Tag: doctor

  • ಮಿಸ್ ಇಂಗ್ಲೆಂಡ್ ಕಿರೀಟ ಗೆದ್ದ ಭಾರತೀಯ ಮೂಲದ ವೈದ್ಯೆ

    ಮಿಸ್ ಇಂಗ್ಲೆಂಡ್ ಕಿರೀಟ ಗೆದ್ದ ಭಾರತೀಯ ಮೂಲದ ವೈದ್ಯೆ

    ಲಂಡನ್: 23 ವರ್ಷದ ಭಾರತೀಯ ಮೂಲದ ವೈದ್ಯೆಯೊಬ್ಬರು ಮಿಸ್ ಇಂಗ್ಲೆಂಡ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

    ಇಂಗ್ಲೆಂಡ್‍ನ ಡರ್ಬಿ ನಗರದಲ್ಲಿ ವಾಸವಾಗಿರುವ ಭಾರತೀಯ ಮೂಲದ ಯುವತಿ ಭಾಷಾ ಮುಖರ್ಜಿ 12 ಜನ ಸ್ಪರ್ಧಾಳುಗಳು ಇದ್ದರೂ 2019ರ ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಯಾಗಿದ್ದಾರೆ.

    ಎರಡು ವಿಭಿನ್ನ ವಿಭಾಗದಲ್ಲಿ ವೈದ್ಯಕೀಯ ಪದವಿ ಪಡೆದಿರುವ ಭಾಷಾ ಮುಖರ್ಜಿ ಒಳ್ಳೆಯ ಪ್ರತಿಭಾವಂತೆಯಾಗಿದ್ದು, ಐದು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ಜೊತೆಗೆ ಉತ್ತಮ ಐಕ್ಯೂ ಪವರ್ ಹೊಂದಿದ್ದಾರೆ ಎಂದು ಲಂಡನ್ ಮೂಲದ ದಿನ ಪತ್ರಿಕೆ ಡೈಲಿ ಮೇಲ್ ವರದಿ ಮಾಡಿದೆ.

    ಗುರುವಾರ ಸಂಜೆ ಮಿಸ್ ಇಂಗ್ಲೆಂಡ್ ಆಗಿ ಹೊರಹೊಮ್ಮಿದ ಭಾಷಾ ಮುಖರ್ಜಿ ನಂತರ ಕೆಲವೇ ಗಂಟೆಗಳಲ್ಲಿ ಲಿಂಕನ್ಶೈರ್‍ನ ಬೋಸ್ಟನ್‍ನಲ್ಲಿರುವ ಒಂದು ಆಸ್ಪತ್ರೆಗೆ ಕಿರಿಯ ವೈದ್ಯರಾಗಿ ಕೆಲಸಕ್ಕೆ ಸೇರಿದ್ದಾರೆ. ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮಾತನಾಡಿರುವ ಭಾಷಾ ಮುಖರ್ಜಿ ಅವರು, ಕೆಲವರು ಮಾಡೆಲಿಂಗ್ ಹುಡುಗಿಯರನ್ನು ಕೇವಲ ಎಂದು ಭಾವಿಸಿರುತ್ತಾರೆ. ಆದರೆ ನಾವು ಕೂಡ ಇಲ್ಲಿ ಒಳ್ಳೆಯ ಉದ್ದೇಶವನ್ನು ಇಟ್ಟಿಕೊಂಡು ಬಂದಿರುತ್ತೇವೆ ಎಂದು ಯಾರು ಅಂದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

    ನನ್ನ ಮಾಡಲಿಂಗ್ ಜೀವನ ವೈದ್ಯಕೀಯ ವಿದ್ಯಾರ್ಥಿಯಾದ ಮಧ್ಯಭಾಗದಲ್ಲೇ ಆರಂಭವಾಯಿತು. ನಾನು ಇದನ್ನು ಆಯ್ಕೆ ಮಾಡುವಾಗ ತುಂಬಾ ಗೊಂದಲದಲ್ಲಿ ಇದ್ದೆ. ಆ ಸಮಯದಲ್ಲಿ ನಾನು ಓದು ಮತ್ತು ಮಾಡಲಿಂಗ್ ಎರಡನ್ನು ಬ್ಯಾಲೆನ್ಸ್ ಮಾಡಲು ನಿರ್ಧಾರ ಮಾಡಿದೆ ಎಂದು ಭಾಷಾ ಮುಖರ್ಜಿ ಹೇಳಿದ್ದಾರೆ.

    ಭಾರತದಲ್ಲಿ ಜನಿಸಿದ ಭಾಷಾ ಮುಖರ್ಜಿ, 9ನೇ ವರ್ಷದ ಹುಡುಗಿಯಾಗಿದ್ದಾಗ ಅವರ ಕುಟುಂಬ ಇಂಗ್ಲೆಂಡ್‍ಗೆ ಶಿಫ್ಟ್ ಆಗಿತ್ತು. ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಭಾಷಾ ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಔಷಧ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮಿಸ್ ಇಂಗ್ಲೆಂಡ್ ವಿಜೇತರಾಗಿರುವ ಮುಖರ್ಜಿ ಮಿಸ್ ವರ್ಲ್ಡ್ ಸ್ಪರ್ಧೆಗೆ ಪ್ರವೇಶ ಪಡೆದಿದ್ದಾರೆ.

