Tag: doctor

  • ರೂಂಗೆ ಬಾ, ಅಶ್ಲೀಲ ಸಿಡಿಗಳನ್ನ ನೋಡು ಎಂದು ವೈದ್ಯನಿಂದ ಕಿರುಕುಳ

    ರೂಂಗೆ ಬಾ, ಅಶ್ಲೀಲ ಸಿಡಿಗಳನ್ನ ನೋಡು ಎಂದು ವೈದ್ಯನಿಂದ ಕಿರುಕುಳ

    ದಾವಣಗೆರೆ: ವೈದ್ಯನೊಬ್ಬ ಆಸ್ಪತ್ರೆಯ ಸಿಬ್ಬಂದಿಗೆ ಹಾಗೂ ರೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ದಾವಣಗೆರೆಯ ಎಸ್.ಎಂ.ಕೃಷ್ಣ ನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ವೈದ್ಯ ಪ್ರಭುಗೌಡ ಪಾಟೀಲ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬರುತ್ತಿದೆ. ಈತ ಚಿಕಿತ್ಸೆಗೆ ಬರುವ ರೋಗಿಗಳ ಮೈ ಮುಟ್ಟುವುದು ಮತ್ತು ಅಸಭ್ಯವಾಗಿ ಮಾತನಾಡುತ್ತಾ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

    ಅಷ್ಟೇ ಅಲ್ಲದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಎಲ್ಲಿ ಇದೀಯಾ, ರೂಮ್‍ಗೆ ಬಾ ಎಂದು ಕರೆಯುತ್ತಾನಂತೆ. ಅಲ್ಲದೇ ಅಶ್ಲೀಲ ಸಿಡಿಗಳನ್ನು ಕೊಟ್ಟು ನೋಡು ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಕೊನೆಗೆ ವೈದ್ಯನ ಕಿರುಕುಳಕ್ಕೆ ತಾಳಲಾರದೇ ಬೇಸತ್ತ ಸಿಬ್ಬಂದಿ, ಸಾರ್ವಜನಿಕರು ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆಗೆ ಆಗಮಿಸಿ ತರಾಟೆಗೆ ತೆಗೆದುಕೊಂಡು ಸರಿಯಾಗಿ ಗೂಸ ಕೊಟ್ಟಿದ್ದಾರೆ.

    ಈ ವಿಷಯ ಗೊತ್ತಾಗುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಮುಕ ವೈದ್ಯನನ್ನು ನಮಗೆ ಒಪ್ಪಿಸಿ ನಾವು ಅಂತವರಿಗೆ ತಕ್ಕ ಶಿಕ್ಷೆ ನೀಡುತ್ತೇವೆ. ಇಂತವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಕಲ್ಲಿನಿಂದ ಹೊಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಸಿಪಿಐ ಶ್ರೀನಿವಾಸ್, ಗಾಂಧಿನಗರ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನೊಂದ ಮಹಿಳೆಯರನ್ನು ಹಾಗೂ ವೈದ್ಯರನ್ನು ಮಹಿಳಾ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲು ಮಾಡಿಸಿದ್ದಾರೆ.

  • ಪಾಕಿಸ್ತಾನದ ಒಂದೇ ಜಿಲ್ಲೆಯ 400ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್‍ಐವಿ

    ಪಾಕಿಸ್ತಾನದ ಒಂದೇ ಜಿಲ್ಲೆಯ 400ಕ್ಕೂ ಹೆಚ್ಚು ಮಕ್ಕಳಿಗೆ ಹೆಚ್‍ಐವಿ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹೆಚ್‍ಐವಿ ಹೆಚ್ಚಾಗುತ್ತಿದ್ದು ಒಂದೇ ಜಿಲ್ಲೆಯಲ್ಲಿ ಸುಮಾರು 400 ಕ್ಕೂ ಹೆಚ್ಚಿನ ಮಕ್ಕಳಲ್ಲಿ ಹೆಚ್‍ಐವಿ ಸೋಂಕು ಇರುವುದು ಪತ್ತೆಯಾಗಿದೆ.

