Tag: doctor

  • ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವೈದ್ಯರ ಮೇಲೆ ಹಲ್ಲೆ

    ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವೈದ್ಯರ ಮೇಲೆ ಹಲ್ಲೆ

    ಬೆಂಗಳೂರು: ಆಸ್ಪತ್ರೆ ಒಳಗೆ ಹೋಗಲು ಬಿಟ್ಟಿಲ್ಲವೆಂದು ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಜಯದೇವ ಆಸ್ಪತ್ರೆಯಲ್ಲಿ ನಡೆದಿದೆ.

    ಮೊಹಮ್ಮದ್ ಸುಹೇಲ್ ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿ. ಜಯದೇವ ಆಸ್ಪತ್ರೆಯ ವೈದ್ಯ ಗೌತಂ ಹಲ್ಲೆಗೊಳಗಾದವರು.

    ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯನ್ನು ನೋಡಲು ಮೊಹಮ್ಮದ್ ಸುಹೇಲ್ ಬಂದಿದ್ದ. ಆದರೆ ಇದು ರೋಗಿಯ ಭೇಟಿ ಮಾಡುವ ಸಮಯವಲ್ಲ. ಹೀಗಾಗಿ ಒಬ್ಬೊಬ್ಬರೇ ಹೋಗಿ ಎಂದು ವೈದ್ಯ ಗೌತಂ ತಿಳಿಸಿದ್ದರು. ಈ ವಿಚಾರವಾಗಿ ಗಲಾಟೆ ಆರಂಭಿಸಿದ ಮೊಹಮ್ಮದ್ ಸುಹೇಲ್ ಐಸಿಯು ಒಳಗೆ ನುಗ್ಗಿ ಹಲ್ಲೆ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾನೆ.

    ಈ ಸಂಬಂಧ ವೈದ್ಯರು ಆರೋಪಿ ಮೊಹಮ್ಮದ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಹಮ್ಮದ್ ಸುಹೇಲ್‍ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

  • ಅನಸ್ತೇಶಿಯಾ ಡೋಸ್ ಹೆಚ್ಚಳ, ರೋಗಿ ಸಾವು – ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ

    ಅನಸ್ತೇಶಿಯಾ ಡೋಸ್ ಹೆಚ್ಚಳ, ರೋಗಿ ಸಾವು – ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ

    ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಅರಿವಳಿಕೆ(ಅನಸ್ತೇಶಿಯಾ) ಡೋಸ್ ಹೆಚ್ಚಾದ ಪರಿಣಾಮ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

    ಉದ್ದನೂರು ಗ್ರಾಮದ ನಿವಾಸಿ ಸುರೇಶ್(42) ಮೂಳೆ ಶಸ್ತ್ರ ಚಿಕಿತ್ಸೆಗೆಂದು ಸೋಮವಾರ ಕೊಳ್ಳೇಗಾಲ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಗೂ ಮುನ್ನ ನೋವು ನಿವಾರಣೆಗೆ ನೀಡುವ ಅರಿವಳಿಕೆ ಮದ್ದಿನಲ್ಲಿ ವ್ಯತ್ಯಾಸವಾಗಿದ್ದು, ಅರಿವಳಿಕೆ ಡೋಸ್ ಹೆಚ್ಚಾದ ಪರಿಣಾಮ ಸುರೇಶ್ ಪ್ರಜ್ಞೆ ಕಳೆದುಕೊಂಡಿದ್ದರು. ಪ್ರಜ್ಞಾಹೀನರಾಗಿದ್ದ ಸುರೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದಲೇ ಸುರೇಶ್ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ. ನ್ಯಾಯ ಕೊಡಿಸುವಂತೆ ಹನೂರು ಪೊಲೀಸ್ ಠಾಣೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದರು.

