Tag: doctor

  • ವೈದ್ಯೆಯ ಎಡವಟ್ಟಿಗೆ ಬಲಗೈ ಕಳೆದುಕೊಂಡ ಗರ್ಭಿಣಿ!

    ವೈದ್ಯೆಯ ಎಡವಟ್ಟಿಗೆ ಬಲಗೈ ಕಳೆದುಕೊಂಡ ಗರ್ಭಿಣಿ!

    ಬಾಗಲಕೋಟೆ: ಖಾಸಗಿ ಆಸ್ಪತ್ರೆ ವೈದ್ಯೆಯ ಎಡವಟ್ಟಿನಿಂದಾಗಿ 5 ತಿಂಗಳ ಗರ್ಭಿಣಿ ಕೈ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಇಳಕಲ್ ನಲ್ಲಿ ನಡೆದಿದೆ.

    ಶಿಲ್ಪಾ ಭಂಜತ್ರಿ (26) ಬಲಗೈ ಕಳೆದುಕೊಂಡ ಗರ್ಭಿಣಿ. ಶಿಲ್ಪಾವರು ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮ ನಿವಾಸಿಯಾಗಿದ್ದು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ತಮ್ಮ ಬಲಗೈಯನ್ನೇ ಕಳೆದುಕೊಂಡಿದ್ದಾರೆ.

    ಸಂಜೀವಿನಿ ಶಾವಿ ಆಸ್ಪತ್ರೆಯ ವಿರುದ್ಧ ಗರ್ಭಿಣಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯೆ ಶೋಭಾ ಶಾವಿಯವರ ನಿರ್ಲಕ್ಷ್ಯದಿಂದ ಗರ್ಭಿಣಿಯ ಕೈ ಕಟ್ ಆಗಿದೆ ಎಂದು ಆರೋಪಿಸಿ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.

    ಏನಿದು ಘಟನೆ?
    ಜೂನ್ 4ರಂದು ಶಿಲ್ಪಾರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಳಕಲ್‍ನ ಸಂಜೀವಿನಿ ಶಾವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚಿಕಿತ್ಸೆ ನೀಡಿದ ಡಾಕ್ಟರ್. ಶೋಭಾ ಶಾವಿಯವರು ಬಲಗೈಲಿರುವ ಗುಳ್ಳೆಯಿಂದ ಜ್ವರ ಕಾಣಿಸಿಕೊಂಡಿದೆ ಎಂದು ಒಳರೋಗಿಯ ವಿಭಾಗಕ್ಕೆ (ಐಪಿಡಿ) ದಾಖಲಿಸಿಕೊಂಡಿದ್ದಾರೆ.

    ವೈದ್ಯೆಯು ಆಪರೇಶನ್ ಮೂಲಕ ಗುಳ್ಳೆಯನ್ನು ತೆಗೆದಿದ್ದು, ಜೂನ್ 6ರಂದು ರಕ್ತ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಮಹಿಳೆಗೆ ರಕ್ತ ಹಾಕಿ ಜೂನ್ 8ರಂದು ಡಿಸ್ಟಾರ್ಜ್ ಮಾಡಿದ್ದಾರೆ. ಗ್ರಾಮಕ್ಕೆ ತೆರಳಿದ ಸ್ವಲ್ಪ ಸಮಯದಲ್ಲೇ ಆಪರೇಶನ್ ಆದ ಕೈಯಲ್ಲಿ ತೀವ್ರ ನೋವು ಹಾಗೂ ಬಾವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಹೋದಾಗ ವೈದ್ಯೆಯು ಸರಿಯಾದ ಚಿಕಿತ್ಸೆ ನೀಡದೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

    ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಾಗಲಕೋಟೆಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ಗರ್ಭಿಣಿಯನ್ನು ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಬಲಗೈಯಲ್ಲಿ ಆಪರೇಶನ್ ಮಾಡಿದ ಸ್ಥಳದಲ್ಲಿ ಸೋಂಕು ತಗುಲಿ ಗ್ಯಾಂಗ್ರೀನ್ ಆಗಿದ್ದು, ಕೂಡಲೇ ಮೊಣಕೈವರೆಗೆ ಕೈ ಕತ್ತರಿಸಬೇಕು, ಇಲ್ಲವೇ ಮಹಿಳೆಯ ಜೀವಕ್ಕೆ ಆಪತ್ತು ಎಂದಾಗ ಅನಿವಾರ್ಯವಾಗಿ ಮಹಿಳೆಯ ಬಲಗೈಯನ್ನು ಮೊಣಕೈವರೆಗೆ ಕತ್ತರಿಸಿದ್ದಾರೆ.

