Tag: doctor

  • ನಟ, ವೈದ್ಯ ಡಾ.ಸೇತುರಾಮನ್ ನಿಧನ

    ನಟ, ವೈದ್ಯ ಡಾ.ಸೇತುರಾಮನ್ ನಿಧನ

    ಚೆನ್ನೈ: ತಮಿಳು ನಟ ಮತ್ತು ಚರ್ಮರೋಗ ವೈದ್ಯ ಡಾ.ಸೇತುರಾಮನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಗುರುವಾರ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಡಾ.ಸೇತುರಾಮನ್ ಅವರು ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಎಂದೇ ಖ್ಯಾತಿ ಪಡೆದಿದ್ದರು.

    2013ರಲ್ಲಿ ಬಿಡುಗಡೆಯಾಗಿದ್ದ ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಮೂಲಕ ಡಾ.ಸೇತುರಾಮನ್ ಅವರು ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ‘ಕನ್ನ ಲಡ್ಡು ತಿನ್ನ ಆಸಯ್ಯ’ ಸಿನಿಮಾದ ಯಶಸ್ಸಿನ ನಂತರ, ಸೇತುರಾಮನ್ ಇನ್ನೂ ಮೂರು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವಾಲಿಬ ರಾಜಾ’, ‘ಸಕ್ಕ ಪೊಡು ಪೊಡು ರಾಜ’ ಮತ್ತು ’50/50′ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ನಟನ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಡಾ.ಸೇತುರಾಮನ್ ಅವರು 2016 ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಇದೀಗ ಪತ್ನಿ ಮತ್ತು ಮಗುವನ್ನು ಅಗಲಿದ್ದಾರೆ.

    ಸೇತುರಾಮನ್ ಚೆನ್ನೈನಲ್ಲಿ ಕ್ಲಿನಿಕ್‍ನಲ್ಲಿ ಚರ್ಮರೋಗ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಸೇತು ಅವರು 36 ವರ್ಷದಲ್ಲೇ ಪಾರ್ಶ್ವವಾಯುವಿಗೆ ಒಳಗಾಗಿದ್ದು, 2017ರಲ್ಲಿ ಇವರಿಗೆ ಸರ್ಜರಿ ಕೂಡ ಆಗಿತ್ತು ಎಂದು ತಿಳಿದುಬಂದಿದೆ.

    ಇತ್ತೀಚೆಗೆ ಕೊರೊನಾ ವೈರಸ್ ಸೋಂಕವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಮಾತನಾಡಿದ್ದು, ಮೊದಲಿಗೆ ಮನೆಯಲ್ಲಿಯೇ ಇದ್ದು ಕೊರೊನಾ ವೈರಸ್ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು.

  • ವೈದ್ಯನ ಪತ್ನಿ, ಮಗಳಿಗೂ ಕೊರೊನಾ ದೃಢ – ಒಂದೇ ದಿನ ಐವರಿಗೆ ಸೋಂಕು

    ವೈದ್ಯನ ಪತ್ನಿ, ಮಗಳಿಗೂ ಕೊರೊನಾ ದೃಢ – ಒಂದೇ ದಿನ ಐವರಿಗೆ ಸೋಂಕು

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಕೊರೊನಾ ಸೋಂಕಿತ ವೈದ್ಯನ ಪತ್ನಿ ಮತ್ತು ಮಗಳಿಗೂ ವೈರಸ್ ಸೋಂಕು ಇರುವುದು ದೃಢವಾಗಿದೆ.

    ದೆಹಲಿಯಲ್ಲಿ ಬುಧವಾರ ಐದು ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು 35ಕ್ಕೆ ತಲುಪಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಐದು ಪ್ರಕರಣಗಳಲ್ಲಿ ಎರಡು ಶಾಹ್ದಾರದ ಮೊಹಲ್ಲಾ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಿದ್ದ 49 ವರ್ಷದ ವೈದ್ಯನ ಪತ್ನಿ (38) ಮತ್ತು ಮಗಳು (17) ಎಂದು ತಿಳಿದು ಬಂದಿದೆ. ಮಾರ್ಚ್ 21 ರಂದು ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ಮಹಿಳೆ ತನ್ನ ಮನೆಯ ಸಮೀಪವಿರುವ ಕ್ಲಿನಿಕ್‍ಗೆ ಹೋಗಿ ಪರೀಕ್ಷೆ ಮಾಡಿಸಿದ್ದರು. ಅಂದೇ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಇದೀಗ ಇಬ್ಬರಿಗೆ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಹಿಳೆಯೊಂದಿಗೆ ಒಡನಾಟದಲ್ಲಿದ್ದ ಜಹಾಂಗೀರ್‌ಪುರಿಯ 35 ವರ್ಷದ ವ್ಯಕ್ತಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ ಮಹಿಳೆಯ ಕುಟುಂಬದ ನಾಲ್ವರಿಗೆ ಸಹ ಸೋಂಕು ಇರುವು ಗೊತ್ತಾಗಿದೆ.

