Tag: doctor

  • ವೈದ್ಯರ ಎಡವಟ್ಟಿಗೆ ಯುವಕ ಬಲಿ

    ವೈದ್ಯರ ಎಡವಟ್ಟಿಗೆ ಯುವಕ ಬಲಿ

    ಹಾವೇರಿ: ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದಿದ್ದ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಶಿಗ್ಗಾಂವಿಯ ಪಟ್ಟಣದಲ್ಲಿ ನಡೆದಿದೆ.

    ಸದ್ದಾಂ ಹರಕುಣಿ(25) ಮೃತ ಯುವಕ. ಮೃತ ಸದ್ದಾಂ ಸವಣೂರು ತಾಲೂಕಿನ ಕಾರಡಗಿ ಗ್ರಾಮದ ನಿವಾಸಿ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ದ ಸದ್ದಾಂಗೆ ಕಾಲಲ್ಲಿ ರಾಡ್ ಹಾಕಲಾಗಿತ್ತು. ಸೋಮವಾರ ಸಂಜೆ ಶಿಗ್ಗಾಂವಿ ಪಟ್ಟಣದ ರಾಣಿ ಆಸ್ಪತ್ರೆಗೆ ಸದ್ದಾಂ ರಾಡ್ ತೆಗೆಸಲು ಬಂದಿದ್ದ ಎನ್ನಲಾಗಿದೆ.

    ರಾಣಿ ಆಸ್ಪತ್ರೆಯಿಂದ ಸದ್ದಾಂನನ್ನ ಪಟ್ಟಣದ ತೋಟಗೇರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸದ್ದಾಂ ಅಷ್ಟೆರಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೇಳಿದ್ದಾರೆ. ನಂತರ ಅಲ್ಲಿಂದ ಮೃತದೇಹವನ್ನ ತೋಟಗೇರ ಆಸ್ಪತ್ರೆಯಿಂದ ಕಾರಡಗಿ ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ಕಳಿಸಲಾಗಿತ್ತು.

    ಇತ್ತ ಸದ್ದಾಂ ಮೃತದೇಹ ಕಂಡ ಸಂಬಂಧಿಕರು ಮರಳಿ ಮೃತದೇಹವನ್ನ ಶಿಗ್ಗಾಂವಿ ಪೊಲೀಸ್ ಠಾಣೆ ಬಳಿ ತಂದು ಘಟನೆಗೆ ರಾಣಿ ಅಥವಾ ತೋಟಗೇರ ಆಸ್ಪತ್ರೆ ವೈದ್ಯರು ಕಾರಣ ಅಂತ ಮೃತನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕ ಸಾವಿಗೆ ಶಿಗ್ಗಾಂವಿಯ ರಾಣಿಯ ಆಸ್ಪತ್ರೆಯ ವೈದ್ಯರು ಕಾರಣ ಎಂದು ತಿಳಿದು ಅವರ ವಿರುದ್ಧ ಮೃತ ಸದ್ದಾಂ ಸಂಬಂಧಿಕರು ದೂರು ದಾಖಲು ಮಾಡಿದ್ದಾರೆ.

    ಈ ಕುರಿತು ಸೂಕ್ತವಾದ ತನಿಖೆ ಮಾಡಿ ತಪ್ಪಿದಸ್ತರಿಗೆ ಶಿಕ್ಷೆಯಾಗಬೇಕು. ಯುವಕನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಬೆಂಗಳೂರು/ಮೈಸೂರು: ಕರೆದಾಕ್ಷಣ ಮನೆಗೆ ಚಿಕಿತ್ಸೆ ನೀಡಲು ಬಂದಿಲ್ಲವೆಂದು ಆರೋಪಿಸಿ ವೈದ್ಯೆ ಡಾ. ವೀಣಾಸಿಂಗ್ ವಿರುದ್ಧ ಜೆಡಿಎಸ್ ಶಾಸಕ ಕೆ. ಮಹದೇವ್ ದೂರು ದಾಖಲಿಸಿದ್ದಾರೆ. ವೈದ್ಯೆ ಡಾ. ವೀಣಾ ಸಿಂಗ್ ಅವರು ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟೆಂಬರ್ 18 ರಂದು ನಾನು ತುರ್ತು ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುಮಾರು 100 ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ನಾನೊಬ್ಬಳೇ ಅಂದು ಹಾಜರಾಗಿದ್ದೆ. ಇದೇ ದಿನ ಸಂಜೆ 5.30ಕ್ಕೆ ಹೆರಿಗೆ ರೋಗಿಯೊಬ್ಬರು ದಾಖಲಾಗಿದ್ದರು. ಅಲ್ಲದೇ 8.45ರ ಸುಮಾರಿಗೆ ಅಪಘಾತದಿಂದ ಗಾಯಗೊಂಡು ಮೂವರಿಗೆ ಚಿಕಿತ್ಸೆ ನೀಡುತ್ತಿದ್ದೆ.