  • ವೈದ್ಯರ ಎಡವಟ್ಟು – ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

    ವೈದ್ಯರ ಎಡವಟ್ಟು – ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

    ಕಾರವಾರ: ವೈದ್ಯರ ಎಡವಟ್ಟಿನಿಂದ ಚಿಕಿತ್ಸೆ ನಿರತ ರೋಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಮಾರಿಕಾಂಬಾ ಆಸ್ಪತ್ರೆಯಲ್ಲಿ ನಡೆದಿದೆ.

    ಶಿರಸಿ ತಾಲೂಕಿನ ಉಂಚಳ್ಳಿ ಮೂಲದ ಸಂತೋಷ್ ನಾಯ್ಕ (28) ಸಾವು ಕಂಡ ಯುವಕನಾಗಿದ್ದು, ಬೈಕ್ ಅಪಘಾತವಾದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ತಲೆಗೆ ಪೆಟ್ಟು ಬಿದ್ದ ಕಾರಣ ನಿನ್ನೆ ದಿನ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಇಂದು ನೋವು ನಿವಾರಕ ಇಂಜೆಕ್ಷನ್ ನೀಡಿದ ಕೆಲವೇ ನಿಮಿಷದಲ್ಲಿ ಯುವಕ ಸಾವನ್ನಪ್ಪಿದ್ದಾನೆ.

    ಇದರಿಂದಾಗಿ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಎದುರು ಸಂಬಂಧಿಕರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಿರಸಿ ನಗರ ಠಾಣೆ ಪೂಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಕಾರವಾರಕ್ಕೆ ಸಾಗಿಸಲಾಗಿದೆ.

  • ಹೊಟ್ಟೆ ನೋವು ಎಂದ ಮಹಿಳೆಗೆ ಕಾಂಡೋಮ್ ಬರೆದು ಕೊಟ್ಟ ವೈದ್ಯ

    ಹೊಟ್ಟೆ ನೋವು ಎಂದ ಮಹಿಳೆಗೆ ಕಾಂಡೋಮ್ ಬರೆದು ಕೊಟ್ಟ ವೈದ್ಯ

    ರಾಂಚಿ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಗೆ ವೈದ್ಯ ಕಾಂಡೋಮ್ ಬರೆದು ಕೊಟ್ಟ ಘಟನೆಯೊಂದು ಜಾರ್ಖಂಡಿನ ರಾಂಚಿಯಲ್ಲಿ ನಡೆದಿದೆ.

    ಅಸ್ರಾಫ್ ಕಾಂಡೋಮ್ ಬರೆದು ಕೊಟ್ಟ ವೈದ್ಯ. ಜುಲೈ 23ರಂದು ಮಹಿಳೆ ಹೊಟ್ಟೆ ನೋವು ಎಂದು ರಾಂಚಿಯ ಪಶ್ಚಿಮ ಸಿಂಗ್‍ಬೂಮ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಸ್ರಾಫ್ ಇದೇ ಆಸ್ಪತ್ರೆಯಲ್ಲೇ ಕಾಂಟ್ರ್ಯಾಕ್ಟ್ ವೈದ್ಯನಾಗಿ ಕೆಲಸ ಮಾಡುತ್ತಿದ್ದು, ಮಹಿಳೆಗೆ ಪ್ರಿಸ್ಕ್ರಿಪ್ಷನ್ ಪತ್ರದಲ್ಲಿ (ಔಷಧಿ ಚೀಟಿ) ಕಾಂಡೋಮ್ ಬರೆದುಕೊಟ್ಟಿದ್ದಾನೆ.

    ಮಹಿಳೆ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್ ಪತ್ರವನ್ನು ಮೆಡಿಕಲ್ ಶಾಪ್‍ಗೆ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಇದ್ದ ವ್ಯಕ್ತಿ ಇದು ಮಾತ್ರೆ ಅಲ್ಲ ಕಾಂಡೋಮ್ ಎಂದು ತಿಳಿಸಿದ್ದಾನೆ. ಈ ವಿಷಯ ತಿಳಿದ ತಕ್ಷಣ ಮಹಿಳೆ ಆಸ್ಪತ್ರೆಯ ಹಿರಿಯ ವೈದ್ಯರಿಗೆ ದೂರು ನೀಡಿದ್ದಾರೆ.

    ಜಾರ್ಖಂಡ್ ಮುಕ್ತಿ ಮೋರ್ಚಾ ಶಾಸಕ ಕುನಾಲ್ ಸಾರಂಗಿ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಈಗಾಗಲೇ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಈ ಬಗ್ಗೆ ತನಿಖೆ ಮಾಡಲು ಒಬ್ಬ ಮನೋವೈದ್ಯರೊಂದಿಗೆ ವೈದಕೀಯ ತಂಡವನ್ನು ರಚಿಸಲಾಗಿದ್ದು, ಭಾನುವಾರದಿಂದ ತನಿಖೆ ಶುರುವಾಗಿದೆ.

