Tag: doctor

  • ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ ವೈದ್ಯ

    – ಏಮ್ಸ್ ವೈದ್ಯ 14 ದಿನ ಕ್ವಾರಂಟೈನ್
    – ತಮ್ಮ ಜೀವವನ್ನ ಪಣಕ್ಕಿಟ್ಟು ರೋಗಿ ಪ್ರಾಣ ಉಳಿಸಿದ ಡಾಕ್ಟರ್

    ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ರೋಗಿಗಳ ಜೀವ ಉಳಿಸಲು ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿಷ್ಠ ಮೆರೆಯುತ್ತಿದ್ದಾರೆ. ಇದೀಗ ಏಮ್ಸ್ ವೈದ್ಯರೊಬ್ಬರು ತಮ್ಮ ರಕ್ಷಣೆಗೆ ಹಾಕಿಕೊಂಡಿದ್ದ ಫೇಸ್ ಶೀಲ್ಡ್ ತೆಗೆದು ಕೋವಿಡ್-19 ರೋಗಿಯ ಜೀವ ಉಳಿಸುವ ಮೂಲಕ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.

    ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಝಹೀದ್ ಅಬ್ದುಲ್ ಮಜೀದ್ ತಮ್ಮ ಫೇಸ್ ಶೀಲ್ಡ್ ತೆಗೆದು ಕೊರೊನಾ ರೋಗಿಯ ಜೀವ ಉಳಿಸಿದ್ದಾರೆ. ಕೊರೊನಾ ಸೋಂಕು ದೃಢಪಟ್ಟಿದ್ದ ರೋಗಿಯನ್ನು ಏಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ರೋಗಿಯ ಸ್ಥಿತಿ ಗಂಭೀರವಾದ ಕಾರಣ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಗದಿಪಡಿಸಿದ್ದ ಸೆಂಟರ್‌ಗೆ ಸ್ಥಳಾಂತರಿಸಬೇಕಿತ್ತು. ಹೀಗಾಗಿ ರಾತ್ರಿ ಡಾ.ಮಜೀದ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಲಾಗಿದೆ.

    ಮಾಹಿತಿ ತಿಳಿದು ತಕ್ಷಣ ಡಾ.ಮಜೀದ್ ತಮ್ಮ ರಂಜಾನ್ ಉಪವಾಸವನ್ನು ಬ್ರೇಕ್ ಮಾಡಿ ರೋಗಿಗೆ ಚಿಕಿತ್ಸೆ ನೀಡಲು ಮುಂದಾದರು. ಈ ವೇಳೆ ಡಾ. ಮಜೀದ್ ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಮಲಗಿಸಿ ಆಕ್ಸಿಜನ್ ಅವಳಡಿಸಬೇಕಿತ್ತು. ಆದರೆ ರಾತ್ರಿ ಕತ್ತಲಾಗಿದ್ದ ಕಾರಣ ಸರಿಯಾಗಿ ಕಾಣುತ್ತಿರಲಿಲ್ಲ. ಅಲ್ಲದೇ ಫೇಸ್ ಶೀಲ್ಡ್‌ನಿಂದ ಸರಿಯಾಗಿ ಕಾಣುತ್ತಿರಲಿಲ್ಲ. ತಡ ಮಾಡಿದರೆ ರೋಗಿಗೆ ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ ಡಾ.ಮಜೀದ್ ತಕ್ಷಣ ತಾವು ಧರಿಸಿದ್ದ ಫೇಸ್ ಶೀಲ್ಡ್ ಆಕ್ಸಿಜನ್ ಅಳವಡಿಸಿದ್ದಾರೆ.

    ರೋಗಿಯನ್ನು ಸುರಕ್ಷಿತವಾಗಿ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಧರಿಸಿದ್ದ ಫೇಸ್ ಶೀಲ್ಡ್ ಚಿಕಿತ್ಸೆ ನೀಡಲು ಸರಿಯಾಗಿ ಕಾಣಿಸುತ್ತಿರಲಿಲ್ಲ. ಇತ್ತ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಸ್ವಲ್ಪ ತಡ ಮಾಡಿದ್ದರೂ ರೋಗಿ ಸಾಯುವ ಸಾಧ್ಯತೆ ಇತ್ತು. ಹೀಗಾಗಿ ರೋಗಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಫೇಸ್ ಶೀಲ್ಡ್ ತೆಗೆದು ಚಿಕಿತ್ಸೆ ನೀಡಿದೆ ಎಂದು ಡಾ.ಮಜೀದ್ ಹೇಳಿದರು.

    ಹೀಗಾಗಿ ಡಾ.ಮಜೀದ್ ಅವರಿಗೆ ಕೊರೊನಾ ಹಬ್ಬಿರುವ ಶಂಕೆ ಮೇರೆಗೆ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ಕಾರ್ಯದರ್ಶಿ ತಿಳಿಸಿದ್ದಾರೆ. ರೋಗಿಯ ಜೀವವನ್ನು ಉಳಿಸಿದ್ದಕ್ಕೆ ಡಾ. ಮಜೀದ್ ಅವರ ಧೈರ್ಯವನ್ನು ಏಮ್ಸ್ ವೈದ್ಯರ ತಂಡವು ಶ್ಲಾಘಿಸಿದೆ.

