Tag: doctor

  • ವೈದ್ಯರ ನಿರ್ಲಕ್ಷ್ಯದಿಂದಾಗಿ ಗೃಹಿಣಿ ಸಾವು

    ವೈದ್ಯರ ನಿರ್ಲಕ್ಷ್ಯದಿಂದಾಗಿ ಗೃಹಿಣಿ ಸಾವು

    ದಾವಣಗೆರೆ: ವೈದ್ಯರ ನಿರ್ಲಕ್ಷದಿಂದಾಗಿ ಗೃಹಿಣಿ ಸಾವನ್ನಪ್ಪಿರುವ ಘಟನೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ನಡೆದಿದೆ.

    ಚಿತ್ತಾನಹಳ್ಳಿ ಗ್ರಾಮದ ಶಾರದಮ್ಮ (35) ಮೃತ ದುರ್ದೈವಿಯಾಗಿದ್ದಾರೆ. ಶಾರದಮ್ಮರವರು 15 ದಿನಗಳ ಹಿಂದೆ ನಗರದ ಸುಚೇತನಾ ಆಸ್ಪತ್ರೆಯಲ್ಲಿ ಗರ್ಭಕೋಶದ ಆಪರೇಷನ್ ಮಾಡಿಸಿಕೊಂಡಿದ್ದರು. ಇಂದು ಆಪರೇಷನ್ ಮಾಡಿದ ಹೊಲಿಗೆ ತೆಗೆಸಲು ಬಂದಾಗ ಅನುಮಾನಾಸ್ಪದವಾಗಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಶಾರದಮ್ಮರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ಜಮಾಯಿಸಿದ ನೂರಾರು ಸಾರ್ವಜನಿಕರು ಹಾಗೂ ಸಂಬಂಧಿಕರು ಸಾವಿಗೆ ಕಾರಣರಾದ ವೈದ್ಯರು ಮತ್ತು ಸಿಬ್ಬಂದಿಯನ್ನು ಆಸ್ಪತ್ರೆಯಲ್ಲೇ ಕೂಡಿಹಾಕಿ, ಪ್ರತಿಭಟನೆ ನಡೆಸಿದರು.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಘಟನೆ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ಭಿಕ್ಷೆ ಬೇಡಿ ವೈದ್ಯರಾದ್ರು, ದುಡಿದ ಹಣವನ್ನ ವಿದ್ಯಾರ್ಥಿಗಳಿಗೆ ದಾನ ಮಾಡಿದ್ರು ಪಾವಗಡದ ಪ್ರಭಾಕರ ರೆಡ್ಡಿ

    ತುಮಕೂರು: ಎಂಜಿನಿಯರ್, ಡಾಕ್ಟರ್ ಆಗಿ ಚೆನ್ನಾಗಿ ಸಂಪಾದನೆ ಮಾಡ್ಬೇಕು. ಲೈಫನ್ನ ಎಂಜಾಯ್ ಮಾಡ್ಬೇಕು. ಮಕ್ಕಳು ಮೊಮ್ಮಕ್ಕಳಿಗೂ ಕೂಡಿಡಬೇಕು ಅಂತಲೇ ಎಲ್ಲರ ಕನಸು ಕಾಣ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ.ಪ್ರಭಾಕರ್ ರೆಡ್ಡಿ ಅವರು ಮಾತ್ರ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ದಾನ ಮಾಡ್ತಿದ್ದಾರೆ.

    80 ವರ್ಷದ ಡಾ. ಪ್ರಭಾಕರ್ ರೆಡ್ಡಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ್ದಾರೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ವೈದ್ಯ ವೃತ್ತಿಗಾಗಿ ಲಂಡನ್‍ಗೆ ಹೋಗಿರೋ ಇವರು ಸದ್ಯ ನಿವೃತ್ತಿಯಾಗಿದ್ದಾರೆ.

    ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು ಕಡುಬಡತನದಲ್ಲಿ ಬೆಳೆದ ಇವರಿಗೆ ಡಾಕ್ಟರ್ ಆಗೋದು ಕನಸು. 1965ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾರೆ. ಅಂದಿನ ಕಾಲದಲ್ಲಿ 240 ರೂಪಾಯಿ ಶುಲ್ಕ ಕಟ್ಟಲು ಸಾಧ್ಯವಾಗದೆ ಪರಿತಪಿಸಿದ್ದರು. ಸ್ನೇಹಿತರ ಬಳಿ ಸ್ವಲ್ಪ ಹಣ ಸಿಕ್ಕರೂ ಉಳಿದ ಹಣಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿ, ಎಂಬಿಬಿಎಸ್ ಪಾಸ್ ಮಾಡಿದ್ರು. ಆಮೇಲೆ ಕೆಲ ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್‍ಗೆ ಹೋಗಿ ಅಲ್ಲಿಯೇ ನೆಲೆಸಿದ್ದರು.

    ತಮ್ಮ ಕಷ್ಟದ ದಿನಗಳನ್ನ ನೆನಸಿಕೊಳ್ಳುವ ಪ್ರಭಾಕರ ರೆಡ್ಡಿ ಅವರು, ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತಿದ್ದಾರೆ. ವಿದ್ಯಾರ್ಥಿ ವೇತನ, ಶಾಲಾ ಕಾಲೇಜ್‍ಗಳಿಗೆ ಕುಡಿಯುವ ನೀರು, ಬೆಂಚು, ಕ್ರೀಡಾಪಟುಗಳಿಗೆ ಸಮವಸ್ತ್ರವನ್ನ ನೀಡ್ತಿದ್ದಾರೆ. ಪಾವಗಡದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಾಡಿಗೆಗೆ ನೀಡಿದ್ದಾರೆ.

    ಬೆಂಗಳೂರಿನಲ್ಲಿದ್ದ 1.5 ಕೋಟಿ ರೂಪಯಿ ಮನೆ ಹಾಗೂ ಲಂಡನ್ನಿನಲಿದ್ದ ಸುಮಾರು 2 ಕೋಟಿ ರೂಪಾಯಿ ಮನೆಯನ್ನು ಮಾರಿದ್ದು, ಈಗ ಬಾಡಿಗೆ ಮನೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿನ ಜೊತೆಗೆ ಪರಿಸರ ಕಾಳಜಿ, ಸ್ವಚ್ಚತೆ, ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಸಹ ಮಾಡ್ತಿದ್ದಾರೆ.

    https://www.youtube.com/watch?v=GYvWiQGjB94

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತಾಯಿ ಸಿಂಹದ ಹೊಟ್ಟೆ ಸೇರುತ್ತಿದ್ದ 2 ಮರಿಗಳನ್ನು ರಕ್ಷಿಸಿದ ಸಿಬ್ಬಂದಿ!

    ತಾಯಿ ಸಿಂಹದ ಹೊಟ್ಟೆ ಸೇರುತ್ತಿದ್ದ 2 ಮರಿಗಳನ್ನು ರಕ್ಷಿಸಿದ ಸಿಬ್ಬಂದಿ!

    ಬೆಂಗಳೂರು: ಜನ್ಮ ನೀಡಿದ ಮರಿಗಳನ್ನೇ ತಿನ್ನುವ ಚಾಳಿ ಹೊಂದಿದ್ದ ಹೆಣ್ಣು ಸಿಂಹದಿಂದ ಎರಡು ಮರಿ ಸಿಂಹಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಬೇರ್ಪಡಿಸಿ ಮರು ಜೀವ ನೀಡಿದ್ದಾರೆ.

