Tag: doctor

  • ಮದ್ಯದ ಅಮಲಿನಲ್ಲಿ ಚಿಕಿತ್ಸೆಗೆ ಮುಂದಾದ ಸರ್ಕಾರಿ ವೈದ್ಯ!

    ಮದ್ಯದ ಅಮಲಿನಲ್ಲಿ ಚಿಕಿತ್ಸೆಗೆ ಮುಂದಾದ ಸರ್ಕಾರಿ ವೈದ್ಯ!

    – ವೈದ್ಯನ ಬೆಂಬಲಕ್ಕೆ ನಿಂತ್ರಾ ಪೊಲೀಸರು?

    ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದ ವೈದ್ಯರೊಬ್ಬರಿಗೆ ಸಾರ್ವಜನಿಕರು ಫುಲ್ ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ನೀಲಕಂಠಪ್ಪ ಅವರು ನಿನ್ನೆ ರಾತ್ರಿ ಪಾಳೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮದ್ಯ ಸೇವಿಸಿದ್ದ ನೀಲಕಂಠಪ್ಪ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ, ವ್ಯಕ್ತಿಯೊಬ್ಬರ ಸಂಬಂಧಿಕರು ಕುಡಿದು ಚಿಕಿತ್ಸೆ ನೀಡುವುದು ಸರಿಯಲ್ಲ. ಒಂದು ವೇಳೆ ರೋಗಿಗೆ ಏನಾದರು ತೊಂದರೆ ಆದರೆ ನೀವೇ ಜವಾಬ್ದಾರರು ಎಂದು ಕಿಡಿಕಾರಿದ್ರು.

    ಮದ್ಯದ ಮತ್ತಿನಲ್ಲಿದ್ದ ನೀಲಕಂಠಪ್ಪ ಕೂಡ ಸಾರ್ವಜನಿಕರ ಜೊತೆಗೆ ಜಗಳಕ್ಕೆ ಇಳಿದಿದ್ದು, ಅವಾಚ್ಯಪದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ವೈದ್ಯರ ಪರ ನಿಂತು ಸಾರ್ವಜನಿಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

    ವೈದ್ಯ ನೀಲಕಂಠಪ್ಪ ಅವರು ಕುಡಿದು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಪೊಲೀಸರಿಗೆ ಮನವಿ ಮಾಡಿಕೊಂಡೆವು. ಆದರೆ ಪೊಲೀಸರು ವೈದ್ಯನ ಬೆಂಬಲಕ್ಕೆ ನಿಂತು ನಮ್ಮ ಮೇಲೆ ರೇಗಾಡಿದರು. ಅಷ್ಟೇ ಅಲ್ಲದೆ ನಮ್ಮ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ- ಆಪ್ತ ವೈದ್ಯ ಡಾ.ಪರಮೇಶ್ ಸ್ಪಷ್ಟನೆ

    ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದೆ- ಆಪ್ತ ವೈದ್ಯ ಡಾ.ಪರಮೇಶ್ ಸ್ಪಷ್ಟನೆ

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ಭಕ್ತರು ಆತಂಕ ಪಡುವ ಅಗತ್ಯವಿಲ್ಲವೆಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಸ್ಪಷ್ಟಪಡಿಸಿದ್ದಾರೆ.

    ಇಂದು ಬೆಳಗ್ಗೆ ಶ್ರೀಗಳ ಆರೋಗ್ಯ ತಪಾಸಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರ ಶ್ರೀಗಳ ಆರೋಗ್ಯದಲ್ಲಿ ಕಫ ಕಾಣಿಸಿಕೊಂಡಿತ್ತು. ಬಿಜಿಎಸ್ ವೈದ್ಯರು ಅದನ್ನು ಕ್ಲಿಯರ್ ಮಾಡಿದ್ದರು. ಜೊತೆಗೆ ಪಲ್ಸ್ ರೇಟ್ ಕೂಡ ಕಡಿಮೆ ಆಗಿತ್ತು. ಚಿಕಿತ್ಸೆ ನೀಡಿದ ಬಳಿಕ ನಿನ್ನೆ ಸಂಜೆಯಿಂದಲೇ ಶ್ರೀಗಳು ಚೇತರಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಶ್ರೀಗಳು ಬೆಳಗ್ಗೆ 8 ಗಂಟೆಗೆ ವಿಶ್ರಾಂತಿಯಿಂದ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿದ್ದಾರೆ. ಬಳಿಕ ಇಷ್ಟಲಿಂಗ ಪೂಜೆ ನೆರವೇರಿಸಿ, ಪ್ರಸಾದ ಸೇವೆನೆ ಕೂಡ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಗಾಯವು ವಾಸಿಯಾಗುತ್ತಿದೆ. ಈ ಬಗ್ಗೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 80ನೇ ವಯಸ್ಸಿನಲ್ಲಿ ತಂದೆಯಾದ ಅಜ್ಜ – ವಿಶ್ವದ ಹಿರಿಯ ತಾಯಿ ಹೆಗ್ಗಳಿಕೆ ಪಾತ್ರವಾದ ಮಹಿಳೆ

