Tag: doctor

  • ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ- ಸಿಎಂ ಅಭಿನಂದನೆ

    ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ- ಸಿಎಂ ಅಭಿನಂದನೆ

    ಬೆಂಗಳೂರು: ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸೇವೆ ಸಲ್ಲಿಸಿ ಮನೆಗೆ ಮರಳಿದ ಮೈಸೂರು ಮೂಲದ ವೈದ್ಯೆ ಉಮಾ ಮಧುಸೂದನ್ ಅವರಿಗೆ ವಿಶೇಷ ಗೌರವ ಸಿಕ್ಕಿದ್ದು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಬಿಎಸ್‍ವೈ, ಕನ್ನಡ ನಾಡಿನ ಹಿರಿಮೆ ಸಾರುತ್ತಿರುವ ಹೆಣ್ಣುಮಗಳನ್ನು ಅಭಿನಂದಿಸುವುದಾಗಿ ಬರೆದುಕೊಂಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ದೂರದ ಅಮೆರಿಕದಲ್ಲಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ಮೈಸೂರು ಮೂಲದ ಕನ್ನಡತಿ ಡಾ.ಉಮಾ ಮಧುಸೂದನ್ ಅಲ್ಲಿನ ಜನರ ಹಾಗೂ ಸರಕಾರದ ಮೆಚ್ಚುಗೆಗೆ ಪಾತ್ರರಾಗಿ ‘ಡ್ರೈವ್ ಆಫ್ ಹಾನರ್’ ವಿಶೇಷ ಗೌರವ ಪಡೆದು ಕೊಳ್ಳುತ್ತಿದ್ದಾರೆ. ಸೇವೆ, ಸಮರ್ಪಣೆ ನಮ್ಮ ಕನ್ನಡನಾಡಿನ ಹಿರಿಮೆ ಎಂದು ಸಾರುತ್ತಿರುವ ಈ ಹೆಣ್ಣು ಮಗಳನ್ನು ಅಭಿನಂದಿಸುವೆ.

    ಅಮೆರಿಕ ಓಕ್‍ಲ್ಯಾಂಡ್‍ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ವಿಡಿಯೋದಲ್ಲೇನಿದೆ..?
    ಈ ವಿಡಿಯೋದಲ್ಲಿ ಡಾ.ಉಮಾ ಮಧುಸೂದನ್ ಅವರ ಮನೆಯ ಮುಂದೆ ಕಾರುಗಳಲ್ಲಿ ನೂರಾರು ಜನರು ಸಾಲು ಸಾಲಾಗಿ ಒಂದು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೇ ಉಮಾ ಅವರು ಕೂಡ ಕೊರೊನಾ ವಿರುದ್ಧ ಹೋರಾಡಿ ಗೆದ್ದವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಮಾಜದ ನಿಜವಾದ ಸೂಪರ್ ಹೀರೋಗಳಾದ ವೈದ್ಯರು, ವೈದ್ಯಕೀಯ ಸಿಬ್ಬಂದಿ ಪಟ್ಟುಬಿಡದೆ ಕೆಲಸ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತದ ಅನೇಕರು ಕೊರೊನಾ ವಾರಿಯರ್ಸ್ ಗಳಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

  • ಇದ್ದಕ್ಕಿದ್ದಂತೆ ಕಿರುಚಿ, ಹಲ್ಲೆ ನಡೆಸಿದ್ರು- ಮೊರಾದಾಬಾದ್ ದಾಳಿ ವಿವರಿಸಿದ ಸಂತ್ರಸ್ತ ವೈದ್ಯ

    ಇದ್ದಕ್ಕಿದ್ದಂತೆ ಕಿರುಚಿ, ಹಲ್ಲೆ ನಡೆಸಿದ್ರು- ಮೊರಾದಾಬಾದ್ ದಾಳಿ ವಿವರಿಸಿದ ಸಂತ್ರಸ್ತ ವೈದ್ಯ

    – ಟೆರೇಸ್‍ ಮೇಲಿಂದ ಕಲ್ಲು ಎಸೆದಿದ್ದ ಮಹಿಳೆಯರು
    – 7 ಜನ ಮಹಿಳೆಯರು ಸೇರಿದಂತೆ 17 ಮಂದಿ ಅರೆಸ್ಟ್

    ಲಕ್ನೋ: ಮೊರಾದಾಬಾದ್‍ನಲ್ಲಿ ನಡೆದ ಭೀಕರ ದಾಳಿಯಲ್ಲಿ ಗಾಯಗೊಂಡ ವೈದ್ಯಕೀಯ ತಂಡದ ಸದಸ್ಯರಲ್ಲಿ ಒಬ್ಬರಾದ ಡಾ.ಎಸ್.ಸಿ.ಅಗರ್ವಾಲ್ ಚೇತರಿಸಿಕೊಂಡಿದ್ದು, ತಮ್ಮ ಮೇಲೆ ನಡೆದ ಹಲ್ಲೆಯನ್ನು ವಿವರಿಸಿದ್ದಾರೆ.