    ಉದ್ಯಾನವನದಲ್ಲಿರುವ `ಸನಾ’ ಎಂಬ ಎಂಟು ವರ್ಷದ ಸಿಂಹ ಏಪ್ರಿಲ್ 25 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಜನ್ಮ ನೀಡಿದ ಬಳಿಕ ತಾಯಿ ಸಿಂಹವು ಮರಿಯೊಂದನ್ನು ತಿಂದು ಹಾಕಿತ್ತು. ಇದನ್ನು ಅರಿತ ಸಿಬ್ಬಂದಿ ತಾಯಿ ಸಿಂಹದಿಂದ ಮೂರು ಮರಿಗಳನ್ನು ಬೇರ್ಪಡಿಸಿದ್ದಾರೆ. ಆದರೆ ಒಂದು ಮರಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಮೃತಪಟ್ಟಿ ಹೋಗಿದೆ. ಉಳಿದೆರಡು ಮರಿಗಳನ್ನು ಸಿಬ್ಬಂದಿ ಹಾಗೂ ವೈದ್ಯರು ಆರೈಕೆ ಮಾಡುತ್ತಿದ್ದಾರೆ.

    ಪ್ರಾಣಿಗಳಲ್ಲಿ ಮರಿ ಬದುಕುಳಿಯಲು ತಾಯಿ ಹಾಲು ಅತ್ಯಗತ್ಯವಾಗಿದ್ದು, ತಾಯಿ ಹಾಲಿನಲ್ಲಿ ಅಪಾರವಾದ ಪೌಷ್ಟಿಕಾಂಶದಿಂದಾಗಿ ಮರಿಗಳು ಸದೃಢವಾಗಲು ನೆರವಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಮರಿಗಳಿಗೆ ಬೇರೆ ಮೂಲದಿಂದ ಪೌಷ್ಟಿಕಾಂಶ ಒದಗಿಸಿದರೂ ಬದುಕುವುದು ಕಷ್ಟ, ರೋಗಬಾಧೆಗಳು ಬೇಗವಾಗಿ ತಗುಲುತ್ತವೆ. ಈ ಹಿನ್ನೆಲೆಯಲ್ಲಿ ಮರಿಗಳನ್ನು ಹೇಗಾದರೂ ರಕ್ಷಣೆ ಮಾಡಲೇಬೇಕೆಂದು ಪಣತೊಟ್ಟಿರುವ ಉದ್ಯಾನವನದ ವೈದ್ಯರಾದ ಡಾ.ಉಮಾಶಂಕರ್ ರವರ ನೇತೃತ್ವದ ತಂಡವು ಮೂರು ಮೇಕೆಗಳನ್ನು ಖರೀದಿಸಿ, ಅವುಗಳ ಹಾಲನ್ನು ಸಿಂಹದ ಮರಿಗಳಿಗೆ ನೀಡುತ್ತಿದ್ದಾರೆ.

    ಕೆಲವು ಪ್ರಾಣಿಗಳು ಹುಟ್ಟಿದ ಮರಿಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿರುತ್ತವೆ. ಆದ್ದರಿಂದ ಇದನ್ನು ಕೂಡಲೇ ಪತ್ತೆಹಚ್ಚಿ ತಾಯಿ ಪ್ರಾಣಿಗಳಿಂದ ಮರಿಗಳನ್ನು ಬೇರೆ ಮಾಡಬೇಕಾಗಿರುವುದ ಅವಶ್ಯಕವಾಗಿರುತ್ತದೆ ಎಂದು ಪಶು ವೈದ್ಯರಾದ ಮಂಜುನಾಥ್‍ರವರು ತಿಳಿಸಿದ್ದಾರೆ.

    ತಾಯಿಯಿಂದ ಬೇರ್ಪಡಿಸಿ ಮರಿಗಳನ್ನು ಸಂರಕ್ಷಿಸಿರುವುದು ಅಪರೂಪದ ಸಂಗತಿಯಾಗಿದ್ದು, ಇಂತಹ ಸಾಧನೆ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್. ಗೋಕುಲ್ ರವರು ಹೇಳಿದ್ದಾರೆ.

