Tag: doctor

  • ಆಸ್ಪತ್ರೆಯಲ್ಲಿ ರೋಗಿ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

    ಆಸ್ಪತ್ರೆಯಲ್ಲಿ ರೋಗಿ ಸಾವು- ವೈದ್ಯರ ನಿರ್ಲಕ್ಷ್ಯ ಆರೋಪ

    ತುಮಕೂರು: ಆಸ್ಪತ್ರೆಯಲ್ಲಿ ರೋಗಿ ಸಾವನಪಿದ್ದರ ಪರಿಣಾಮ ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದ ಸಂಬಂಧಿಕರು ರೊಚ್ಚಿಗೆದ್ದು ಆಸ್ಪತ್ರೆಯ ಕಿಟಕಿ ಗಾಜು ಧ್ವಂಸ ಮಾಡಿದ ಘಟನೆ ನಡೆದಿದೆ.

    ತುಮಕೂರು ನಗರದ ವಿನಾಯಕ ಆಸ್ಪತ್ರೆಯಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಂಡಿಪೇಟೆಯ ನಿವಾಸಿ ಗೌಸ್ ಎಂಬವರು ಅಪ್ಪೆಂಡಿಕ್ಸ್ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಮಾಡುತ್ತೆನೆ ಎಂದಿದ್ದ ವೈದ್ಯರು ಎದೆಭಾಗದಿಂದ ಹೊಟ್ಟೆವರೆಗೆ ಕತ್ತರಿಸಿ ಬಳಿಕ ಕೈ ಚೆಲ್ಲಿದ್ದಾರೆ.

    ಹೊಟ್ಟೆವರೆಗೂ ಕತ್ತರಿಸಿದ ಬಳಿಕ ಬೆಂಗಳೂರಿಗೆ ಹೋಗಿ ಎಂದಿದ್ದಾರೆ. ಬೆಂಗಳೂರಿಗೆ ಹೋಗಲು ಸಿದ್ಧರಾಗುತ್ತಿದ್ದಂತೆ ಗೌಸ್ ಜೀವ ಹೋಗಿದೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಗಾಜನ್ನು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

    ಈ ನಡುವೆ ಆಸ್ಪತ್ರೆ ಸಿಬ್ಬಂದಿಯೊಬ್ಬ ನಮ್ಮದೇನು ತಪ್ಪಿಲ್ಲ ಎಂದು ವಾದ ಮಾಡಲು ಬಂದಿದ್ದಾನೆ. ಆಗ ರೋಗಿಯ ಸಂಬಂಧಿಕರು ಆತನನ್ನು ಅಟ್ಟಾಡಿಸಿಕೊಂಡು ಹೋದಾಗ ಪ್ರಾಣ ಭಯದಿಂದ ಆತ ಪೊಲೀಸ್ ಜೀಪ್ ಹತ್ತಿಕೊಂಡು ರಕ್ಷಣೆ ಪಡೆದಿದ್ದಾನೆ.

  • ಬಡ ರೋಗಿಗಳ ಪಾಲಿನ ‘ಮೊಬೈಲ್ ಡಾಕ್ಟರ್’ ನಮ್ಮ ಪಬ್ಲಿಕ್ ಹೀರೋ

    ಬಡ ರೋಗಿಗಳ ಪಾಲಿನ ‘ಮೊಬೈಲ್ ಡಾಕ್ಟರ್’ ನಮ್ಮ ಪಬ್ಲಿಕ್ ಹೀರೋ

    – ಕೈ ತುಂಬಾ ಸಿಗ್ತಿದ್ದ ಸಂಬಳಕ್ಕೆ ಗುಡ್ ಬೈ

    ಬೆಂಗಳೂರು: ಕೈ ತುಂಬ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತೊರೆದು ಬಡ ರೋಗಿಗಳ ಪಾಲಿಗೆ ಮೊಬೈಲ್ ಡಾಕ್ಟರ್ ಆಗಿರುವ ಡಾ.ಸುನಿಲ್ ಕುಮಾರ್ ಹೆಬ್ಬಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಬೆಂಗಳೂರು ಹೊರವಲಯ ಸರ್ಜಾಪುರದ ನಿವಾಸಿಯಾಗಿರುವ ಡಾ.ಸುನಿಲ್ ಕುಮಾರ್ ಮೂಲತ: ವಿಜಯಪುರ ಜಿಲ್ಲೆಯ ಹೆಬ್ಬಿ ಗ್ರಾಮದವರು. ಬಿಜಿಎಸ್ ಆಸ್ಪತ್ರೆಯಲ್ಲಿ ಕೈತುಂಬಾ ಬರೋ ಸಂಬಳ ಬಿಟ್ಟು ಬಡ ರೋಗಿಗಳನ್ನು ಹುಡುಕಿಕೊಂಡು ಹೋಗಿ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಮೊಬೈಲ್ ಡಾಕ್ಟರ್ ಎಂದೇ ಫೇಮಸ್ ಆಗಿದ್ದಾರೆ.

    ಡಾ ಸುನಿಲ್ ಮೊಬೈಲ್ ಡಾಕ್ಟರ್ ಆಗಲು ಕಾರಣವಿದೆ. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದುಡ್ಡಿಲ್ಲದೇ ಕಣ್ಣೀರಿಡುತ್ತಿದ್ದ ಮಹಿಳೆ ಕಂಡು ಸುನಿಲ್ ಮರುಗಿದ್ದರು. ಮತ್ತೊಂದು ದಿನ ಅಪಘಾತದಲ್ಲಿ ಗಾಯಗೊಂಡು ನರಳ್ತಿದ್ದ ಯುವಕನನ್ನ ಅದೇ ದಾರಿಯಲ್ಲಿ ಹೋಗುತ್ತಿದ್ದ ಸುನಿಲ್ ರಕ್ಷಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಅದೇ ದಿನ ಮೊಬೈಲ್ ಡಾಕ್ಟರ್ ಆಗಲು ತೀರ್ಮಾನಿಸಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ವೈದ್ಯ ಸೇವೆಯನ್ನು ಬಡವರಿಗೆ ಮೀಸಲಿಟ್ಟರು.

    ಮಾತೃಸಿರಿ ಫೌಂಡೇಶನ್ ಎಂಬ ಎನ್‍ಜಿಓ ಹುಟ್ಟು ಹಾಕಿ, ಸ್ನೇಹಿತರ ನೆರವು ಪಡೆದು ತಮ್ಮ ಕಾರನ್ನ ಸುಸಜ್ಜಿತ ಕ್ಲಿನಿಕ್ ತರಹ ಮಾರ್ಪಾಡು ಮಾಡಿದ್ದಾರೆ. ಸಾವಿರಾರು ಜನರಿಗೆ ಉಚಿತ ಆರೋಗ್ಯ ಸೇವೆಯನ್ನ ನೀಡ್ತಿದ್ದಾರೆ. ಗೆಳೆಯ ವೈದ್ಯರ ನೆರವಿನಿಂದ 700ಕ್ಕೂ ಹೆಚ್ಚು ಅಧಿಕ ಮೆಡಿಕಲ್ ಕ್ಯಾಂಪ್ ಮಾಡಿದ್ದಾರೆ. ಹುಟ್ಟೂರಲ್ಲಿ ಪೋಷಕರು ಕೃಷಿ ಮಾಡ್ತಿದ್ದು, ಅಲ್ಲಿ ಬರೋ ಆದಾಯ, ತಾವು ನಡೆಸೋ ಮತ್ತೊಂದು ಕ್ಲಿನಿಕ್‍ನಿಂದ ಬರುವ ಆದಾಯವನ್ನು ಸುನಿಲ್ ಇಲ್ಲಿ ವಿನಿಯೋಗಿಸುತ್ತಿದ್ದಾರೆ.

    ಬಡತನದಲ್ಲಿಯೇ ಬೆಳೆದು ಬಂದ ಸುನಿಲ್, ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ. ದುಡ್ಡಿಗಿಂತ ಮಾನವೀಯ ಮೌಲ್ಯಗಳೇ ದೊಡ್ಡದು ಎಂಬುದನ್ನು ಈ ಮೊಬೈಲ್ ಡಾಕ್ಟರ್ ನಿರೂಪಿಸಿದ್ದಾರೆ.

  • ಸುಳ್ಳು ದಾಖಲೆ ನೀಡಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿಕೊಂಡ ಡಾಕ್ಟರ್?

    ಸುಳ್ಳು ದಾಖಲೆ ನೀಡಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿಕೊಂಡ ಡಾಕ್ಟರ್?

    ಹಾಸನ: ಸುಳ್ಳು ದಾಖಲೆ ನೀಡಿ ಹಾಸನ ಮೆಡಿಕಲ್ ಕಾಲೇಜಿನಲ್ಲಿ (ಹಿಮ್ಸ್) ಡಾಕ್ಟರ್ ರವಿಕುಮಾರ್ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿದೆ.

    ಡಾಕ್ಟರ್ ರವೀಂದ್ರ ಸುಳ್ಳು ಸೇವಾನುಭವ ದಾಖಲೆ ಪತ್ರ ನೀಡಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರೊಫೆಸರ್ ಹುದ್ದೆ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಹಾಸನದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ವಕೀಲ ಧರ್ಮೇಂದ್ರ ನೇತೃತ್ವದಲ್ಲಿ ಖಾಸಗಿ ಕೇಸ್ ಹಾಕಲಾಗಿತ್ತು. ಹೀಗಾಗಿ ನ್ಯಾಯಾಲಯ ಡಾಕ್ಟರ್ ರವಿಕುಮಾರ್ ವಿರುದ್ಧ ವಿಚಾರಣೆಗೆ ಆದೇಶ ನೀಡಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಧರ್ಮೇಂದ್ರ, ಸುಳ್ಳು ದಾಖಲೆ ಪತ್ರ ನೀಡಿರುವ ಡಾಕ್ಟರ್ ರವೀಂದ್ರ ವಿರುದ್ಧ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಂಡಿದೆ. ಒಂದು ವೇಳೆ ಆರೋಪ ಸಾಬೀತಾದರೆ ಡಾಕ್ಟರ್ ರವಿಕುಮಾರ್ ತಮ್ಮ ಹುದ್ದೆ ಕಳೆದುಕೊಂಡು, ಏಳು ವರ್ಷದವರೆಗೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

  • ಸಗಣಿ ಬಳಿದ ಕಾರಿನಲ್ಲಿ ಮಗಳನ್ನ ಪತಿಯ ಮನೆಗೆ ಕಳುಹಿಸಿದ ಡಾಕ್ಟರ್

    ಸಗಣಿ ಬಳಿದ ಕಾರಿನಲ್ಲಿ ಮಗಳನ್ನ ಪತಿಯ ಮನೆಗೆ ಕಳುಹಿಸಿದ ಡಾಕ್ಟರ್

    – ಸಂಪೂರ್ಣವಾಗಿ ಸಗಣಿಯಿಂದ ಕಾರು ಶೃಂಗಾರ

    ಮುಂಬೈ: ಸಾಮಾನ್ಯವಾಗಿ ಮದುವೆಯಾದ ಮಗಳನ್ನು ವಿವಿಧ ಹೂಗಳಿಂದ ಅಲಂಕಾರಗೊಂಡ ಕಾರಿನ ಮೂಲಕ ಪತಿಯ ಮನೆಗೆ ಪೋಷಕರು ಕಳುಹಿಸಿಕೊಡುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ತಮ್ಮ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಪತಿಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

    ಮಹಾರಾಷ್ಟ್ರದ ಕೊಲ್ಲಾಪುರದ ವೈದ್ಯ ನವನಾಥ್ ದೂಧಾಲ್ ತನ್ನ ಮಗಳನ್ನು ಸಗಣಿ ಬಳಿದ ಕಾರಿನಲ್ಲಿ ಗಂಡನ ಮನೆಗೆ ಕಳುಹಿಸಿದ್ದಾರೆ. ದೂಧಾಲ್ ಅವರು ತಮ್ಮ ಟೊಯೊಟಾ ಕಾರನ್ನು ಸಂಪೂರ್ಣವಾಗಿ ಹಸುವಿನ ಸಗಣಿಯಿಂದ ವಿಭಿನ್ನವಾಗಿ ಅಲಂಕಾರಗೊಳಿಸಿದ್ದರು. ನಂತರ ಮಗಳನ್ನು ಅದರಲ್ಲಿಯೇ ಪತಿಯ ಮನೆಗೆ ಕಳುಹಿಸಿದ್ದಾರೆ.

    ವೈದ್ಯ ಸಗಣಿಯ ಪ್ರಯೋಜನದ ಬಗ್ಗೆ ಜನರಿಗೆ ತಿಳಿಸುವ ಕಾರಣದಿಂದ ತಮ್ಮ ಟೊಯೊಟಾ ಕಾರನ್ನು ಸಗಣಿಯಿಂದ ಅಲಂಕರಿಸಿದ್ದರು. ಸಗಣಿಯ ಜೊತೆಗೆ ಮೇಲೆ ಹೂಗಳಿಂದ ಕೂಡ ಅಲಂಕಾರ ಮಾಡಲಾಗಿದೆ. ಅಲ್ಲದೇ ಕಾರಿನ ಮೇಲೆ ನವದಂಪತಿ ಫೋಟೋ ಮತ್ತು ಹೆಸರನ್ನು ಕೂಡ ಬರೆಯಲಾಗಿದೆ. ನವದಂಪತಿ ಸಗಣಿ ಬಳಿದ ಕಾರಿನ ಮುಂದೆ ನಿಂತುಕೊಂಡು ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.

    ಮದುವೆಗೆ ಬಂದಿದ್ದವರು ಕಾರನ್ನು ಸಗಣಿಯಿಂದ ಅಲಂಕಾರ ಮಾಡಿರುವುದನ್ನು ನೋಡಿ ಮುಖ ಸಿಂಡರಿಸಿಕೊಂಡಿದ್ದರು. ಆದರೆ ವೈದ್ಯ ಸಗಣಿಯಿಂದ ಹಲವು ಔಷಧಿಯ ಗುಣಗಳಿವೆ. ಮೊದಲಿಗೆ ಸಗಣಿ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ. ಜೊತೆಗೆ ಮನುಷ್ಯನ ದೇಹದಲ್ಲಿರುವ ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಸಗಣಿಗೆ ಇದೆ ಎಂದು ದೂಧಾಲ್‍ರವರು ತಿಳಿಸಿದ್ದಾರೆ.

    ಸಾಮಾನ್ಯವಾಗಿ ವಾತಾವರಣದಲ್ಲಿನ ತಾಪಮಾನ ಹೆಚ್ಚಾಗುತ್ತಿದೆ. ಆದರೆ ದೇಶಿಯ ಹಸುಗಳ ಸಗಣಿಯಿಂದ ತಾಪಮಾನವನ್ನು ಕಡಿಮೆ ಮಾಡಬಹುದು. ಹೀಗಾಗಿ ಕಾರಿನ ಹೊರ ಭಾಗಕ್ಕೆ ಸಗಣಿ ಬಳಿಯುವುದರಿಂದ ಕಾರಿನ ಒಳಭಾಗದಲ್ಲಿ ವಾತಾವರಣವು ತಣ್ಣಗಾಗಲಿದೆ. ಅಷ್ಟೇ ಅಲ್ಲದೇ ಸಗಣಿಯೂ ಕಾರಿನಲ್ಲಿರುವವರನ್ನು ರೇಡಿಯೇಷನ್‍ನಿಂದ ಕಾಪಾಡುತ್ತದೆ. ಕಾರಿಗೆ ಈ ರೀತಿ ಸಗಣಿಯನ್ನು ಮೆತ್ತುವುದರಿಂದ ಕೇವಲ ಮೂರು ಬಕೆಟ್ ನೀರಿನಲ್ಲಿ ಕಾರನ್ನು ತೊಳೆಯಬಹುದು. ಹೀಗಾಗಿ ನೀರನ್ನು ಸಹ ಉಳಿತಾಯ ಮಾಡಬಹುದಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಕಾರಿಗೆ ಇದೇ ಮೊದಲ ಬಾರಿಗೆ ಸಗಣಿ ಬಳಿದಿಲ್ಲ. ಕಳೆದ ವರ್ಷದ ಬೇಸಿಗೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ತಾಪಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನೇಕ ಕಾರುಗಳಿಗೆ ಸಗಣಿಯನ್ನು ಬಳಿಯಲಾಗಿತ್ತು. ಇದರಿಂದ ಕಾರಿನ ಕ್ಯಾಬಿನ್ ತಣ್ಣಗಿರುತ್ತಿತ್ತು. ಇದಕ್ಕೆ ಇದುವರೆಗೂ ಯಾರೂ ವೈಜ್ಞಾನಿಕ ಕಾರಣವನ್ನು ತಿಳಿಸಿಲ್ಲ. ಆದರೆ ವೈದ್ಯ ದೂಧಾಲ್‍ರವರು ಹೇಳಿರುವಂತೆ ಸಗಣಿಯು ರೇಡಿಯೇಷನ್‍ನಿಂದ ಕಾಪಾಡುವುದರ ಬಗ್ಗೆ ಇನ್ನಷ್ಟೇ ಸಾಬೀತಾಗಬೇಕಿದೆ.

  • ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪದಡಿ ಪ್ರತಿಭಟನೆ

    ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪದಡಿ ಪ್ರತಿಭಟನೆ

    ಕೊಪ್ಪಳ: ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಮಹಿಳೆ ವೈದ್ಯರು ನೀಡಿದ ರಾಂಗ್ ಡೋಸ್‍ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದಿದೆ.

    ಮೃತ ಮಹಿಳೆ ಕಂಪ್ಲಿ ನಗರದ ಚಪ್ಪರದಳ್ಳಿಯ ನಿವಾಸಿ ಚಾಂದ್‍ಬೀ (49) ಎಂದು ಗುರುತಿಸಲಾಗಿದೆ. ದೇಹದಲ್ಲಿ ಕುರುವಿನ ಆಕಾರದಲ್ಲಿ ಗಡ್ಡೆ ಇತ್ತು. ಅದನ್ನು ನಿವಾರಿಸುವ ಉದ್ದೇಶಕ್ಕೆ ಮಹಿಳೆ ಇಲ್ಲಿನ ಲಕ್ಷ್ಮಿ ನರ್ಸಿಂಗ್ ಹೊಂ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದ ವೈದ್ಯರು, ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿ ಚುಚ್ಚುಮದ್ದನ್ನು ನೀಡಿದ್ದಾರೆ. ಚುಚ್ಚುಮದ್ದು ನೀಡಿದ ನಂತರ ಮಹಿಳೆಯ ದೇಹದ ಬಣ್ಣ ಬದಲಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ಕುಳಿತವರನ್ನು ಸಮಾಧಾನ ಪಡಿಸಿದ್ದಾರೆ.

    ಈ ಸಂಬಂಧ ಮೃತಳ ಸಂಬಂಧಿಕರು ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

  • ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಕಲೆಕ್ಟರ್

    – ಸಾಮಾಜಿಕ ಜಾಲಾತಣದಲ್ಲಿ  ಭಾರೀ ಮೆಚ್ಚುಗೆ

    ಹೈದರಾಬಾದ್: ಕಲೆಕ್ಟರ್ ಒಬ್ಬರು ಸಾಮಾನ್ಯರಂತೆ ಸೈಕಲ್‍ನಲ್ಲಿ ಬಂದು ಆಸ್ಪತ್ರೆಯ ಸ್ಥಿತಿ ಪರಿಶೀಲಿಸಿದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗುತ್ತಿವೆ.

    ನಿಜಾಮಾಬಾದ್ ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡ 3 ದಿನಗಳ ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಸಾಮಾನ್ಯ ಉಡುಪಿನಲ್ಲಿದ್ದ ಅವರು ತಲೆಗೆ ಬಿಳಿ ಟೋಪಿ ಹಾಕಿಕೊಂಡು, ಸೈಕಲ್‍ನಲ್ಲಿ ಬೆಳಗ್ಗೆ 8 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಬಳಿಕ ಹೊರ ರೋಗಿಗಳ ವಿಭಾಗ (ಒಪಿಡಿ) ಸೇರಿದಂತೆ ಹಲವಾರು ವಾರ್ಡ್‍ಗಳ ರೋಗಿಗಳ ಸಮಸ್ಯೆಯನ್ನು ನಾರಾಯಣ್ ರೆಡ್ಡಿ ಆಲಿಸಿದರು.

    ಆರ್‍ಒ ವಾಟರ್ ಪ್ಲಾಂಟ್‍ಗಳು ಹಾಗೂ ಔಷಧಿ ಅಂಗಡಿಗಳಲ್ಲಿ ಇರುವ ಔಷಧಿಗಳ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. ಕಲೆಕ್ಟರ್ ನಾರಾಯಣ್ ರೆಡ್ಡಿ ಅವರು ಆಸ್ಪತ್ರೆಗೆ ತಲುಪಿದ ಬಗ್ಗೆ ಮಾಹಿತಿ ಪಡೆದ ಸ್ವಲ್ಪ ಸಮಯದ ನಂತರ, ಆಸ್ಪತ್ರೆಯ ಅಧೀಕ್ಷಕ ಡಾ.ರಾಮುಲು ಕೂಡ ಸ್ಥಳಕ್ಕೆ ತಲುಪಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿರುವ ನೌಕರರಿಗೆ ನೋಟಿಸ್ ನೀಡುವಂತೆ ಡಾ.ರಾಮುಲು ಅವರಿಗೆ ನಾರಾಯಣ್ ರೆಡ್ಡಿ ಸೂಚನೆ ನೀಡಿದರು.

    ನಾರಾಯಣ್ ರೆಡ್ಡಿ ಅವರು ಡಿಸೆಂಬರ್ 24ರಂದು ಅಧಿಕಾರ ವಹಿಸಿಕೊಂಡರು. ಬಳಿಕ ಆಸ್ಪತ್ರೆಗೆ ತಲುಪುವ ಮೊದಲು ರಸ್ತೆ ಮತ್ತು ಕಟ್ಟಡ ಇಲಾಖೆಯ ಅತಿಥಿ ಗೃಹದ ಸ್ಥಿತಿಯನ್ನು ಗಮನಿಸಿದ್ದರು.

    ಈ ಆಸ್ಪತ್ರೆ ದೇಶದ ಅತ್ಯುತ್ತಮ ಆಸ್ಪತ್ರೆಗಳಲ್ಲಿ 17 ನೇ ಸ್ಥಾನದಲ್ಲಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಆಸ್ಪತ್ರೆ ಇದಾಗಿದೆ. ಇಲ್ಲಿಗೆ ಪಕ್ಕದ ಎರಡು ಜಿಲ್ಲೆಯ ಜನರು ಸಹ ಚಿಕಿತ್ಸೆಗಾಗಿ ಬರುತ್ತಾರೆ. ಇದನ್ನು ಗಮನಿಸಿದ ನಾರಾಯಣ್ ರೆಡ್ಡಿ ಅವರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡುವಂತೆ ಆದೇಶಿಸಿದ್ದಾರೆ. ಕಲೆಕ್ಟರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಮಯನ್ಮಾರ್ ನಲ್ಲಿ ಮಿಸೆಸ್ ಏಷ್ಯಾ ಕಿರೀಟ ಧರಿಸಿದ ಧಾರವಾಡ ವೈದ್ಯೆ

    ಮಯನ್ಮಾರ್ ನಲ್ಲಿ ಮಿಸೆಸ್ ಏಷ್ಯಾ ಕಿರೀಟ ಧರಿಸಿದ ಧಾರವಾಡ ವೈದ್ಯೆ

    -ಅಷ್ಟಭುಜ ದೇವಿ ಶಕ್ತಿಯ ಸ್ವರೂಪದಲ್ಲಿ ರ‍್ಯಾಂಪ್‌ ವಾಕ್

    ಧಾರವಾಡ: ಮಯನ್ಮಾರ್ ನಲ್ಲಿ ಕ್ಲಾಸಿಕ್ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಧಾರವಾಡದ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕಿ ಆಗಿರುವ ವೈದ್ಯೆಯೊಬ್ಬರು ಗೆಲುವು ಸಾಧಿಸಿದ್ದಾರೆ.

    ಧಾರವಾಡದ ಎಸ್‍ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ ಹಾಗೂ ವೈದ್ಯೆಯೂ ಆಗಿರುವ ಡಾ.ಶಿಲ್ಪಾ ಹಕ್ಕಿ ಈ ಸಾಧನೆ ಮಾಡಿದವರು. ಮಯನ್ಮಾರನಲ್ಲಿ ನಡೆದ ಕ್ಲಾಸಿಕ್ ಮಿಸೆಸ್ ಏಷಿಯಾ ಇಂಟರ್ನ್ಯಾಷನಲ್ 2019 ಸೌಂದರ್ಯ ಸ್ಪರ್ಧೆಯ ಫೈನಲ್‍ನಲ್ಲಿ ಜಪಾನ್ ಮತ್ತು ಥೈಲಾಂಡ್ ದೇಶದ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಇವರು ಗೆಲುವು ಸಾಧಿಸಿ ಟ್ಯಾಲೆಂಟ್ ಕ್ವೀನ್ ಎಂಬ ಕಿರೀಟ ಧರಿಸಿದ್ದಾರೆ.

    ಈ ಸ್ಪರ್ಧೆಯಲ್ಲಿ ಶಿಲ್ಪಾ ಅವರು, ನಮ್ಮ ದೇಶದ ಸಾಂಸ್ಕೃತಿಕತೆ ಕಲೆಯನ್ನೇ ಪ್ರದರ್ಶಿಸುವ ಮೂಲಕ ಏಷ್ಯಾ ಖಂಡ ಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ಅಷ್ಟಭುಜ ದೇವಿ ಶಕ್ತಿಯ ಸ್ವರೂಪದಲ್ಲಿ ರ‍್ಯಾಂಪ್‌ ವಾಕ್ ಮಾಡಿ ವಿಶೇಷ ಗಮನ ಸೆಳೆದಿದ್ದಾರೆ. ಜೊತೆಗೆ ಯಕ್ಷಗಾನದ ಪೋಷಾಕಿನಲ್ಲಿ ಭರತನಾಟ್ಯವನ್ನು ಪಾಶ್ಚಿಮಾತ್ಯ ಸಂಗೀತದಲ್ಲಿ ಪ್ರಸ್ತುತ ಪಡಿಸಿ, ವಿಭಿನ್ನವಾದ ಸಂಯೋಜನೆಯ ಮೂಲಕ ನಿರ್ಣಾಯಕರ ಮನಸೆಳೆದು, ಈ ಸಾಧನೆ ಮಾಡಿದ್ದಾರೆ.

    ಡಾ.ಶಿಲ್ಪಾ ಹಕ್ಕಿ ಮೊದಲು ಮಿಸೆಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ವಿಜೇತರಾಗಿದ್ದರು. ನಂತರ ರಾಷ್ಟ್ರೀಯ ವಿಭಾಗದಲ್ಲಿ ಡ್ಯಾನ್ಸಿಂಗ್ ಕ್ವೀನ್ ಎಂಬ ಕಿರೀಟ ಧರಿಸುವ ಮೂಲಕ ಏಷ್ಯಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದುಕೊಂಡಿದ್ದರು. ಏಷ್ಯಾ ಮಟ್ಟದಲ್ಲಿ ಭಾರತಕ್ಕೆ ಮಾತ್ರವಲ್ಲ ಧಾರವಾಡಕ್ಕೂ ಕೀರ್ತಿ ಬರುವಂತಹ ಕಾರ್ಯ ಮಾಡಿದ್ದು, ಇದು ನಮಗೆ ಹೆಮ್ಮೆಯ ವಿಷಯ ಎನ್ನುತ್ತಿದ್ದಾರೆ ಇವರ ಹಿತೈಷಿಗಳು.

  • ವೈದ್ಯರ ಒಂದು ಇಂಜೆಕ್ಷನ್‍ಗೆ ಯುವಕ ಬಲಿ: ಪೋಷಕರ ಆರೋಪ

    ವೈದ್ಯರ ಒಂದು ಇಂಜೆಕ್ಷನ್‍ಗೆ ಯುವಕ ಬಲಿ: ಪೋಷಕರ ಆರೋಪ

    ದಾವಣಗೆರೆ: ನಾಲ್ಕು ದಿನದ ಹಿಂದೆ ಜ್ವರ ಬಂದಿದೆ ಎಂಬ ಕಾರಣಕ್ಕೆ ವೈದ್ಯರ ಬಳಿ ಇಂಜೆಕ್ಷನ್‍ ಮಾಡಿಸಿಕೊಂಡಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ತಾಲೂಕು ಹಳೇ ಕುಂದುವಾಡ ಗ್ರಾಮ ಪ್ರವೀಣ್ ಮೃತ ಯುವಕ. ಪ್ರವೀಣ್‍ಗೆ ಕಳೆದ ಮೂರು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಗ್ರಾಮದಲ್ಲಿದ್ದ ಆಯುಷ್ ಆಯುರ್ವೇದ ವೈದ್ಯಾಧಿಕಾರಿ ಡಾ.ಶಿವಲಿಂಗ ರುದ್ರಪ್ಪ ಜವಳಿ ಅವರ ಕ್ಲಿನಿಕ್‍ಗೆ ಹೋಗಿ ಇಂಜೆಕ್ಷನ್‍ ಮಾಡಿಸಿಕೊಂಡು ಬಂದಿದ್ದ.

    ಇಂಜೆಕ್ಷನ್‍ ಮಾಡಿಸಿಕೊಂಡ ಕೇವಲ ಎರಡು ಗಂಟೆಗೆ ಪ್ರವೀಣ್ ಕೈ ಕಾಲು, ದೇಹ ಊದಿಕೊಳ್ಳಲು ಆರಂಭಿಸಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ಪ್ರವೀಣ್‍ನನ್ನು ಡಾ. ಶಿವಲಿಂಗ ಅವರ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯ ಶಿವಲಿಂಗ ಅವರು ಇದನ್ನು ಯಾರಿಗೂ ಹೇಳಬೇಡಿ ಎಂದು ಹೇಳಿ, ಪ್ರವೀಣ್‍ನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ಮೃತಪಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಾವಿಗೆ ವೈದ್ಯ ಶಿವಲಿಂಗ ಅವರೇ ನೇರ ಕಾರಣ ಎಂದು ಪ್ರವೀಣ್ ಪೋಷಕರು ಆರೋಪಿಸಿದ್ದಾರೆ.

    ವೈದ್ಯ ಶಿವಲಿಂಗ ಜವಳಿ ಮೂರು ವರ್ಷದ ಹಿಂದೆ ಹಳೇ ಕುಂದುವಾಡ ಗ್ರಾಮದಲ್ಲಿ ಕ್ಲಿನಿಕ್ ಪ್ರಾರಂಭಿಸಿದ್ದರು. ಇಲ್ಲಿ ಚಿಕಿತ್ಸೆ ಪಡೆದ ಅನೇಕರು ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಯಾರೊಬ್ಬರೂ ವೈದ್ಯರ ಬಳಿ ಯಾವುದೇ ಪ್ರಶ್ನೆ ಮಾಡದೆ ಸುಮ್ಮನಿದ್ದರು. ಆದರೆ ಪ್ರವೀಣ್ ಸಾವಿನ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಈ ಸಂಬಂಧ ಪ್ರವೀಣ್ ಪೋಷಕರು ವೈದ್ಯ ಶಿವಲಿಂಗ ಜವಳಿ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರವೀಣ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ತನಿಖೆ ಆರಂಭಿಸಿದ್ದಾರೆ.

  • ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ಹಾವೇರಿ: ಕಳೆದ ನಾಲ್ಕು ತಿಂಗಳಿನಿಂದ ಮಹಿಳೆಯೊಬ್ಬಳು ವಾಮಾಚಾರಕ್ಕೆ ತತ್ತರಿಸಿ ಹೋಗಿದ್ದಾರೆ. ಮಹಿಳೆ ಬಾಯಿಂದ ಕೂದಲು, ಮಣ್ಣಿನ ಗೊಂಬೆಗಳು ಹಾಗೂ ಅನ್ನದ ಬುತ್ತಿ ಬೀಳುತ್ತಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುನಂದಾ ಗೋಂದ್ಕರ (45) ತೊಂದರೆ ಅನುಭವಿಸುತ್ತಿರುವ ಮಹಿಳೆ. ಸುನಂದಾ ಬಾಯಿಂದ ಪ್ರತಿನಿತ್ಯ ವಸ್ತುಗಳು ಬರುತ್ತಿವೆ. ಸುನಂದಾ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ನಿವಾಸಿವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿದ್ದಾಗ ಬಾಯಿಯಿಂದ ನಿಂಬೆಹಣ್ಣು, ಕಬ್ಬಿಣದ ಮೊಳೆ, ಕೂದಲು, ಮಣ್ಣಿನ ಗೊಂಬೆಗಳು ಪ್ರತಿನಿತ್ಯ ಬೀಳುತ್ತಿದ್ದವು. ಆಗ ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದಾರೆ.

    ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ನಾರ್ಮಲ್ ಎಂದು ಬಂದಿತ್ತು. ಏನೋ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಮತ್ತೆ ಮನೆಗೆ ಹೋದ ಮೇಲೆ ಬಾಯಿಯಿಂದ ವಸ್ತುಗಳು ಬರುತ್ತೆವೆ. ಇದರಿಂದ ಮಹಿಳೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊನೆಗೆ ತೊಂದರೆ ನಿವಾರಣೆಗಾಗಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಿವಾಲಿಬಸವೇಶ್ವರ ಮಠದ ಮೂಕಪ್ಪ ಸ್ವಾಮೀಜಿಗಳ ಮೊರೆ ಬಂದಿದ್ದಾರೆ.

    ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆದ ಮೇಲೆ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದೆ. ಸದ್ಯ ಪ್ರತಿದಿನ ಮಠದಲ್ಲಿ ಒಂದು ಅಥವಾ ಎರಡು ಬಾರಿ ಬಾಯಿಯಿಂದ ಕೂದಲು ಬರುತ್ತಿವೆ. ಮಹಿಳೆ ಬಾಯಿಯಿಂದ ಬರುತ್ತಿರುವ ವಸ್ತುಗಳನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಯಾರೋ ವಾಮಾಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ. ಪತಿಯ ಮನೆಯವರು ವರದಕ್ಷಿಣೆಗಾಗಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಕಲಬುರಗಿಯಲ್ಲಿದ್ದಾರೆ ನಕಲಿ ಡಾಕ್ಟರ್ಸ್- ದುರಂತವೆಂದ್ರೆ SSLCಯೂ ಪಾಸಾಗಿಲ್ಲ

    ಕಲಬುರಗಿಯಲ್ಲಿದ್ದಾರೆ ನಕಲಿ ಡಾಕ್ಟರ್ಸ್- ದುರಂತವೆಂದ್ರೆ SSLCಯೂ ಪಾಸಾಗಿಲ್ಲ

    ಕಲಬುರಗಿ: ವೈದ್ಯ ನಾರಾಯಣೋ ಹರಿ ಅಂತ ವೈದ್ಯರನ್ನು ನಮ್ಮ ಪೂರ್ವಜರು ದೇವರಿಗೆ ಹೋಲಿಸಿದ್ದಾರೆ. ಆದರೆ ಕಲಬುರಗಿ ಜಿಲ್ಲೆಯ ನಕಲಿ ವೈದ್ಯರು ಅಲ್ಲಿನ ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ದುರಂತ ಅಂದ್ರೆ ಇದರಲ್ಲಿ ಕೆಲ ವೈದ್ಯರು ಎಸ್‍ಎಸ್‍ಎಲ್‍ಸಿ ಸಹ ತೇರ್ಗಡೆಯಾಗಿಲ್ಲ.

    ಹೌದು. ಕಲಬುರಗಿ ಜಿಲ್ಲೆಯಲ್ಲಿ ಸದ್ಯ ನಕಲಿ ವೈದ್ಯರ ಆಸ್ಪತ್ರೆಗಳು ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ವಿಪರೀತವಾಗಿ ತೆಗೆದಿದ್ದಾರೆ. ಇನ್ನೂ ಹೀಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲ ನಕಲಿ ವೈದ್ಯರು ನೆಟ್ಟಗೆ ಎಸ್‍ಎಸ್‍ಎಲ್‍ಸಿ ಸಹ ತೇರ್ಗಡೆಯಾಗಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಡಾಕ್ಟರ್ ಅಂತ ಬೋರ್ಡ್ ಹಾಕಿಕೊಂಡು ಮುಗ್ಧ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಹಿಂದೆ ಹಲವು ಬಾರಿ ಈ ನಕಲಿ ವೈದ್ಯರು ನೀಡಿದ ಔಷಧಿಯಿಂದ ಹಲವು ರೋಗಿಗಳು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಹೀಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ನಕಲಿ ವೈದ್ಯರೆಲ್ಲ ಕೆಲ ತಿಂಗಳುಗಳ ಕಾಲ ನುರಿತ ವೈದ್ಯರ ಬಳಿ ಕೆಲಸಕ್ಕೆ ಸೇರಿಕೊಂಡು, ನಂತರದ ದಿನಗಳಲ್ಲಿ ಅವರೇ ವೈದ್ಯರಂತೆ ಗ್ರಾಮೀಣ ಭಾಗದಲ್ಲಿ ಬೋರ್ಡ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ.

    ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ)ಯಡಿ ಒಟ್ಟು 761 ಆಸ್ಪತ್ರೆಗಳು ಮಾತ್ರ ನೋಂದಣಿಯಾಗಿವೆ. ಆದರೆ ಸದ್ಯ ಕಲಬುರಗಿ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ನಕಲಿ ವೈದ್ಯರು ಆಸ್ಪತ್ರೆಗಳನ್ನು ನಡೆಸಿದ್ದಾರೆ. ಈ ಹಿಂದೆ ಜಿಲ್ಲಾ ಆರೋಗ್ಯಧಿಕಾರಿಗಳು ದಾಳಿ ನಡೆಸಿ ಹಲವು ಆಸ್ಪತ್ರೆಗಳನ್ನು ಬಂದ್ ಮಾಡಿದ್ದಾರೆ. ಆದರೆ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಅವರು ಸ್ಥಳ ಬದಲಿಸಿ ಮತ್ತೆ ಆಸ್ಪತ್ರೆಗಳನ್ನು ತೆಗೆದಿದ್ದಾರೆ. ಈ ಕುರಿತು ಡಿಎಚ್‍ಓ ಅವರನ್ನ ಕೇಳಿದರೆ ನಕಲಿ ವೈದ್ಯರ ವಿರುದ್ಧ ಮತ್ತೆ ಜರುಗಿಸುವುದಾಗಿ ಹೇಳುತ್ತಿದ್ದಾರೆ.

    ದುರಂತ ಅಂದರೆ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ರಾಜ್ಯಕ್ಕೆ ಹೆಚ್ಚು ವೈದ್ಯ ಶಾಸಕರನ್ನು ನೀಡಿದ, ಕಲಬುರಗಿ ಜಿಲ್ಲೆಯಲ್ಲಿಯೇ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿರುವುದು ನಿಜಕ್ಕೂ ದುರಂತವೇ ಸರಿ.