    ಸೈನಿಕ್ ಫಾರ್ಮ್ಸ್ ಪ್ರದೇಶದ ನಿವಾಸಿಗಳಾದ 21 ವರ್ಷದ ಮತ್ತು 41 ವರ್ಷದ ವ್ಯಕ್ತಿ ಇಬ್ಬರಿಗೂ ಕೊರೊನಾ ದೃಢಪಟ್ಟಿದೆ. ಇಬ್ಬರೂ ವಿದೇಶ ಪ್ರವಾಸದಿಂದ ಹಿಂದಿರುಗಿದ್ದು, ಮನೆಗೂ ಭೇಟಿ ಕೊಡದೆ ನೇರವಾಗಿ ಸರ್ಕಾರದ ಆದೇಶದಂತೆ ಕ್ವಾರಂಟೈನ್‍ನಲ್ಲಿದ್ದರು. ಈಗ ಮೆದಾಂತ ಮತ್ತು ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ದೆಹಲಿಯಲ್ಲಿ ಕೊರೊನಾ ವೈಸರ್ ಸೋಂಕಿಗೆ ಒಳಗಾದವರಲ್ಲಿ ಐವರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಬ್ಬರು ಸಾವನ್ನಪ್ಪಿದ್ದಾರೆ. ಇಟಲಿಯಿಂದ ಹಿಂದಿರುಗಿದ್ದ 68 ವರ್ಷದ ಮಹಿಳೆ ಮೃತಪಟ್ಟಿರುವುದು.

  • ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಭುವನೇಶ್ವರ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಎಲ್ಲ ಸರ್ಕಾರಿ ವೈದ್ಯಕೀಯ ವೃತ್ತಿಪರರು ಭಾಗಿಯಾಗಿದ್ದಾರೆ. ಅವರಿಗೆ ಎಪ್ರಿಲ್, ಮೇ, ಜೂನ್, ಜುಲೈ ಸೇರಿ ಒಟ್ಟು ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.

    ದೇಶದಲ್ಲಿ 584 ಕೊರೊನಾ ಸೋಂಕು ಪತ್ತೆಯಾಗಿದ್ದು, ಒಡಿಸಾದಲ್ಲಿ ಇದುವರೆಗೂ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿರುವ ವೈದ್ಯರು, ವೃತ್ತಿಪರ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ವೈದ್ಯರು, ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಇದಲ್ಲದೇ ತಮ್ಮ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶಾಸಕರಿಗೂ ನೆರವಾಗುವಂತೆ ಮನವಿ ಮಾಡುತ್ತೇನೆ ಎಂದರು. ಜೊತೆಗೆ ಕೊರೊನಾ ಸಂಕಷ್ಟಕ್ಕೆ ರಾಜ್ಯದ ಜನರು ನೆರವಾಗಬೇಕಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಪಟ್ನಾಯಕ್ ಮನವಿ ಮಾಡಿದ್ದಾರೆ.

  • ಕೊರೊನಾ ಭೀತಿಗೆ ಗುಳೆ ಹೋದವರು ವಾಪಸ್ – ಆಸ್ಪತ್ರೆಗೆ ಬರುತ್ತಿರುವವರ ತಪಾಸಣೆಗೆ ವೈದ್ಯರ ಪರದಾಟ

    ಕೊರೊನಾ ಭೀತಿಗೆ ಗುಳೆ ಹೋದವರು ವಾಪಸ್ – ಆಸ್ಪತ್ರೆಗೆ ಬರುತ್ತಿರುವವರ ತಪಾಸಣೆಗೆ ವೈದ್ಯರ ಪರದಾಟ

    ಹಾವೇರಿ: ಗೋವಾ, ಕೇರಳ, ಮಂಗಳೂರು ಸೇರಿದಂತೆ ಕೆಲಸ ಅರಸಿಕೊಂಡು ಗುಳೆ ಹೋಗಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಜನರು ಕೊರೊನಾ ವೈರಸ್ ಭೀತಿಗೆ ಈಗ ಊರಿಗೆ ಮರಳಿದ್ದಾರೆ.

    ಊರಿಗೆ ಮರಳಿ ಬರುತ್ತಿರುವ ಮಂದಿಯಿಂದ ಕೊರೊನಾ ಸೋಂಕು ಹರಡೋ ಭೀತಿ ಇರುವ ಹಿನ್ನೆಲೆ ತಪಾಸಣೆ ಮಾಡಿಸಿಕೊಂಡು, ವೈದ್ಯರಿಂದ ಕೊರೊನಾ ಸೋಂಕು ತಗುಲಿಲ್ಲವೆಂದ ದೃಢಕರಣ ಪತ್ರ ತೆಗೆದುಕೊಂಡು ಊರಿಗೆ ಬರುವಂತೆ ಗ್ರಾಮಸ್ಥರು ಕಟ್ಟಪ್ಪಣೆ ಹೊರಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೋವಾ, ಕೇರಳ ಮತ್ತು ಮಂಗಳೂರು ಭಾಗದಿಂದ ಬಂದ ನೂರಾರು ಜನರು ತಪಾಸಣೆಗಾಗಿ ಒಮ್ಮೆಲೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

    ಒಂದೇ ಬಾರಿ ನೂರಾರು ಮಂದಿ ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಚಿಕಿತ್ಸೆ ನೀಡಿ, ವರದಿ ಕೊಡಲು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಾಲ್ವರು ವೈದ್ಯರು ಮತ್ತು 15ಕ್ಕೂ ಅಧಿಕ ಸಿಬ್ಬಂದಿ ಇದ್ದರೂ 300ಕ್ಕೂ ಅಧಿಕ ಮಂದಿ ಒಂದೇ ಬಾರಿ ಬಂದು ಕ್ಯೂ ನಿಂತ್ತಿರುವುದರಿಂದ ಎಲ್ಲರಿಗೂ ಏಕಕಾಲಕ್ಕೆ ಚಿಕಿತ್ಸೆ ನೀಡೋದು ಕಷ್ಟಕರವಾಗಿದೆ. ಆದರೂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಯಾರಿಗೂ ತೊಂದರೆ ಆಗದಂತೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸುತ್ತಿದ್ದಾರೆ.

  • ಕೊರೊನಾ ಎಫೆಕ್ಟ್- ಮನೆ ಖಾಲಿ ಮಾಡುವಂತೆ ಡಾಕ್ಟರ್, ನರ್ಸ್‍ಗಳ ಮೇಲೆ ಮಾಲೀಕರ ಒತ್ತಡ

    ಕೊರೊನಾ ಎಫೆಕ್ಟ್- ಮನೆ ಖಾಲಿ ಮಾಡುವಂತೆ ಡಾಕ್ಟರ್, ನರ್ಸ್‍ಗಳ ಮೇಲೆ ಮಾಲೀಕರ ಒತ್ತಡ

    ನವದೆಹಲಿ: ಜನತಾ ಕರ್ಫ್ಯೂ ದಿನದಂದು ಮನೆಗಳ ಬಾಲ್ಕನಿಯಲ್ಲಿ ನಿಂತು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಕೃತ್ಯಜ್ಞತೆ ಸಲ್ಲಿಸಿದ್ದ ಜನರು, ಈಗ ವೈದ್ಯರು ವಿರುದ್ಧವೇ ಮುಗಿ ಬಿದ್ದಿದ್ದಾರೆ. ಮನೆ ಬಾಡಿಗೆ ನೀಡಿದ್ದ ಮಾಲೀಕರ ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದಾರೆ.

    ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಏಮ್ಸ್ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಕೊರೊನಾ ವೈರಸ್ ಶಂಕಿತರಿಗೆ ಏಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೂಲಕ ಸೋಂಕು ಹರಡುವ ಭೀತಿಯಲ್ಲಿ ಮನೆ ಮಾಲೀಕರಿದ್ದಾರೆ.

    ಪ್ರತಿನಿತ್ಯ ಸೋಂಕಿತರ ಮಧ್ಯೆಯೇ ವೈದ್ಯರು ಸೇವೆ ಸಲ್ಲಿಸುತ್ತಾರೆ. ಇವರು ಮನೆಗಳಿಗೆ ಬಂದಂತ ವೇಳೆ ಇವರ ಮೂಲಕ ಇತರರಿಗೂ ಕೊರೊನಾ ಸೋಂಕು ಹರಡಬಹುದು ಎಂಬುದು ಮನೆ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ವಾದವಾಗಿದೆ. ನೆರೆ ಹೊರೆಯವರ ಒತ್ತಡದ ಹಿನ್ನೆಲೆ ವೈದ್ಯರು ಮತ್ತು ನರ್ಸ್ ಗಳ ಮೇಲೆ ಮನೆ ಮಾಲೀಕರ ಒತ್ತಡ ಹಾಕಿದ್ದು, ಮನೆ ಖಾಲಿ ಮಾಡಲು ಸೂಚಿಸಿದ್ದರು. ಇದರಿಂದ ರೋಸಿ ಹೋಗಿದ್ದು ವೈದ್ಯರು ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.

    ವೈದ್ಯರು ಪತ್ರಕ್ಕೆ ಸ್ಪಂದಿಸಿರುವ ಗೃಹ ಸಚಿವ ಅಮಿತ್ ಶಾ, ಮನೆ ಮಾಲೀಕರ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಕಮಿಷನರ್ ಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ವೈದ್ಯರ ಮೇಲೆ ಒತ್ತಡ ಹಾಕಬಾರದು. ಒಂದು ವೇಳೆ ಒತ್ತಡ ಹಾಕಿದ್ದಲ್ಲಿ ಡಾಕ್ಟರ್ ಗಳ ದೂರು ಆಧರಿಸಿ ಮನೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅಮಿತ್ ಶಾ ಸೂಚಿಸಿದ್ದಾರೆ.

  • 73ನೇ ವಯಸ್ಸಿನಲ್ಲೂ ರೋಗಿಗಳಿಗೆ ಚಿಕಿತ್ಸೆ – ಮಗಳ ಕಣ್ಣೀರು

    73ನೇ ವಯಸ್ಸಿನಲ್ಲೂ ರೋಗಿಗಳಿಗೆ ಚಿಕಿತ್ಸೆ – ಮಗಳ ಕಣ್ಣೀರು

    – ತಂದೆ ಫೋಟೋ ಪೋಸ್ಟ್ ಮಾಡಿ ಹೆಮ್ಮೆ ಪಟ್ಟ ಪತ್ರಕರ್ತೆ

    ಟೆಕ್ಸಾಸ್: 73ರ ಇಳಿ ವಯಸ್ಸಿನಲ್ಲೂ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ತಮ್ಮ ತಂದೆಯ ಫೋಟೋವನ್ನು ಅಮೆರಿಕಾದ ಪತ್ರಕರ್ತೆಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಈಗ ಸಖತ್ ವೈರಲ್ ಆಗಿದೆ.

    ಅಮೆರಿಕಾದ ಪತ್ರಕರ್ತೆ ಕ್ರಿಸ್ಟಿನ್ ಫಿಶರ್ ಅವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ವೈದ್ಯ ತಂದೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ನಾನು ಏನೂ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ನಮ್ಮ ತಂದೆ ಈ ಫೋಟೋ ಕಳಿಸಿದರು. ಇದನ್ನು ನೋಡಿ ನನಗೆ ಕಣ್ಣೀರು ಬಂತು ಎಂದು ಅವರು ಬರೆದುಕೊಂಡಿದ್ದಾರೆ.

    ತಮ್ಮ ತಂದೆ ಮಾಸ್ಕ್ ಧರಿಸಿ ನಿಂತಿರುವ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿರುವ ಫಿಶರ್, ಇದು ನನ್ನ ತಂದೆ, ಅವರಿಗೆ ಈಗ 73 ವರ್ಷ ಅವರು ಟೆಕ್ಸಾಸ್‍ನ ಆಸ್ಪತ್ರೆಯ ತುರ್ತು ವಾರ್ಡಿನ ವೈದ್ಯರಾಗಿದ್ದಾರೆ. ಅವರು ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ ಮತ್ತು ಎಂದಿಗೂ ನಿವೃತ್ತರಾಗುವುದಿಲ್ಲ ಎನ್ನುತ್ತಾರೆ. ನಾನು ನೀವು ಏನ್ ಮಾಡುತ್ತಿದ್ದೀರಾ ಎಂದು ಇಂದು ರಾತ್ರಿ ಕೇಳಿದಾಗ ಈ ಫೋಟೋವನ್ನು ಕಳುಹಿಸಿದರು. ಅದನ್ನು ನೋಡಿದ ನನಗೆ ಕಣ್ಣೀರು ಬಂತು ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಫಿಶರ್ ತಂದೆಯ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ನೆಟ್ಟಿಗರು, ದೇವರು ನಿಮ್ಮ ತಂದೆಯನ್ನು ಚೆನ್ನಾಗಿ ಇಟ್ಟಿರಲಿ. ನಮಗೆ ಅವರಂತಹ ವೈದ್ಯರು ಬೇಕು. ಈ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ತಂದೆ ಮತ್ತು ವೃತ್ತಿಪರ ವೈದ್ಯರು ಸುರಕ್ಷತೆಗಾಗಿ ನಾವು ದೇವರನ್ನು ಬೇಡಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ತಂದೆ ನಿಜವಾದ ಹೀರೋ ಎಂದು ಹೇಳಿದ್ದಾರೆ.

    https://twitter.com/LoveCovfefe2020/status/1239954689782759430

    ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,245 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

  • ಪ್ಯಾರಾಸಿಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ ಕೊರೊನಾ ಗುಣಪಡಿಸಿಕೊಂಡ ವೈದ್ಯೆ

    ಪ್ಯಾರಾಸಿಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ ಕೊರೊನಾ ಗುಣಪಡಿಸಿಕೊಂಡ ವೈದ್ಯೆ

    ಲಂಡನ್: ಪ್ಯಾರಾಸಿಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸಿ ನನಗೆ ತಗುಲಿದ್ದ ಕೊರೊನಾ ವೈರಸ್ ಸೋಂಕನ್ನು ಗುಣಪಡಿಸಿಕೊಂಡಿದ್ದೇನೆ ಎಂದು ಬ್ರಿಟಿಷ್ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.

    ಲಂಡನ್ ಮೂಲದ ವೈದ್ಯೆ ಕ್ಲೇರಾ ಗೆರಡಾ(60) ಕೊರೊನಾ ಗೆದ್ದುಬಂದಿದ್ದಾರೆ. ಕ್ಲೇರಾ ಅವರು ರಾಯಲ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರ್ಸ್ ಮುಖ್ಯಸ್ಥೆಯಾಗಿದ್ದು, ಇತ್ತೀಚಿಗೆ ನ್ಯೂಯಾರ್ಕ್ ಸಮ್ಮೇಳನಕ್ಕೆ ತೆರಳಿದ್ದಾಗ ಅವರಿಗೆ ಕೊರೊನಾ ಸೋಂಕು ತಟ್ಟಿತ್ತು ಎನ್ನಲಾಗಿದೆ. ಮಹಾಮಾರಿ ಕೊರೊನಾದಿಂದ ಬಳಲುತ್ತಿದ್ದ ವೈದ್ಯೆ ಸ್ವತಃ ತಾವೇ ತಮಗೆ ಚಿಕಿತ್ಸೆ ಕೊಟ್ಟುಕೊಂಡು ಮಾರಕ ಸೋಂಕನ್ನು ಮೆಟ್ಟಿನಿಂತಿದ್ದಾರೆ. ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    ನ್ಯೂಯಾರ್ಕ್ ಸಮ್ಮೇಳನದಿಂದ ವಾಪಸ್ಸಾದ ಬಳಿಕ ವೈದ್ಯೆಯಲ್ಲಿ ಜ್ವರ, ಚಳಿ, ಗಂಟಲು ನೋವು, ತಲೆತಿರುಗುವಿಕೆ, ಕೀಲು ನೋವು, ತಲೆನೋವು, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ತಪಾಸಣೆ ನಡೆಸಿದಾಗ ವೈದ್ಯೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯೆ, ಸೋಂಕು ತಟ್ಟಿದ ಬಳಿಕ ನಾನು ಸಂಪೂರ್ಣ ನಿಶಕ್ತಳಾಗಿದ್ದೆ. ನನಗೆ 50 ಪೌಂಡ್ ಬಾರವನ್ನು ಕೂಡ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಆದರೆ ಇದಕ್ಕೆ ನಾನು ಹೆದರಲಿಲ್ಲ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಏನು ಮಾಡಬೇಕು ಯೋಚಿಸಿದೆ. ಆ ಬಳಿಕ ನಿರಂತರವಾಗಿ ನಾನು ಪ್ಯಾರಾಸಿಟಮೊಲ್, ಚಿಕನ್ ಸೂಪ್ ಮತ್ತು ನಿಂಬೆ ಪಾನಕ ಸೇವಿಸಿದೆ, ಸೋಂಕು ಗುಣವಾಗುತ್ತಾ ಬಂತು. ಈಗ ನಾನು ಸಂಪೂರ್ಣ ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜನರು ಯಾಕೆ ಚಿಂತೆ ಮಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತೆ. ಆದರೆ ಬಹುತೇಕ ಮಂದಿ ನನ್ನಂತೆಯೆ ಸೋಂಕಿನಿಂದ ಗುಣವಾಗಿದ್ದಾರೆ. ಇದು ಮಾರಣಾಂತಿಕ ಕಾಯಿಲೆ ಅಲ್ಲ, ಧೈರ್ಯದಿಂದಿರಿ ಎಂದು ವೈದ್ಯೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ ಮಾರ್ಗ ಇಡೀ ಜಗತ್ತಿಗೇ ಕಾಣದಂತಾಗಿದೆ. ಹಾಗಾಗಿಯೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ನಿನ್ನೆ ಮೊನ್ನೆವರೆಗೂ 5 ಸಾವಿರದ ಗಡಿ ದಾಟಿದ್ದ ಸೋಂಕಿತರ ಸಾವಿನ ಸಂಖ್ಯೆ. ಈಗ 8 ಸಾವಿರದತ್ತ ಮುನ್ನುಗ್ಗುತ್ತಿದೆ. ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.

  • ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ಭಾರತದಲ್ಲಿದ್ದೇವೆ – ಸಾವು ಗೆದ್ದ ಟೆಕ್ಕಿಯ ಪತ್ನಿಯ ಮಾತು

    ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ಭಾರತದಲ್ಲಿದ್ದೇವೆ – ಸಾವು ಗೆದ್ದ ಟೆಕ್ಕಿಯ ಪತ್ನಿಯ ಮಾತು

    – ಆಸ್ಪತ್ರೆಯ ವೈದ್ಯರಿಗೆ, ಸಿಬ್ಬಂದಿಗೆ ಧನ್ಯವಾದ
    – ಈಗ ಮತ್ತೆ ನಮಗೆ ಆತ್ಮವಿಶ್ವಾಸ ಮೂಡಿದೆ

    ಬೆಂಗಳೂರು: ಇಡೀ ಜಗತ್ತೇ ಕೊರೊನಾ ವೈರಸ್‍ಗೆ ಸಿಲುಕಿ ಒದ್ದಾಡುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಆಗಿದೆ. ಆದರೆ ಈ ಹೊತ್ತಲ್ಲಿ ಕರ್ನಾಟಕದ ಮಂದಿಗೆ ಸಿಹಿಸುದ್ದಿ ಸಿಕ್ಕಿದೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೆಂಗಳೂರಿನ ಕುಟುಂಬ ಕೊರೊನಾ ಜಯಿಸಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಸತತ 10 ದಿನಗಳ ಚಿಕಿತ್ಸೆ ಪಡೆದ ಟೆಕ್ಕಿ ಕುಟುಂಬ ಕೊರೊನಾ ಸೋಂಕಿನಿಂದ ಪಾರಾಗಿದೆ. ತಮ್ಮ ಇಡೀ ಕುಟುಂಬವನ್ನು ಕೊರೊನಾದಿಂದ ಪಾರು ಮಾಡಿದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ವೈದ್ಯರಿಗೆ, ನರ್ಸ್‌ಗಳಿಗೆ ಸಿಬ್ಬಂದಿಗೆ ಟೆಕ್ಕಿ ಪತ್ನಿ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಮತ್ತೊಂದು ಪಾಸಿಟಿವ್ – ದುಬೈನಿಂದ ಬಂದ ಬೆಂಗ್ಳೂರಿನ ಮಹಿಳೆಗೆ ಕೊರೊನಾ

    ಪತ್ರದಲ್ಲಿ ಏನಿದೆ?
    ನಾನು ಮತ್ತು ನನ್ನ ಕುಟುಂಬ ಕೊರೊನಾ ಸೋಂಕಿತರಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ್ವಿ. ಅಂದಿನಿಂದ ನಮ್ಮನ್ನು ಐಸೋಲೇಷನ್‍ನಲ್ಲಿ ಇಟ್ಟಿದ್ದರು. ಅಂದಿನಿಂದ ನಮಗೆ ಸರ್ಕಾರಿ ಸೌಲಭ್ಯದೊಂದಿಗೆ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡರು. ನಮಗೆ ಈ ರೋಗದ ಭೀತಿಯಿಂದ ಹೊರಬರಲು ನೆರವಾದರು.

    ಕೊರೊನಾ ವೈರಸ್ ಎಂಬುದು ಜನರನ್ನು ಭಯಬೀತರಾಗಿ ಮಾಡಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯರು ಪ್ರಬುದ್ಧವಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನನ್ನ ಪತಿಗೆ ಕೊರೊನಾ ಲಕ್ಷಣಗಳು ಕಾಣಿಸಿದಾಗ ನಾನೇ ಸ್ವತಃ ಅಂಬುಲೆನ್ಸ್‌ಗೆ ಕರೆ ಮಾಡಿ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಈ ವೇಳೆ ನಾವು ಯಾವುದೇ ಸಾರ್ವಜನಿಕರು, ಸಾರ್ವಜನಿಕ ಮತ್ತು ಖಾಸಗಿ ವಾಹನಕ್ಕೆ ತೊಂದರೆ ಮಾಡಲಿಲ್ಲ.

    ಆಗ ವೈದ್ಯರು, ನರ್ಸ್ ಮತ್ತು ಇತರ ಎಲ್ಲ ಸಹಾಯಕ ಸಿಬ್ಬಂದಿ ನಮ್ಮ ಬಳಿ ಬಂದರು. ನಂತರ ಸ್ಕ್ರೀನಿಂಗ್ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದರು. ವರದಿಯಲ್ಲಿ ನಮಗೆ ಪಾಸಿಟಿವ್ ಬಂದ ಬಳಿಕ ನಮ್ಮನ್ನು ಐಸೋಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಿದರು. ವಾರ್ಡ್‍ನಲ್ಲಿ ಶುಚಿತ್ವದೊಂದಿಗೆ ನಮಗೆ ಬೇಕಾದ ಅಗತ್ಯತೆಗಳನ್ನು ನೋಡಿಕೊಂಡರು.

    ನಮಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ನಾವು ಸಂಪರ್ಕದಲ್ಲಿದ್ದವರಿಗೂ ಸಹ ಕ್ವಾರಂಟೇನ್ ಮಾಡಲಾಯಿತು. ನನ್ನ ಪತಿಯ ಕಂಪನಿ, ಸಹೋದ್ಯೋಗಿಗಳು, ನನ್ನ ಮಗುವಿನ ಶಾಲೆ, ಸ್ನೇಹಿತರು, ಕ್ಲಾಸ್‍ಮೆಟ್ಸ್, ನನ್ನ ಸ್ನೇಹಿತರು, ನೆರೆಹೊರೆಯವರು, ಅಪಾರ್ಟ್ ಮೆಂಟ್‍ನಲ್ಲಿದ್ದವರ ಮೇಲೆ ತುಂಬಾ ಅಚ್ಚುಕಟ್ಟಾಗಿ ನಿಗಾ ವಹಿಸಲಾಯಿತು.

    ಆರೋಗ್ಯಾಧಿಕಾರಿಗಳು ನಮ್ಮ ಗುರುತು ಹೊರಗೆ ಗೊತ್ತಾಗದಂತೆ ನೋಡಿಕೊಂಡರು. ಯಾವುದೇ ಮಾಧ್ಯಮದವರು ಸಂಪರ್ಕಿಸಲು ಬಿಡಲಿಲ್ಲ. ನಮಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಿದ್ದಾರೆ. ಇದು ನಮ್ಮಲ್ಲಿ ಮತ್ತೆ ಆತ್ಮವಿಶ್ವಾಸ ಮೂಡಿಸಿದೆ. ನಮಗೆ ಅತ್ಯುತ್ತಮವಾದ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ವರ್ಗದವರ ತಾಳ್ಮೆ, ಕ್ರಮಬದ್ಧ ಚಿಕಿತ್ಸೆ, ಚಿಕಿತ್ಸೆ ನೀಡಿದ ಪರಿ ನೋಡಿ ನಮ್ಮಲ್ಲಿ ಭವಿಷ್ಯದ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚು ಮಾಡಿತು.

    ನಮ್ಮನ್ನು ಚೆನ್ನಾಗಿ ನೋಡಿಕೊಂಡ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳು, ಸರ್ಕಾರ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ. ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಲು ಎಲ್ಲರೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಚೀನಾ, ಇಟಲಿ, ಇರಾನಿನಲ್ಲಿ ನಾವಿಲ್ಲ, ನಾವು ಭಾರತದಲ್ಲಿ ಇದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನಮ್ಮನ್ನು ಕೊರೊನಾ ಸೋಂಕಿನಿಂದ ಪಾರು ಮಾಡಲು ಅವರು ಪಟ್ಟ ಶ್ರಮ ಪ್ರಶಂಸನೀಯ. ನಮ್ಮ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಪತ್ರದಲ್ಲಿ ಬರೆದು ತಿಳಿಸಿದ್ದಾರೆ.

    ಟೆಕ್ಕಿ ಮಾರ್ಚ್ 1ರಂದು ನ್ಯೂಯಾರ್ಕ್-ದುಬೈ ಮೂಲಕ ಬೆಂಗಳೂರಿಗೆ ಬಂದಿದ್ದ. ಮಾರ್ಚ್ 8ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಕೂಡಲೇ ಆತನನ್ನು ಮತ್ತು ಆತನ ಪತ್ನಿ ಮತ್ತು ಪುತ್ರಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 20 ತಜ್ಞ ವೈದ್ಯರು, 60 ದಾದಿಯರು ಹಗಲಿರುಳೆನ್ನದೇ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.

  • ರಾಜ್ಯದ 3 ವೈದ್ಯ ದಂಪತಿಗೆ ಕೊರೊನಾ ವೈರಸ್ ಶಂಕೆ

    ರಾಜ್ಯದ 3 ವೈದ್ಯ ದಂಪತಿಗೆ ಕೊರೊನಾ ವೈರಸ್ ಶಂಕೆ

    – ಹೋಳಿ ಹಬ್ಬಕ್ಕೆ ವಿದೇಶಕ್ಕೆ ಹೋಗಿದ್ದ ದಂಪತಿಗಳು

    ಬಾಗಲಕೋಟೆ: ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ಜಿಲ್ಲೆಯಲ್ಲಿ ಮೂವರು ವೈದ್ಯ ದಂಪತಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

    ಈ ಮೂವರ ವೈದ್ಯರ ಕುಟುಂಬದ ಆರು ಜನರು ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಈ ಕಾರಣದಿಂದ ಅವರಿಗೆ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿದೆ. ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ಮಾಡಿ ಅವರನ್ನು ಅಲ್ಲಿಯೇ 14 ದಿನಗಳ ಕಾಲ ವೀಕ್ಷಣೆಗೆ ಇಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಡಿಎಚ್‍ಓ ಡಾ.ಅನಂತ ದೇಸಾಯಿ, ಈ ಮೂವರ ವೈದ್ಯರ ಕುಟುಂಬದ ಆರು ಜನರು, ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಆದರೆ ಇವರಿಗೆ ರೋಗದ ಲಕ್ಷಣವಾಗಲಿ ಕೆಮ್ಮು, ಜ್ವರ ಏನೂ ಕಂಡುಬಂದಿಲ್ಲ. ಮುಂಜಾಗೃತ ಕ್ರಮವಾಗಿ ಅವರನ್ನು ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ನಲ್ಲಿ ಇಟ್ಟಿದ್ದೇವೆ. ಜೊತೆಗೆ ವಿದೇಶದಿಂದ ಬಂದಿರುವ ಇತರೆ ಐವರ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಕೊರೊನಾ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್- ಇಬ್ಬರ ಬಂಧನ

    ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ದೆಹಲಿಯ 69 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‍ಎಂಎಲ್) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ. ಇದನ್ನು ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕಲಬುರ್ಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದನ್ನು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಖಚಿತಪಡಿಸಿದ್ದರು. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ಒಂದು ವಾರ ರಾಜ್ಯದಲ್ಲಿ ಎಲ್ಲೆಡೆ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿದೆ.

  • ಆಸ್ಪತ್ರೆಗೆ ಕೊರೊನಾ ಶಂಕಿತ ಬಂದಿದ್ದ ಎಂದ ವೈದ್ಯೆಯ ಕೆಲಸ ಹೋಯ್ತು!

    ಆಸ್ಪತ್ರೆಗೆ ಕೊರೊನಾ ಶಂಕಿತ ಬಂದಿದ್ದ ಎಂದ ವೈದ್ಯೆಯ ಕೆಲಸ ಹೋಯ್ತು!

    ತ್ರಿಶೂರ್: ನಮ್ಮ ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಹೇಳಿದ್ದ ವೈದ್ಯೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ತ್ರಿಶೂರ್ ಜಿಲ್ಲೆಯ ತಳಿಕುಳಂ ಎಂಬಲ್ಲಿ ಖಾಸಗಿ ಕ್ಲಿನಿಕ್‍ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಶಿನು ಶ್ಯಾಮಲನ್ ಈ ವಿಚಾರವನ್ನು ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ವೈರಸ್ ಇದೆ ಎಂದು ಶಂಕಿತ ವ್ಯಕ್ತಿಯೋರ್ವ ನಮ್ಮ ಆಸ್ಪತ್ರೆಗೆ ಬಂದಿದ್ದ. ಬಳಿಕ ಆ ವ್ಯಕ್ತಿ ಕತಾರ್ ಗೆ ಹೋಗಿದ್ದ ಎಂದು ಶಿನು ಶ್ಯಾಮಲನ್ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದರು. ಆದರೆ ವೈದ್ಯೆಯ ಈ ಕೆಲಸ ಕ್ಲಿನಿಕ್ ಮಾಲೀಕನಿಗೆ ಖುಷಿ ನೀಡಲಿಲ್ಲ. ಬದಲಿಗೆ, ನಮ್ಮ ಕ್ಲಿನಿಕ್‍ಗೆ ಕೊರೊನಾ ಶಂಕಿತ ಬಂದಿದ್ದ ಎಂದರೆ ಬೇರೆ ರೋಗಿಗಳು ನಮ್ಮಲ್ಲಿಗೆ ಬರುತ್ತಾರಾ ಎಂದು ಪ್ರಶ್ನಿಸಿದರು. ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಹೇಳಿದ್ದಾರಂತೆ. ಈ ಎಲ್ಲಾ ವಿಚಾರಗಳನ್ನೂ ಶಿನು ಶ್ಯಾಮಲನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಡಾ.ಶಿನು ಶ್ಯಾಮಲನ್ ಫೇಸ್‍ಬುಕ್ ಪೇಜ್‍ನಲ್ಲಿ ಬರೆದಿದ್ದೇನು?:
    ಖಾಸಗಿ ಕ್ಲಿನಿಕ್‍ಗೆ ಬಂದ ರೋಗಿಯಲ್ಲಿ ಸೋಂಕು ಶಂಕೆ ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಆರೋಗ್ಯ ಇಲಾಖೆಗೆ, ಮರುದಿನ ಪೊಲೀಸರಿಗೆ ರಿಪೋರ್ಟ್ ಮಾಡಿದ್ದಕ್ಕೆ, ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಕ್ಕೆ, ಟಿವಿ ಚಾನೆಲ್‍ಗಳ ಮುಂದೆ ಹೇಳಿದ್ದಕ್ಕೆ ನನ್ನನ್ನು ಕೆಲಸದಿಂದ ಕೈಬಿಟ್ಟಿದ್ದಾರೆ.

    ರೋಗಿಯ ಬಗ್ಗೆಯಾಗಲೀ, ಕ್ಲಿನಿಕ್ ಕುರಿತಾಗಲೀ ನಾನು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಮಾಲೀಕರು ಹೇಳುವಂತೆ ಏನೂ ಮಾತನಾಡದೇ ಸುಮ್ಮನಿರಲು ಇದರಲ್ಲಿ ಅಂತಹ ವಿಚಾರವೇನಿದೆ..? ಬಂದಿದ್ದ ವ್ಯಕ್ತಿಗೆ ಕೊರೊನಾ ಬಂದಿತ್ತು ಎಂದು ಗೊತ್ತಾದರೆ ನಮ್ಮ ಕ್ಲಿನಿಕ್‍ಗೆ ಯಾರು ಬರುತ್ತಾರೆ ಎಂಬಿತ್ಯಾದಿ ಸ್ವಾರ್ಥ ಪ್ರಶ್ನೆಗಳಿತ್ತು ಮಾಲೀಕರಿಗೆ. ನಿಮಗೆಲ್ಲಾ ಆರೋಗ್ಯ ಕ್ಷೇತ್ರ ಎನ್ನುವುದು ಬಿಸಿನೆಸ್. ಕ್ಷಮಿಸಿಬಿಡಿ, ತಪ್ಪು ಕಾಣಿಸಿದರೆ ಧೈರ್ಯದಿಂದ ಹೇಳುತ್ತೇನೆ, ಇನ್ನು ಮುಂದೆಯೂ ಅದನ್ನೇ ಮಾಡುತ್ತೇನೆ. ಹೇಳಬೇಕಾದವರಿಗೆ ಹೇಳಿದರೂ ರೋಗಿಯನ್ನು ಕತಾರ್ ಗೆ ಹೋಗಲು ಬಿಟ್ಟವರಿಗೆ ಯಾವ ಸಮಸ್ಯೆಯೂ ಇಲ್ಲ, ಯಾವ ಕ್ರಮವೂ ಇಲ್ಲ. ಆದರೆ ನನಗೆ ನನ್ನ ಕೆಲಸ ಹೋಯಿತು. ಎಂಥಾ ರಾಜ್ಯವಿದು.

    ನಾನು ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಇನ್ನು ಮುಂದೆಯೂ ಧ್ವನಿ ಎತ್ತುವೆ.