    ವೈದ್ಯೆಯು ಆಪರೇಶನ್ ಮಾಡಿ ಸರಿಯಾದ ಚಿಕಿತ್ಸೆ ಮಾಡದೇ ಇದ್ದರಿಂದ ಸೋಂಕು ತಗುಲಿದೆ. ಅಲ್ಲದೆ ರಕ್ತ ಹಾಕುವಾಗಲೂ ಗಮನಿಸದೆ ನಿರ್ಲಕ್ಷ್ಯ ತೋರಿದ್ದರಿಂದ ಸೋಂಕು ಗ್ಯಾಂಗ್ರಿನ್ ಆಗಿ ಮಾರ್ಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಗರ್ಭಿಣಿಯು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಆಪರೇಷನ್ ಅಂತೇಳಿ ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ತಲೆಯ ಚಿಪ್ಪನ್ನೇ ತೆಗೆದ ವೈದ್ಯ!

    ಆಪರೇಷನ್ ಅಂತೇಳಿ ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ತಲೆಯ ಚಿಪ್ಪನ್ನೇ ತೆಗೆದ ವೈದ್ಯ!

    ಹಾಸನ: ಖಾಸಗಿ ವೈದ್ಯರ ಎಡವಟ್ಟಿನಿಂದಾಗಿ ವ್ಯಕ್ತಿಯೊಬ್ಬರು ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.

    ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ಹೊಳೆನರಸೀಪುರ ಪಟ್ಟಣದ ರಾಜು ಎಂಬವರಿಗೆ ಬ್ರೈನ್ ಹ್ಯಾಮರೇಜ್ ಕಾರಣ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ತಲೆ ಬುರುಡೆ ಸ್ಕ್ಯಾನ್ ಮಾಡಿದ ಆಸ್ಪತ್ರೆಯ ನರರೋಗ ತಜ್ಞ ಹಾಗೂ ಶಸ್ತ್ರಚಿಕಿತ್ಸಕರು ಅವರ ಮೆದುಳಿನಲ್ಲಿ ರಕ್ತ ಸೋರಿಕೆಯಾಗಿದೆ. ಜೀವ ಉಳಿಯಬೇಕಾದ್ರೆ ತಕ್ಷಣ ಆಪರೇಷನ್ ಮಾಡಬೇಕು ಅಂತ ಹೇಳಿದ್ದರು.


    ಅದರಂತೆ ತಲೆಯ ಎಡಭಾಗದ ಚಿಪ್ಪು ತೆಗೆದು ಆಪರೇಷನ್ ಮಾಡಿದ ವೈದ್ಯರು, ಮಿದುಳಿನ ರಕ್ತಸ್ರಾವ ತಡೆಗಟ್ಟಿರುವುದಾಗಿ ಹೇಳಿದ್ದಾರೆ. ಮೂರ್ನಾಲ್ಕು ದಿನಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದ ತಲೆಯ ಚಿಪ್ಪು ಅಳವಡಿಸುವುದಾಗಿ ಅವರು ತಿಳಿಸಿದ್ದಾರೆ.

    ಆದರೆ 1 ವಾರ ಕಳೆದರೂ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡದ ವೈದ್ಯರು, ಬುರುಡೆಯ ಚಿಪ್ಪಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೇಳಿ ತಲೆಯ ಚಿಪ್ಪನ್ನೇ ಯಾರಿಗೂ ಹೇಳದೆ ಎಸೆದಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಹತ್ತಿರ 3 ಲಕ್ಷ ರೂ. ಖರ್ಚಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಲವಲವಿಕೆಯಿಂದಿದ್ದ ರಾಜು, ಈಗ ಮಾನಸಿಕ ಸ್ಥಿಮಿತತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಮನೆಯವರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ.

    ಈ ಬಗ್ಗೆ ಕೇಳಿದ್ರೆ ಯಾರೂ ಸೂಕ್ತ ಉತ್ತರ ನೀಡುವುದಿಲ್ಲ. ತಪ್ಪು ಮಾಡಿದ ವೈದ್ಯ ಬೆಂಗಳೂರು ಸೇರಿದ್ದಾರೆ. ಚಿಪ್ಪು ಇಲ್ಲದ ಕಾರಣ, ತಲೆಯ ಎಡಭಾಗವನ್ನು ಯಾರೂ ಮುಟ್ಟುವಂತಿಲ್ಲ. ರಾಜು ಅವರಿಗೆ ಹೆಲ್ಮೆಟ್ ಹಾಕಿ ಕೂರಿಸಬೇಕಾಗುತ್ತದೆ. ವೈದ್ಯರ ತಪ್ಪಿನಿಂದ ರಾಜು ಅವರ ಪ್ರಾಣಕ್ಕೆ ಅಪಾಯ ಎದುರಾಗಿದೆ. ಇದಕ್ಕೆ ನ್ಯಾಯ ಕೊಡಿಸಬೇಕು. ಜೊತೆಗೆ ತಪ್ಪು ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

  • ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಇಟ್ರೆ ಖಾಯಿಲೆ ವಾಸಿ!

    ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಇಟ್ರೆ ಖಾಯಿಲೆ ವಾಸಿ!

    ಬೀದರ್: ನಾಟಿ ವೈದ್ಯರೊಬ್ಬರು ಅಸ್ತಮಾದಂತಹ ರೋಗಗಳಿಗೆ ಬೀದರ್‍ನಲ್ಲಿ ವಿಶೇಷ ಚಿಕಿತ್ಸೆ ನೀಡುತ್ತಿದ್ದಾರೆ.

