Tag: doctor

  • ಮತ್ತೆ ವೈದ್ಯೆ ವೃತ್ತಿಗೆ ಮರಳಿದ ಮಿಸ್ ಇಂಗ್ಲೆಂಡ್

    ಮತ್ತೆ ವೈದ್ಯೆ ವೃತ್ತಿಗೆ ಮರಳಿದ ಮಿಸ್ ಇಂಗ್ಲೆಂಡ್

    ಲಂಡನ್: ವಿಶ್ವವ್ಯಾಪಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾವನ್ನು ಓಡಿಸಲು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಈ ಹೋರಾಟದಲ್ಲಿ ಭಾಗಿಯಾಗಲು ಮಿಸ್ ಇಂಗ್ಲೆಂಡ್-2019 ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಿಸ್ ಇಂಗ್ಲೆಂಡ್-2019 ಭಾಷಾ ಮುಖರ್ಜಿ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪುನರಾರಂಭಿಸಿದ್ದಾರೆ. ಪ್ರವಾಸದ ಸಲುವಾಗಿ ಭಾರತದಲ್ಲಿದ್ದ ಮುಖರ್ಜಿ, ಕೊರೊನಾ ವೈರಸ್ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚಾಗುತ್ತಿದ್ದಂತೆ ವೈದ್ಯರಾಗಿ ತಮ್ಮ ಕೆಲಸವನ್ನು ಮುಂದುವರಿಸಲು ಯುಕೆಗೆ ಮರಳಿದ್ದಾರೆ.

    https://www.instagram.com/p/B-Hr4eXnaOZ/

    ಕೋಲ್ಕತ್ತಾದಲ್ಲಿ ಜನಿಸಿದ ಭಾಷಾ ಮುಖರ್ಜಿ ಮೂಲತಃ ವೈದ್ಯರು. ಕಳೆದ ವರ್ಷ ಆಗಸ್ಟ್‍ನಲ್ಲಿ ನಡೆದ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮಿಸ್ ಇಂಗ್ಲೆಂಡ್-2019 ಕಿರೀಟವನ್ನು ಮೂಡಿಗೇರಿಸಿಕೊಂಡಿದ್ದರು. ಇದಾದ ನಂತರ ತನ್ನ ವೈದ್ಯಕೀಯ ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡು ನಂತರ ಚಾರಿಟಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು. ಆದರೆ ಈಗ ಕೊರೊನಾದಿಂದ ದೇಶ ಸಂಕಷ್ಟದಲ್ಲಿ ಸಲುಕಿದೆ ಎಂದು ಮತ್ತೆ ತನ್ನ ವೈದ್ಯಕೀಯ ವೃತ್ತಿಗೆ ಬಂದಿದ್ದಾರೆ.

    https://www.instagram.com/p/B9jAzMZHDpD/

    ಈ ವಿಚಾರವಾಗಿ ಮಾತನಾಡಿರುವ ಮುಖರ್ಜಿ, ಇದು ನನಗೆ ಕಠಿಣ ನಿರ್ಧಾರ ಎಂದು ಎನಿಸುತ್ತಿಲ್ಲ. ನಾನು ಸದ್ಯ ಆಫ್ರಿಕಾ ಮತ್ತು ಟರ್ಕಿ ಪ್ರವಾಸ ಮುಗಿಸಿದ್ದೇನೆ. ಏಷ್ಯಾ ದೇಶಗಳ ಪೈಕಿ ಮೊದಲು ನಾನು ಭಾರತಕ್ಕೆ ಪ್ರವಾಸ ಕೈಗೊಂಡಿದ್ದೆ. ಭಾರತದ ನಂತರ ನಾನು ಇನ್ನೂ ಹಲವಾರು ದೇಶಗಳಿಗೆ ಪ್ರವಾಸಕ್ಕೆ ಹೋಗಬೇಕಿತ್ತು. ಆದರೆ ಕೊರೊನಾ ವೈರಸ್‍ನಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮತ್ತೆ ವೈದ್ಯಕೀಯ ವೃತ್ತಿಗೆ ಮರಳಿ ಜನಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಎಂ.ಎಸ್. ಮುಖರ್ಜಿ ಮಾರ್ಚ್ ಆರಂಭದ ವಾರಗಳಲ್ಲಿ ಭಾರತದಲ್ಲಿದ್ದರು. ಈ ನಡುವೆ ಯುಕೆಯಲ್ಲಿ ಕೊರೊನಾ ವೈರಸ್ ನಿಂದ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಈ ಬಗ್ಗೆ ಪೂರ್ವ ಇಂಗ್ಲೆಂಡ್‍ನ ಬೋಸ್ಟನ್ ನಲ್ಲಿರುವ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿರುವ ಅವರ ಮಾಜಿ ಸಹೋದ್ಯೋಗಿಗಳು ದೇಶದಲ್ಲಿ ಪರಿಸ್ಥಿತಿ ಬಹಳ ಭೀಕರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರಣದಿಂದ ಮುಖರ್ಜಿ ಮತ್ತೆ ವೈದ್ಯ ವೃತ್ತಿಗೆ ಮರಳಲು ತೀರ್ಮಾನಿಸಿದ್ದಾರೆ.