    ”ಸರ್ತಾಜ್ ಎಂಬ ಕೊರೊನಾ ವೈರಸ್ ಪಾಸಿಟಿವ್ ರೋಗಿ ಮೃತಪಟ್ಟಿದ್ದ. ಹೀಗಾಗಿ ತಕ್ಷಣವೇ ಆತನೊಂದಿಗೆ ನೇರ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‍ನಲ್ಲಿ ಇರಿಸಬೇಕಿತ್ತು. ಆದ್ದರಿಂದ ಮೊದಲ ದಿನ ಮೃತ ರೋಗಿಯ ಪತ್ನಿ ಮತ್ತು ಹಿರಿಯ ಮಗನನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಯಿತು. ಆದರೆ ಇಬ್ಬರು ಚಿಕ್ಕ ಮಕ್ಕಳು ಮೃತ ವ್ಯಕ್ತಿಯ ತಮ್ಮನ ಮನೆಯಲ್ಲಿದ್ದರು. ಹೀಗಾಗಿ ಮರುದಿನ ಅಂದ್ರೆ ಏಪ್ರಿಲ್ 15ರಂದು ಮಕ್ಕಳಿದ್ದ ಮನೆಗೆ ಹೋಗಿದ್ದೆವು. ಈ ವೇಳೆ ಅವರೊಂದಿಗೆ ಮಾತನಾಡಿ, ವಿಶ್ವಾಸದಿಂದ ಕರೆದೊಯ್ಯಲು ಅಂಬುಲೆನ್ಸ್‌ಗೆ ಕರೆ ಮಾಡಿದ್ವಿ ಎಂದು ಎಂದು ಅಗರ್ವಾಲ್ ಹೇಳಿದರು.

    ನಗರದಲ್ಲಿ ವಾಹನ ಸಂಚಾರ ಇಲ್ಲದೆ ಇರುವುದರಿಂದ ಅಂಬುಲೆನ್ಸ್ ಸ್ಥಳಕ್ಕೆ ಅರ್ಧ ಗಂಟೆಯಲ್ಲಿ ಬಂದಿತ್ತು. ಆದರೆ ಮೃತ ಕೊರೊವಾ ವೈರಸ್ ರೋಗಿಯ ಸಂಬಂಧಿಕರನ್ನು ಅಂಬುಲೆನ್ಸ್‌ನಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಂಡೆವು. ಈ ವೇಳೆ ಟೆರೇಸ್‍ನಲ್ಲಿದ್ದ ಕೆಲ ಮಹಿಳೆಯರು ಇದ್ದಕ್ಕಿದ್ದಂತೆ ಕಿರುಚಿ, ಅಂಬುಲೆನ್ಸ್‌ ಮೇಲೆ ಕಲ್ಲು ತೂರಲು ಆರಂಭಿಸಿದರು ಎಂದು ತಿಳಿಸಿದರು.

    ಕಾಲುದಾರಿಗಳಲ್ಲಿ ಒಂದು ದೊಡ್ಡ ಗುಂಪು ಜಮಾಯಿಸಿತ್ತು. ಹೀಗಾಗಿ ರಕ್ಷಣೆಗಾಗಿ ನಾವು ಪೊಲೀಸರಿಗೆ ಮಾಹಿತಿ ನೀಡಿದ್ವಿ. ಹೀಗಾಗಿ 6-7 ಜನ ಪೊಲೀಸರು ಶೀಘ್ರವೇ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಭರವಸೆ ನೀಡಿದರು. ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸುವಾಗ, ಸ್ಥಳದಲ್ಲಿ ಜಮಾಯಿಸಿದ್ದ ಗುಂಪು ಗೋ ಬ್ಯಾಕ್.. ಗೋ ಬ್ಯಾಕ್ ಎಂದು ಕೂಗಲು ಆರಂಭಿಸಿತು. ಅಷ್ಟೇ ಅಲ್ಲದೆ ಆರೋಗ್ಯ ಇಲಾಖೆ ಸಿಬ್ಬಂದಿ ನಮ್ಮನ್ನು ಕರೆದೊಯ್ದು ಹಿಂಸೆ ನೀಡುತ್ತಾರೆ, ಊಟ ಕೊಡುವುದಿಲ್ಲ. ಕೊರೊನಾ ಸೋಂಕಿನ ಚುಚ್ಚುಮದ್ದು ನೀಡುತ್ತಾರೆ. ಅಂತಿಮವಾಗಿ ಅದು ನಮ್ಮನ್ನು ಕೊಲ್ಲುತ್ತದೆ ಎಂದು ಕೂಗಲು ಪ್ರಾರಂಭಿಸಿದರು ಎಂದು ಅಗರ್ವಾಲ್ ಘಟನೆ ವಿವರಿಸಿದ್ದಾರೆ.

