Tag: doctor

  • ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ!

    ಅಪಘಾತಕ್ಕೀಡಾಗಿ ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯ!

    ಬಳ್ಳಾರಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು ದಾರಿ ಮಧ್ಯೆ ನರಳಾಡುತ್ತಿದ್ದ ವ್ಯಕ್ತಿಗೆ ವೈದ್ಯರೊಬ್ಬರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ಡಾ. ಯುವರಾಜ್ ಮಾನವೀಯತೆ ಮೆರೆದ ವೈದ್ಯ. ಬುಧವಾರ ಹೊಸಪೇಟೆ ಬಳ್ಳಾರಿ ಮಾರ್ಗ ಮಧ್ಯೆ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಹೊಸಪೇಟೆ ವೈದ್ಯ ಯುವರಾಜ್, ಗಾಯಾಳುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    ಅಲ್ಲದೇ ವಿಡಿಯೋ, ಫೋಟೋ ತಗೆಯಲು ಮುಂದಾದ ಜನರಿಗೆ ತಿಳಿ ಹೇಳಿ ಫೋಟೋ ತೆಗೆಯದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವಂತೆ ಮನವಿ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ವೈದ್ಯರು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಮೆಸೇಜ್- ಸಂಬಂಧಿಯಿಂದ್ಲೇ ಕೊಲೆಯಾದ್ರಾ ಡಾಕ್ಟರ್?

    ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಮೆಸೇಜ್- ಸಂಬಂಧಿಯಿಂದ್ಲೇ ಕೊಲೆಯಾದ್ರಾ ಡಾಕ್ಟರ್?

    ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯರನ್ನ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

    ಹುಬ್ಬಳ್ಳಿಯ ಶುಶ್ರೂತ ನರ್ಸಿಂಗ್ ಹೋಮ್ ನಿರ್ದೇಶಕರಾಗಿರೋ ಡಾ. ಬಾಬು ಹಂಡೇಕರ್, ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇದೀಗ ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸಂಬಂಧಿ ಯುವಕನೇ ಡಾ. ಬಾಬು ಹಂಡೇಕರ್ ಎಂಬವರನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.

    ಡಾ. ಬಾಬು ಹಂಡೆಕರ್ ಅವರು ಎರಡು ದಿನಗಳ ಹಿಂದೆ ಊರಿಂದ ಹೊರಗಡೆ ಹೋಗುತ್ತಿರುವುದಾಗಿ ಸ್ನೇಹಿತರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದು, ಬಳಿಕ ನಾಪತ್ತೆಯಾಗಿದ್ದಾರೆ. ಇದೀಗ ವೈದ್ಯರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ವೈದ್ಯರ ಸಂಬಂಧಿ ನವೀನ್ ಮುಲ್ಕಿಗೌಡರ್ ಹಾಗೂ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವೈದ್ಯರನ್ನು ಕೊಲೆಗೈದಿರುವುದಾಗಿ ಬಾಯ್ಬಿಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.

    ವಿದ್ಯಾನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಆಸ್ಪತ್ರೆಗೆ ದಾಖಲಾಗಿ 2 ದಿನವಾದ್ರೂ ಹೆರಿಗೆ ಮಾಡಿಸದ ವೈದ್ಯರು- ಅಮ್ಮನ ಹೊಟ್ಟೆಯಲ್ಲೇ ಅಸುನೀಗಿದ ಕಂದಮ್ಮ

    ಆಸ್ಪತ್ರೆಗೆ ದಾಖಲಾಗಿ 2 ದಿನವಾದ್ರೂ ಹೆರಿಗೆ ಮಾಡಿಸದ ವೈದ್ಯರು- ಅಮ್ಮನ ಹೊಟ್ಟೆಯಲ್ಲೇ ಅಸುನೀಗಿದ ಕಂದಮ್ಮ

    ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿಯ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸರ್ಕಾರಿ ಹಳೇ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.

    ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ರೇಣುಕಾ(22) ವೈದ್ಯರ ನಿರ್ಲಕ್ಷ್ಯಕ್ಕೊಳಗಾದ ಗರ್ಭಿಣಿ. ಹರಿಗೆಗಾಗಿ ರೇಣುಕಾ ಶನಿವಾರ ಮಧ್ಯಾಹ್ನವೇ ಸರ್ಕಾರಿ ಹೆರಿಗೆ ಅಸ್ಪತ್ರೆಗೆ ದಾಖಲಾಗಿದ್ದರು. ರೇಣುಕಾ ಒಂದೂವರೆ ದಿನ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೂ ಹೆರಿಗೆ ಮಾಡದೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ.

    ಕೊನೆಗೆ ಭಾನುವಾರ ಸಂಜೆ ಸಿಜೇರಿಯನ್ ಮಾಡಿ ಶಿಶುವನ್ನ ತೆಗೆದಿದ್ದಾರೆ. ಆದರೆ ಅಷ್ಟರಲ್ಲಿ ಹೊಟ್ಟೆಯಲ್ಲೇ ಮಗು ಮೃತಪಟ್ಟಿತ್ತು. ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದ ಈ ರೀತಿಯಾಗಿದೆ ಎಂದು ರೇಣುಕಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿರ್ಲಕ್ಷ್ಯ ತೋರಿದ ವೈದ್ಯರಿಗೆ ರೇಣುಕಾ ತಾಯಿ ಹಿಡಿಶಾಪ ಹಾಕಿದ್ದಾರೆ.

    ಹೆರಿಗೆ ಮಾಡದ ವೈದ್ಯರ ವಿರುದ್ಧ ಆಸ್ಪತ್ರೆ ಅಧೀಕ್ಷಕರಿಗೆ ದೂರು ನೀಡಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುಲು ಆಗ್ರಹಿಸಿದ್ದಾರೆ. ಬಳಿಕ ಗಾಂಧಿನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಾನ ಮಾಡಿದ್ದಾರೆ. ಇತ್ತ ಮಗುವನ್ನು ಕಳೆದುಕೊಂಡ ತಾಯಿಯ ಅಕ್ರಂದನ ಮುಗಿಲು ಮುಟ್ಟಿದೆ.

  • ರಕ್ತ ಟೆಸ್ಟ್ ಮಾಡ್ತೀನೆಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಿದ್ದ ವೈದ್ಯ- ನಿಮ್ಹಾನ್ಸ್ ಗೆ ಕಳಿಸಬೇಕೆಂದು ವರದಿ ನೀಡಿ 6 ತಿಂಗಳಾದ್ರೂ ಇಲ್ಲ ಕ್ರಮ

    ರಕ್ತ ಟೆಸ್ಟ್ ಮಾಡ್ತೀನೆಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಿದ್ದ ವೈದ್ಯ- ನಿಮ್ಹಾನ್ಸ್ ಗೆ ಕಳಿಸಬೇಕೆಂದು ವರದಿ ನೀಡಿ 6 ತಿಂಗಳಾದ್ರೂ ಇಲ್ಲ ಕ್ರಮ

    ಚಿಕ್ಕಮಗಳೂರು: ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ನಿಂಗೆ ಏಡ್ಸ್ ಇದೆ, ರಕ್ತ ಟೆಸ್ಟ್ ಮಾಡುತ್ತೀನಿ ಎಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚಿ, ನರ್ಸ್‍ಗಳಿಗೆ ನಿನ್ನ ಗೌನ್ ಬಿಚ್ಚು ಟೆಸ್ಟ್ ಮಾಡುತ್ತೀನಿ ಎಂದು ಹೇಳುತ್ತಿದ್ದ ಸರ್ಕಾರಿ ವೈದ್ಯ ಸೈಕೋಸೀಸ್‍ಗೆ ಒಳಗಾಗಿರೋದು ದೃಢಪಟ್ಟಿದೆ.

    ವೈದ್ಯನಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದು ಧಾರವಾಡ ಅಥವಾ ನಿಮ್ಹಾನ್ಸ್ ಗೆ ಕಳಿಸಬೇಕೆಂದು ಮಾನಸಿಕ ರೋಗ ತಜ್ಞರು ವರದಿ ನೀಡಿ ಆರು ತಿಂಗಳೇ ಕಳೆದಿದೆ. ಆದರೆ ತಾಲೂಕು ಹೆಲ್ತ್ ಆಫೀಸರ್ ಮಾತ್ರ ಇಂದಿಗೂ ಕ್ರಮ ಕೈಗೊಂಡಿಲ್ಲ. ಅವರಿಂದಲೇ ಟ್ರೀಟ್‍ಮೆಂಟ್ ಕೊಡಿಸುತ್ತಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ಸ್ಥಿತಿ ದೇವರೇ ಬಲ್ಲ.

    ವೀರೇಶ್ ವೈ ನರೇಗಲ್ ಎಂ.ಬಿ.ಬಿಎಸ್. ಡಿ ಆರ್ಥೋ ಅಂಡ್ ಎಂ.ಎಸ್.ಆರ್ಥೋ ಓದಿದ್ದಾರೆ. 35 ವರ್ಷ ಸರ್ವೀಸ್ ಇರೋ ಇವರು ಕಳೆದ ಒಂದೂವರೆ ವರ್ಷದಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞರಾಗಿದ್ದಾರೆ. ಆರು ತಿಂಗಳ ಹಿಂದೆ ಆಸ್ಪತ್ರೆಗೆ ಬರೋ ರೋಗಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು.

    ಗಾಯಕ್ಕೆ ಹಾಕಿರೋ ಹೊಲಿಗೆಯನ್ನ ಬಿಚ್ಚಿ ಮತ್ತೆ ಹೊಲಿಗೆ ಹಾಕೋಕೆ ಮುಂದಾಗುತ್ತಿದ್ದರು. ಇವರ ವರ್ತನೆ ಕಂಡ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿಗೆ ದೂರು ನೀಡಿದ್ದರು. ತಾಲೂಕು ವೈದ್ಯಾಧಿಕಾರಿ 20.09.2017ರಂದು ಜಿಲ್ಲೆಯ ಜಿಲ್ಲಾ ಮಾನಸಿಕ ರೋಗ ತಜ್ಞರಿಗೆ ವೀರೇಶ್‍ರನ್ನು ಪರೀಕ್ಷಿಸುವಂತೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಮಾನಸಿಕ ರೋಗ ತಜ್ಞರು ಕೊಟ್ಟ ಉತ್ತರ ವೀರೇಶ್ ಸೈಕೋಸೀಸ್‍ಗೆ ಒಳಗಾಗಿದ್ದಾರೆಂದು. ಆದರೆ ಆರು ತಿಂಗಳಿಂದ ತಾಲೂಕು ವೈದ್ಯಾಧಿಕಾರಿ ಇಂದಿಗೂ ಕ್ರಮ ಕೈಗೊಳ್ಳದಿರೋದು ಮಾತ್ರ ದುರಂತ.

    ವೀರೇಶ್ ಒಬ್ಬೊಬ್ಬರೇ ನಗುತ್ತಿದ್ದರು. ಒಬ್ಬೊಬ್ಬರೇ ಮಾತನಾಡುತ್ತಿದ್ದರು. ಒಂದು ಪ್ರಶ್ನೆ ಕೇಳಿದರೆ ಮತ್ತೊಂದು ಉತ್ತರ ಹೇಳಿ ಎಲ್ಲರ ಮೇಲೂ ರೇಗಾಡುತ್ತಿದ್ದರು. ಇವರನ್ನ ಪರೀಕ್ಷಿಸಿದ ಚಿಕ್ಕಮಗಳೂರಿನ ಮಾನಸಿಕ ರೋಗ ತಜ್ಞ ಡಾ.ವಿನಯ್ ಕುಮಾರ್ ಇವರಿಗೆ ನಾನು ಏನು ಮಾಡುತ್ತಿದ್ದೇನೆ, ಏನು ಮಾತನಾಡ್ತಿದ್ದೇನೆಂದು ಅರಿವಿಲ್ಲ. ಇವರು ಚಿಕಿತ್ಸೆ ನೀಡಲು ಅಶಕ್ತರಾಗಿದ್ದಾರೆ. ಇವರು ಚಿಕಿತ್ಸೆ ನೀಡಿದರೆ ಎಂತಹ ಅಚಾತುರ್ಯ ಬೇಕಾದರು ಆಗಬಹುದು. ಕೂಡಲೇ ಇವರನ್ನ ಇವರ ಮನೆಯವರ ಸಹಕಾರದೊಂದಿಗೆ ಇವರು ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಧಾರವಾಡ ಅಥವಾ ನಿಮ್ಹಾನ್ಸ್‍ಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ವರದಿ ನೀಡಿದ್ದಾರೆ.