  • ಜಾಲಿ ರೈಡಿಗೆ ಯುವ ವೈದ್ಯ ದುರ್ಮರಣ

    ಜಾಲಿ ರೈಡಿಗೆ ಯುವ ವೈದ್ಯ ದುರ್ಮರಣ

    ಬೆಂಗಳೂರು: ಜಾಲಿ ಬೈಕ್ ರೈಡ್‍ಗೆ ವೈದ್ಯನೊಬ್ಬ ಮೃತಪಟ್ಟಿದ್ದು, ಮೊತ್ತಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.

    ಬೈಕ್ ಸವಾರ ಡಾ.ನಿಶಾದ್ (28) ಮೃತ ದುರ್ದೈವಿ. ಬೆಂಗಳೂರಿನ ಕೊಡಿಗೆಹಳ್ಳಿ ಫ್ಲೈಓವರ್  ನಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಿಂದ ಹಿಂಬದಿ ಸವಾರ ನವೀದ್‍ ಗೆ ಗಂಭೀರವಾಗಿ ಗಾಯವಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

    ಮೃತ ಡಾ.ನಿಶಾದ್ ಸೇರಿದಂತೆ ಇಂದು 15 ಜನರ ತಂಡ ನಂದಿ ಬೆಟ್ಟಕ್ಕೆ ಹೊರಟಿತ್ತು. ಇವರು ಕೆಟಿಎಂ ಸೇರಿದಂತೆ ಐಷರಾಮಿ ಬೈಕ್‍ ಗಳಲ್ಲಿ ಜಾಲಿ ರೈಡ್ ಹೊರಟಿದ್ದರು. ಆದರೆ ಅತೀ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಕೊಡಿಗೆಹಳ್ಳಿ ಫ್ಲೈಓವರ್ ನಲ್ಲಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಶಾದ್ ಸುಮಾರು 40 ಅಡಿ ದೂರಕ್ಕೆ ಬಿದ್ದಿದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮೃತ ಬೈಕ್ ಸವಾರ ನಿಶಾದ್ ಕೋರಮಂಗಲದಲ್ಲಿ ವಾಸವಿದ್ದು, ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೃತ ನಿಶಾದ್ 13 ಲಕ್ಷದ ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದರು.

    ಘಟನೆ ನಡೆದ ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೊಠಡಿಯಲ್ಲಿ ಕೂಡಿ ಹಾಕಿ ನರ್ಸ್ ಗೆ ವೈದ್ಯರಿಂದ್ಲೇ ಚಿತ್ರಹಿಂಸೆ, ಕೊಲೆಯತ್ನ!

    ಕೊಠಡಿಯಲ್ಲಿ ಕೂಡಿ ಹಾಕಿ ನರ್ಸ್ ಗೆ ವೈದ್ಯರಿಂದ್ಲೇ ಚಿತ್ರಹಿಂಸೆ, ಕೊಲೆಯತ್ನ!

    ಕೊಪ್ಪಳ: ಜಿಲ್ಲೆಯ ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಕೊಲೆಯತ್ನ ಆರೋಪವೊಂದು ಕೇಳಿಬಂದಿದೆ.

    ಈ ಆರೋಪ ಮಾಡ್ತಿರೋದು ರೋಗಿಗಳ ಸಂಬಂಧಿಗಳಲ್ಲ ಬದಲಿಗೆ ಅಲ್ಲಿಯೇ ಕೆಲಸ ಮಾಡುತ್ತಿರುವ ನರ್ಸ್ ಸಂಗೀತಾ ಇಟಗಿ. ರಜೆ ವಿಷಯಕ್ಕೆ ನಡೆದ ಜಗಳ ಕೊಲೆಗೆ ಯತ್ನಿಸುವ ಹಂತ ತಲುಪಿದೆಯಂತೆ.

    ವೈದ್ಯಾಧಿಕಾರಿ ಡಾ.ಚನ್ನಬಸಯ್ಯ ಹಿರೇಮಠ, ಡಾ.ಮಮತಾ ಹಾಗೂ ನರ್ಸ್ ಗಳಾದ ರೂಪಾ, ಉಷಾ, ರತ್ನ ಸೇರಿಕೊಂಡು ಸಂಗೀತಾಳನ್ನು ಕೊಠಡಿಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿ, ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

    ರಜೆ ಕೊಡ್ಲಿಲ್ಲ ಅನ್ನೋ ಕೋಪಕ್ಕೆ ಸಂಗೀತಾ ಅಲ್ಲಿನ ಅವ್ಯವಹಾರ ಬಯಲು ಮಾಡಲು ಮುಂದಾಗಿದ್ದರಂತೆ. ಈ ವಿಚಾರದ ತಿಳಿದ ವೈದ್ಯರು, ನನ್ನನ್ನು ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಮೊಬೈಲ್ ಕಸಿದು ಕೆಲ ಫೋಟೋ ಡಿಲೀಟ್ ಮಾಡಿದ್ದಾರೆ. ನನ್ನ ಪತಿ ಬರದೇ ಇದ್ದಿದ್ರೆ ಕೊಲೆ ಮಾಡ್ತಿದ್ರೂ ಅಂತಾ ನರ್ಸ್ ಸಂಗೀತಾ ಆರೋಪಿಸಿದ್ದಾರೆ.

    ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಯ ಭರವಸೆ ನೀಡಿದ್ದಾರೆ. ಕುಕನೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ.

  • ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಬೆಂಗಳೂರು: ನಗರದ ಅಮ್ಮಂದಿರಿಗೆ ಶಾಕಿಂಗ್ ಸುದ್ದಿ. ತಾಯ್ತನದ ಸಂಭ್ರಮದಲ್ಲಿರುವವರಿಗೆ ಅರಗಿಸಿಕೊಳ್ಳಲಾರದ ಕಹಿಯನ್ನು ವೈದ್ಯಲೋಕ ಹೊರಹಾಕಿದೆ.

    ನವಮಾಸ ಕಂದಮ್ಮಗಳು ಗರ್ಭದಲ್ಲಿ ನಿಲ್ಲುತ್ತಿಲ್ಲ, ಗ್ರಾಮೀಣ ಭಾಗಕ್ಕಿಂತ ಸಿಟಿಭಾಗದಲ್ಲಿಯೇ ಅವಧಿಪೂರ್ವ ಹೆರಿಗೆ ಪ್ರಕರಣ ಹೆಚ್ಚಾಗುತ್ತಿದೆ. ಅವಧಿ ಪೂರ್ವ ಹುಟ್ಟಿದ ಮಕ್ಕಳು ಕೇವಲ 600 ರಿಂದ 800 ಗ್ರಾಂ ಇರೋದ್ರಿಂದ ಬದುಕುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಆತ್ಯಾಧುನಿಕ ತಂತ್ರಜ್ಞಾನಗಳು ಇದ್ರೂ ಖರ್ಚುವೆಚ್ಚವನ್ನು ಭರಿಸೋದು ಕಷ್ಟ ಅನ್ನುವಂತಾಗಿದೆ. ಇದನ್ನೂ ಓದಿ: 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ, ಒತ್ತಡ ಸೇರಿದಂತೆ ಬದಲಾದ ಜೀವನ ಶೈಲಿ ಈ ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ. ಹತ್ತರಲ್ಲಿ ಎರಡರಿಂದ ಮೂರು ಹೆರಿಗೆ ಅವಧಿಪೂರ್ವವೇ ಆಗುತ್ತಿದ್ದು, ವೈದ್ಯಲೋಕಕ್ಕೆ ಕೊಂಚ ಸವಾಲಾಗಿದೆ ಅಂತ ಫೋರ್ಟಿಸ್ ಫೆಮಿನಾ ಆಸ್ಪತ್ರೆ ಮುಖ್ಯಸ್ಥೆ ಡಾ ಪ್ರತಿಮಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ!

