Tag: doctor

  • ಕ್ವಾರಂಟೈನ್‍ನಲ್ಲಿದ್ದ ವೈದ್ಯರಿಗೆ ಮನೆ ಖಾಲಿ ಮಾಡುವಂತೆ ಒತ್ತಡ

    ಕ್ವಾರಂಟೈನ್‍ನಲ್ಲಿದ್ದ ವೈದ್ಯರಿಗೆ ಮನೆ ಖಾಲಿ ಮಾಡುವಂತೆ ಒತ್ತಡ

    ಶಿವಮೊಗ್ಗ: ಕ್ವಾರಂಟೈನ್ ನಲ್ಲಿದ್ದ ವೈದ್ಯರಿಗೆ ಮನೆಯನ್ನು ಖಾಲಿ ಮಾಡುವಂತೆ ಮಾಲೀಕ ಒತ್ತಡ ಹೇರಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಕಾರಣಕ್ಕೆ ಖಾಸಗಿ ವೈದ್ಯರೊಬ್ಬರು ಸ್ವಯಂ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರು. ಕಳೆದ ಎರಡು ದಿನದ ಹಿಂದೆ ತೀರ್ಥಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಪಾಸಿಟಿವ್ ದೃಢವಾಗುವ ಎರಡು ದಿನದ ಹಿಂದೆ ಖಾಸಗಿ ವೈದ್ಯರೊಬ್ಬರ ಬಳಿ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು.

    ಇತ್ತ ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾದ ಕಾರಣಕ್ಕೆ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಖಾಸಗಿ ವೈದ್ಯರ ಮನೆಯಲ್ಲಿ ಚಿಕ್ಕ ಮಗು ಹಾಗೂ ವಯಸ್ಸಾದವರು ಇದ್ದಾರೆ. ಹೀಗಾಗಿ ವೈದ್ಯ ಲ್ಯಾಬ್ ಟೆಕ್ನೀಷಿಯನ್ ಬಾಡಿಗೆಗೆ ಇದ್ದ ಮನೆಯಲ್ಲಿಯೇ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಮಾಲೀಕ ನೀವು ನಮ್ಮ ಮನೆಯಲ್ಲಿ ಇರಬೇಡಿ. ಬೇರೆ ಎಲ್ಲಾದರೂ ಹೋಗಿ ಎಂದು ಒತ್ತಡ ಹಾಕಿದ್ದಾರೆ ಎಂದು ವೈದ್ಯ ಆರೋಪಿಸಿದ್ದಾರೆ.

    ಇದನ್ನೇ ಅವಮಾನ ಎಂದು ಭಾವಿಸಿದ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಈ ಬಗ್ಗೆ ವೈದ್ಯಕೀಯ ಸಂಘಕ್ಕೆ ಕೂಡ ದೂರು ಸಲ್ಲಿಸಿದ್ದಾರೆ. ಖಾಸಗಿ ವೈದ್ಯರಿಗೂ ಮನೆ ಮಾಲೀಕರಿಗೂ ಸಂಬಂಧ ಇಲ್ಲ. ಮನೆಯನ್ನು ಬಾಡಿಗೆ ಪಡೆದಿದ್ದು ಲ್ಯಾಬ್ ಟೆಕ್ನೀಷಿಯನ್. ಆದರೆ ತನ್ನ ಮನೆಯಲ್ಲಿ ಸಣ್ಣ ಮಗು ವಯಸ್ಸಾದವರು ಇದ್ದಾರೆ ಎನ್ನುವ ಕಾರಣಕ್ಕೆ ಸ್ನೇಹಿತ ಬಾಡಿಗೆ ಪಡೆದಿದ್ದ ಮನೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದದ್ದು ಎಷ್ಟು ಸರಿ. ಮನೆಯ ಮಾಲೀಕರಿಗೆ ಆತಂಕ ಆಗುವುದಿಲ್ಲವೇ. ಈ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದ್ದರೆ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿತ್ತು.

