Tag: doctor

  • ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಕೋಲಾರ: ತಲೆಗೆ ಗನ್‍ನಿಂದ ಶೂಟ್ ಮಾಡಿಕೊಂಡು ಪ್ರಸಿದ್ಧ ದಂತ ವೈದ್ಯ ಆತ್ಮಹತ್ಯೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡಾನ್ ವೃತ್ತದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಡಾ. ಸಲ್ಡಾನ್ (55) ಆತ್ಮಹತ್ಯೆಗೆ ಯತ್ನಿಸಿದ್ದ ದಂತ ವೈದ್ಯ. ಸಲ್ಡಾನ್ ಸೋಮವಾರ ಸಂಜೆ 7.30 ಗಂಟೆ ಸುಮಾರಿಗೆ ಸಲ್ಡಾನ್ ವೃತ್ತದಲ್ಲಿರುವ ಅವರ ಕ್ಲಿನಿಕ್‍ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಗನ್‍ನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರ ಕುಟುಂಬದ ಸದಸ್ಯರು ಮತ್ತು ಖಾಸಗಿ ವೈದ್ಯರು ಅವರನ್ನು ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಮ್‍ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಮ್ಮ ಮಗ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎಂದು ಗಾಯಾಳು ವೈದ್ಯರ ತಂದೆ ಡಾ.ಕಾರ್ಲಟಸನ್ ಸಲ್ಡಾನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ರಾಬರ್ಟಸನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಡಾ. ಸಲ್ಡಾನ್ ಅವರು ಯಾಕೆ ಆತ್ಮಹತ್ಯೆಗೆ ಯತ್ನಿಸಿದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  • ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಸೈನಿಕರ ಮೇಲೆ ಅಭಿಮಾನ – ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದ ವೈದ್ಯ

    ಕಾರವಾರ: ಭಾರತೀಯ ಸೈನಿಕರ ಮೇಲೆ ಅಭಿಮಾನ ಮತ್ತು ಪ್ರೀತಿಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ವೈದ್ಯರೊಬ್ಬರು ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ಗಮನ ಸೆಳೆದಿದ್ದಾರೆ.

    ಸಿದ್ದಾಪುರ ತಾಲೂಕಿನ ಅತ್ತಿಗಾರ ಜಡ್ಡಿ ಗ್ರಾಮದ ಯುವ ವೈದ್ಯ ಡಾ.ಹರ್ಷವರ್ಧನ್ ನಾರಾಯಣ ನಾಯ್ಕ ಸೈನಿಕರ ಅಭಿಮಾನದಿಂದ ಸಾಧನೆ ಮಾಡಿದ್ದಾರೆ. ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ 3,715 ಕಿಲೋಮೀಟರ್ ದೂರವನ್ನು ಕೇವಲ 19 ದಿನ 5  ಗಂಟೆ ಒಳಗೆ ಕ್ರಮಿಸಿ ಸಾಧನೆ ಮಾಡಿದ್ದಾರೆ.

    ನವೆಂಬರ್ 14 ರಂದು ಶ್ರೀನಗರದಿಂದ ಸೈಕಲ್ ತುಳಿಯಲು ಪ್ರಾರಂಭಿಸಿದ ವೈದ್ಯ ಪ್ರತಿ ದಿನ 200 ಕಿ.ಮೀ. ಸೈಕಲ್ ತುಳಿದು ಶ್ರೀನಗರ, ಅಮೃತಸರ, ಕಿಶನ್ ಗಡ, ಶಿರಡಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ಹೊಸೂರು, ಧರ್ಮಾಪುರಿ, ಮಧುರೈ ಮೂಲಕ ಕನ್ಯಾಕುಮಾರಿ ತಲುಪಿ ಇಂದು ಕರ್ನಾಟಕಕ್ಕೆ ಮರಳಿದ್ದಾರೆ.

    ಮೂಲತಃ ಸಿದ್ದಾಪುರದವರಾದ ಇವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಬೆಂಗಳೂರಿನ ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತಿದ್ದರು. ಚಿಕ್ಕ ವಯಸ್ಸಿನಲ್ಲೇ ಸೈನಿಕರ ಮೇಲೆ ಪ್ರೀತಿ ಹೊಂದಿದ್ದ ಇವರ ಕುಟುಂದಲ್ಲಿ ಅಣ್ಣ, ಬಾವ ಸೇರಿದಂತೆ ಬಹುತೇಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರಣಾಂತರದಿಂದಾಗಿ ಇವರು ಸೈನ್ಯಕ್ಕೆ ಸೇರುವ ಅವಕಾಶ ತಪ್ಪಿದ ಕಾರಣ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.

    ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಿಂದ ಸ್ಫೂರ್ತಿ ಪಡೆದು ಜನರಲ್ಲಿ ಸೈನ್ಯದ ಬಗ್ಗೆ ಅರಿವು ಸೈನ್ಯಕ್ಕೆ ಸೇರಲು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸೆಲ್ಯುಟ್ ಫಾರ್ ಅವರ್ ಸೋಲ್ಜರ್ಸ್ ಎಂಬ ಹೆಸರಿನ ಮೂಲಕ ಸೈಕಲ್ ಯಾತ್ರೆ ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಈ ಕೆಲಸಕ್ಕೆ ಕೈ ಹಾಕಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.

    ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯುವಕರಲ್ಲಿ ಸ್ಪೂರ್ತಿ ಹಾಗೂ ಸೈನ್ಯಕ್ಕೆ ಸೇರುವಂತೆ ಜಾಗೃತಿ ಮೂಡಿಸಿದ್ದೇನೆ. ಭಾರತೀಯ ಸೈನಿಕರ ಮೇಲೆ ನಮ್ಮ ದೇಶದಲ್ಲಿ ಅಪಾರ ಪ್ರೀತಿ ಹೊಂದಿರುವ ಜನ ನಾನು ಬಂದಾಗ ಸೆಲ್ಯೂಟ್ ಮಾಡಬೇಕು ಎಂಬ ಆಸೆ ನನ್ನದು. ಈ ಯಾತ್ರೆ ನಂತರವೂ ಸೈನ್ಯಕ್ಕೆ ಯುವಕರು ಸೇರುವಂತೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.

  • ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ಬಾಲಕಿ ಮೂಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊಂಬೆಯ ಶೂ ತೆಗೆಯಲು 2.12 ಲಕ್ಷ ರೂ. ಬಿಲ್

    ವಾಷಿಂಗ್ಟನ್: ಮಗುವಿನ ಮೂಗಿನಲ್ಲಿ ಸಿಕ್ಕಿಕೊಂಡ ಗೊಂಬೆಯ ಶೂ ತೆಗೆಯಲು ವೈದ್ಯರೊಬ್ಬರು 3,000 ಡಾಲರ್(2.13 ಲಕ್ಷ ರೂ.) ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಲಾಸ್ ವೆಗಾಸ್‍ನಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಮೂಗಿನಲ್ಲಿ ಸಿಕ್ಕಿಹಾಕಿಕೊಂಡ ಶೂ ತೆಗೆಸಲು ಲೂಸಿ ಬ್ರಾನ್ಸನ್‍ಳ ತಾಯಿ ಕ್ಯಾಟಿ ಹೆಂಡರ್ಸನ್‍ನಲ್ಲಿರುವ ಸೇಂಟ್ ರೋಸ್ ಡೊಮಿನಿಕೇನ್ ಸೈನಾ ಕ್ಯಾಂಪಸ್‍ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ದಿದ್ದಾರೆ.

    3 ವರ್ಷದ ಮಗು ಲೂಸಿ ಬ್ರಾನ್ಸನ್‍ಳ ಮೂಗಿನ ಎರಡೂ ಹೊಳ್ಳೆಯಲ್ಲಿ ಗೊಂಬೆಯ ಕಾಲಿನ ಶೂಗಳು ಸಿಕ್ಕಿ ಹಾಕಿಕೊಂಡಿತ್ತು. ಒಂದು ಶೂವನ್ನು ತೆಗೆಯಲು ತಾಯಿ ಕ್ಯಾಟಿ ಯಶಸ್ವಿಯಾಗಿದ್ದಾರೆ. ಆದರೆ ಇನ್ನೊಂದು ಶೂವನ್ನು ತೆಗೆಯುವಲ್ಲಿ ವಿಫಲರಾಗಿದ್ದಾರೆ. ನಂತರ ಮಗುವನ್ನು ಡಿಗ್ನಿಟಿ ಹೆಲ್ತ್ ಸೆಂಟರ್‍ಗೆ ಕರೆದೊಯ್ದಿದ್ದಾರೆ. ವೈದ್ಯರು ಶೂ ತೆಗೆದಿದ್ದು ಇಷ್ಟಕ್ಕೇ 2.13 ಲಕ್ಷ ರೂ. ಬಿಲ್ ಮಾಡಿದ್ದಾರೆ. ತನ್ನ ಇಮೇಲ್‍ನಲ್ಲಿ ಇಷ್ಟು ಮೊತ್ತದ ಬಿಲ್ ನೋಡಿದ ಮಗುವಿನ ತಾಯಿ ಕ್ಯಾಟಿ ಶಾಕ್ ಆಗಿದ್ದಾರೆ.

    ಬಿಲ್ ನೋಡಿದ ನಂತರ ನನಗೆ ಇದು ತಪ್ಪು ಎನ್ನುವುದು ತಿಳಿಯಿತು. ಬಹುಶಃ ಇವರು ಇನ್ಶೂರೆನ್ಸ್ ದರವನ್ನು ಸರಿಯಾಗಿ ಪರಿಗಣಿಸಿಲ್ಲದಿರಬಹುದು, ಇಲ್ಲವೇ ತಪ್ಪಾಗಿ ಬಿಲ್ ನೀಡಿರಬಹುದು ಎಂದು ಭಾವಿಸಿದೆ. ನಂತರ ತಪ್ಪಾಗಿ ಬಿಲ್ ನೀಡಲಾಗಿಲ್ಲ ಎನ್ನುವುದು ತಿಳಿಯಿತು ಎಂದು ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.

    ನಂತರ ಅವರು ಹೈ ಡಿಟೆಕ್ಟೆಬಲ್ ಮೆಡಿಕಲ್ ಪಾಲಿಸಿ ಪ್ರಕಾರ ಬಿಲ್ ಕಡಿಮೆ ಮಾಡಿಸಿ 1.21 ಲಕ್ಷ ರೂ. ಕಟ್ಟಿ ಬಂದಿದ್ದಾರೆ.