  • ನಾನು ಕರೆದರೂ, ಬಾರದೇ ನಿರ್ಲಕ್ಷ್ಯ ತೋರಿದ್ದೀರಿ: ವೈದ್ಯೆಗೆ ಜಿಪಂ ಅಧ್ಯಕ್ಷೆ ತರಾಟೆ

    ನಾನು ಕರೆದರೂ, ಬಾರದೇ ನಿರ್ಲಕ್ಷ್ಯ ತೋರಿದ್ದೀರಿ: ವೈದ್ಯೆಗೆ ಜಿಪಂ ಅಧ್ಯಕ್ಷೆ ತರಾಟೆ

    ಮಂಗಳೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯನ್ನು ಭೇಟಿಯಾಗಲು ತೆರಳಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಲ್ಲಿಯ ಕರ್ತವ್ಯನಿರತ ವೈದ್ಯೆಯನ್ನು ದಬಾಯಿಸಿದ ವಿಡಿಯೋ ಜಾಲತಾಣದಲ್ಲಿ ಭಾರೀ ಟೀಕೆಗೊಳಗಾಗಿದೆ.

    ಪೊಲೀಸರು ತನಿಖೆಯ ನೆಪದಲ್ಲಿ ಕೌಡಿಚ್ಚಾರಿನ ಆಶಾ ಮತ್ತು ಆಕೆಯ ಅಪ್ರಾಪ್ತಾ ಬಾಲಕಿಗೆ ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ್ದು, ಸಂತ್ರಸ್ತರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ನಡುವೆ ಜಿಪಂ ಅಧ್ಯಕ್ಷರು ಬಾಲಕಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದು, ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರು ಸ್ಥಳಕ್ಕೆ ಬಂದಿರಲಿಲ್ಲ. ಬೇರೆ ವಾರ್ಡಿನಲ್ಲಿ ಕರ್ತವ್ಯದಲ್ಲಿದ್ದ ಕಾರಣ ಹೋಗಿರಲಿಲ್ಲ. ಇದರಿಂದ ಸಿಟ್ಟಾದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವೈದ್ಯರ ಚೇಂಬರಿಗೆ ಆಗಮಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾನು ಕರೆದರೂ, ಬಾರದೆ ನಿರ್ಲಕ್ಷ್ಯ ತೋರಿದ್ದೀರಿ. ನೀವು ಜನಸಾಮಾನ್ಯರು ಬಂದರೆ ಹೀಗೆ ನಿರ್ಲಕ್ಷ್ಯ ತೋರಿಸುವುದಾ? ನಿಮ್ಮ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಕೊಡುತ್ತೇನೆ ಎನ್ನುತ್ತಾ ದಬಾಯಿಸಿದ್ದಾರೆ. ಡ್ಯೂಟಿ ಡಾಕ್ಟರ್, ತಾನು ಬೇರೆ ಕಡೆ ರೋಗಿಗಳನ್ನು ನೋಡುತ್ತಿದ್ದೆ ಎಂದರೂ, ಜಿಪಂ ಅಧ್ಯಕ್ಷರು ತಣ್ಣಗಾಗಲಿಲ್ಲ. ಹೀಗೆ ದಬಾಯಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ಕೇಳಿಬಂದಿದೆ.

    ಜಿಪಂ ಅಧ್ಯಕ್ಷರು ಬಂದ ಮಾತ್ರಕ್ಕೆ ಓಡೋಡಿ ಬರಬೇಕಿತ್ತಾ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಹಾಕುತ್ತಿದ್ದಾರೆ. ದೌರ್ಜನ್ಯ ಪ್ರಕರಣ ಸಂಬಂಧಿಸಿ ಪುತ್ತೂರಿನ ಸಂಪ್ಯ ಠಾಣೆಯ ಇಬ್ಬರು ಮಹಿಳಾ ಪೇದೆ ಸೇರಿದಂತೆ ಮೂವರನ್ನು ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ಅಮಾನತುಗೊಳಿಸಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಪೊಲೀಸರು ಕುಟುಂಬವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.

  • ಕಚ್ಚಿದ ನಾಯಿಗೆ ವಾಪಸ್ ಕಚ್ಚಬೇಕಿತ್ತೆಂದ ವೈದ್ಯ- ಮಹಿಳೆ ಆರೋಪ

    ಕಚ್ಚಿದ ನಾಯಿಗೆ ವಾಪಸ್ ಕಚ್ಚಬೇಕಿತ್ತೆಂದ ವೈದ್ಯ- ಮಹಿಳೆ ಆರೋಪ

    ಜೈಪುರ: ಮಹಿಳೆಯೊಬ್ಬರು ನಾಯಿ ಕಚ್ಚಿತ್ತು, ಔಷಧಿ ನೀಡಿ ಎಂದು ಆಸ್ಪತ್ರೆಗೆ ಹೋದರೆ ವೈದ್ಯ, ನೀವೂ ನಾಯಿಗೆ ಕಚ್ಚಬೇಕಿತ್ತು ಎಂದು ಹಾರಿಕೆಯ ಉತ್ತರ ನೀಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ವೈದ್ಯರು ಈ ರೀತಿ ಉತ್ತರ ನೀಡುತ್ತಿರುವಾಗ ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜ್ಯ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸುತ್ತಿದೆ.

    ಸುಮಾರು 57 ಸೆಕೆಂಡಿನ ವಿಡಿಯೋದಲ್ಲಿ, ಮಹಿಳೆ ತನಗೆ ನಾಯಿ ಕಚ್ಚಿದೆ ಔಷಧಿ ನೀಡಿ ಎಂದು ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ವೈದ್ಯ, ನಾಯಿ ಕಚ್ಚಿದರೆ, ನೀವೂ ನಾಯಿಗೆ ಕಚ್ಚಬೇಕಿತ್ತು ಎಂದು ಮಹಿಳೆಯ ಮೇಲೆ ರೇಗಾಡಿದ್ದಾನೆ. ಆ ಬಳಿಕ ಇಬ್ಬರ ನಡುವೆ ನಾಯಿ ಕಚ್ಚಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.

    ವೈದ್ಯರ ಮಾತಿನಿಂದ ರೊಚ್ಚಿಗೆದ್ದ ಮಹಿಳೆ ನೀವಾಗಿದ್ದರೆ ನಾಯಿಗೆ ಕಚ್ಚುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ವೈದ್ಯ ಪ್ರವೀಣ್ ಕುಮಾರ್ ಬಲೋಟಿಯಾ, ನಿಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ.

    ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಅಲ್ಲದೆ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳುವುದಾಗಿ ತಿಳಿಸಿದ್ದಾರೆ.

    ಅಲ್ಲದೆ ಪ್ರಕರಣ ಸಂಬಂಧ ಈಗಾಗಲೇ 5 ಮಂದಿಯ ತಂಡವನ್ನು ತನಿಖೆಗಾಗಿ ಕಳುಹಿಸಲಾಗಿದೆ. ತನಿಖೆ ಮುಂದುವರಿದಿದೆ. ಈ ವಿಡಿಯೋವನ್ನು ಆಸ್ಪತ್ರೆಯ ಸಿಬ್ಬಂದಿಯೇ ಮಾಡಿದ್ದಾರೆ ಎಂದು ಆರೋಗ್ಯಾಧಿಕಾರಿ ಕೆ.ಕೆ ಸೋನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ, ಮಕ್ಕಳಿಗೆ ಒಂದೊಂದು ರೋಗ – ವೈದ್ಯನ ಲೈಸೆನ್ಸ್ ರದ್ದು

    ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ, ಮಕ್ಕಳಿಗೆ ಒಂದೊಂದು ರೋಗ – ವೈದ್ಯನ ಲೈಸೆನ್ಸ್ ರದ್ದು

    ಒಟ್ಟಾವಾ: ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ ನಡೆಸಿದ ಕೆನಡಾ ವೈದ್ಯನ ಪರಾವನಗಿಯನ್ನು ರದ್ದು ಮಾಡಲಾಗಿದೆ.

    ಈ ಕೃತ್ಯವನ್ನು ಎಸಗಿದ 80 ವರ್ಷದ ಬರ್ನಾರ್ಡ್ ನಾರ್ಮನ್ ಬಾರ್ವಿನ್ ಅವರಿಗೆ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್ ಆಫ್ ಒಂಟಾರಿಯೊ ಶಿಸ್ತಿನ ಸಮಿತಿಯು 10 ಸಾವಿರ ಡಾಲರ್(6.93 ಲಕ್ಷ ರೂ.) ದಂಡವನ್ನು ವಿಧಿಸಿದೆ. ಜೊತೆಗೆ ಈ ಕೃತ್ಯವನ್ನು `ಭಯಾನಕ ಮತ್ತು ಖಂಡನೀಯ’ ಎಂದು ಪರಿಗಣಿಸಿ, ಬಾರ್ವಿನ್‍ಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