    80ನೇ ವಯಸ್ಸಿನಲ್ಲಿ ತಂದೆಯಾದ ಅಜ್ಜ – ವಿಶ್ವದ ಹಿರಿಯ ತಾಯಿ ಹೆಗ್ಗಳಿಕೆ ಪಾತ್ರವಾದ ಮಹಿಳೆ

    ಶ್ರೀನಗರ: 65 ವರ್ಷದ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.

    ಬಾಕ್ಸಿಂಗ್ ಡೇ ದಿನದಂದು ಮಗು ಜನಿಸಿದ್ದು, ವಿಶೇಷವೆಂದರೆ 80 ವರ್ಷ ವಯಸ್ಸಿನಲ್ಲಿ ಹಕೀಮ್ ದಿನ್ ತಂದೆಯಾಗಿದ್ದಾರೆ. ಈಗಾಗಲೇ ಈ ದಂಪತಿಗೆ 10 ವರ್ಷದ ಮಗನಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಮಹಿಳೆಯ ಹೆಸರನ್ನು ತಿಳಿಸಿಲ್ಲ.

    ಇಳಿ ವಯಸ್ಸಿನಲ್ಲಿ ತಾಯಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ ಇದು ದೇವರ ಬೆಲೆ ಬಾಳುವ ಉಡುಗೊರೆಯಾಗಿದ್ದು, ವಿಶ್ವದ ಹಿರಿಯ ತಾಯಿ ಎಂದು ಕರೆಯಿಸಿಕೊಳ್ಳಲು ಸಂತಸವಾಗುತ್ತದೆ ಎಂದು ತಿಳಿಸಿದ್ದಾರೆ.

    ಮಹಿಳೆ ಬುಧವಾರ ಪೂಂಚ್ ಜಿಲ್ಲೆಯ ಆಸ್ಪತ್ರೆ ದಾಖಲಾಗಿದ್ದು, ಮಾಧ್ಯಹ್ನದ ವೇಳೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾನ್ಯವಾಗಿ ಭಾರತೀಯ ಮಹಿಳೆಯಲ್ಲಿ 47 ವರ್ಷಕ್ಕೆ ಋತುಬಂಧ ನಿಲ್ಲುತ್ತದೆ. ಒಮ್ಮೆ ಋತು ಬಂಧ ನಿಂತಲ್ಲಿ ಮತ್ತೆ ತಾಯಿ ಆಗುಲು ಸಾಧ್ಯವಿಲ್ಲ. ಆದರೆ ಅಪರೂಪ ಎಂಬಂತೆ ಈ ಘಟನೆ ನಡೆದಿದೆ ಎಂದು ಕಾಶ್ಮೀರದ ತಜ್ಞ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಸಾಮಾನ್ಯವಾಗಿ 50 ವರ್ಷ ಬಳಿಕ ಮಹಿಳೆಯರು ತಾಯಿ ಆಗಲು ಬಯಸಿದರೆ, ಅಂತಹವರಿಗೆ ಐವಿಎಫ್ ಚಿಕಿತ್ಸೆ ವಿಧಾನದ ಮೂಲಕ ಮಕ್ಕಳನ್ನು ಪಡೆಯುವ ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಮಹಿಳೆ ನೈಸರ್ಗಿಕವಾಗಿ ಗರ್ಭಿಣಿಯಾಗಿದ್ದಾರೆ. ಈ ಹಿಂದೆ ಸ್ಪೇನ್ ದೇಶದ ಮಾರಿಯಾ ಡೆಲ್ ಕಾರ್ಮೆನ್ ಬೊಸಾಡಾ ಡಿ ಲಾರಾ ಎಂಬ ಮಹಿಳೆ ಐವಿಎಫ್ ಚಿಕಿತ್ಸೆಯ ಮೂಲಕ ತಮ್ಮ 66 ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಮೂಲಕ ವಿಶ್ವ ಹಿರಿಯ ತಾಯಿ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪತ್ನಿಯ ಜೊತೆಗೆ ಜಗಳವಾಡಿ ನಾಲ್ಕನೇ ಮಹಡಿಯಿಂದ ಜಿಗಿದ ವೈದ್ಯ