    ನನ್ನ ಕೊರೊನಾ ಪರೀಕ್ಷಾ ವರದಿಗಾಗಿ ನಾನು ಕಾಯುತ್ತಿದ್ದೇನೆ. ವರದಿಯಲ್ಲಿ ನೆಗೆಟಿವ್ ಬಂದರೆ ನಾನು ಮತ್ತೆ ಕೆಲಸಕ್ಕೆ ಸೇರುತ್ತೇನೆ. ಇಲ್ಲದಿದ್ದರೆ ನಾನು 14 ದಿನಗಳ ಕಾಲ ಕ್ವಾಂಟೈನ್‍ನಲ್ಲಿ ಇರುತ್ತೇನೆ ಎಂದು ವೈದ್ಯರು ಹೇಳಿದರು.

  • ಕೊರೊನಾ ಪರೀಕ್ಷೆ ವರದಿ ನೀಡಲು 500 ರೂ. ಕೇಳಿದ ಲಂಚಬಾಕ ವೈದ್ಯ

    ಕೊರೊನಾ ಪರೀಕ್ಷೆ ವರದಿ ನೀಡಲು 500 ರೂ. ಕೇಳಿದ ಲಂಚಬಾಕ ವೈದ್ಯ

    – ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟ ಮಹಿಳೆ

    ಕೋಲಾರ: ಕೊರೊನಾ ಟೆಸ್ಟ್ ಮಾಡಿದ ಬಳಿಕ ವರದಿ ನೀಡಲು ಸರ್ಕಾರಿ ಆಸ್ಪತ್ರೆಯ ವೈದ್ಯ ಮಹಿಳೆ ಬಳಿ ಹಣ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಶ್ರೀನಿವಾಸ್ ಮಹಿಳೆಯಿಂದ ಹಣ ಪಡೆದ ಲಂಚ ಬಾಕ ವೈದ್ಯ. ವೈದ್ಯ ಲಂಚ ಪಡೆಯುತ್ತಿರುವುದನ್ನು ಮಹಿಳೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಮಹಿಳೆ ಕೂಲಿ ಕೆಲಸಕ್ಕಾಗಿ ಕಲಬುರಗಿಯಿಂದ ಕೋಲಾರಕ್ಕೆ ಬಂದಿದ್ದು, ಲಾಕ್ ಡೌನ್ ನಂತರ ಕೋಲಾರ ಜಿಲ್ಲೆಯಲ್ಲಿ ಕೆಲ ಕಂಪನಿಗಳು ಪ್ರಾರಂಭವಾಗಿರುವ ಹಿನ್ನೆಲೆ, ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡು ವರದಿ ತರುವಂತೆ ಕಂಪನಿಯವರು ಸೂಚಿಸಿದ್ದಾರೆ. ಈ ಹಿನ್ನೆಲೆ ಮಹಿಳೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ತೆರಳಿದ್ದಾರೆ.

    ಮಾಲೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ವೇಳೆ ವರದಿ ನೀಡಲು ವೈದ್ಯ ಶ್ರೀನಿವಾಸ್ ಮಹಿಳೆಯಿಂದ 500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. 500 ರೂ. ಕೇಳಿ 200 ರೂ. ಹಣ ಪಡೆದಿದ್ದಾನೆ. ಹಣ ಪಡೆಯುವ ದೃಶ್ಯವನ್ನು ಸ್ವತಃ ಮಹಿಳೆಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಸರ್ಕಾರಿ ಆಸ್ಪತ್ರೆ ವೈದ್ಯ ಹಣ ನೀಡಿದರೆ ಮಾತ್ರ ಕೊರೊನಾ ಪರೀಕ್ಷೆಯ ವರದಿ ನೀಡುತ್ತಿದ್ದಾನೆ. ಹೀಗಾಗಿ ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯನ ಅಮಾನತಿಗೆ ಆಗ್ರಹಿಸಿದ್ದಾರೆ.

  • ವಿಡಿಯೋ ಕಾಲ್ ಮಾಡಿದ ವೈದ್ಯಾಧಿಕಾರಿ- ಮನೆಗೆ ಯಾವಾಗ ಬರ್ತಿಯಪ್ಪಾ ಎಂದ ಮಕ್ಕಳು

    ವಿಡಿಯೋ ಕಾಲ್ ಮಾಡಿದ ವೈದ್ಯಾಧಿಕಾರಿ- ಮನೆಗೆ ಯಾವಾಗ ಬರ್ತಿಯಪ್ಪಾ ಎಂದ ಮಕ್ಕಳು

    – ಒಂದೂವರೆ ತಿಂಗಳಿಂದ ನೂಡಲ್ ಅಧಿಕಾರಿಯಾಗಿರುವ ವೈದ್ಯ

    ಬಾಗಲಕೋಟೆ: ಕೊರೊನಾ ಯುದ್ಧದಲ್ಲಿ ತಿಂಗಳುಗಟ್ಟಲೇ ಪತ್ನಿ, ಮಕ್ಕಳು ತಂದೆ ತಾಯಿಯಿಂದ ದೂರವಾದ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಕುಶಲೋಪರಿ ವಿಚಾರಿಸಿದರು.

    ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ನೂಡಲ್ ಅಧಿಕಾರಿಯಾಗಿರುವ ಚಂದ್ರಕಾಂತ ಜವಳಿ ಕಳೆದ ಒಂದೂವರೆ ತಿಂಗಳಿಂದ ಕೊರೊನಾ ಪ್ರಕರಣಗಳ ಮಾಹಿತಿ ಅಂಕಿ ಅಂಶ ದಾಖಲಾತಿ ಕಾರ್ಯ ನಿಭಾಯಿಸುತ್ತಿದ್ದಾರೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿರುವ ತಂದೆ, ತಾಯಿ, ಪತ್ನಿ ಮಕ್ಕಳ ಭೇಟಿ ಮಾಡಿಲ್ಲ. ಕೊರೊನಾ ಕರ್ತವ್ಯದಲ್ಲಿರುವ ವೈದ್ಯ ಚಂದ್ರಕಾಂತ ಕುಟುಂಬ ಜೊತೆಗಿನ ಸಂಭ್ರಮ ತ್ಯಾಗ ಮಾಡಿದ್ದಾರೆ. ಕುಟುಂಬಸ್ಥರನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಚಂದ್ರಕಾಂತ, ವಿಡಿಯೋ ಕಾಲ್ ಮಾಡಿ ಮಾತನಾಡಿ ದೂರದಿಂದಲೇ ಸಂತಸ ಪಟ್ಟಿದ್ದಾರೆ.