    ರೋಗಿಗಳ ನಂಬಿಕೆಗೆ ದ್ರೋಹ ಬಗೆದಿದ್ದು, ಈ ಕೃತ್ಯದಿಂದ ಜನರು ಮತ್ತು ಅವರ ಕುಟುಂಬಗಳ ಮೇಲೆ ಆಳವಾದ ಪರಿಣಾಮ ಬೀರುತ್ತಿದೆ. ಇದು ತಲೆಮಾರುಗಳನ್ನು ವ್ಯಾಪಿಸುವಂತಹ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡುತ್ತಿದೆ ಎಂದು ಹೇಳಿ ಮೆಡಿಕಲ್ ರೆಗ್ಯುಲೇಟರ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

    ಮೂರು ಮಹಿಳೆಯರಿಗೆ ಸರಿಹೊಂದದ ವೀರ್ಯದಿಂದ ಕೃತಕವಾಗಿ ಗರ್ಭಧಾರಣೆ ಮಾಡಿದ ಆರೋಪ ಸಾಬೀತಾದ ಬಳಿಕ ಬಾರ್ವಿನ್ 2014ರಲ್ಲೇ ತನ್ನ ವೈದ್ಯಕೀಯ ಪರವಾನಗಿಯನ್ನು ತ್ಯಜಿಸಿದ್ದ. ಈ ವೇಳೆ ಸಣ್ಣ ತಪ್ಪಿನಿಂದಾಗಿ ಈ ತೊಂದರೆಯಾಗಿದೆ ಎಂದು ಹೇಳಿಕೊಂಡಿದ್ದ. ಈಗ ಲೈಸೆನ್ಸ್ ರದ್ದುಗೊಳಿಸಲಾಗಿದ್ದು, ಹೊಸ ಅನ್ವೇಷಣೆಯನ್ನು ಮಾಡದಂತೆ ಮೆಡಿಕಲ್ ರೆಗ್ಯುಲೇಟರ್ ಎಚ್ಚರಿಸಿದೆ.

    ಬಾರ್ವಿನ್ 50-100 ಜನರಿಗೆ ತಪ್ಪು ವೀರ್ಯ ಬಳಸಿರುವುದು ಬೆಳಕಿಗೆ ಬಂದಿದ್ದು, 11 ಪ್ರಕರಣಗಳಲ್ಲಿ ಬಾರ್ವಿನ್ ತನ್ನ ವೀರ್ಯ ಬಳಸಿ ಕೃತಕ ಗರ್ಭದಾರಣೆ ಮಾಡಿದ್ದಾನೆ. ಈ ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮಕ್ಕಳಲ್ಲಿ ಓರ್ವ ಯುವತಿ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದಾಳೆ. ತನ್ನ ಪೋಷಕರಿಗೆ ಈ ಕಾಯಿಲೆ ಇಲ್ಲ ಆದರೆ ತನಗೆ ಹೇಗೆ ಈ ಕಾಯಿಲೆ ಬಂತು ಎಂದು ಅವಳ ವಂಶ ವೃಕ್ಷದ ಬಗ್ಗೆ ಸಂಶೋಧನೆ ನಡೆಸಿದ ಬಳಿಕ ವೈದ್ಯನ ದುಷ್ಕೃತ್ಯ ಬೆಳಕಿಗೆ ಬಂದಿದೆ. ಜೊತೆಗೆ ಇನ್ನೊಬ್ಬರು ಉದರದ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ.

    ಈ ಬಗ್ಗೆ ಮಾತನಾಡಿದ ಯುವತಿ, ಬಾರ್ವಿನ್ ಈ ರೀತಿ ಕೃತ್ಯವೆಸೆಗಿರುವುದು ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ. ಇಷ್ಟು ವರ್ಷ ನನ್ನನ್ನು ಪ್ರೀತಿಯಿಂದ ಸಾಕಿದ ಅಪ್ಪ ನನ್ನ ತಂದೆಯಲ್ಲ ಎಂದು ಅರಿತ ಮೇಲೆ ಅವರ ಮನಸ್ಸಿಗೆ ನೋವಾಗಿದೆ. ನನ್ನ ತಾಯಿ ಕೂಡ ನೋವನ್ನು ಅನುಭವಿಸುತ್ತಿದ್ದಾರೆ. ವೈದ್ಯನ ಎಡವಟ್ಟಿಗೆ ನನ್ನ ರೀತಿ ಹಲವರು ಜನಿಸಿದ್ದಾರೆ. ಈವೆರೆಗೆ ವೈದ್ಯನ ಎಡವಟ್ಟಿನಿಂದ ಜನಿಸಿದ 15 ಮಂದಿಯನ್ನು ನಾನು ಪತ್ತೆ ಮಾಡಿದ್ದೇನೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

  • ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಕೂಡಿ ಹಾಕಿ ತೆರಳಿದ ಸಿಬ್ಬಂದಿ

    ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಕೂಡಿ ಹಾಕಿ ತೆರಳಿದ ಸಿಬ್ಬಂದಿ

    ಲಕ್ನೋ: ಸಿಬ್ಬಂದಿಯೊಬ್ಬ ಶಿಫ್ಟ್ ಮುಗಿಯಿತು ಎಂದು ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರೋಗಿಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಗೇಟ್ ಲಾಕ್ ಮಾಡಿಕೊಂಡು ಹೊರ ನಡೆದಿರುವ ಘಟನೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಸರ್ಕಾರಿ ಅರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಸಾನಿಯಾ(30) ಎಂಬುವರನ್ನು ಶುಕ್ರವಾರ ಮುಜಾಫರ್ ನಗರ ಜಿಲ್ಲೆಯ ಪುರ್ಕಾಜಿ ಬ್ಲಾಕ್‍ನ ಫಲೋಡಾ ಗ್ರಾಮದ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ರೋಗಿಗಳ ಕೋಣೆಯಲ್ಲಿ ಹಾಸಿಗೆಯ ಮೇಲೆ ಸಾನಿಯಾ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ವೈದ್ಯರೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ಕೂಡಿ ಹಾಕಿ ಹೊರಟು ಹೋಗಿದ್ದಾರೆ.

    ಕೆಲ ಗಂಟೆಗಳ ನಂತರ ರೋಗಿಗೆ ಪ್ರಜ್ಞೆ ಬಂದಿದ್ದು, ತನ್ನನ್ನು ಕೂಡಿ ಹಾಕಿರುವುದನ್ನು ಕಂಡು ಭಯವಾಗಿ ಸಹಾಯ ಮಾಡುವಂತೆ ಕೂಗಿಕೊಂಡಿದ್ದಾರೆ. ಮಹಿಳೆಯ ಕೂಗನ್ನು ಕೇಳಿದ ಸ್ಥಳೀಯರು ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿ, ನಂತರ ಆಕೆಯನ್ನು ಹೊರಗಡೆ ಕರೆ ತಂದಿದ್ದಾರೆ.

    ಸಿಬ್ಬಂದಿ ಅಮಾನತು
    ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಯ ಗ್ರೂಪ್-ಡಿ ನೌಕರನನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ಅಧಿಕಾರಿ ಡಾ.ಮೋಹಿತ್ ಕುಮಾರ್ ಹಾಗೂ ಮುಖ್ಯ ಫಾರ್ಮಾ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನ ವೈದ್ಯಾಧಿಕಾರಿ ಡಾ.ಪಿ.ಎಸ್.ಮಿಶ್ರಾ ತಿಳಿಸಿದ್ದಾರೆ.

    ಉಪ ಪ್ರಧಾನ ವೈದ್ಯಾಧಿಕಾರಿ ಡಾ.ಬಿ.ಕೆ.ಓಝಾ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಘಟನೆ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಿಶ್ರಾ ತಿಳಿಸಿದ್ದಾರೆ. ಸ್ಥಳೀಯರೂ ಸಹ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಸಹೋದರಿಯ ಮದ್ವೆಗೆ ರಜೆ ನೀಡದಕ್ಕೆ ವೈದ್ಯ ಆತ್ಮಹತ್ಯೆ

    ಚಂಡಿಗಢ್: ಸಹೋದರಿಯ ಮದುವೆಗೆ ರಜೆ ನೀಡಲಿಲ್ಲ ಎಂದು ಕರ್ನಾಟಕದ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣಾದ ರೋಹ್ಟಕ್‍ನಲ್ಲಿ ನಡೆದಿದೆ.

    ಓಂಕಾರ್ (30) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಓಂಕಾರ್ ಮೂಲತಃ ಧಾರವಾಡದವರಾಗಿದ್ದು, ಹರಿಯಾಣಾದಲ್ಲಿ ಎಂಡಿ ಕೋರ್ಸ್ ಮಾಡುತ್ತಿದ್ದರು. ಸಹೋದರಿ ಮದುವೆಗೆ ರಜೆ ನೀಡಲಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೋಹ್ಟಕ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಕೈಲಾಶ್ ಚಂದರ್ ಹೇಳಿದ್ದಾರೆ.

    ತಂಡದ ಮುಖ್ಯಸ್ಥೆಯ ಕಿರುಕುಳ ತಾಳಲಾರದೇ ಓಂಕಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಂಕಾರ್ ತನ್ನ ಸಾವಿನ ಬಗ್ಗೆ ಯಾವುದೇ ಡೆತ್‍ನೋಟ್ ಬರೆದಿಲ್ಲ. ಆದರೆ ತಂಡದ ಮುಖ್ಯಸ್ಥ ಓಂಕಾರ್ ಗೆ ಕಿರುಕುಳ ನೀಡುತ್ತಿದ್ದರು ಎಂದು ಆತನ ಸಹದ್ಯೋಗಿಗಳು ಹಾಗೂ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಓಂಕಾರ್ ಸಹೋದರಿಯ ಮದುವೆ ಇತ್ತು. ಆದರೆ ಸಹೋದರಿಯ ಮದುವೆಗೆ ಹೋಗಲು ತಂಡದ ಮುಖ್ಯಸ್ಥೆ ಓಂಕಾರ್ ನಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಆತ ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಸ್‍ಎಚ್‍ಓ ತಿಳಿಸಿದ್ದಾರೆ.

    ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಈ ಕೇಸ್‍ಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ಈ ಬಗ್ಗೆ ಇನ್ನೂ ವಿಚಾತಣೆ ನಡೆಯುತ್ತಿದೆ ಎಂದು ಕೈಲಾಶ್ ತಿಳಿಸಿದ್ದಾರೆ. ಓಂಕಾರ್ ಸಾವಿಗೆ ಕಾರಣರಾದವರನ್ನು ಶೀಘ್ರದಲ್ಲೇ ಬಂಧಿಸಿ ಎಂದು ಸಹದ್ಯೋಗಿಗಳು ಆಗ್ರಹಿಸಿದ್ದಾರೆ.

  • ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಬಾಲಕನ ಸ್ಥಿತಿ ಗಂಭೀರವಾಗಿದೆ ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆಗ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ನೀಡಿ ಎಂದು ಮನವಿ ಮಾಡಿದ್ದಾರೆ.

    ಮನವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನಿರಾಕರಿಸಿದ್ದು, ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಬಳಿ ಹಣವಿಲ್ಲದ ಕಾರಣಕ್ಕೆ ಬಡ ತಂದೆ ತಾಯಿ ಕಂಗಾಲಾಗಿದ್ದಾರೆ. ಬಳಿಕ ಬೇರೆ ವಿಧಿಯಿಲ್ಲದೆ ತಾಯಿಯೇ ಮಗನನ್ನು ಎತ್ತಿಕೊಂಡು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು.

    ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದು, ಮಗನ ಶವವನ್ನು ತಾಯಿ ಹೊತ್ತುಕೊಂಡೇ ಮನೆಗೆ ತೆರೆಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ವ್ಯವಸ್ಥೆ ನೀಡಿದ್ದರೆ ತಮ್ಮ ಮಗ ಉಳಿಯುತ್ತಿದ್ದ. ನಾವು ಬಡವರು ಎಂದು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ನಾವು ಸೋಮವಾರ ಬೆಳಗ್ಗೆ ಮಗನನ್ನು ಆಸ್ಪತ್ರಗೆ ಕರೆದೋಯ್ದಿದ್ದೆವು. ಆದರೆ ಅಲ್ಲಿನ ವೈದ್ಯರು ಮಗು ಸ್ಥಿತಿ ಗಂಭೀರವಾಗಿದೆ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದರು. ಆಗ ನಾವು ಅಂಬುಲೆನ್ಸ್ ವ್ಯವಸ್ಥೆ ನೀಡಲು ಮನವಿ ಮಾಡಿದಾಗ ಸಿಬ್ಬಂದಿ ನಿರಾಕರಿಸಿದರು. ಆಸ್ಪತ್ರೆ ಆವರಣದಲ್ಲಿ ಮೂರು ಅಂಬುಲೆನ್ಸ್ ಇದ್ದರೂ ಕೂಡ ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಎಂದು ಕಣ್ಣೀರಿಟ್ಟಿದ್ದಾರೆ.