    ಈ ಬಗ್ಗೆ ಆಸ್ಪತ್ರೆಯ ಉಸ್ತುವಾರಿ ಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಮಹಿಳೆ ದೂರಿನ ಆಧಾರದ ಮೇಲೆ ವೈದ್ಯಕೀಯ ತಂಡವನ್ನು ರಚಿಸಿ ತನಿಖೆ ಶುರುವಾಗಿದೆ ಎಂದು ತಿಳಿಸಿದ್ದರು. ತನಿಖೆ ವೇಳೆ ವೈದ್ಯ ತನ್ನ ಮೇಲೆ ಕೇಳಿಬಂದ ಆರೋಪಗಳನ್ನು ನಿರಾಕರಿಸಿದ್ದಾನೆ.

  • ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳ ಮಗು ಸಾವು

    ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ 6 ತಿಂಗಳು ಮಗು ಸಾವನ್ನಪ್ಪಿರುವ ಘಟನೆ ಪಾಟ್ನಾ- ದೆಹಲಿಯ ಸ್ಪೈಸ್ ಜೆಟ್ ವಿಮಾನದಲ್ಲಿ ನಡೆದಿದೆ.

    ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನು ಚಿಕಿತ್ಸೆಗಾಗಿ ಪಾಟ್ನಾದಿಂದ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಇನ್ನೇನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವುದಕ್ಕೂ ಮುನ್ನ ಮಗು ಮೃತಪಟ್ಟಿದೆ.

    ಸ್ಪೈಸ್ ಜೆಟ್ ವಿಮಾನ-ಎಸ್‍ಜಿ8481 ನಲ್ಲಿ ಈ ಘಟನೆ ನಡೆದಿದ್ದು, ಹೆಣ್ಣು ಮಗು ಮೃತಪಟ್ಟಿರುವ ಕುರಿತು ಮಾಹಿತಿ ಕಲೆ ಹಾಕಿದ್ದೇವೆ ಎಂದು ದೆಹಲಿ ವಿಮಾನ ನಿಲ್ದಾಣದ ಉಪ ಪೊಲೀಸ್ ಆಯುಕ್ತ ಸಂಜಯ್ ಭಟಿಯಾ ತಿಳಿಸಿದ್ದಾರೆ.

    ನಮ್ಮ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವಿಚಾರಣೆ ನಡೆಸಿದ್ದು, ಮೃತಪಟ್ಟ ಮಗು ಬಿಹಾರದ ಬೇಗುಸರಾಯ್ ಪಟ್ಟಣದ್ದಾಗಿದೆ. ಹಲವು ದಿನಗಳಿಂದ ಮಗು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿತ್ತು. ಅಲ್ಲದೆ, ಹೃದಯದಲ್ಲಿ ಸಣ್ಣ ರಂದ್ರ ಇತ್ತು. ಹಿಂದೆಯೂ ದೆಹಲಿಯ ಎಐಐಎಂಎಸ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮತ್ತೊಮ್ಮೆ ಚಿಕಿತ್ಸೆಗಾಗಿ ಮಗುವನ್ನು ದೆಹಲಿಗೆ ಕೊಂಡೊಯ್ಯಲಾಗುತ್ತಿತ್ತು. ಅಲ್ಲದೆ, ಮಗುವಿನ ಜೊತೆಯಲ್ಲೇ ಇದ್ದ ಪೋಷಕರು ಯಾರ ಮೇಲೂ ಆರೋಪ ಹೊರಿಸಿಲ್ಲ ಹಾಗೂ ಅನುಮಾನಿಸಿಲ್ಲ ಎಂದು ಸಂಜಯ್ ಭಟಿಯಾ ತಿಳಿಸಿದ್ದಾರೆ.

    ಸ್ಪೈಸ್ ಜೆಟ್ ಆಡಳಿತ ಮಂಡಳಿ ಈ ಕುರಿತು ಪ್ರತಿಕ್ರಿಯೆ ನೀಡಿ, ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ವೈದ್ಯಕೀಯ ಸೌಲಭ್ಯವಿರುವುದರಿಂದ ಪಾಟ್ನಾ- ದೆಹಲಿ ವಿಮಾನದ ಸಿಬ್ಬಂದಿ ಆದ್ಯತೆ ಮೇರೆಗೆ ಅಲ್ಲಿಯೇ ವಿಮಾನವನ್ನು ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿಯೇ ಇದ್ದ ವೈದ್ಯರೂ ಸಹ ಮಗುವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ, ಆದ್ಯತೆ ಲ್ಯಾಂಡಿಂಗ್‍ಗೆ ಸಹ ಅನುಮೋದನೆ ದೊರೆತಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. ಪೋಷಕರ ಮನವಿ ಮೇರೆಗೆ ವೈದ್ಯಕೀಯ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ಆದರೆ ದುರದೃಷ್ಟವಶಾತ್ ವೈದ್ಯರು ಪರೀಕ್ಷಿಸುವ ಹೊತ್ತಿಗೆ ಮಗು ಮೃತಪಟ್ಟಿತ್ತು ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ. ಪ್ರಯಾಣಕ್ಕೂ ಮುನ್ನ ಪೋಷಕರು ಮಗುವಿನ ಆರೋಗ್ಯದ ಸ್ಥಿತಿಗತಿ ಕುರಿತು ಯಾವುದೇ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗೆ ನೀಡಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  • ಕೊಪ್ಪಳ ಆಸ್ಪತ್ರೆಯಲ್ಲಿ ಹೈಡ್ರಾಮಾ – ಅಂತ್ಯಸಂಸ್ಕಾರಕ್ಕೆ ದೇಹ ಎತ್ತಿದಾಗ ಕಣ್ಣು ತೆರೆದ ರೋಗಿ

    ಕೊಪ್ಪಳ ಆಸ್ಪತ್ರೆಯಲ್ಲಿ ಹೈಡ್ರಾಮಾ – ಅಂತ್ಯಸಂಸ್ಕಾರಕ್ಕೆ ದೇಹ ಎತ್ತಿದಾಗ ಕಣ್ಣು ತೆರೆದ ರೋಗಿ

    ಕೊಪ್ಪಳ: ಅಂತ್ಯಸಂಸ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಮಹಿಳೆ ಕಣ್ಣು ಬಿಟ್ಟ ಘಟನೆಯೊಂದು ಕೊಪ್ಪಳ ನಗರದ ಕೆ.ಎಸ್ ಆಸ್ಪತ್ರೆಯಲ್ಲಿ ನಡೆದಿದೆ.

    28 ವರ್ಷದ ಕವಿತಾ ಮೂಲತಃ ಬಾಗಲಕೋಟೆ ಜಿಲ್ಲೆಯ ಇಲಕಲ್‍ನವರಾಗಿದ್ದು, ಕೊಪ್ಪಳದ ಮಂಜುನಾಥ ಕುಂಬಾರ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಆರು ಮಕ್ಕಳಿದ್ದಾರೆ. ಬಾಗಲಕೋಟೆಯ ಗೋವನಕೊಪ್ಪ ಖಾಸಗಿ ಆಸ್ಪತ್ರೆಯಲ್ಲಿ ಕವಿತಾ ಆರನೇ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಸಂತಾನಹರಣ ಚಿಕಿತ್ಸೆಗೆ ಒಳಗಾದಾಗ ತೀವ್ರ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕೊಪ್ಪಳದ ಕೆ.ಎಸ್ ಆಸ್ಪತ್ರೆ ದಾಖಲಾಗುವಂತೆ ಶಿಫಾರಸ್ಸು ಮಾಡಿದ್ದರು. ಅದರಂತೆ ಕವಿತಾ ಕುಂಬಾರ್ ಜುಲೈ 21ರಂದು ಕೊಪ್ಪಳದ ಕೆ.ಎಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಕವಿತಾ ಕಳೆದ ಮೂರು ದಿನಗಳಿಂದ ಕೆ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ಸೋಮವಾರ ರಾತ್ರಿ 40 ಸಾವಿರ ಬಿಲ್ ಪಾವತಿಸಿಕೊಂಡಿದ್ದು, ಇಲ್ಲಿಯವರೆಗೂ ಒಟ್ಟು 1 ಲಕ್ಷ ಬಿಲ್ ಪಾವತಿಸಿಕೊಂಡಿದ್ದಾರೆ. ಬಿಲ್ ಪಾವತಿಸಿಕೊಂಡ ಬಳಿಕ ಕವಿತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರು ಕವಿತಾ ಮೃತಪಟ್ಟಿದ್ದಾರೆ ಎಂದು ಹೇಳಿದ ನಂತರ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿಕೊಂಡಿದ್ದರು. ಸಂಬಂಧಿಕರು ಇಂದು ಬೆಳಗ್ಗೆ ಮೃತದೇಹ ತೆಗೆದುಕೊಂಡು ಹೋಗಲು ದೇಹ ಎತ್ತಿಕೊಳ್ಳುತ್ತಿದ್ದಾಗ ಕವಿತಾ ಕಣ್ಣು ತೆರೆದಿದ್ದಾರೆ.

    ಕವಿತಾ ಕಣ್ಣು ತೆರೆದಿದ್ದನ್ನು ನೋಡಿದ ಸಂಬಂಧಿಕರು ದಂಗಾಗಿ ಹೋಗಿದ್ದಾರೆ. ಕವಿತಾ ಬದುಕಿರುವುದನ್ನು ನೋಡಿ ಅಂತ್ಯಸಂಸ್ಕಾರಕ್ಕೆಂದು ಬಂದ ಸಂಬಂಧಿಕರು ಆಸ್ಪತ್ರೆ ಎದುರು ಗಲಾಟೆ ಮಾಡಿದ್ದಾರೆ. ಆಸ್ಪತ್ರೆಗೆ ಪೊಲೀಸರು ದೌಡಾಯಿಸಿ, ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

  • ವೈದ್ಯರ ಸಲಹೆ ಕೇಳಿ ಬೆಂಗ್ಳೂರಿಗೆ ಬರಲು ಕಾಯುತ್ತಿರುವ ಶಿವಣ್ಣ

    ವೈದ್ಯರ ಸಲಹೆ ಕೇಳಿ ಬೆಂಗ್ಳೂರಿಗೆ ಬರಲು ಕಾಯುತ್ತಿರುವ ಶಿವಣ್ಣ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಭುಜದ ನೋವಿಗೆ ಶಸ್ತ್ರಚಿಕಿತ್ಸೆ ಪಡೆಯಲು ಲಂಡನ್‍ಗೆ ಹೋಗಿದ್ದರು. ಈಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವೈದ್ಯರು ಅವರಿಗೆ ಸಲಹೆಯೊಂದನ್ನು ನೀಡಿದ್ದಾರೆ.

    ಶಿವಣ್ಣ ಅವರು ವೈದ್ಯರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ಅಲ್ಲದೆ, ಡಾ. ಆಂಡ್ರ್ಯೂ ವ್ಯಾಲೇಕಾ ಅವರು ಲಂಡನ್‍ನಲ್ಲಿ ನನಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ಇವರು ಯಾವಾಗಲೂ ಪಾಸಿಟಿವ್ ಹಾಗೂ ನಗುತ್ತಿರುತ್ತಾರೆ. ಇನ್ಮುಂದೆ ನಾನು ಹೆಚ್ಚು ಶಕ್ತಿಯುತವಾಗಿ ಹಾಗೂ ಆರಾಮವಾಗಿ ಓಡಾಡಬಹುದು ಹಾಗೂ ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಬೆಂಗಳೂರಿಗೆ ಹಿಂದಿರುಗಿ ಶೂಟಿಂಗ್ ಪ್ರಾರಂಭಿಸಲು ಕಾಯಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಶಿವಣ್ಣ ಅವರು ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಶಸ್ತ್ರ ಚಿಕಿತ್ಸೆಗಾಗಿ ಲಂಡನ್‍ಗೆ ತೆರಳಿದ್ದರು. ಕಳೆದ ಗುರುವಾರ ಅವರ ಶಸ್ತ್ರಚಿಕಿತ್ಸೆ ಯಶ್ವಸಿಯಾಗಿ ನಡೆದಿತ್ತು. ಶಿವಣ್ಣ ಅವರ ಜೊತೆ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಕೂಡ ಲಂಡನ್‍ಗೆ ತೆರಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೂಡ ಲಂಡನ್‍ಗೆ ತೆರಳಿ ಅವರ ಆರೋಗ್ಯವನ್ನು ನೋಡಿಕೊಂಡಿದ್ದಾರೆ.

  • ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ವೈದ್ಯರ ಮೇಲೆ ಹಲ್ಲೆ – ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್ ಬಂದ್

    ಕೊಪ್ಪಳ: ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಕೊಪ್ಪಳದ ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಬಂದ್ ಆಗಲಿದೆ.

    ಗಂಗಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಗೌಸ್ ಮೊಹಿದ್ದೋನ್ (70) ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತಪಟ್ಟ ರೋಗಿಯ ಸಂಬಂಧಿಕರು ವೈದ್ಯ ಡಾ.ಅರ್ಜುನ್ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ಈ ಸಂಬಂಧ ವೈದ್ಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆ ಖಂಡಿಸಿ ಇಂದು ಗಂಗಾವತಿಯ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಗಳನ್ನು ಬಂದ್ ಮಾಡಿ ಸಿಬ್ಬಂದಿ ಪ್ರತಿಭಟಿಸಲಿದ್ದಾರೆ.

  • ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

    ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳ ಕಣ್ಣಿಗೆ ಕುತ್ತು

    – ಮಿಂಟೋ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ
    – ಡ್ರಗ್ ಓವರ್ ರಿಯಾಕ್ಷನಿಂದ ಮೃತಪಟ್ಟಿರಬಹುದು
    – ಈ ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ- ವೈದ್ಯರಿಂದ ಸ್ಪಷ್ಟನೆ

    ಬೆಂಗಳೂರು: ಕಣ್ಣಿನ ಪೊರೆ ಚಿಕಿತ್ಸೆ ಬಳಿಕ 15 ರೋಗಿಗಳು ಕಣ್ಣು ಕಳೆದುಕೊಂಡಿರುವ ಘಟನೆ ನಗರದ ಮಿಂಟೋ ಆಸ್ಪತ್ರೆಯಲ್ಲಿ ನಡೆದಿದೆ.

    ಕಳೆದ ಮಂಗಳವಾರ 25 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿತ್ತು. ಅದರಲ್ಲಿ 15 ಜನರಿಗೆ ಕಣ್ಣು ಕಾಣುತ್ತಿಲ್ಲ, 5 ಮಂದಿಗೆ ಸ್ವಲ್ಪ ಚೇತರಿಕೆ ಕಂಡಿದೆ. ಇದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

    ಡ್ರಗ್ಸ್ ರಿಯಾಕ್ಷನ್‍ನಿಂದ ಈ ದುರ್ಘಟನೆ ಸಂಭವಿಸಿದೆ. ನಮಗೂ ಇದಕ್ಕೂ ಸಂಬಂಧವಿಲ್ಲ, ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಇತ್ತ ರೋಗಿಗಳ ಸಂಬಂಧಿಕರು ಆಸ್ಪತ್ರೆ ಮುಂದೆ ಗೋಗರೆಯುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ರೋಗಿಗಳು ಪ್ರತಿಭಟಿಸುತ್ತಾರೆ ಎಂಬುದನ್ನು ಮನಗಂಡು ರೋಗಿಗಳನ್ನು ಮನೆಗೆ ಹೊರಡಿ ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಒಟ್ಟು 25 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಎಲ್ಲರ ಬಳಿಯೂ ವೈದ್ಯರು 8 ಸಾವಿರ ರೂ. ಹಣ ಪಡೆದಿದ್ದರು. ಗೋಳಾಡುತ್ತಿರುವ ರೋಗಿಗಳಿಗೆ ಡ್ರಗ್ ರಿಯಾಕ್ಷನ್ ಆಗಿದೆ ಎಂಬುದನ್ನು ಹೊರತು ಪಡಿಸಿದರೆ, ಕಣ್ಣು ಸರಿ ಹೋಗುವ ಕುರಿತು ವೈದ್ಯರು ಭರವಸೆ ನೀಡುತ್ತಿಲ್ಲ. ಶಸ್ತ್ರಚಿಕಿತ್ಸೆಗೆ ನೀವು ಸಹಿ ಹಾಕಿದ್ದೀರ, ಇದಕ್ಕೆ ನಾವು ಕಾರಣರಲ್ಲ ಎಂದು ವೈದ್ಯರು ದೂರುತ್ತಿದ್ದಾರೆ.

    ರೋಗಿಗಳಿಗೆ ನೀಡಲಾದ ಡ್ರಗ್ಸ್ ಪರೀಕ್ಷೆ ಮಾಡಲು ಲ್ಯಾಬ್‍ಗೆ ಕಳುಹಿಸಲಾಗಿದೆ. ಅಲ್ಲದೆ, ಮೇಲಾಧಿಕಾರಿಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

    ಅವಾಂತರದ ಕುರಿತು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತ ರಾಥೋಡ್ ಪ್ರತಿಕ್ರಿಯಿಸಿ, ರೋಗಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾಗ ನಾನು ರಜೆಯಲ್ಲಿದ್ದೆ. ನಮ್ಮ ಸರ್ಜಿಕಲ್ ಟೀಮ್ ಚಿಕಿತ್ಸೆ ನೀಡಿದೆ. ಸೋಮವಾರ 24ಕ್ಕೂ ರೋಗಿಗಳಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆ ರೋಗಿಗಳ ಕಣ್ಣಿನ ಪಟ್ಟಿ ಬಿಚ್ಚಿದಾಗ ರಿಯಾಕ್ಷನ್ ಆಗಿರುವುದು ಕಂಡಬಂದಿದೆ. ಮೇಲ್ನೋಟಕ್ಕೆ ಹೈ ಡ್ರಗ್ ರಿಯಾಕ್ಷನ್‍ನಿಂದ ಅವಾಂತರ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಮಗೆ ಆಪರೇಷನ್ ಮಾಡಲು ಡ್ರಗ್ ಸರ್ಕಾರದಿಂದ ಬರುತ್ತದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದು, ಡ್ರಗ್‍ನ್ನು ವಶಕ್ಕೆ ಪಡೆಯಲಾಗಿದೆ. ಮೆಡಿಸಿನ್‍ಗಳನ್ನೂ ಲ್ಯಾಬ್‍ಗೆ ಕಳುಹಿಸಿದ್ದು, ಇನ್ನು ವರದಿ ಬಂದಿಲ್ಲ. ವರದಿ ಬಂದ ನಂತರ ಮುಂದಿನ ಚಿಕಿತ್ಸೆ ನೀಡುತ್ತೇವೆ. ಒಂದು ವೇಳೆ ಕಣ್ಣು ಬಂದಿಲ್ಲ ಎಂದರೆ ನಾವು ಜವಾಬ್ದಾರರಲ್ಲ. ಇದರಲ್ಲಿ ವೈದ್ಯರ ತಪ್ಪಿಲ್ಲ. ನಾವು ನಮ್ಮ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

  • ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ತಾಯಿಯ ಪ್ರಾರ್ಥನೆಯಿಂದ ಸಾವನ್ನೇ ಜಯಿಸಿದ ಮಗ

    ಅಮರಾವತಿ: ತಾಯಿ ಎಂದರೆ ದೇವರ ರೂಪ ಎಂಬ ಮಾತಿದೆ. ಅದರಂತೆ ತೆಲಂಗಾಣದಲ್ಲಿ ತಾಯಿಯೊಬ್ಬರು ಪವಾಡದ ರೀತಿಯಲ್ಲಿ ಸಾವಿನ ದವಡೆಯಲ್ಲಿದ್ದ ತನ್ನ ಮಗನನ್ನು ಉಳಿಸಿಕೊಂಡಿದ್ದಾರೆ.

    ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಪಿಳ್ಳಲಮರಿ ಎಂಬ ಹಳ್ಳಿಯ ಸಿದ್ದಮ್ಮ, ತನ್ನ 18 ವರ್ಷದ ಮಗ ಗಾಂಧಮ್ ಕಿರಣ್‍ಗೆ ಜೂನ್ 26 ರಂದು ವಾಂತಿ ಮತ್ತು ತೀವ್ರ ಭೇದಿ ಕಾಣಿಸಿಕೊಂಡ ಕಾರಣ ಅವನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಚಿಕಿತ್ಸೆ ಆರಂಭವಾದ ನಂತರ ಕಿರಣ್‍ಗೆ ಡೆಂಗ್ಯೂ ಮತ್ತು ಕಾಮಾಲೆ ರೋಗದ ಜೊತೆಗೆ ಹೆಪಟೈಟಿಸ್ ಬಿ ಇರುವುದು ಕಂಡು ಬಂದಿದೆ. ನಂತರ ಅಲ್ಲಿನ ಸರ್ಕಾರಿ ವೈದ್ಯರು ಕಿರಣ್ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಹೈದರಾಬಾದಿನ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

    ವೈದ್ಯರು ಹೇಳಿದಂತೆ ಮಗನನ್ನು ಕಿರಣ್ ತಾಯಿ ಹೈದರಾಬಾದಿಗೆ ಕರೆದುಕೊಂಡು ಹೋಗಿ ಅಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಯೂ ಅವರ ಮಗನ ಆರೋಗ್ಯದ ಸ್ಥಿತಿ ಸುಧಾರಿಸದೇ ಕೋಮಾಗೆ ಜಾರಿದ್ದ. ನಂತರ ಜುಲೈ 3 ರಂದು ಅಲ್ಲಿನ ವೈದ್ಯರು ನಿಮ್ಮ ಮಗನ ಮೆದುಳು ಕೆಲಸ ಮಾಡುತ್ತಿಲ್ಲ. ಆತ ಬದುಕುವುದಿಲ್ಲ, ನಮ್ಮಿಂದ ಗುಣಪಡಿಸಲು ಸಾಧ್ಯವಿಲ್ಲ. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ತಾಯಿ ಸಿದ್ದಮ್ಮನಿಗೆ ಹೇಳಿದ್ದಾರೆ.

    ಇದರಿಂದ ನೊಂದ ತಾಯಿ ತನ್ನ ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಮಗನನ್ನು ಕರೆದುಕೊಂಡು ತನ್ನ ಹಳ್ಳಿಗೆ ಬಂದಿದ್ದಾಳೆ. ಆದರೆ ಆಗಲೇ ಕಿರಣ್ ಬದುಕುವುದಿಲ್ಲ ಎಂದು ಗ್ರಾಮಸ್ಥರು ಮತ್ತು ಕುಟುಂಬದವರು ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿದ್ದರು. ಆದರೆ ಭರವಸೆ ಬಿಡದ ಸಿದಮ್ಮ ತನ್ನ ಮಗನನ್ನು ಸಾಯಲು ಬಿಡದೆ ಅವನ ಹಾಸಿಗೆ ಪಕ್ಕದಲ್ಲೇ ಕುಳಿತುಕೊಂಡು ನಿಮಿಷಕ್ಕೆ ಒಂದು ಬಾರಿ ಮಗನನ್ನು ಕರೆಯುತ್ತಲೇ ಇದ್ದಳಂತೆ.

    ಈ ವೇಳೆ ಕಿರಣ್ ನಿಧಾವಾಗಿ ಉಸಿರಾಡುವುದು ಕಂಡು ಬಂದಿದೆ. ಈ ಸಮಯದಲ್ಲಿ ಅಂತ್ಯ ಕ್ರಿಯೆಯನ್ನು ಮುಂದೂಡಿದ ಗ್ರಾಮಸ್ಥರು ಅವನನ್ನು ನೋಡುತ್ತಾ ಕುಳಿತಿದ್ದಾರೆ. ಈ ವೇಳೆ ಕಿರಣ್ ಕಣ್ಣಿನಿಂದ ನೀರು ಬರುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

    ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ರಾಜಾಬಾಬು ರೆಡ್ಡಿ ತಕ್ಷಣ ಕಿರಣ್‍ನ ಸ್ಥಿತಿಯನ್ನು ಅರಿತು ಹೈದರಾಬಾದಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಅ ವೈದ್ಯ ಕಿರಣ್‍ಗೆ ನಾಲ್ಕು ಇಂಜೆಕ್ಷನ್ಸ್ ಕೊಡಲು ಹೇಳಿದ್ದಾರೆ. ನಂತರ ಕಿರಣ್ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಕಿರಣ್ ನಿಧಾನವಾಗಿ ಚೇತರಿಸಿಕೊಂಡಿದ್ದು, ಈಗ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಮತ್ತು ತಾಯಿಯೊಂದಿಗೆ ಮಾತನಾಡುತ್ತಾನೆ ಎಂದು ವೈದ್ಯ ರಾಜಾಬಾಬು ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿದ್ದಮ್ಮ 2005 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮಗನನ್ನು ಉಳಿಸಿಕೊಳ್ಳಲು ಹಲವು ಪ್ರಯತ್ನ ನಡೆಸಿದರು. ವೈದ್ಯರು ಕೈ ಚೆಲ್ಲಿದ ಪರಿಣಾಮ ಕೊನೆಗೆ ಮಗ ಗುಣಮುಖನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ತಾಯಿಯ ಪ್ರಾರ್ಥನೆ ಫಲಪ್ರದವಾಗಿದ್ದು ಮಗ ಸಾವಿನ ದವಡೆಯಿಂದ ಪಾರಾಗಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಬಡ ಗರ್ಭಿಣಿಯರಿಗೆ ಅವಿರತ ಸೇವೆ ಮಾಡ್ತಿದ್ದಾರೆ ಹರಿಹರ ಸರ್ಕಾರಿ ಆಸ್ಪತ್ರೆ ವೈದ್ಯೆ ಸವಿತಾ

    ಬಡ ಗರ್ಭಿಣಿಯರಿಗೆ ಅವಿರತ ಸೇವೆ ಮಾಡ್ತಿದ್ದಾರೆ ಹರಿಹರ ಸರ್ಕಾರಿ ಆಸ್ಪತ್ರೆ ವೈದ್ಯೆ ಸವಿತಾ

    ದಾವಣಗೆರೆ: ಎಲ್ಲದರಲ್ಲೂ ಹಣ ಗಳಿಕೆಯನ್ನೇ ನೋಡುವ ಈ ಕಾಲದಲ್ಲಿ ಜನಸೇವೆ ಮಾಡೋರು ಎಲೆಮರೆ ಕಾಯಿಗಳಂತಿರುತ್ತಾರೆ. ಇದಕ್ಕೆ ಸಾಕ್ಷಿ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯೆ ಸವಿತಾ.

    ಹೌದು. ದಾವಣಗೆರೆಯ ಹರಿಹರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞೆಯಾಗಿರುವ ಸವಿತಾ, ಬಡ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆ ಜೊತೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರತಿದಿನ 100 ರಿಂದ 150 ರೋಗಿಗಳನ್ನು ನೋಡುತ್ತಿದ್ದಾರೆ.

    ಸವಿತಾ ಮೇಡಂ ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಜಿಲ್ಲೆಯಲ್ಲಿಯೇ ಉತ್ತಮ ವೈದ್ಯೆ ಎನ್ನುವ ಹೆಸರು ಪಡೆದಿರುವ ಸವಿತಾ ಅವರು ಒಂದು ದಿನವೂ ಆಸ್ಪತ್ರೆಗೆ ತಡವಾಗಿ ಬಂದಿಲ್ಲ. ರಜೆ ದಿನಗಳಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಸವಿತಾ ಅವರ ಕೈಗುಣ ತುಂಬಾ ಚೆನ್ನಾಗಿದೆ. ಎಷ್ಟೇ ಜನ ಬಂದರೂ ಸಹನೆ ಕಳೆದುಕೊಳ್ಳೋದಿಲ್ಲ ಎಂದು ರೋಗಿಗಳು ಹೊಗಳುತ್ತಾರೆ.

    ದಾವಣಗೆರೆಯವರೇ ಆಗಿರೋ ಸವಿತಾ ಅವರ ಮನೆಯಲ್ಲಿ ಮೂವರು ವೈದ್ಯರಿದ್ದಾರೆ. ಗಂಡ, ಮಾವನ ಜೊತೆ ಸೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ಲಾನ್ ಹೊಂದಿದ್ದೆ. ಆದರೆ ಬಡ ಗರ್ಭಿಣಿಯರಿಗೆ ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದ ಪರಿಸ್ಥಿತಿ ಕಂಡು, ಸರ್ಕಾರಿ ಸೇವೆಗೆ ಬಂದಿದ್ದೇನೆ. ಬಡವರಿಗೆ ಚಿಕಿತ್ಸೆ ನೀಡುತ್ತಾ ಕೈಲಾದ ಸಹಾಯ ಮಾಡುತ್ತಿದ್ದೇನೆ. ಇದರಲ್ಲೇ ಸಂತೋಷ ಪಡೆಯುತ್ತಿದ್ದೇನೆ ಎಂದು ಸವಿತಾ ಹೇಳುತ್ತಾರೆ.

    ಒಟ್ಟಿನಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಹಣ ವಸೂಲಿ ಮಾಡುವ ಕಾಯಕಕ್ಕೆ ಬೆನ್ನು ತಿರುಗಿಸಿ, ಬಡವರ ಸೇವೆಗೆ ನಿಂತಿರುವ ಸವಿತಾ ಅವರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.