    ನಂತರ ತಹಶೀಲ್ದಾರ್ ಅವರು ಖಾಸಗಿ ವೈದ್ಯ ಹಾಗೂ ಮನೆ ಮಾಲೀಕರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಮತ್ತು ಲ್ಯಾಬ್ ಟೆಕ್ನೀಷಿಯನ್ ಗೆ ಬೇರೆಡೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿದ್ದಾರೆ.

  • ಕೋಲಾರದಲ್ಲಿ ಮೂವರು ವೈದ್ಯರಿಗೆ ಕೊರೊನಾ ಸೋಂಕು

    ಕೋಲಾರದಲ್ಲಿ ಮೂವರು ವೈದ್ಯರಿಗೆ ಕೊರೊನಾ ಸೋಂಕು

    ಕೋಲಾರ: ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‍ಗಳಿಗೂ ಸೋಂಕು ತಗುಲಿದ್ದು, ಇದರಿಂದಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಭಯಭೀತರಾಗಿದ್ದಾರೆ.

    ನಗರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮೂವರು ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯ ವೈದ್ಯರಲ್ಲಿ ಆತಂಕ ಮನೆ ಮಾಡಿದೆ. ಅತಿಯಾದ ಹೊಟ್ಟೆ ನೋವಿನಿಂದ ತುರ್ತು ಚಿಕಿತ್ಸೆಗೆಂದು ಕೋಲಾರ ತಾಲೂಕಿನ ಜಂಗಮಗುರ್ಜೇನಹಳ್ಳಿ ಗ್ರಾಮದ 50 ವರ್ಷದ ಮಹಿಳೆ ಕೋಲಾರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಹಿಳೆಯ ಪರಿಸ್ಥಿತಿಗೆ ಸ್ಪಂದಿಸಿದ್ದ ವೈದ್ಯರು, ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ನಂತರ ಮಹಿಳೆಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಮಹಿಳೆಗೆ ಕೊರೊನಾ ತಗುಲಿರುವುದು ದೃಢವಾಗಿದೆ.

    ಇದರಿಂದ ಆತಂಕಗೊಂಡಿದ್ದ ಆರ್.ಎಲ್.ಜಾಲಪ್ಪಾ ಸಿಬ್ಬಂದಿ ಮತ್ತು ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್‍ಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆಗೆ ಆಪರೇಷನ್ ಮಾಡಿದ್ದ ಮೂವರು ವೈದ್ಯರಿಗೂ ಕೊರೊನಾ ತಗುಲಿದೆ ಎಂಬ ಆತಂಕಕಾರಿ ಸುದ್ದಿ ಹೊರ ಬಿದ್ದಿದೆ. ಮೂವರು ವೈದ್ಯರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಆಸ್ಪತ್ರೆಯ 22ಕ್ಕೂ ಹೆಚ್ಚು ಜನ ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೇನ್ ಮಾಡಲಾಗಿದೆ.

    ವೈದ್ಯರು ಆಪರೇಷನ್ ಮಾಡುವ ವೇಳೆ ಪಿಪಿಇ ಕಿಟ್ ಧರಿಸಿಯೇ ಆಪರೇಷನ್ ಮಾಡಿದ್ದರು. ಕೊರೊನಾ ಹಿನ್ನೆಲೆ ಕೈಗೊಳ್ಳಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಆದರೂ ಸೋಂಕು ತಗುಲಿದೆ. ಇದೀಗ ಆರ್.ಎಲ್.ಜಾಲಪ್ಪಾ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಯನ್ನು ಕೋವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದ್ದು, ಎಲ್ಲರ ರಕ್ತದ ಹಾಗೂ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಸಲಾಗಿದೆ.

    ಆಪರೇಷನ್ ಥಿಯೇಟರಿಗೆ ಸೋಂಕು ನಿವಾರಕ ಸಿಂಪಡಿಸಿ ಮೂರು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಈ ನಡುವೆ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‍ಗೂ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರ ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕಲಾಗುತ್ತಿದೆ. ಹೀಗಾಗಿ ಕೋಲಾರದಲ್ಲಿ ವೈದ್ಯಕೀಯ ಸಿಬ್ಬಂದಿ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

  • ಲೈಂಗಿಕ ಕಿರುಕುಳ ನೀಡಿದ ವೈದ್ಯನ ಮೇಲೆ ಹಲ್ಲೆ- ಮಹಿಳೆಯ ವಿರುದ್ಧ ಪ್ರತಿದೂರು ದಾಖಲು

    ಲೈಂಗಿಕ ಕಿರುಕುಳ ನೀಡಿದ ವೈದ್ಯನ ಮೇಲೆ ಹಲ್ಲೆ- ಮಹಿಳೆಯ ವಿರುದ್ಧ ಪ್ರತಿದೂರು ದಾಖಲು

    ಹುಬ್ಬಳ್ಳಿ: ಧಾರವಾಡ ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ ಸೇರಿದಂತೆ 6 ಜನರ ಮೇಲೆ ಪ್ರತಿ ದೂರು ದಾಖಲಾಗಿದೆ.

    ಚಿಟಗುಪ್ಪಿ ಆಸ್ಪತ್ರೆಯ ವೈದ್ಯೆ ಡಾ.ಕೋಮಲ್ ಪ್ರತಿ ದೂರು ನೀಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ ಮಹಿಳೆ ಹಾಗೂ ಆಕೆಯ ಸಹೋದರ ಸಂತೋಷ ಚೌಹಾಣ ವಿರುದ್ಧ ಉಪನಗರ ಠಾಣೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಜೂನ್ 19 ರಂದು ರಾತ್ರಿ ಮಹಿಳೆ ಮತ್ತು ಸಹೋದರ ಸೇರಿದಂತೆ ಸಂಬಂಧಿಕರು ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭು ಬಿರಾದರ್ ಮೇಲೆ ಹಲ್ಲೆ ಮಾಡಿದ್ದರು. ಇದಲ್ಲದೆ ಆಸ್ಪತ್ರೆಯಲ್ಲಿ ಗದ್ದಲ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದರು.

    ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ನಂತರ ವೈದ್ಯಾಧಿಕಾರಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯ ವೈದ್ಯೆ ಆರೋಪ ಮಾಡಿದ ಮಹಿಳೆ ಹಾಗೂ ಸಂಬಂಧಿಗಳ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ.

    ಏನಿದು ಪ್ರಕರಣ?
    ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರು ಫಾರ್ಮಾಸಿಟಿಕಲ್ ಎಜೆನ್ಸಿಯ ಮಾಲೀಕರಾಗಿದ್ದು, ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಪ್ರಭು ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದರು. ವಸ್ತುಗಳನ್ನು ಪಡೆದ ಪ್ರಭು ಹಣ ಪಾವತಿ ಮಾಡಿರಲಿಲ್ಲ. ಬಿಲ್ ಪಾವತಿ ಮಾಡಬೇಕಾದರೆ ಲಾಡ್ಜ್ ಗೆ ಬಾ ಎಂದು ಪ್ರಭು ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಜ್ಯೋತಿ ಆರೋಪಿಸಿದ್ದರು.

    ಜ್ಯೋತಿ ತಮಗಾದ ಕೆಟ್ಟ ಅನುಭವವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರ ಆಸ್ಪತ್ರೆಯೊಳಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದರು. ಕಿರುಕುಳಕ್ಕೊಳಗಾದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದರು.