    ”ಇದ್ದಕ್ಕಿದ್ದಂತೆ ಗುಂಪೊಂದು, ಅವರಿಗೆ ಹೊಡೆಯಿರಿ, ಅವರನ್ನು ಹೊಡೆಯಿರಿ ಎಂದು ಕೂಗಲು ಪ್ರಾರಂಭಿಸಿತು. ಈ ವೇಳೆ ಮೃತ ರೋಗಿಯ ನಾಲ್ವರು ಸಂಬಂಧಿಕರು ತಪ್ಪಿಸಿಕೊಂಡರು. ಇತ್ತ ಗುಂಪು ಅಂಬುಲೆನ್ಸ್ ಅನ್ನು ಧ್ವಂಸ ಮಾಡಲು ಪ್ರಾರಂಭಿಸಿತು. ಅಂಬುಲೆನ್ಸ್ ಚಾಲಕ ಮತ್ತು ಓರ್ವ ವೈದ್ಯಕೀಯ ಸಿಬ್ಬಂದಿ ಅಂಬುಲೆನ್ಸ್ ಒಳಗೆ ಹೋಗಲು ಯಶಸ್ವಿಯಾದರು. ಆದರೆ ಒಂದು ದೊಡ್ಡ ಕಲ್ಲು ನನ್ನ ಮುಖದ ಮೇಲೆ ಬಿತ್ತು. ಬಲವಾದ ಹೊಡೆತ ಬಿದ್ದಿದ್ದರಿಂದ ಕೆಳಗೆ ಬಿದ್ದೆ. ಆಗ ಎದ್ದು ನಡೆಯಲು ಪ್ರಾರಂಭಿಸಿದಾಗ ಕೆಲವರು ಕೋಲಿನಿಂದ ತಲೆಗೆ ಹೊಡೆದರು. ಅದೇ ಸಮಯದಲ್ಲಿ ಮಹಿಳೆಯರು ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು” ಎಂದು ತಿಳಿಸಿದರು. ಈ ಮೂಲಕ ಇದೊಂದು ಯೋಜಿತ ಹಲ್ಲೆ ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಅಗರ್ವಾಲ್ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ಬುಧವಾರ ನಡೆದಿದ್ದು, ಗುರುವಾರ ಬೆಳಗ್ಗೆ ಉತ್ತರ ಪ್ರದೇಶದ ಪೊಲೀಸರು ಏಳು ಮಹಿಳೆಯರು ಸೇರಿದಂತೆ 17 ಮಂದಿಯನ್ನು ಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವೊಂದು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • ವೈದ್ಯನಾಗಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಬಾಲಿವುಡ್ ನಟ

    ವೈದ್ಯನಾಗಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಬಾಲಿವುಡ್ ನಟ

    ಮುಂಬೈ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೊನಾ ಹಾವಳಿ ಹೆಚ್ಚಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ಕೆಲ ನಟ-ನಟಿಯರು ನರ್ಸ್ ಆಗಿ, ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಾ, ಬಡವರಿಗೆ ಸಹಾಯ ಮಾಡುತ್ತಾ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೈಜೊಡಿಸಿದ್ದಾರೆ.

    ಈಗ ಬಾಲಿವುಡ್ ನಟ ಆಶೀಶ್ ಗೋಕಲೆ ಕೂಡ ಕೊರೊನಾ ಹೋರಾಟದಲ್ಲಿ ದೇಶಕ್ಕೆ ಸಾಥ್ ನೀಡುತ್ತಿದ್ದು, ವೈದ್ಯಕೀಯ ವೃತ್ತಿ ಮಾಡುತ್ತಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಆಶೀಶ್ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.

    https://www.instagram.com/p/B9yG-4kJVqg/

    ಈ ಬಗ್ಗೆ ಆಶೀಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜನರ ಸೇವೆ ಮಾಡುತ್ತಿರುವುದರಿಂದ ನನಗೆ ನೆಮ್ಮದಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ `ಎಲ್ಲರೂ ಕಣ್ಣು ಬಿಟ್ಟು ನೋಡಿ, ಮೆಕ್ಕಾ ಮತ್ತು ಮದೀನಾ ಬಂದ್ ಆಗಿದೆ. ವ್ಯಾಟಿಕನ್ ಬಂದ್ ಆಗಿದೆ. ತಿರುಪತಿ ಮತ್ತು ಶಿರಡಿ ಕೂಡ ಬಂದ್ ಆಗಿದೆ. ಆದರೆ ಆಸ್ಪತ್ರೆ ಸಿಬ್ಬಂದಿ, ನರ್ಸ್‍ಗಳು ಮತ್ತು ವೈದ್ಯರು 24*7 ಕೆಲಸ ಮಾಡುತ್ತಿದ್ದಾರೆ ಎಂದು ಬರೆದುಕೊಂಡು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    https://www.instagram.com/p/B94JQmYJwTQ/

    ಸದ್ಯ ಕೊರೊನಾ ಮಾಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಜೊತೆಗೆ ಆಶೀಶ್ ನಿಂತಿದ್ದು, ವೈದ್ಯರಾಗಿ ಸೇವೆ ಸಲ್ಲಿಸುತ್ತ ರಣಕೇಕೆ ಹಾಕುತ್ತಿರುವ ಕೊರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿದ್ದಾರೆ.

    ವೈದ್ಯಕೀಯ ವೃತ್ತಿ ಜೊತೆಗೆ ಆಶೀಶ್ ಧಾರಾವಾಹಿ, ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆಗೆ ಈ ಹಿಂದೆ ಆಶೀಶ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಆಶೀಶ್ ಸಿನಿಮಾರಂಗದಲ್ಲೇ ಉಳಿಯಲಿಲ್ಲ. ಬದಲಿಗೆ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದು, ಇಂದು ಸಂಕಷ್ಟದಲ್ಲಿರುವ ದೇಶಕ್ಕೆ ಭರವಸೆಯ ಬೆಳಕಾಗಿ, ರೋಗಿಗಳ ಪ್ರಾಣ ಕಾಪಾಡುವ ಮಾಹತ್ಕಾರ್ಯ ಮಾಡುತ್ತಿದ್ದಾರೆ.

    https://www.instagram.com/p/B-CQvc0phBx/

  • ತುಂಬು ಗರ್ಭಿಣಿ ವೈದ್ಯೆಯಿಂದ ಜನರ ಸೇವೆ – ಪ್ರತಿದಿನ ಆರೋಗ್ಯ ಕೇಂದ್ರಕ್ಕೆ 30 ಕಿ.ಮೀ. ಪ್ರಯಾಣ

    ತುಂಬು ಗರ್ಭಿಣಿ ವೈದ್ಯೆಯಿಂದ ಜನರ ಸೇವೆ – ಪ್ರತಿದಿನ ಆರೋಗ್ಯ ಕೇಂದ್ರಕ್ಕೆ 30 ಕಿ.ಮೀ. ಪ್ರಯಾಣ

    – ಗ್ರಾಮಗಳ ಮನೆಗೆ ಹೋಗಿ ರೋಗಿಗಳ ತಪಾಸಣೆ
    – ಲಾಕ್‍ಡೌನ್ ವೇಳೆ ಜನರ ಸೇವೆಯೇ ಮುಖ್ಯ

    ಹೈದರಾಬಾದ್: ಕೊರೊನಾ ನಡುವೆಯೂ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಒಂದು ತಿಂಗಳ ಮಗುವನ್ನು ಕೈಯಲ್ಲಿ ಎತ್ತಿಕೊಂಡೇ ಕೆಲಸಕ್ಕೆ ಹಾಜರಾಗಿದ್ದರು. ಇದೀಗ ಎಂಟು ತಿಂಗಳ ಗರ್ಭಿಣಿಯೊಬ್ಬರು ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ 30 ಕಿಲೋ ಮೀಟರ್ ಪ್ರಯಾಣಿಸಿ ಹಳ್ಳಗಳಿಂದ ಬರುವ ರೋಗಿಗಳ ಸೇವೆ ಮಾಡುತ್ತಿದ್ದಾರೆ.

    ಡಾ. ಜಾನ್ಸಿ (33) 8 ತಿಂಗಳ ಗರ್ಭಿಣಿಯಾಗಿದ್ದರೂ ಜನರ ಸೇವೆ ಮಾಡುತ್ತಿದ್ದಾರೆ. ಇವರು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಸುಮಾರು 30 ಕಿ.ಮೀ ಪ್ರಯಾಣಿಸುತ್ತಾರೆ. ಅಲ್ಲಿ ಬರುವ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ದೇವಪಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಖಾಸಗಿ ಆರೋಗ್ಯ ಕೇಂದ್ರ ಇಲ್ಲ. ಹೀಗಾಗಿ ಇಲ್ಲಿನ ಸುತ್ತಮುತ್ತಲಿನ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ.

    ನಾನು ಕಳೆದ ಒಂದೂವರೆ ವರ್ಷದಿಂದ ಈ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ಗ್ರಾಮಸ್ಥರು ಈ ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಈ ಕೊರೊನಾ ಸೋಂಕು ಮತ್ತು ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದೇನೆ ಎಂದು ಡಾ.ಜಾನ್ಸಿ ಹೇಳಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಂಚಾರ ಮಾಡುವುದು ಕಷ್ಟವಾಗಿದೆ. ಆದರೂ ಡಾ.ಜಾನ್ಸಿ ಬುಡಕಟ್ಟು ಗ್ರಾಮಗಳ ಮನೆ ಮನೆಗೆ ಹೋಗಿ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರು ಮತ್ತು ಕೊರೊನಾ ವೈರಸ್ ಪ್ರಕರಣಗಳನ್ನು ಪರೀಕ್ಷೆ ಮಾಡುತ್ತಾರೆ. ಈ ಗ್ರಾಮಗಳಲ್ಲಿ ವಿದೇಶಗಳಿಂದ ಬಂದವರು ಕೂಡ ಇದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಕೊರೋನಾ ಸೋಂಕು ಲಕ್ಷಣ ಹೊಂದಿರುವ 10 ರೋಗಿಗಳಿಗೆ ಡಾ.ಜಾನ್ಸಿ ಚಿಕಿತ್ಸೆ ನೀಡುತ್ತಿದ್ದಾರೆ.

    ನಾವು ಕಳೆದ 10 ದಿನಗಳಲ್ಲಿ ಸುಮಾರು 10 ಗರ್ಭಿಣಿಯರನ್ನು ಹೆರಿಗೆಗಾಗಿ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇನೆ. ಹೆರಿಗೆಯ ಹೊರತಾಗಿ, ಬಿಪಿ, ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಕೂಡ ಇಲ್ಲಿಗೆ ಬರುತ್ತಾರೆ. ನಾನು ಸರ್ಕಾರವು ನೀಡುವ ಮಾಸ್ಕ್, ಮತ್ತು ಗ್ಲೌಸ್‍ಗಳನ್ನು ಬಳಸುತ್ತೇನೆ. ಅದೇ ರೀತಿ ಸ್ಯಾನಿಟೈಸರ್ ಹಾಕಿಕೊಂಡ ಕೈ ಸ್ವಚ್ಛ ಮಾಡಿಕೊಳ್ಳುತ್ತೇನೆ. ಎಂದು ಡಾ.ಜಾನ್ಸಿ ತಿಳಿಸಿದ್ದಾರೆ.

    ಡಾ. ಜಾನ್ಸಿ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದೆ. ಆದರೆ ಕೊರೊನಾದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸುಮ್ಮನೇ ಕೂರುವ ಬದಲು ಜನರ ಸೇವೆ ಮಾಡುವುದು ಉತ್ತಮ ಎಂದು ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.

    ನನ್ನ ಕೆಲಸಕ್ಕೆ ಕುಟುಂಬದವರ ಬೆಂಬಲವಿದೆ. ಪತಿ ಡಾ.ಪ್ರಸಾಂತ್ ಕೂಡ ವೈದ್ಯರಾಗಿದ್ದು, ಜಿಲ್ಲೆಯ ನೆಲ್ಲಿಮೆರ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಚಿಕಿತ್ಸೆ ನೀಡುವ ವೈದ್ಯರು ದೇವರು ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಅವರ ಸೇವೆ ಮಾಡುವುದೇ ನಮಗೆ ಮುಖ್ಯ ಎಂದು ಹೇಳಿದರು. ದೇವಪಲ್ಲಿಗಿಂತ ಮೊದಲು ಗೋದಾವರಿ ಜಿಲ್ಲೆಯ ರಾಮಚೋದವರಂನ ಬುಡಕಟ್ಟು ಪ್ರದೇಶದಲ್ಲಿ ಆರು ವರ್ಷಗಳ ಕಾಲ ಆರೋಗ್ಯ ಕೆಂದ್ರದಲ್ಲಿ ಕೆಲಸ ಮಾಡಿದ್ದರು.

  • ಕೊರೊನಾ ಸೋಂಕಿತರ ಮುಂದೆ ಪಾಕ್ ವೈದ್ಯರ ಡ್ಯಾನ್ಸ್

    ಕೊರೊನಾ ಸೋಂಕಿತರ ಮುಂದೆ ಪಾಕ್ ವೈದ್ಯರ ಡ್ಯಾನ್ಸ್

    ನವದೆಹಲಿ: ಕೊರೊನಾ ಸೋಂಕಿತರಿಗೆ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಪಾಕಿಸ್ತಾನದ ವೈದ್ಯರ ತಂಡ ಡ್ಯಾನ್ಸ್ ಮಾಡಿದ್ದಾರೆ. ವೈದ್ಯರು ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿರುವ ಗಂಭೀರ್, ಓ ಕೊರೊನಾ ನೀನು ಎಲ್ಲೆ ಇದ್ರೂ ಈ ಹಾಡು ಕೇಳು ಎಂದು ಬರೆದು ಹೊಸ ಪಾಕಿಸ್ತಾನ ಎಂದು ಟ್ಯಾಗ್ ಬಳಸಿದ್ದಾರೆ. ಇದುವರೆಗೂ ಈ ವಿಡಿಯೋ 1.5 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪಾಕಿಸ್ತಾನದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. 85ಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ಮತ್ತು ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಕೊರೊನಾದಿಂದ ಗುಣಮುಖರಾದವರಿಗೆ ಹೂಗುಚ್ಛ ನೀಡಿ ಚಪ್ಪಾಳೆ ಮೂಲಕ ಬೀಳ್ಕೊಡೆಗೆ ನೀಡಲಾಗಿತ್ತು.

  • ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಸಹಾಯ

    ಯಾದಗಿರಿ: ಕೊರೊನಾದಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಬೆಳೆದ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ರೈತರಿಗೂ ಸಂಕಷ್ಟ ಎದುರಗಿದ್ದು, ಪಬ್ಲಿಕ್ ಟಿವಿ ಮನವಿ ಮೇರೆಗೆ ಜಿಲ್ಲೆಯ ಖಾಸಗಿ ವೈದ್ಯ ಮತ್ತು ಗುತ್ತಿಗೆದಾರ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಸಂಕಷ್ಟದಲ್ಲಿರುವ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ನೆರವಾಗಲು ರಾಜ್ಯದಲ್ಲಿಯೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಗೆ ಸಿಲುಕಿ, ಸಾರಿಗೆ ಮತ್ತು ಸರಿಯಾದ ಮಾರುಕಟ್ಟೆ ಇಲ್ಲದೆ ಬೆಳೆದ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ, ವೈದ್ಯ ವಿರೇಶ್ ಜಾಕಾ ಮತ್ತು ಗುತ್ತಿಗೆದಾರ ಬಸವರಾಜ್ ಸಹಾಯ ಹಸ್ತಚಾಚಿದ್ದಾರೆ. ರೈತರರಿಂದ ಹಣ್ಣುಗಳನ್ನು ಖರೀದಿಸಿ ಬಡ ಮತ್ತು ನಿರ್ಗತಿಕರಿಗೆ ಉಚಿತ ಊಟದ ಜೊತೆ ಹಣ್ಣು ವಿತರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ವ್ಯಾಪಾರ ಮತ್ತು ನಿರ್ಗತಿಕರಿಗೆ ಆರೋಗ್ಯ ಲಭ್ಯವಾಗುತ್ತಿದೆ.

    ಜಿಲ್ಲೆಯ ಖಾನಾಪುರ ಗ್ರಾಮದ ರೈತ ನಾಗಪ್ಪ 6 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್ ಡೌನ್ ಹಿನ್ನೆಲೆ ಬೆಳೆ ಸಾಗಿಸಲು ಸಕಾಲಕ್ಕೆ ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಇದರಿಂದ ನಾಗಪ್ಪ ಅವರ 4 ಎಕರೆ ಕಲ್ಲಂಗಡಿ ಮಣ್ಣು ಪಾಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಈಗ ಉಳಿದಿರುವ 2 ಎಕರೆ ಕಲ್ಲಂಗಡಿ ಖರೀದಿಗೆ ಮುಂದಾದ ವೈದ್ಯ ಮತ್ತು ಗುತ್ತಿಗೆದಾರ, ಸುಮಾರು 10 ಕ್ವಿಂಟಲ್ ಕಲ್ಲಂಗಡಿ ಖರೀದಿ ಮಾಡಿ ನಿರ್ಗತಿಕರಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ಇಬ್ಬರು ಕಳೆದ 15 ದಿನಗಳಿಂದ ಉಚಿತ ಊಟ ನೀಡುತ್ತಿದ್ದು, ಈಗ ಇಂತಹ ವಿನೂತನ ಪ್ರಯತ್ನದ ಮೂಲಕ ಜಿಲ್ಲೆಯ ರೈತರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ವೈದ್ಯ ಮತ್ತು ಗುತ್ತಿಗೆದಾರನ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

  • ಕೊರೊನಾ ರೋಗಿಗಳಿಗೆ ಚಿಕಿತ್ಸೆ – ಮನೆಗೆ ತೆರಳದೇ 1 ವಾರದಿಂದ ಕಾರಿನಲ್ಲೇ ವಾಸ

    ಕೊರೊನಾ ರೋಗಿಗಳಿಗೆ ಚಿಕಿತ್ಸೆ – ಮನೆಗೆ ತೆರಳದೇ 1 ವಾರದಿಂದ ಕಾರಿನಲ್ಲೇ ವಾಸ

    ಭೋಪಾಲ್: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮಧ್ಯ ಪ್ರದೇಶದ ಇಬ್ಬರು ಸರ್ಕಾರಿ ವೈದ್ಯರು ತಮ್ಮ ಕಾರುಗಳಲ್ಲೇ ವಾಸಿಸುತ್ತಿದ್ದಾರೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಒಂದೇ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಸಚಿನ್ ನಾಯಕ್ ಮತ್ತು ಸಚಿನ್ ಪಟಿದಾರ್ ಇಬ್ಬರೂ ತಮ್ಮ ಕಾರುಗಳಲ್ಲಿ ಒಂದು ವಾರದಿಂದ ವಾಸಿಸುತ್ತಿದ್ದಾರೆ. ಕೊರೊನಾ ಸೋಂಕಿನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ತಮ್ಮನ್ನು ತಾವೇ ಕಾರಿನಲ್ಲಿ ನಿರ್ಬಂಧಿಸಿಕೊಂಡಿದ್ದಾರೆ.

    ಆಸ್ಪತ್ರೆಯಲ್ಲಿ ಅವರ ದಿನದ ಶಿಫ್ಟ್ ಮುಗಿದ ನಂತರ, ಅವರು ಸ್ವಲ್ಪ ಸಮಯದವರೆಗೆ ತಮ್ಮ ಮನೆಗಳ ಬಳಿ ಬಂದು ದೂರದಿಂದಲೇ ತಮ್ಮ ಕುಟುಂಬಸ್ಥರನ್ನು ಮಾತನಾಡಿಸುತ್ತಾರೆ ನಂತರ ತಮ್ಮ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಜೊತೆಗೆ ಅಲ್ಲೇ ಮಲಗುತ್ತಾರೆ. ಬಿಡುವಿನ ವೇಳೆಯಲ್ಲಿ ಕಾರಿನಲ್ಲೇ ಕುಳಿತುಕೊಂಡು ಪುಸ್ತಕ ಓದುತ್ತಾರೆ. ಇದರ ಜೊತೆ ಬೇಜಾರದಾಗ ಕುಟುಂಬದೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾರೆ. ಕಾರಿನಲ್ಲಿ ಬೆಡ್‍ಶೀಟ್‍ಗಳು, ಬಟ್ಟೆ, ಲ್ಯಾಪ್‍ಟಾಪ್ ಮತ್ತು ಹಾಸಿಗೆ ಎಲ್ಲವನ್ನು ಇಟ್ಟುಕೊಂಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಕೊರೊನಾ ವೈರಸ್ ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುವ ವೈದ್ಯ ಸಚಿನ್ ನಾಯಕ್, ಈ ಸಾಂಕ್ರಾಮಿಕ ರೋಗ ಬಹುಬೇಗ ಹರಡಿತು. ಹೀಗಾಗಿ ರಾಜ್ಯದ ಆಡಳಿತ ವರ್ಗಕ್ಕಾಗಲಿ ಅಥವಾ ನಮಗಾಗಲಿ ಇದರ ವಿರುದ್ಧದ ಹೋರಾಟಕ್ಕೆ ತಯಾರಾಗಲು ಸಮಯವಿರಲಿಲ್ಲ. ಹಾಗಾಗಿ ನಮ್ಮವರನ್ನು ರಕ್ಷಿಸಿಕೊಳ್ಳುವುದು ನಮ್ಮ ಕೆಲಸ. ನಾವು ಕೊರೊನಾ ಮಾದರಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಇದರಿಂದ ರೋಗ ಹರಡಬಹುದು. ಆದ್ದರಿಂದ ನಾವು ಕಾರಿನಲ್ಲಿ ವಾಸಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಮೊತ್ತೊಬ್ಬ ವೈದ್ಯರಾದ ಸಚಿನ್ ಪಟಿದಾರ್ ಅವರು ಅರಿವಳಿಕೆ ತಜ್ಞರಾಗಿದ್ದಾರೆ. ಅವರು ಕೂಡ ಮಾರ್ಚ್ 31ರಿಂದ ಕಾರಿನಲ್ಲೇ ವಾಸಿಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಕಾರಿನಲ್ಲಿ ಸೋಪ್, ಡಿಯೋಡರೆಂಟ್ ಬಾಚಣಿಗೆ ಮತ್ತು ಶೇವಿಂಗ್ ಕಿಟ್ ಇದೆ. ಮಲಗಲು ಕಾರಿನ ಹಿಂಬದಿಯ ಸೀಟಿನಲ್ಲಿ ಹಾಸಿಗೆಯೂ ಇದೆ. ಆದರೆ ನನಗೆ ನನ್ನ ಕುಟುಂಬದ ಹಿರಿಯ ಜೀವಗಳ ಬಗ್ಗೆ ಚಿಂತೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

    ವೈದ್ಯರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ 359 ಕೊರೊನಾ ಸೋಂಕಿತರ ಪತ್ತೆಯಾಗಿದ್ದು, ಸುಮಾರು 26 ಜನರು ಸಾವನ್ನಪ್ಪಿದ್ದಾರೆ.

  • ಮಾರಕ ಕೊರೊನಾಗೆ ವೈದ್ಯ ಬಲಿ

    ಮಾರಕ ಕೊರೊನಾಗೆ ವೈದ್ಯ ಬಲಿ

    ಭೋಪಾಲ್: ಮಹಾಮಾರಿ ಕೊರೊನಾ ವೈರಸ್‍ಗೆ ಇಂದೋರ್ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ.

    62 ವರ್ಷದ ಶತ್ರುಘ್ನ ಪಂಜ್ವಾನಿ ಮೃತ ವೈದ್ಯ. ಜನರಲ್ ಫಿಶಿಸಿಯನ್ ಆಗಿದ್ದ ಶತ್ರುಘ್ನ ಅವರಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿತ್ತು. ದೇಶದಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ ಮೊದಲ ವೈದ್ಯರಾಗಿದ್ದಾರೆ.

    ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಶತ್ರುಘ್ನ ಅವರನ್ನು ಅರವಿಂದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೃತ ವೈದ್ಯನ ಪತ್ನಿ ಮತ್ತು ಮೂವರು ಗಂಡು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ವರದಿಯಾಗಿದೆ. ಡಾ.ಶತ್ರುಘ್ನ ಅವರ ಬಳಿ ಸ್ಲಂ ಪ್ರದೇಶದಲ್ಲಿ ವಾಸವಾಗಿದ್ದ ರೋಗಿಗಳು ಬರುತ್ತಿದ್ದರು ಎಂದು ಸಹೋದ್ಯೋಗಿ ಡಾ.ಡಿ.ನಟ್ವರ್ ಹೇಳಿದ್ದಾರೆ.

    ಮಧ್ಯಪ್ರದೇಶದಲ್ಲಿ ಇದುವರೆಗೂ 173 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ ಇಂದೋರ್, ಭೋಪಾಲ್ ಮತ್ತು ಉಜೈನಿ ಕೊರೊನಾ ಹಾಟ್‍ಸ್ಪಾಟ್ ಗಳಾಗಿವೆ.

  • ಕೊರೊನಾ ಭೀತಿಯಲ್ಲಿ ರಿಮ್ಸ್ ಆಸ್ಪತ್ರೆ – ಕ್ವಾರಂಟೈನ್‍ನಲ್ಲಿ ವೈದ್ಯ ಸೇರಿ 10 ಸಿಬ್ಬಂದಿ

    ಕೊರೊನಾ ಭೀತಿಯಲ್ಲಿ ರಿಮ್ಸ್ ಆಸ್ಪತ್ರೆ – ಕ್ವಾರಂಟೈನ್‍ನಲ್ಲಿ ವೈದ್ಯ ಸೇರಿ 10 ಸಿಬ್ಬಂದಿ

    ರಾಯಚೂರು: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ರಿಮ್ಸ್ ಸಿಬ್ಬಂದಿಗೆ ಸುರಕ್ಷತೆ ಆತಂಕ ಎದುರಾಗಿದೆ. ಹೀಗಾಗಿ ಓರ್ವ ಇಂಟರ್ನ್ ವೈದ್ಯ ಸೇರಿ 10ಕ್ಕೂ ಹೆಚ್ಚು ಸಿಬ್ಬಂದಿ ಓಪೆಕ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‍ನಲ್ಲಿದ್ದಾರೆ.

    ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ರೋಗಿಗೆ ಸುರಕ್ಷತೆಯಿಲ್ಲದೆ ಚಿಕಿತ್ಸೆ ನೀಡಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಸಿಬ್ಬಂದಿ ಕ್ವಾರಂಟೈನ್‍ಗೆ ಹೋಗಿದ್ದಾರೆ. ಇದುವರೆಗೆ ಕೇವಲ ಸಾಧಾರಣ ಮಾಸ್ಕ್ ಮಾತ್ರ ನೀಡಿದ್ದ ವೈದ್ಯಕೀಯ ಬೋಧಕ ಆಸ್ಪತ್ರೆ ಸಿಬ್ಬಂದಿ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವಹಿಸಿತ್ತು. ಇದರಿಂದ ಎನ್ 95 ಮಾಸ್ಕ್ ನೀಡುವಂತೆ ಇಂಟರ್ನ್ ವೈದ್ಯರು ಹಾಗೂ ಸಿಬ್ಬಂದಿ ಒತ್ತಾಯ ಮಾಡಿದ್ದಾರೆ.

    ಸುರಕ್ಷತೆ ನೀಡದಿದ್ದರೆ ಕೆಲಸಕ್ಕೆ ಗೈರಾಗುವುದಾಗಿ ಸಿಬ್ಬಂದಿ ಹೇಳಿದ್ದರಿಂದ ಆಸ್ಪತ್ರೆ ಹಿರಿಯ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದಾರೆ. ಎಲ್ಲ ಸಿಬ್ಬಂದಿಗೂ ಎನ್ 95 ಮಾಸ್ಕ್ ಕೊಡುವುದಾಗಿ ರಿಮ್ಸ್ ನಿರ್ದೇಶಕ ಡಾ.ಬಸವರಾಜ್ ಪೀರಾಪುರೆ ಭರವಸೆ ನೀಡಿದ್ದಾರೆ. ಆದರೆ ಇದುವರೆಗೂ ಗ್ಲೌಸ್ ಹಾಗೂ ಎನ್ 95 ಮಾಸ್ಕ್ ನೀಡಿಲ್ಲ.

    ಜಿಲ್ಲೆಯಲ್ಲಿ ಒಟ್ಟು 50 ಜನ ಸರ್ಕಾರಿ ಕ್ವಾರಂಟೈನ್‍ನಲ್ಲಿದ್ದು, 30 ಜನರ ವರದಿ ಪ್ರಯೋಗಾಲಯದಿಂದ ಬರುವುದು ಬಾಕಿಯಿದೆ. ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲ.

  • ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ 6ನೇ ಬಲಿ- ಗದಗನಲ್ಲಿ ಮೊದಲ ಸಾವು

    ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ 6ನೇ ಬಲಿ- ಗದಗನಲ್ಲಿ ಮೊದಲ ಸಾವು

    ಗದಗ: ರಾಜ್ಯದಲ್ಲಿ ಕೊರೊನಾ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಗದಗನಲ್ಲಿ 6ನೇ ಬಲಿ ಪಡೆದುಕೊಂಡಿದೆ.

    ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಗದಗ ನಗರದ ನಿವಾಸಿಯಾಗಿದ್ದ ರೋಗಿ ನಂಬರ್ 166 ಸಾವನ್ನಪ್ಪಿದ್ದಾರೆ. ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ಪಷ್ಟಪಡಿಸಿದ್ದಾರೆ.

    ರಾಜ್ಯದಲ್ಲಿ ಈವರೆಗೆ 181 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಾವನ್ನಪ್ಪಿದ ವೃದ್ಧೆ ಸೇರಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಗದಗ ನಗರವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ.

    ಇತ್ತೀಚೆಗೆ ಕೊರೊನಾ ಸೋಂಕಿತ ರೋಗಿ ನಂಬರ್ 177 ಸಾವನ್ನಪ್ಪಿದ್ದರು. ಕಲಬುರಗಿಯ ಖಾಸಗಿ ಆಸ್ಪತ್ರೆಯ ಎಡವಟ್ಟಿನಿಂದ ರೋಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಕಲಬುರಗಿಯ ಖಾಸಗಿ ಆಸ್ಪತ್ರೆ ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡು ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿತ್ತು.

    ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು, ಅಲ್ಲಿನ ಎಲ್ಲಾ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರೋಗಿ ನಂಬರ್ 177 ಅವರಿಗೆ ಹೇಗೆ ಸೋಂಕು ತಗುಲಿತ್ತು ಎನ್ನುವ ಬಗ್ಗೆ ಪೊಲೀಸರು ಹಾಗೂ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.