    ಹಾವೇರಿ: ನಗರದ ಪ್ರತಿಷ್ಠಿತ ವೈದ್ಯರೊಬ್ಬರ ಲೆಟರ್ ಪ್ಯಾಡ್ ನಕಲು ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದ ಆಸಾಮಿಯನ್ನು ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ನಗರದ ಅಶ್ವಿನಿನಗರದಲ್ಲಿ ನಡೆದಿದೆ.

    ವೈದ್ಯ ಡಾ. ಎಸ್.ಡಿ.ಸೀಗಿಹಳ್ಳಿ ಎಂಬವರ ಲೆಟರ್ ಪ್ಯಾಡ್ ನಕಲು ಮಾಡಿಕೊಂಡು ಎಸ್.ಆರ್.ಹುಲ್ಲಾಳ ಎಂಬಾತ ಮನೆಯಲ್ಲಿ ಚಿಕಿತ್ಸೆ ಕೊಡ್ತಿದ್ದ. ಇದನ್ನರಿತ ಅಸಲಿ ವೈದ್ಯ ಕೇಳೋಕೆ ಹೋದ್ರೆ ಆಸಾಮಿ ಹುಲ್ಲಾಳ ಅಸಲಿ ಡಾಕ್ಟರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸೋಕೆ ಮುಂದಾದ.

    ಕೂಡಲೇ ವಿಷಯ ತಿಳಿದ ಡಿವೈಎಸ್ಪಿ ಕುಮಾರಪ್ಪ ಮತ್ತವರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ರು. ನಂತರ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಲೆಟರ್ ಪ್ಯಾಡ್ ನಕಲು ಮಾಡಿದ್ದ ಆಸಾಮಿ ಹುಲ್ಲಾಳ ಪತ್ನಿ ಸಹ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಕೆಲವು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ ಅನ್ನೋದು ಗೊತ್ತಾಗಿದೆ.

    ಪೊಲೀಸರು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ಹುಲ್ಲಾಳರ ಮನೆಯಲ್ಲಿ ಆರೋಗ್ಯ ಇಲಾಖೆಗೆ ಸೇರಿದ ಸರಕಾರಿ ಔಷಧಿಗಳು ಲಭ್ಯವಾಗಿವೆ. ಈ ಸಂಬಂಧ ತಾಲೂಕು ಆರೋಗ್ಯಾಧಿಕಾರಿ ಡಾ.ದಯಾನಂದ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ.

    ಅಲ್ಲದೇ ಅಸಲಿ ಡಾಕ್ಟರ್ ಸಹ ತಮ್ಮ ಮೇಲೆ ಮಚ್ಚಿನಿಂದ ಹಲ್ಲೆ ಮಾಡೋಕೆ ಬಂದಿದ್ದ ಎಸ್.ಆರ್.ಹುಲ್ಲಾಳ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.

  • ಉಪ್ಪಿಟ್ಟು ತಿನ್ನುತ್ತ 3 ಸೆಂಮೀ ಸೂಜಿಯನ್ನೇ ನುಂಗಿದ್ದ ಅಜ್ಜಿ!

    ಉಪ್ಪಿಟ್ಟು ತಿನ್ನುತ್ತ 3 ಸೆಂಮೀ ಸೂಜಿಯನ್ನೇ ನುಂಗಿದ್ದ ಅಜ್ಜಿ!

    ಹಾವೇರಿ: ಉಪ್ಪಿಟ್ಟು ತಿನ್ನುವಾಗ ಅಜ್ಜಿಯೊಬ್ಬರು 3 ಸೆಂಮೀ ಸೂಜಿಯನ್ನೇ ನುಂಗಿದ್ದು, ವೈದ್ಯರು ಒಂದು ತಿಂಗಳ ನಂತರ ಸೂಜಿಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಬಳಿಯ ಬಸಾಪುರ ಗ್ರಾಮದ ಅಜ್ಜಿ ಪಾರವ್ವ ಬಾವಿಕಟ್ಟಿ (70) ಉಪ್ಪಿಟ್ಟು ತಿನ್ನುವಾಗ 3 ಸೆಂಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಾಕೊಂಡು ತೊಂದರೆ ಅನುಭವಿಸಿದ್ದಾಳೆ. ಕಳೆದ ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಏನೋ ಚುಚ್ಚಿರಬೇಕೆಂದು ಪಾರವ್ವ ಅದನ್ನು ನಿರ್ಲಕ್ಷ ಮಾಡಿದ್ದಾಳೆ.