  • ಬಿಲ್ ಬೇಕಾದ್ರೆ ಲಾಡ್ಜ್ ಗೆ ಬಾ ಎಂದ ವೈದ್ಯನ ಬಂಧನ

    ಬಿಲ್ ಬೇಕಾದ್ರೆ ಲಾಡ್ಜ್ ಗೆ ಬಾ ಎಂದ ವೈದ್ಯನ ಬಂಧನ

    ಧಾರವಾಡ/ಹುಬ್ಬಳ್ಳಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಪ್ರಭು ಬಿರಾದಾರ ಬಂಧಿತ ವೈದ್ಯ. ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರು ಫಾರ್ಮಾಸಿಟಿಕಲ್ ಎಜೆನ್ಸಿಯ ಮಾಲೀಕರಾಗಿದ್ದು, ಪ್ರಭು ಆಸ್ಪತ್ರೆಗೆ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದರು. ವಸ್ತುಗಳನ್ನು ಪಡೆದ ಪ್ರಭು ಹಣ ಪಾವತಿ ಮಾಡಿರಲಿಲ್ಲ. ಬಿಲ್ ಪಾವತಿ ಮಾಡಬೇಕಾದರೆ ಲಾಡ್ಜ್ ಗೆ ಬಾ ಎಂದು ಪ್ರಭು ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ಜ್ಯೋತಿ ಆರೋಪಿಸಿದ್ದಾರೆ.

    ಜ್ಯೋತಿ ತಮಗಾದ ಕೆಟ್ಟ ಅನುಭವವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರ ಆಸ್ಪತ್ರೆಯೊಳಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿದ್ದಾರೆ. ಕಿರುಕುಳಕ್ಕೊಳಗಾದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದ ಹುಬ್ಬಳ್ಳಿಯ ಚಿಟಗುಪ್ಪಿ ಹಾಗೂ ಉಪನಗರ ಪೊಲೀಸ ಠಾಣೆಯಲ್ಲಿ ಮಧ್ಯರಾತ್ರಿಯವರೆಗೂ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

  • ‘ಹುತಾತ್ಮ ಯೋಧರ ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳಿವೆಯೇ ಪರಿಶೀಲಿಸಿ’ -ಸಿಎಸ್‍ಕೆ ವೈದ್ಯ ಕಿಕೌಟ್

    ‘ಹುತಾತ್ಮ ಯೋಧರ ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳಿವೆಯೇ ಪರಿಶೀಲಿಸಿ’ -ಸಿಎಸ್‍ಕೆ ವೈದ್ಯ ಕಿಕೌಟ್

    ಚೆನ್ನೈ: ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ಕುರಿತು ಐಪಿಎಲ್ ಫ್ರ್ಯಾಂಚೈಸ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ)ಯ ಡಾ.ಮಧು ತೊಟ್ಟಪ್ಪಿಲಿಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಒಂದು ಕಡೆ ದೇಶ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದೆ. ಇದೇ ಸಮಯದಲ್ಲಿ ಡಾ.ಮಧು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ. “ಶವಪೆಟ್ಟಿಗೆಯಲ್ಲಿ ಪ್ರಧಾನಿ ಕೇರ್ಸ್ ಸ್ಟಿಕ್ಕರ್‌ಗಳು ಇವೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ” ಎಂದು ಡಾ.ಮಧು ತೊಟ್ಟಪ್ಪಿಲಿಲ್ ಬರೆದುಕೊಂಡಿದ್ದಾರೆ. ಈ ಹಿನ್ನೆಲೆ ಸಿಎಸ್‍ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ತಂಡದಿಂದ ಅವರನ್ನು ಅಮಾನತುಗೊಳಿಸಿದೆ.

    ಸಿಎಸ್‍ಕೆ ವಿಷಾದ:
    ಡಾ.ಮಧು ತೊಟ್ಟಪಿಲಿಲ್ ಟ್ವೀಟ್‍ನಿಂದಾಗಿ ನೆಟ್ಟಿಗರು ಅಸಮಾಧಾನ ಹೊರಹಾಕಿದು. ಹೀಗಾಗಿ ತಕ್ಷಣವೇ ಸಿಎಸ್‍ಕೆ ಕ್ರಮ ಕೈಗೊಂಡು ವೈದ್ಯರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್, “ಡಾ.ಮಧು ಅವರ ವೈಯಕ್ತಿಕ ಟ್ವೀಟ್ ವಿಚಾರ ನಮಗೆ ತಿಳಿದಿರಲಿಲ್ಲ. ಅವರನ್ನು ತಂಡದ ವೈದ್ಯರ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಮ್ಯಾನೇಜ್ಮೆಂಟ್‍ಗೆ ಹೇಳದೆ ಅವರು ಮಾಡಿದ ಟ್ವೀಟ್‍ಗೆ ಸಿಎಸ್‍ಕೆ ವಿಷಾದಿಸುತ್ತದೆ” ಎಂದು ತಿಳಿಸಿದೆ.

    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 2010, 2011 ಮತ್ತು 2018ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಟೂರ್ನಿಯಲ್ಲಿ ಒಟ್ಟು 190 ಪಂದ್ಯಗಳನ್ನು ಆಡಿರುವ ಎಂ.ಎಸ್.ಧೋನಿ 4,432 ರನ್ ಗಳಿಸಿದ್ದಾರೆ.

  • ನಡುರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ- ಜನತೆ ಕಂಗಾಲು

    ನಡುರಸ್ತೆಯಲ್ಲಿ ಅಸ್ವಸ್ಥನಾಗಿ ಬಿದ್ದ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ- ಜನತೆ ಕಂಗಾಲು

    ಹಾಸನ: ಕೈಯಲ್ಲಿ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ ನಡು ರಸ್ತೆಯಲ್ಲೇ ನಿತ್ರಾಣನಾಗಿ ಬಿದ್ದು, ನಗರದ ಜನತೆ ಕಂಗಾಲಾಗಿದ್ದಾರೆ.

    ಈ ಘಟನೆಯಿಂದಾಗಿ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಕೈಯಲ್ಲಿ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ ನಗರದ ಹೊಸ ಬಸ್ ನಿಲ್ದಾಣದ ಹಿಂಭಾಗ ನಡುರಸ್ತೆಯಲ್ಲೇ ನಿತ್ರಾಣನಾಗಿ ಬಿದ್ದಿದ್ದಾನೆ. ಆತನ ಸ್ಥಿತಿ ನೋಡಿದ ಸ್ಥಳೀಯರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದು ಎಂದು ಹತ್ತಿರ ಹೋಗದೆ, ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ.

    ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿ ಕೂಡ ಕೊರೊನಾ ಭಯದಿಂದ ಆತನನ್ನು ಮುಟ್ಟಲು ಹಿಂಜರಿದಿದ್ದಾರೆ. ಇದನ್ನು ಗಮನಿಸಿದ ಅದೇ ಏರಿಯಾದಲ್ಲಿ ವಾಸವಿದ್ದ ವೈದ್ಯರೊಬ್ಬರು, ಪಿಪಿ ಇ ಕಿಟ್ ಧರಿಸಿಕೊಂಡು ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ನಡುರಸ್ತೆಯಲ್ಲಿ ನಡೆದ ಈ ಘಟನೆ ಹಾಸನ ಜನರನ್ನು ಬೆಚ್ಚಿ ಬೀಳಿಸಿದೆ.

  • ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದ ವೈದ್ಯ- ಚಿಕಿತ್ಸೆ ಫಲಕಾರಿಯಾಗದೆ ಸಾವು

    ಕರ್ತವ್ಯದಲ್ಲಿದ್ದಾಗಲೇ ತಲೆ ಸುತ್ತಿ ಬಿದ್ದ ವೈದ್ಯ- ಚಿಕಿತ್ಸೆ ಫಲಕಾರಿಯಾಗದೆ ಸಾವು

    – ಕೊರೊನಾ ವಿರುದ್ಧ ದಣಿವರಿಯದೆ ಕೆಲಸ ಮಾಡಿದ್ದ ಶಿವಕಿರಣ್

    ಹಾಸನ: ಕೊರೊನಾ ವಿರುದ್ಧ ಧಣಿವರಿಯದೆ ಕೆಲಸ ಮಾಡಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಅನಾರೋಗ್ಯದಿಂದ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಜಿಲ್ಲೆಯ ಆಲೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕಿರಣ್ ಮೃತ ದುರ್ದೈವಿ ಡಾಕ್ಟರ್. ಕೊರೊನಾ ವಿರುದ್ಧ ವೈದ್ಯ ಶಿವಕಿರಣ್ ರಜೆಯಿಲ್ಲದೇ ನಿರಂತರವಾಗಿ ಕೆಲಸ ಮಾಡಿದ್ದರು. ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ವೈದ್ಯ ಶಿವಕಿರಣ್ ಸಹೋದ್ಯೋಗಿಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ ಕಳೆದು ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆ ಸುತ್ತಿ ಬಿದ್ದಿದ್ದರು.

    ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಶನ್‍ನಲ್ಲಿ ಇದ್ದ ವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತ ವೈದ್ಯರ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.

  • ಚಿಕಿತ್ಸೆ ಸಿಗದೆ ಒದ್ದಾಡಿ ರಕ್ತಸ್ರಾವವಾಗಿದ್ದ ಗರ್ಭಿಣಿಗೆ ಗರ್ಭಪಾತ

    ಚಿಕಿತ್ಸೆ ಸಿಗದೆ ಒದ್ದಾಡಿ ರಕ್ತಸ್ರಾವವಾಗಿದ್ದ ಗರ್ಭಿಣಿಗೆ ಗರ್ಭಪಾತ

    – ರಾಯಚೂರು ಒಪೆಕ್ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ

    ರಾಯಚೂರು: ಚಿಕಿತ್ಸೆ ಸಿಗದೇ ಒದ್ದಾಡಿ ರಕ್ತಸ್ರಾವವಾಗಿದ್ದ ಗರ್ಭಿಣಿಗೆ ಇಂದು ಗರ್ಭಪಾತವಾಗಿದೆ.

    ರಾಯಚೂರು ಕೋವಿಡ್ ಆಸ್ಪತ್ರೆಯಲ್ಲಿನ ಸೋಂಕಿತ ಗರ್ಭಿಣಿಗೆ ಗರ್ಭಪಾತವಾಗಿದೆ ಎಂದು ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ಮಾಹಿತಿ ನಿಡಿದ್ದಾರೆ.

    3 ತಿಂಗಳ ಗರ್ಭಿಣಿ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದರು. ಸೋಮವಾರ ರಾತ್ರಿ ತೀವ್ರ ತಕ್ತಸ್ರಾವವಾಗಿ ಗರ್ಭಿಣಿ ನರಳಾಡಿದ್ದರು. ಭಾನುವಾರ ರಾತ್ರಿಯಿಂದಲೇ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

    ಗರ್ಭಿಣಿಗೆ ಚಿಕಿತ್ಸೆ ನೀಡುವಂತೆ ಕೋವಿಡ್ ವಾರ್ಡ್ ನಲ್ಲಿದ್ದ ರೋಗಿಗಳು ಮಧ್ಯಾಹ್ನದ ಊಟ ಬಿಟ್ಟು ಪ್ರತಿಭಟನೆ ಮಾಡಿದ್ದರು. ರೋಗಿಗಳ ಆಕ್ರೋಶಕ್ಕೆ ಮಣಿದು ಗರ್ಭಿಣಿಯನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ತೀವ್ರ ರಕ್ತಸ್ರಾವದಿಂದ ಗರ್ಭಪಾತವಾಗಿದೆ. ಸೋಂಕಿತ ಮಹಿಳೆ ಚೇತರಿಸಿಕೊಳ್ಳುತ್ತಿದ್ದು ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದುಬಂದಿದೆ.

  • ಆಸ್ಪತ್ರೆಯಲ್ಲಿಯೇ ರೋಗಿ ನೇಣಿಗೆ ಶರಣು- ವೈದ್ಯರ ವಿರುದ್ಧ ನಿಷ್ಕಾಳಜಿ ಆರೋಪ

    ಆಸ್ಪತ್ರೆಯಲ್ಲಿಯೇ ರೋಗಿ ನೇಣಿಗೆ ಶರಣು- ವೈದ್ಯರ ವಿರುದ್ಧ ನಿಷ್ಕಾಳಜಿ ಆರೋಪ

    ಗದಗ: ಲಿವರ್ ಸಮಸ್ಯೆ ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ನಗರದ ಕಣ್ಯಾಳ ಅಗಸಿ ನಿವಾಸಿ ರಾಘವೇಂದ್ರ ಗೋಕಾಕ್ (34) ಆತ್ಮಹತ್ಯೆಗೆ ಶರಣಾದ ರೋಗಿ. ರಾಘವೇಂದ್ರ ಅನೇಕ ವರ್ಷಗಳಿಂದ ಲಿವರ್ ಹಾಗೂ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಹತ್ತಾರು ದಿನಗಳಿಂದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಮಾನಸಿಕ ಅಸ್ವಸ್ಥ ಎಂದುಕೊಂಡು ರಾಘವೇಂದ್ರ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಕೊರೊನಾ ಬಂದಾಗಿನಿಂದ ಜಿಮ್ಸ್ ಸಿಬ್ಬಂದಿ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಇದರಿಂದ ಸಾಕಷ್ಟು ರೋಗಿಗಳು ಪರದಾಡುವ ಪರಸ್ಥಿತಿ ಎದುರಾಗಿ ಎಂಬ ರಾಘವೇಂದ್ರ ಸಂಬಂಧಿಕರು ಆರೋಪಿದ್ದಾರೆ.

    ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಗದಗ ಗ್ರಾಮೀಣ ಠಾಣೆ ಪಿಎಸ್‍ಐ ಮಲ್ಲಿಕಾರ್ಜುನ ಕುಲಕರ್ಣಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಟಾಫ್ ನರ್ಸ್ ಹಾಗೂ ಡ್ಯೂಟಿ ಡಾಕ್ಟರ್ ಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

  • ಕೊರೊನಾ ವೈರಸ್- ಗದಗನಲ್ಲಿ ಐವರು ಡಿಸ್ಚಾರ್ಜ್

    ಕೊರೊನಾ ವೈರಸ್- ಗದಗನಲ್ಲಿ ಐವರು ಡಿಸ್ಚಾರ್ಜ್

    ಗದಗ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ನಿಂದ ಬಳಲುತ್ತಿದ್ದ ಐವರು ಈ ಹಿಂದೆ ಡಿಸ್ಚಾರ್ಜ್ ಆಗಿದ್ದರು. ಇದೀಗ ಮತ್ತೆ ಐವರು ಡಿಸ್ಚಾರ್ಜ್ ಆಗಿದ್ದಾರೆ.

    ಜಿಲ್ಲೆಯ ಜಿಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್ ನಿಂದ ಇಂದು 5 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಆಸ್ಪತ್ರೆಯಿಂದ ಕಳುಹಿಸಿದರು. ಈ ವೇಳೆ ಗುಣಮುಖನಾದ ವ್ಯಕ್ತಿಯೋಬ್ಬರು ಚಿಕಿತ್ಸೆ ನೀಡಿದ ವೈದ್ಯರ ಕಾಲಿಗೆ ನಮಸ್ಕರಿಸಿದರು.

    ಜಿಲ್ಲೆಯ ರೋಗಿ ನಂ.973, 1178, 1180, 1181 ಹಾಗೂ 1182 ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 5 ಜನ ಈ ಮೊದಲು ಗುಣಮುಖರಾಗಿ ಬಿಡುಗಡೆಯಾಗಿದ್ದರು. ಇಂದು ಮತ್ತೆ 5 ಜನ ಬಿಡುಗಡೆಯಾಗಿದ್ದಾರೆ. 80 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಜನ ಸೋಂಕಿತರಿದ್ದರು. ಇದೀಗ ಕೊರೊನಾ ಸೋಂಕಿತರ ಸಂಖ್ಯೆ 22ಕ್ಕೆ ಇಳಿಕೆಯಾಗಿದೆ.

    ಇದೇ ವೇಳೆ ಗುಣಮುಖರಾಗಿ ಬಿಡುಗಡೆಯಾದ ಈ ಐದು ಜನರಿಗೆ ಮಾಸ್ಕ್, ಸ್ಯಾನಿಟೈಜರ್ ಹಾಗೂ ಆಹಾರ ಕಿಟ್ ನೀಡಲಾಯಿತು. 14 ದಿನಗಳ ವರೆಗೆ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ವೈದ್ಯರು ಸಲಹೆ ನೀಡಿ, ಅಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿದರು. ಈ ವೇಳೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.