    ಇದೇ ಸಮಯದಲ್ಲಿ ಹೆರಿಗೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಅವರಿಗೆ ಹೆರಿಗೆ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಗಿರಿಜಾ ಎಂಬವರು ಬಂದು, ಎಂಎಲ್‍ಎ ಅವರಿಗೆ ಹುಷಾರಿಲ್ಲ ಎಂದು ಆಟೋ ಚಾಲಕರೊಬ್ಬರು ಬಂದಿದ್ದಾರೆ ಎಂದು ಹೇಳಿದರು. ಕೂಡಲೇ ನಾನು ಅವರ ಬಳಿ ಹೋಗಿ ವಿಚಾರಿಸಿದಾಗ, ಆಟೋ ಚಾಲಕ ಶಾಸಕರಿಗೆ ಹುಷಾರಿಲ್ಲ ಬೇಗ ನನ್ನ ಜೊತೆ ಬನ್ನಿ ಎಂದು ಹೇಳಿದರು.

    ಆದರೆ ಆಸ್ಪತ್ರೆಯಲ್ಲಿ ಹೆರಿಗೆ ರೋಗಿ ಹಾಗೂ ಅಪಘಾತದಿಂದ ಗಾಯಗೊಂಡಿದ್ದವರಿಗೆ ನಾನು ಚಿಕಿತ್ಸೆ ನೀಡುತ್ತಿದ್ದೆ. ಹೀಗಾಗಿ ಶಾಸಕರ ಆರೋಗ್ಯ ತಪಾಸಣೆಗೆ ಹೋಗಲು ನಾನು ಕೂಡಲೇ ನಮ್ಮ ಮೆಡಿಕಲ್ ಆಫೀಸರ್ ಗೆ ಕರೆ ಮಾಡಿ ವಿಚಾರಿಸಿದೆ. ಅವರು ಆಟೋ ಚಾಲಕನೊಂದಿಗೆ ಮಾತನಾಡಲು ಫೋನ್ ಕೊಡಿ ಎಂದು ಹೇಳಿದರು. ಆದರೆ ಆರೋಗ್ಯಾಧಿಕಾರಿಯ ಜೊತೆ ಮಾತನಾಡಲು ಆಟೋ ಚಾಲಕ ನಿರ್ಲಕ್ಷ್ಯಿಸಿ, ಶಾಸಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿನಿ ಎಂದು ತರಾತುರಿಯಲ್ಲಿ ಹೊರಟು ಹೋದರು. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಶಾಸಕರಿಗೆ ಹುಷಾರಿಲ್ಲ ಅವರು ಆಸ್ಪತ್ರೆಗೆ ಬರುತ್ತಾರೆಂದು ತಿಳಿದು, ನಾನು ಹಾಗೂ ಆಸ್ಪತ್ರೆಯ ಸಿಬ್ಬಂದಿ ಐಸಿಯು ಅನ್ನು ಸಿದ್ಧಪಡಿಸಿಕೊಂಡು ಅವರಿಗಾಗಿ ಕಾಯುತ್ತಿದ್ದೆವು. ಆದರೆ ಆಟೋ ಚಾಲಕ ಶಾಸಕ ಅನಾರೋಗ್ಯದ ತೀವ್ರತೆಯ ಬಗ್ಗೆ ನನಗೆ ನಿಖರವಾದ ಯಾವುದೇ ಮಾಹಿತಿ ನೀಡಿರಲಿಲ್ಲ. ಇದಾದ ನಂತರ ಸೆಪ್ಟೆಂಬರ್ 19 ರಂದು ಸ್ಥಳೀಯ ಪತ್ರಿಕೆಗಳಲ್ಲಿ ಶಾಸಕರ ಆರೋಗ್ಯ ವಿಚಾರಿಸದ ವೈದ್ಯೆ ಎಂದು ಪ್ರಕಟಿಸಿದ್ದಾಗ, ನನಗೆ ಶಾಸಕರ ಆರೋಗ್ಯದ ತೀವ್ರತೆಯ ಬಗ್ಗೆ ಅರಿವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

    ಇದಾದ ಕೂಡಲೇ ಅದೇ ದಿನ ಸಂಜೆ ನಮ್ಮ ಹಿರಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳೊಂದಿಗೆ ಶಾಸಕರ ಮನೆಗೆ ಹೋಗಿ ನಡೆದ ಅಚಾತುರ್ಯದ ಬಗ್ಗೆ ವಿವರಿಸಿದೆವು. ಅಲ್ಲದೇ ಆಸ್ಪತ್ರೆಯಲ್ಲಿನ ರೋಗಿಗಳ ಬಗ್ಗೆಯೂ ಮಾಹಿತಿ ನೀಡಿದೆವು. ಆದರೆ ಶಾಸಕರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ, ಅಲ್ಲದೇ ಅವರು ಈ ಬಗ್ಗೆ ನನ್ನ ವಿರುದ್ಧ ದೂರನ್ನು ನೀಡಿದ್ದಾರೆ. ಪುನಃ ನಾನು ಅವರನ್ನು ಭೇಟಿ ಮಾಡಿದಾಗ ಅವರು ದಾಖಲಿಸಿರುವ ದೂರನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಹೇಳಿದರೇ ಹೊರತು, ಕ್ಷಮಾಪಣಾ ಪತ್ರ ನೀಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LsbzC-2HiOA