    ವೀರೇಶ್ ಎಲ್ಲರಂತೆಯೇ ಇರುತ್ತಾರೆ. ನೋಡೋದಕ್ಕೂ ನಾರ್ಮಲ್ ಇರುತ್ತಾರೆ. ನಾನು ಚೆನ್ನಾಗಿಯೇ ಇದ್ದೇನೆ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಇವರು ಜವಾಬ್ದಾರಿಯುತ ಕೆಲಸ ಮಾಡಲು ಅಶಕ್ತರಾಗಿರುತ್ತಾರೆಂದು ವರದಿ ನೀಡಿದ್ದಾರೆ. ಆದರೆ ವರದಿ ನೀಡಿ ಆರು ತಿಂಗಳಾದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಪುತ್ರ ರಾಮಯ್ಯ ಆಸ್ಪತ್ರೆಯಲ್ಲಿರುವ ಡಾ. ರವಿಶಂಕರ್ ಶೆಟ್ಟಿ ತಂದೆಯನ್ನು ನೋಡಲು ತೆರಳುವ ಮೊದಲು ವೃತ್ತಿ ಗೌರವ ತೋರಿಸಿದ್ದಾರೆ.

    ತಂದೆ ವಿಶ್ವನಾಥ್ ಶೆಟ್ಟಿ ಅವರಿಗೆ ಲೋಕಾಯುಕ್ತ ಕಚೇರಿಯಲ್ಲಿ ಚಾಕು ಇರಿದ ಸುದ್ದಿ ತಿಳಿಯುವ ವೇಳೆ ಆಸ್ಪತ್ರೆಯಲ್ಲಿ ಹಾರ್ಟ್ ಆಪರೇಷನ್ ಮಾಡುತ್ತಿದ್ದರು. ಸಹೋದ್ಯೋಗಿಗಳಿಂದ ಸುದ್ದಿ ತಿಳಿದರೂ ಧೃತಿಗೆಡದೆ ಸರ್ಜನ್ ಆಗಿರುವ ರವಿಶಂಕರ್ ಶೆಟ್ಟಿ ರೋಗಿಯ ಆಪರೇಶನ್ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಗುಂಡಾ ಸರ್ಕಾರ ಆಳ್ವಿಕೆಯಲ್ಲಿದ್ದು, ರಾಷ್ಟ್ರಪತಿ ಆಡಳಿತ ತನ್ನಿ: ಆರ್ ಅಶೋಕ್

    ಆಪರೇಷನ್ ಪೂರ್ಣಗೊಳಿಸಿದ ನಂತರ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತಂದೆ ವಿಶ್ವನಾಥ್ ಶೆಟ್ಟಿ ಅವರನ್ನು ನೋಡಲು ಆಗಮಿಸಿದ್ದಾರೆ. ಇದನ್ನೂ ಓದಿ : ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

  • ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಯತ್ನ

    ನೇಣು ಬಿಗಿದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಯತ್ನ

    ರಾಮನಗರ: ತಾಲೂಕು ವೈದ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಸ್ಟಾಫ್ ನರ್ಸ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದಿದೆ.

    ತಿಪ್ಪಸಂದ್ರ ಗ್ರಾಮದ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ ನರ್ಸ್. ಶನಿವಾರ ಆಸ್ಪತ್ರೆ ಸಿಬ್ಬಂದಿಗಳ ವಸತಿಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ತಡವಾಗಿ ಬೆಳಕಿದೆ ಬಂದಿದೆ.

    ಮಾಗಡಿ ಡಿಎಚ್‍ಓ ಚಂದ್ರಶೇಖರಯ್ಯ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ವಿಜಯಲಕ್ಷ್ಮೀ ಅವರಿಗೆ ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಎಚ್‍ಓ ಚಂದ್ರಶೇಖರಯ್ಯ, ಕೆಲ ದಿನಗಳ ಹಿಂದೆ ಸೆರೆಲ್ಯಾಕ್ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಮಗುವಿನ ವಿಚಾರವಾಗಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆ ಸೂಚನೆ ನೀಡಿ ಘಟನೆ ಮರುಕಳಿಸದಂತೆ ಸೂಚಿಸಿದ್ದೆ. ಆದ್ರೆ ಯಾರಿಗೂ ಕಿರುಕುಳ ನೀಡಿಲ್ಲ ಅಂತ ಹೇಳಿದ್ದಾರೆ.

    ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವು!

    ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವು!

    ಬಾಗಲಕೋಟೆ: ವೈದ್ಯರ ನಿರ್ಲಕ್ಷದಿಂದ ಅವಳಿ ಶಿಶುಗಳು ಹೊಟ್ಟೆಯಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

    ಬೀಳಗಿ ತಾಲೂಕಿನ ರೊಳ್ಳಿ ಗ್ರಾಮದ ಶೃತಿ ಹರಿಜನಳ (25) ಗರ್ಭದಲ್ಲೇ ಅವಳಿ ಶಿಶುಗಳು ಸಾವನ್ನಪ್ಪಿವೆ. ಹೆರಿಗೆ ನೋವು ಬಂದ ಹಿನ್ನೆಲೆಯಲ್ಲಿ ಶೃತಿ ಅವರನ್ನು ಸಂಬಂಧಿಕರು ಬೀಳಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಎರಡು ಗಂಟೆ ನಂತರ ಸರಳ ಹೆರಿಗೆಯಾಗುತ್ತೆ ಎಂದು ಭರವಸೆ ನೀಡಿದ್ದರು. ಆದರೆ ಎಂಟು ತಾಸುಗಳ ನಂತರ ಹೆರಿಗೆಯಾಗಿದೆ.

    ಹೆರಿಗೆ ವೇಳೆ ಒಂದು ಗಂಡು ಒಂದು ಹೆಣ್ಣು ಅವಳಿ ಶಿಶುಗಳು ಜನಿಸಿದ್ದು, ಗರ್ಭದಲ್ಲೇ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಬಾಣಂತಿ ಶೃತಿ ಸಂಬಂಧಿಕರು ವೈದ್ಯರ ಭರವಸೆ ಮೇಲೆ ನಾವು ಬೇರೆ ಕಡೆ ಕರೆದೊಯ್ಯಲಿಲ್ಲ. ಶಿಶುಗಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪ ಮಾಡಿದ್ದಾರೆ.

    ಈ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಬಾಣಂತಿ ಶೃತಿಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಣಂತಿ ಸಂಬಂಧಿಕರು ಆಗ್ರಹಿಸಿದ್ದಾರೆ.

  • ಮಾಸ್ತಿಯಲ್ಲಿ ತುಂಬು ಗರ್ಭಿಣಿ ಸಾವು- ವೈದ್ಯರ ವಿರುದ್ಧ ಸಂಬಂಧಿಕರು ಪ್ರತಿಭಟನೆ

    ಮಾಸ್ತಿಯಲ್ಲಿ ತುಂಬು ಗರ್ಭಿಣಿ ಸಾವು- ವೈದ್ಯರ ವಿರುದ್ಧ ಸಂಬಂಧಿಕರು ಪ್ರತಿಭಟನೆ

    ಕೋಲಾರ: ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ರಾಯಸಂದ್ರ ನಿವಾಸಿ ಅನುಸೂಯಮ್ಮ 22 ಮೃತ ಗರ್ಭಿಣಿ. ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಅವರನ್ನು ದಾಖಲು ಮಾಡಲಾಗಿತ್ತು.

    ಆದರೆ ಬುಧವಾರ ಬೆಳಗ್ಗೆ ವೈದ್ಯರಿಲ್ಲದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಾಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಮಾರ್ಗ ಮಧ್ಯೆ ಅನುಸೂಯಮ್ಮ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತಪಟ್ಟಿದ್ದಾರೆಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅರೋಗ್ಯ ಕೇಂದ್ರದ ಎದುರು ಮೃತಳ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.

  • ಸ್ಪಷ್ಟವಾಗಿ ಕಣ್ಣು ಕಾಣಿಸ್ತಿಲ್ಲ ಎಂದ ರೋಗಿಗೆ ಆಪರೇಶನ್ ಮಾಡಿ ಕಣ್ಣೆ ಕಾಣದಂತೆ ಮಾಡಿದ ವೈದ್ಯ

    ಸ್ಪಷ್ಟವಾಗಿ ಕಣ್ಣು ಕಾಣಿಸ್ತಿಲ್ಲ ಎಂದ ರೋಗಿಗೆ ಆಪರೇಶನ್ ಮಾಡಿ ಕಣ್ಣೆ ಕಾಣದಂತೆ ಮಾಡಿದ ವೈದ್ಯ

    ವಿಜಯಪುರ: ವೈದ್ಯೋ ನಾರಾಯಣೋ ಹರಿ ಎಂದು ಹೇಳುತ್ತಾರೆ. ಆದರೆ ಕೆಲ ವೈದ್ಯರು ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹಣವನ್ನ ಮಾತ್ರ ದೋಚಿ ನಂತರ ರೋಗಿಗಳು ಪರದಾಡುವಂತೆ ಮಾಡುತ್ತಾರೆ. ಅದೇ ರೀತಿ ವಿಜಯಪುರದಲ್ಲಿ ಕಣ್ಣನ್ನು ತೋರಿಸಲು ಬಂದ ರೋಗಿಯ ಕಣ್ಣೆ ಕಾಣದಂತೆ ವೈದ್ಯ ಯಡವಟ್ಟು ಮಾಡಿದ್ದಾನೆ.

    ವಿಜಯಪುರದ ವಜ್ರ ಹನುಮನ ಬಡಾವಣೆಯ ನಿವಾಸಿಯಾದ ವೃದ್ಧ ರಂಗಪ್ಪ ಕೆಂಗಾರ್ ನಗರದ ವೈದ್ಯ ಕಣ್ಣು ತಜ್ಞ ಆನಂದ ಕಣಬೂರ ಹತ್ತಿರ ಕಣ್ಣು ಸರಿಯಾಗಿ ಕಾಣುತ್ತಿಲ್ಲವೆಂದು ಹೇಳಿದ್ದಾನೆ. ಆಗ ವೈದ್ಯ ಆನಂದ ರಂಗಪ್ಪಗೆ ಕಣ್ಣನಿಲ್ಲಿ ಪೊರೆ ಬಂದಿದೆ ಆಪರೇಷನ್ ಮಾಡಬೇಕೆಂದು ಹೇಳಿ ಆಪರೇಷನ್ ಮಾಡಿದ್ದಾನೆ. ಆದರೆ ಅದ್ಯಾಕೋ ಗೊತ್ತಿಲ್ಲ ಆಪರೇಷನ್ ಆದ ನಂತರ ರಂಗಪ್ಪ ಅವರ ಕಣ್ಣು ಕಾಣಿಸುತ್ತಿಲ್ಲ. ಇದರಿಂದ ಆಕ್ರೋಶಗೊಂಡ ರಂಗಪ್ಪರ ಮಗ ಪ್ರಭು ವೈದ್ಯ ಆನಂದ ರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