    ಪತ್ನಿ, ಮಕ್ಕಳು, ತಂದೆ, ತಾಯಿ ಜೊತೆ ಮಾತನಾಡಿದ್ದು, ಕೆಲ ಕಾಲ ಮಾತನಾಡುವ ಮೂಲಕ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳು ಮನೆಗೆ ಬಾ ಎಂದು ಕರೆದಿದ್ದು, ಕೊರೊನಾ ಹಾವಳಿ ಮುಗಿದ ನಂತರ ಬರುತ್ತೇನೆ ಎಂದು ಹೇಳಿದ್ದಾರೆ. ಸಧ್ಯ ಒಂದೂವರೆ ತಿಂಗಳಿನಿಂದ ಬಾಗಲಕೋಟೆಯ ಖಾಸಗಿ ಲಾಡ್ಜ್ ನಲ್ಲಿಯೇ ಚಂದ್ರಕಾಂತ ಉಳಿದುಕೊಂಡಿದ್ದಾರೆ. ವೈದ್ಯರ ಕುಟುಂಬದದಿಂದ ದೂರ ಉಳಿದು ಕೆಲಸ ಮಾಡುತ್ತಿರುವುದಕ್ಕೆ ಸರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಲು ಮಾಧ್ಯಮದವರು ಕೇಳಿದಾಗ ದಯವಿಟ್ಟು ಬೇಡ. ನನ್ನಂತೆ ಸಾಕಷ್ಟು ಜನ ಮನೆಗೆ ತೆರಳದೇ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಮುಜುಗುರ ಉಂಟಾಗೋದು ಬೇಡ ಎಂದಿದ್ದಾರೆ.

  • ಪೊಲೀಸ್ ಪೇದೆಯಿಂದ ಬೆಂಗಳೂರಿಗೆ ‘ಕೊರೊನಾ’ ಗಂಡಾಂತರ?

    ಪೊಲೀಸ್ ಪೇದೆಯಿಂದ ಬೆಂಗಳೂರಿಗೆ ‘ಕೊರೊನಾ’ ಗಂಡಾಂತರ?

    -ಕೊರೊನಾ ತಗುಲಿದ್ದೇ ನಿಗೂಢ
    -ವಿಕ್ಟೋರಿಯಾ ಆಸ್ಪ್ರತ್ರೆ, ಖಾಸಗಿ ಸಂಸ್ಥೆ, ಸರ್ಕಾರಿ ಕಚೇರಿಗೂ ಕಂಟಕ?

    ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಸೋಂಕು ತಗುಲಿರೋದು ಸೋಮವಾರ ದೃಢಪಟ್ಟಿದೆ. ಈ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು, ಉತ್ತರಕ್ಕಾಗಿ ಆರೋಗ್ಯ ಇಲಾಖೆ ತೆಲೆಕೆಡಿಸಿಕೊಂಡಿದೆ.

    ಕೊರೊನಾ ಪಾಸಿಟಿವ್ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಪಘಾತದ ಕಾರಣದಿಂದ ಇಪ್ಪತ್ತು ದಿನ ರಜೆಯಲ್ಲಿದ್ದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೇದೆಗೆ ಇಬ್ಬರು ಅಣ್ಣಂದಿರು. ಮೂವರು ಜೊತೆಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೊದಲನೇ ಅಣ್ಣ ವೈದ್ಯ, ಎರಡನೇ ಅಣ್ಣ ಬಯೋಕಾನ್ ಸಂಸ್ಥೆಯ ಉದ್ಯೋಗಿ. ಎರಡನೇ ಅತ್ತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ. ಹಾಗಾಗಿ ಅತ್ತಿಗೆಯಿಂದಲೇ ಪೇದೆಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.

    ಸೋಂಕಿತ ಪೇದೆಯ ಮತ್ತೊಬ್ಬ ಅತ್ತಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೇದೆಯ ಪತ್ನಿ ಮತ್ತು ಮಗು ಸಹ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 45 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ರೆ ವಿಕ್ಟೋರಿಯಾ ಆಸ್ಪತ್ರೆ, ಬಯೋಕಾನ್ ಸಂಸ್ಥೆ, ಕಂದಾಯ ಇಲಾಖೆಯ ಕಚೇರಿ, ಸೋದರನ ಆಸ್ಪತ್ರೆಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ.

    ಪೊಲೀಸರಲ್ಲಿಯೂ ಆತಂಕ: ಪೇದೆ ರಜೆಗೂ ತೆರಳುವ ಮುನ್ನ 15 ದಿನ ಠಾಣೆಗೆ ಬಂದಿದ್ದರು. ಚೆಕ್‍ಪೋಸ್ಟ್ ನಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಈ ನಡುವೆ ಮಂಡ್ಯ ಜಿಲ್ಲೆಯ ಮಳವಳ್ಳಿಗೂ ಭೇಟಿ ನೀಡಿದ್ದರು. ಒಂದು ವೇಳೆ ಮಳವಳ್ಳಿಗೆ ಭೇಟಿ ನೀಡಿದ್ದಾಗ ಅಥವಾ ಅತ್ತಿಗೆಯಿಂದ ಸೋಂಕು ತಗುಲಿರೋದು ದೃಢಪಟ್ಟರೇ ಪೊಲೀಸರು ನಿಟ್ಟುಸಿರು ಬಿಡಬಹುದು. ಕರ್ತವ್ಯದಲ್ಲಿದ್ದಾಗಲೇ ಸೋಂಕು ತಗುಲಿದ್ದು ಖಾತ್ರಿಯಾದ್ರೆ ಇಡೀ ಪೊಲೀಸ್ ಠಾಣೆಯನ್ನ ಬಂದ್ ಮಾಡಿ, ಎಲ್ಲ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪೇದೆಗೆ ಅಪಘಾತವಾದಾಗ ಆರೋಗ್ಯ ವಿಚಾರಿಸಲು ಠಾಣೆಯ ಕೆಲ ಸಿಬ್ಬಂದಿ ಆತನ ಮನೆಗೆ ತೆರಳಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ.

  • ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    ಕೊರೊನಾ ಸೋಂಕಿತನಿಗೆ ವೈದ್ಯನಿಂದ ಲೈಂಗಿಕ ಕಿರುಕುಳ

    -ಚಿಕಿತ್ಸೆ ವೇಳೆ ಅಸಭ್ಯ ವರ್ತನೆ
    -ವೈದ್ಯನನ್ನ ಕ್ವಾರಂಟೈನ್ ನಲ್ಲಿರಿಸಿದ ಪೊಲೀಸರು

    ಮುಂಬೈ: ಕೊರೊನಾ ಸೋಂಕಿತನಿಗೆ 34 ವರ್ಷದ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    44 ವರ್ಷದ ಪುರುಷನಿಗೆ ಕೊರೊನಾ ಸೋಂಕು ತಗುಲಿದ್ದು, ನಗರದ ಖಾಸಗಿ ಆಸ್ಪತ್ರೆಯ ಕೋವಿಡ್-19 ಘಟಕದ ಐಸಿಯು ವಾರ್ಡಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಚಿಕಿತ್ಸೆ ವೇಳೆ ವೈದ್ಯ ಅಸಹಜವಾಗಿ ಸ್ವರ್ಶಿಸುತ್ತಿದ್ದ ಎಂದು ಸೋಂಕಿತ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ವೈದ್ಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರಿಂದ ಆತನನ್ನು ಬಂಧಿಸಿಲ್ಲ. ಹಾಗಾಗಿ ವೈದ್ಯನನ್ನು ಆತನ ಮನೆಯಲ್ಲಿಯೇ ಪೊಲೀಸ್ ಬಂದೋಬಸ್ತನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

  • ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ

    ಲಂಡನ್: ಕಳೆದ ಬುಧವಾರ ಜನಿಸಿದ ತನ್ನ ಗಂಡು ಮಗುವಿಗೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ವೈದ್ಯರ ಹೆಸರನ್ನು ಇಟ್ಟಿದ್ದಾರೆ.

    ಇತ್ತೀಚೆಗೆ ಬೋರಿಸ್ ಜಾನ್ಸನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ವೇಳೆ ಅವರಿಗೆ ಚಿಕತ್ಸೆ ನೀಡಿದ ಇಬ್ಬರು ವೈದ್ಯರ ಹೆಸರನ್ನು ತನ್ನ ಮಗುವಿಗೆ ಇಟ್ಟಿದ್ದಾರೆ. ಈ ಮೂಲಕ ತನ್ನ ಜೀವ ಉಳಿಸಿದ ಮತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಗೌರವ ಸಲ್ಲಿಸಿದ್ದಾರೆ.

    ಬುಧವಾರ ಬೋರಿಸ್ ಜಾನ್ಸನ್ ಮತ್ತು ಕ್ಯಾರಿ ಸೈಮಂಡ್ಸ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವಾಗಿ ಶನಿವಾರ ತಮ್ಮ ಇನ್‍ಸ್ಟಗ್ರಾಮ್‍ನಲ್ಲಿ ಮಗು ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಕ್ಯಾರಿ ಸೈಮಂಡ್ಸ್, ನನ್ನ ಮಗುವಿಗೆ ವಿಲ್ಫ್ರೆಡ್ ಲಾರಿ ನಿಕೋಲಸ್ ಜಾನ್ಸನ್ ಎಂದು ಹೆಸರಡಿಲಾಗಿದೆ. ವಿಲ್ಫ್ರೆಡ್ ಬೋರಿಸ್ ಅವರ ತಾತನ ಹೆಸರು, ಲಾರಿ ನನ್ನ ತಾತನ ಹೆಸರು, ನಿಕೋಲಸ್ ಎಂಬುದು ಕೊರೊನಾದಿಂದ ಬೋರಿಸ್ ಅನ್ನು ಗುಣಪಡಿಸಿದ ವೈದ್ಯರ ಹೆಸರು ಎಂದು ತಿಳಿಸಿದ್ದಾರೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಬೋರಿಸ್ ಜಾನ್ಸನ್ ಅವರಿಗೆ ವೈದ್ಯರಾದ ನಿಕೋಲಸ್ ಪ್ರೈಸ್ ಮತ್ತು ನಿಕೋಲಸ್ ಹಾರ್ಟ್ ಚಿಕಿತ್ಸೆ ನೀಡಿದ್ದರು. ಇವರಿಗೆ ಗೌರವ ಸೂಚಿಸಲು ಅವರ ಮಗನ ಹೆಸರಿನಲ್ಲಿ ನಿಕೋಲಸ್ ಎಂದು ಬಳಸಲಾಗಿದೆ. ಜೊತೆಗೆ ಕ್ಯಾರಿ ಸೈಮಂಡ್ಸ್ ತನ್ನ ಗಂಡನ ಪ್ರಾಣವನ್ನು ಉಳಿಸಿದ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಮಗು ಹುಟ್ಟುವುದಕ್ಕಿಂತ ಒಂದು ವಾರದ ಹಿಂದೆಯಷ್ಟೇ ಬೋರಿಸ್ ಗುಣಮುಖರಾಗಿ ಆಸ್ಪತ್ರೆಗೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಈ ವಿಚಾರವಾಗಿ ಮಾತನಾಡಿರುವ ವೈದ್ಯರು, ಚಿಕಿತ್ಸೆ ನೀಡಿದಕ್ಕೆ, ನಮ್ಮ ಪ್ರಧಾನಿಗಳು ನಮಗೆ ಈ ರೀತಿಯ ಗೌರವ ಸಲ್ಲಿಸಿದ್ದಕ್ಕೆ ಹೆಮ್ಮೆ ಇದೆ. ಅವರ ಕುಟುಂಬದ ಮುಂದಿನ ಜೀವನ ಚೆನ್ನಾಗಿರಲಿ. ನಾವು ಈ ಗೌರವವನ್ನು ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಅರ್ಪಣೆ ಮಾಡುತ್ತೇವೆ. ಜೊತೆಗೆ ಪ್ರಧಾನಿ ಬೋರಿಸ್ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ತಿಳಿಸಿದ್ದಾರೆ.

    ಮಾರ್ಚ್ 27ರಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ, ಈ ವೇಳೆ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು.

  • ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    – ಮಗುವನ್ನು ನೋಡಲಾಗದೆ ಕಣ್ಣೀರಿಟ್ಟಿದ್ದ ವೈದ್ಯ

    ಚಾಮರಾಜನಗರ: ಒಂದೆಡೆ ತಂದೆಯಾದ ಸಂಭ್ರಮ ಇನ್ನೊಂದೆಡೆ ಕರ್ತವ್ಯ ನಿಷ್ಠೆ. ಯಾವುದೇ ವ್ಯಕ್ತಿ ತಂದೆಯಾದಾಗ ಅದೊಂದು ಅವಿಸ್ಮರಣೀಯ ಕ್ಷಣ. ಆ ಕ್ಷಣದಲ್ಲಿ ಪತ್ನಿಯ ಜೊತೆಗಿರಬೇಕು. ತನ್ನ ಮಗುವನ್ನು ನೋಡಬೇಕು ಎಂದು ಆಸೆ, ಆಕಾಂಕ್ಷೆ ಸಹಜ.

    ಆದರೆ ಚಾಮರಾಜನಗರ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ವಾರಿಯಾರ್ ಆಗಿ ಸೇವೆ ಮಾಡುತ್ತಿರುವ ವೈದ್ಯರೊಬ್ಬರು ಮಗು ಜನಿಸಿದರೂ ನೋಡಲು ಹೋಗದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಯದುಕುಲ್ ಅವರ ಪತ್ನಿಗೆ ಕಳೆದ ಏಪ್ರಿಲ್ 15 ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

    ಮಗು ಜನಿಸಿ 17 ದಿನ ಕಳೆದರೂ ನೋಡಲು ಹೋಗದೆ ಡಾ. ಯದುಕುಲ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಬೇಕು. ಮಗುವನ್ನು ಹೇಗೆಲ್ಲಾ ನೋಡಕೊಳ್ಳಬೇಕು ಎಂದು ಕನಸು ಕಂಡಿದ್ದ ಡಾ.ಯದುಕುಲ್‍ಗೆ ಅದು ಸಾಧ್ಯವಾಗಲೇ ಇಲ್ಲ. ಮಗುವಾದಾಗ ಒಂದು ಕಡೆ ಸಂತಸವಾದರೂ ಅದನ್ನು ಆ ಕ್ಷಣದಲ್ಲಿ ನೋಡಲಾಗದೆ ಈ ವೈದ್ಯ ಅತ್ತಿದ್ದರಂತೆ. ಬಿಡುವಾದಾಗ ವಿಡಿಯೋ ಕಾಲ್ ಮೂಲಕವೇ ಮಗು ನೋಡಿ ಬೇಸರ ಮರೆಯುತ್ತಿದ್ದಾರೆ.