    ಶ್ಯಾಮ ಸುಂದರ್ ಜೀವಂತ ಮೀನುಗಳನ್ನು ನೀಡಿ ಚಿಕಿತ್ಸೆ ನೀಡುತ್ತಿರುವ ನಾಟಿ ವೈದ್ಯರು. ಸುಮಾರು 40 ವರ್ಷಗಳಿಂದ ಜೀವಂತ ಮೀನಿಗೆ ಔಷಧಿ ಹಚ್ಚಿ ರೋಗಿಗಳ ಬಾಯಿಗೆ ಹಾಕುತ್ತಾರೆ. ಈ ಮೂಲಕ ಅಸ್ತಮಾ, ಧಮ್ಮು ಮತ್ತು ಕೆಮ್ಮು ಕಾಯಿಲೆಗೆ ಶಾಶ್ವತ ಪರಿಹಾರ ಕೊಡುತ್ತಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಯಾವ ದಿನ ಮೀನಿನ ಚಿಕಿತ್ಸೆ ತೆಗೆದುಕೊಳ್ಳಬೇಕು?
    ಪ್ರತಿ ವರ್ಷ ಮುಂಗಾರು ಮಳೆ ಆರಂಭದ ಮೃಗಾಶೀರ ಜೇಷ್ಠ ಮಾಸದಂದು ಒಂದು ದಿನ ಮಾತ್ರ ಈ ಔಷದೋಪಚಾರ ನಡೆಯುತ್ತೆ. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆಯ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದವರಿಗೆ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಬರೋದಿಲ್ಲವಂತೆ. ಕಳೆದ ನಾಲ್ಕು ದಶಕಗಳಿಂದ ತಮ್ಮ ಪೂರ್ವಜರು ಈ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ ಎಂದು ಶ್ಯಾಮ್ ಸುಂದರ್ ಹೇಳುತ್ತಾರೆ.

    ಈ ಚಿಕಿತ್ಸೆ ಅಲೋಪತಿಕ್ ವೈದ್ಯರಿಂದ ಅಸಾಧ್ಯವಂತೆ. ವೈದ್ಯರ ಬಳಿ ಹೋದರೂ ವಾಸಿಯಾಗದ ಕಾಯಿಲೆಗಳು ಈ ಜೀವಂತ ಮೀನು ತಿಂದರೆ ವಾಸಿಯಾಗುತ್ತದೆ ಎನ್ನುವ ನಂಬಿಕೆಯಿದೆ. ನಾಟಿ ವೈದ್ಯ ಶ್ಯಾಮ್ ಸುಂದರ್ ಹಲವು ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವುದು ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ.

    ವೈದ್ಯರ ಬಳಿ ಹೋದರೆ ಅಸ್ತಮಾ ರೋಗಕ್ಕೆ ಸಾಕಷ್ಟು ಪರೀಕ್ಷೆ ಮಾಡುತ್ತಾರೆ. ಅಲ್ಲದೇ ವರ್ಷಗಟ್ಟಲೆ ಚಿಕಿತ್ಸೆ ನೀಡುತ್ತಾ ಹಣ ಸುಲಿಯುತ್ತಾರೆ. ಆದರೂ ರೋಗ ಗುಣಮುಖವಾಗುವ ಲಕ್ಷಣದ ಭರವಸೆ ಇರುವುದಿಲ್ಲ. ನಾಟಿ ವೈದ್ಯ ಶ್ಯಾಮ್ ಸುಂದರ್ ನೀಡುವ ಈ ಮೀನಿನ ಚಿಕಿತ್ಸೆಯಿಂದ ನಮ್ಮ ರೋಗ ನಿವಾರಣೆಯಾಗಿದೆ ಎಂದು ಇವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ ಹಲವರು ಹೇಳುತ್ತಾರೆ.

  • ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ನನ್ನ ಪತಿಗೆ ಬೆರಳು ತೋರಿಸಿ ಮಾತಾಡ್ತೀಯಾ.. ಹುಷಾರ್- ವೈದ್ಯರಿಗೆ ಜಿ.ಪಂ. ಸದಸ್ಯೆ ಅವಾಜ್

    ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿ ಮೇಲೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಆಕೆಯ ಗಂಡ ದರ್ಪ ತೋರಿಸಿದ್ದು, ಅದಕ್ಕೆ ಬಿಜೆಪಿಯ ಶಾಸಕರು ಸಾಥ್ ನೀಡಿದ ಘಟನೆ ಜಿಲ್ಲೆಯ ಜಗಳೂರು ತಾಲಲೂಕಿನ ಆಸ್ಪತ್ರೆಯಲ್ಲಿ ನಡೆದಿದೆ.

    ಆಸ್ಪತ್ರೆಯ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಕುಮಾರಿ ಹಾಗೂ ಶಾಸಕ ಎಸ್.ವಿ ರಾಮಚಂದ್ರಪ್ಪ ಹಾಗೂ ಬೆಂಬಲಿಗರು ಬಂದಿದ್ದರು. ಆದರೆ ಈ ಸಮಯದಲ್ಲಿ ಶಾಂತಕುಮಾರಿ ಪತಿ ಶಶಿಧರ್, ಡಾಕ್ಟರ್ ಗೆ ಮಾಹಿತಿ ಹಾಗೂ ದ್ವೇಷದಿಂದ ಆಡಳಿತ ನಡೆಸುತ್ತಿದ್ದೀರಿ ಎಂದು ಹೆಂಡತಿಯ ಅಧಿಕಾರವನ್ನು ಬಳಸಿಕೊಂಡು ಅವಾಜ್ ಹಾಕಿದ್ದಾರೆ. ಆಗ ವೈದ್ಯಾಧಿಕಾರಿ ಮುರುಳೀಧರ್ ಅವರು ಶಶಿಧರ್ ಗೆ ಬೆರಳು ತೋರಿಸಿ ಮಾತಾಡಿದ್ದಾರೆ.

    ಈ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯೆ, ನನ್ನ ಪತಿಗೆ ಬೆರಳು ತೋರಿಸಿ ಮಾತಾಡುತ್ತೀಯಾ ಹುಷಾರ್ ಅಂತ ಆವಾಜ್ ಹಾಕಿದ್ದಾರೆ. ಆಗ ಪಕ್ಕದಲ್ಲೇ ಇದ್ದ ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡ ಶಾಂತಕುಮಾರಿಗೆ ಸಾಥ್ ಕೊಟ್ಟು ಆವಾಜ್ ಹಾಕಿದ್ದಾರೆ. ಪತ್ನಿ ಅಧಿಕಾರವನ್ನ ಪತಿ ಶಶಿಧರ್ ಚಲಾಯಿಸಿ ಅಧಿಕಾರಿಗಳಿಗೆ ಕಿರುಕುಳ, ಅವಾಜ್ ಹಾಕಿದ್ರೂ ಶಾಸಕರು ಮಾತ್ರ ಮೌನವಹಿಸಿದ್ದಾರೆ.

    ದೊಣ್ಣೆಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯನ ಗಂಡ ಶಶಿಧರ್ ಕಾಟ ಕೊಡುತ್ತಲೇ ಬರುತ್ತಿದ್ದರೂ ಅಧಿಕಾರಿಗಳ ಬೆಂಬಲಕ್ಕೆ ಬಾರದ ಶಾಸಕರು, ಈಗ ಸದಸ್ಯೆಯ ಪತಿಯ ಬೆಂಬಲಕ್ಕೆ ಬಂದು ಅವಾಜ್ ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

    ಆಸ್ಪತ್ರೆಯಲ್ಲಿ ಏನೇ ಲೋಪದೋಷ ಅಕ್ರಮ ಇದ್ದರೂ ಶಾಸಕರು ಜಿಲ್ಲಾ ಪಂಚಾಯಿತಿ ಸದಸ್ಯೆ ಕೇಳಬೇಕಿತ್ತು. ಕಳೆದ ಒಂದು ವರ್ಷದ ಕೆಳಗೆ ಮಾಜಿ ಕಾಂಗ್ರೆಸ್ ಶಾಸಕನ ಆಪ್ತರೊಬ್ಬರು ಇದೇ ರೀತಿ ಅಧಿಕಾರಿಗಳಿಗೆ ಕಿರುಕುಳ ಕೊಟ್ಟಿದ್ದರು. ಈಗ ಜಿಲ್ಲಾಪಂಚಾಯಿತಿ ಸದಸ್ಯೆಯ ಪತ್ನಿ ಅವಾಜ್ ಹಾಕಿದ್ದಾರೆ. ಗ್ರಾಮೀಣ ಭಾಗಕ್ಕೆ ವೈದ್ಯರು ಬರುವುದೇ ಕಷ್ಟ, ಅಂತದರಲ್ಲಿ ಬಂದಂತಹ ವೈದ್ಯರಿಗೆ ಜನಪ್ರತಿನಿಧಿಗಳೇ ಅವಾಜ್ ಹಾಕಿದರೇ ಅವರಿಗೆ ರಕ್ಷಣೆ ಕೊಡೋರು ಯಾರು ಎನ್ನುವ ಪ್ರಶ್ನೆ ಅಲ್ಲಿನ ಜನರನ್ನು ಕಾಡುತ್ತಿದೆ.

  • ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳು, ತುಂಬಿದ ಕಂಟೈನರ್ ಗಳಲ್ಲ: ಹೈಕೋರ್ಟ್

    ಚೆನ್ನೈ: ಪಠ್ಯ ಪುಸ್ತಕಗಳನ್ನು ಹೊರಲು ಮಕ್ಕಳು ವೇಟ್ ಲಿಫ್ಟರ್ ಗಳಾಗಲಿ, ತುಂಬಿದ ಕಂಟೈನರ್ ಗಳಾಗಲಿ ಅಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈ ಕೋರ್ಟ್ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದೆ.

    ಮಕ್ಕಳ ಕೈ ಚೀಲದ ಹೊರೆಯನ್ನು ಕಡಿಮೆ ಮಾಡುವಂತೆ ಹಾಗೂ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡದಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ತನ್ನ ಮಧ್ಯಂತರ ತೀರ್ಪಿನಲ್ಲಿ ಸೂಚಿಸಿದೆ.

    ತೆಲಂಗಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳ ಆದೇಶಗಳನ್ನು ಉಲ್ಲೇಖ ಮಾಡುತ್ತಾ ನ್ಯಾಯಮೂರ್ತಿ ಕಿರುಬಾಕರನ್ ಕೈ ಚೀಲದ ತೂಕ ಮಕ್ಕಳ ತೂಕದ 10% ಮೀರಿರಬಾರದು. ಈ ಸಂಬಂಧ “ಮಕ್ಕಳ ಶಾಲಾ ಬ್ಯಾಗ್ ನೀತಿ” ಗೆ ಸಂಬಂಧಿಸಿದಂತೆ ಮಾನದಂಡಗಳನ್ನು ರೂಪಿಸುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

    ವಕೀಲ ಎಂ ಪುರುಷೋತ್ತಮನ್ ಅವರು ಎನ್‍ಸಿಇಆರ್ ಟಿ ಸಿದ್ಧಪಡಿಸಿದ ಪಠ್ಯ ಮತ್ತು ಎನ್‍ಸಿಇಆರ್ ಟಿ ಮುದ್ರಿಸಿದ ಪುಸ್ತಕಗಳನ್ನು ಮಾತ್ರ ಖರೀದಿಸುವಂತೆ ಸಿಬಿಎಸ್‍ಇ ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ನೀಡಿದೆ.

    ಎನ್‍ಸಿಇಆರ್ ಟಿ ಪಠ್ಯ ಕ್ರಮ ಮತ್ತು ಬುಕ್ ಗಳನ್ನು ಕಡ್ಡಾಯ ಗೊಳಿಸುವಂತೆ ಕೇಂದ್ರಿಯ ಶಿಕ್ಷಣ ಮಂಡಳಿ (ಸಿಬಿಎಸ್‍ಇ) ಹಾಗೂ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಕೋರ್ಟ್ ಸೂಚಿಸಿದೆ.

    1 ಮತ್ತು 2 ನೇ ತರಗತಿಗೆ ಭಾಷೆ ಮತ್ತು ಗಣಿತ ವಿಷಯಗಳು ಮಾತ್ರ ಇರಬೇಕು. ತರಗತಿ 3 ರಿಂದ 5 ನೇ ತರಗತಿ ವರೆಗೆ ಪರಿಸರ ಅಧ್ಯಯನ ಮತ್ತು ಗಣಿತ ವಿಷಯಗಳನ್ನು ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ ಬೋಧಿಸಬೇಕು. ಎನ್‍ಸಿಇಆರ್ ಟಿ ಪಠ್ಯ ಕ್ರಮದ ಪ್ರಕಾರ 1 ಮತ್ತು 2 ನೇ ತರಗತಿ ಮಕ್ಕಳಿಗೆ ಹೋಮ್ ವರ್ಕ್ ಕೊಡುವ ಹಾಗೆ ಇಲ್ಲ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

    ವೈದ್ಯರು ಹೇಳುವಂತೆ 5 ರಿಂದ 6 ವರ್ಷದ ಮಕ್ಕಳಿಗೆ ಕನಿಷ್ಠ 11 ಗಂಟೆ ನಿದ್ದೆ ಬೇಕು. ಬೆಳಗ್ಗೆ ಶಾಲೆಗೆ ಮುಂಚೆ ಹೋಗಿದ್ದರೆ ಬೇಗ ಮಲಗಬೇಕು. ಹೋಮ್ ವರ್ಕ್ ಮಕ್ಕಳ ನಿದ್ದೆಯ ಸಮಯವನ್ನು ತೆಗೆದುಕೊಳ್ಳುತ್ತಿದೆ ಎಂದು ತನ್ನ ಆದೇಶದಲ್ಲಿ ವೈದ್ಯಕೀಯ ತಜ್ಞರ ಹೇಳಿಕೆಗಳನ್ನು ಜಡ್ಜ್ ಉಲ್ಲೇಖಿಸಿದರು.

    1 ನೇ ತರಗತಿ ಪಠ್ಯ ಕ್ರಮದಲ್ಲಿ ವ್ಯಾಕರಣ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳು ಇರುವುದು ಆಶ್ಚರ್ಯ ಮತ್ತು ಅತಂಕ ತರಿಸುವಂತದ್ದು. 5 ವರ್ಷದ ಮಗು ಹೇಗೆ ಈ ವಿಷಯಗಳನ್ನು ಗ್ರಹಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಸಿಬಿಎಸ್‍ಇ ಶಾಲೆಗಳು ಅಪ್ರಸ್ತುತ ವಿಷಯಗಳನ್ನು ಬೋಧಿಸಿ ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತಿದೆ ಎಂದು ಅಭಿಪ್ರಾಯಪಟ್ಟು ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ಚಾಟಿ ಬೀಸಿದರು.

     

  • ಶಶಿಕಲಾ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ವಾಸ ಮಾಡ್ತಿದ್ದಾರೆ: ನಾಗಲಕ್ಷ್ಮೀಬಾಯಿ

    ಶಶಿಕಲಾ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ವಾಸ ಮಾಡ್ತಿದ್ದಾರೆ: ನಾಗಲಕ್ಷ್ಮೀಬಾಯಿ

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಸಾಮಾನ್ಯ ಕೈದಿಯಂತೆ ವಾಸ ಮಾಡುತ್ತಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಹೇಳಿದ್ದಾರೆ.

    ಇಂದು ಕಾರಾಗೃಹಕ್ಕೆ ಭೇಟಿ ಕೊಟ್ಟ ನಾಗಲಕ್ಮೀಬಾಯಿ ಅವರು ಮಹಿಳಾ ಕೈದಿಗಳ ಯೋಗಕ್ಷೇಮ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಈ ವೇಳೆ ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, ನನಗೂ ಬಹಳ ಜನ ಶಶಿಕಲಾ ಜೈಲಿನಲ್ಲಿ ವಿಲಾಸಿಮಯ ಜೀವನ ನಡೆಸುತ್ತಿದ್ದಾರೆ ಅಂತಾ ಹೇಳಿದ್ರು. ಆದ್ರೆ ಇಂದು ನಾನೇ ನೋಡಿದ್ದು, ಸಾಮಾನ್ಯ ಕೈದಿಯಂತೆ ಶಶಿಕಲಾ ಇದ್ದಾರೆ. ಅಂತಹ ವಿಲಾಸಿಮಯ ಸೌಲಭ್ಯಗಳನ್ನು ಅವರಿಗೆ ಒದಗಿಸಿಲ್ಲ. ಶಶಿಕಲಾ ಜೊತೆ ಮತ್ತೊಬ್ಬ ಮಹಿಳಾ ಕೈದಿ ಇದ್ದಾರೆ ಅಂತಾ ಉತ್ತರಿಸಿದ್ರು.

    ಮಹಿಳಾ ಕೈದಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ಜೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸ್ಪತ್ರೆ ಇದ್ದು ವೈದ್ಯರ ಕೊರತೆ ಇದೆ. 60 ವರ್ಷಕ್ಕೂ ಮೇಲ್ಪಟ್ಟ ಕೆಲವು ಮಹಿಳಾ ಕೈದಿಗಳು ಸಹ ಇದ್ದಾರೆ. ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

  • ರೋಗಿ ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆಯೇ ಹಲ್ಲೆ- ಜೆಜೆ ಹಾಸ್ಪಿಟಲ್ ಡಾಕ್ಟರ್ಸ್ ಪ್ರತಿಭಟನೆ

    ರೋಗಿ ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆಯೇ ಹಲ್ಲೆ- ಜೆಜೆ ಹಾಸ್ಪಿಟಲ್ ಡಾಕ್ಟರ್ಸ್ ಪ್ರತಿಭಟನೆ

    ಮುಂಬೈ: ನಗರದ ಜೆಜೆ ಆಸ್ಪತ್ರೆಯಲ್ಲಿ ಮಹಿಳೆ ಸೇರಿ ಇಬ್ಬರು ಡಾಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.

    ರೋಗಿಯ ಸಂಬಂಧಿಕರೇ ಈ ಕೃತ್ಯ ಎಸಗಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಏನಿದು ಪ್ರಕರಣ?: ಜೆಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ 45 ವರ್ಷದ ಝೈದ ಶೇಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ವಿಚಾರವನ್ನು ವೈದ್ಯರು ಮೃತನ ಸಂಬಂಧಿಕರಿಗೆ ತಿಳಿಸಿದ್ದಾರೆ. ಈ ವೇಳೆ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿ ಸಾವನ್ನಪ್ಪಿರುವುದಾಗಿ ಆರೋಪಿಸಿದ್ದು ಮಾತ್ರವಲ್ಲದೇ ವೈದ್ಯೆ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಗೈದಿದ್ದಾರೆ ಅಂತ ಪೊಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆಗೈಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲು ಡಾಕ್ಟರ್, ಮೃತನ ಸಂಬಂಧಿಕರಿಗೆ ವಿಷಯನ್ನು ವಿವರಿಸಿದ್ದಾರೆ. ಆಗ ತಾಳ್ಮೆಯಿಂದ ಆಲಿಸುತ್ತಿದ್ದ ಮೂವರು ಸಂಬಂಧಿಕರಲ್ಲಿ ಓರ್ವ ಡಾಕ್ಟರ್‍ನ ಕಪಾಳಕ್ಕೆ ಬಾರಿಸಿದ್ದಾನೆ. ಅಷ್ಟರಲ್ಲಿ ಉಳಿದಿಬ್ಬರು ಕೂಡ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಕುರ್ಚಿಗಳನ್ನು ಒಡೆದು ಹಾಕಿದ್ದಾರೆ. ನಂತರ ಆಸ್ಪತ್ರೆಯ ಆವರಣದಿಂದ ಡಾಕ್ಟರ್ ಓಡಿಹೋದ್ರು ಬಿಡದೇ ಹಿಡಿದು ಥಳಿಸಿರುವುದು ವಿಡಿಯೋದಲ್ಲಿ ಕಾಣಬಹುದು.

    ಸದ್ಯ ಘಟನೆಯನ್ನು ಖಂಡಿಸಿ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

    https://www.youtube.com/watch?v=FbYgO94Prh4

  • ಸ್ಕ್ಯಾನಿಂಗ್ ಮಾಡಿಸಲು ಸಂಬಂಧಿಕರು ರೋಗಿಯನ್ನ ಹೊತ್ತುಕೊಂಡೇ ಹೋದ್ರು!

    ಸ್ಕ್ಯಾನಿಂಗ್ ಮಾಡಿಸಲು ಸಂಬಂಧಿಕರು ರೋಗಿಯನ್ನ ಹೊತ್ತುಕೊಂಡೇ ಹೋದ್ರು!

    ಕೊಪ್ಪಳ: ಸ್ಟ್ರೆಚರ್ ಇಲ್ಲದ್ದರಿಂದ ಚಿಕಿತ್ಸೆಗಾಗಿ ರೋಗಿಯನ್ನು ಸಂಬಂಧಿಕರೇ ಹೊತ್ತೊಯ್ದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ರೋಗಿ ದೊರಸ್ವಾಮಿಯನ್ನು ಅವರ ಸಂಬಂಧಿಕರು ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಗೂಗಿಬಂಡಿ ಗ್ರಾಮದ ದೊರೆಸ್ವಾಮಿಯನ್ನು ಚಿಕಿತ್ಸೆಗಾಗಿ ಗುರುವಾರ ಸಂಜೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈದ್ಯರ ಸಲಹೆಯಂತೆ ದೊರೆಸ್ವಾಮಿಗೆ ಸ್ಕ್ಯಾನಿಂಗ್ ಮಾಡಿಸುವ ಸಲುವಾಗಿ ಎರಡನೇ ಮಹಡಿಯಿಂದ ಕೆಳಗೆ ಹೊತ್ತುಕೊಂಡು ಬರಲಾಗಿದೆ. ಸ್ಕ್ಯಾನಿಂಗ್ ಮಾಡಲು ಕರೆದೊಯ್ಯಲು ಸ್ಟ್ರೆಚರ್ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗೆ ರೋಗಿ ಸಂಬಂಧಿಕರು ಮನವಿ ಮಾಡಿದ್ದಾರೆ. ಸುಮಾರು 1 ಗಂಟೆಯಾದರೂ ಸ್ಟ್ರೆಚರ್ ನೀಡದ ಹಿನ್ನಲೆಯಲ್ಲಿ ರೋಗಿಯ ಸಂಬಂಧಿಕರೇ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.

  • 4 ತಿಂಗ್ಳಿಂದ ಕೋಮಾದಲ್ಲಿದ್ದ ಯುವತಿ ಸಾಂಗ್ ಕೇಳಿ ಎದ್ದಳು!

    4 ತಿಂಗ್ಳಿಂದ ಕೋಮಾದಲ್ಲಿದ್ದ ಯುವತಿ ಸಾಂಗ್ ಕೇಳಿ ಎದ್ದಳು!

    ಬೀಜಿಂಗ್: ಎಂತಾ ಕಾಯಿಲೆ ಇದ್ದರೂ ಸಂಗೀತಕ್ಕೆ ಗುಣಪಡಿಸುವ ಶಕ್ತಿಯಿದೆ ಎಂದು ನಾವು ಕೇಳಿದ್ದೇವೆ. ಇದಕ್ಕೆ ಸಾಕ್ಷಿ ಎಂಬಂತೆ ನಾಲ್ಕು ತಿಂಗಳಿಂದ ಕೋಮಾದಲ್ಲಿದ್ದ ಯುವತಿಯೊಬ್ಬಳು ಸಂಗೀತ ಕೇಳಿ ಎಚ್ಚರಗೊಂಡಿದ್ದಾಳೆ.

    ಚೀನಾದ 24 ವರ್ಷದ ಯುವತಿಯೊಬ್ಬಳು ನಾಲ್ಕು ತಿಂಗಳಿಂದ ಕೋಮದಲ್ಲಿದ್ದಳು. ಆದರೆ ಥೈವಾನಿಸೆ ಪಾಪ್ ಸ್ಟಾರ್ ಜೇ ಚೌ ಹಾಡುಗಳನ್ನು ಕೇಳಿ ಕೋಮಾದಿಂದ ಹೊರಬಂದಿದ್ದಾಳೆ. ಕಳೆದ ವರ್ಷ ನವೆಂಬರ್ ನಿಂದ ಯುವತಿ ಆಮ್ಲಜನಕದ ಕೊರತೆಯಿಂದ ಮೆದುಳು ಕಾರ್ಯನಿರ್ವಹಿಸದೇ ಕೋಮಾದಲ್ಲಿದ್ದಳು.