    ತನ್ನ ತಪ್ಪನ್ನು ವೈದ್ಯ ಆನಂದ್ ಒಪ್ಪಿಕೊಂಡು ಮಾಧ್ಯಮಗಳಿಗೆ ಹೋಗದಂತೆ ಅಂಗಲಾಚಿದ್ದಾರೆ. ಆದರೆ ರಂಗಪ್ಪ ಮತ್ತೆ ಕುಟುಂಬಸ್ಥರು ನಿಮಗೆಷ್ಟು ಹಣ ಬೇಕು ಕೇಳಿ ಕೊಡುತ್ತೇವೆ ಆದರೆ ನನ್ನ ಕಣ್ಣು ಮರುಕಳಿಸಿ ಎಂದು ಅಂಗಲಾಚುತ್ತಿದ್ದಾರೆ. ಇನ್ನು ಗಾಂಧಿಚೌಕ ಠಾಣೆಯಲ್ಲಿ ಹಾಗೂ ಜಿಲ್ಲಾ ಆರೋಗ್ಯ ಕೇಂದ್ರ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ರಂಗಪ್ಪರ ಕುಟುಂಬ ಮುಂದಾಗಿದೆ.

    ರಂಗಪ್ಪರನ್ನು ಕೇಳಿದರೆ ಕಣಬೂರ ಡಾಕ್ಟರ್ ನನ್ನ ಕಣ್ಣು ತೆಗೆದು ಕಾಣದಂತಹ ಬೇರೊಂದು ಕಣ್ಣು ಹಾಕಿದ್ದಾನೆ. ಗಂಡ ಮಾಡಿರುವ ತಪ್ಪುಗಳಿಗೆ ಪತ್ನಿಯ ಸಹಕಾರ ಕೂಡಾ ಇದೆ. ಇಂತಹ ಘಟನೆಗಳು ನಡೆದಾಗ ಡಾಕ್ಟರ್ ಪತ್ನಿ ಲಕ್ಷ್ಮಿ ಅವರ ಕುಟುಂಬಗಳಿಗೆ ಕಾಲ್ ಮಾಡಿ ವ್ಯವಹಾರ ಸೆಟಲ್‍ಮೆಂಟ್ ಮಾಡುತ್ತಾಳೆ ಎಂದು ರಂಗಪ್ಪ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

  • ತಮಿಳ್ನಾಡಿನ ಸೂಳಗಿರಿಯಲ್ಲಿ ಭೀಕರ ಅಪಘಾತ – ಬೆಂಗ್ಳೂರಿನ ವೈದ್ಯ ದಂಪತಿ ಸೇರಿ ಮೂವರ ದುರ್ಮರಣ

    ತಮಿಳ್ನಾಡಿನ ಸೂಳಗಿರಿಯಲ್ಲಿ ಭೀಕರ ಅಪಘಾತ – ಬೆಂಗ್ಳೂರಿನ ವೈದ್ಯ ದಂಪತಿ ಸೇರಿ ಮೂವರ ದುರ್ಮರಣ

    ಬೆಂಗಳೂರು: ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ವೈದ್ಯ ದಂಪತಿ ಸೇರಿದಂತೆ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಮೃತರನ್ನು ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳಾದ ಅಂಬುಜಮ್ಮ(50) ಪತಿ ರಾಮಚಂದ್ರ (74) ಹಾಗೂ ಲಾರಿ ಚಾಲಕ ಕುಮಾರ್(30) ಎಂದು ಗುರುತಿಸಲಾಗಿದೆ.

    ಕರ್ನಾಟಕ ಗಡಿಗೆ ಹೊಂದಿಕೊಂಡಿರೋ ಹೊಸೂರು ಸಮೀಪದ ಸೂಳಗಿರಿ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಇಂದು ಮುಂಜಾನೆ 3.30 ರ ವೇಳೆಗೆ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಗಳೂರಿನ ಆರ್.ಟಿ ನಗರ ನಿವಾಸಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮೃತ ದಂಪತಿಗಳು ವೈದ್ಯರಾಗಿದ್ದು ಆರ್.ಟಿ ನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ತಮಿಳುನಾಡಿನ ದೇವಾಲಯಕ್ಕೆ ತೆರಳಿ ವಾಪಸ್ ಬರುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ.

    ಮೃತ ದೇಹಗಳನ್ನು ಸುಳಾಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.