  • ತನ್ನ 15 ತಿಂಗ್ಳ ಮಗುವಿನ ಸಾವಿನ ಸುದ್ದಿ ತಿಳಿದ್ರೂ ಚಿಕಿತ್ಸೆ ಮುಂದುರಿಸಿದ ವೈದ್ಯ

    ತನ್ನ 15 ತಿಂಗ್ಳ ಮಗುವಿನ ಸಾವಿನ ಸುದ್ದಿ ತಿಳಿದ್ರೂ ಚಿಕಿತ್ಸೆ ಮುಂದುರಿಸಿದ ವೈದ್ಯ

    – ಅನಾರೋಗ್ಯದ ಮಗುವನ್ನ ಬಿಟ್ಟು ಕರ್ತವ್ಯಕ್ಕೆ ಡಾಕ್ಟರ್ ಹಾಜರ್

    ಭೋಪಾಲ್: ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕಿಂತ ಕರ್ತವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ತಮ್ಮ ಮಗಳ ಸಾವಿನ ಸುದ್ದಿ ತಿಳಿದರೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಮಧ್ಯಪ್ರದೇಶದ ಹೋಶಂಗಾಬಾದ್ ಜಿಲ್ಲೆಯಲ್ಲಿ ಮನಕಲುಕುವಂತ ಘಟನೆ ನಡೆದಿದೆ. ಹೋಶಂಗಾಬಾದ್ ನಿವಾಸಿ ಡಾಕ್ಟರ್ ದೇವೇಂದ್ರ ಮೆಹ್ರಾ ತನ್ನ 15 ತಿಂಗಳ ಅನಾರೋಗ್ಯದ ಮಗಳನ್ನು ಬಿಟ್ಟು ಇಂದೋರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಮೆಹ್ರಾ ಅವರ ಮಗುವಿನ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಈ ಮಧ್ಯೆ ಅವರು ತಮ್ಮ ಅನಾರೋಗ್ಯದ ಮಗಳನ್ನು ಒಬ್ಬ ತಂದೆ ಹಾಗೂ ವೈದ್ಯರಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಡಾಕ್ಟರ್ ಮೆಹ್ರಾ ಅವರನ್ನು ಇಂದೋರ್‌ನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ನೇಮಿಸಲಾಗಿತ್ತು. ಹೋಶಂಗಾಬಾದ್‍ದಿಂದ ಇಂದೋರ್‌ಗೆ 200 ಕಿಲೋ ಮೀಟರ್‌ಗಿಂತ ದೂರವಿದೆ. ಮಗಳ ಸ್ಥಿತಿ ನೋಡಿ ಮೆಹ್ರಾ ಅವರಿಗೆ ಹೋಗಲು ಮನಸ್ಸಿರಲಿಲ್ಲ. ಆದರೂ ಅನಿವಾರ್ಯ ಕಾರಣದಿಂದ ಇಂದೋರ್‌ಗೆ ಹೋಗಿದ್ದರು.

    ಕೊನೆಗೆ ಡಾ.ದೇವೇಂದ್ರ ಮೆಹ್ರಾ ಅವರು ಮಗಳನ್ನು ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಸ್ವಲ್ಪ ದಿನದಲ್ಲೇ ಮಗಳ ಸಾವಿನ ಸುದ್ದಿ ಬಂದಿದೆ. ಆದರೂ ಮೆಹ್ರಾ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು. ನಂತರ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಅಧಿಕಾರಿಗಳು ಮೆಹ್ರಾ ಅವರಿಗೆ ಇಂದೋರ್‌ನಿಂದ ಹೋಶಂಗಾಬಾದ್‍ಗೆ ತೆರಳಲು ಅನುಮತಿ ನೀಡಿದರು.

    ಬುಧವಾರ ಡಾ.ದೇವೇಂದ್ರ ಮೆಹ್ರಾ ಹೋಶಂಗಾಬಾದ್‍ದ ತಮ್ಮ ಮನೆಗೆ ಹೋಗಿದ್ದಾರೆ. ಈ ವೇಳೆ ಮಾತನಾಡಿದ ಮೆಹ್ರಾ ಅವರು, ನನ್ನ ಮಗಳ ಸ್ಥಿತಿಯನ್ನು ನೋಡಿದ ಮೇಲೆ ನನಗೆ ಹಿಂತಿರುಗಬೇಕೆಂದು ಅನಿಸಿರಲಿಲ್ಲ. ಈ ವೇಳೆ ಕರ್ತವ್ಯವೂ ಮುಖ್ಯವಾಗಿತ್ತು. ರೋಗಿಗಳಿಗೆ ನನ್ನ ಅವಶ್ಯಕತೆ ಇತ್ತು.  ಆದರೆ ನನ್ನ ಮಗಳು ಮೃತಪಟ್ಟ ನಂತರ ಅಧಿಕಾರಿಗಳೇ ಮನೆಗೆ ಕಳುಹಿಸಿದ್ದಾರೆ ಎಂದು ನೋವಿನಿಂದ ಹೇಳಿದರು.

    ಡಾ.ದೇವೇಂದ್ರ ಮೆಹ್ರಾ ಅವರಂತೆ ಅನೇಕ ವೈದ್ಯರು, ಪೊಲೀಸರು ತಮ್ಮ ತಮ್ಮ ಕುಟುಂಬದಿಂದ ದೂರು ಉಳಿದುಕೊಂಡು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.

  • ಭಾವಿ ಪತ್ನಿ ಭೇಟಿಯಾಗಲು ಹೋಗಿ ಮದ್ವೆಯಾದ ಡಾಕ್ಟರ್

    ಭಾವಿ ಪತ್ನಿ ಭೇಟಿಯಾಗಲು ಹೋಗಿ ಮದ್ವೆಯಾದ ಡಾಕ್ಟರ್

    – ಭಾವಿ ಮಾವನ ಮನೆಯಲ್ಲಿ 30 ದಿನ ವಾಸ
    – ನಂತ್ರ ಸರಳವಾಗಿ ವಧುವಿನ ಮನೆಯಲ್ಲಿ ಮದ್ವೆ

    ಜೈಪುರ್: ಕೊರೊನಾ ಲಾಕ್‍ಡೌನ್‍ನಿಂದ ಜನರು ಅನೇಕ ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ವೈದ್ಯನೊಬ್ಬ ತಮ್ಮ ಭಾವಿ ಪತ್ನಿಯನ್ನು ಭೇಟಿಯಾಗಲು ಹೋಗಿ ಮದುವೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಬಿಕಾನೆರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೋಧ್‍ಪುರ ನಿವಾಸಿಯ ಡಾ.ವಿವೇಕ್ ಮೆಹ್ತಾ ಅವರು ಲಾಕ್‍ಡೌನ್ ಪರಿಣಾಮದಿಂದ ನಿಶ್ಚಯವಾಗಿದ್ದ ವಧುವಿನ ಜೊತೆಯಲ್ಲಿಯೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ನಡೆದಿದ್ದೇನು?
    ಡಾ.ವಿವೇಕ್ ಮೆಹ್ತಾ ಅಹಮದಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿರುವ ಪೂಜಾ ಚೋಪ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ಬಳಿಕ ಅಂದರೆ ಮಾರ್ಚ್ 21ರಂದು ವಿವೇಕ್ ಮೆಹ್ತಾ ಭಾವಿ ಪತ್ನಿಯನ್ನು ಭೇಟಿಯಾಗಲು ರಾಜಸ್ಥಾನದ ಬಿಕಾನೆರ್‌ಗೆ ಹೋಗಿದ್ದಾರೆ.

    ಆದರೆ ಕೊರೊನಾದಿಂದ ಮಾರ್ಚ್ 22 ರಿಂದ ರಾಜಸ್ಥಾನ ಸಂಪೂರ್ಣ ಲಾಕ್‍ಡೌನ್‍ಗೆ ಆಗಿದೆ. ಹೀಗಾಗಿ ಯಾವುದೇ ಬಸ್, ರೈಲು ಸೇರಿದಂತೆ ಯಾವುದೇ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಹೀಗಾಗಿ ಮೆಹ್ತಾ ತಮ್ಮ ಭಾವಿ ಪತ್ನಿಯ ಮನೆಯಿಂದ ಅಹಮದಾಬಾದ್‍ಗೆ ಹಿಂದಿರುಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ಭಾವಿ ಮಾವನ ಮನೆಯಲ್ಲಿಯೇ ಉಳಿದುಕೊಂಡಿದ್ದರು.


    ಲಾಕ್‍ಡೌನ್ ಮುಗಿದ ನಂತರ ವಾಪಸ್ ಬರಬಹುದು ಎಂದುಕೊಂಡಿದ್ದರು. ಆದರೆ ಲಾಕ್‍ಡೌನ್ ಮತ್ತೆ ಮೇ 3 ರವರೆಗೆ ವಿಸ್ತರಣೆಯಾಗಿದೆ. ಆಗ ಪೂಜಾ ಅವರ ತಂದೆ ಬಿಕಾನೆರ್ ನ ಜೈನ್ ಮಹಾಸಭಾ ಅಧ್ಯಕ್ಷರಿಗೆ ತಮ್ಮ ಸಮಸ್ಯೆಯನ್ನು ವಿವರಿಸಿದರು. ಈ ವೇಳೆ ಲಾಕ್‍ಡೌನ್ ಕಾರಣ ಮೆಹ್ತಾ ಕುಟುಂಬ ಅಹಮದಾಬಾದ್‍ನಿಂದ ಬರಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೆ ಮದುವೆ ಮಾಡೋಣ ಎಂದು ತೀರ್ಮಾನಿಸಿದರು.

    ಕೊನೆಗೆ ಮೆಹ್ತಾ 30 ದಿನಗಳ ಕಾಲ ಭಾವಿ ಮಾವನ ಮನೆಯಲ್ಲಿಯೇ ಉಳಿದುಕೊಂಡಿದ್ದರು. ನಂತರ ಲಾಕ್‍ಡೌನ್ ಸಮಯದಲ್ಲಿಯೇ ಇಬ್ಬರಿಗೂ ಮದುವೆ ಮಾಡಲು ಎರಡೂ ಕುಟುಂಬಗಳು ನಿರ್ಧಾರ ಮಾಡಿವೆ. ಅಂದರಂತೆಯೇ ಸರಳವಾಗಿ ಮನೆಯಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮೆಹ್ತಾ ಮತ್ತು ಪೂಜಾ ಮದುವೆ ನೆರವೇರಿದೆ.

    ಕಾರ್ಯಕ್ರಮದಲ್ಲಿ ವರನ ಕುಟುಂಬ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ ಮೆಹ್ತಾ ಅವರ ಸ್ನೇಹಿತರು ಮತ್ತು ಕುಟುಂಬದವರು ಮದುವೆಯನ್ನು ವಿಡಿಯೋ ಕಾಲ್ ಮೂಲಕ ನೋಡಿದ್ದಾರೆ. ಲಾಕ್‍ಡೌನ್ ಮುಗಿಯುವರೆಗೂ ದಂಪತಿ ವಧುವಿನ ಪೋಷಕರ ಮನೆಯಲ್ಲಿ ಉಳಿಯುತ್ತಾರೆ.

  • ಕೊರೊನಾ ವಾರಿಯರ್ಸ್ ಸಹಾಯಕ್ಕೆ ನಿಂತ ವಶಿಷ್ಠ ಸಿಂಹ

    ಕೊರೊನಾ ವಾರಿಯರ್ಸ್ ಸಹಾಯಕ್ಕೆ ನಿಂತ ವಶಿಷ್ಠ ಸಿಂಹ

    ಬೆಂಗಳೂರು: ಲಾಕ್‍ಡೌನ್ ಟೈಮಲ್ಲಿ ಸ್ಯಾಂಡಲ್‍ವುಡ್ ನಟ ವಶಿಷ್ಠ ಸಿಂಹ ಏನು ಮಾಡುತ್ತಿದ್ದಾರೆ ಎಂದು ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು, ವಶಿಷ್ಠ ಸಿಂಹ ಸದ್ದಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲಿರುಳು ದುಡಿಯುವ ಮೂಲಕ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ.

    ಸಹಾಯ ಮಾಡಿದ್ದರ ಕುರಿತು ಬಹುತೇಕ ನಟ, ನಟಿಯರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಶಿಷ್ಠ ಸಿಂಹ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದು, ಕೊರೊನಾ ವಾರಿಯರ್ಸ್‍ಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಹೌದು ಲಾಕ್‍ಡೌನ್ ಸಮಯದಲ್ಲಿ ಬಹುತೇಕ ನಟ, ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆದರೆ ವಶಿಷ್ಠ ಸಿಂಹ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿಲ್ಲ. ಈ ಹಿಂದೆ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಸ್ಪಂದಿಸಿ ಚಪ್ಪಾಳೆ ತಟ್ಟಿದ್ದರು. ಅಲ್ಲದೆ ದೀಪ ಬೆಳಗಿದ್ದರು. ಇದನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಾವು ಸಹಾಯ ಮಾಡುತ್ತಿರುವುದರ ಕುರಿತು ಅಪ್‍ಡೇಟ್ ನೀಡಿಲ್ಲ.

    ವಶಿಷ್ಠ ತಮ್ಮದೇಯಾದ ಸ್ನೇಹಿತರ ತಂಡ ಕಟ್ಟಿಕೊಂಡು, ಮಾಸ್ಕ್ ಹಾಗೂ ನೈಸರ್ಗಿಕವಾಗಿ ತಯಾರಿಸಿದ ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ವಿತರಿಸುತ್ತಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಹಾಗೂ ವೈದ್ಯರಿಗೆ ಏನಾದರೂ ಸಹಾಯ ಮಾಡಬೇಕೆಂಬ ಉದ್ದೇಶದಿಂದ ವಶಿಷ್ಠ ಸಿಂಹ ಈ ಕೆಲಸಕ್ಕೆ ಕೈ ಹಾಕಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡುತ್ತಿದ್ದಾರೆ.

    ಹಲವು ದಿನಗಳಿಂದ ವಶಿಷ್ಠ ಸಿಂಹ ತಮ್ಮ ತಂಡದೊಂದಿಗೆ ಈ ಕಾರ್ಯದಲ್ಲಿ ತೊಡಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ತಮ್ಮ ಸಹಾಯ ಕಾರ್ಯವನ್ನು ಮಾಡುತ್ತಿದ್ದಾರಂತೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸ್ವಚ್ಛತಾ ಕಾರ್ಯ ಮಾಡುವವರಿಗೆ ಹಾಗೂ ಅಗತ್ಯವಿರುವ ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದೇವೆ. ನೈಸರ್ಗಿಕವಾಗಿ ತಯಾರಿಸಿದ ಸ್ಯಾನಿಟೈಸರ್ ಗಳನ್ನು ವಿತರಿಸುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಇಲ್ಲ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ.

    ಕಳೆದ ಹಲವು ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದು, 2 ಸಾವಿರಕ್ಕೂ ಅಧಿಕ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಈಗಾಗಲೇ ವಿತರಿಸಿದ್ದೇವೆ. 20ಕ್ಕೂ ಹೆಚ್ಚು ಕೇಂದ್ರಗಳನ್ನು ಈಗಾಗಲೇ ನಾವು ತಲುಪಿದ್ದು, ನಮ್ಮ ಈ ಸಹಾಯ ಮುಂದುವರಿಯಲಿದೆ. ಇಷ್ಟು ಮಾತ್ರವಲ್ಲದೆ ಇನ್ನೊಂದು ವಿಚಾರದ ಕುರಿತು ಸಹ ನಾವು ಪ್ಲಾನ್ ಮಾಡಿದ್ದು, ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಪರ್ಸನಲ್ ಪ್ರೊಟೆಕ್ಟಿವ್ ಇಕ್ವಿಪ್‍ಮೆಂಟ್ ಕಿಟ್‍ಗಳನ್ನು ನೀಡಲು ಮುಂದಾಗಿದ್ದೇವೆ. ಈಗಾಗಲೇ 400 ಪಿಪಿಇ ಕಿಟ್‍ಗಳನ್ನು ಆರ್ಡರ್ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವಿತರಿಸುತ್ತೇವೆ ಎಂದು ವಶಿಷ್ಠ ಮಾಹಿತಿ ನೀಡಿದ್ದಾರೆ. ಈ ಮೂಲಕ ವೈದ್ಯರು ಹಾಗೂ ಪೊಲೀಸರ ರಕ್ಷಣೆಗೆ ನಿಂತಿದ್ದಾರೆ.

    ವಶಿಷ್ಠ ಸಿಂಹ ಅಭಿನಯದ ಮಾಯಾಬಜಾರ್ ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಂಡಿದೆ. ಇಂಡಿಯಾ ಇಂಗ್ಲೆಂಡ್ ಸಿನಿಮಾ ನಂತರ ವಶಿಷ್ಠ ಮಯಾಬಜಾರ್‍ನಲ್ಲಿ ಅಭಿನಯಿಸಿದ್ದರು. ಇದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಬಂಡವಾಳ ಹೂಡಿದ್ದರು. ಇದಾದ ಬಳಿಕ ಲಾಕ್‍ಡೌನ್ ಘೋಷಣೆಯಾಗಿದ್ದು, ಹೀಗಾಗಿ ವಶಿಷ್ಠ ಅವರ ಮುಂದಿನ ಯೋಜನೆ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.