    ಪತ್ನಿಯ ಜೊತೆಗೆ ಜಗಳವಾಡಿ ನಾಲ್ಕನೇ ಮಹಡಿಯಿಂದ ಜಿಗಿದ ವೈದ್ಯ

    ನವದೆಹಲಿ: ಪತ್ನಿಯ ಜೊತೆಗೆ ಜಗಳವಾಡಿದ್ದ ಏಮ್ಸ್ ವೈದ್ಯನೊಬ್ಬ ಅಪಾರ್ಟಮೆಂಟ್‍ನ ನಾಲ್ಕನೇ ಮಹಡಿಯಿಂದ ಜಿಗಿದು ಪ್ರಾಣಬಿಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

    ರಾಜಸ್ಥಾನದ ನಾಗೌರ್ ಮೂಲದ ಮನಿಶ್ ಶರ್ಮಾ (34) ಆತ್ಮಹತ್ಯೆ ಮಾಡಿಕೊಂಡ ಏಮ್ಸ್ ವೈದ್ಯ. ದಕ್ಷಿಣ ದೆಹಲಿಯ ಹಾಜ್ ಖಾಸ್ ಪ್ರದೇಶ ಅಪಾರ್ಟಮೆಂಟ್ ನಲ್ಲಿ ವಾಸವಿದ್ದ ಶರ್ಮಾ, ಬುಧವಾರ ಕಟ್ಟಡದಿಂದ ಜಿಗಿದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?:
    ಡಾ.ಶರ್ಮಾ ಸ್ಥಳೀಯ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರು ತಿಂಗಳ ಹಿಂದಷ್ಟೇ ಚಂಡಿಗಢ್‍ದ ಪಿಜಿಐನ ಹಿರಿಯ ವೈದ್ಯೆ ತ್ರಿಪತಿ ಚೌದ್ರಿ ಜೊತೆಗೆ ವಿವಾಹವಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ಶರ್ಮಾ ಬುಧವಾರ ಅತಿಯಾಗಿ ಮದ್ಯ ಹಾಗೂ ಮಾತ್ರೆ ಸೇವಿಸಿದ್ದರು. ಈ ವೇಳೆ ಪತ್ನಿಯ ಜೊತೆಗೆ ಜಗಳವಾಡಿ, ಹಲ್ಲೆ ಮಾಡಿದ್ದಾರೆ. ಇಬ್ಬರ ಜಗಳ ಕೇಳಿಸಿಕೊಂಡ ನೆರೆಮನೆಯವರು ಬಂದು ತ್ರಿಪತಿ ಚೌದ್ರಿ ಅವರನ್ನು ರಕ್ಷಿಸಿದ್ದಾರೆ.

    ಜಗಳದ ಬಳಿಕ ಏಕಾಂಗಿಯಾಗಿ ಮನೆಯಲ್ಲಿ ಉಳಿದಿದ್ದ ಶರ್ಮಾ, ಬಾಲ್ಕನಿಯಿಂದ ಜಿಗಿದಿದ್ದಾರೆ. ನಾಲ್ಕನೇ ಮಹಡಿಯಿಂದ ಬಿದ್ದಿದ್ದರಿಂದ ಶರ್ಮಾ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯಿಂದ ಗಾಬರಿಗೊಂಡ ಪತ್ನಿ ಹಾಗೂ ಅಪಾರ್ಟಮೆಂಟ್‍ನ ಕೆಲವರು ಶರ್ಮಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶರ್ಮಾ ಇಂದು ಮೃತಪಟ್ಟಿದ್ದಾರೆ.

    ಶರ್ಮಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯನ್ನು ಕೊಂದ ಪ್ರಸಿದ್ಧ ವೈದ್ಯ – 7 ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಜೀವಂತ ಇಟ್ಟ!

    ಪತ್ನಿಯನ್ನು ಕೊಂದ ಪ್ರಸಿದ್ಧ ವೈದ್ಯ – 7 ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಜೀವಂತ ಇಟ್ಟ!