    ಪಾಕಿಸ್ತಾನದ ಲರ್ಕಾನಾ ಜಿಲ್ಲೆಯ 400 ಕ್ಕೂ ಹೆಚ್ಚು ಮಕ್ಕಳಲ್ಲಿ ಹೆಚ್‍ಐವಿ ಪತ್ತೆಯಾಗಿದ್ದು ಪೋಷಕರಲ್ಲಿ ಭೀತಿ ಮೂಡಿಸಿದೆ. ಮಕ್ಕಳು ಜ್ವರಕ್ಕೆ ತುತ್ತಾದ ಕಾರಣ ಅವರನ್ನು ರಕ್ತ ಪರೀಕ್ಷೆಗೆ ಒಳಪಡಿಸಿದ್ದಾಗ ಈ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

    ಈ ಘಟನೆಗೆ ಕಾರಣ ಸ್ಥಳೀಯ ಡಾಕ್ಟರ್ ಮುಜಾಪ್ಫರ್ ಗಂಘಾರೋ ಎಂದು ಹೇಳಲಾಗಿದೆ. ಒಂದೇ ಬಾರಿ ಎಲ್ಲಾ ಮಕ್ಕಳಿಗೂ ಸೋಂಕು ಹರಡಲು ಆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಳಸಲಾದ ಅವೈಜ್ಞಾನಿಕ ಸಿರಿಂಜ್‍ಗಳೇ ಕಾರಣ ಎಂದು ಪಾಕ್‍ನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿನ ಮಕ್ಕಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮುಜಾಪ್ಫರ್ ಗಂಘಾರೋ ಅವರು ಅಜಾಗರೂಕತೆಯಿಂದ ಸುಮಾರು 400 ಕ್ಕೂ ಹೆಚ್ಚು ಮಕ್ಕಳು ಹೆಚ್‍ಐವಿ ಸೋಂಕಿಗೆ ತುತ್ತಾಗಿದ್ದಾರೆ.

    ಲರ್ಕಾನಾ ಭಾಗದಲ್ಲಿ ಹೆಚ್‍ಐವಿ ಹೆಚ್ಚಾಗುತ್ತಿದೆ ಎಂದು ಅನುಮಾನಗೊಂಡ ಪಾಕಿಸ್ತಾನ ಹೆಚ್‍ಐವಿ ನಿಯಂತ್ರಣ ಸಂಸ್ಥೆ ಅಲ್ಲಿನ ಸುಮಾರು 13,800 ಜನರನ್ನು ಪರೀಕ್ಷೆ ಮಾಡಿದೆ. ಪರೀಕ್ಷೆಗೆ ಒಳಪಟ್ಟ ಅಷ್ಟೂ ಜನರಲ್ಲಿ 400 ಮಕ್ಕಳಿಗೆ ಮತ್ತು 100 ಮಂದಿ ವಯಸ್ಕರಿಗೆ ಹೆಚ್‍ಐವಿ ಇರುವುದು ತಿಳಿದು ಬಂದಿದೆ.

    ಈ ಘಟನೆ ಸಂಬಂಧ ಪಟ್ಟಂತೆ ವೈದ್ಯ ಮುಜಾಪ್ಫರ್ ಗಂಘಾರೋನನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ. ಈತ ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾನೋ ಇಲ್ಲವೋ ಇನ್ನೂ ತಿಳಿದುಬಂದಿಲ್ಲ. ಪಾಕಿಸ್ತಾನದಲ್ಲಿ ಹೆಚ್‍ಐವಿ ಹೆಚ್ಚಾಗುತ್ತಿದ್ದು ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ವೇಗವಾಗಿ ಹೆಚ್‍ಐವಿ ಹಾರಡುತ್ತಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.

