Tag: doctor

  • ಮಹಿಳೆಯರೇ.. ಜ್ವರ ಎಂದು ಕ್ಲೀನಿಕ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಮಹಿಳೆಯರೇ.. ಜ್ವರ ಎಂದು ಕ್ಲೀನಿಕ್ ಗೆ ಹೋಗೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದ ಮಹಿಳಾ ರೋಗಿಯ ಮೇಲೆ ವೈದ್ಯನೊಬ್ಬ ಅಸಭ್ಯವಾಗಿ ವರ್ತನೆ ತೋರಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.

    ಬ್ಯಾಡರಹಳ್ಳಿಯ ಅಂಜನಾನಗರದಲ್ಲಿ ಶಿವ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಶಿವರಾಮ್ ಮೇಲೆ ಈ ಆರೋಪ ಬಂದಿದ್ದು, ಈ ಸಂಬಂಧ ಮಹಿಳೆಯೊರ್ವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಏನಿದು ಘಟನೆ?: 25 ವರ್ಷದ ಮಹಿಳೆ ಜ್ವರ ಎಂದು ಮಂಗಳವಾರ ಮಧ್ಯಾಹ್ನ ಶಿವ ಕ್ಲಿನಿಕ್‍ಗೆ ತೆರಳಿದ್ದರು. ಈ ವೇಳೆ ಚಿಕಿತ್ಸೆ ನೆಪದಲ್ಲಿ ವೈದ್ಯ ಶಿವರಾಮ್ ಆಕೆಗೆ ಮುತ್ತು ಕೊಟ್ಟಿದ್ದಾರೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದಾರೆ. ಸ್ವತಃ ಮಹಿಳೆ ಈ ರೀತಿ ಆರೋಪಿಸಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು ಆರೋಪಿತ ವೈದ್ಯ ಶಿವರಾಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

    ಅಲ್ಲದೇ 65 ವರ್ಷದ ವೈದ್ಯ ಶಿವರಾಮ್ ಸ್ಥಳೀಯವಾಗಿ ಒಳ್ಳೆ ಹೆಸರು ಗಳಿಸಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದರು. ಸಾರ್ವಜನಿಕ ವಲಯದಲ್ಲಿ ಶಿವರಾಮ್ ಬಗ್ಗೆ ಒಳ್ಳೆ ಅಭಿಪ್ರಾಯವಿದ್ದು, 30 ವರ್ಷ ಬ್ಯಾಡರಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಖಾಸಗಿ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಮಂಗಳವಾರ ನಡೆದ ಈ ಕೃತ್ಯದ ಹಿಂದೆ ಕಾಣದ ಕೈವಾಡ ಇದೆ ಎಂಬುದು ಸ್ಥಳೀಯರು ಆರೋಪಿಸುತ್ತಿದ್ದಾರೆ.

  • ಹೋಟೆಲ್ ರೂಮಿನಲ್ಲಿ ವೈದ್ಯೆ ಆತ್ಮಹತ್ಯೆ- ಬಲವಂತವಾಗಿ ಡೆತ್‍ ನೋಟ್ ಬರೆಸಿದ್ದಾರೆಂದು ತಂದೆ ಆರೋಪ

    ಹೋಟೆಲ್ ರೂಮಿನಲ್ಲಿ ವೈದ್ಯೆ ಆತ್ಮಹತ್ಯೆ- ಬಲವಂತವಾಗಿ ಡೆತ್‍ ನೋಟ್ ಬರೆಸಿದ್ದಾರೆಂದು ತಂದೆ ಆರೋಪ

    ಕೊಚ್ಚಿ: ಕಾನ್ಫರೆನ್ಸ್ ಗೆಂದು ಕೇರಳದ ಕೊಚ್ಚಿಗೆ ಬಂದಿದ್ದ 26 ವರ್ಷದ ವೈದ್ಯೆಯೊಬ್ಬರು ಹೋಟೆಲ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರೋ ಘಟನೆ ಶುಕ್ರವಾರದಂದು ನಡೆದಿದೆ. ರೂಮಿನಲ್ಲಿ ಡೆತ್‍ನೋಟ್ ಪತ್ತೆಯಾಗಿದ್ದು, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ. ಆದ್ರೆ ತನ್ನ ಮಗಳಿಗೆ ಹಿಂಸೆ ಕೊಟ್ಟು, ಬಲವಂತವಾಗಿ ಡೆತ್‍ನೋಟ್ ಬರೆಸಲಾಗಿದೆ ಎಂದು ಮೃತ ಯುವತಿಯ ತಂದೆ ಆರೋಪ ಮಾಡಿದ್ದಾರೆ.

    ಮಮತಾ ರೈ ಸಾವನ್ನಪ್ಪಿರುವ ಯುವತಿ. ದೆಹಲಿಯ ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಎಐಎಮ್‍ಎಸ್) ನ ವಿದ್ಯಾರ್ಥಿಯಾಗಿದ್ದ ಮಮತಾ ವಿದ್ಯಾಭ್ಯಾಸದ ನಂತರ ಅಲ್ಲೇ ಕೆಲಸ ಮಾಡುತ್ತಿದ್ದರು. ಮೂಲತಃ ಜಾರ್ಖಂಡ್‍ನ ಜೆಮ್ಶೆಡ್‍ಪುರ್‍ನವರಾಗಿದ್ದ ಮಮತಾ ಜನವರಿ 18ರಂದು ಕೊಚ್ಚಿಯ ಹೋಟೆಲ್ ರೂಮಿಗೆ ಬಂದಿಳಿದಿದ್ದರು. ಜ.22ರವರೆಗೆ ಅವರು ಅಲ್ಲೇ ಉಳಿದುಕೊಳ್ಳಬೇಕಿತ್ತು.

    ಪೊಲೀಸರು ಹೇಳುವ ಪ್ರಕಾರ, ಮಮತಾ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಿದ್ದನ್ನು ಆಕೆಯ ರೂಮ್‍ಮೇಟ್ ಗಳು ನೋಡಿ ನಂತರ ಮಾಹಿತಿ ನೀಡಿದ್ದಾರೆ. ಹೋಟೆಲ್‍ನ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು ಮೃತದೇಹವನ್ನ ಕೆಳಗಿಳಿಸಲು ರೂಮ್ ಮೇಟ್‍ಗೆ ಸಹಾಯ ಮಾಡಿದ್ದಾರೆ. ಸ್ಥಳದಲ್ಲಿದ್ದ ವೈದ್ಯರು ಮಮತಾ ಅವರನ್ನ ಪರೀಕ್ಷಿಸಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

     

    ಕೊಚ್ಚಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರಾದ್ರೂ ತನಿಖೆ ಮುಂದುವರೆಸಿದ್ದಾರೆ. ರೂಮಿನಲ್ಲಿ ಡಿಪ್ರೆಷನ್ ಮಾತ್ರೆಗಳು ಕೂಡ ಪತ್ತೆಯಾಗಿವೆ. ಆದ್ರೆ ಮಮತಾ ಕುಟುಂಬಸ್ಥರು ಬೇರೆಯದ್ದೇ ವಾದವನ್ನ ಮುಂದಿಟ್ಟಿದ್ದಾರೆ.

    ವೈದ್ಯನಿಂದ ಕಿರುಕುಳ?: ಅವಳು ಶಾಲೆಯಲ್ಲಿ ಟಾಪರ್, ದೆಹಲಿಯ ಏಮ್ಸ್ ನಲ್ಲಿ ಚಿನ್ನದ ಪದಕ ಕೂಡ ಪಡೆದಿದ್ದಳು. ಅಂತರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಹಾಗೂ ಸಮ್ಮೇಳನಗಳಲ್ಲಿ ಪ್ರಶಸ್ತಿ ಪಡೆದಿದ್ದಳು. ಅಕೆ ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಇದೊಂದು ಪಿತೂರಿ. ಆಕೆಗೆ ಏಮ್ಸ್ ನ ಡಾ. ಸಂಜಯ್ ಹಾಗೂ ಆತನ ಸ್ನೇಹಿತರಾದ ಅಲೋಕ್ ಮತ್ತು ನೇಹಾ ಕಿರುಕುಳ ನೀಡಿದ್ದಾರೆ. ಸಂಜಯ್ ಮಮತಾಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಆದ್ರೆ ಮಮತಾ ನಿರಾಕರಿಸಿದ್ದಳು. ನಂತರ ಆತ ಆಕೆಯನ್ನ ಬೆದರಿಸುತ್ತಿದ್ದ. ಜನವರಿ 2ರಂದು ಆಕೆಯ ಮೇಲೆ ದಾಳಿ ಕೂಡ ಮಾಡಿದ್ದ ಎಂದು ಮಮತಾ ತಂದೆ ಹೇಳಿದ್ದಾರೆ.

    ಆಕೆ ನನ್ನಿಂದ ಏನನ್ನೂ ಮುಚ್ಚಿಡುತ್ತಿರಲಿಲ್ಲ. ಆಕೆಗೆ ಡಾ. ಸಂಜಯ್‍ನಿಂದ ಬೆದರಿಕೆ ಇದ್ದಿದ್ದರಿಂದ ಭಯವಿತ್ತು. ಜನವರಿ 19ರಂದು ನನ್ನೊಂದಿಗೆ ಮಾತನಾಡಿದ್ದಳು. ಕಾನ್ಫರೆನ್ಸ್ ನಿಂದ ಬಂದ ಮೇಲೆ ಮಾತಾಡುತ್ತೇನೆ ಎಂದು ಹೇಳಿದ್ದಳು. ಬೆಳಗ್ಗೆ 10.30ಕ್ಕೆ ತನ್ನ ಗೆಳತಿ ರಿಮಿ ಗೆ ಕರೆ ಮಾಡಿ ತಾನು ಈಗಲೇ ಕೊಚ್ಚಿಯಿಂದ ಹೊರಡಬೇಕು ಎಂದು ಹೇಳಿ ಅತ್ತಿದ್ದಳು. ರಿಮಿ ಆಕೆಯನ್ನು ಪಾಟ್ನಾಗೆ ಬರುವಂತೆ ಹೇಳಿದ್ದಳು. ನಾನು ನನ್ನ ಮಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಮಧ್ಯಾಹ್ನ 12 ಗಂಟೆಗೂ ಕರೆ ಮಾಡಿದೆ. ಆದ್ರೆ ಆಕೆಯನ್ನು ಸಂಪರ್ಕಿಸಲು ಆಗಲಿಲ್ಲ. ಡಾ ಸಂಜಯ್ ಆಕೆಯಿಂದ ಬಲವಂತವಾಗಿ ಡೆತ್‍ನೋಟ್ ಬರೆಸಿದ್ದಾನೆ. ಬಲವಂತವಾಗಿ ಫ್ಯಾನ್‍ಗೆ ನೇಣು ಬಿಗಿದುಕೊಳ್ಳುವಂತೆ ಮಾಡಿದ್ದಾನೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.

  • ಆಸ್ಪತ್ರೆಯಲ್ಲಿ ಯಕ್ಕಾ ರಾಜಾ ರಾಣಿ ಆಟ ಆಡಿದ ವೈದ್ಯರು

    ಆಸ್ಪತ್ರೆಯಲ್ಲಿ ಯಕ್ಕಾ ರಾಜಾ ರಾಣಿ ಆಟ ಆಡಿದ ವೈದ್ಯರು

    ವಿಜಯಪುರ: ವೈದ್ಯರು, ಸಿಬ್ಬಂದಿ ಕೆಲಸ ಬಿಟ್ಟು ದುಡ್ಡಿಗಾಗಿ ಯಕ್ಕಾ ರಾಜಾ ರಾಣಿ ಆಟ ಆಡುತ್ತಿರೋ ಘಟನೆ ವಿಜಯಪುರದಲ್ಲಿ ನಡೆದಿದೆ.

    ಆಸ್ಪತ್ರೆಯ ಕಂಪೌಂಡರ್ ರಾಜೀವ್ ಬಳ್ಳಾರಿ ಹಾಗೂ ಅಂಬುಲೆನ್ಸ್ ಡ್ರೈವರ್ ಪಾಂಡು ನೇತೃತ್ವದಲ್ಲಿ ಪ್ರತಿನಿತ್ಯ ಕೆಲಸ ಮಾಡದೆ ಇಸ್ಪೀಟು ಆಟದಲ್ಲಿ ಮಗ್ನನಾಗಿರುತ್ತಾರೆ. ರಾಜೀವ್ ಬಳ್ಳಾರಿ ಜೊತೆಗೆ ಅಂಬುಲೆನ್ಸ್ ಡ್ರೈವರ್ ಪಾಂಡು ಸೇರಿದಂತೆ ನಿವೃತ್ತರಾದ ಡಾಕ್ಟರ್‍ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

    ಪ್ರತಿನಿತ್ಯ ಏನಿಲ್ಲ ಎಂದರೂ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ವಿಜಯಪುರ ಸೇರಿದಂತೆ ಸೊಲ್ಲಾಪುರ ಹಾಗೂ ಮಹಾರಾಷ್ಟ್ರದಿಂದ ಕೂಡ ರೋಗಿಗಳು ವಿಜಯಪುರ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಇಷ್ಟೆಲ್ಲಾ ರೋಗಿಗಳ ಪಾಲಿಗೆ ದೇವರು ಆಗೋ ಬದಲು ಕ್ಷಣಿಕ ವೇಳೆಯಲ್ಲಿ ಹಣಗಳಿಸುವ ಸಲುವಾಗಿ ಸರ್ಕಾರಿ ಆಸ್ಪತ್ರೆಯನ್ನೇ ಇಸ್ಪೀಟು ಆಡ್ಡಾವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ರೋಗಿಗಳ ಪ್ರಾಣದ ಜೊತಗೆ ಚೆಲ್ಲಾಟವಾಡುತ್ತಿರೋದು ಮಾತ್ರ ಸುಳ್ಳಲ್ಲ.

  • ಆಸ್ಪತ್ರೆ ಬೆಡ್ ನಿಂದ ಬಿದ್ದು ರೋಗಿ ದುರ್ಮರಣ

    ಆಸ್ಪತ್ರೆ ಬೆಡ್ ನಿಂದ ಬಿದ್ದು ರೋಗಿ ದುರ್ಮರಣ

    ಗುರಗಾಂವ್: ಆಸ್ಪತ್ರೆ ಬೆಡ್ ನಿಂದ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಗುರಗಾಂವ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಘಟನೆ ಗುರುವಾರ ನಡೆದಿದೆ. ಈ ಸಂಬಂಧ ಮೃತರ ಕುಟುಂಬಸ್ಥರು ಶನಿವಾರ ಕೇಸ್ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಮ್ ಪಾಲ್ ಮೃತಪಟ್ಟಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

    ಏನಿದು ಘಟನೆ?: ತೀವ್ರ ಜ್ವರದಿಂದ ಬಳಲುತ್ತಿದ್ದ ರಾಮ್ ಪಾಲ್ ಅವರನ್ನು ಸ್ಥಳೀಯ ಮೆಟ್ರೋ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಮಗ ಸುಕೇಂದ್ರ ಕುಮಾರ್ ತಿಳಿಸಿದ್ದಾರೆ. ತಂದೆಯವರನ್ನು ವೈದ್ಯರು ಎಮೆರ್ಜೆನ್ಸಿ ವಾರ್ಡ್ ಗೆ ದಾಖಲಿಸಿ, ಹೊರಗಡೆ ನಿಲ್ಲುವಂತೆ ಹೇಳಿದ್ದರು. ಅವರ ಕುಟುಂಬಸ್ಥನಾಗಿ ನಾನೊಬ್ಬನೇ ಇಲ್ಲಿರುವುದು ಎಂದು ಹೇಳಿದ್ರೂ ಕೇಳಲಿಲ್ಲ. ಆ ನಂತರ ಮೂರು ಗಂಟೆಗಳ ಬಳಿಕ ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಅಂದ್ರು. ನನ್ನ ಬಾವ ಸಂದೀಪ್ ಹಾಗೂ ನಾನು ಐಸಿಯು ಒಳಗಡೆ ತಂದೆಯನ್ನು ನೋಡಲು ಹೋದೆವು. ಈ ವೇಳೆ ತಂದೆ ಬೆಡ್ ಮೇಲೆ ಮಲಗಿದ್ರು. ಅವರ ತಲೆಗೆ ಗಾಯಗಳಾಗಿತ್ತು ಹಾಗೂ ಅವರು ಹಾಕಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳಾಗಿತ್ತು ಅಂತ ಸುಕೇಂದ್ರ ವಿವರಿಸಿದ್ದಾರೆ.

    ಗಾಯಗಳ ಬಗ್ಗೆ ವಿಚಾರಿಸಿದಾಗ ವೈದ್ಯರು ಸಮರ್ಪಕ ಉತ್ತರ ನೀಡಲಿಲ್ಲ, ಅವರು ವೆಂಟಿಲೇಟರ್‍ನಲ್ಲಿದ್ದಾರೆ ಎಂದು ಹೇಳಿದ್ರು. ನಮ್ಮ ತಂದೆಯಲ್ಲಿ ಯಾವುದೇ ಚಲನೆಯಿರಲಿಲ್ಲ. ವೈದ್ಯರು ನಮ್ಮೊಂದಿಗೆ ಒರಟಾಗಿ ವರ್ತಿಸಿದ್ರು. ಚಿಕಿತ್ಸೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ರು ಅಂತ ಕುಮಾರ್ ಹೇಳಿದ್ದಾರೆ.

    ಘಟನೆಯ ಬಳಿಕ ಮೃತ ರಾಮ್ ಪಾಲ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಮೇಲ್ವೀಚಾರಕ ಹಾಗೂ ಜಿಐ ಸರ್ಜನ್ ಡಾ. ಅನೂಪ್ ಸಿನ್ಹಾ ಈ ಬಗ್ಗೆ ಪ್ರತಿಕ್ರಿಯಿಸಿ, ರೋಗಿಗೆ ಹಿಮೋಗ್ಲೋಬಿನ್ ಹಾಗೂ ಪ್ಲೇಟ್ ಲೆಟ್ ಗಳು ಕಡಿಮೆಯಾಗುತ್ತಾ ಬರುತ್ತಿತ್ತು. ರೋಗಿಯನ್ನು ನೋಡಿಕೊಳ್ಳಲೆಂದು ಇಬ್ಬರು ನರ್ಸ್ ಗಳು ಕೂಡ ಒಳಗಿದ್ದರು. ಅವರಿಗೆ ಪಾಶ್ರ್ವವಾಯು ಉಂಟಾಗಿರಬಹುದು. ಇದರಿಂದ ಮಂಚದ ರಾಡ್ ಗೆ ಅವರ ತಲೆ ತಾಗಿರುವ ಸಾಧ್ಯತೆಯಿದೆ ಅಂತ ಹೇಳಿದ್ದಾರೆ.

    ಈ ಕುರಿತು ಸಂದೀಪ್ ಮಾತನಾಡಿ, ಆಸ್ಪತ್ರೆಯ ಒಳಗಡೆ ಏನು ನಡೆದಿದೆ ಅಂತ ನಮಗೆ ತಿಳಿದಿಲ್ಲ. ಅಚಾನಕ್ ಆಗಿ ಅವರು ಬೆಡ್ ನಿಂದ ಬಿದ್ದಿದ್ದಾರೆ ಅಂತ ವೈದ್ಯರು ಹೇಳುತ್ತಿದ್ದಾರೆ. ಆದ್ರೆ ಪಾಲ್ ಅವರನ್ನು ಸ್ಟ್ರೆಚರ್ ನಿಂದ ಬೆಡ್‍ಗೆ ಬದಲಾಯಿಸುವಾಗ ಕೆಳಗೆ ಬಿದ್ದು ಗಾಯಗಳಾಗಿರಬಹುದು ಎಂಬ ಅನುಮಾನವಿದೆ ಅಂತ ಹೇಳಿದ್ದಾರೆ.

    ಘಟನೆ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಐಪಿಸಿ ಸೆಕ್ಷನ್ 304ಆ(ನಿರ್ಲಕ್ಷ್ಯದಿಂದ ಸಾವು) ಹಾಗೂ 34 (ಪಿತೂರಿ) ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಗುರುಗಾಂವ್ ಪೊಲೀಸರು ತಿಳಿಸಿದ್ದಾರೆ.

  • 2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    ಬೆಂಗಳೂರು: 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಚಿಕಿತ್ಸೆ ಮುಗಿದಿತ್ತು. ಆದ್ರೆ ಇಂದು ಮುಂಜಾನೆ ಹೃದಯಾಘಾತದಿಂದ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಶಂಕರ್ ಆಸ್ಪತ್ರೆಯ ವೈದ್ಯರಾದ ಡಾ. ರವಿ ತಿಪ್ಪೇಸ್ವಾಮಿ ಹೇಳಿದ್ದಾರೆ.

    ಕಾಶಿನಾಥ್ ನಿಧನದ ಬಳಿಕ ಮಾತನಾಡಿದ ಅವರು, 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ರು. ಹಾರ್ಟ್ ಸ್ಕಿಲ್ಸ್ ಲಿಂಕ್ ಫೋರ್ಮಾ ಅನ್ನೋ ಕ್ಯಾನ್ಸರ್ ಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ರು. ಒಂದು ತಿಂಗಳ ಹಿಂದೆ ಚಿಕಿತ್ಸೆ ಮುಗಿದಿತ್ತು. ಚಿಕಿತ್ಸೆಗೆ ಚನ್ನಾಗಿಯೇ ಸ್ಪಂದಿಸಿದ್ರು. ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ರು.

     

     

    2 ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=Z-vlkIrlNXw

    https://www.youtube.com/watch?v=Xs66MPO1im8

    https://www.youtube.com/watch?v=4RonOWCUWBo

     

  • ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಅಂದ ಸರ್ಕಾರಿ ವೈದ್ಯರು!

    ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಅಂದ ಸರ್ಕಾರಿ ವೈದ್ಯರು!

    ದಾವಣಗೆರೆ: ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಸರ್ಕಾರಿ ವೈದ್ಯರು ಹೇಳಿದ ಘಟನೆ ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಯಳಗೋಡು ಗ್ರಾಮದ ರುದ್ರಮುನಿ ಹಾಗೂ ಅನಿತಾ ದಂಪತಿಯ ಗಂಡು ಶಿಶು ಸಾವನ್ನಪ್ಪಿದ್ದು, ತನ್ನ ಮಗುವಿನ ಸಾವಿಗೆ ವೈದ್ಯರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಶನಿವಾರ ಬೆಳಗ್ಗೆ ಅನಿತಾ ಎಂಬವರಿಗೆ ಡೆಲಿವರಿಯಾಗಿದ್ದು, ಶಿಶು ಅರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಸಂಜೆಯವರೆಗೂ ಐಸಿಯುನಲ್ಲಿ ಇಟ್ಟು ರಾತ್ರಿ 1 ಗಂಟೆಗೆ ಸುಮಾರಿಗೆ ಶಿಶು ಸಾವನ್ನಪ್ಪಿದೆ ಎಂದು ಹೇಳಿದ್ದರು. ಸಾವನ್ನಪ್ಪಿದ ಶಿಶುವನ್ನು ತೆಗೆದುಕೊಂಡು ಹೊರಬಂದು ಕುಳಿತ ತಕ್ಷಣ ಶಿಶುವಿನ ಕೈಗಳು ಚಲನವಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಖಾಸಗಿ ಅಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಷ್ಟರೊಳಗೆ ಮಗು ಸಾವನ್ನಪ್ಪಿದೆ.

    ಬದುಕಿದ್ದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಹೇಳಿದ ವೈದ್ಯರ ವಿರುದ್ಧ ಪೋಷಕರ ಅಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಆಸ್ಪತ್ರೆಯ ಮುಂದೆ ಪೋಷಕರ ಗೋಳು ಮುಗಿಲು ಮುಟ್ಟಿತ್ತು.

  • ಮುಂಬೈನಲ್ಲಿ ಉಳಿಯುವ ಭರವಸೆ ಕೊಟ್ಟಿಲ್ಲ- ಬೆಳಗಾವಿಯಲ್ಲಿ ಇರಾನ್ ಕಂದಮ್ಮನ ಓಪನ್ ಹಾರ್ಟ್ ಆಪರೇಷನ್ ಸಕ್ಸಸ್

    ಮುಂಬೈನಲ್ಲಿ ಉಳಿಯುವ ಭರವಸೆ ಕೊಟ್ಟಿಲ್ಲ- ಬೆಳಗಾವಿಯಲ್ಲಿ ಇರಾನ್ ಕಂದಮ್ಮನ ಓಪನ್ ಹಾರ್ಟ್ ಆಪರೇಷನ್ ಸಕ್ಸಸ್

    ಬೆಳಗಾವಿ: ಜಿಲ್ಲೆಯ ವೈದ್ಯರು 6 ತಿಂಗಳ ಪುಟ್ಟ ಮಗುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.

    ಇರಾನ್ ಮೂಲದ ಜೂಲ್ ಪೇಕಾರ್ ಪುತ್ರಿ ಮಸರ್ ಈ ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದ ಬೇಬಿ. ಬೆಳಗಾವಿಯ ಬಿಎಚ್‍ಆರ್ ಲೇಕ್ಯೂವೆಲ್ ಆಸ್ಪತ್ರೆಯ ವೈದ್ಯರು ನಡೆಸಿದ ಶಸ್ತ್ರ ಚಿಕಿತ್ಸೆ ಯಶಸ್ಸನ್ನು ಕಂಡಿದ್ದು, ಇದೀಗ ಪುಟ್ಟ ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ.

    ಇರಾನ್ ಮೂಲದ ಜೂಲ್ ಪೇಕಾರ್ ಪುತ್ರಿಯ ಆರೋಗ್ಯ ನಿಮಿತ್ತ ಮುಂಬೈಗೆ ಮೊದಲು ಆಗಮಿಸಿದ್ದು, ಅಲ್ಲಿನ ವೈದ್ಯರು ಬಾಲಕಿ ಮಸರ್ ಉಳಿಯುವ ಬಗ್ಗೆ ಯಾವುದೇ ಖಚಿತ ಭರವಸೆ ನೀಡಲಿಲ್ಲ. ನಂತರ ಸ್ನೇಹಿತರ ಸಲಹೆಯ ಮೇರೆಗೆ ಬೆಳಗಾವಿಗೆ ಬಂದಿದ್ದು, ಬೆಳಗಾವಿಯ ಲೆಕ್ಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಡಾ. ಪ್ರಭು ಹಳಕಟ್ಟಿ ನೇತೃತ್ವದಲ್ಲಿ ಡಾ. ಅಮೃತ ನೇರ್ಲಿಕರ್ ತಂಡ ಬಾಲಕಿ ಮಸರ್ ಶಸ್ತ್ರ ಚಿಕಿತ್ಸೆಯನ್ನು ಮಾಡಿ ಯಶಸ್ವಿಯಾಗಿದ್ದಾರೆ.

    ಹೃದಯ ಶಸ್ತ್ರ ಚಿಕಿತ್ಸೆ ನಂತರ ಇದೀಗ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ಮತ್ತು ಬಾಲಕಿ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮುಂಬೈಗೆ ಹೊಲಿಸಿದ್ರೆ ಬೆಳಗಾವಿಯಲ್ಲಿ ಚಿಕಿತ್ಸೆಗೆ ಆಗಿರೋ ವೆಚ್ಚವು ಕಡಿಮೆಯಾಗಿದೆ. ಸದ್ಯ ಮಸರ್ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ಕೆಲವೇ ದಿನಗಳಲ್ಲಿ ವಾಪಸ್ ಇರಾನ್  ದೇಶಕ್ಕೆ ಸಂತಸದಿಂದ ತೆರಳಲು ಸಿದ್ಧರಾಗಿದ್ದಾರೆ.

  • ಶಾಸಕ ಚಲುವರಾಯಸ್ವಾಮಿ ಅಣ್ಣನ ಮಗ ಡಾ.ಮೋಹನ್ ವಿರುದ್ಧ ಎಸಿಬಿಗೆ ದೂರು!

    ಶಾಸಕ ಚಲುವರಾಯಸ್ವಾಮಿ ಅಣ್ಣನ ಮಗ ಡಾ.ಮೋಹನ್ ವಿರುದ್ಧ ಎಸಿಬಿಗೆ ದೂರು!

    ಮಂಡ್ಯ: ಶಾಸಕ ಚಲುವರಾಯಸ್ವಾಮಿ ಅಣ್ಣನ ಮಗನಾಗಿರುವ ಮಂಡ್ಯ ಡಿಎಚ್‍ಓ ಡಾಕ್ಟರ್ ಮೋಹನ್ ತಮಗಿರುವ ರಾಜಕೀಯ ಪ್ರಭಾವದಿಂದ ಕೋಟ್ಯಾಂತರ ರೂಪಾಯಿ ಅಕ್ರಮದಲ್ಲಿ ತೊಡಗಿದ್ದು, ಅವರ ವಿರುದ್ಧ ತನಿಖೆ ನಡೆಸುವಂತೆ ಆರ್‍ಟಿಐ ಕಾರ್ಯಕರ್ತ ರವೀಂದ್ರ ಎಂಬವರು ಎಸಿಬಿಗೆ ದೂರು ನೀಡಿದ್ದಾರೆ.

    ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗವಾಗುತ್ತಿದೆ. ಸಿಸಿಟಿವಿ ಖರೀದಿ, ಬೋಗಸ್ ಬಿಲ್ಲು, ಆಸ್ಪತ್ರೆಗಳಿಗೆ ಖರೀದಿಸಿರುವ ಸಾಧನ, ಸಲಕರಣೆ ಸ್ವೀಕೃತವಾಗದಿದ್ದರೂ ಹಣ ಬಿಡುಗಡೆ. ಇನ್ನು ಹಾಸಿಗೆ, ದಿಂಬು ರಿಪೇರಿಯಲ್ಲಿ ಅಕ್ರಮ ಸೇರಿದಂತೆ ಡಿಎಚ್‍ಓ ಮೋಹನ್ ಇತರೆ ಅಧಿಕಾರಿಗಳೊಂದಿಗೆ ಸೇರಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆಸಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ರವೀಂದ್ರ ಆರೋಪ ಮಾಡುತ್ತಿದ್ದಾರೆ.

    ಸಹಾಯಕ ಆಡಳಿತಾಧಿಕಾರಿ ಸಾವಿತ್ರಮ್ಮ, ಈ ಹಿಂದಿನ ಕಚೇರಿ ಅಧೀಕ್ಷಕರಾಗಿದ್ದ ರವಿಕುಮಾರ್, ಶುಶ್ರೂಶಣಾದಾದಿ ಕೆಎನ್.ಪ್ರಶಾಂತ್, ಮಂಡ್ಯ ಸಹಾಯಕ ಖಜನಾಧಿಕಾರಿ ಜೈರಾಮ, ಜಿಲ್ಲಾ ಖಜಾನೆ ಉಪ ನಿರ್ದೇಶಕ ಜಿ.ಬಿ ರಾಜೇಗೌಡ ಎಂಬವರು ಡಿಎಚ್‍ಓ ಅಕ್ರಮಗಳ ಜೊತೆ ಶಾಮೀಲಾಗಿದ್ದಾರೆ ಎಂದು ಆರ್‍ಟಿಐ ಕಾರ್ಯಕರ್ತ ಆರೋಪ ಮಾಡುತ್ತಿದ್ದಾರೆ. ಡಿಎಚ್‍ಓ ಮೋಹನ್ ವಿರುದ್ಧ ಈ ಹಿಂದೆಯೂ ದೂರು ಕೇಳಿ ಬಂದಿದ್ದವು. ಆದರೆ ಡಿಎಚ್‍ಓ ಮೋಹನ್ ನಾಗಮಂಗಲ ಶಾಸಕರಾಗಿರುವ ಚಲುವರಾಯಸ್ವಾಮಿಯವರ ಅಣ್ಣನ ಮಗನಾಗಿದ್ದಾರೆ. ತಮ್ಮ ರಾಜಕೀಯ ಪ್ರಭಾವದಿಂದ ಚಲುವರಾಯಸ್ವಾಮಿಯವರು ಡಿಎಚ್‍ಓ ಅಕ್ರಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

    ಹೀಗಾಗಿ ಸರ್ಕಾರ ಮತ್ತು ಮೇಲಾಧಿಕಾರಿಗಳು ಮೋಹನ್ ವಿರುದ್ಧ ಕ್ರಮ ಜರುಗಿಸಲು ವಿಫಲವಾಗಿದೆ. ಈಗಲಾದರೂ ರಾಜಕೀಯ ಪ್ರಭಾವಕ್ಕೆ ಮಣಿಯದೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಆರ್‍ಟಿಐ ಕಾರ್ಯಕರ್ತ ರವೀಂದ್ರ ಭ್ರಷ್ಟಚಾರ ನಿಗ್ರಹದಳಕ್ಕೆ ಮನವಿ ಮಾಡಿದ್ದಾರೆ.

  • ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ವೈದ್ಯರ ನಿರ್ಲಕ್ಷ್ಯಕ್ಕೆ 3 ದಿನದ ಮಗು ಬಲಿ ಆರೋಪ- ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ

    ಬೆಂಗಳೂರು: ವಾಣಿ ವಿಲಾಸ ವೈದ್ಯರ ನಿರ್ಲಕ್ಷ್ಯಕ್ಕೆ ಮೂರು ದಿನದ ಮಗು ಬಲಿಯಾಗಿರುವ ಆರೋಪ ಕೇಳಿಬಂದಿದೆ.

    ಮೂರು ದಿನದ ಹಿಂದೆ ಹೆರಿಗೆಗೆಂದು 35 ವರ್ಷದ ಅನಿತಾ ಎಂಬಾಕೆ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಗು ಮೂರು ದಿನದಿಂದ ಆರೋಗ್ಯವಾಗಿದೆ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಭಾನುವಾರ ಸಂಜೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರ ನಿರ್ಲಕ್ಷ್ಯವೇ ಮಗು ಮೃತಪಡಲು ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ವೈದ್ಯರ ಜೊತೆ ಪೋಷಕರು ವಾಗ್ವಾದ ನಡೆಸಿದ್ದು, ಕೆಲಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು.

    ಪೋಷಕರು ಮಧ್ಯಾಹ್ನ 2.45 ಕ್ಕೆ ಮಗು ಹಾಲು ಕುಡಿಯುತ್ತಿಲ್ಲ, ಮೂತ್ರ ಮಾಡ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಇದಕ್ಕೆ ಸ್ಪಂದಿಸದೆ, ಆಗ ಏನು ಸಮಸ್ಯೆ ಇಲ್ಲ ಎಂದು ಹೇಳಿ ಕಳಿಸಿದ್ದಾರೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಮಗು ಮೃತಪಟ್ಟಿದೆ. ಆದರೆ ಇದುವರೆಗೂ ಮಗು ಸತ್ತರೂ ಇನ್ನೂ ರಿಪೋರ್ಟ್ ನೀಡದೆ ವೈದ್ಯರು ಸತಾಯಿಸುತ್ತಿದ್ದಾರೆ, ಕೇವಲ ಮೌಖಿಕ ಕಾರಣ ನೀಡುತ್ತಿದ್ದಾರೆ ಎಂದು ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೋಷಕರು ಮಾಡಿದ ಆರೋಪವನ್ನು ವೈದ್ಯರು ತಳ್ಳಿಹಾಕಿದ್ದು, ಮಗು ಮೃತಪಡಲು ನಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

  • ವಿದೇಶಕ್ಕೆ ಕರೆದೊಯ್ದು ಕೋಟಿ ಕೋಟಿ ಲೂಟಿ-ಸಾಗರದಲ್ಲೇ ಕಮರಿತು ವಿದ್ಯಾರ್ಥಿಗಳ ಡಾಕ್ಟರ್ ಕನಸು

    ವಿದೇಶಕ್ಕೆ ಕರೆದೊಯ್ದು ಕೋಟಿ ಕೋಟಿ ಲೂಟಿ-ಸಾಗರದಲ್ಲೇ ಕಮರಿತು ವಿದ್ಯಾರ್ಥಿಗಳ ಡಾಕ್ಟರ್ ಕನಸು

    ಬೆಂಗಳೂರು: ಅವರೆಲ್ಲಾ ಡಾಕ್ಟರ್ ಆಗ್ಬೇಕು, ಜನರ ರೋಗವನ್ನು ಕಡಿಮೆ ಮಾಡ್ಬೇಕು ಅಂತೆಲ್ಲಾ ಸಾಗರದಾಚೆಗೆ ಹಾರಿ ಹೋದ್ರು. ಹೀಗೆ ಹಾರಿದವರು ಕಾಲೇಜನ್ನು ಸೇರಲಿಲ್ಲ. ಬದಲಿಗೆ ಒಂದು ಹೋಟೆಲನ್ನು ಸೇರಿದ್ರು. ಬಳಿಕ ಆ ಹೊಟೇಲನ್ನೇ ಕಾಲೇಜು ಮಾಡಿಕೊಂಡು ದ್ರೋಹ ಮಾಡಿದ ಕಿಡಿಗೇಡಿಗಳು ಕೋಟಿ ಕೋಟಿ ದೋಚಿದ್ರು.

    ಹೌದು. ಕಡಿಮೆ ಹಣಕ್ಕೆ ಅಮೆರಿಕಗೆ ಹೋಗಿ ವೈದ್ಯಕೀಯ ವಿದ್ಯೆಯನ್ನು ಕಲಿಯಬಹುದು. ನೀವು ಕೂಡ ಡಾಕ್ಟರ್ ಆಗ್ಬಹುದು ಅಂತ ಸಿಕ್ಕ ಸಿಕ್ಕ ಜನರಿಗೆಲ್ಲಾ ಮಂಕು ಬೂದಿಯನ್ನು ಎರಚುತ್ತಾ ಇರೋ ಅಲೆಗ್ಸಾಂಡರ್ ಯೂನಿವರ್ಸಿಟಿಯ ಬಯಲಾಟ ಇದೀಗ ಅನಾವರಣವಾಗ್ತಿದೆ.

    ನಗರದ ಸುರೇಶ್ ಎಂಬವರು ತನ್ನ ಮಗಳು ಅಮೆರಿಕದಲ್ಲಿ ಡಾಕ್ಟರ್ ಆಗಬೇಕೆಂಬ ಆಸೆಯಿಂದ ಅಲೆಗ್ಸಾಂಡರ್ ಯೂನಿವರ್ಸಿಟಿಗೆ ಹೋಗಿ ಲಕ್ಷ ಲಕ್ಷ ಹಣವನ್ನು ಕಟ್ಟಿದ್ದಾರೆ. ಆದ್ರೆ ಒಂದು ವರ್ಷಕ್ಕೆ 15 ಲಕ್ಷ ಹಣವನ್ನು ಕಟ್ಟುವಂತೆ ಡೀಲ್ ಮಾಡಿದ್ದ ಅಲೆಗ್ಸಾಂಡರ್ ಯೂನಿವರ್ಸಿಟಿ, ಮಕ್ಕಳನ್ನು ಅಮೆರಿಕಗೆ ಕಳುಹಿಸೋದನ್ನ ಬಿಟ್ಟು ಒಂದು ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿ ಕೋರಮಂಗಲದಲ್ಲಿಯೇ ಇರಿಸಿಕೊಂಡಿದ್ದಾರೆ. ಯಾವಾಗ ಪೋಷಕರೆಲ್ಲಾ ಗಲಾಟೆ ಮಾಡೋದಕ್ಕೆ ಶುರು ಮಾಡಿದ್ರೋ, ಆ ಸಂದರ್ಭದಲ್ಲಿ ಎಚ್ಚೆತ್ತ ಯೂನಿರ್ವಸಿಟಿಯವರು ಅಮೆರಿಕಗೆ ಕಳಿಸ್ತೀನಿ ಅಂತ ಬರಬೋಡಾಸ್‍ಗೆ ಕಳುಹಿಸಿದ್ದಾರೆ.

    ಈ ವೇಳೆ ಯುವಿರ್ವಸಿಟಿಯ ಮತ್ತೊಂದು ಮುಖ ಬಯಲಾಗಿದೆ. ಅಮೆರಿಕಗೆ ಹೋಗ್ತಾ ಇದ್ದೀವಿ ಅಂತ ಭ್ರಮೆಯಲ್ಲಿ ಕೂತಿದ್ದ ಮಕ್ಕಳನ್ನು ಬರಬೋಡಾಸ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಒಂದು ಹೋಟೆಲ್‍ನಲ್ಲಿ ಇರಿಸಿ ಒಂದು ಹಾಸ್ಟೆಲ್‍ನಂತೆ ಮಾಡಿದ್ದಾರೆ. ಇದ್ರಿಂದ ಕೋಪಗೊಂಡ ವಿದ್ಯಾರ್ಥಿಗಳು ಅಲ್ಲಿ ವಿಚಾರ ಮಾಡೋದಕ್ಕೆ ಹೋದ್ರೆ. ನಿಮಗೆ ಸರ್ಟಿಫಿಕೇಟ್ ಬೇಕು ಅಂದ್ರೆ ಕೊಡಿಸ್ತೀವಿ ಯಾಕೆ ಯೋಚ್ನೆ ಮಾಡ್ತಿರಾ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಪಾಠವನ್ನೇ ಕಲಿಯೋದಕ್ಕೆ ಅವಕಾಶ ಇಲ್ವಲ್ಲ ಅಂದ್ರೆ ನಿಮ್ಮ ಹಣ ವಾಪಸ್ಸು ಕೊಡ್ತೀವಿ ಅಂತ ವಿದ್ಯಾರ್ಥಿನಿಯರನ್ನೆಲ್ಲಾ ವಾಪಸ್ ಕರ್ನಾಟಕಕ್ಕೆ ಕಳುಹಿಸಿದ್ದಾರೆ. ನಮ್ಮ ಮಕ್ಕಳು ಓದೋದು ಬೇಡ ನೀವು ಮೋಸ ಮಾಡಿದ್ದೀರಿ ನಮ್ಮ ಹಣ ವಾಪಸ್ಸು ಕೊಡಿ ಅಂದಿದಕ್ಕೆ 15 ಲಕ್ಷದ ಬದಲು ಕೇವಲ ಐದು ಲಕ್ಷ ಹಣವನ್ನು ವಾಪಸ್ ಕೊಟ್ಟು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

    ಒಟ್ಟಿನಲ್ಲಿ ದೂರದ ದೇಶಕ್ಕೆ ಹೋಗಿ ಓದ್ತೀವಿ, ಡಾಕ್ಟರ್ ಆಗ್ತೀವಿ ಅಂದುಕೊಂಡಿದ್ದ ಎಷ್ಟೋ ಮಕ್ಕಳ ಕನಸು ಸಾಗರದಲ್ಲೇ ಕಮರಿ ಹೋಗಿದ್ದು, ಅತ್ತ ಹಣವೂ ಇಲ್ಲದೇ, ಇತ್ತ ವಿದ್ಯಾಭ್ಯಾಸವೂ ಇಲ್ಲದೇ ಒದ್ದಾಡುವಂತೆ ಆಗಿದೆ. ಶಿಕ್ಷಣದ ಹೆಸರಲ್ಲಿ ವ್ಯಾಪಾರದ ಜೊತೆ ಮೋಸ ಮಾಡ್ತಿರೋ ಸಂಸ್ಥೆಗಳ ಮೇಲೆ ಇದೀಗ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.