    ಗೋರಖ್‍ಪುರ: ನಗರದ ಪ್ರಸಿದ್ಧ ವೈದ್ಯನೊಬ್ಬ ತನ್ನ ಮಾಜಿ ಪತ್ನಿಯನ್ನು ಕೊಂದು, ಆಕೆ ಬದುಕಿದ್ದಾಳೆ ಎಂದು ಬಿಂಬಿಸಲು ತಿಂಗಳುಗಟ್ಟಲೆ ಆಕೆಯ ಫೇಸ್‍ಬುಕ್ ಖಾತೆಯನ್ನು ಬಳಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿ ಧರ್ಮೇಂದ್ರ ಪ್ರತಾಪ್ ಸಿಂಗ್ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎನ್ನುವ ಕಾರಣಕ್ಕೆ ಕಳೆದ ಜೂನ್ ತಿಂಗಳಲ್ಲಿ ತನ್ನ ಮಾಜಿ ಪತ್ನಿ ರಾಖಿ ಅಲಿಯಾಸ್ ರಾಜೇಶ್ವರಿಯನ್ನು ನೇಪಾಳದ ಪ್ರೋಖ್ರಾ ಪರ್ವತದ ತುದಿಯಿಂದ ದೂಡಿ ಕೊಂದಿದ್ದ. ಬಳಿಕ ಅವಳು ಅಸ್ಸಾಂನಲ್ಲಿ ಇದ್ದಾಳೆ ಎಂದು ಬಿಂಬಿಸಲು ಆಕೆ ಬಳಸುತ್ತಿದ್ದ ಫೇಸ್‍ಬುಕ್ ಖಾತೆಯನ್ನು ಸಕ್ರಿಯವಾಗಿಟ್ಟಿದ್ದ.

    ಕಳೆದ ಜೂನ್ ತಿಂಗಳಲ್ಲಿ ರಾಖಿ ತನ್ನ ಎರಡನೇ ಪತಿ ಮನೀಶ್ ಜೊತೆ ನೇಪಾಳಕ್ಕೆ ತೆರಳಿದ್ದಳು. ಆದರೆ ಅಲ್ಲಿಂದ ಮನೀಶ್ ಮಾತ್ರ ವಾಪಾಸ್ ಬಂದಿದ್ದ. ಬಳಿಕ ರಾಖಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದನು. ಆದರೆ ರಾಖಿಯ ಫೇಸ್‍ಬುಕ್ ಖಾತೆಯಲ್ಲಿ ಆಕೆ ಅಸ್ಸಾಂನಲ್ಲಿ ಇರುವ ಹಾಗೆ ಅಪ್‍ಡೇಟ್ ಇದ್ದಿದ್ದರಿಂದ ಅವಳು ಅಲ್ಲಿಯೇ ಇದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು.

    ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಲೇ ಇದ್ದರು. ಈ ವೇಳೆ ರಾಖಿ ಎರಡನೇ ಪತಿ ಮನೀಶ್ ಸಿನ್ಹಾನನ್ನು ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸಿದಾಗ, ತಾನೋಬ್ಬನೆ ಊರಿಗೆ ವಾಪಸ್ ಬಂದೆ. ರಾಖಿ ನೇಪಾಳದಲ್ಲಿಯೇ ಉಳಿದುಕೊಂಡಳು ಎಂದು ಹೇಳಿದ್ದಾನೆ. ಬಳಿಕ ಈ ಕುರಿತು ದೀರ್ಘ ತನಿಖೆಗಳನ್ನು ನಡೆಸಿ ರಾಖಿಯ ಮೊಬೈಲ್ ಟ್ರಾಕ್ ಮಾಡಿದಾಗ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದೆ.

    ಹಣ ಹಾಗೂ ಆಸ್ತಿಗಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಮೊದಲ ಪತಿಯೇ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕೊಂದಿರುವುದು ಬಯಲಾಗಿದೆ. ರಾಖಿ ಕುಡಿಯುತ್ತಿದ್ದ ಜ್ಯೂಸ್‍ಗೆ ಪ್ರಜ್ಞೆ ತಪ್ಪುವ ಮಾತ್ರೆ ಸೇರಿಸಿ ಬಳಿಕ ಆಕೆಯನ್ನು ಪರ್ವತದಿಂದ ದೂಡಿ ಕೊಲೆ ಮಾಡಿರುವ ಸತ್ಯಾಂಶ ಹೊರಬಿದ್ದಿದೆ.