    ನಾನು ಕೊರೊನಾ ವೈರಸ್ ಬಗ್ಗೆ ನನ್ನ ಸಹೋದ್ಯೋಗಿಗಳಿಂದ ಕೇಳಿ ತಿಳಿದುಕೊಂಡೆ. ಅವರು ಅಲ್ಲಿ ತುಂಬಾ ಕಷ್ಟಪಡುತ್ತಿದ್ದರು. ಆಗ ನನಗೆ ಅವರ ಕಷ್ಟದಲ್ಲಿ ಭಾಗಿಯಾಗಬೇಕು ಮತ್ತು ವೈದ್ಯಕೀಯ ವೃತ್ತಿಗೆ ಮರಳಬೇಕು ಅನಿಸಿತು. ಅದಕ್ಕಾಗಿ ಭಾರತದಿಂದ ನನ್ನ ದೇಶಕ್ಕೆ ಬಂದೆ. ಅಲ್ಲಿಂದ ಬಂದ ನಂತರ ಎರಡು ವಾರ ಸ್ವಯಂ ನಿರ್ಬಂಧದಲ್ಲಿ ಇದ್ದೆ. ಇದಾದ ನಂತರ ಮಂಗಳವಾರದಿಂದ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮುಖರ್ಜಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    https://www.instagram.com/p/B8_g9kNHEab/

    ಇಂಗ್ಲೆಂಡ್ ನಲ್ಲೂ ಕೂಡ ಕೊರೊನಾ ಮಹಾಮಾರಿ ರುದ್ರನರ್ತನ ಮಾಡುತ್ತಿದೆ. ಇಲ್ಲಿಯವರೆಗೂ ಯುಕೆಯಲ್ಲಿ ಸುಮಾರು 786 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 50 ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿತರು ಇದ್ದಾರೆ.

  • ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ

    ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

    ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.

    ಸೋಂಕು ಬಂದಿದ್ದು ಹೇಗೆ?
    ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

    ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.

    ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

    ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್  ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

    ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.

  • ಆಸ್ಪತ್ರೆಯಲ್ಲಿ ಪೋಷಕರನ್ನ ನೆನೆದು ಕಣ್ಣೀರಿಟ್ಟ ಏಮ್ಸ್ ವೈದ್ಯೆ

    ಆಸ್ಪತ್ರೆಯಲ್ಲಿ ಪೋಷಕರನ್ನ ನೆನೆದು ಕಣ್ಣೀರಿಟ್ಟ ಏಮ್ಸ್ ವೈದ್ಯೆ

    -ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡ್ತಿರುವ ಡಾಕ್ಟರ್

    ನವದೆಹಲಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ತಮ್ಮ ಪೋಷಕರನ್ನು ನೆನೆದು ಕಣ್ಣೀರಿಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ದೆಹಲಿಯ ಏಮ್ಸ್ ವೈದ್ಯೆ ಡಾ.ಅಂಬಿಕಾ, ಕುಟುಂಬಸ್ಥರಿಂದ ದೂರವಿದ್ದು ಕೆಲಸ ಮಾಡಬೇಕು ಎಂದು ಸರಳವಾಗಿ ಹೇಳಬಹುದು. ಆದ್ರೆ ಕುಟುಂಬಸ್ಥರ ಜೊತೆ ಮಾತನಾಡುವಾಗ ಮತ್ತು ಅವರಿಂದ ದೂರವಿದ್ದಾಗ ಸಹಜವಾಗಿ ನೋವು ಆಗುತ್ತದೆ. ಮನೆಗೆ ಹೋದ್ರೆ ನಮ್ಮಿಂದ ಅವರಿಗೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಒಂದು ವೇಳೆ ನಮ್ಮಿಂದ ಕುಟುಂದವರಿಗೆ ಸೋಂಕು ತಾಗಿದ್ರೆ ಆ ತಪ್ಪಿನಿಂದ ಕ್ಷಮೆ ಸಿಗಲಾರದು ಎಂದು ಹೇಳುತ್ತಾ ಭಾವುಕರಾದರು.

    ನಿಮ್ಮ ಜೊತೆ ಮಾತನಾಡುತ್ತಾ ನನಗೆ ಪೋಷಕರು ನೆನಪು ಆಗುತ್ತಿದ್ದಾರೆ. ಬಹಳ ದಿನಗಳಿಂದ ಅವರನ್ನು ನಾನು ಭೇಟಿಯಾಗಿಲ್ಲ ಎಂದು ಹೇಳಿ ಕಣ್ಣೀರಿಟ್ಟರು. ಇದೀಗ ನಿಮ್ಮ ಮೂಲಕ ಅವರಿಗೆ ಸಂದೇಶ ಕಳುಹಿಸುತ್ತಿದ್ದೇನೆ. ನಮ್ಮದು ಸುಂದರವಾದ ಕುಟುಂಬ. ಫೋನ್ ಮಾಡಿದಾಗ ಒಮ್ಮೆಯೂ ಮನೆಗೆ ಹಿಂದಿರುಗಿ ಬಾ ಅಂತ ಹೇಳಿಲ್ಲ. ಜೀವವಿದ್ರೆ ಏನ್ ಬೇಕಾದ್ರೂ ಸಾಧಿಸಬಹುದು ನಿನ್ನ ಕೆಲಸ ಬಿಟ್ಟು ಬಾ ಅಂತ ಹೇಳಿರೋದನ್ನ ಕೇಳಿಸಿಕೊಂಡಿಲ್ಲ ಎಂದು ಹೇಳಿದರು.

    ಅಮ್ಮನಿಗೆ ನನ್ನ ಊಟದ್ದೇ ಚಿಂತೆ: ಕೆಲಸದ ಜೊತೆ ಆರೋಗ್ಯದ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಚಿಕಿತ್ಸೆ ನೀಡುವಾಗ ಮುಂಜಾಗ್ರತ ಕ್ರಮಗಳನ್ನು ತೆಗದುಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಇನ್ನು ಅಮ್ಮನಿಗೆ ನನ್ನ ಊಟದ್ದೇ ಚಿಂತೆ. ಸರಿಯಾದ ಸಮಯಕ್ಕೆ ಊಟ ಮಾಡಬೇಕು ಎಂದು ಪದೇ ಪದೇ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಎಲ್ಲವನ್ನು ಮ್ಯಾನೇಜ್ ಮಾಡಿಕೊಳ್ಳಬೇಕು ಎಂಬುವುದು ವೈದ್ಯೆಯ ಮಾತು.

    ಇದೊಂದು ಯುದ್ಧ: ಕೊರೊನಾ ವಿರುದ್ಧ ನಮ್ಮೆಲ್ಲರದ್ದು ಒಂದು ರೀತಿಯ ಯುದ್ಧ. ದೇಶದ ಗಡಿಯಲ್ಲಿ ಯುದ್ಧ ನಡೆದರೆ ಯಾರು ತಾನೇ ಅವರ ಮಕ್ಕಳನ್ನು ಮನೆಗೆ ಕರೆಯುತ್ತಾರೆ. ನಮ್ಮ ಆಶೀರ್ವಾದ ನಿಮ್ಮ ಜೊತೆಯಲ್ಲಿರುತ್ತೆ ಯುದ್ಧಕ್ಕೆ ಹೋಗು ಅಂತ ಹೇಳ್ತಾರೆ. ಹಾಗೆಯೇ ಕೊರೊನಾ ಯುದ್ಧದಲ್ಲಿ ಆರೋಗ್ಯ ಸಿಬ್ಬಂದಿ ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ತಮ್ಮ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

  • ಕೊರೊನಾ ಭೀತಿ ನಡುವೆ ಭಾರತ ಉತ್ತಮ ಸಾಧನೆ ಮಾಡ್ತಿದೆ – ಅಮೆರಿಕದಿಂದ ವೈದ್ಯನ ಮೆಚ್ಚುಗೆ

    ಕೊರೊನಾ ಭೀತಿ ನಡುವೆ ಭಾರತ ಉತ್ತಮ ಸಾಧನೆ ಮಾಡ್ತಿದೆ – ಅಮೆರಿಕದಿಂದ ವೈದ್ಯನ ಮೆಚ್ಚುಗೆ

    ಮಡಿಕೇರಿ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಇದೀಗ ಕೊರೊನಾ ವೈರಸ್‍ನ ಬಗ್ಗೆ ಭಾರತ ಉತ್ತಮ ರೀತಿಯಲ್ಲಿ ಸಾಧನೆ ಮಾಡುತ್ತಿದೆ ಎಂದು ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಕಾರ್ಯಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜನರು ಸ್ವಲ್ಪ ಸಪೋರ್ಟ್ ಮಾಡಿದರೆ ಈ ಮಹಾಮಾರಿ ಕೊರೊನಾ ವೈರಸ್ ಅನ್ನು ಮಟ್ಟಹಾಕಬಹುದು ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ. ದೇಶದ ಆರ್ಥಿಕ ಮಟ್ಟ ಮತ್ತು ಕುಟುಂಬಗಳನ್ನು ಕೊರೊನಾ ನಾಶಮಾಡಿದೆ. ಆದರೆ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಮುಖವಾದ ಕ್ರಮದ ಅಗತ್ಯವಿದೆ. ಅದಕ್ಕಾಗಿ ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ಇದಕ್ಕಾಗಿ ಜನರು ಮನೆಯಲ್ಲೇ ಇರಿ, ಆರೋಗ್ಯವಾಗಿರಿ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.

    ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ಹೋದಾಗ 6 ಅಡಿ ಅಂತರ ಕಾಯ್ದುಕೊಳ್ಳಿ. ಮನೆಯಲ್ಲೇ ಇರುವಾಗ ಶ್ವಾಶಕೋಶದ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮ ಮಾಡಿ. ಕೆಲವು ದಿನಗಳು ಈ ರೀತಿ ಮಾಡಿದರೆ ಕೊರೊನಾ ವೈರಸ್ ದೇಶದಲ್ಲಿ ಕಡಿಮೆಯಾಗುತ್ತದೆ ಎಂದು ಅಮೆರಿಕದಿಂದ ಕೊಡಗಿನ ಜನತೆಗೆ ವಿಡಿಯೋ ಸಂದೇಶ ಕಳಿಸಿದ್ದಾರೆ.

    ಕಾರ್ಯಪ್ಪ ಅವರು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಪುತ್ರರಾಗಿದ್ದಾರೆ. ಸದ್ಯಕ್ಕೆ ಇವರು ಅಮೆರಿಕದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

  • ಹೋಂ ಕ್ವಾರಂಟೈನ್ ಅವಧಿಯಲ್ಲಿ ಆಸ್ಪತ್ರೆಗೆ ಬಂದ ವೈದ್ಯ – ಬೆಚ್ಚಿಬಿದ್ದ ಸಿಬ್ಬಂದಿ

    ಹೋಂ ಕ್ವಾರಂಟೈನ್ ಅವಧಿಯಲ್ಲಿ ಆಸ್ಪತ್ರೆಗೆ ಬಂದ ವೈದ್ಯ – ಬೆಚ್ಚಿಬಿದ್ದ ಸಿಬ್ಬಂದಿ

    ಬೆಂಗಳೂರು: ಹೋಂ ಕ್ವಾರಂಟೈನ್ ನಲ್ಲಿದ್ದ ವೈದ್ಯನ ಉದ್ದಟತನಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

    ಹೋಂ ಕ್ವಾರಂಟೈನ್ ನಲ್ಲಿ ಇರಿ ಎಂದು ಸೂಚಿಸಿದ್ದರೂ ಮನೆಯಿಂದ ಹೊರಗಡೆ ಬಂದ ವೈದ್ಯ, ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದಾನೆ. ರೋಗಿ ಸಂಖ್ಯೆ 6ರ ಜೊತೆ ಪ್ರಾಥಮಿಕ ಸಂಬಂಧ ಹೊಂದಿದ್ದ ಈ ವೈದ್ಯನನ್ನು 28 ದಿನ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು.

    ಹೋಂ ಕ್ವಾರಂಟೈನ್ ಅವಧಿ ಮುಗಿಯುವುದಕ್ಕೂ ಮುನ್ನ ಮನೆಯಿಂದ ಹೊರಗಡೆ ಬಂದ ವೈದ್ಯ ಆಸ್ಪತ್ರೆಯಲ್ಲಿ ಓಡಾಡಿದ್ದಾನೆ. ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಿದ್ದರೂ ಆಸ್ಪತ್ರೆಗೆ ಬರುತ್ತಿದ್ದ ವೈದ್ಯನ ಉದ್ದಟತನಕ್ಕೆ ಬೇಸತ್ತು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದರು.

    ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೈದ್ಯನನ್ನು ಹೋಂ ಅರೆಸ್ಟ್ ಮಾಡಲಾಗಿದೆ. ಈ ದೂರಿನ ಮೇರೆಗೆ ಆರೋಗ್ಯಾಧಿಕಾರಿಗಳು ಕೋರಮಂಗಲದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಿದ್ದಾರೆ.

  • ಕೊರೊನಾ ಸೋಂಕು ಹರಡಿಸಿದಳೆಂದು ಪ್ರೇಯಸಿ ವೈದ್ಯೆಯನ್ನೇ ಕೊಂದ

    ಕೊರೊನಾ ಸೋಂಕು ಹರಡಿಸಿದಳೆಂದು ಪ್ರೇಯಸಿ ವೈದ್ಯೆಯನ್ನೇ ಕೊಂದ

    – ಕೈ ಕಟ್ ಮಾಡ್ಕೊಂಡು ಪೊಲೀಸರಿಗೆ ಫೋನ್
    – ಇಬ್ಬರ ರಿಪೋರ್ಟ್ ನಲ್ಲಿ ಕೊರೊನಾ ನೆಗೆಟಿವ್

    ರೋಮ್: ಕೊರೊನಾ ವೈರಸ್ ಜಗತ್ತಿನಾದ್ಯಂತ ಎಲ್ಲರನ್ನೂ ಭಯಭೀತರನ್ನಾಗಿ ಮಾಡುತ್ತಿದೆ. ಇದೀಗ ಅದೇ ಭಯದಲ್ಲಿ ಕೊರೊನಾ ವೈರಸ್ ಸೋಂಕನ್ನು ತನಗೆ ಹರಡಿದ್ದಾಳೆ ಎಂದು ನರ್ಸ್ ಒಬ್ಬ ತನ್ನ ವೈದ್ಯೆ ಗೆಳತಿಯನ್ನು ಕೊಲೆ ಮಾಡಿರುವ ಘಟನೆ ಇಟಲಿಯಲ್ಲಿ ನಡೆದಿದೆ.

    ವಿದ್ಯಾರ್ಥಿ ಲೊರೆನಾ ಕ್ವಾರಂಟಾ (27) ಕೊಲೆಯಾದ ವೈದ್ಯೆ. ಈಕೆಯ ಪ್ರಿಯಕರ ಆಂಟೋನಿಯೊ ಡಿ ಪೇಸ್ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?
    ಮೃತ ಲೊರೆನಾ ಸಿಸಿಲಿಯ ಮೆಸ್ಸಿನಾದಲ್ಲಿರುವ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಡಿ ಪೇಸ್ ಕೂಡ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಜಗತ್ತಿನಾದ್ಯಂತ ಕೊರೊನಾ ವ್ಯಾಪಿಸಿರುವುದರಿಂದ ವೈದ್ಯೆ ಲೊರೆನಾ ಕೊರೊನಾ ರೊಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದಳು.

    ಇತ್ತೀಚೆಗೆ ಆರೋಪಿ ಡಿ ಪೇಸ್ ಅನಾರೋಗ್ಯದಿಂದ ಬಳಲುತ್ತಿದ್ದನು. ಆಗ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಇದರಿಂದ ಗಾಬರಿಯಾದ ಆರೋಪಿ ತನ್ನ ಗೆಳತಿ ತನಗೆ ಕೊರೊನಾ ಸೋಂಕು ಹರಡಿಸಿದ್ದಾಳೆ ಎಂದುಕೊಂಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಲೊರೆನಾ ನಿದ್ರೆ ಮಾಡುತ್ತಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೂ ಕೂಡ ಚಾಕುವಿನಿಂದ ಕೈ ಕಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಆರೋಪಿ ಪೊಲೀಸರಿಗೆ ಫೋನ್ ಮಾಡಿ ತಾನು ಪ್ರಿಯತಮೆಯನ್ನು ಕೊಲೆ ಮಾಡಿದ್ದೇನೆ ಎಂದು ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಡಿ ಪೇಸ್ ಕೈಯನ್ನು ಕಟ್ ಮಾಡಿಕೊಂಡಿದ್ದನ್ನು ನೋಡಿದ್ದಾರೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಲೊರೆನಾಳ ಸಹೋದ್ಯೋಗಿಗಳು ಆರೋಪಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಆದರೆ ಲೊರೆನಾ ಅಷ್ಟರಲ್ಲೇ ಮೃತಪಟ್ಟಿದ್ದಳು.

    ಇತ್ತ ಪೊಲೀಸರು ಡಿ ಪೇಸ್‍ನ್ನು ವಿಚಾರಣೆ ಮಾಡಿದ್ದಾರೆ. ಆಗ ಆತ ಲೊರೆನಾ ನನಗೆ ಕೊರೊನಾ ವೈರಸ್ ಸೋಂಕು ಹರಡಿಸಿದ್ದಳು. ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ಆತನ ಹೇಳಿಕೆಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಇಬ್ಬರಿಗೂ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆದರೆ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ.

    ಇತ್ತೀಚೆಗೆ ಕೊರೊನಾದ ಬಗ್ಗೆ ಲೊರೆನಾ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡಿದ್ದಳು. “ನಿಮ್ಮ, ನಿಮ್ಮ ಕುಟುಂಬಗಳ ಬಗ್ಗೆ ಮತ್ತು ದೇಶದ ಬಗ್ಗೆ ನೀವು ಗೌರವವನ್ನು ತೋರಿಸಬೇಕು. ನಿಮಗಾಗಿ ಪ್ರತಿದಿನ ತನ್ನ ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುವವರ ಬಗ್ಗೆ ಯೋಚಿಸಬೇಕು. ಹೀಗಾಗಿ ನೀವು ಮನೆಯಲ್ಲಿಯೇ ಇರಬೇಕು. ಹೊರಗಡೆ ಬರಬೇಡಿ ಎಂದು ಬರೆದುಕೊಂಡಿದ್ದಳು.

    ಮೃತ ಲೊರೆನಾ ಸಿಸಿಲಿಯ ಫವಾರಾ ಮೂಲದವಳಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮೆಸ್ಸಿನಾದಲ್ಲಿ ಒಟ್ಟಿಗೆ ವಾಸವಾಗಿದ್ದರು. ಲೊರೆನಾ ಅವರಿಗೆ ವೈದ್ಯಕೀಯ ಪದವಿಯನ್ನು ಮರಣೋತ್ತರವಾಗಿ ಗೌರವಯುತವಾಗಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

  • ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    ಬ್ರಿಟನ್ ರಾಜಕುಮಾರನಿಗೆ ಬೆಂಗ್ಳೂರು ವೈದ್ಯನಿಂದ ಚಿಕಿತ್ಸೆ

    – ಆಯುರ್ವೇದ ವೈದ್ಯ ಪದ್ಧತಿಯಿಂದ ಗುಣಮುಖ

    ಬೆಂಗಳೂರು: ಬ್ರಿಟನ್‍ ಪ್ರಿನ್ಸ್ ಚಾರ್ಲ್ಸ್‌ಗೆ ಕೊರೊನಾ ವೈರಸ್ ಬಂದಿದ್ದು, ಸೋಂಕು ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ.

    ಬೆಂಗಳೂರು ಮೂಲದ ವೈದ್ಯ ಐಸಾಕ್ ಮಥಾಯ್ ಬ್ರಿಟನ್‍ನ ರಾಜಕುಮಾರನಿಗೆ ಚಿಕಿತ್ಸೆ ನೀಡಿದ್ದಾರೆ. ಕೊರೊನಾ ಸೋಂಕಿತರಾಗಿದ್ದ ಪ್ರಿನ್ಸ್ ಚಾರ್ಲ್ಸ್‌ಗೆ ಐಸಾಕ್ ಮಥಾಯ್ ಇಲ್ಲಿಂದಲೇ ಆಯುರ್ವೇದದ ಚಿಕಿತ್ಸೆ ನೀಡಿದ್ದಾರೆ. ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ತಮ್ಮ ವೈದ್ಯ ಪದ್ಧತಿಯಿಂದ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್‌ಗೆ ಔಷಧ ಸೂಚಿಸಿ ಅವರು ಗುಣಮುಖರಾಗಿದ್ದಾರೆಂದು ಹೇಳಿರುವುದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೊನಾ ವೈರಸ್‍ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.

    ಬ್ರಿಟನ್‍ನ ಪ್ರಿನ್ಸ್ ಚಾರ್ಲ್ಸ್‌ಗೆ ಆಯುರ್ವೇದ ಔಷಧ ನೀಡಿರುವ ವೈದ್ಯ ಐಸಾಕ್ ಮಥಾಯ್ ಅವರು ‘ಸೌಖ್ಯ’ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ.

  • ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ

    ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಏಮ್ಸ್ ಆಸ್ಪತ್ರೆ ವೈದ್ಯನ ತುಂಬು ಗರ್ಭಿಣಿ ಪತ್ನಿಗೂ ಕೊರೊನಾ ಸೋಂಕು ಧೃಡಪಟ್ಟಿದೆ.

    9 ತಿಂಗಳ ತುಂಬು ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದೆ. ದೆಹಲಿ ಏಮ್ಸ್ ಆಸ್ಪತ್ರೆಯ ವೈದ್ಯನಿಗೆ ಕೊರೊನಾ ಸೋಂಕು ಕಂಡು ಬಂದಿತ್ತು. ಹೀಗಾಗಿ ವಿಶೇಷ ವಾರ್ಡಿಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

    ವೈದ್ಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿಯನ್ನು ತಪಾಸಣೆ ಒಳಪಡಿಸಲಾಗಿತ್ತು. ತಪಾಸಣೆ ವೇಳೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದೀಗ ಗರ್ಭಿಣಿಯನ್ನು ಎಮರ್ಜೆನ್ಸಿ ವಾರ್ಡಿನಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಗರ್ಭಿಣಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಇನ್ನೂ ಎರಡು ಮೂರು ದಿನಗಳಲ್ಲಿ ಹೆರಿಗೆ ಆಗುವ ಸಾಧ್ಯತೆ ಇದೆ. ಆದರೆ ಇದೇ ವೇಳೆ ಗರ್ಭಿಣಿಗೂ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ ವೈದ್ಯೆಗೆ ಕೊರೊನಾ ಇರುವುದು ಸ್ಪಷ್ಟವಾಗಿತ್ತು. ಇದಕ್ಕೂ ಮುನ್ನ ಮೊಹಲ್ಲಾ ಕ್ಲೀನಿಕ್ ವೈದ್ಯನಿಗೆ ಕೊರೊನಾ ಪಾಸಿಟಿವ್ ಆಗಿತ್ತು.

  • ಹಾವೇರಿಯಲ್ಲಿ ತಹಶೀಲ್ದಾರ್, ಡಾಕ್ಟರ್ ನಡುವೆ ಟಾಕ್ ವಾರ್

    ಹಾವೇರಿಯಲ್ಲಿ ತಹಶೀಲ್ದಾರ್, ಡಾಕ್ಟರ್ ನಡುವೆ ಟಾಕ್ ವಾರ್

    ಹಾವೇರಿ: ತಹಶೀಲ್ದಾರ್ ಭೇಟಿ ವೇಳೆ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇಲ್ಲದ್ದಕ್ಕೆ ತಹಶೀಲ್ದಾರ್ ಬಾಯಿಗೆ ಬಂದಂತೆ ಮಾತನಾಡಿದ್ದು, ಈ ವೇಳೆ ಇಬ್ಬರ ನಡುವೆ ಏಕವಚನದಲ್ಲೇ ವಾಗ್ವಾದ ನಡೆದಿದೆ. ಅಲ್ಲದೆ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಭಾನುವಾರ ಮಧ್ಯಾಹ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾನಗಲ್ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇರಲಿಲ್ಲ. ವೈದ್ಯ ಡಾ.ರಾಘವೇಂದ್ರ ಆಸ್ಪತ್ರೆಯಲ್ಲಿ ಇಲ್ಲದ್ದನ್ನು ತಹಶೀಲ್ದಾರ ಎರ್ರಿಸ್ವಾಮಿ ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಡಾ.ರಾಘವೇಂದ್ರ ಸ್ಥಳಕ್ಕೆ ಆಗಮಿಸಿದ್ದಾರೆ ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.

    ನಂತರ ಆಸ್ಪತ್ರೆ ಮುಂಭಾಗದಲ್ಲಿ ವೈದ್ಯಾಧಿಕಾರಿ ಮತ್ತು ತಹಶೀಲ್ದಾರ ಇಬ್ಬರೂ ಪರಸ್ಪರ ಏಕವಚನದಲ್ಲಿ ನಿಂದಿಸಿದ್ದಾರೆ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು. ಸ್ಥಳೀಯರು ಹಾಗೂ ಪೊಲೀಸರು ಇಬ್ಬರ ನಡುವಿನ ಫೈಟಿಂಗ್ ಶಮನಕ್ಕೆ ಪ್ರಯತ್ನಿಸಿದರು. ಆದರೆ ಇಬ್ಬರ ನಡುವಿನ ಏಕವಚನದ ಟಾಕ್ ಫೈಟ್ ಮುಂದುವರಿದಿತ್ತು. ನಂತರ ಆಸ್ಪತ್ರೆಗೆ ಬೀಗ ಹಾಕಲಾಯಿತು. ಇಬ್ಬರ ಫೈಟಿಂಗ್ ನೋಡಿದ ರೋಗಿಗಳು ಕಂಗಾಲಾದರು.

    ಹಾನಗಲ್ ತಹಶೀಲ್ದಾರ್ ನನ್ನ ಮೇಲೆ ದೈಹಿಕ ದೌರ್ಜನ್ಯ ಮಾಡಿದ್ದಲ್ಲದೇ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಘವೇಂದ್ರ ಆರೋಪಿಸಿದರು. ತಹಶೀಲ್ದಾರ್ ಈ ಆರೋಪವನ್ನು ಅಲ್ಲಗಳೆದಿದ್ದು, ಜನರ ದೂರಿನ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಪ್ರಶ್ನಿಸಿದ್ದಕ್ಕೆ ಡಾ.ರಾಘವೇಂದ್ರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

  • ಹೋಮ್ ಕ್ವಾರೆಂಟೈನ್‍ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

    ಹೋಮ್ ಕ್ವಾರೆಂಟೈನ್‍ನಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

    ಹಾಸನ: ಮುನ್ನೆಚ್ಚರಿಕಾ ಕ್ರಮವಾಗಿ 14 ದಿನ ಮನೆಯಲ್ಲೇ ಇರಲು ತಿಳಿಸಿದ್ದ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.

    ಯುಗಾದಿ ಹಬ್ಬಕ್ಕೆ ಮುಂಬೈನಿಂದ ಹುಟ್ಟೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೊರರಾಜ್ಯದಿಂದ ಬಂದಿದ್ದರಿಂದ ಆತನಿಗೆ 14 ದಿನ ಮನೆಯಲ್ಲೇ ಇರಲು ಆರೋಗ್ಯ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದರು. ಆತ ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದಲೂ ಬಳಲುತ್ತಿದ್ದ ಎಂದು ಹೇಳಲಾಗುತ್ತಿದೆ.

    ಇಂದು ವ್ಯಕ್ತಿ ಮನನೊಂದು ನೇಣಿಗೆ ಶರಣಾಗಿದ್ದಾನೆ. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದಾರೆ. ಅಲ್ಲದೇ ವೈದ್ಯರು ಬರುವವರೆಗೂ ಮೃತದೇಹದ ಬಳಿ ಹೋಗದಂತೆ ಸಂಬಂಧಿಕರಿಗೆ ಪೊಲೀಸರ ಸೂಚನೆ ನೀಡಿದ್ದಾರೆ.

    ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.