    ಯುವತಿಯನ್ನು ಕೋಮಾದಿಂದ ಎಚ್ಚರಿಸಲು ನರ್ಸ್ ಗಳು, ಜೋಕ್ಸ್ ಮತ್ತು ನ್ಯೂಸ್ ಹೇಳುತ್ತಿದ್ದರು. ಆದರೆ ಅವರ ಪ್ರಯತ್ನ ಯಾವುದು ಪ್ರಯೋಜನವಾಗಿಲ್ಲ. ಏಕೆಂದರೆ ಆಕೆ ಮಾತ್ರ ಕೋಮಾದಿಂದ ಹೊರಬಂದಿಲ್ಲ. ಒಂದು ದಿನ ನರ್ಸ್ ಥೈವಾನಿ ಪಾಪ್ ಸ್ಟಾರ್ ಜೇ ಚೌ ಹಾಡುಗಳನ್ನು ಯುವತಿಗೆ ಕೇಳಿಸಿದ್ದಾರೆ. ಆಗ ಆಕೆಯ ಪಾದಗಳು ಚಲಿಸಿದಂತೆ ಕಂಡು ಬಂದಿದೆ. ಇದರಿಂದ ಯುವತಿಗೆ ಪಾಪ್ ಸ್ಟಾರ್ ಜೇ ಚೌ ಸಂಗೀತ ಇಷ್ಟ ಎಂದು ತಿಳಿದಿದೆ.

    ಯುವತಿಗೆ ಇಷ್ಟವಾದ ಜೇ ಚೌ ಹಾಡುಗಳನ್ನು ಪ್ರತಿದಿನ ಕೇಳಿಸುತ್ತಿದ್ದರು. ಮಾರ್ಚ್ ನಲ್ಲಿ ಪಾಪ್ ಸ್ಟಾರ್ 2006 ಹಾಡಿದ್ದ “ರೋಸ್ಮೆರಿ” ಹಿಟ್ ಸಾಂಗ್ ಕೇಳಿಸಿದಾಗ ಆಕೆ ಕಣ್ಣು ತೆರೆದಿದ್ದು, ಕೈಗಳು, ಕಾಲು ಬೆರಳುಗಳನ್ನು ಅಲುಗಾಡಿಸಿದ್ದಾಳೆ.

    ಯುವತಿ ಇಷ್ಟ ಪಟ್ಟ ಹಾಡನ್ನು ಆಸ್ಪತ್ರೆಯ ಸಿಬ್ಬಂದಿ ಹಾಡುತ್ತಿದ್ದಾಗ ವೈದ್ಯರು ಬಂದಿದ್ದಾರೆ. ಆಗ ಸಂಗೀತ ಹೇಗಿದೆ ಎಂದು ಕೇಳಿದ್ದಾರೆ. ಅದಕ್ಕೆ ಯುವತಿ ಪರವಾಗಿಲ್ಲ ಚೆನ್ನಾಗಿದೆ ಎಂದು ಉತ್ತರಿಸಿದ್ದಾಳೆ. ನಿಜಕ್ಕೂ ನಮಗೆ ಆಶ್ಚರ್ಯವಾಯಿತು ನರ್ಸ್ ಹೇಳಿದ್ದಾರೆ.

  • ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಗಂಟಲು ನೋವು ಎಂದು ಆಸ್ಪತ್ರೆಗೆ ಸೇರಿಸಿದ್ರು – ಇಂಜೆಕ್ಷನ್ ಕೊಟ್ಟ ಒಂದೇ ದಿನದಲ್ಲಿ 13ರ ಬಾಲಕಿ ದುರ್ಮರಣ

    ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ 13 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ನಡೆದಿದೆ.

    ಪ್ರೇಮಾಂಜಲಿ(13) ಮೃತ ದುರ್ದೈವಿ. ಈಕೆ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕಾಕಿನಾಡದ ರಾಯವರಂ ನಿವಾಸಿ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

    ಬುಧವಾರ ಪ್ರೇಮಾಂಜಲಿ ಗಂಟಲು ನೋವಿನಿಂದ ಬಳಲುತ್ತಿದ್ದಳು. ಗಂಟಲು ಸಮಸ್ಯೆಯಿಂದ ಎರಡು ದಿನಗಳ ಕಾಲ ಅನ್ನ, ನೀರು ಏನು ತಿನ್ನಲು ಆಗುತ್ತಿರಲಿಲ್ಲ. ಬಳಿಕ ಆಕೆಯ ಪೋಷಕರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರು ಆಕೆಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಮಾಡಿದ ಸ್ವಲ್ಪ ಸಮಯದ ಬಳಿಕ ಪ್ರೇಮಾಂಜಲಿಗೆ ವಾಂತಿ-ಭೇದಿ ಶುರುವಾಗಿದೆ. ಈ ವೇಳೆ ವೈದ್ಯರು ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೂ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿಯ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ.

    ಪೋಷಕರು ವೈದ್ಯರ ವಿರುದ್ಧ ದೂರು ನೀಡಿದ್ದು, ಕಾಕಿನಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇತ್ತ ಮಗಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.