    ಪೋಷಕರ ಆರೋಪವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಳ್ಳಿಹಾಕಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದಿದ್ದೇವು. ಆದರೆ ಆ ನಂತರ ಪೋಷಕರು ಏನು ಮಾಡಿದರು ಎಂದು ನಮಗೆ ಗೊತ್ತಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

  • ಹಿರಿಯ ವೈದ್ಯರ ಕಿರುಕುಳದಿಂದಾಗಿ ವೈದ್ಯೆ ಆತ್ಮಹತ್ಯೆ

    ಹಿರಿಯ ವೈದ್ಯರ ಕಿರುಕುಳದಿಂದಾಗಿ ವೈದ್ಯೆ ಆತ್ಮಹತ್ಯೆ

    ಮುಂಬೈ: ಹಿರಿಯ ವೈದ್ಯರ ಕಿರುಕುಳ ತಾಳಲಾರದೇ ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ಪಾಯಲ್ ಸಲ್ಮಾನ್ ತಾದ್ವಿ (23) ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. ಪಾಯಲ್ ಜೈನೋಕಾಲೋಜಿ ಓದುತ್ತಿದ್ದು, ಮಾರ್ಚ್ 22ರಂದು ಬಿವೈಎಲ್ ನಾಯರ್ ಆಸ್ಪತ್ರೆ ಬಳಿಯಿರುವ ತನ್ನ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

    ಮೂವರು ಹಿರಿಯ ವೈದ್ಯರಾದ ಹೇಮಾ ಅಹುಜಾ, ಭಕ್ತಿ ಮೆಹರ್ ಹಾಗೂ ಅಂಕಿತಾ ಕಂಡಿವಾಲ್ ಜಾತಿ ಹೆಸರು ಹೇಳಿ ಪಾಯಲ್‍ರಿಗೆ ಕಿರುಕುಳ ನೀಡುತ್ತಿದ್ದರು. ವೈದ್ಯರ ಕಿರುಕುಳ ತಾಳಲಾರದೇ ಪಾಯಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮಹಾರಾಷ್ಟ್ರ ಅಸೋಸಿಯೆಶನ್ ಆಫ್ ರೆಸಿಡೆಂಟ್ ಡಾಕ್ಟರ್ ಮೂವರು ವೈದ್ಯರ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಿದೆ.

    ಈ ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ಮೂವರು ಆರೋಪಿಗಳು ಪ್ರಕರಣ ಎದುರಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮೇಲೆ ದೌರ್ಜನ್ಯವೆಸಗಿದ್ದಕ್ಕೆ ಯಾವುದೇ ಜಾಮೀನು ಸಿಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಕುಂದಾಲ್ ತಿಳಿಸಿದ್ದಾರೆ.

    ಈ ಬಗ್ಗೆ ನನ್ನ ಮಗಳು ಆಡಳಿತ ಮಂಡಳಿಗೆ ದೂರು ನೀಡಿದ್ದಳು. ಆದರೆ ಆರೋಪಿಗಳ ವಿರುದ್ಧ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಕೇವಲ ಭರವಸೆಯನ್ನು ನೀಡಿದ್ದರು. ಆಡಳಿತ ಮಂಡಳಿಯ ಸದಸ್ಯರು ಲಿಖಿತ ರೂಪದಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ್ದರು ಎಂದು ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಯಲ್ ತಾಯಿ ಕಣ್ಣೀರು ಹಾಕುತ್ತಾರೆ.

    ತಾನು ಪರಿಶಿಷ್ಟ ಪಂಗಡ ಜಾತಿಗೆ ಸೇರಿದೆ ಎಂದು ಮೂವರು ಹಿರಿಯ ವೈದ್ಯರು ತನಗೆ ಕಿರುಕುಳ ನೀಡುತ್ತಿದ್ದರು ಎಂದು ನನ್ನ ಮಗಳು ನನಗೆ ಫೋನ್ ಮಾಡಿದಾಗಲೆಲ್ಲಾ ಹೇಳುತ್ತಿದ್ದಳು. ಈಗ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಪಾಯಲ್ ತಾಯಿ ಒತ್ತಾಯಿಸಿದ್ದಾರೆ.

    ಪಾಯಲ್ ಕಿರುಕುಳ ನೀಡಿದ್ದ ವೈದ್ಯರ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಬಿವೈಎಲ್ ನಾಯರ್ ನ ಡೀನ್ ರಮೇಶ್ ಬರ್ಮಾಲ್ ತಿಳಿಸಿದ್ದಾರೆ.

    ಈ ಆಸ್ಪತ್ರೆಯಲ್ಲಿ ಆಂಟಿ ರ‍್ಯಾಗಿಂಗ್ ಕಮಿಟಿ ರಚಿಸಲಾಗಿದೆ. ಮೂವರು ವೈದ್ಯರನ್ನು ಕರೆ ತರಲು ಹೇಳಿದ್ದೇವೆ. ಆದರೆ ಈಗ ಅವರು ಮುಂಬೈನಲ್ಲಿ ಇಲ್ಲ. ಈ ಬಗ್ಗೆ ಆಂಟಿ ರ‍್ಯಾಗಿಂಗ್ ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದೆ ಎಂದು ಡೀನ್ ರಮೇಶ್ ಹೇಳಿದ್ದಾರೆ.

  • 20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

    20ರ ಯುವತಿಯ ಮೇಲೆ ಡಾಕ್ಟರ್, ಪೇದೆ ಸೇರಿದಂತೆ ಐವರಿಂದ ಗ್ಯಾಂಗ್‍ರೇಪ್

    ಜೈಪುರ: ಡಾಕ್ಟರ್, ಅಮಾನತುಗೊಂಡ ಪೊಲೀಸ್ ಪೇದೆ 20 ವರ್ಷದ ಯುವತಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಯುವತಿಗೆ ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿ ಆ ಯುವತಿಯನ್ನು ಬುಧವಾರ ಜೈಪುರದ ಆಗ್ರ ರಸ್ತೆಯಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆ.

    ಈ ಯುವತಿಯನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಯುವತಿ, ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದ ಕಪಿಲ್ ಶರ್ಮಾ ಅತ್ಯಾಚಾರ ಮಾಡಿದ್ದಾನೆ ಎಂದು ರಾಜ್ಯ ಮಾನವ ಹಕ್ಕು ಆಯೋಗ ಅಧಿಕಾರಿಯಾಗಿದ್ದ ದೀಪೇಶ್ ಚತುರ್ವೇದಿಗೆ ದೂರು ನೀಡಿದ್ದೆ. ಈ ದೂರನ್ನು ಪಡೆದ ಚತುರ್ವೇದಿ ಶರ್ಮಾನನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಇದನ್ನು ಪ್ರಶ್ನೆ ಮಾಡಲು ಮಂಗಳವಾರ ದೀಪೇಶ್ ಚತುರ್ವೇದಿ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಅಲ್ಲಿ ಐದು ಜನರ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿಸಿದ್ದಾಳೆ.

    ಈ ವಿಚಾರವಾಗಿ ಯುವತಿ ಕಪಿಲ್ ಶರ್ಮಾ, ದೀಪೇಶ್ ಚತುರ್ವೇದಿ, ಡಾ ಅನುರಾಗ್, ಮತ್ತು ಇನ್ನಿಬ್ಬರು ಅನಾಮಧೇಯ ವ್ಯಕ್ತಿಗಳು ಮೇಲೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ವಿಚಾರಣೆ ಮಾಡುತ್ತಿರುವ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಜೈನ್ ಅವರು, ಅಮಾನತುಗೊಂಡ ಪೊಲೀಸ್ ಪೇದೆ ಕಪಿಲ್ ಶರ್ಮಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧಕಾರ್ಯ ಮಾಡುತ್ತಿದ್ದಾರೆ.