  • ಸೆಲ್ಫಿ ಕ್ಲಿಕ್ಕಿಸುವ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ವೈದ್ಯೆ

    ಸೆಲ್ಫಿ ಕ್ಲಿಕ್ಕಿಸುವ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ವೈದ್ಯೆ

    ಪಣಜಿ: ಬೀಚ್‍ಗೆ ತೆರಳಿದ್ದ ವೈದ್ಯೆಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಕ್ಕಿ ಕೊಚ್ಚಿ ಹೋಗಿರುವ ಘಟನೆ ಗೋವಾದಲ್ಲಿ ನಡೆದಿದೆ.

    25 ವರ್ಷದ ರಮ್ಯಾಕೃಷ್ಣ ಸಾವನ್ನಪ್ಪಿದ ಯುವತಿಯಾಗಿದ್ದು, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೂಲದವರಾಗಿದ್ದಾರೆ.

    ರಮ್ಯಾಕೃಷ್ಣ ತಮ್ಮ ಮೂವರು ಗೆಳತಿಯರೊಂದಿಗೆ ಗೋವಾ ಬೀಚ್‍ಗೆ ತೆರಳಿದ್ದು, ಸಮುದ್ರದ ಬಳಿ ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಂತದಲ್ಲಿ ಭಾರೀ ಗಾತ್ರದ ಅಲೆ ದಡಕ್ಕೆ ಅಪ್ಪಳಿಸಿದ್ದು, ಕೂಡಲೇ ಮೂವರು ಗೆಳತಿಯರು ಅಲೆಯೊಂದಿಗೆ ಸಮುದ್ರಕ್ಕೆ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವತಿಯರು ದಡಕ್ಕೆ ಮರಳಿ ಬರಲು ಯಶಸ್ವಿಯಾದರೆ ರಮ್ಯಾಕೃಷ್ಣ ಮಾತ್ರ ಕಾಣೆಯಾಗಿದ್ದರು.

    ಕೂಡಲೇ ಯುವತಿಯರು ಗೆಳತಿಯನ್ನು ರಕ್ಷಣೆ ಮಾಡಲು ಸ್ಥಳೀಯರೊಂದಿಗೆ ಹುಡುಕಾಟದ ಪ್ರಯತ್ನ ನಡೆಸಿದ್ದರು ರಮ್ಯಾಕೃಷ್ಣ ಕಾಣಿಸಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಅವರ ಮೃತದೇಹ ದಡಕ್ಕೆ ತೇಲಿ ಬಂದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ ನಗರದ ನಿವಾಸಿಯಾಗಿದ್ದ ರಮ್ಯಾಕೃಷ್ಣ ಅವರು ಎಂಬಿಬಿಎಸ್ ಪೂರ್ಣಗೊಳಿಸಿ ಕೆಲ ಸಮಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 4 ವರ್ಷಗಳ ಹಿಂದೆ ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಪಡೆದ ಅವರು ಗೋವಾದಲ್ಲೇ ನೆಲೆಸಿದ್ದರು. ಮಂಗಳವಾರ ಸ್ನೇಹಿತರ ಜೊತೆ ಬೀಚ್‍ಗೆ ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.

  • ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ರಾಮನಗರ: ನಾನು ಜೈಲಿಗೆ ಹೋಗಿ ಬಂದವನು. ನನ್ನನ್ನೇ ಎದುರು ಹಾಕೋತೀರಾ ಎಂದು ರಾಮನಗರ ಡಿಎಚ್‍ಓ ಅಮರ್‌ನಾಥ್‌ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ನಡೆದ ಅಕ್ರಮವನ್ನು ಕೇಳಲು ಬಂದವರ ಮೇಲೆ ಡಿಎಚ್‍ಓ ತಮ್ಮ ಪೌರುಷ ತೋರಿದ್ದಾರೆ. ಕಳೆದ 6 ತಿಂಗಳ ಹಿಂದೆ ರಾಮನಗರ ಡಿಎಚ್‍ಓ ಕಚೇರಿಯಲ್ಲಿಯೇ ಚನ್ನಪಟ್ಟಣ ತಾಲೂಕಿನ ನಂಜಾಪುರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‍ ಗೆ ಅಮರ್‌ನಾಥ್‌ ಅವರು ಅವಾಜ್ ಹಾಕಿದ್ದಾರೆ.

    ನಂಜಾಪುರದ ಆಸ್ಪತ್ರೆಗೆ ಸಿಸಿಟಿವಿಯನ್ನ ಟೆಂಡರ್ ನೀಡದೇ ಅಳವಡಿಸಲಾಗುತಿತ್ತು. ಇದನ್ನು ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಪುಟ್ಟಸ್ವಾಮಿಗೌಡ ವಿರೋಧಿಸಿದ್ದರು. ಇದರಿಂದ ವೈದ್ಯರ ಸಭೆ ದಿನದಂದು ಪುಟ್ಟಸ್ವಾಮಿಗೌಡರನ್ನ ಕರೆದು ಅಮರ್‌ನಾಥ್‌ ಧಮ್ಕಿ ಹಾಕಿದ್ದಾರೆ.

    ನಾನು ಅರೆಸ್ಟ್ ಆಗಿ 10 ದಿನ ಪರಪ್ಪನ ಅಗ್ರಹಾರದಲ್ಲಿ ಇದ್ದು, ಜೈಲೂಟ ತಿಂದು ಬಂದವನು. ಒಂದು ಮರ್ಡರ್ ಮಾಡಿದರೂ ಅಷ್ಟೇ 10 ಮರ್ಡರ್ ಮಾಡಿದರೂ ಅಷ್ಟೇ ನಾನು ಏನು, ನನ್ನ ಹಿನ್ನೆಲೆ ಏನು ಅಂತ ತಿಳ್ಕೊಳ್ಳಿ. ನನ್ನನ್ನ ಯಾರೂ ಕೆಣಕಬೇಡಿ ಎಂದು ಡಾಕ್ಟರ್ ಗಳ ಮುಂದೆಯೇ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ನನಗೆ ಡಿಸ್ಮಿಸ್, ಸಸ್ಪೆನ್ಸನ್ ಅನ್ನೋದು ಪುಟ್ಕೋಸಿ. ಜೈಲಿಗೆ ಹೋಗಿ ಬಂದವನಿಗೆ ಇದೆಲ್ಲ ಯಾವ ಲೆಕ್ಕ. ನಾನ್ ಏನೂ, ನನ್ನ ಹಿನ್ನೆಲೆ ಏನೂ ಅನ್ನೊದನ್ನ ತಿಳ್ಕೋಬೇಕಿತ್ತು. ಡಿಎಚ್‍ಓ ಪೊಸ್ಟ್ ಕತ್ತೆ ಬಾಲ, ಇವತ್ತೇ ಬೇಕಾದರೆ ರಿಸೈನ್ ಮಾಡುತ್ತೇನೆ ಎಂದು 60 ಜನ ಡಾಕ್ಟರ್ ಮುಂದೆಯೇ ಅವಾಜ್ ಹಾಕಿದ್ದಾರೆ.

    https://www.youtube.com/watch?v=qa6yVMlKBhQ

  • ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ವ್ಯಕ್ತಿ ಹೊಟ್ಟೆಯಲ್ಲಿ ಬರೋಬ್ಬರಿ 116 ಕಬ್ಬಿಣದ ಮೊಳೆ ಪತ್ತೆ!

    ಜೈಪುರ: ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ ಇದ್ದ ಬರೋಬ್ಬರಿ 116 ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದಾರೆ.