    ಅಷ್ಟೇ ಅಲ್ಲದೆ ರಾಖಿ ಸಾವನ್ನಪ್ಪಿರುವ ವಿಷಯ ಮುಚ್ಚಿಡಲು ಆಕೆಯ ಮೊಬೈಲ್ ಬಳಸಿಕೊಂಡು ನಿರಂತರವಾಗಿ ಅವಳ ಫೇಸ್‍ಬುಕ್ ಖಾತೆಯಿಂದ ಅಪ್‍ಡೇಟ್ ಮಾಡುತ್ತಿದ್ದ ವಿಷಯವನ್ನು ಕೂಡ ಆರೋಪಿ ಬಾಯಿಬಿಟ್ಟಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಲ್ಲಿ ಬಿದ್ದ ಬಿಸಿಯೂಟದ ಸೇವಿಸಿ 40 ಮಕ್ಕಳು ಅಸ್ವಸ್ಥ – 15 ಮಂದಿ ಗಂಭೀರ

    ಹಲ್ಲಿ ಬಿದ್ದ ಬಿಸಿಯೂಟದ ಸೇವಿಸಿ 40 ಮಕ್ಕಳು ಅಸ್ವಸ್ಥ – 15 ಮಂದಿ ಗಂಭೀರ

    ಬಾಗಲಕೋಟೆ: ಬಿಸಿಯೂಟ ಸೇವಿಸಿದ ಪರಿಣಾಮ 40 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಮಾಗಿ ಗ್ರಾಮದಲ್ಲಿ ನಡೆದಿದೆ.

    ಹಲ್ಲಿ ಬಿದ್ದ ಸಾಂಬಾರ್ ಸೇವಿಸಿದ್ದೇ ಅವಘಡಕ್ಕೆ ಪ್ರಮುಖ ಕಾರಣ ಎನ್ನುವ ಪ್ರಾಥಮಿಕ ಮಾಹಿತಿ ಲಭಿಸಿದೆ. ಶಾಲೆಯಲ್ಲಿ ಊಟ ಸೇವಿಸಿದ ಮಕ್ಕಳು ವಾಂತಿ, ಬೇಧಿಯಿಂದ ಸಂಕಟ ಪಟ್ಟು ನರಳಾಡುತ್ತಿದ್ದರು. ಇದನ್ನು ಕಂಡ ಶಾಲೆಯ ಶಿಕ್ಷಕರು ಕೂಡಲೇ ಖಾಸಗಿ ವಾಹನದ ಮೂಲಕ ಮಕ್ಕಳನ್ನು ಸ್ಥಳೀಯ ಕಮತಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆತರಲಾಗುತ್ತಿದೆ. ಘಟನೆಗೆ ಶಾಲೆಯ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ಶಾಲೆಯಲ್ಲಿ 190 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಮಧ್ಯಾಹ್ನ ಅನ್ನ, ಸಾಂಬಾರ್ ಸೇವಿಸಿದ್ದ 50 ಮಕ್ಕಳು ವಾಂತಿ ಮಾಡತೊಡಗಿದರು. ಈ ವೇಳೆ ಸಾಂಬಾರ್ ಪರಿಶೀಲನೆ ನಡೆಸಿದಾಗ ಸತ್ತ ಹಲ್ಲಿ ಕಂಡು ಬಂದಿದೆ.

    ಸದ್ಯ ಆಸ್ಪತ್ರೆಗೆ ಜಿಲ್ಲಾ ವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆ ಬೇಕಿರುವ ಮಕ್ಕಳನ್ನು ಅಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀವ ಉಳಿಸಿದ ವೈದ್ಯರು ಜೀವ ತೆಗೆದವನ ಸುಳಿವು ಕೊಟ್ಟರು!

    ಜೀವ ಉಳಿಸಿದ ವೈದ್ಯರು ಜೀವ ತೆಗೆದವನ ಸುಳಿವು ಕೊಟ್ಟರು!

    ಮೈಸೂರು: ಕೆ.ಆರ್. ಆಸ್ಪತ್ರೆ ವೈದ್ಯರ ಕಾಮನ್ ಸೆನ್ಸ್‍ನಿಂದ ವಿಷ ಪ್ರಸಾದ ಪ್ರಕರಣವನ್ನು ಶೀಘ್ರವೇ ಬೇಧಿಸಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಹೌದು, ವಿಷ ಪ್ರಸಾದ ಪ್ರಕರಣದ ಮೊದಲ ಸುಳಿವನ್ನು ಪೊಲೀಸರ ಕೆ.ಆರ್ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆರೋಪಿ ನಾಗರಕೊಯಿಲು ದೇವಾಲಯದ ಅರ್ಚಕ ದೊಡ್ಡಯ್ಯ ಪ್ರಕರಣ ನಡೆದ ಸಂಜೆ ಎಲ್ಲಾ ಅಸ್ವಸ್ಥರ ಜೊತೆ ತಾನೂ ಕೂಡ ವಿಷ ಆಹಾರ ಸೇವಿಸಿದ್ದೇನೆ ಎಂದು ಕೆ.ಆರ್. ಆಸ್ಪತ್ರೆಗೆ ದಾಖಲಾಗುತ್ತಾನೆ.

    ಆಸ್ಪತ್ರೆಗೆ ದಾಖಲಾದ ದೊಡ್ಡಯ್ಯ ವೈದ್ಯರು ಪರೀಕ್ಷೆಗೆ ಬರುವಾಗ ನರಳಾಡುತ್ತಿದ್ದ ಬಳಿಕ ಸುಮ್ಮನಾಗುತ್ತಿದ್ದ. ಇದ್ದನ್ನು ಗಮನಿಸಿದ ವೈದ್ಯರಿಗೆ ದೊಡ್ಡಯ್ಯನ ಮೇಲೆ ಅನುಮಾನ ಬಂದು ಕೂಡಲೇ ರಕ್ತ ಪರೀಕ್ಷೆ ಮಾಡಿದ್ದಾರೆ. ಆಗ ಆತನ ದೇಹದಲ್ಲಿ ಹನಿಯಷ್ಟು ವಿಷದ ಅಂಶ ಇರಲಿಲ್ಲ ಎನ್ನುವ ವಿಚಾರ ಗೊತ್ತಾಗಿದೆ.

    ದೊಡ್ಡಯ್ಯ ವಿಷ ಸೇವಿಸಿದ ಹಾಗೆ ನಾಟಕ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆ ತಕ್ಷಣ ವೈದ್ಯರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಬಳಿಕ ರಾತ್ರೋರಾತ್ರಿ ಆಸ್ಪತ್ರೆಗೆ ಬಂದ ಪೊಲೀಸರು ದೊಡ್ಡಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗಲೇ ಪ್ರಸಾದಕ್ಕೆ ವಿಷ ಹಾಕಿದ ಅಸಲಿ ಕಹಾನಿಯನ್ನು ದೊಡ್ಡಯ್ಯ ಹೇಳಿದ್ದಾನೆ.

    ದೊಡ್ಡಯ್ಯನ ಹೇಳಿಕೆ ನಂತರ ಅಂಬಿಕಾ, ಆಕೆಯ ಪತಿ ಕೊನೆಯದಾಗಿ ಸಾಲೂರು ಮಠದ ಕಿರಿಯ ಸ್ವಾಮೀಜಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣ- ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ

    ಸುಳ್ವಾಡಿ ವಿಷ ಪ್ರಸಾದ ಪ್ರಕರಣ- ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಸುಳ್ವಾಡಿ ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸಂಸದ ಪ್ರತಾಪ್ ಸಿಂಹ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯ ಪಾರ್ಲಿಮೆಂಟಿನಿಂದ ಬೆಂಗಳೂರಿಗೆ ಬಂದಾಕ್ಷಣ ಚಾಮರಾಜನಗರ ಜಿಲ್ಲೆಯಲ್ಲಿ ದೇವಸ್ಥಾನದ ಪ್ರಸಾದ ತಿಂದು ಅಲ್ಲಿನ ಜನರು ಅಸ್ವಸ್ಥರಾಗಿದ್ದಾರೆ ಎಂಬ ವಿಚಾರ ನಮಗೆ ಗೊತ್ತಾಯಿತು. ಅದಕ್ಕೆ ನೇರವಾಗಿ ಕೆ.ಆರ್ ಆಸ್ಪತ್ರೆಗೆ ಬಂದಿದ್ದೇವೆ. ಈ ಆಸ್ಪತ್ರೆಯಲ್ಲಿಯೇ ಸುಮಾರು 69 ಜನರು ದಾಖಲಾಗಿದ್ದಾರೆ ಅಂತ ಹೇಳಿದ್ದಾರೆ.