    ಸ್ವಲ್ಪ ದಿನಗಳ ನಂತರ ಅಜ್ಜಿ ಪಾರವ್ವಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹಾಗಾಗಿ ಹಾವೇರಿಯ ಮಲ್ಲಾಡದ ರುದ್ರಮ್ಮ ಮೆಮೋರಿಯಲ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯ ವೈದ್ಯ ಡಾ.ಗಿರೀಶ್ ಮಲ್ಲಾಡದ್ ಎಂಡೋಸ್ಕೋಪಿ ಚಿಕಿತ್ಸೆ ಮಾಡಿ 3 ಸೆಂಮೀ ಉದ್ದದ ಸೂಜಿಯನ್ನ ಪತ್ತೆಹಚ್ಚಿದ್ದಾರೆ. ಅಲ್ಲದೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಯಶಸ್ವಿಯಾಗಿ ಸೂಜಿಯನ್ನು ಹೊರತೆಗೆದಿದ್ದಾರೆ.

    ಒಂದು ತಿಂಗಳ ಹಿಂದೆ ಮೂರು ಸೆಂ.ಮೀ. ಉದ್ದದ ಸೂಜಿ ಗಂಟಲಿನಲ್ಲಿ ಸಿಕ್ಕಿಕೊಂಡು ಅಜ್ಜಿ ಪಡಬಾರದ ಪಾಡು ಪಟ್ಟಿದ್ದರು. ಆದರೆ ವೈದ್ಯರು ಮಾಡಿದ ಚಮತ್ಕಾರಿ ಚಿಕಿತ್ಸೆಯಿಂದ ಪಾರವ್ವ ಗುಣಮುಖರಾಗಿ ತಮ್ಮ ಸ್ವಗ್ರಾಮಕ್ಕೆ ತೆರಳಿದಳು.

  • ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಬಳ್ಳಾರಿ: ಗರ್ಭಿಣಿಗೆ ವಿಪರೀತವಾದ ನೋವು ಕಾಣಿಸಿಕೊಂಡ ಕಾರಣ ಆಂಬುಲೆನ್ಸ್ ನಲ್ಲಿಯೇ ವೈದ್ಯರು ಹೆರಿಗೆ ಮಾಡಿಸಿದ್ದಾರೆ.

    ಜಿಲ್ಲೆಯ ಕಂಪ್ಲಿ ತಾಲೂಕಿನ ಕಣವಿತಿಮ್ಮಾಪುರ ಗ್ರಾಮದ ಹುಲಿಗೆಮ್ಮ ಎಂಬವರು ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗುತ್ತಿತ್ತು.

    ಆದರೆ ದಾರಿಯಲ್ಲಿ ಬರುವಾಗ ಆಂಬುಲೆನ್ಸ್ ನಲ್ಲಿಯೇ ಮಹಿಳೆಗೆ ಹೆರಿಗೆ ನೋವು ಜೋರಾಗಿದೆ. ತಕ್ಷಣ ಅಂಬುಲೆನ್ಸ್ ನಲ್ಲಿದ್ದ ವೈದ್ಯಾಧಿಕಾರಿ ಚಂದ್ರಮೋಹನ್ ಹಾಗೂ ಸಿಬ್ಬಂದಿಗಳಾದ ನೇತ್ರಾ ಹಾಗೂ ಸುರೇಶ್ ಎಂಬವರು ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

    ನಂತರ ವೈದ್ಯಾಧಿಕಾರಿಗಳು ಹುಲಿಗೆಮ್ಮರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಉಪಚಾರ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ.