರಿಗೆ ತಂದು ಕೊಟ್ಟಿದ್ದಾರೆ. ಆದರೆ ಪೋಷಕರು ನಮಗೆ ಹೆಣ್ಣು-ಗಂಡು ಎಂದು ಭೇದವಿಲ್ಲ ನಮ್ಮ ಮಗು ಯಾವುದು ಎಂದು ನಿರೂಪಿಸಿ ಎಂದು ಕೇಳಿಕೊಂಡಿದ್ದಾರೆ. ಸದ್ಯಕ್ಕೆ ಎರಡು ಮಕ್ಕಳನ್ನು ಚಿಕಿತ್ಸೆಗಾಗಿ ಐಸಿಯುನಲ್ಲಿ ಇಟ್ಟಿದ್ದಾರೆ.

  • ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಡುಪಿಯ ಮಹಿಳೆ

    ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಉಡುಪಿಯ ಮಹಿಳೆ

    ಉಡುಪಿ: ಎರಡು ದಿನಗಳ ಹಿಂದೆ ಜಿಲ್ಲೆಯ ಕೋಟದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ಅವರ ಬಹು ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಕುಟುಂಬ ಸದಸ್ಯರ ಈ ನಿರ್ಧಾರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ಜಿಲ್ಲೆಯ ಕೋಟದಲ್ಲಿ ಎರಡು ದಿನಗಳ ಹಿಂದೆ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಪರಿಣಾಮವಾಗಿ ಸ್ಥಳದಲ್ಲೇ ತಾಯಿ-ಮಗ ಮೃತಪಟ್ಟಿದ್ದರು. ಅಲ್ಲದೇ ಭಾಸ್ಕರ್ ಮತ್ತು ಕಸ್ತೂರಿ ಎಂಬವರು ಗಂಭೀರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಕಳೆದ ರಾತ್ರಿ ಕಸ್ತೂರಿಯವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ವೈದ್ಯರು ದೃಢಪಡಿಸಿದ್ದರು.

    ಇದರಿಂದ ಕಸ್ತೂರಿ ಅವರ ಇಬ್ಬರು ಸಹೋದರರು ಅಂಗಾಂಗ ದಾನ ಮಾಡುವ ಬಗ್ಗೆ ನಿರ್ಧರಿಸಿ ವೈದ್ಯರಿಗೆ ತಿಳಿಸಿದ್ದಾರೆ. ಕುಟುಂಬದವರ ನಿರ್ಧಾರದ ಮೇರೆಗೆ ಕೆಎಂಸಿ ವೈದ್ಯರು ಬೆಂಗಳೂರಿನ ತಜ್ಞರನ್ನು ಸಂಪರ್ಕಿಸಿ ಅಂಗಾಂಗ ದಾನ ಪಡೆಯಲು ಬೇಕಾದ ಸಿದ್ಧತೆ ನಡೆಸಿ, ಇಂದು ಬೆಳಗ್ಗೆ ಎಂಟು ಗಂಟೆಗೆ ಎರಡು ಕಿಡ್ನಿ, ಕಣ್ಣುಗಳು, ಯಕೃತ್, ಹೃದಯ ಕವಾಟವನ್ನು ದಾನ ಪಡೆದಿದ್ದಾರೆ.

    ಕಸ್ತೂರಿ ಅವರಿಂದ ಪಡೆದ ಅಂಗಾಂಗಗಳನ್ನು ಮಂಗಳೂರಿನ ಎಜೆ ಆಸ್ಪತ್ರೆ, ಫಾದರ್ ಮುಲ್ಲರ್ಸ್ ಆಸ್ಪತ್ರೆ, ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಗಿದೆ. ಮಣಿಪಾಲ ಕೆಎಂಸಿಯ ಇಬ್ಬರು ರೋಗಿಗಳಿಗೆ ಎರಡು ಕಣ್ಣುಗಳು ಮತ್ತು ಒಬ್ಬರಿಗೆ ಕಿಡ್ನಿಯನ್ನು ಅಳವಡಿಸಲಾಗುವುದು ಎಂದು ಕೆಎಂಸಿ ಮೆಡಿಕಲ್ ಅಧಿಕಾರಿ ಮಾಹಿತಿ ನೀಡಿದರು.

    ಈ ವೇಳೆ ಮಣಿಪಾಲದಿಂದ ಮಂಗಳೂರಿನವರೆಗೆ ಟ್ರಾಫಿಕ್ ಜಾಮ್ ಆಗದಂತೆ ಸಂಚಾರಿ ಪೊಲೀಸರು ನಿಗಾವಹಿಸಿದ್ದರು. ಆರು ಮಂದಿ ರೋಗಿಗಳು ಆರೋಗ್ಯವಂತರಾಗಿ ಭಾಸ್ಕರ ಮತ್ತು ಕಸ್ತೂರಿಯ ಮಕ್ಕಳಿಗೆ ಹರಸಿದರೆ ಅದೇ ನಮಗೆ ದೊಡ್ಡ ಆಶೀರ್ವಾದ ಎಂದು ಕುಟುಂಬಸ್ಥರು ಹೇಳಿದ್ದಾರೆ. ತೀವ್ರ ದುಖಃದ ಸಮಯದಲ್ಲೂ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡು ಆರು ಜನರ ಪ್ರಾಣ ಉಳಿಯಲು ಕಾರಣರಾದ ಕಸ್ತೂರಿ ಅವರ ಕುಟುಂಬಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಪರಪ್ಪನ ಅಗ್ರಹಾರದಲ್ಲಿ 2ನೇ ರಾತ್ರಿ- ಇನ್ಸುಲಿನ್ ಪಡೆದು ನಿದ್ದೆಗೆ ಜಾರಿದ ರವಿ ಬೆಳಗೆರೆ

    ಪರಪ್ಪನ ಅಗ್ರಹಾರದಲ್ಲಿ 2ನೇ ರಾತ್ರಿ- ಇನ್ಸುಲಿನ್ ಪಡೆದು ನಿದ್ದೆಗೆ ಜಾರಿದ ರವಿ ಬೆಳಗೆರೆ

    – ಇಂದು ಪುನಃ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ

    ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದ ಕೇಸ್ ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರವಿ ಬೆಳಗೆರೆ ಅವರು ಜೈಲಿನಲ್ಲಿ 2ನೇ ರಾತ್ರಿ ಕಳೆದಿದ್ದಾರೆ.

    ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಂಗಳವಾರ ಜೈಲಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ರವಿ ಬೆಳಗೆರೆಯವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ರಕ್ತಪರೀಕ್ಷೆ ವರದಿ ಬಂದ ಬಳಿಕ ನೋಡೋಣ ಎಂದು ಹೇಳಿ ವಾಪಸ್ ಕಳುಹಿಸಿದ್ದರು.

    ರವಿ ಬೆಳಗೆರೆ ಆರೋಗ್ಯದಲ್ಲಿ ಬದಲಾವಣೆ ಸಾಧ್ಯತೆ ಹಿನ್ನಲೆಯಲ್ಲಿ ಜೈಲಿನಲ್ಲಿಯೇ ವೈದ್ಯರನ್ನು ನಿಯೋಜಿಸಲಾಗಿದೆ. ರಾತ್ರಿ 11.30ರ ವೇಳೆಗೆ ಮನೆಯ ಊಟ ಸೇವಿಸಿದ ರವಿ ಬೆಳಗೆರೆ ನಿದ್ದೆಗೆ ಜಾರಿದ್ದರು. ಸದ್ಯ ಜೈಲಾಸ್ಪತ್ರೆಯ 8ನೇ ಕೊಠಡಿಯಲ್ಲಿರುವ ರವಿ ಬೆಳಗೆರೆಯವರನ್ನು ಇಂದು ಮಧ್ಯಾಹ್ನ ಪುನಃ ಆಸ್ಪತ್ರೆಗೆ ಕರೆದೊಯ್ಯುವ ಸಾಧ್ಯತೆ ಇದೆ.

    ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚೇತನಾ ಬೆಳಗೆರೆ, ನಮ್ಮ ತಂದೆಯವರಿಗೆ ಮೊದಲೇ ಆರೋಗ್ಯ ಸರಿಯಿಲ್ಲ ಇದರ ಮಧ್ಯೆ ಅವರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದರು.

  • ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ಕೋಲ್ಕತ್ತಾ: ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ನಡುವಿನ ನಡುವೆ ಹೋರಾಟ ನಡೆಸುತ್ತಿದ್ದ ತಾಯಿಯ ಕೊನೆ ಆಸೆ ಈಡೇರಿಸಲು ಯುವಕನೊಬ್ಬ ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ಕೋಲ್ಕತ್ತಾದ ರೂಬಿ ಆಸ್ಪತ್ರೆಯಲ್ಲಿ ನಡೆದಿದೆ.

    ಅಮೆರಿಕದ ಜೆನೆಸಿಯೊ ನೆವಾರ್ಕ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ್ ರಾಯ್ ಬರ್ಧಾನ್ (33) ಹಾಗೂ ಅಮೆರಿಕದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿರುವ ಚಂದ್ರಿಮಾ ಚಟರ್ಜಿ ಅವರ ವಿವಾಹವು ಡಿಸೆಂಬರ್ 15 ರಂದು ನಿಗದಿಯಾಗಿತ್ತು.

    ಈ ಮಧ್ಯೆ ಭಾಸ್ಕರ್ ಅವರ ತಾಯಿ ಭಶ್ವತಿ (61) ಅವರು ಕ್ಯಾನ್ಸರ್ ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗನ ಮದುವೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ವೈದ್ಯರು ಸಹ ಡಿ.15ರ ವರೆಗೆ ತಾಯಿ ಬದುಕುವುದು ಅನುಮಾನ. ಹೀಗಾಗಿ ಬೇಗನೇ ಮದುವೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದರು.

    ಇದರಿಂದ ತಾಯಿ ಕೊನೆ ಆಸೆ ನೆರವೇರಿಸಲು ಮುಂದಾದ ಭಾಸ್ಕರ್ ಅವರು ತಾಯಿ ಅವರಿಗೆ ಚಿಕಿತ್ಸೆ ನೀಡುತಿದ್ದ ಕೊಲ್ಕತ್ತಾದ ರೂನಿ ಆಸ್ಪತ್ರೆ ಕೊಠಟಿಯಲ್ಲೇ ಗುರುವಾರ ಮದುವೆಗೆ ಸಿದ್ಧತೆ ನಡೆಸಿ, ಸ್ಕೈಪ್ ಮೂಲಕ ಅಮೆರಿಕದಲ್ಲಿದ್ದ ಚಂದ್ರಿಮಾ ಅವರನ್ನು ಮದುವೆಯಾಗಿದ್ದಾರೆ. ಇವರ ವಿವಾಹ ಮಹೋತ್ಸವವು ಬೆಂಗಾಲಿ ಸಾಂಪ್ರದಾಯದಂತೆ ನಡೆಯಿತು.

    ಈ ವೇಳೆ ಮದುಮಗನ ವೇಷದಲ್ಲಿದ್ದ ಮಗನನ್ನು ತಾಯಿ ಕಣ್ತುಂಬಿಕೊಂಡರು. ಇಬ್ಬರ ಮದುವೆ ನೋಡಿದ ಅವರು ಮನ ತುಂಬಿ ಆರ್ಶೀವಾದಿಸಿದ್ದಾರೆ.

    ಈ ವೇಳೆ ಮಾತನಾಡಿದ ಭಾಸ್ಕರ್ ಅವರು, ತಮ್ಮ ತಾಯಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ, ಆದರೆ ಅವರ ಮುಖದ ಮೇಲಿನ ನಗು ಹಾಗೂ ಕಣ್ಣಂಚಿನ ಸಂತೋಷದ ನೀರನ್ನು ನಾವು ನೋಡಬಹುದು. ಇದುವೆ ನಮಗೇ ಆರ್ಶೀವಾದ ಎಂದು ಹೇಳಿದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭಶ್ವತಿ ಪರಿಸ್ಥಿತಿ ಚಿಂತಜನಕವಾಗಿದ್ದು, ಈ ವೇಳೆ ಮಗನ ಮದುವೆ ನೋಡಲು ಆಸೆಪಟ್ಟಿದ್ದರು. ಅದ್ದರಿಂದ ಆಡಳಿತ ಮಂಡಳಿ ಇತರೇ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮದುವೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿತ್ತು ಎಂದು ಆಸ್ಪತ್ರೆಯ ವೈದ್ಯ ಅರಂಧಮ್ ರಾಯ್ ಚೌಧರಿ ತಿಳಿಸಿದ್ದಾರೆ.

  • ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಸಾವಿನಲ್ಲೂ 9 ಮಂದಿ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸಾರ್ಥಕತೆ ಮೆರೆದ ಮಹಿಳೆ

    ಕೊಯಮತ್ತೂರು: ಮೆದುಳು ನಿಷ್ಕ್ರಿಯಗೊಂಡಿದ್ದ 56 ವರ್ಷದ ಮಹಿಳೆಯೊಬ್ಬರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಕೊಯಮತ್ತೂರಿನ ಬ್ಯಾಂಕ್‍ವೊಂದರಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಮೃತಪಡುವ ಮೊದಲು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.

    ನವೆಂಬರ್ 30 ರಂದು ಇವರು ಆಫೀಸ್‍ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ಸಹ ಉದ್ಯೋಗಿಗಳು ಕೂಡಲೇ ಇವರನ್ನು ಸಮೀಪದ ಕೆ.ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ಅವರಿಗೆ ಅಧಿಕ ರಕ್ತ ಒತ್ತಡ, ಕಾರ್ಡಿಯೊ-ವ್ಯಾಸ್ಕೂಲರ್ (ಹೃದಯ-ರಕ್ತನಾಳದ ಸಮಸ್ಯೆ) ಮತ್ತು ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ವೈದ್ಯರಿಗೆ ತಿಳಿಯಿತು.

    ಪರಿಣಿತ ವೈದ್ಯರ ತಂಡವೊಂದು ಭಾನುವಾರ ಆಕೆಯನ್ನ ಆಪರೇಷನ್ ಮಾಡಿ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆಯ ಮೆದುಳು ನಿಷ್ಕ್ರಿಯವಾಯಿತು. ಅಷ್ಟೇ ಅಲ್ಲದೇ ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗದಷ್ಟು ಹಾನಿಯಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ ಭಕ್ತವತ್ಸಲಂ ಹೇಳಿದರು.

    ವೈದ್ಯರು ಮತ್ತೆ ಎರಡು ಪರೀಕ್ಷೆಗಳನ್ನು ಮಾಡಿ ಸಂಜೆ ಹೊತ್ತಿಗೆ ಆಕೆಯ ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಹಿಳೆಯ ಮಗ ಮತ್ತು ಮಗಳ ಇಬ್ಬರ ಅನುಮತಿಯನ್ನು ಪಡೆದು ಹೃದಯ, ಯಕೃತ್ತು, ಶ್ವಾಸಕೋಶ, ಕಿಡ್ನಿಗಳು, ಕಣ್ಣುಗಳು, ಚರ್ಮ ಮತ್ತು ಎಲುಬುಗಳನ್ನು ಆಸ್ಪತ್ರೆ ಪಡೆದುಕೊಂಡಿತು.

    ಮಹಿಳೆಯಿಂದ ಪಡೆದುಕೊಂಡ ಅಂಗಾಂಗಗಳನ್ನು, ತಮಿಳು ನಾಡಿನ ಟ್ರಾನ್ಸ್ ಪ್ಲಾಂಟ್ ಅಥಾರಿಟಿ, ಯಕೃತ್ತು, ಮತ್ತು ಒಂದು ಕಿಡ್ನಿ ಕೆ.ಜಿ. ಆಸ್ಪತ್ರೆಗೆ, ಮತ್ತೊಂದು ಕಿಡ್ನಿಯನ್ನು ಶ್ರೀ ರಾಮಕೃಷ್ಣ ಆಸ್ಪತ್ರೆಗೆ, ಕಣ್ಣುಗಳನ್ನು ಅರವಿಂದ್ ಕಣ್ಣಿನ ಆಸ್ಪತ್ರೆಗೆ, ಚರ್ಮ ಮತ್ತು ಎಲುಬುಗಳನ್ನು ಗಂಗಾ ಆಸ್ಪತ್ರೆ, ಹೃದಯ ಮತ್ತು ಶ್ವಾಸಕೋಶ ಫೊರ್ಟಿಸ್ ಆಸ್ಪತ್ರೆ/ಗ್ಲೋಬಲ್ ಆಸ್ಪತ್ರೆ ಹಸ್ತಾಂತರಿಸಲಾಗುವುದು. ಇದರಿಂದ 9 ಜನರ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ ಎಂದು ಭಕ್ತವತ್ಸಲಂ ಹೇಳಿದ್ದಾರೆ.

     

  • 300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    ಬೆಳಗಾವಿ: ಒಂದೆಡೆ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರ್ಕಾರ ಮುಂದಾಗಿದೆ. ಆದರೆ ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳೇ ಐಸಿಯುನಲ್ಲಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಬ್ಬೂರು ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ 10 ಹಳ್ಳಿಗಳಿಂದ ದಿನನಿತ್ಯ ಇನ್ನೂರರಿಂದ ಮುನ್ನೂರು ರೋಗಿಗಳು ಬರುತ್ತಾರೆ. ಆದ್ರೆ ಸೂಕ್ತ ಸಮಯದಲ್ಲಿ ಇಲ್ಲಿ ಚಿಕಿತ್ಸೆ ಸಿಗುವುದು ಮಾತ್ರ ಅಪರೂಪ.

    ಇಲ್ಲಿರುವುದು ಕೇವಲ ಮೂರು ವೈದ್ಯರು ಹಾಗೂ ಮೂವರು ನರ್ಸ್‍ಗಳು ಮಾತ್ರ. ಡಿ ದರ್ಜೆ ಸಿಬ್ಬಂದಿಯಿರುವುದು ಕೇವಲ ಒಬ್ಬರು ಮಾತ್ರ. ಹಲವು ಬಾರಿ ಗರ್ಭಿಣಿಯರಿಗೆ ನರ್ಸಗಳೇ ಹೆರಿಗೆ ಮಾಡಿಸಿದ್ದಾರೆ. ಮತ್ತೊಂದಡೆ ವೈದ್ಯರಿಗಾಗಿ ನಿರ್ಮಿಸಲಾಗಿರುವ ವಸತಿ ಗೃಹಗಳು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.

  • ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಉಡುಪಿ: ಆತ ಆಕೆಯನ್ನ ಮದುವೆಯಾಗಿ ದುಡಿಮೆಗೆಂದು ವಿದೇಶಕ್ಕೆ ಹಾರಿದ್ದ. ತನ್ನ ಹೊಟ್ಟೆಯಲ್ಲೇ ಗಂಡನ ಪ್ರೀತಿ ಬೆಳೆಯುತ್ತಿದ್ದು ಆ ಮಗುವಿನಲ್ಲಿ ತನ್ನ ಗಂಡನನ್ನು ನೋಡಲು ಆಕೆ ಹಾತೊರೆಯುತ್ತಿದ್ದಳು. ಆದರೆ ರಾಕ್ಷಸ ರೂಪಿ ಗಂಡನ ಮನೆಯವರು ಆಕೆಯನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ.

    ಈಗ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಗಂಡ, ಮಾವ, ಅತ್ತೆ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಉಡುಪಿಯ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಂಡನ ಮನೆಯವರ ಹಿಂಸೆ ತಾಳಲಾರದೇ ಮಹಿಳೆ ತವರು ಮನೆ ಸೇರಿದ್ದಾಳೆ.

    ಏನಿದು ಪ್ರಕರಣ?
    ಮಂಗಳೂರಿನ ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಫ್ಲಾಟ್ ನಿವಾಸಿ ಝಿಯಾನಾ ಸಲೀಂ ಚಿಸ್ಪಿ(23) ಚಿತ್ರ ಹಿಂಸೆಗೊಳಗಾದ ಮಹಿಳೆ. 2017 ಜುಲೈ 18 ರಂದು ಝಿಯಾನಾ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ ಎಂಬಾತನೊಂದಿಗೆ ಮದುವೆಯಾಗಿತ್ತು. ಮಂಗಳೂರಿನ ಕಾಂತಿ ಚರ್ಚ್ ಸಭಾಂಗಣದಲ್ಲಿ ಮದುವೆಯಾಗಿದ್ದು, ಮದುವೆಯ ವೇಳೆ ಅವರಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಹಾಕಿದ್ದಾರೆ.

     

    ಮದುವೆಯ ಬಳಿಕ ಗಂಡ ಹೆಂಡತಿ ಒಳ್ಳೆಯ ರೀತಿಯಲ್ಲಿದ್ದರು. ಮನೆಯವರು ಕೂಡಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಆದರೆ ಗಂಡ ಹೊರ ದೇಶಕ್ಕೆ ಹೋದ ನಂತರ ಆರೋಪಿಗಳಾದ ಮಾವ, ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ಝಿಯಾನಾ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.

    40 ದಿನಗಳ ಗರ್ಭಿಣಿಯಾದಾಗ ಆಕೆಗೆ ತಿಳಿಯದಂತೆ ಆರೋಪಿಗಳು ವೈದ್ಯರು ಬರೆದುಕೊಟ್ಟ ಮಾತ್ರೆಯ ಜೊತೆಗೆ ಗರ್ಭಪಾತ ಮಾತ್ರೆಯನ್ನು ಸೇರಿಸಿ ಗರ್ಭಪಾತವಾಗುವಂತೆ ಮಾಡಿಸಿದ್ದಾರೆ. ಝಿಯಾನಾ ಇಷ್ಟೆಲ್ಲಾ ಆದ ಮೇಲೆ ಈಗ ಮಂಗಳೂರಿನಲ್ಲಿರುವ ಪೋಷಕರ ಮನೆಗೆ ಹೋಗಿದ್ದಾರೆ.

    ಗಂಡ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ, ತಾಹಿರಾ ಬಾನು, ಸಯೀದಾ, ಆಲಿಶಾ, ಸುನೈನಾ, ಗಫೂರ್ ಅಬ್ದುಲ್ ಜಬ್ಬರ್, ಅಜೀಜುನ್ನೀಸಾ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಡಾಕ್ಟರ್ ಗಂಡ- ಒಂದಲ್ಲ, ಎರಡಲ್ಲ, 3 ಮದ್ವೆಯಾದ

    ಗಂಡಸುತನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಡಾಕ್ಟರ್ ಗಂಡ- ಒಂದಲ್ಲ, ಎರಡಲ್ಲ, 3 ಮದ್ವೆಯಾದ

    ಬಳ್ಳಾರಿ: ಗಂಡಸುತನದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಗಂಡ ಮೂರು ಮದುವೆ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯ ನವೋದಯ ಆಸ್ಪತ್ರೆಯಲ್ಲಿ ಹೊಡೆದಾಟ ನಡೀತಿತ್ತು. ಮೊದಲು ಯಾರೋ ರೋಗಿ ಕಡೆಯವರು ಅಂತ ಜನ ಅಂದುಕೊಂಡ್ರು. ಆಮೇಲೆ ನೋಡಿದ್ರೆ ಇದೇ ಆಸ್ಪತ್ರೆಯ ವೈದ್ಯ ರಾಮು ಅಲಿಯಾಸ್ ರಾಮಾಂಜನೇಯಗೆ ಆತನ ಪತ್ನಿಯೇ ಹಿಗ್ಗಾಮುಗ್ಗಾ ಥಳಿಸ್ತಿದ್ರು.

    11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಶಿರೇಖಾ-ರಾಮು ದಂಪತಿ ಮಧ್ಯೆ ಜಗಳ ಆಗಿತ್ತು. ಶಶಿರೇಖಾ ಗಂಡನಿಗೆ ನಿನಗೆ ಅದೇ ಇಲ್ಲ ಅಂತ ಹೀಯಾಳಿಸಿದ್ರಂತೆ. ಅದಕ್ಕೆ ಡಾಕ್ಟರ್ ಮಹಾಶಯ ಮತ್ತೆ ಇಬ್ಬರನ್ನ ಮದುವೆಯಾಗಿ ಇಬ್ಬರಿಗೂ ಮಕ್ಕಳನ್ನ ಕರುಣಿಸಿದ್ದಾನೆ.

    ಮೊದಲ ಪತ್ನಿ ಶಶಿರೇಖಾಗೂ ಮಗು ಆಗಿದೆ. ಆದ್ರೆ ಅದಕ್ಕೆ ಅಪ್ಪ ನಾನಲ್ಲ, ಅವಳಿಗೆ ಡೈವೋರ್ಸ್ ಕೊಟ್ಟಿದ್ದೀನಿ. ತಿಂಗಳಿಗೆ 60 ಸಾವಿರನೂ ಕೊಡ್ತಿದ್ದೀನಿ. ಆದ್ರೆ ನನ್ನ ಮಕ್ಕಳನ್ನ ಕೊಲ್ತೀನಿ. ನನ್ನ ತಾಯಿನಾ ಕೊಲ್ತೀನಿ ಅಂದ್ಲು. ಅದಕ್ಕೆ ಅವಳನ್ನ ಬಿಟ್ಟೆ. ನನಗೆ ಗಂಡಸುತನ ಇಲ್ಲ. ಮಕ್ಕಳು ಕೊಡೋ ಅರ್ಹತೆ ಇಲ್ಲ ಎಂದ್ರು ಅನ್ನೋದು ಡಾಕ್ಟರ್ ವಾದ. ಆದ್ರೆ ಇದೆಲ್ಲಾ ಕಟ್ಟುಕಥೆ ಅನ್ನೋದು ಶಶಿರೇಖಾ ಅವರ ಅಳಲು.

  • ವೈದ್ಯರಿಗೆ ಬ್ಲ್ಯಾಕ್ ಮೇಲ್: ಯುವತಿ ಸೇರಿ ಐವರ ಬಂಧನ

    ವೈದ್ಯರಿಗೆ ಬ್ಲ್ಯಾಕ್ ಮೇಲ್: ಯುವತಿ ಸೇರಿ ಐವರ ಬಂಧನ

    ಬೀದರ್: ನಾವು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ(ಎಮ್‍ಸಿಐ) ಇಂಟೆಲಿಜೆನ್ಸ್ ಆಫೀಸರ್ಸ್ ಎಂದು ಹೇಳಿ ವೈದ್ಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಸುನೀಲ್ (31), ಜೀನಿತ್ (25), ಪುನೀತ್ (25), ವೆಂಕಟೇಶ್ವರ ಪ್ರಿಯದರ್ಶಿನಿ (40), ಮಂಜುಳಾ (26) ಎಂದು ಗುರುತಿಸಲಾಗಿದೆ.

    ಬೆಂಗಳೂರಿನಿಂದ ಬಂದ ಐದು ಜನ ತಂಡ ಬೀದರ್‍ನ ಬಾವಗಿ ಆಸ್ಪತ್ರೆ ಹಾಗೂ ನವ ಜೀವನ ಆಸ್ಪತ್ರೆಯ ವೈದ್ಯರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಸಹಕಾರ ಮಾಡದೆ ಇದ್ರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ನಿಮ್ಮ ವರದಿ ನೀಡುತ್ತೆವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದರು.

    ಕೆಲವು ದಿನಗಳಿಂದ ಬೀದರ್ ನಲ್ಲೆ ಉಳಿದು, ವೈದ್ಯರ ಬಗ್ಗೆ ಗಮನಿಸಿ ಈ ತಂಡ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬೀದರ್ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ನಕಲಿ ತಂಡ ಖೆಡ್ಡಾಗೆ ಬಿದ್ದಿದೆ.