    ಆಸ್ಪತ್ರೆಗೆ ದಾಖಲಾಗಿದ್ದವರು ಸಂಕಷ್ಟದಿಂದ ಹೊರಳಾಡುತ್ತಿದ್ದರು. ಆಗ ಈ ಬಗ್ಗೆ ವೈದ್ಯರನ್ನು ಕೇಳಿದಾಗ, ವಿಷಯುಕ್ತವಾದ ಆಹಾರ ಸೇವಿಸಿದ್ದಾರೆ. ಅದು ನೇರವಾಗಿ ಮೆದುಳಿಗೆ ಹೋಗಿದ್ದು, ಎಲ್ಲರು ನರಳಾಡುತ್ತಿದ್ದಾರೆ. ಸುಮಾರು 7-8 ಜನರ ಎಲ್ಲರ ಸ್ಥಿತಿ ಗಂಭೀರವಾಗಿದೆ ಅಂತ ವೈದ್ಯರು ತಿಳಿಸಿರುವುದಾಗಿ ಸಂಸದರು ಹೇಳಿದ್ದಾರೆ.

    ವಿಷ ಪ್ರಸಾದ ತಿಂದು ಈ ರೀತಿಯಾಗಿರುವುದು ಬಹಳ ದುರದೃಷ್ಟಕರವಾದ ಘಟನೆಯಾಗಿದೆ. ಇತ್ತೀಚೆಗೆ ಮಂಡ್ಯದ ಪಾಂಡವಪುರದಲ್ಲಿ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲೇ ಇದೀಗ ಈ ದುರಂತ ಸಂಭವಿಸಿದೆ. ಆದಷ್ಟು ಬೇಗ ಅಸ್ವಸ್ಥರು ಗುಣಮುಖರಾಗಲಿ ಎಂದು ಚಾಮುಂಡಿತಾಯಿ ಬಳಿ ಕೇಳಿಕೊಳ್ಳುತ್ತೇನೆ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಸಾದಕ್ಕೆ 10 ಬಾಟಲ್ ವಿಷ ಬೆರೆಸಿದ್ದಾರಾ ದುಷ್ಕರ್ಮಿಗಳು?

    ಪ್ರಸಾದಕ್ಕೆ 10 ಬಾಟಲ್ ವಿಷ ಬೆರೆಸಿದ್ದಾರಾ ದುಷ್ಕರ್ಮಿಗಳು?

    ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ತಯಾರಿಸಿದ್ದ ಪ್ರಸಾದಕ್ಕೆ ದುಷ್ಕರ್ಮಿಗಳು 10ಕ್ಕೂ ಹೆಚ್ಚು ಬಾಟಲ್ ವಿಷ ಬೆರೆಸಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಸಾವಿರಾರು ಜನರಿಗೆ ತಯಾರಿಸಿದ್ದ ಪ್ರಸಾದದಲ್ಲಿ ಒಂದು ಅಥವಾ ಎರಡು ಬಾಟಲ್ ವಿಷ ಬೆರೆಸಿದ್ದರೆ ವಾಂತಿ, ಭೇದಿ ಮಾತ್ರ ಆಗುತ್ತಿತ್ತು. ಆದರೆ ಹತ್ತಕ್ಕೂ ಹೆಚ್ಚು ಬಾಟಲ್ ಕ್ರಿಮಿನಾಶ ಅಥವಾ ವಿಷ ಬೆರೆಸಿದ್ದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಹಾನಿಯಾಗಿದೆ. ಪ್ರಸಾದದಲ್ಲಿ ವಿಷದ ಪ್ರಮಾಣ ಹೆಚ್ಚಾಗಿದ್ದರಿಂದ 80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, 11 ಜನ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದು, ಇಂದು ಸಾವಿನ ಸಂಖ್ಯೆ 18ಕ್ಕೆ ಏರಿದೆ. ಇದನ್ನೂ ಓದಿ: ಪ್ರಸಾದದಲ್ಲಿ ಕೀಟನಾಶಕ ಮಿಶ್ರಣ: ಕೆ.ಆರ್.ಆಸ್ಪತ್ರೆ ವೈದ್ಯರ ಶಂಕೆ

    ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಸೌಕರ್ಯಗಳ ಕೊರತೆ ಇದೆ. ಹೀಗಾಗಿ ಮೂವರನ್ನು ಮಾತ್ರ ಇರಿಸಿಕೊಂಡು ಉಳಿದ ಅಸ್ವಸ್ಥರನ್ನು ಮೈಸೂರಿನ ಕೆ.ಆರ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ದೇವಸ್ಥಾನದ ಸುತ್ತಮುತ್ತ ದನ ಕಾಯುತ್ತಿದ್ದ ಕೆಲವರು ಪ್ರಸಾದ ಸೇವಿಸಿದ್ದಾರೆ. ಹೀಗಾಗಿ ಅವರು ಯಾವ ಗ್ರಾಮದವರು ಅಂತ ಪತ್ತೆ, ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದರು.

    ಈ ಘಟನೆಗೆ ಸಂಬಂಧಿಸಿದಂತೆ ಸುಳ್ವಾಡಿ ಗ್ರಾಮದ ಚಿನ್ನಪ್ಪಿ ಹಾಗೂ ಮಾದೇಶ್ ಎಂಬವರನ್ನು ರಾಮಾಪುರ ಠಾಣಾ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಆದರೆ ತನಿಖೆಯಲ್ಲಿ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಚಿನ್ನಪ್ಪಿ ಹಾಗೂ ಮಾದೇಶ್ ವಿಷ ಬೆರೆಸಿದ್ದಾರಾ?, ಬೇರೆಯವರು ಹೇಳಿದ್ದರಿಂದ ಕೃತ್ಯ ಎಸಗಿದ್ದಾರಾ? ಎಷ್ಟು ಪ್ರಮಾಣದ ವಿಷ ಬೆರೆಸಿದ್ದರು ಎನ್ನುವ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪತ್ನಿ ಜೀವ ಉಳಿಸಲು ಬರುವಾಗ ಪತಿ ಸಾವು – ಮುಗಿಲು ಮುಟ್ಟಿದೆ ಮಕ್ಕಳ ಗೋಳು!

    https://www.youtube.com/watch?v=31WA3fSlH-I

    https://www.youtube.com/watch?v=V_qoMhCwGNs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಗಿಗಳ ವೇಷದಲ್ಲಿ ಆಗಮಿಸಿ ಕೈ ಕಾಲು ಕಟ್ಟಿ, ಉಸಿರುಗಟ್ಟಿಸಿ ಖಾಸಗಿ ಡಾಕ್ಟರ್ ಕೊಲೆ

    ರೋಗಿಗಳ ವೇಷದಲ್ಲಿ ಆಗಮಿಸಿ ಕೈ ಕಾಲು ಕಟ್ಟಿ, ಉಸಿರುಗಟ್ಟಿಸಿ ಖಾಸಗಿ ಡಾಕ್ಟರ್ ಕೊಲೆ

    ಮಡಿಕೇರಿ: ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರೊಬ್ಬರನ್ನು ಕೈ ಕಾಲು ಕಟ್ಟಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಗ್ರಾಮದಲ್ಲಿ ನಡೆದಿದೆ.

    ದೀಲಿಪ್ ಕೊಲೆಯಾದ ವೈದ್ಯ. ಮೃತ ದೀಲಿಪ್ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಶನಿವಾರ ತಡರಾತ್ರಿ ದುಷ್ಕರ್ಮಿಗಳು ವೈದ್ಯರ ಬೈಲುಕೊಪ್ಪ ಗ್ರಾಮದಲ್ಲಿರುವ ಮನೆಗೆ ರೋಗಿಗಳ ವೇಷದಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

    ಮನೆಯಲ್ಲಿ ನೆಲ ಹಾಗೂ ಗೋಡೆಯ ಮೇಲೆ ಖಾರದ ಪುಡಿ ಕಂಡು ಬಂದಿದೆ. ಅಲ್ಲದೇ ವೈದ್ಯರ ಎರಡೂ ಕೈಗಳನ್ನು ಹಿಂದಕ್ಕೆ ತಿರುಗಿಸಿ ದಾರದಿಂದ ಬಿಗಿದು ಕಟ್ಟಲಾಗಿದೆ. ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

    ಸ್ಥಳಕ್ಕೆ ಪಿರಿಯಾಪಟ್ಟಣ ವೃತ್ತ ನಿರೀಕ್ಷಕರು ಹಾಗೂ ಮೈಸೂರು ಎಸ್‍ಪಿ ಅಮಿತ್ ಸಿಂಗ್ ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv