ಬೀದರ್: ತೆಲಂಗಾಣದ ಹೈದರಾಬಾದ್ ನಗರದ ಚಾರ್‍ಮೀನಾರ ಬಳಿ ಉಚಿತವಾಗಿ ಜನರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೊನಾ ಸೋಂಕು ಕುರಿತು ಬೀದರ್‍ನ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ನಿವಾಸಿಯಾಗಿರುವ ದಂತ ವೈದ್ಯ ಡಾ. ಪ್ರಭು ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ್ದಾರೆ. ಜೊತೆಗೆ ಕೊರೊನಾ ಸೊಂಕು ಬಗ್ಗೆ ಜನರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿ ಸಾಮಾಜಿಕ ಕಳಕಳಿ ಮೆರೆದ್ದಾರೆ.
ಮನೆ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೆ ಬರಬೇಕು. ಸ್ವಚ್ಛತೆಯಿಂದ ಇರಬೇಕೆಂದು ವೈದ್ಯರಾದ ಪ್ರಭು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಡೆಡ್ಲಿ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಸಂಘ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ವೈದ್ಯರು ಕೇಳಿಕೊಂಡಿದ್ದಾರೆ.
ಮುಂಬೈ: ಚೆಕಪ್‍ಗೆ ತೆರಳಿದಾಗ ವೈದ್ಯನೇ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಮಲಾದ್ ಈಸ್ಟ್ ನ ಕುರಾರ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾಮುಕ ವೈದ್ಯನನ್ನು ಖಲೀದ್ ಬೇಗ್ ಎಂದು ಗುರುತಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ತನ್ನ ಕ್ಲಿನಿಕ್‍ಗೆ ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಕ್ಲಿನಿಕ್‍ನಲ್ಲಿ ಬಾಲಕಿಯನ್ನು ಪರೀಕ್ಷೆ ನಡೆಸುತ್ತಿದ್ದಾಗ ತಾಯಿ ಫೋನ್‍ನಲ್ಲಿ ಮಾತನಾಡಲು ಹೊರಗೆ ಹೋಗಿದ್ದಾರೆ. ಈ ವೇಳೆ ವೈದ್ಯ ಬಾಲಕಿಯ ಬಳಿ ಅಸಭ್ಯವಾಗಿ ವರ್ತಿಸಿದ್ದು, ಕಾಮದ ದೃಷ್ಟಿಯಿಂದ ಮುಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕಿಗೆ ಹೊಟ್ಟೆ ನೋವು ಹಾಗೂ ವಿಪರೀತ ವಾಂತಿಯಾದ ಕಾರಣ ಚಿಕಿತ್ಸೆಗಾಗಿ ತಾಯಿ ಕ್ಲಿನಿಕ್‍ಗೆ ಕರೆದೊಯ್ದಿದ್ದರು. ವೈದ್ಯರು ಪರೀಕ್ಷೆ ನಡೆಸುತ್ತಿದ್ದಾಗ ತ್ರಿವೇಣಿ ನಗರದ ನಿವಾಸಿಯಾಗಿರುವ ಬಾಲಕಿಯ ತಾಯಿಗೆ ಕರೆ ಬಂದಿದ್ದರಿಂದ ಮಾತನಾಡಲು ಹೊರಗೆ ಹೋಗಿದ್ದಾರೆ. ಈ ವೇಳೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದಾನೆ.
ಘಟನೆ ನಂತರ ಈ ಕುರಿತು ಬಾಲಕಿ ತನ್ನ ತಾಯಿಗೆ ವಿವರಿಸಿದ್ದಾಳೆ. ಪರೀಕ್ಷೆ ಮಾಡುವ ನೆಪದಲ್ಲಿ ವೈದ್ಯ ಬಾಲಕಿಯ ಟಿ ಶರ್ಟ್ ಬಳಿ ಕೈ ಜಾರಿಸಿದ್ದಾನೆ. ವೈದ್ಯನ ವರ್ತನೆಯಿಂದ ಬಾಲಕಿ ಹೆದರಿದ್ದಾಳೆ. ಕ್ಲಿನಿಕ್‍ನಿಂದ ಹೊರಗೆ ಬರುತ್ತಿದ್ದಂತೆ ವೈದ್ಯನ ನಡವಳಿಕೆ ಕುರಿತು ತನ್ನ ತಾಯಿಗೆ ವಿವರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗಳು ಈ ಕುರಿತು ವಿವರಿಸುತ್ತಿದ್ದಂತೆಯೇ ತಾಯಿ ಕುರಾರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪೊಕ್ಸೊ ಕಾಯ್ದೆ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಾಯ್ದೆಯಡಿ ಪ್ರಕರಣ ದಾಖಲಿಸಿ, ವೈದ್ಯನನ್ನು ಬಂಧಿಸಿದ್ದಾರೆ. ನಂತರ ವೈದ್ಯನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಪೊಲೀಸ್ ಕಸ್ಟಡಿಗೆ ವಹಿಸಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
– ಹೋಟೆಲ್‍ಗೆ ಡಾಕ್ಟರ್ ಹೋಗಿದ್ದೇ ತಪ್ಪಾಯ್ತು
– ಕಾಲೇಜು ವಾಶ್ ರೂಮಿನಲ್ಲಿ ವಿಡಿಯೋ ರೆಕಾರ್ಡ್
ಬೆಂಗಳೂರು: ವೈದ್ಯೆಯ ಮೇಲೆ ಆಕೆಯ ಕಾಲೇಜ್‍ಮೆಟ್ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಆರೋಪಿಯನ್ನು ದೀಪಕ್ ರಥೀ (25) ಎಂದು ಗುರುತಿಸಲಾಗಿದೆ. ಆರೋಪಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ಹೋಟೆಲ್ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ನಂತರ ಆಕೆಯನ್ನು ದೂರು ಮಾಡಲು ಪ್ರಯತ್ನಿಸಿದ್ದಾನೆ. ನಂತರ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ದೀಪಕ್ ಹರಿಯಾಣದ ಗುರುಗ್ರಾಮ್ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ ಮತ್ತು ಸಂತ್ರಸ್ತೆ ವೈದ್ಯೆ ಒಂದೇ ಕಾಲೇಜು ಆಗಿದ್ದರಿಂದ ಇಬ್ಬರಿಗೂ ಪರಿಚಯವಿತ್ತು. ಈ ವೇಳೆ ಆರೋಪಿ ಸಂತ್ರಸ್ತೆ ಕಾಲೇಜಿನ ವಾಶ್ ರೂಮಿನಲ್ಲಿದ್ದಾಗ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದನು. ಫೆ. 16 ರಂದು ವ್ಯಯಕ್ತಿಕ ವಿಚಾರದ ಬಗ್ಗೆ ಮಾತನಾಡುವ ನೆಪದಲ್ಲಿ ಜಯನಗರದಲ್ಲಿರುವ ಹೋಟೆಲ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಸಂತ್ರಸ್ತೆಯ ಹೆಸರಿನಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಾದ ನಂತರ ನಾವು ಹೋಟೆಲ್ ಹೋಗಿ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಜೊತೆಗೆ ಅವರಿಬ್ಬರು ಹೋಟೆಲ್‍ಗೆ ಬಂದಿರುವ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದೇವೆ. ಸಂತ್ರಸ್ತೆ ಕೂಡ ನಾವಿಬ್ಬರು ಸಂಬಂಧ ಹೊಂದಿದ್ದೆವು. ಆದರೆ ಆತನ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ್ದನು ಎಂದು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ ಎಸಗಿದ ನಂತರ ಆರೋಪಿ ದೀಪಕ್ ತನ್ನ ಪೋಷಕರ ಮನವೊಲಿಸಿ, ಮುಂದಿನ ವರ್ಷ ಮದುವೆಯಾಗುವುದಾಗಿ ಸಂತ್ರಸ್ತೆಗೆ ಭರವಸೆ ನೀಡಿದ್ದನು. ಅಲ್ಲದೇ ಅತ್ಯಾಚಾರದ ಬಗ್ಗೆ ತನ್ನ ಕುಟುಂಬ ಮತ್ತು ಪೊಲೀಸರಿಗೆ ಹೇಳಬಾರದು ಎಂದು ತಿಳಿಸಿದ್ದನು. ಆದರೆ ಆರೋಪಿ ಅತ್ಯಾಚಾರದ ನಂತರ ಸಂತ್ರಸ್ತೆಯಿಂದ ದೂರವಾಗಲು ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದನು.
ಫೆ. 23 ರಂದು ನಾನು ವಾಶ್ ರೂಮ್‍ಗೆ ಹೋದಾಗ ಹಿಂಬಾಲಿಸಿಕೊಂಡು ಬಂದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನು. ನಂತರ ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದ್ದಾನೆ. ಅಲ್ಲದೇ ಒಂದು ದಿನ ದೀಪಕ್ ಆಸ್ಪತ್ರೆಗೆ ಬಂದು ಮೊಬೈಲ್ ಕಿತ್ತುಕೊಂಡು ನನ್ನ ಫೋನ್‍ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ. ಜೊತೆಗೆ ಇತರರೊಂದಿಗೆ ಸಂಬಂಧ ಹೊಂದಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಚಿಕ್ಕಮಗಳೂರು: ರೋಗಿ ಆಸ್ಪತ್ರೆಗೆ ಬಂದಾಗ ಆಸ್ಪತ್ರೆಯಲ್ಲಿದ್ದ ವೈದ್ಯರು ಮದ್ಯಪಾನ ಸೇವನೆ ಮಾಡುವುದರಲ್ಲಿ ಬ್ಯುಸಿ ಇದ್ದ ಕಾರಣ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಸರ್ಕಾರಿ ಆಸ್ಪತ್ರೆಯ ವೈದ್ಯ ಚನ್ನಕೇಶವನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ವೈದ್ಯ ಚನ್ನಕೇಶವ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಜ್ಜಂಪುರ ಸಮೀಪದ ಹೆಬ್ಬುರು ಮೂಲದ ಪುಟ್ಟಮ್ಮಗೆ ಬಿಪಿ ಹಾಗೂ ಶುಗರ್ ಹೆಚ್ಚಿದ್ದ ಪರಿಣಾಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಡ್ಯೂಟಿಯಲ್ಲಿದ್ದ ಚನ್ನಕೇಶವ ಮದ್ಯಪಾನ ಮಾಡಿ ರೋಗಿಗೆ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆಯಲ್ಲಿದ್ದ ನರ್ಸ್‍ಗಳು ರೋಗಿಗೆ ಚಿಕಿತ್ಸೆ ನೀಡಿದ್ದಾರೆ.
ಆಸ್ಪತ್ರೆಗೆ ಬಂದ ಸ್ವಲ್ಪ ಹೊತ್ತಿನಲ್ಲೇ ರೋಗಿ ಸಾವನ್ನಪ್ಪಿದ್ದಾರೆ. ರೋಗಿ ಪುಟ್ಟಮ್ಮ ಬಿಪಿ ಹಾಗೂ ಶುಗರ್‍ನಿಂದಲೇ ಸಾವನ್ನಪ್ಪಿದರೋ ಅಥವಾ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ವೈದ್ಯರ ಕೊಠಡಿಗೆ ಹೋದಾಗ, ವೈದ್ಯರು ಫುಲ್ ಎಣ್ಣೆ ಕುಡಿದು ಬೆತ್ತಲೆ ಮಲಗಿದ್ದಾರೆ. ಮೈಮೇಲೆ ಒಂದಿಂಚು ಬಟ್ಟೆ ಹಾಗೂ ಪ್ರಜ್ಞೆ ಇಲ್ಲದಂತೆ ಮಲಗಿದ್ದ ವೈದ್ಯನ ಕಂಡು ಸ್ಥಳೀಯರು ಮತ್ತಷ್ಟು ರೊಚ್ಚಿಗೆದ್ದಿದ್ದಾರೆ.
ಕೂಡಲೇ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಈ ರೀತಿಯ ವೈದ್ಯರು ಯಾವ ಆಸ್ಪತ್ರೆಗೂ ಬೇಡ, ಇವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೀದರ್: ಭಾಲ್ಕಿಯ ಖಾನಾಪೂರದ ಮೈಲಾರ ಮಲ್ಲಣ ದೇವಸ್ಥಾನದ ಭಕ್ತರಿಗೆ 15 ವರ್ಷಗಳಿಂದ ಉಚಿತ ಚಿಕಿತ್ಸೆ ನೀಡುತ್ತಿರುವ ಡಾ.ಬಸವರಾಜ್ ಉಜ್ವಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ಬೀದರ್ ನ ನೌಬಾದ್ ನಿವಾಸಿಯಾಗಿರುವ ಡಾ. ಬಸವರಾಜ್ ಉಜ್ವಲ್ ಬಿಎಎಂಎಸ್ ವೈದ್ಯರಾಗಿದ್ದು ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಭಾಲ್ಕಿ ತಾಲೂಕಿನ ಖಾನಪೂರ್ ಬಳಿಯ ಮೈಲಾರ್ ಮಲ್ಲಣ್ಣ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಉಚಿತವಾಗಿ ವೈದ್ಯಕೀಯ ನೆರವು ನೀಡುತ್ತಿದ್ದಾರೆ.
ಪ್ರತಿ ಭಾನುವಾರ, ಅಮವಾಸ್ಯೆ, ಹುಣ್ಣಿಮೆ, ಜಾತ್ರ ಉತ್ಸವ ಸೇರಿದಂತೆ ದೇವಸ್ಥಾನದ ಯಾವುದೇ ಕಾರ್ಯಕ್ರಮವಿದ್ದರೂ ವೈದ್ಯರು ಕ್ಯಾಂಪ್ ಹಾಕುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಆರೋಗ್ಯ ತಪಾಸಣೆ ಮಾಡ್ತಾರೆ. ನೆಗಡಿ, ಕೆಮ್ಮು, ಜ್ವರದಂತ ಪ್ರಾಥಮಿಕ ರೋಗಗಳಿಗೆ ಚಿಕಿತ್ಸೆ ನೀಡ್ತಾರೆ. ದೊಡ್ಡ ಸಮಸ್ಯೆ ಇದ್ದಲ್ಲಿ ತಜ್ಞ ವೈದ್ಯರಿಗೆ ಶಿಫಾರಸು ಮಾಡುತ್ತಾರೆ.
ಡಾಕ್ಟರ್ ಬಸವರಾಜ್ ಅವರ ಪತ್ನಿ ಅವರು ಆರೋಗ್ಯ ಇಲಾಖೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮೈಲಾರ ಮಲ್ಲಣ್ಣನ ಕೃಪೆಯಿಂದ ನನಗೆ ಸಾಕಷ್ಟು ಒಳ್ಳೆಯದಾಗಿದೆ. ಹಾಗಾಗಿ ಭಕ್ತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಡಾ.ಬಸವರಾಜ್ ಹೇಳುತ್ತಾರೆ.
– ಕೊಲೆಗೈದು ‘ಈಟಿಂಗ್ ದೋಸೆ ವಿಥ್ ಸನ್’ ಅಂತ ಸ್ಟೇಟಸ್ ಹಾಕ್ದ
– ಶವದ ಜೊತೆ 6 ತಿಂಗ್ಳ ಕಂದಮ್ಮನ ಬಿಟ್ಟು ಹೋದ
– ಪರಸ್ತ್ರೀ ಸೆರಗಲ್ಲಿ ಮಲಗಲು ಹೆಂಡ್ತಿಯನ್ನ ಕೊಂದ
– ಒಂದು ಕೊಲೆ, ಎರಡು ಆತ್ಮಹತ್ಯೆ, ಮೂರು ಮಕ್ಕಳು ಅನಾಥ
– ಅವ್ಳು ಬಿಟ್ಟು ಬಂದ್ಳು, ಇವ್ನು ಕೊಂದು ಹೋಗಲು ರೆಡಿಯಾಗಿದ್ದ
ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ನಡೆದಿದ್ದ ಒಂಟಿ ಮಹಿಳೆ ಕತ್ತು ಸೀಳಿ ಮನೆ ದೋಚಿದ್ದ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಹೆಂಡತಿ ಸತ್ತಾಗ ಮೊಸಳೆ ಕಣ್ಣೀರಿಟ್ಟಿದ್ದ ವೈದ್ಯ ಮಹಾಶಯನೇ ಮರ್ಡರ್ ಮಿಸ್ಟರಿ ಹಿಂದಿರುವ ಸರ್ಜರಿ ಎಕ್ಸ್ ಪರ್ಟ್ ಆಗಿದ್ದಾನೆ.
ದಂತವೈದ್ಯ ರೇವಂತ್ ಪತ್ನಿ ಕವಿತಾಳನ್ನು ಕೊಂದ ಪ್ರಕರಣಕ್ಕೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಈ ಮೂಲಕ ಒಂಟಿ ಮಹಿಳೆಯ ಕೊಲೆ ಪ್ರಕರಣದಿಂದ ಇಡೀ ಕಡೂರು ತಲ್ಲಣವಾಗಿದೆ. ಆರು ತಿಂಗಳ ಮಗು ನೋಡಿ ಕಣ್ಣೀರಿಟ್ಟಿದ್ದ ಕಡೂರಿನ ಜನತೆ ಮೂಕ ವಿಸ್ಮಿತರಾಗಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ವೈದ್ಯನ ಕಣ್ಣಲ್ಲೇ ಹಂತಕ ಕಂಡಿದ್ದು, ಬುದ್ಧಿವಂತ ಡಾಕ್ಟರ್ ಏನು ಆಟವಾಡುತ್ತಾನೋ ಆಡಲಿ ಎಂದು ಪೊಲೀಸರು ಮೂಕ ಪ್ರೇಕ್ಷಕರಂತೆ ನಟಿಸಿದ್ದರು. ಆದರೆ ವಿಚಾರಣೆಯಲ್ಲಿ ಪೊಲೀಸರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿದ್ದ ವೈದ್ಯ ಅಂದರ್ ಆಗೋದು ಗ್ಯಾರಂಟಿ ಎಂದು ಖಚಿತವಾಗುತ್ತಿದ್ದಂತೆ ಭಯ ಭೀತನಾಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಾಣಾಗಿದ್ದ.
ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಡೂರಿನ ಜನ ಬೇಸರ ವ್ಯಕ್ತಪಡಿಸಿದ್ದರು. ಹೆಂಡತಿ ಸತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭಾವಿಸಿದ್ದರು. ಅಲ್ಲದೆ ವೈದ್ಯನ ಎರಡು ಮಕ್ಕಳನ್ನು ಕಂಡು ಕಣ್ಣೀರಿಟ್ಟಿದ್ದರು. ಆದರೆ ಅಸಲಿ ವಿಷಯ ಪೊಲೀಸರಿಗೆ ಮಾತ್ರ ತಿಳಿದಿತ್ತು. ನಾಲ್ಕು ದಿನದಿಂದ ಹಗಲಿರುಳು ಮಾಹಿತಿ ಸಂಗ್ರಹಿಸಿದ್ದೆವು, ಬಂಧಿಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬುದ್ಧಿವಂತ, ಹಂತಕ ಜಸ್ಟ್ ಮಿಸ್ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬಳ ಮೇಲಿನ ಆಸೆಗೆ ವೈದ್ಯ ತನ್ನ ಪತ್ನಿಯನ್ನೇ ಕೊಂದ, ಪೊಲೀಸರ ಮೇಲಿನ ಭಯಕ್ಕೆ ತಾನೂ ಆತ್ಮಹತ್ಯೆ ಮಾಡಿಕೊಂಡ. ಆದರೆ ಅನಾಥವಾಗಿದ್ದು ಮಾತ್ರ ನಾಲ್ಕು ಹಾಗೂ ಆರು ತಿಂಗಳ ಕಂದಮ್ಮಗಳು.
ಪತ್ನಿ ಕೊಲ್ಲಲು ಕಾರಣವೇನು?
ಬೀರೂರಿನಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ದಂತವೈದ್ಯ ರೇವಂತ್‍ಗೆ, ಉಡುಪಿ ಮೂಲದ ಕವಿತಾ ಜೊತೆಗೆ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ನಾಲ್ಕು ವರ್ಷ ಹಾಗೂ ಆರು ತಿಂಗಳ ಎರಡು ಮಕ್ಕಳಿದ್ದರು. ಸುಖಿ ಕುಟುಂಬ, ಕವಿತಾ ಕೂಡ ಸುಂದರ ಹೆಣ್ಣು. ಇಬ್ಬರದ್ದು ಸುಂದರ ಸಂಸಾರ. ಆದರೆ ಡಾಕ್ಟರ್ ರೇವಂತ್‍ಗೆ ಪತ್ನಿಯಿಂದ ದೂರವಿರುವ ಮಾಯಾಂಗನೆಯ ಸ್ನೇಹವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು 45ರ ಹರೆಯದ ಡಾಕ್ಟರ್ ಅಂಕಲ್ ಪರಸ್ತ್ರೀಯೊಂದಿಗೆ ಲವರ್ಸ್ ಡೇ ಆಚರಿಸಿದ್ದ. ಈ ವಿಚಾರವಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ ಕೂಡ ನಡೆದಿತ್ತಂತೆ. ಹಾಗಾಗಿ ಏಳು ವರ್ಷದಿಂದ ಸಂಸಾರ ಮಾಡಿ ಬೇಜಾರಾಗಿದ್ದ ವೈದ್ಯ ಪರ ಸ್ತ್ರೀಯ ಸೆರಗಲ್ಲಿ ಸರಸವಾಡಲು ಹೆಂಡತಿಯನ್ನೇ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ. ದರೋಡೆಕೋರರ ತಲೆಗೆ ಕಟ್ಟುವಂತೆ ಪತ್ನಿಯ ಕೊಲೆ ಮಾಡಿದ್ದ.
ಬ್ಲೂಪ್ರಿಂಟ್ ರೆಡಿ ಮಾಡಿದ್ದ:
ವೈದ್ಯ ಆವೇಶದಲ್ಲೋ-ಆತಂಕದಲ್ಲೋ ಅಥವಾ ಮುಗಿಸಿ ಬಿಡೋಣವೆಂದೋ ಏಕಾಏಕಿ ಕೊಲೆ ಮಾಡಿಲ್ಲ. ಬದಲಿಗೆ ಹೀಗೆ ಮಾಡಿದರೆ ಹೀಗೆ ಆಗುತ್ತದೆ. ಏನು ಮಾಡಬೇಕು ಎಂದೆಲ್ಲ ಬ್ಲೂಪ್ರಿಂಟ್ ಸಿದ್ಧ ಮಾಡಿಕೊಂಡಿದ್ದ. ಪೊಲೀಸರನ್ನ ದಡ್ಡರೆಂದು ಭಾವಿಸಿದ್ದ ಡಾಕ್ಟರ್, ಪ್ಲ್ಯಾನ್ ಮಾಡಿದ ರೀತಿಯಲ್ಲೇ ಎಲ್ಲ ಮಾಡಿ ಮುಗಿಸಿದ್ದ. ಆದರೆ ಘಟನೆ ನಡೆದು ಮೂರೇ ದಿನಕ್ಕೆ ಹಂತಕನಿವನೇ ಎಂದು ಕಡೂರು ಪೊಲೀಸರಿಗೆ ಖಚಿತವಾಗಿತ್ತು. ಆದರೆ ಇರಲಿ ನೋಡೋಣ ಎಂದು ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದರು. ನಂತರ ಕೊಲೆಗಡುಕ ಯಾರೂ ಅಲ್ಲ ಅವನೇ ಎಂಬುದು ಪಕ್ಕಾಗಿದೆ. ನಂತರ ಬಂಧಿಸುವಷ್ಟರಲ್ಲಿ ವೈದ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೃಶ್ಯಂ ಚಿತ್ರದ ರೀತಿಯಲ್ಲೇ ಮರ್ಡರ್ ಗೆ ಸ್ಕೆಚ್:
ಫೆಬ್ರವರಿ 17ರ ಮಧ್ಯಾಹ್ನ 3.30ಕ್ಕೆ ಪತ್ನಿಗೆ ಆಭರಣ ಕೊಡಿಸಿಕೊಂಡು ಬಂದಿದ್ದಾನೆ. ಆಗ ನಾಲ್ಕು ವರ್ಷದ ಮಗುವೂ ಜೊತೆಗಿತ್ತು. ಮನೆಗೆ ಬಂದವನೇ ಸಿದ್ಧವಿದ್ದ ಪ್ಲ್ಯಾನ್‍ನಂತೆ ಔಷಧಿಯಿಂದ ಪತ್ನಿಯ ಜ್ಞಾನ ತಪ್ಪಿಸಿ, ಹೊಟ್ಟೆಗೆ ಇಂಜಕ್ಷನ್ ನೀಡಿದ್ದಾನೆ. ಜ್ಞಾನ ತಪ್ಪಿದ ನಂತರ ಕಾರ್ ಶೆಡ್‍ಗೆ ಎಳೆದೊಯ್ದು, ಎದೆಹಾಲು ಕುಡಿಯುವ ಆರು ತಿಂಗಳ ಮಗುವಿನ ಎದುರೇ ಒಂದು ಬಾರಿ ಬ್ಲೆಡ್‍ನಿಂದ ಕುತ್ತಿಗೆಗೆ ಹೊಡೆದು, ರಕ್ತ ಹರಿಯಬಾರದೆಂದು ಕಾಲು ಓರೆಸುವ ಮ್ಯಾಟ್‍ಗಳನ್ನು ದೇಹದ ಸುತ್ತ ಹಾಕಿ, ಬಾಗಿಲು ಹಾಕಿ ಬಂದಿದ್ದಾನೆ. ನಂತರ ಮನೆಯಲ್ಲಿನ ವಸ್ತುಗಳನ್ನ ಕದಲಿದ್ದಾನೆ. ಬೀರೂವಿನಲ್ಲಿದ್ದ ಹಣ-ಬೆಳ್ಳಿ-ಬಂಗಾರವನ್ನು ಅವನೇ ಎಸ್ಕೇಪ್ ಮಾಡಿದ್ದಾನೆ. ನಾಲ್ಕು ವರ್ಷದ ಮಗ ಅಮ್ಮ ಎಂದು ಕೂಗಿದಾಗ ವಾಶ್ ರೂಂಗೆ ಹೋಗಿದ್ದಾಳೆಂದು ಮಗನ ಬುಕ್‍ಗಳನ್ನು ಬ್ಯಾಗಿಗೆ ಹಾಕಿಕೊಂಡು ಕ್ಲಿನಿಕ್‍ನಲ್ಲೇ ಹೋಂ ವರ್ಕ್ ಮಾಡುವಂತೆ ಬಾ ಎಂದು ಕರೆದೊಯ್ದಿದ್ದಾನೆ. ಪತ್ನಿಯ ಹೆಣ ಜೊತೆ ಆರು ತಿಂಗಳ ಕೂಸನ್ನೂ ಬಿಟ್ಟು ಬೀಗ ಹಾಕಿ ಹೋಗಿದ್ದಾನೆ.
ದೋಸೆ ತಿನ್ನೋ ಫೋಟೋ ಹಾಕಿ ಫೋನ್:
ಮನೆಯಿಂದ ಕ್ಲಿನಿಕ್‍ಗೆ ಮಗನ ಜೊತೆ ಹೋದ ವೈದ್ಯ, ‘ಐ ಆ್ಯಮ್ ಈಟೀಂಗ್ ದೋಸಾ, ವಿಥ್ ಮೈ ಸನ್ ಅಟ್ ಫೇಮಸ್ ಹೋಟೆಲ್ ಇನ್ ಬೀರೂರು’ ಎಂದು ವಾಟ್ಸಪ್‍ನಲ್ಲಿ ಸ್ಟೇಟಸ್ ಹಾಕಿದ್ದಾನೆ. ಅಲ್ಲದೆ ಫ್ರೆಂಡ್ಸ್‍ಗಳಿಗೆ ಸಹ ಫೋಟೋ ಕಳುಹಿಸಿದ್ದಾನೆ. ತಾನು ಅಮಾಯಕ ಎಂದು ತೋರಿಸಲು ಎಲ್ಲಾ ಮಾಡಿದ್ದಾನೆ. ಅಲ್ಲದೆ ಬೀರೂರಿನ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಅಮ್ಮನಿಗೆ ಫೋನ್ ಮಾಡಿ ಕ್ಲಿನಿಕ್‍ಗೆ ಕರೆಸಿಕೊಂಡಿದ್ದಾನೆ. ನಂತರ ಮನೆಗೆ ಹೋಗೋಣ ಬಾ ಎಂದು ತಾಯಿ ಕರೆದರೆ, ಇರು ಅಮ್ಮ ಕೆಲಸ ಇದೆ ಹೋಗೋಣ ಎಂದು ಎರಡು ಗಂಟೆ ಸಮಯ ತಳ್ಳಿದ್ದಾನೆ. ಅಲ್ಲದೆ ಸಾಯಿಸಿ ಬಂದ ಹೆಂಡತಿಗೆ ಬೇಕೆಂದೇ ಫೋನ್ ಮಾಡಿದ್ದಾನೆ.
ಇಬ್ಬರು ಸಂಬಂಧಿಕರಿಗೆ ಕರೆ ಮಾಡಿ, ಕ್ಲಿನಿಕ್ ಬಳಿ ಕರೆಸಿಕೊಂಡ. ಬಾಳೆಕಾಯಿ ಮಂಡಿಗೆ ಹೋಗ್ಬೇಕು ಎಂದರೂ ಬಿಡದೆ ಹೇ.. ಬರ್ರೋ.. ಎಂದು ಜೊತೆಗೆ ಕರೆತಂದಿದ್ದಾನೆ. ಅಲ್ಲದೆ ಮನೆಯಿಂದ ಹೊರಡುವಾಗ ತನ್ನ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ತಾನೇ ಎರಡ್ಮೂರು ಬಾರಿ ನೋಡಿದ್ದ. ಬರುವಾಗಲು ಮತ್ತೆ-ಮತ್ತೆ ನೋಡಿದ್ದಾನೆ. ಮನೆಗೆ ಹೋದವನೆ ಸೋಫಾ ಮೇಲೆ ಕೂತು ಕವಿತಾ… ಕವಿತಾ… ಎಂದು ಕೂಗಿದ್ದಾನೆ. ಹುಡುಕಿಲ್ಲ, ಮಗು ಅಮ್ಮ.. ಅಮ್ಮ.. ಎಂದು ಹುಡುಕಿದೆ. ತಮ್ಮಂದಿರು ಅತ್ತಿಗೆ… ಅತ್ತಿಗೆ… ಎಂದು ಕೂಗಿದ್ದಾರೆ. ವೈದ್ಯ ರೇವಂತ್ ತಾಯಿ ಕೂಡ ಕೂಗಿದ್ದಾರೆ, ನಂತರ ಒಳಗೆ ಹೋಗಿ ನೋಡಿದಾಗ ದಿಗ್ಭ್ರಾಂತರಾಗಿದ್ದಾರೆ. ಆಗ ವೈದ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ವಿಷಯ ಕೇಳಿ ಸ್ಥಳಕ್ಕೆ ಬಂದ ಪೊಲೀಸರಿಗೂ ಶಾಕ್ ಆಗಿತ್ತು. 206 ರಾಷ್ಟ್ರೀಯ ಹೆದ್ದಾರಿ ಸದಾ ಜನ ಓಡಾಡೋ ಜಾಗ ಹೀಗಾಯ್ತಲ್ಲ ಎಂದು ಪೊಲೀಸರು ತಲೆಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರೆ. ಆದರೆ ಮಡದಿ ಕಳೆದುಕೊಂಡ ವೈದ್ಯನ ಮುಖದ ಭಾವ ಕಂಡು ಎಲ್ಲೋ ಮಿಸ್ ಹೊಡೀತಿದೆಯಲ್ಲಾ ಎಂದು ಕಡೂರು ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಭಾವಿಸಿದ್ದಾರೆ. ಬೀರೂರಿನ ಪಿಎಸ್‍ಐ ರಾಜಕುಮಾರ್, ಸಖರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಮೌನೇಶ್, ಕಡೂರಿನ ಪಿಎಸ್‍ಐ ವಿಶ್ವನಾಥ್ ಹಾಗೂ ಸಿಬ್ಬಂದಿ ನಾಲ್ಕು ದಿನಗಳ ಕಾಲ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿ, ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೇನು ವೈದ್ಯನನ್ನು ಬಂಧಿಸುವಷ್ಟರಲ್ಲಿ ಪಾಪ ಪ್ರಜ್ಞೆಯೋ ಅಥವಾ ಪೊಲೀಸರ ಮೇಲಿನ ಭಯಕ್ಕೋ ಆತ್ಮಹತ್ಯಗೆ ಶರಣಾಗಿದ್ದಾನೆ. ಆದರೆ ಎರಡು ಮಕ್ಕಳು ಮಾತ್ರ ಅನಾಥವಾಗಿವೆ.
ಡಾ.ರೇವಂತ್ ಏನೋ ಆತ್ಮಹತ್ಯೆಗೆ ಶರಣಾದ. ಹೆಂಡತಿ ಕೊಲೆ ಹಿಂದೆ ಅವನೊಬ್ಬನೇ ಇಲ್ಲ. ಅವನು-ಅವಳ ಮಧ್ಯೆ ಮತ್ತೊಬ್ಬಳಾಗಿದ್ದ ಹರ್ಷಿತಾ ಹಾಗೂ ಮತ್ತಿಬ್ಬರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಅವನನ್ನು ಬಂಧಿಸಿದ ಬಳಿಕ ಆ ಮೂವರನ್ನು ಬಂಧಿಸಲು ಯೋಚಿಸಿದ್ದರು. ಆದರೆ ಇದೀಗ ನಾನೂ ಪ್ರಕರಣದಲ್ಲಿ ಭಾಗಿಯಾಗುತ್ತೇನೆ, ಪೊಲೀಸರು ನನ್ನನ್ನೂ ಬಂಧಿಸುತ್ತಾರೆ ಎಂಬ ಭಯದಿಂದಲೋ, ಕುಟುಂಬ ಸರ್ವನಾಶ ಮಾಡಿದ ಪಾಪಪ್ರಜ್ಞೆಯಿಂದಲೋ ವೈದ್ಯನ ಲವರ್ 32ರ ಹರ್ಷಿತಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈಗ ಅವಳ ಮಗುವೂ ಅನಾಥವಾಗಿದೆ. ಹರ್ಷಿತಾಳಿಗೂ ಗಂಡ ಬೇಡವಾಗಿದ್ದ, ರೇವಂತ್‍ಗೆ ಪತ್ನಿ ಕವಿತಾ ಬೇಡವಾಗಿದ್ದಳು, ಅವಳು ಬಿಟ್ಟು ಬಂದಳು, ಇವನು ಕೊಲೆ ಮಾಡಿಯೇ ಬರಲು ರೆಡಿಯಾಗಿದ್ದ. ಆದರೆ ಇದೀಗ ಒಂದು ಕೊಲೆ, ಎರಡು ಆತ್ಮಹತ್ಯೆಯಲ್ಲಿ ಮೂರು ಮಕ್ಕಳು ಅನಾಥವಾಗಿವೆ.
ಭುವನೇಶ್ವರ: ವೈದ್ಯರ ನಿರ್ಲಕ್ಷ್ಯದಿಂದ ಯುವತಿ ಮೃತಪಟ್ಟಿದ್ದಾಳೆಂದು ಆಕೆ ಸಂಬಂಧಿಕರು ಮತ್ತು ಸ್ಥಳೀಯರು ಪ್ರತಿಭಟನೆ ಮಾಡಿದ್ದು, ಒಡಿಶಾದ ಬೆರ್ಹಾಂಪುರ ಪಟ್ಟಣದ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಐಶ್ವರ್ಯ ಸಿಂಗ್ ಡಿಯೋ (24) ಮೃತ ಯುವತಿ. ಮಂಗಳವಾರ ಸಂಜೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಐಶ್ವರ್ಯಳನ್ನ ಗುರುದೇವ್ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು. ವೈದ್ಯರು ಪರೀಕ್ಷಿಸಿ ಯುವತಿಗೆ ಅಪೆಂಡಿಕ್ಸ್ ಇದೆ. ಹೀಗಾಗಿ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಹಾಗೆಯೇ ವೈದ್ಯರು ಐಶ್ವರ್ಯಗೆ ಆಪರೇಷನ್ ಮಾಡಿದ್ದಾರೆ. ಆದರೆ ಆಪರೇಷನ್ ಥಿಯೇಟರ್ ನಿಂದ ಹೊರಗೆ ಕರೆದುಕೊಂಡು ಬರುವಾಗ ಯುವತಿ ಮೃತಪಟ್ಟಿದ್ದಾಳೆ.
ನಾವು ಐಶ್ವರ್ಯಾಳನ್ನು ಮಂಗಳವಾರ ಸಂಜೆ 6.30ಕ್ಕೆ ಗುರುದೇವ್ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಡಾ.ಪ್ರವತ್ ಪಾನಿಗ್ರಾಹಿ ಅಪೆಂಡಿಕ್ಸ್‌ನಿಂದ ಬಳಲುತ್ತಿದ್ದಾಳೆ, ಶಸ್ತ್ರಚಿಕಿತ್ಸೆಗೆ ಮಾಡಬೇಕು ಎಂದು ಹೇಳಿದ್ದರು. ಆದರೆ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ (ಅನಸ್ತೇಷಿಯಾ) ನೀಡಿದ್ದದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಐಶ್ವರ್ಯ ಮೃತಪಟ್ಟಿದ್ದಾಳೆ” ಎಂದು ಮೃತ ಯುವತಿಯ ಸಂಬಂಧಿಯೊಬ್ಬರು ಹೇಳಿದ್ದಾರೆ.
ಈ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿರುವುದರಿಂದ ಸರ್ಕಾರವು ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಸಂಬಂಧಿ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಇದೇ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಯೊಬ್ಬ ಸಾವನ್ನಪ್ಪಿದ್ದನು. ಯುವತಿಯ ಸಂಬಂಧಿಕರು ಮತ್ತು ಸ್ಥಳೀಯರಿಂದ ಆಸ್ಪತ್ರೆಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತುಮಕೂರು: ಬೈಕಿನಿಂದ ಬಿದ್ದು ಹುಡುಗನ ಮೊಣ ಕೈ ಮೂಳೆ ಮುರಿದಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಯಥಾಸ್ಥಿತಿಗೂ ತರಲಾಗಿತ್ತು. ಇನ್ನೇನು ಕೈ ಸರಿಹೋಯ್ತು ಅನ್ನೋಷ್ಟರಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಆ ಹುಡುಗ ಮತ್ತೆ ಕೊರಗುವಂತಾಗಿದೆ.
ಹೌದು. ತುಮಕೂರಿನ ರಾಜೀವ್ ಗಾಂಧಿ ನಗರದ ಯುವಕ ವಾಸೀಂ ಪಾಷಾಗೆ ಬೈಕಿನಿಂದ ಬಿದ್ದು ಮೊಣಕೈ ಮುರಿದಿತ್ತು. ಹೀಗಾಗಿ ಯುವಕನನ್ನು ತುಮಕೂರು ನಗರದ ಮಂಜುನಾಥ ನಗರದಲ್ಲಿರುವ ಸುಕೃತ ಆಸ್ಪತ್ರೆಗೆ ಕರೆದೊಯ್ದಿದ್ದರು. ವಾಸೀಂ ಪಾಷಾನ ಕಂಡಿಷನ್ ನೋಡಿದ್ದ ಡಾಕ್ಟರ್ ಶ್ರೀನಿವಾಸ್ ತಕ್ಷಣ ಸರ್ಜರಿ ಮಾಡಲೇಬೇಕು. ಇಲ್ಲಾಂದ್ರೆ ತುಂಬಾ ಪ್ರಾಬ್ಲಂ ಆಗುತ್ತೆ ಅಂತ 35 ಸಾವಿರ ರೂಪಾಯಿ ಪೀಕಿ ಸರ್ಜರಿಯನ್ನೂ ಮಾಡಿದ್ದರು. ಆದರೆ ಪದೇ ಪದೇ ರಕ್ತಸ್ರಾವವಾಗುತ್ತಾ ಕೀವು ಸೇರಿ, ನೋವು ಬಂದಿದೆ. ಸರ್ ಹೀಗಾಗಿದ್ಯಲ್ಲ ಅಂದ್ರೆ ಇದೆಲ್ಲಾ ಕಾಮನ್ ಧೈರ್ಯ ತಗೋ ಅಂತ ಡಾ. ಶ್ರೀನಿವಾಸ್ ಹೇಳಿರುವುದಾಗಿ ವಾಸೀಂ ತಿಳಿಸಿದ್ದಾರೆ.
ಕೈನೋವು ತಾಳಲಾರದೆ ಮತ್ತೆ ಆಸ್ಪತ್ರೆಗೆ ಹೋದ್ರೆ, ಡಾಕ್ಟರ್ ಶ್ರೀನಿವಾಸ್ ಮಾತ್ರ ಇಲ್ಲಿ ವಾಸಿ ಮಾಡೋಕೆ ಸಾಧ್ಯವೇ ಇಲ್ಲ. ಬೇರೆ ಕಡೆ ಹೋಗಿ ಬೇಕಾದ್ರೆ 5 ಲಕ್ಷ ಹಣವನ್ನು ನಾನೇ ಕೊಡ್ತೀನಿ. ಇದನ್ನು ಯಾರ ಬಳಿಯೂ ಹೇಳಲು ಹೋಗಬೇಡಿ ಅಂತ ಮೊದಲಿಗೆ ನೈಸ್ ಮಾಡಿದ್ದಾರೆ. ಆ ನಂತರ ನಂಗೆ ಎಂಎಲ್‍ಎ ಗೊತ್ತು, ಎಂಪಿ ಗೊತ್ತು, ಹಣನೂ ಕೊಡಲ್ಲ, ಏನೂ ಕೊಡಲ್ಲ. ಏನ್ ಮಾಡ್ಕೋತ್ತೀರೋ ಮಾಡ್ಕಳಿ ಅಂತ ಅವಾಜ್ ಹಾಕಿರುವುದಾಗಿ ವಾಸೀಂ ತಾಯಿ ಆರೋಪಿಸಿದ್ದಾರೆ. ಅಲ್ಲದೆ ಬೇರೆ ಡಾಕ್ಟರ್‍ಗೆ ತೋರಿಸಿದ್ರೆ ವಾಸೀಂ ಕೈಮೂಳೆಯನ್ನು ಹುಳುಗಳು ತಿಂದಿವೆ. ಹಾಗಾಗಿ ಅವರ ಕೈ ಸರಿ ಹೋಗುವುದು ಕಷ್ಟ ಅಂತ ಹೇಳಿದ್ದಾರಂತೆ.
ಒಟ್ಟಿನಲ್ಲಿ ಜೀವ ಉಳಿಸಿ ನೊಂದವರ ಪಾಲಿಗೆ ನಂದಾದೀಪವಾಗಬೇಕಿದ್ದ ವೈದ್ಯ ಶ್ರೀನಿವಾಸ್ ಇಲ್ಲಿ ತಪ್ಪಿತಸ್ಥನಾಗಿರೋದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ನೊಂದ ಯುವಕ ವಾಸೀಂಗೆ ನ್ಯಾಯ ಒದಗಿಸಬೇಕಿದೆ.
ಕಲಬುರಗಿ: ತಪ್ಪು ಮಾಡಿ ಜೈಲುಪಾಲಾದರೆ ಅಂಥವರ ಬದುಕು ನಾಯಿ ಪಾಡಾಗುತ್ತದೆ. ಆದರೆ ಕಲಬುರಗಿ ಯುವಕ ಗೃಹಿಣಿಯ ಪ್ರೀತಿಯ ಬಲೆಯಲ್ಲಿ ಬಿದ್ದು, ಇಬ್ಬರು ಸೇರಿ ಗಂಡನನ್ನೇ ಗುಂಡಿಕ್ಕಿ ಕೊಲೆ ಮಾಡಿ 14 ವರ್ಷ ಜೈಲು ಪಾಲಾಗಿದ್ದರು. ನಂತರ 2016ರಲ್ಲಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಇಬ್ಬರನ್ನೂ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಅದೇ ವ್ಯಕ್ತಿ ಎಂಬಿಬಿಎಸ್ ಮುಗಿಸಿ ವೈದ್ಯನಾಗಿದ್ದಾನೆ. ವಿಶೇಷ ಅಂದರೆ ತಾನು ಪ್ರೀತಿಸಿದ ಗೃಹಿಣಿಯ ಕೈ ಹಿಡಿದು ಜೀವನ ನಡೆಸುತ್ತಿದ್ದಾನೆ.
ಸುಭಾಷ್ ಪಾಟೀಲ್ ಎಂಬಿಬಿಎಸ್ ಮುಗಿಸಿ ವೈದ್ಯನಾಗಿದ್ದಾನೆ. ಡಾಕ್ಟರ್ ಆಗಬೇಕು ಅಂತ ಕನಸು ಕಟ್ಟಿಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ತೆರಳಿ ಎರಡು ವರ್ಷಗಳ ಕಾಲ ಎಂಬಿಬಿಎಸ್ ಮಾಡಿದ್ದನು. ಆದರೆ ಪರ ಪರುಷನ ಪತ್ನಿಯೊಂದಿಗೆ ಪ್ರೇಮಾಂಕುರವಾಗಿ, ಬಳಿಕ ಆಕೆಯ ಪತಿಯನ್ನು ಕೊಲೆ ಮಾಡಿ ಸುಭಾಷ್ ಜೈಲು ಪಾಲಾಗಿದ್ದನು. ಕೊಲೆ ಕೇಸಲ್ಲಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಆಗಿತ್ತು. ತನ್ನ ಭವಿಷ್ಯ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಮತ್ತೆ ಫಿನಿಕ್ಸ್ ನಂತೆ ಮೇಲೆದ್ದು ಬಂದು ತಾನಂದುಕೊಂಡಂತೆ ಡಾಕ್ಟರ್ ಆಗಿದ್ದಾನೆ.
ನಡೆದಿದ್ದೇನು?
ಜಿಲ್ಲೆಯ ಅಫಜಲಪುರ ತಾಲೂಕಿನ ನಿವಾಸಿಯಾದ ಸುಭಷ್ ಪಾಟೀಲ್ ಎಂಬಿಬಿಎಸ್ ಮಾಡೋದಕ್ಕೆ ಅಂತ 2002ರಲ್ಲಿ ಬೆಂಗಳೂರಿಗೆ ತೆರಳಿದ್ದ. ಆಗ ಕಲಬುರಗಿಯ ಉದ್ಯಮಿ ಅಶೋಕ್ ಗುತ್ತೆದಾರ್ ಪತ್ನಿ ಪದ್ಮಾವತಿಯ ಪ್ರೀತಿಯಲ್ಲಿ ಬಿದ್ದು, ಆಕೆಯ ಗಂಡನ ಕೊಲೆ ಮಾಡಿದ್ದರು. ಸುಭಾಷ್ ಪಾಟೀಲ್ ಮತ್ತು ಪದ್ಮಾವತಿ ಇಬ್ಬರು ಕೂಡ 14 ವರ್ಷಗಳ ಕಾಲ ಜೈಲು ಅನುಭಸಿ ಸನ್ನಡತೆ ಆಧಾರದ ಮೇಲೆ 2016ರ ಆಗಸ್ಟ್ 16ರಂದು ಕಲಬುರಗಿ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಹೊರಬಂದ ಪಾಟೀಲ್ ತಾನು ಪ್ರೀತಿಸಿದ ಪದ್ಮಾವತಿಯ ಕೈ ಹಿಡಿದು ನಂತರ ಅರ್ಧಕ್ಕೆ ಮೊಟಕುಗೊಳಿಸಿದ ಎಂಬಿಬಿಎಸ್ ಪದವಿಯನ್ನು ಮುಗಿಸಿ ಇದೀಗ ವೈದ್ಯನಾಗಿದ್ದಾನೆ. ಶನಿವಾರ ಕಲಬುರಗಿ ಎಂಆರ್ ಎಂಸಿ ಮೇಡಿಕಲ್ ಕಾಲೇಜಿನಲ್ಲಿ ತನ್ನ ಎಂಬಿಬಿಎಸ್ ಪದವಿಯನ್ನು ಸುಭಾಷ್ ಪಡೆದಿದ್ದಾನೆ.
ಸುಭಾಷ್ ಪಾಟೀಲ್ ಮತ್ತು ಆಕೆಯ ಪತ್ನಿ ಪದ್ಮಾವತಿ ಇಬ್ಬರು ಕೂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಏಳು ವರ್ಷಗಳ ಕಾಲ ಕಳೆದು ಬಳಿಕ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಏಳು ವರ್ಷ ಸೇರೆವಾಸ ಅನುಭವಿಸಿದ್ದರು.
ಜೈಲಿನಲ್ಲಿದ್ದಾಗ ತಾವು ಮಾಡಿರುವ ತಪ್ಪಿಗೆ ನೊಂದಿದ್ದೇವೆ. ಜೈಲಿನಲ್ಲಿ ಹೊಸ ಪಾಠವನ್ನ ಕಲಿತು ತಮ್ಮ ಕೋಪ-ತಾಪವನ್ನ ಕಂಟ್ರೋಲ್ ಮಾಡಿಕೊಂಡು ಜೈಲಿನಿಂದ ಹೊರ ಬಂದಿದ್ದೇವೆ. ಬದಲಾವಣೆ ಆಗಬೇಕು ಅಂತ ಛಲದಿಂದ ಜೈಲಿನಲ್ಲಿ ಇಬ್ಬರು ಕೂಡ ಮುಕ್ತ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಪದವಿಯನ್ನ ಮುಗಿಸಿದ್ದೇವೆ. ಕೊನೆಗೆ ಸನ್ನಡೆತೆಯನ್ನ ಕಂಡು 2016ರಲ್ಲಿ ಜೈಲಿನಿಂದ ಹೊರ ಬಂದಿದ್ದೇವೆ. ಜೈಲಿನಿಂದ ಹೊರ ಬಂದ ಬಳಿಕ ಸುಭಾಷ್‍ರ ಎಂಬಿಬಿಎಸ್ ಶಿಕ್ಷಣಕ್ಕೆ ಬೆಂಬಲ ನೀಡಿದ್ದೆ ಎಂದು ಪತ್ನಿ ಪದ್ಮಾವತಿ ಹೇಳಿದ್ದಾರೆ.
14 ವರ್ಷ ಸೆರೆವಾಸ ಅನುಭವಿಸಿ ಹೊರಬಂದ ಇಬ್ಬರೂ ತಮ್ಮದೇ ಪ್ರಪಂಚದಲ್ಲಿ ಚೆನ್ನಾಗಿದ್ದಾರೆ. ಜೈಲಿನಲ್ಲಿ ಆದಂತಹ ಕೆಲ ಅನುಭವಗಳ ಮೇಲೆ ಪದ್ಮಾವತಿ ಕಥೆಗಳನ್ನ ಬರೆಯೋಕೆ ಮುಂದಾಗಿದ್ದಾಳೆ. ಇತ್ತ ಸುಭಾಷ್ ಪಾಟೀಲ್ ವೈದ್ಯಕೀಯ ವೃತ್ತಿಗೆ ಸೇರಿಕೊಂಡು ನೊಂದವರ ಬಾಳಿಗೆ ಬೆಳಕಾಗುವ ಕನಸು ಕಾಣೋಕೆ ಮುಂದಾಗಿದ್ದಾರೆ. ಅಲ್ಲದೆ ಪೊಲೀಸರು ಮತ್ತು ನಿರ್ಗತಿಕರನ್ನ ಉಚಿತವಾಗಿ ಚಿಕಿತ್ಸೆ ನೀಡುವ ಮೂಲಕ ಅವರಿಗೆ ಸಹಾಯವಾಗುವ ಮನೋಭಾವದಿಂದ ವೃತ್ತಿಯಲ್ಲಿ ಮುಂದುವರಿಯುವ ಆಸೆ ವ್ಯಕ್ತಪಡಿಸಿದ್ದಾರೆ.
ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್ ಸಚಿವ ಆರ್. ಆಶೋಕ್ ಸಂಬಂಧಿ ಎಂದು ಮರಿಯಮ್ಮನಹಳ್ಳಿ ಸಬ್ ಇನ್ಸ್‌ಪೆಕ್ಟರ್‌ರಿಂದ ಮಾಹಿತಿ ಬಂದಿತ್ತು. ಆ ಕಾರಣಕ್ಕೆ ತಡರಾತ್ರಿ ನಂತರ ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಕೊಡಲಾಯಿತು. ಐದು ಜನ ಚಿಕಿತ್ಸೆಗಾಗಿ ಬಂದಿದ್ದರು. ಶಿವಕುಮಾರ್, ರಾಹುಲ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಕೇಶ್‍ಗೆ ಬೆನ್ನು ಮೂಳೆ ಮುರಿದಿತ್ತು. ವರುಣ್ ಚಿಕಿತ್ಸೆ ಪಡೆಯದೆ ಹಾಗೆ ಹೋಗಿದ್ದಾರೆ ಎಂದು ಹೊಸಪೇಟೆ ವೈದ್ಯ ಮಹಾಂತೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರಲ್ಲಿ ಆರ್. ಅಶೋಕ್ ಪುತ್ರ ಇರಲಿಲ್ಲ: ಎಸ್‍ಪಿ ಸಿ.ಕೆ ಬಾಬಾ ಸ್ಪಷ್ಟನೆ
ಸಚಿನ್ ಅವರು ಬೆಂಗಳೂರಿನವರು, ಅಲ್ಲದೇ ಮೃತ ವ್ಯಕ್ತಿ ಸಚಿವ ಆರ್.ಅಶೋಕ್ ಕಡೆಯವರು, ಆದ್ದರಿಂದ ಬೇಗ ಮರಣೋತ್ತರ ಪರೀಕ್ಷೆ ಮಾಡಿ ಅಂತ ಹೇಳಿದರು. ಸಾಮಾನ್ಯವಾಗಿ ನಾವು ಮಧ್ಯರಾತ್ರಿ ಮರಣೋತ್ತರ ಪರೀಕ್ಷೆ ಮಾಡುವುದಿಲ್ಲ. ಆದರೂ ರಾತ್ರಿ 1.30ಕ್ಕೆ ಸಚಿನ್ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದರು.
ಮರಣೋತ್ತರ ಪರೀಕ್ಷೆಯನ್ನು ಬೇಗ ಮಾಡಿಕೊಡುವಂತೆ ಪಿಎಸ್‍ಐ ಹೇಳಿದರು. ತುರ್ತಾಗಿ ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಂಡರು. ಪಿಎಸ್‍ಐ ಹೇಳಿದ್ದಕ್ಕೆ ಬೇಗ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಅಲ್ಲದೇ ಮೃತದೇಹವನ್ನ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಅಂದರು. ಹೀಗಾಗಿ ಮರಣೋತ್ತರ ಪರೀಕ್ಷೆ ಮಾಡಿದ್ದೇವೆ ಎಂದು ತಾಲೂಕು ಆಸ್ಪತ್ರೆ ವೈದ್ಯ ಮಹಾಂತೇಶ್ ಹೇಳಿದರು.