     

  • ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

    ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

    ಮೈಸೂರು: ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಮಹದೇವ್ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಡಾ.ವೀಣಾ ಸಿಂಗ್‍ರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎತ್ತಂಗಡಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಶಾಸಕರ ಆರೋಗ್ಯ ತಪಾಸಣೆಗೆ ತೆರಳದ ವೈದ್ಯೆ ಡಾ.ವೀಣಾ ಸಿಂಗ್ ಮೇಲೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಅವರನ್ನು ಪಿರಿಯಾಪಟ್ಟಣದಿಂದ ಎತ್ತಂಗಡಿ ಮಾಡಲು ಮುಂದಾಗಿದೆ. ಈ ಬಗ್ಗೆ ಸಂವಿಧಾನ ಹಕ್ಕು ಬಾಧ್ಯತೆ ಸಮಿತಿ ಶಿಫಾರಸ್ಸಿನ ಮೇಲೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ವೈದ್ಯರನ್ನು ಎತ್ತಂಗಡಿ ಮಾಡುವ ಬಗ್ಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಪ್ರಧಾನ ನಿರ್ದೇಶಕ ಡಾ.ರತನ್ ಕೇಲ್ಕರ್ ಅವರ ಪತ್ರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದಲ್ಲದೇ ಸಂವಿಧಾನ ಹಕ್ಕು ಬಾಧ್ಯತೆಯ ಸಮಿತಿ ಸಭೆಯ ಮಾರ್ಗಸೂಚಿ ಪತ್ರವು ಸಹ ಲಭ್ಯವಾಗಿದೆ. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಏನಿದು ಶಾಸಕರ ಹಾಗೂ ವೈದ್ಯೆಯ ಜಟಾಪಟಿ?
    ಶಾಸಕ ಮಹದೇವ್ ಸೆ.18ರ ರಾತ್ರಿ 9 ಗಂಟೆಗೆ ಆಟೋ ಕಳುಹಿಸಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಾ. ವೀಣಾಸಿಂಗ್‍ರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ವೀಣಾ ಅವರು ಐಸಿಯುನಲ್ಲಿ ರೋಗಿಗಳು, ಒಳರೋಗಿಗಳು ಇದ್ದಿದ್ದರಿಂದ ಈಗ ಬರೋಕೆ ಆಗಲ್ಲ ಎಂದಿದ್ದಾರೆ. ಅಲ್ಲದೇ ಸುರಕ್ಷತೆ ದೃಷ್ಟಿಯಿಂದ ತಮ್ಮ ಮನೆಗೆ ಬರೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದರು.

    ಇದರಿಂದ ಸಿಟ್ಟಿಗೆದ್ದ ಪಿರಿಯಾಪಟ್ಟಣ ಶಾಸಕ ಮಹದೇವ್, ವೈದ್ಯೆ ವೀಣಾಸಿಂಗ್ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಡಾಕ್ಟರ್ ಮೇಲೆ ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಡಾ.ವೀಣಾಸಿಂಗ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಎಂಎಲ್‍ಎ ದೂರು ಆಧರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ವೀಣಾಸಿಂಗ್‍ಗೆ ನೋಟಿಸ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LsbzC-2HiOA

     

  • ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಮೈಸೂರು: ಕರೆದಾಕ್ಷಣ ತಮ್ಮ ಮನೆಗೆ ಬಂದು ಚಿಕಿತ್ಸೆ ನೀಡಿಲ್ಲವೆಂದು ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಮಹದೇವ್ ಅವರು ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆಗೆ ದೂರು ನೀಡಿದ್ದಾರೆ. ಶಾಸಕರ ದೂರು ಆಧರಿಸಿ ಡಾ. ವೀಣಾಸಿಂಗ್‍ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

    ಏನಿದು ಪ್ರಕರಣ?:
    ಶಾಸಕ ಮಹದೇವ್ ಸೆ.18ರ ರಾತ್ರಿ 9 ಗಂಟೆಗೆ ಆಟೋ ಕಳುಹಿಸಿ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಡಾ. ವೀಣಾಸಿಂಗ್‍ರನ್ನು ಮನೆಗೆ ಕರೆದಿದ್ದಾರೆ. ಈ ವೇಳೆ ವೀಣಾ ಅವರು ಐಸಿಯುನಲ್ಲಿ ರೋಗಿಗಳು, ಒಳರೋಗಿಗಳು ಇದ್ದಿದ್ದರಿಂದ ಈಗ ಬರೋಕೆ ಆಗಲ್ಲ ಎಂದಿದ್ದಾರೆ. ಅಲ್ಲದೇ ಸುರಕ್ಷತೆ ದೃಷ್ಟಿಯಿಂದ ತಮ್ಮ ಮನೆಗೆ ಬರೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದರು.