    ಜುಲೈನಲ್ಲಿ ನಟ ರಾಹುಲ್ ಭೋಸ್ ಚಂಢೀಗಡದ ಖಾಸಗಿ ಹೋಟೆಲ್‍ನಲ್ಲಿ ಬಾಳೆಹಣ್ಣು ಖರೀದಿಸಿದಾಗ ಅವರಿಗೆ 442.50 ರೂ. ಬಿಲ್ ನೀಡಲಾಗಿತ್ತು. ಈ ವಿಡಿಯೋವನ್ನು ಭೋಸ್ ಅವರು ಸಾಮಾಜಿಕ ಜಾಲvತಾಣಗಳಲ್ಲಿ ಹಾಕಿದ್ದರು. ಈ ಕುರಿತು ಸಾಕಷ್ಟು ಚರ್ಚೆಯಾಗಿತ್ತು.

  • ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ಕೀವ್: ತೊಟ್ಟಿಲಲ್ಲಿ ಮಲಗಿದ್ದ 9 ತಿಂಗಳ ಕಂದಮ್ಮನ ಮುಖದ ಮೇಲೆ ಮನೆಯಲ್ಲಿ ಸಾಕಿದ್ದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮಗು ಸಾವನ್ನಪ್ಪಿದ ಘಟನೆ ಉಕ್ರೇನ್‍ನಲ್ಲಿ ನಡೆದಿದೆ.

    ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳದಿದ್ದರೆ ಯಾವ ರೀತಿಯಲ್ಲಾದರೂ ಅಪಾಯ ಬರಬಹುದು. ಉಕ್ರೇನ್‍ನಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಬೆಕ್ಕು ಕುಳಿತ ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. 9 ತಿಂಗಳ ಅಲೆಗ್ಸಾಂಡ್ರಾ ಮನೆಯೊಳಗೆ ತೊಟ್ಟಿಲಲ್ಲಿ ಮಲಗಿತ್ತು. ಮಗುವಿನ ತಾಯಿ ಸ್ನೇಝಾನಾ(22) ಮನೆಯ ಕೆಲಸಗಳನ್ನು ಮುಗಿಸಿ, ಮಗುವನ್ನು ತೊಟ್ಟಿಲ್ಲಲ್ಲಿ ಮಲಗಿಸಿ ಮನೆ ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದರು. ಮಗು ಮಲಗಿದೆ ಎಂದು ತಾಯಿ ತನ್ನ ಕೆಲಸಗಳನ್ನು ಮಾಡುತ್ತಿದ್ದರು. ಈ ವೇಳೆ ತೊಟ್ಟಿಲಿನಲ್ಲಿ ಎರಡು ಬೆಕ್ಕುಗಳು ಹತ್ತಿ, ಮಗುವಿನ ಮುಖದ ಮೇಲೆ ಕುಳಿತಿತ್ತು. ಕೆಲ ಸಮಯದ ನಂತರ ಕೆಲಸ ಮುಗಿಸಿಕೊಂಡು ತಾಯಿ ಮನೆ ಒಳಗೆ ಬಂದಾಗ ಮಗುವಿನ ತೊಟ್ಟಿಲಿನಲ್ಲಿ ಬೆಕ್ಕು ಕುಳಿತಿರುವುದು ನೋಡಿದ್ದಾರೆ. ತಕ್ಷಣ ಬೆಕ್ಕನ್ನು ಓಡಿಸಿ, ಮಗುವನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ.

    ಆದರೆ ಮಗು ಉಸಿರಾಡುತ್ತಿರಲಿಲ್ಲ ಎಂದು ಅರಿತು ಆತಂಕಗೊಂಡು ತಾಯಿ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಸಿಬ್ಬಂದಿ ಮನೆಗೆ ಬಂದು ಚಿಕಿತ್ಸೆ ನೋಡಿ ಸುಮಾರು 40 ನಿಮಿಷಗಳ ಕಾಲ ಮಗು ಮರು ಉಸಿರಾಟ ಮಾಡುವಂತೆ ಪ್ರಯತ್ನಿಸಿದರು. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಅಷ್ಟೊತ್ತಿಗೆ ಪುಟ್ಟ ಜೀವ ಪ್ರಾಣ ಬಿಟ್ಟಿತ್ತು. ಮಗುವಿನ ಮುಖದ ಮೇಲೆ ಬೆಕ್ಕು ಕುಳಿತಿದ್ದಕ್ಕೆ ಉಸಿರುಗಟ್ಟಿ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿ ಸಾಕಿದ್ದ ಬೆಕ್ಕುಗಳಿಂದ ಮಗು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆ ಕೂಡ ನಡೆದಿತ್ತು. 2000 ಡಿಸೆಂಬರ್ ನಲ್ಲಿ ಕಿಂಗ್‍ಸ್ಟೈಟ್‍ಗಾನ್ ಪ್ರದೇಶದಲ್ಲಿ ಆರು ವಾರಗಳ ಮಗು ಮಲಗಿದ್ದಾಗ ಅದರ ಮೇಲೆ ಬೆಕ್ಕು ಕುಳಿತ ಪರಿಣಾಮ ಮಗು ಮೃತಪಟ್ಟಿತ್ತು. ಇದೇ ರೀತಿ ರಷ್ಯಾದ ಜ್ಲಟೋಸ್ಟ್ ನಲ್ಲಿ ಕೂಡ ಒಂದು ತಿಂಗಳ ಕಂದಮ್ಮ ಬೆಕ್ಕಿನಿಂದ ಜೀವ ಕಳೆದುಕೊಂಡಿತ್ತು.

  • ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಲಾಂಗ್ ಹಿಡಿದು, ಡೈಲಾಗ್ ಹೊಡೆದು ಭರ್ಜರಿ ಸ್ಟೆಪ್ಸ್ ಹಾಕಿದ ವೈದ್ಯ

    ಚಿಕ್ಕಮಗಳೂರು: ಗೆರೆ ಎಳೆದಾಯ್ತು, ವೃತ್ತ ಬರೆದಾಯ್ತು, ವೃತ್ತದಲ್ಲಿರೋದೆಲ್ಲಾ ನಂದೇ ಎಂದು ಲಾಂಗ್ ಹಿಡಿದು ಚಿಕ್ಕಮಗಳೂರಿನಲ್ಲಿ ವೈದ್ಯರೊಬ್ಬರು ಭರ್ಜರಿ ಡೈಲಾಗ್ ಹೊಡೆಯುತ್ತಾ ಸ್ಟೆಪ್ಸ್ ಹಾಕಿದ್ದಾರೆ.

    ಜಿಲ್ಲೆಯ ಎನ್.ಆರ್ ಪುರದ ಬಾಳೆಹೊನ್ನೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ರಮೇಶ್ ಲಾಂಗ್ ಹಿಡಿದು ಕುಣಿದಿದ್ದಾರೆ. ಶೃಂಗೇರಿಯ ರೋಟರಿ ಕ್ಲಬ್‍ನಲ್ಲಿ ನಡೆದ ಕಲಾ ವೈಭವ ಕಾರ್ಯಕ್ರಮದಲ್ಲಿ ಲಾಂಗ್ ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ. ಕನ್ನಡದ ‘ಉಗ್ರಂ’ ಚಿತ್ರದ ಡೈಲಾಗ್ ಹೊಡೆದು ವೈದ್ಯ ನಟನೆ ಮಾಡಿದ್ದಾರೆ. ಹಾಗೆಯೇ ‘ವಿಲನ್’ ಚಿತ್ರದ ಅಣ್ಣಾ ನಿನ್ನ ಊರು ಹಾಡಿಗೂ ಭರ್ಜರಿ ಹೆಜ್ಜೆ ಹಾಕಿದ್ದಾರೆ.

    ಲಾಂಗ್ ಹಿಡಿದು ಕುಣಿದ ವೈದ್ಯನ ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಈ ವೇಳೆ ಚಪ್ಪಾಳೆ, ಶಿಲ್ಲೆ ಹೊಡೆದು ನೆರೆದಿದ್ದ ಜನರು ವೈದ್ಯನಿಗೆ ಸಾಥ್ ನೀಡಿದ್ದು, ಲಾಂಗಿನೊಂದಿಗೆ ವೈದ್ಯನ ಕುಣಿತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

  • ಸಂಬಳ ಆಗಿಲ್ಲ, ಜನ್ರು ಕೊಟ್ಟರು ತೊಗೊಂಡೆ- ಲಂಚ ಪಡೆದಿದ್ದನ್ನ ಸಮರ್ಥಿಸಿಕೊಳ್ಳುವ ವೈದ್ಯ

    ಸಂಬಳ ಆಗಿಲ್ಲ, ಜನ್ರು ಕೊಟ್ಟರು ತೊಗೊಂಡೆ- ಲಂಚ ಪಡೆದಿದ್ದನ್ನ ಸಮರ್ಥಿಸಿಕೊಳ್ಳುವ ವೈದ್ಯ

    -ಸಂಬಳ ಆಗದ್ದಕ್ಕೆ ಹಣ ಪಡೆದರಂತೆ ವೈದ್ಯರು

    ತುಮಕೂರು: ವೃದ್ಧೆಯೊಬ್ಬರು ಹಣವಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ವೈದ್ಯರು ಅವರ ಬಳಿ ಲಂಚ ಪಡೆಯುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ರೋಗಿಗಳಿಂದ ಲಂಚ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿವೆ.

    ವಿಡಿಯೋದಲ್ಲಿ ಏನಿದೆ?
    ಡಾಕ್ಟರ್ ಚಿಕಿತ್ಸೆ ನೀಡುವಾಗ ವ್ಯಕ್ತಿಯೊಬ್ಬ ಯಾಕೆ ಹಣ ಪಡಿತೀರಿ ಎಂದು ಪ್ರಶ್ನೆ ಮಾಡ್ತಾರೆ. ನೀನು ಹಣ ಕೊಟ್ಟಿದ್ದರೆ ಬಂದು ಕೇಳು ಎಂದು ಅಹಂಕಾರದಿಂದ ಡಾಕ್ಟರ್ ಹೇಳ್ತಾರೆ. ಹೌದು, ನಾನು ಕೊಟ್ಟಿದ್ದೇನೆ ಅಂದಾಗ ವೈದ್ಯ ನಾಗೇಶ್, ಯಾವ ಊರಿನವನು ನೀನು ಎಂದು ಪ್ರಶ್ನೆ ಮಾಡಿದ್ದಾರೆ. ವ್ಯಕ್ತಿ ಇದೇ ಊರಿನವನು ಅಂದಾಗ, ಕಳೆದ 10 ತಿಂಗಳಿನಿಂದ ನನ್ನನು ಸೇರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂಬಳ ಅಗಿಲ್ಲ. ಈ ಬಗ್ಗೆ ಕಳೆದ 5 ತಿಂಗಳಿನಿಂದ ನಮ್ಮ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅದ್ರೂ ಏನು ಪ್ರಯೋಜನ ಅಗಿಲ್ಲ. ಊರಿನಲ್ಲಿ ಜ್ವರ ಹರಡುತ್ತಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರೂ ನಾವು ಜನರಿಗೆ ಚಿಕಿತ್ಸೆ ನೀಡುತ್ತೇವೆ. ಅವರು ಹಣ ಕೊಡುತ್ತಾರೆ ನಾವು ತೆಗೆದುಕೊಳ್ಳುತ್ತೇವೆ ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಡಾಕ್ಟರ್ ನಾಗೇಶ್ ದುಡ್ಡು ಪಡೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

    ವೃದ್ಧೆಯೊಬ್ಬರಿಂದ 50 ರೂ. ಪಡೆದು ಜೇಬಿಗಿಳಿಸಿಕೊಳ್ಳುತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ರೋಗಿಗಳಿಗೆ ಮಾತ್ರೆ, ಗ್ಲೂಕೋಸ್, ಇಂಜೆಕ್ಷನ್ ಸೇರಿದಂತೆ ಇನ್ನಿತರೆ ಯಾವುದೇ ಸೌಲಭ್ಯ ಒದಗಿಸಬೇಕಾದಲ್ಲಿ ವೈದ್ಯರಿಗೆ ರೋಗಿಗಳು ಲಂಚದ ರೂಪದಲ್ಲಿ ಹಣ ನೀಡಬೇಕಾಗಿದೆ.

    ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಲಂಚಾವತಾರದಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ವೃದ್ಧೆಯ ಬಳಿಯೇ ಲಂಚ ಪಡೆದಿರುವುದು ಸ್ಥಳೀಯರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ವರ್ಷದ ಹಿಂದೆ ಮದುವೆಯಾಗಿದ್ದ ಮಾಜಿ ಏಮ್ಸ್ ವೈದ್ಯೆ ಶವವಾಗಿ ಪತ್ತೆ

    ವರ್ಷದ ಹಿಂದೆ ಮದುವೆಯಾಗಿದ್ದ ಮಾಜಿ ಏಮ್ಸ್ ವೈದ್ಯೆ ಶವವಾಗಿ ಪತ್ತೆ

    – ಮಗಳಿಗೆ ಡ್ರಗ್ಸ್ ಸೇವಿಸುವಂತೆ ಒತ್ತಾಯ
    – ತಂದೆಯಿಂದ ವರದಕ್ಷಿಣೆ ಕಿರುಕುಳ ಆರೋಪ

    ನವದೆಹಲಿ: ಮಾಜಿ ಏಮ್ಸ್ ಆಸ್ಪತ್ರೆಯ ವೈದ್ಯೆ ಶವವಾಗಿ ಪತ್ತೆಯಾದ ಘಟನೆ ಗುರುಗ್ರಾಮದ ಅಪಾರ್ಟ್ ಮೆಂಟ್‍ನಲ್ಲಿ ನಡೆದಿದೆ.

    ಶೋನಮ್ ಮೋತಿಸ್ ಮೃತಪಟ್ಟ ವೈದ್ಯೆ. 2017ರಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಗೆ ಸೇರಿದ್ದರು. ಶೋನಮ್‍ಗೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ. ಪೊಲೀಸರು ಶೋನಮ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ರಾಜಸ್ಥಾನ ಮೂಲದ ಕೋಟಾ ನಿವಾಸಿಯಾಗಿರುವ ಶೋನಮ್ ತಂದೆ ಓಂಕಾರ್ ಲಾಲ್ ಮೋತಿಸ್ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಓಂಕಾರ್ ಲಾಲ್, ನನ್ನ ಅಳಿಯ ಶಿಖರ್ ಮೋರ್ ಮಾದಕ ವ್ಯಸನಿಯಾಗಿದ್ದು, ನನ್ನ ಮಗಳ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದನು. ಕಳೆದ ವರ್ಷ ಮೇ 11ರಂದು ಇಬ್ಬರ ಮದುವೆ ನಡೆದಿತ್ತು. ಮದುವೆಯಾದ ಬಳಿಕ ಶಿಖರ್ ಹಾಗೂ ಆತನ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದರು. ಅಲ್ಲದೆ ಶಿಖರ್ ನನ್ನ ಮಗಳಿಗೆ ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದನು ಎಂದು ಆರೋಪಿಸಿದ್ದಾರೆ.

    ಒಂದು ಸಂದರ್ಭದಲ್ಲಿ ಶಿಖರ್ ನನ್ನ ಮಗಳ ಕಾಲನ್ನು ಮುರಿದು ಹಾಕಿದ್ದ. ನಿರಂತರ ಕಿರುಕುಳದಿಂದ ನನ್ನ ಮಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ತಂದೆ ದೂರಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಪವನ್ ಚೌಧರಿ ಪ್ರತಿಕ್ರಿಯಿಸಿ, ಹಲವಾರು ಮಾತ್ರೆಗಳು ಹಾಗೂ ಇಂಜೆಕ್ಷನ್‍ಗಳು ಶೋಹನ್ ದೇಹದ ಬಳಿ ಹರಡಿಕೊಂಡಿವೆ. ಆಕೆ ಹೆಚ್ಚು ಪ್ರಮಾಣದ ಅರಿವಳಿಕೆಗಳನ್ನು ತೆಗೆದುಕೊಂಡಿರಬಬಹುದು ಎಂದು ಹೇಳಿದ್ದಾರೆ.

    ಸಾವಿನ ಹಿಂದಿನ ನಿಜವಾದ ಕಾರಣ ತಿಳಿಯಲು ವೈದ್ಯರು ಸ್ಯಾಂಪಲ್‍ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೋಮವಾರ ಬೆಳಗ್ಗೆ ಪೋಷಕರು ಶೋನಮ್‍ಗೆ ಕರೆ ಮಾಡಿದ್ದಾರೆ. ಆದರೆ ಆಕೆ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಅವರ ತಂದೆ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ನಿಮ್ಮ ಮಗಳು ಬೆಳಗ್ಗೆಯಿಂದ ಮನೆಯಿಂದ ಹೊರ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಆಕೆಯ ಅಪಾರ್ಟ್ ಮೆಂಟ್ ಬಳಿ ಬಂದಾಗ ಮೃತದೇಹ ಪತ್ತೆಯಾಗಿದೆ.

    ಮೃತದೇಹ ಪತ್ತೆ ಆಗುತ್ತಿದ್ದಂತೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದವರೆಗೆ ಶೋನಮ್ ನಮ್ಮ ಜೊತೆ ಕೋಟಾದಲ್ಲಿ ವಾಸಿಸುತ್ತಿದ್ದಳು. ನಂತರ ಆಕೆ ದೆಹಲಿಗೆ ಹೋದಾಗ ಶಿಖರ್ ಆಕೆಯನ್ನು ಸ್ವೀಕರಿಸಲಿಲ್ಲ. ಸೆಪ್ಟೆಂಬರ್ ನಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಗುರುಗ್ರಾಮ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವಳು ಒಂದು ವಾರದಲ್ಲಿಯೇ ಹುದ್ದೆಗೆ ರಾಜೀನಾಮೆ ನೀಡಿ ಗುರುಗ್ರಾಮದಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಂದೆ ಓಂಕಾರ್ ಲಾಲ್ ತಿಳಿಸಿದ್ದಾರೆ.

    ಈ ಬಗ್ಗೆ ಗುರುಗ್ರಾಮದ ಪೊಲೀಸರು ಶುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.

  • ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    – ಇಬ್ಬರಿಗೂ ಕೆಮಿಕಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ರು

    ಜೈಪುರ: ಪತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರನನ್ನು ತಾಯಿ ಮತ್ತು ಪತ್ನಿ ಸಜೀವವಾಗಿ ಸುಟ್ಟ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಭರತ್‍ಪುರದಲ್ಲಿ ಈ ಘಟನೆ ನಡೆದಿದೆ. ದೀಪಾ ದೇವಿ(25) ಮತ್ತು ಸೂರ್ಯ(6) ಮೃತ ದುರ್ದೈವಿಗಳು. ವೈದ್ಯ ಸಂದೀಪ್ ಗುಪ್ತ ತಾಯಿ ಹಾಗೂ ಪತ್ನಿ ಸೀಮಾ ಗುಪ್ತ ಕೊಲೆ ಮಾಡಿದ ಆರೋಪಿಗಳು.

    ವೈದ್ಯ ಸಂದೀಪ್ ಗುಪ್ತ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ದೀಪಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಸಂದೀಪ್ ಹಾಗೂ ದೀಪಾ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೆ ದೀಪಾ ರಿಸೆಪ್ಷನಿಸ್ಟ್ ಕೆಲಸ ಬಿಟ್ಟ ಬಳಿಕ ಆಕೆಗೆ ಸಂದೀಪ್ ಒಂದು ಬ್ಯೂಟಿಪಾರ್ಲರ್ ಹಾಗೂ ಮನೆಯನ್ನು ಕೂಡ ಮಾಡಿಕೊಟ್ಟಿದ್ದನು. ಅವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದನು.

    ಈ ಬಗ್ಗೆ ಪತ್ನಿ ಸೀಮಾಗೆ ವಿಷಯ ತಿಳಿದ ತಕ್ಷಣ ಅತ್ತೆಯ ಬಳಿ ಪತಿಯ ಅಕ್ರಮ ಸಂಬಂಧದ ಗುಟ್ಟು ಬಿಚ್ಚಿಟ್ಟಿದ್ದಾಳೆ. ಮಗನ ಕರ್ಮಕಾಂಡ ಕೇಳಿ ಸಿಟ್ಟಿಗೆದ್ದ ತಾಯಿ ಸೊಸೆ ಜೊತೆ ಸೇರಿ ದೀಪಾಳನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ. ಬುಧವಾರ ದೀಪಾಳ ಮನೆಗೆ ಹೋಗಿ ಆಕೆ ಹಾಗೂ ಸೂರ್ಯ ಮೇಲೆ ಕೆಮಿಕಲ್ ಸ್ಪ್ರೇ ಮಾಡಿ, ಇಬ್ಬರಿಗೂ ಬೆಂಕಿ ಹಚ್ಚಿ ರೂಮ್‍ನಲ್ಲಿ ಕೂಡಿ ಹಾಕಿ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ.

    ಇತ್ತ ತಾಯಿ, ಮಗ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ. ಮೊದಲು ತಾಯಿ, ಮಗ ಸಿಲಿಂಡರ್ ಸ್ಫೋಟ ಅಥವಾ ಬೆಂಕಿ ಅವಘಡದಿಂದ ಸಾವನ್ನಪ್ಪಿದ್ದಾರೆ ಎಂದು ನೆರೆಹೊರೆಯವರು ತಿಳಿದಿದ್ದರು. ಆದರೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡ ಬಳಿಕ ಸತ್ಯಾಂಶ ಹೊರಬಿದ್ದಿದೆ. ದೀಪಾ ಬಗ್ಗೆ ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದಾಗ ವೈದ್ಯನೊಂದಿಗೆ ಆಕೆಯ ಅಕ್ರಮ ಸಂಬಂಧದ ಬಗ್ಗೆ ಬಯಲಾಗಿದೆ.

    ಈ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಸದ್ಯ ಸೀಮಾ ಹಾಗೂ ಸಂದೀಪ್ ತಾಯಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಐರಾಳಂತೆಯೇ ಇದ್ದಾನೆ ಜೂನಿಯರ್ ರಾಕಿಭಾಯ್- ತಾಯಿ, ಮಗು ಆರೋಗ್ಯದ ಬಗ್ಗೆ ವೈದ್ಯೆ ಮಾತು

    ಐರಾಳಂತೆಯೇ ಇದ್ದಾನೆ ಜೂನಿಯರ್ ರಾಕಿಭಾಯ್- ತಾಯಿ, ಮಗು ಆರೋಗ್ಯದ ಬಗ್ಗೆ ವೈದ್ಯೆ ಮಾತು

    ಬೆಂಗಳೂರು: ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಐರಾಳಂತೆಯೇ ಅವರ ಎರಡನೇ ಮಗು ಇದೆ ಎಂದು ನಟಿ ರಾಧಿಕಾ ಪಂಡಿತ್ ಹಾಗೂ ಅವರ ಎರಡನೇ ಮಗುವಿನ ಆರೋಗ್ಯದ ಬಗ್ಗೆ ಡಾಕ್ಟರ್ ಸ್ವರ್ಣಾ ಅವರು ಮಾಹಿತಿ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯೆ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು 3 ಕೆ.ಜಿ ತೂಕವಿದೆ. ಮಗು ಐರಾಳಂತೆಯೇ ಕಾಣುತ್ತಾನೆ. ಹಾಗೆಯೇ ರಾಧಿಕಾ ಅವರ ಮೊದಲ ಹೆರಿಗೆ ಸಿಸೇರಿಯನ್ ಮಾಡಲಾಗಿತ್ತು. ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್ ಎಂದು ತಿಳಿಸಿದರು. ಇದನ್ನೂ ಓದಿ:ಎರಡನೇ ಮಗುವಿಗೆ ತಂದೆ-ತಾಯಿಯಾದ ರಾಕಿಂಗ್ ಜೋಡಿ

    ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ. ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಆಸ್ಪತ್ರೆಗೆ ಬಂದಿದ್ದಾರೆ. ಇನ್ನು ಮೂರು ದಿನಗಳಲ್ಲಿ ರಾಧಿಕಾ ಹಾಗೂ ಮಗುವನ್ನು ಡಿಸ್ಚಾರ್ಜ್ ಮಾಡಲಾಗುತ್ತೆ. ಬಹುಶಃ ಅದೇ ದಿನ ಯಶ್-ರಾಧಿಕಾ ಸುದ್ದಿಗೋಷ್ಠಿ ಮುಖಾಂತರ ಅಭಿಮಾನಿಗಳಿಗೆ ಮಗನ ದರ್ಶನ ಮಾಡಿಸಲಿದ್ದಾರೆ ಎಂದು ಹೇಳಿದರು.

    ರಾಧಿಕಾ ಪಂಡಿತ್ ಇಂದು ಫೋರ್ಟಿಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರ ತಿಳಿದು ಯಶ್, ರಾಧಿಕಾ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಮೊಮ್ಮಗನ ಆಗಮನ ಖುಷಿಯನ್ನು ಯಶ್ ತಾಯಿ ಪುಷ್ಪ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಇಂದು ಬೆಳಗ್ಗೆ ರಾಧಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. 9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕರ್ನಾಟಕದ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ. ಮೊಮ್ಮಗನನ್ನು ನೋಡಿದೆ. ಆತ ಯಶ್‍ನಂತೆಯೇ ಇದ್ದಾನೆ. ಅಮ್ಮ-ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದಿದ್ದರು. ಇದನ್ನೂ ಓದಿ:ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ: ರಾಕಿಂಗ್ ಸ್ಟಾರ್ ತಾಯಿ

    ದೇವರ ಆಶೀರ್ವಾದದಿಂದ ಇಂದು ನಾವು ಖುಷಿಯಾಗಿದ್ದೇವೆ. ನನ್ನ ಸೊಸೆ ಕೂಡ ಆರೋಗ್ಯವಾಗಿದ್ದಾಳೆ. ಕರ್ನಾಟಕದ ಜನತೆ ಇಷ್ಟು ದಿನ ಯಶ್ ಹಾಗೂ ರಾಧಿಕಾಳನ್ನು ಹೇಗೆ ಆಶೀರ್ವಾದ ಮಾಡಿದ್ದಾರೋ, ಹಾಗೆ ನನ್ನ ಮೊಮ್ಮಕ್ಕಳಿಗೂ ಆಶೀರ್ವಾದ ಮಾಡಲಿ ಎಂದು ಹೇಳಿದ್ದರು.

  • ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಚಿತ್ರದುರ್ಗ: ರೋಗಿಗೆ ಔಷಧಿ ನೀಡುವಾಗ ಒಂದು ಡೋಸ್ ಹೆಚ್ಚು ಅಥವಾ ಕಡಿಮೆ ಆದರೂ ರೋಗಿಯ ಜೀವವೇ ಹೋಗಿರೋ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಡಿ ದರ್ಜೆ ಮಹಿಳಾ ನೌಕರರು ಫಾರ್ಮಾಸಿಸ್ಟ್ ಗಳಂತೆ ಔಷಧಿ ವಿತರಿಸುವ ಮೂಲಕ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ.

    ಮೊನ್ನೆ ಮೊನ್ನೆಯಷ್ಟೇ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯಕ್ಕಾಗಿ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಿ ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ವಿವಾದಕ್ಕೆ ತುತ್ತಾಗಿದ್ದರು. ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ರಾಮುಲು ಹೈಟೆಕ್ ವಾಸ್ತವ್ಯವನ್ನು ರದ್ದು ಮಾಡಿದ್ದರು. ಇದೀಗ ಇದೆ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಆಸ್ಪತ್ರೆ ಹೆಚ್ಚು ಕಡಿಮೆ 1000 ಹಾಸಿಗೆಗಳು ಇರುವ ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿ ನಿತ್ಯ ಸಾವಿರಾರು ಬಡ ರೋಗಿಗಳು ಟ್ರೀಟ್‍ಮೆಂಟ್‍ಗೆಂದು ಬರುತ್ತಿದ್ದು, 11 ಮಂದಿ ತಜ್ಞ ವೈದ್ಯರು ಕೂಡ ಇದ್ದಾರೆ. ಉತ್ತಮವಾಗಿ ಟ್ರೀಟ್‍ಮೆಂಟ್ ಕೂಡ ಕೊಡುತ್ತಿದ್ದಾರೆ. ಆದರೆ ಇಲ್ಲಿನ ಔಷಧಿ ವಿತರಣೆ ಕೇಂದ್ರದಲ್ಲಿ ಫಾರ್ಮಸಿಸ್ಟ್ ಇಲ್ಲ. ಇಲ್ಲಿ ರೋಗಿಗಳಿಂದ ಸ್ಲಿಪ್ ಪಡೆದು ಮಾತ್ರೆ ಟಾನಿಕ್ ಕೊಡೋದು ಡಾ.ಕಸ ಗುಡಿಸಮ್ಮ. ಆಶ್ಚರ್ಯ ಅನ್ನಿಸದ್ರೂ ಇದು ಸತ್ಯ. ಡಿ ದರ್ಜೆಯ ನೌಕರರಾಗಿರೋ ಮಹಿಳೆ ಇಲ್ಲಿ ಔಷಧಿ ವಿತರಣೆ ಮಾಡುತ್ತಿದ್ದಾರೆ. ಇದನ್ನು ನೋಡಿ ಬಡ ರೋಗಿಗಳು ಔಷಧಿ ತಗೋಬೇಕೋ ಬೇಡ್ವೋ..? ಏನಾಗುತ್ತೋ ಏನೋ..? ಎಂಬ ಭಯ ಆತಂಕದಲ್ಲಿ ಮುಂದೆ ಸಾಗುತ್ತಾರೆ. ಈ ವಿಚಾರವನ್ನು ಆರೋಗ್ಯ ಸಚಿವರು ಗಮನಿಸಿ ತುರ್ತಾಗಿ ಫಾರ್ಮಸಿಸ್ಟ್ ನೇಮಕ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

    ಆದರೆ ಮಾತ್ರೆ ವಿತರಣೆಗೆ ಕೂತಿರೋ ಮಹಿಳೆಯದ್ದು ಏನೂ ತಪ್ಪಿಲ್ಲ. ಯಾಕಂದರೆ ಈಕೆಯನ್ನು ವೈದ್ಯಾಧಿಕಾರಿಗಳೇ ಇಲ್ಲಿ ಕೂರಿಸಿ ಔಷಧಿ ವಿತರಿಸಮ್ಮ ಅಂತ ಹೇಳಿದ್ದಾರೆ. ಆದರೆ ತಪ್ಪು ಮಾಡಿದೆ ಎಂದು ವೈದ್ಯಾಧಿಕಾರಿ ಬಸವರಾಜ್ ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಾರೆ. ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿ ಜಾರಿಕೊಳ್ಳುತ್ತಾರೆ.