    ಹೌದು. ಅಚ್ಚರಿ ಎನಿಸಿದರು ಇದು ನಿಜ. ರಾಜಸ್ಥಾನದ ಬುಂಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ಆಪರೇಷನ್ ನಡೆದಿದೆ. ಭೋಲಾ ಶಂಕರ್(42) ಅವರ ಹೊಟ್ಟೆಯಲ್ಲಿದ್ದ 116 ಕಬ್ಬಿಣದ ಮೊಳೆಗಳು ಹಾಗೂ ಕೆಲವು ವೈರ್ ಗಳನ್ನು ವೈದ್ಯ ಡಾ. ಅನೀಲ್ ಸೈನಿ ಅವರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ರೋಗಿಯೂ ಭಾನುವಾರದಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರು ಅವರ ಎಕ್ಸ್-ರೇ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಹಾಗೂ ವೈರ್ ಗಳು ಇರುವುದು ತಿಳಿದಿದೆ. ಆದರೆ ಇದನ್ನು ಕಂಡ ವೈದ್ಯರು ಅಚ್ಚರಿಗೊಂಡು ಮತ್ತೆ ರೋಗಿಯ ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಮೊಳೆಗಳು ಇರುವುದು ಖಚಿತಪಟ್ಟಿದೆ. ಅದಾದ ಬಳಿಕ ಸೋಮವಾರದಂದು ರೋಗಿಯ ಶಸ್ತ್ರಚಿಕಿತ್ಸೆ ಮಾಡಿ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ವೈದ್ಯರು ಹೊರತೆಗೆದಿದ್ದಾರೆ.

    ರೋಗಿಯು ತೋಟವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಚಿತ್ರವೆಂದರೆ ರೋಗಿಗೆ ತನ್ನ ಹೊಟ್ಟೆಯಲ್ಲಿ ಈ ಕಬ್ಬಿಣದ ವಸ್ತುಗಳು ಹೇಗೆ ಸೇರಿತು ಎನ್ನುವ ಬಗ್ಗೆ ಗೊತ್ತಿರಲಿಲ್ಲ. ಅಲ್ಲದೆ ರೋಗಿಯ ಮನೆಯವರಿಗೂ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.

    ಈ ಬಗ್ಗೆ ಮಾತನಾಡಿರುವ ವೈದ್ಯರು, ರೋಗಿಯ ಹೊಟ್ಟೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮೊಳೆಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಈ ಮೊಳೆಗಳು ಕರಳುಗಳನ್ನು ಪ್ರವೇಶಿಸಿರಲಿಲ್ಲ. ಏನಾದರೂ ಮೊಳೆಗಳು ಕರಳುಗಳಲ್ಲಿ ಹೊಕ್ಕಿದ್ದರೆ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಷ್ಟವಾಗುತಿತ್ತು. ರೋಗಿಯ ಹೊಟ್ಟೆಯಿಂದ ಎಲ್ಲಾ ಕಬ್ಬಿಣದ ಮೊಳೆಗಳು ಹಾಗೂ ವೈರ್ ಗಳನ್ನು ಹೊರತೆಗೆಯುವುದಕ್ಕೆ ಒಂದೂವರೆ ಗಂಟೆ ಸಮಯ ಬೇಕಾಯ್ತು. ಅದರಲ್ಲಿ ಬಹುತೇಕ ಮೊಳೆಗಳು 6.5 ಸೆ.ಮೀ ಉದ್ದವಿತ್ತು ಎಂದು ತಿಳಿಸಿದರು.

    ಈ ಹಿಂದೆ ಕೂಡ ಇಂತಹ ಪ್ರಕರಣಗಳು ನಡೆದಿತ್ತು. ಕೋಲ್ಕತ್ತಾದಲ್ಲಿ ಸುಮಾರು 2.5 ಸೆ.ಮೀ ಉದ್ದದ ಕಬ್ಬಿಣದ ಮೊಳೆಗಳು ರೋಗಿಯೊಬ್ಬರ ಹೊಟ್ಟೆಯಲ್ಲಿ ಪತ್ತೆಯಾಗಿತ್ತು. ಅಲ್ಲದೆ 2017ರ ಜುಲೈನಲ್ಲಿ ಬುಂಡಿ ನಿವಾಸಿ ಭದ್ರಿಲಾಲ್(56) ಅವರ ದೇಹದಿಂದ ಬರೋಬ್ಬರಿ 150 ಸೂಜಿಗಳು ಹಾಗೂ ಮೊಳೆಗಳನ್ನು ಫರಿದಾಬಾದ್ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದರು.

  • ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ಡಿಸಿಎಂ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್!

    ತುಮಕೂರು: ಡಿಸಿಎಂ ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರ ಕೊರಟಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಆಯಾಗಳೇ ಡಾಕ್ಟರ್ ಆಗಿ ಪರಿವರ್ತನೆಯಾಗಿದ್ದಾರೆ. ರೋಗಿಗಳಿಗೆ ಆಯಾಗಳೇ ಇಂಜೆಕ್ಷನ್ ಹಾಗೂ ಗ್ಲೂಕೋಸ್ ನೀಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

    ಯಾವುದೇ ತರಬೇತಿ ಇಲ್ಲದ ಆಯಾಗಳು ನೇರವಾಗಿ ರೋಗಿಗಳಿಗೆ ಇಂಜೆಕ್ಷನ್, ಗ್ಲೂಕೋಸ್ ಕೊಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಆಯಾಗಳು ಸೂಜಿ ಚುಚ್ಚಿ ಗ್ಲೂಕೋಸ್ ಬಾಟಲಿ ಹಾಕುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದ್ದಾರೆ.

    ರೋಗಿಗಳಿಗೆ ಗ್ಲೂಕೋಸ್, ಇಂಜೆಕ್ಷನ್ ಕೊಡುವ ಕೆಲಸವನ್ನು ಡಾಕ್ಟರ್ ಅಥವಾ ನರ್ಸಗಳು ಮಾಡಬೇಕು. ಆದರೆ ಎಲ್ಲವನ್ನೂ ಬಿಟ್ಟು ಹೌಸ್ ಕೀಪಿಂಗ್ ಆಯಾಗಳು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವುದು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುತ್ತಿರುವ ಗುಣಮಟ್ಟದ ಚಿಕಿತ್ಸೆಗೆ ಹಿಡಿದ ಕೈಗನ್ನಡಿಯಾಗಿದೆ.

    ಇಲ್ಲಿರುವ ನರ್ಸಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಆಯಾಗಳ ಮೇಲೆ ಹಾಕಿ ತಾವು ಹಾಯಾಗಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಡಾಕ್ಟರ್ ಸಹ ತೆಪ್ಪಗಿರುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಆಸ್ಪತ್ರೆಯ ಸ್ಥಿತಿ ಹೀಗಾದರೆ ಇನ್ನುಳಿದ ಆಸ್ಪತ್ರೆಗಳ ಗತಿ ಉಹಿಸಲು ಸಾಧ್ಯವೇ? ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ.

  • 1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    1975 ರಿಂದ ಇಲ್ಲಿವರೆಗೂ 10ರೂ. ಪಡೆದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಇನ್ನಿಲ್ಲ

    -ಮರೆಯಾಯ್ತು ಬಡವರ ಪಾಲಿನ ಆಶಾಕಿರಣ

    ಕೊಪ್ಪಳ: ರೋಗಿಗಳನ್ನು ಎಂತಹ ಸಂಧರ್ಭದಲ್ಲೂ ಅವರಿಗೆ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡುತ್ತಿದ್ದ ಕೊಪ್ಪಳದ ಹಿರಿಯ ವೈದ್ಯರೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ.

    ಡಾ.ಬಾಬುರಾವ್ ಮೃತ ವೈದ್ಯರು. ಇವರು ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖ್ಯಾತಿ ಪಡೆದಿದ್ದರು. ಯಾರಿಗೆ ಹಾವು, ಚೇಳು ಕಚ್ಚಿದರೆ ಥಟ್ ಅಂತ ನೆನಪಾಗುವ ಹೆಸರೇ ಬಾಬುರಾವ್ ಅವರದ್ದು. ಎಂತಹ ಸಂದರ್ಭದಲ್ಲೂ ವ್ಯಕ್ತಿಯ ಪ್ರಾಣವನ್ನು ಬದುಕಿಸುತ್ತಿದ್ದರು. ಈ ಕಾರಣದಿಂದಲೇ ಬಾಬುರಾವ್ ಇಲ್ಲಿ ಮನೆ ಮನೆಗೂ ಚಿರಪರಿಚಿತರು.

    ಈ ಭಾಗದಲ್ಲಿ ಗದ್ದೆಗೆ ಬಳಸುವ ಎಣ್ಣೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಿವೆ. ಯಾರು ಎಲ್ಲೆ ರಾಸಾಯನಿಕ ಎಣ್ಣೆ ಕುಡಿದಿದ್ದಾರೆ ಅಂದರೆ ಅವರು ಎಲ್ಲೆ ಇರಲಿ ಮೊದಲು ಬಾಬುರಾವ್ ಹತ್ತಿರ ಬರುತ್ತಿದ್ದರು. ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಈ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲು ಜನ ಆಗಮಿಸುತ್ತಿದ್ದರು. ಬಡವರ ಪಾಲಿನ ಆಶಾಕಿರಣ ಅಂದರೆ ತಪ್ಪಾಗಲಾರದು. ಅವರ ಹತ್ತಿರ ದುಡ್ಡು ಇಲ್ಲದಿದ್ದರೂ ಉಚಿತವಾಗಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದರು.

    1975ರಲ್ಲಿ ಶ್ರೀರಾಮನಗರಕ್ಕೆ ಆಗಮಿಸಿದ ಬಾಬುರಾವ್ ಅವರು ಅಂದಿನಿಂದ ಇಂದಿನವರೆಗೆ ಕೇವಲ 10 ರೂಪಾಯಿ ಮಾತ್ರ ಪಡೆದು ಚಿಕಿತ್ಸೆ ನೀಡುತ್ತಿದ್ದರು. ಹುಬ್ಬಳ್ಳಿ ಧಾರವಾಡ, ರಾಯಚೂರಿನಿಂದ ಬಂದು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಿದ್ದರು. ಇದೀಗ ಬಾಬುರಾವ್ ಅವರ ಅಕಾಲಿಕ ಅಗಲಿಕೆಯಿಂದ ಇಡೀ ಶ್ರೀರಾಮನಗರವೇ ಕಂಬನಿ ಮಿಡಿಯುತ್ತಿದೆ.

    ಇಂದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಾಬುರಾವ್ ಅವರ ಅಂತಿಮ ಯಾತ್ರೆಯಲ್ಲಿ ಸ್ಥಳೀಯರು ಪಾಲ್ಗೊಳುತ್ತಿದ್ದಾರೆ. ನಮ್ಮ ಶ್ರೀರಾಮನಗರಕ್ಕೆ ಇಂತಹ ಮತ್ತೊಬ್ಬ ವೈದ್ಯರು ಬರಲಿ ಬಾಬುರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೆ ಹುಟ್ಟಿಬರಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ.

  • ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದ ಬೀದಿ ನಾಯಿ? – ಎಫ್‍ಐಆರ್ ದಾಖಲು

    ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದ ಬೀದಿ ನಾಯಿ? – ಎಫ್‍ಐಆರ್ ದಾಖಲು

    ಬೆಂಗಳೂರು: ಸಂತಾನಹರಣ ಶಸ್ತ್ರ ಚಿಕಿತ್ಸೆ ಬಳಿಕ ನಾಯಿಯೊಂದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ಎನ್‍ಜಿಓ ವಿರುದ್ಧ ದೂರು ದಾಖಲಿಸಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿಯಲ್ಲಿ ನಡೆದಿದೆ.

    ಬೈಯಪ್ಪನಹಳ್ಳಿಯ ವ್ಯಾಪ್ತಿಯ ರಸ್ತೆಯಲ್ಲಿದ್ದ ಜೂಲಿ ಹೆಸರಿನ ಬೀದಿ ನಾಯಿಯನ್ನು ಸಂತಾನಹರಣಕ್ಕಾಗಿ ಕರೆದುಕೊಂಡು ಹೋಗಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಬಳಿಕ 7 ತಿಂಗಳ ನಾಯಿ ಸಾವನ್ನಪ್ಪಿದ್ದು, ನಾಯಿ ವೈದ್ಯರ ಎಡವಟ್ಟಿನಿಂದ ಸಾವನ್ನಪ್ಪಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ದೂರು ನೀಡಿದ್ದಾರೆ.

    ಚಿಕಿತ್ಸೆಗೆಂದು ನಾಯಿಯನ್ನ ಕರೆದುಕೊಂಡು ಹೋಗಿದ್ದ ಸುಷ್ಮಾ ಎಂಟರ್ ಪ್ರೈಸಸ್ ಎನ್‍ಜಿಓದ ಅರುಣಾ ರೆಡ್ಡಿ ಮತ್ತು ಶಸ್ತ್ರ ಚಿಕಿತ್ಸೆ ನಡೆಸಿದ್ದ ಡಾಕ್ಟರ್ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿ ನವೀನ್ ಕಾಮತ್ ಎಂಬವರು ದೂರು ನೀಡಿದ್ದಾರೆ.

    ನಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಅದನ್ನು ತೆಗೆದುಕೊಂಡು ಹೋಗಿದ್ದ ಸ್ಥಳದಲ್ಲೇ ಬಿಡಲಾಗಿತ್ತು. ಆದರೆ ಶಸ್ತ್ರ ಚಿಕಿತ್ಸೆ ಆದ ಜಾಗದಲ್ಲಿ ನಾಯಿಯ ದೇಹದಿಂದ ದ್ರವರೂಪದಲ್ಲಿ ಸ್ರಾವ ಆರಂಭವಾಗಿತ್ತು. ಅಂತಿಮವಾಗಿ ನಾಯಿ ಸಾವನ್ನಪ್ಪಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರಾಣಿ ಹಿಂಸೆ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.

  • ಮುಂಗಾಲು ಮುರಿದು ಕಾಡಾನೆಯ ನರಕಯಾತನೆ

    ಮುಂಗಾಲು ಮುರಿದು ಕಾಡಾನೆಯ ನರಕಯಾತನೆ

    ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಮುಂಗಾಲು ಮುರಿದು ನರಕಯಾತನೆ ಪಡುತ್ತಿರುವುದು ದೃಶ್ಯ ಬೆಳಕಿಗೆ ಬಂದಿದೆ.

    ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಕಾಡಾನೆ ಇದ್ದು ಮುಂದಿನ ಎಡ ಕಾಲು ಊರಲಾಗದೇ ಯಾತನೆ ಪಡುತ್ತಿದೆ. ಎಲ್ಲಿಯೋ ಹೊಂಡಕ್ಕೆ ಬಿದ್ದು ಕಾಲು ಮುರಿದುಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಸುಬ್ರಹ್ಮಣ್ಯ ಅರಣ್ಯ ವಿಭಾಗದ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ನಾಗರಹೊಳೆಯಿಂದ ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ವಿಳಂಬ ಧೋರಣೆ ಮಾಡಿದರೆ ಕಾಡಾನೆಗೆ ತೊಂದರೆಯಾಗಲಿದೆ.

    ಇತ್ತೀಚೆಗಷ್ಟೇ ಮೈಸೂರಿನ ಅಂಬಾರಿ ಹೊರುವ ಆನೆ ದ್ರೋಣ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿತ್ತು. ಹೀಗಾಗಿ ಆದಷ್ಟು ಬೇಗ ಒಂಟಿ ಆನೆಗೆ ಚಿಕಿತ್ಸೆ ನೀಡಬೇಕಾಗಿದೆ.

  • ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲೇ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19) ಮೃತಪಟ್ಟ ಬಾಣಂತಿ. ಆಸ್ಪತ್ರೆಯ ವೈದ್ಯೆ ಡಾ.ಶೈಲಜಾ ಅವರ ಎಡವಟ್ಟಿನಿಂದಲೇ ರಶ್ಮಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಹೆರಿಗೆಗೆ ಎಂದು ರಶ್ಮಿಯನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.


    ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.