    ಇದರಿಂದ ಸಿಟ್ಟಿಗೆದ್ದ ಪಿರಿಯಾಪಟ್ಟಣ ಶಾಸಕ ಮಹದೇವ್, ವೈದ್ಯೆ ವೀಣಾಸಿಂಗ್ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಡಾಕ್ಟರ್ ಮೇಲೆ ವಿಧಾನಸಭಾ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಈಶ್ವರ್ ಖಂಡ್ರೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಡಾ.ವೀಣಾಸಿಂಗ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಎಂಎಲ್‍ಎ ದೂರು ಆಧರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ವೀಣಾಸಿಂಗ್‍ಗೆ ನೋಟಿಸ್ ನೀಡಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಶಾಸಕ ಕೆ ಮಹದೇವ್, ಸೆ.18 ರಂದು ಸುಬ್ರಹ್ಮಣ್ಯ ದರ್ಶನ ಮಾಡಿಕೊಂಡು ನಾನು ಪಿರಿಯಾ ಪಟ್ಟಣಕ್ಕೆ ಸಂಜೆ 4 ಗಂಟೆಗೆ ಬಂದಿದ್ದೇನೆ. ಅಲ್ಲಿಂದ ಬಂದು ನೇರವಾಗಿ ನಾನು ತಾಲೂಕು ಪಂಚಾಯತ್ ಗೆ ತೆರಳಿದೆ. ಅಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅಲ್ಲಿಂದ ವಾಪಸ್ ಮನೆಗೆ ಬಂದೆ. ಮನೆಗೆ ಬಂದವನಿಗೆ ಸೊಸೆ ಚಪಾತಿ ಕೊಟ್ಟರು. ಅದನ್ನು ತಿ ನ್ನೋವಾಗ ನನಗೆ ತಲೆಸುತ್ತು ಬಂತು. ಹೀಗೆ ಹೋಗಿ ಮನೆಯೊಳಗೆ ಮಲಗಿದೆ ಅಂದ್ರು.

    ನಮ್ಮೂರಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಹಾಗೆಯೇ ವೈದ್ಯರು ಕೂಡ ಇಲ್ಲ. ಹೀಗಾಗಿ ಯಾರಾದ್ರೂ ರಾತ್ರಿ ವೇಳೆ ಡಾಕ್ಟರ್ ಇದ್ರೆ ಕರೆಸಿ ಇಂಜೆಕ್ಷನ್ ಕೊಡಿಸು ಅಂತ ಮಗನ ಬಳಿ ಹೇಳಿದೆ. ಆ ಬಳಿಕ ನನಗೆ ಜ್ಞಾನ ತಪ್ಪಿತ್ತು. ಹೀಗಾಗಿ ಮಗ ಆಟೋದವನನ್ನು ಆಸ್ಪತ್ರೆಗೆ ಕಳಿಸಿದ್ದಾನೆ. ಆದ್ರೆ ಆ ಯಮ್ಮ ಬರಲ್ಲ ಅಂತ ನೇರವಾಗಿ ಹೇಳಿದ್ದಾಳೆ. ನಂತರ ಮಗ ಬೇರೆ ವೈದ್ಯರನ್ನು ಕರೆಸಿ ನನಗೆ ಇಂಜೆಕ್ಷನ್ ಕೊಡಿಸಿದ್ದಾರೆ.

    ಮರುದಿನ ಬೆಳಗ್ಗೆ ಎದ್ದು ಆಸ್ಪತ್ರೆಗೆ ಹೊರಟೆ. ಅಲ್ಲಿ ಹೋಗಿ ವೀಣಾ ಅವರಲ್ಲಿ ಯಾಕೆ ಬರಲಿಲ್ಲ. ನೀವೆಲ್ಲ ಜನರ ಜೀವ ಉಳಿಸೋದಿಕ್ಕೆ ಇದ್ದಿರೋ ಅಥವಾ ಜೀವ ತೆಗೆಯೋದಕ್ಕೆ ಇದ್ದಿರೋ ಅಂತ ಕೇಳಿದೆ. ಆಗ ಅವರು ಸರ್, ಮನೆಗಳಿಗೆ ಟ್ರೀಟ್ ಮೆಂಟ್ ಮಾಡೋದಿಕೆ ಬರಬೇಕು ಅಂತ ಯಾವ ಕಾನೂನು ಇಲ್ಲ ಅಂದ್ರು. ಆವಾಗ ನಾನು ಒಬ್ಬ ಶಾಸಕ ಅತಿಯಾಗಿ ಸುಸ್ತಾಗಿ ಬಿದ್ದಿದ್ದರೂ ಚಿಕಿತ್ಸೆ ನೀಡಲು ಬರಲಿಲ್ಲ ಅಲ್ವಂತ ಹೇಳಿದೆ. ಆಗ ಅವರು ಆಕ್ಸಿಡೆಂಟ್ ಹಾಗೂ ಹೆರಿಗೆಗೆ ಬಂದಿದ್ದರು ಅಂತ ವೈದ್ಯೆ ತಿಳಿಸಿದ್ರು.

    ಹೀಗಾಗಿ ನಾನು ಅಲ್ಲೇ ಇದ್ದ ಆಕ್ಸಿಡೆಂಟ್ ಹಾಗೂ ಹೆರಿಗೆಗೆ ಬಂದವರನ್ನು ಮಾತನಾಡಿಸಿದೆ. ಆಗ ಅವರು ಕೊಟ್ಟ ಉತ್ತರ ಕೇಳಿ ವೈದ್ಯೆಯನ್ನು ಪ್ರಶ್ನಿಸಿದೆ. ಆಗ ಅವರಿಗೆ ತಪ್ಪಾಯ್ತು ಅನ್ನೋ ಸೌಜನ್ಯ ಕೂಡ ತೋರಿಸಿಲ್ಲ ಅಂತ ಶಾಸಕರು ವಿವರಿಸಿದ್ರು.

    ಶಾಸಕರ ಈ ವರ್ತನೆ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುರಪುರದ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಸುರಪುರದ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು

    ಯಾದಗಿರಿ: ಸಕಾಲಕ್ಕೆ ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆ ಬಾಣಂತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಲಕ್ಷ್ಮಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಬಾಣಂತಿ. ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ನಿವಾಸಿಯಾದ ಲಕ್ಷ್ಮಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಸುಕಿನ ಜಾವವೇ ಲಕ್ಷ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಲಕ್ಷ್ಮಿ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದರು. ಹೆರಿಗೆ ನಂತರ ಮತ್ತೆ ಲಕ್ಷ್ಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

    ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ತೋರಿದ ಕಾರಣ ಬಾಣಂತಿ ಮೃತಪಟ್ಟಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆ ವೈದ್ಯರು ಬಾಣಂತಿ ಶ್ವಾಸಕೋಶದ ಸಮಸ್ಯೆದಿಂದ ಬಳಲಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನ ವಿಶ್ರಾಂತಿ ರೂಮಿಗೆ ಕರೆದುಕೊಂಡು ಹೋಗಿ ರೇಪ್!

    ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನ ವಿಶ್ರಾಂತಿ ರೂಮಿಗೆ ಕರೆದುಕೊಂಡು ಹೋಗಿ ರೇಪ್!

    ಗಾಂಧಿನಗರ: 28 ವರ್ಷದ ನಿವಾಸಿ ವೈದ್ಯನೊಬ್ಬ ಕರ್ತವ್ಯದಲ್ಲಿದ್ದಾಗ ತನ್ನ ಕಿರಿಯ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತಿನ ರಾಜ್‍ಕೋಟ್ ನಲ್ಲಿ ನಡೆದಿದೆ.

    ಈ ಘಟನೆ ಆಗಸ್ಟ್ ನಲ್ಲಿ ಗುಜರಾತಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈಗ ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಆರೋಪಿ ಸಚಿನ್ ಸಂತೋಷ್ ಕುಮಾರ್ ಸಿಂಗ್ ನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಆರೋಪಿ ಬೆದರಿಕೆ ಒಡ್ಡಿದ್ದರಿಂದ ಇಷ್ಟು ದಿನ ದೂರು ದಾಖಲಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸಂತ್ರಸ್ತೆ ಮತ್ತು ಆರೋಪಿ ಇಬ್ಬರು ಪಂಡಿತ್ ದೀನ್ ದಯಾಲ್ ಉಪಾಧ್ಯಾಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಅಹಮದಾಬಾದಿನಲ್ಲಿ ವಾಸಿಸುತ್ತಿದ್ದರು. ಆರೋಪಿ ಸಿಂಗ್ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯವನಾಗಿದ್ದು, ಅಹಮದಾಬಾದಿನಲ್ಲಿ ನೆಲಸಿದ್ದನು ಎಂದು ಜಿಲ್ಲಾ ಪೊಲೀಸ್ ಆಯುಕ್ತ ಮನೋಹರ್ಸಿನ್ಹ್ ಜಡೆಜಾ ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    ಆಗಸ್ಟ್ 31 ರಂದು ಇಬ್ಬರು ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿ ಸಿಂಗ್ ಆಸ್ಪತ್ರೆಯ ಐದನೇ ಮಹಡಿಗೆ ವೈದ್ಯರು ವಿಶ್ರಾಂತಿ ಪಡೆಯುವ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದಲ್ಲದೇ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಒಡ್ಡಿದ್ದನು. ಆದ್ದರಿಂದ ಸಂತ್ರಸ್ತೆ ಸಮಾಜಕ್ಕೆ ಹೆದರಿ ಈ ಬಗ್ಗೆ ಎಲ್ಲೂ ತಿಳಿಸಲಿಲ್ಲ.

    ಪೊಲೀಸ್ ಕಮಿಷನರ್ ಬಳಿ ಸಂತ್ರಸ್ತೆ ತಂದೆ ಈ ಬಗ್ಗೆ ಹೇಳಿದ್ದಾರೆ. ಆದರೆ ಮೊದಲು ಅವರು ದೂರು ಕೊಡಲು ನಿರಾಕರಿಸಿದ್ದಾರೆ. ಬಳಿಕ ಅವರಿಬ್ಬರಿಗು ಮನವರಿಕೆ ಮಾಡಿಕೊಟ್ಟ ನಂತರ ಪ್ರದ್ಯುಮ್ನನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಅಹಮದಾಬಾದಿನಲ್ಲಿದ್ದ ಅವನ ಮನೆಯಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಡೆಜಾ ಅವರು ತಿಳಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ್ದು, ವರದಿಗಳಿಗಾಗಿ ಕಾಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ

    ಡಾಕ್ಟರ್ ಆದ್ರು ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ

    ಚಿಕ್ಕಮಗಳೂರು: ಗಣಪತಿ ವಿಸರ್ಜನೆ ವೇಳೆ ಗುಂಪು ಘರ್ಷಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪೊಲೀಸರ ಯೋಗ ಕ್ಷೇಮ ವಿಚಾರಸಿದ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ, ವೈದ್ಯರಂತೆ ತನ್ನ ಮೊಬೈಲ್‍ನಲ್ಲಿದ್ದ ಟಾರ್ಚ್ ಮೂಲಕ ಸಿಬ್ಬಂದಿಗಳಿಗೆ ಆದ ಪ್ರತಿಯೊಂದು ಸಣ್ಣ ಗಾಯವನ್ನೂ ನೋಡಿ ಪೊಲೀಸರಿಗೆ ಧೈರ್ಯ ಹೇಳಿದ್ದಾರೆ.

    ಮಂಗಳವಾರ ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಉಂಟಾದ ಗಲಭೆಯಿಂದ ಪೊಲೀಸರು ಹಾಗೂ ಜನಸಾಮಾನ್ಯರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಗಲಭೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಧರ್ಮೋಜಿ ರಾವ್ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು.

    ರಾತ್ರಿ ಸುಮಾರು 9 ಗಂಟೆ ವೇಳೆಗೆ ತರೀಕೆರೆಗೆ ಬಂದ ಎಸ್‍ಪಿ ಅಣ್ಣಾಮಲೈ ನಗರದಲ್ಲಿ ಗಸ್ತು ತಿರುಗಿ, ಠಾಣೆಯಲ್ಲಿ ಪೊಲೀಸರೊಂದಿಗೆ ಚರ್ಚೆ ನಡೆಸಿ ಘಟನೆ ವಿವರ ತಿಳಿದುಕೊಂಡಿದ್ದಾರೆ. ನಂತರ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಬಂದು ತನ್ನ ಸಿಬ್ಬಂದಿಯ ಯೋಗ ಕ್ಷೇಮ ವಿಚಾರಿಸಿ, ಧೈರ್ಯ ತುಂಬಿದ್ದಾರೆ.

    ನಡೆದಿದ್ದೇನು?
    ಮಂಗಳವಾರ ಸಂಜೆ ತರೀಕೆರೆಯ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆಗೆಂದು ಕೋಡಿಕ್ಯಾಂಪ್‍ನಲ್ಲಿ ಮೆರವಣಿಗೆ ಬರುವಾಗ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು ಗುಂಪುಗಳು ಪರಸ್ಪರ ಕಲ್ಲನ್ನು ತೂರಿಕೊಂಡಿದ್ದರು. ಪರಿಸ್ಥಿತಿ ಕೈಮೀರುವಂತಹ ಸ್ಥಿತಿ ನಿರ್ಮಾಣವಾಗಿದ್ದರಿಂದ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಎರಡು ಗುಂಪಿನವರು ಹಾಗೂ ಗುಂಪು ಘರ್ಷಣೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದವು.

    ಸಂಜೆ ವೇಳೆಗೆ ನಗರ ಸೇರಿದಂತೆ ಕೋಡಿಕ್ಯಾಂಪ್ ಸುತ್ತಲೂ ಪೊಲೀಸರು ಸರ್ಪಗಾವಲಿದ್ದು ಯಾವುದೇ ಅಹಿತರಕರ ಘಟನೆ ನಡೆಯದಂತೆ ಬಂದೋಬಸ್ತ್ ಕಲ್ಪಿಸಿದ್ದರು. ಸಂಜೆ 6 ಗಂಟೆಯಿಂದಲೇ ನಗರ ಸಂಪೂರ್ಣ ಸ್ಥಬ್ಧವಾಗಿದ್ದು ಕೋಡಿಕ್ಯಾಂಪ್‍ನಲ್ಲಿ ಇಡೀ ರಾತ್ರಿ ಪೊಲೀಸರು ಗಸ್ತು ತಿರುಗಿದ್ದು, ಒಬ್ಬರೂ ನಿಲ್ಲದಂತೆ ಕಟ್ಟೆಚ್ಚರ ವಹಿಸಿದ್ದರು. 9 ಗಂಟೆ ಸುಮಾರಿಗೆ ತರೀಕೆರೆಗೆ ಬಂದ ಎಸ್‍ಪಿ ಅಣ್ಣಾಮಲೈ ಘಟನೆಯ ವಿವರ ತಿಳಿದುಕೊಂಡು, ಪೊಲೀಸರಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ, ನಂತರ ಆಸ್ಪತ್ರೆ ಸೇರಿದ್ದ ತನ್ನ ಸಿಬ್ಬಂದಿಗಳಿಗೆ ಸಾಂತ್ವಾನ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಳ್ಳತನ ಮಾಡಲು ಹೋಗಿ 5ನೇ ಮಹಡಿಯಿಂದ ಬಿದ್ದ ವೈದ್ಯನ ಪತ್ನಿ?

    ಕಳ್ಳತನ ಮಾಡಲು ಹೋಗಿ 5ನೇ ಮಹಡಿಯಿಂದ ಬಿದ್ದ ವೈದ್ಯನ ಪತ್ನಿ?

    ಬೆಂಗಳೂರು: ಅಪಾರ್ಟ್‍ಮೆಂಟ್ 5ನೇ ಫ್ಲೋರ್‍ನಿಂದ ಜಿಗಿದು ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹಿಳೆ ಪಕ್ಕದ ಮನೆಯಲ್ಲಿ ವಸ್ತುಗಳನ್ನು ಕದಿಯಲು ಹೋಗಿ ಆಯತಪ್ಪಿ ಬಿದ್ದು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗುತ್ತಿದೆ.

    ಸೋನಾಲ್ ಅಗರ್‍ವಾಲ್(25) ಕಿಮ್ಸ್ ಆಸ್ಪತ್ರೆಯ ಅವಿನಾಶ್ ಅಗರ್‍ವಾಲ್ ಪತ್ನಿ. ಬೆಂಗಳೂರಿನ ಉತ್ತರಹಳ್ಳಿ ಮಂತ್ರಿ ಅಪಾರ್ಟ್ ಮೆಂಟ್ ಈ ಬ್ಲಾಕ್ ನಿವಾಸಿಯಾಗಿರೋ ಇವರು, ತನ್ನ ಮೂರು ತಿಂಗಳ ಕಂದಮ್ಮನನ್ನು ಬಿಟ್ಟು 5ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿತ್ತು. ಈ ಪ್ರಕರಣದ ಕುರಿತು ಅನುಮಾನ ವ್ಯಕ್ತವಾಗಿತ್ತು.

    ಗಣೇಶ ಹಬ್ಬದ ಹಿನ್ನಲೆ ಅಪಾರ್ಟ್ ಮೆಂಟ್ ನಿವಾಸಿಗಳೆಲ್ಲರೂ ಪೂಜೆಗೆ ಹೋಗಿದ್ದಾಗ ಈ ಘಟನೆ ನಡೆದಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆರ್ ಆರ್ ನಗರ ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದರು. ಈ ವೇಳೆ ಪಕ್ಕದ ಮನೆಯ ಅಪಾರ್ಟ್‍ಮೆಂಟ್‍ನಿಂದ ಬಿದ್ದಿರುವ ಮೃತ ಸೋನಾಲ್ ಅಗರ್‍ವಾಲ್ ಒಳಉಡುಪುಗಳಲ್ಲಿ ಚಿನ್ನದ ಸರ, ಹಣ, ಕೀ ಪತ್ತೆಯಾಗಿತ್ತು. ಹೀಗಾಗಿ ಕಳ್ಳತನ ಮಾಡಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಆರ್ ಆರ್ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಮೃತಪಟ್ಟ ಮೇಲೆ ವಿಚಾರಿಸಿದ ವೈದ್ಯರು

    ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಮೃತಪಟ್ಟ ಮೇಲೆ ವಿಚಾರಿಸಿದ ವೈದ್ಯರು

    – ಮಂಗ್ಳೂರಲ್ಲಿ ಅಮಾನವೀಯ ಘಟನೆ

    ಮಂಗಳೂರು: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರನನ್ನು ವೈದ್ಯರು ಉಪಚರಿಸದೆ ಮೃತಪಟ್ಟ ಬಳಿಕ ಆತನ ಮೃತದೇಹವನ್ನು ಗೋಡಾನ್‍ನಲ್ಲಿ ಮಲಗಿಸಿದ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.

    ಪುತ್ತೂರಿನ ದರ್ಬೆಯಲ್ಲಿ ಬೈಕ್ ಸವಾರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆ ತಲುಪುವ ವೇಳೆಗೆ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆದರೆ ವೈದ್ಯರು ತುರ್ತು ಚಿಕಿತ್ಸೆಯನ್ನೂ ನೀಡದೆ ರೋಗಿಯನ್ನೂ ಗಮನಿಸದೆ ಬದುಕಿದ್ದಾನಾ ಸತ್ತಿದ್ದಾನಾ ಅಂತಾ ಸಾರ್ವಜನಿಕರ ಬಳಿಯೇ ಉಡಾಫೆಯ ಪ್ರಶ್ನೆ ಎತ್ತಿದ್ದಾರೆ.

    ಸುಮಾರು ಒಂದು ಗಂಟೆಗಳ ಕಾಲ ಆಸ್ಪತ್ರೆಯ ಕಾರಿಡಾರ್ ನಲ್ಲೇ ಸ್ಟ್ರೇಚ್ಚರ್ ಮೇಲೆ ಇರಿಸಿದ್ದು, ನಂತರ ಆಸ್ಪತ್ರೆಯ ಡಿಸೇಲ್ ಸ್ಟಾಕ್ ಇಡುವ ಸ್ಟೇರ್ ಗ್ರಾಡ್ ಕೆಳಗೆ ಮೃತದೇಹ ಇರಿಸಿದ್ದಾರೆ. ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ತಂದ ಸಾರ್ವಜನಿಕರ ಮೇಲೆಯೇ ಡ್ಯೂಟಿ ಡಾಕ್ಟರ್ ರೇಗಾಡಿದ್ದು, ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ದಬಾಯಿಸಿದ್ದಾರೆ.

    ತುರ್ತು ಚಿಕಿತ್ಸೆಯನ್ನೂ ನೀಡದೆ ಸಾರ್ವಜನಿಕರನ್ನೇ ದಬಾಯಿಸಿ ಕೊನೆಗೆ ಸ್ಟೇರ್ ಕೇಸ್ ನಲ್ಲಿ ಮೃತದೇಹ ಇರಿಸಿದ ಆಸ್ಪತ್ರೆ ಸಿಬ್ಬಂದಿ ವರ್ತನೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂತ್ಯಕ್ರಿಯೆಗೆ ಸಿದ್ಧತೆ ಮಾಡೋವಾಗ ಉಸಿರಾಡಿತು ಮಗು!

    ಅಂತ್ಯಕ್ರಿಯೆಗೆ ಸಿದ್ಧತೆ ಮಾಡೋವಾಗ ಉಸಿರಾಡಿತು ಮಗು!

    ಹುಬ್ಬಳ್ಳಿ: ವೈದ್ಯರ ಹೇಳಿಕೆಯಂತೆ ಸತ್ತಿದೆ ಎಂದು ಅಂತ್ಯಕ್ರಿಯೆ ಮಾಡಲು ಸಿದ್ಧತೆ ನಡೆಸಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಮಗು ಬದುಕುಳಿದ ಅಚ್ಚರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿ ನಗರದ ನಿವಾಸಿ ಈರಪ್ಪ ಬಸವ ಎಂಬವರ ಒಂದು ವರ್ಷದ ಮಗು ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಪುಟ್ಟ ಕಂದಮ್ಮ. ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಹೇಳಿ ದೃಢಪಡಿಸಿದ್ದರು. ಆದರೆ ಅಂತ್ಯಕ್ರಿಯೆ ವೇಳೆ ಮಗು ಉಸಿರಾಡಿ ಬದುಕಿದೆ.

    ನಡೆದಿದ್ದು ಏನು?
    ಈರಪ್ಪ ಬಸವ ಅವರ ಒಂದು ವರ್ಷದ ಮಗ ಆಕಾಶ್ ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ. ಈ ವೇಳೆ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು. ಆದರೆ ಇಂದು ಬೆಳಿಗ್ಗೆ ವೈದ್ಯ ಎಲ್ ಎಸ್ ಕುಲಕರ್ಣಿ ಎಂಬವರು ಮಗು ಸಾವನ್ನಪ್ಪಿದೆ ಎಂದು ಹೇಳಿ ಮೃತದೇಹ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ವೈದ್ಯರ ಮಾತಿನಿಂದ ಅಘಾತಕ್ಕೆ ಒಳಗಾದ ಮಗುವಿನ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಈ ವೇಳೆ ಮಗು ಇದ್ದಕ್ಕಿದ್ದ ಹಾಗೇ ಉಸಿರಾಡಿದ್ದು, 2 ಬಾರಿ ವಾಂತಿ ಕೂಡ ಮಾಡಿಕೊಂಡಿದೆ. ಕೂಡಲೇ ಎಚ್ಚೆತ್ತ ಪೋಷಕರು ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಕಿಮ್ಸ್ ಆಸ್ಪತ್ರೆಯ ಮಕ್ಕಳ ಘಟಕದ ಐಸಿಯು ಘಟಕದಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದೆ. ಆದರೆ ಕಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ಬೇಗ ದಾಖಲಿಸಿದ್ದಾರೆ ಉತ್ತಮವಾಗಿತ್ತು, ಸದ್ಯ ಮಗುವಿನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಚಿಕಿತ್ಸೆ ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಇಂತಹ ಘಟನೆಗಳು ನಡೆಯುವುದು ಅಪರೂಪ ಎಂದು ತಿಳಿಸಿದ್ದಾರೆ. ಇತ್ತ ಮಗು ಬದುಕಿದ್ದರೂ ಸಾವನ್ನಪ್ಪಿದ ಎಂದು ಹೇಳಿದ ಖಾಸಗಿ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv