Tag: doctor

  • ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

    ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

    -ರಜೆ ಪಡೆಯದೇ 3 ತಿಂಗಳು ಸೇವೆ ನೀಡಿದ್ದ ವೈದ್ಯ
    -ರಂಜಾನ್ ದಿನವೂ ಮನೆಗೆ ಬಾರದ ವೈದ್ಯ

    ನವದೆಹಲಿ: ನನ್ನ ಪತಿ ಕೊರೊನಾ ಸೋಂಕಿತರಿಗಾಗಿ ಮೂರು ತಿಂಗಳು ರಜೆ ಪಡೆಯದೇ ಕೆಲಸ ಮಾಡಿದ್ದರಿಂದ ಅವರಿಗೂ ಸೋಂಕು ತಗುಲಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪತಿ ನಿಧನರಾದರು. ಆದರೆ ಇಲ್ಲಿಯವರೆಗೆ ನಮಗೆ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮೃತ ವೈದ್ಯನ ಪತ್ನಿ ಡಾ.ಹೀನಾ ಅಲಿ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಪತ್ರಿಕೆ ಜೊತೆ ಮಾತನಾಡಿರುವ ಹೀನಾ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪತಿ ಡಾ.ಜಾವೇದ್ ಅಲಿ ಮಾರ್ಚ್ ನಿಂದ ಜೂನ್ ವರೆಗೆ ನಿರಂತರವಾಗಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿದ್ರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ್ರು. ಡಾ. ಅಲಿ ದೆಹಲಿ ಸರ್ಕಾರದ ನ್ಯಾಷನಲ್ ಹೆಲ್ತ್ ಮಿಶನ್ ನ ವೈದ್ಯರಾಗಿದ್ದರು, ಸದ್ಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.

    ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾ ಹೀನಾ ಕಣ್ಣೀರು ಹಾಕಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಎನ್‍ಎಚ್‍ಓ ಸದಸ್ಯ ಡಾ.ಧೀರಜ್, ಜೂನ್ 24ರಂದು ಅವರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿತ್ತು. ಜೂನ್ 26ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಲೋಕನಾಯಕ್ ಮತ್ತು ಏಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಏಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಡಾ.ಅಲಿ ನಿಧನರಾದ್ರು ಎಂದು ಹೇಳಿದರು.

    ಡಾ. ಅಲಿ ಪತ್ನಿ ಹೀನಾ ಅವರಿಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ದೊರೆತಿಲ್ಲ. ರೋಗಿಗಳ ರಕ್ಷಣೆ ಮಾಡೋದು ನಮ್ಮ ಕರ್ತವ್ಯ. ಆದ್ರೆ ನಮ್ಮನ್ನು ರಕ್ಷಣೆ ಮಾಡೋರು ಯಾರು ಎಂದು ಹೀನಾ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರ ಫ್ರಂಟ್ ಲೈನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರ್ಥಿಕ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

  • ‘ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ

    ‘ರಾತ್ರಿ ರಕ್ತ ತರುವಂತೆ ಹೇಳಿ ಬೆಳಗ್ಗೆ ಸಾವಿನ ಸುದ್ದಿ ತಿಳಿಸಿದ್ರು’- ವೈದ್ಯರ ವಿರುದ್ಧ ಕಿಡಿ

    ವಿಜಯಪುರ: ಹೆರಿಗೆ ಸಮಯದಲ್ಲಿ ತಾಯಿ-ಮಗು ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ನಗರದ ಜಿಲ್ಲಾ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆಗೆಂದು ಕವಿತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ನಾರ್ಮಲ್ ಡೆಲಿವರಿಯಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ.

    ತಡರಾತ್ರಿ ರಕ್ತ ತೆಗೆದುಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಆದರೆ ಬೆಳಗ್ಗೆ ಸಾವಿನ ವಿಚಾರವನ್ನೇ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಹಾಗೂ ಮಗುವಿನ ಸಾವಾಗಿದೆ ಎಂದು ಆರೋಪಿಸುತ್ತಿದ್ದಾರೆ.

    ಘಟನೆಯ ಬಳಿಕ ಜಿಲ್ಲಾ ಹೆರಿಗೆ ಆಸ್ಪತ್ರೆ ಎದುರು ಸಂಬಂಧಿಕರು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಬರೆಯಲು ಜಾಗವಿಲ್ಲವೆಂದು ಬೇರೆ ಚೀಟಿ ಕೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ?

    ಬರೆಯಲು ಜಾಗವಿಲ್ಲವೆಂದು ಬೇರೆ ಚೀಟಿ ಕೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ?

    ಚಿಕ್ಕಮಗಳೂರು: ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ಬರೆಸಿಕೊಂಡು ಬನ್ನಿ ಎಂದಿದ್ದಕ್ಕೆ ರೋಗಿಯ ಜೊತೆ ಬಂದಿದ್ದ ಯುವಕ, ವೈದ್ಯರ ಮೇಲೆ ಹಲ್ಲೆ ಮಾಡಿರುವ ಆರೋಪವೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿಬಂದಿದೆ.

    ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಹಮದ್ ಎಂಬ ಹುಡುಗ ವಯಸ್ಸಾದ ವೃದ್ಧರೊಬ್ಬರನ್ನು ಸಂತೋಷ್ ಎಂಬ ವೈದ್ಯರ ಕೊಠಡಿ ಮುಂಭಾಗ ಕೂರಿಸಿ ವೈದ್ಯರ ಬಳಿ ಚೀಟಿ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ವೈದ್ಯ ಸಂತೋಷ್, ಈ ಚೀಟಿಯಲ್ಲಿ ಬರೆಯಲು ಜಾಗ ಇಲ್ಲ ಬೇರೆ ಚೀಟಿ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಯುವಕ ನೀನು ನೋಡದಿದ್ದರೆ ಬೇಡ, ಬೇರೆ ಕಡೆ ತೋರಿಸುತ್ತೇನೆ ಎಂದು ಬಾಗಿಲನ್ನ ಜೋರಾಗಿ ಎಳೆದುಕೊಂಡು ಅಲ್ಲಿಂದ ಹೋಗಿದ್ದಾನೆ. ಈ ಘಟನೆಯಾದ ಸ್ವಲ್ಪ ಸಮಯದ ನಂತರ ಅಹಮದ್ ಎಂಬ ಯುವಕ ನಾಲ್ಕೈದು ಜನರೊಂದಿಗೆ ಆಸ್ಪತ್ರೆಗೆ ಬಂದು ನನ್ನ ತಂದೆಯನ್ನು ಏಕೆ ನೋಡಲಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯ ಸಂತೋಷ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ವೈದ್ಯರ ಜೊತೆ ಗಲಾಟೆ ಮಾಡಿದ ಯುವಕರು ನೀನು ಹೊರಗಡೆ ಬಾ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬರದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವೈದ್ಯ ಸಂತೋಷ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೂಡಿಗೆರೆಯಲ್ಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಸೋಂಕಿತೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ ವೈದ್ಯರು – ಗಂಡು ಮಗು ಜನನ

    ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆಯನ್ನು ಜಿಲ್ಲಾಸ್ಪತ್ರೆ ವೈದ್ಯರು ಮಾಡಿಸಿದ್ದಾರೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಜಾನಗುಂಡಿಕೊಪ್ಪ ಗ್ರಾಮದ ಮೂವತ್ತು ವರ್ಷದ ಮಹಿಳೆಗೆ ವೈದ್ಯರು ಜೀವದ ಹಂಗು ತೊರೆದು ಹೆರಿಗೆ ಮಾಡಿಸಿದ್ದಾರೆ. ಜುಲೈ 3ರಂದು ಜಿಲ್ಲಾಸ್ಪತ್ರೆಗೆ ತಪಾಸಣೆಗೆ ಬಂದಿದ್ದ ಗರ್ಭಿಣಿ ಗಂಟಲು ದ್ರವದ ಮಾದರಿಯನ್ನು ಸಹ ನೀಡಿ ಹೋಗಿದ್ದರು. ಈ ವೇಳೆ ಜುಲೈ 10ರಂದು ಹೆರಿಗೆಯ ವೈದ್ಯರು ದಿನಾಂಕ ನೀಡಿದ್ದರು. ಆದರೆ ಸೋಮವಾರ ಬಂದ ವರದಿಯಲ್ಲಿ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವ ದೃಢಪಟ್ಟಿದೆ.

    ಸೋಂಕು ದೃಢಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇವತ್ತು ಬೆಳಗಿನ ಜಾವ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸಿಸೇರಿಯನ್ ಮೂಲಕ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

  • ಬೆಂಗ್ಳೂರಲ್ಲಿ ಕೊರೊನಾ ನರಕ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಡಾಕ್ಟರ್!

    ಬೆಂಗ್ಳೂರಲ್ಲಿ ಕೊರೊನಾ ನರಕ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಡಾಕ್ಟರ್!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ದಿನ ಮಹಾಮಾರಿ ಕೊರೊನಾಗೆ ಹೆಣ ಬೀಳುತ್ತನೇ ಇದೆ. ಇಲ್ಲಿನ ನರಕ ಬದುಕಿನ ಕರಾಳ ಸತ್ಯವನ್ನು ವೈದ್ಯರೊಬ್ಬರು ಬಿಚ್ಚಿಟ್ಟಿದ್ದಾರೆ.

    ಹೌದು. ಐಸಿಯುವಿನಲ್ಲಿ ನಿಂತು ವೈದ್ಯರೊಬ್ಬರು ಕೈಮುಗಿದು ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ಐಸಿಯು ಕೇರ್ ನಿಂದ `ವೈದ್ಯ ದೇವರ’ ಮಾತಿನ ಎಕ್ಸ್ ಕ್ಲೂಸಿವ್ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವಿಡಿಯೋದಲ್ಲೇನಿದೆ..?
    ನಾನು ಕೋವಿಡ್ ಆಸ್ಪತ್ರೆಯಾದ ಎಚ್‍ಬಿಎಸ್ ಆಸ್ಪತ್ರೆಯ ಐಸಿಯು ಕೇರ್ ನಿಂದ ಮಾತನಾಡ್ತಿದ್ದೇನೆ. ನಾನು ಬೆಳಗ್ಗೆ 7.30ಕ್ಕೆ ಆಸ್ಪತ್ರೆಗೆ ಬಂದಿದ್ದೇನೆ. ಈಗ ಸಮಯ ಮಧ್ಯರಾತ್ರಿ 12 ಗಂಟೆ. ನಿರಂತರ ಕರೆ ಬರುತ್ತಿದೆ. ನನ್ನ ತಂದೆಗೆ ಉಸಿರಾಟದ ಸಮಸ್ಯೆ ಇದೆ, ನನ್ನ ಮಗಳಿಗೆ ಉಸಿರಾಟದ ಸಮಸ್ಯೆ ಇದೆ. ಅಣ್ಣನಿಗೆ ಉಸಿರಾಟದ ಸಮಸ್ಯೆ ಇದೆ ಎಲ್ಲೂ ಬೆಡ್ ಸಿಗ್ತಿಲ್ಲ. ನೀವು ನೋಡುತ್ತಿದ್ದೀರಾ ಇಲ್ಲಿ ನಾವಿಬ್ಬರೇ ವಾರ್ಡಿನಲ್ಲಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.

    ಈ ಸಮಯದಲ್ಲಿ ಇಲ್ಲಿ ಕೆಲಸ ಮಾಡಲು ಯಾವ ಡಾಕ್ಟರ್ ಕೂಡ ಮುಂದೆ ಬರುತ್ತಿಲ್ಲ. ನಮ್ಮಲ್ಲಿ ಬೆಡ್, ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಆದರೆ ಕೆಲಸ ಮಾಡಲು ಡಾಕ್ಟರ್‍ಗಳೇ ಬರುತ್ತಿಲ್ಲ. ದಿನದಲ್ಲಿ ನನಗೆ ನಿಮ್ಮ ಕೇವಲ ಆರೇ ಆರು ಗಂಟೆ ಕೊಡಿ. ಪ್ಲೀಸ್.. ಇದು ನನ್ನ ಮನವಿ ಎಂದಿದ್ದಾರೆ.

    ಈಗ ನಮ್ಮ ಕಾರ್ಯಕ್ಷಮತೆ, ಕಾಳಜಿ ತೋರಿಸೋ ಸಮಯ. ಸೇನೆಯವರಿಗೆ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಪೊಲೀಸ್, ಅಗ್ನಿಶಾಮಕದವರಿಗೂ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಇದೀಗ ನಮ್ಮ ಸಮಯ. ಈಗ ಡಾಕ್ಟರ್‍ಗಳ ಸರದಿ ಬಂದಿದೆ. ವೈದ್ಯರುಗಳೇ ಇಂತಹ ಸಂದರ್ಭಗಳಲ್ಲಿ ನಮ್ಮ ಮಾನವೀಯತೆಯಿಂದ ಕಾರ್ಯಕ್ಷಮತೆಯನ್ನು ತೋರಿಸೋಣ. ಇಲ್ಲಿರೋದು ನಮ್ಮ ತಾಯಿ, ಅಣ್ಣ, ತಂದೆ ಅಂತ ಅಂದುಕೊಳ್ಳೋಣ. ನಾವೀಗ ಸಹಾಯ ಮಾಡಬೇಕಿದೆ, ಎದ್ದೇಳೋಣ. ನಮ್ಮ ಅಕ್ಕರೆಯನ್ನು ಜನ್ರಿಗೆ ಕೊಟ್ಟು ಉಳಿಸೋಣ ಎಂದು ವೈದ್ಯ ಕೈ ಮುಗಿದು ಬೇಡಿಕೊಂಡಿದ್ದಾರೆ.

  • ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಕೊರೊನಾ ಸೋಂಕಿತ ಗರ್ಭಿಣಿಗೆ ಸಿಸೇರಿನ್ ಮೂಲಕ ಹೆರಿಗೆ- ಹೆಣ್ಣು ಮಗು ಜನನ

    ಗದಗ: ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ ವೈದ್ಯಕೀಯ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿರುವ ಘಟನೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಜಿಲ್ಲೆಯ ಗೋಜನೂರು ಗ್ರಾಮದ ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಸೋಂಕಿತರು ಅಂದರೆ ನಿಷ್ಠೂರವಾಗಿ ನೋಡುವುದರ ಜೊತೆಗೆ ಯಾರು ಹತ್ರಾನೂ ಸುಳಿಯಲ್ಲ. ಈ ಸಂದರ್ಭದಲ್ಲಿ ಗದಗ ಜಿಮ್ಸ್ ವೈದ್ಯರು ಸಿಸೇರಿನ್ ಮೂಲಕ ಎರಡು ಜೀವ ಉಳಿಸಿದ್ದಾರೆ. ವೈದ್ಯರಾದ ಡಾ.ಶಿವನಗೌಡ, ಡಾ.ಶೃತಿ ಹಾಗೂ ಡಾ ಅಜಯ್ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಸೋಂಕಿತೆಗೆ ಹೆಣ್ಣು ಮಗು ಜನನವಾಗಿದೆ.

    ನವಜಾತ ಶಿಶು 2.7 ಕೆಜಿ ತೂಕ ಹೊಂದಿದೆ. ಶಿಶುವಿಗೆ ಸ್ವಲ್ಪ ಉಸಿರಾಟದ ತೊಂದರೆ ಇರೋದರಿಂದ ಕೋವಿಡ್-19 ವಾರ್ಡ್‍ನಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿದೆ. ಮಗು ಚೇತರಿಸಿಕೊಳ್ಳುವ ಲಕ್ಷಣಗಳು ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕಿತ ಮಹಿಳೆಗೆ ಮೊದಲನೇಯ ಹೆರಿಗೆ ಕೂಡ ಶಸ್ತ್ರಚಿಕಿತ್ಸೆಯಿಂದ ಆಗಿತ್ತು. ಈಗ 2ನೇ ಹೆರಿಗೆಯನ್ನು ಕೂಡ ಶಸ್ತ್ರಚಿಕಿತ್ಸೆ ಮೂಲಕ ಮಾಡಲಾಗಿದೆ. ಗದಗ ವೈದ್ಯಕೀಯ ಸಿಬ್ಬಂದಿ ತಂಡದ ಉತ್ತಮ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೀಯ ವ್ಯಕ್ತವಾಗುತ್ತಿದೆ.

  • ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    ಖಾಸಗಿ ವೈದ್ಯನಿಂದ ಜನರ ಬಳಿಗೆ ತೆರಳಿ ಕೋವಿಡ್ ಜಾಗೃತಿ-ಉಚಿತ ಚಿಕಿತ್ಸೆ

    -ಆಸ್ಪತ್ರೆ ಬಿಟ್ಟು ಹಳ್ಳಿಗಳಿಗೆ ತೆರಳಿ ಬಡ ಜನರಿಗೆ ಉಚಿತ ವೈದ್ಯಕೀಯ ಸೇವೆ

    ಚಿಕ್ಕಬಳ್ಳಾಪುರ: ಕೊರೊನಾ ವೈರಸ್ ನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ವೈದ್ಯರ ಸೇವೆ ಮಹತ್ವ ಎಷ್ಟೆಂಬುದು ಎಲ್ಲರಿಗೂ ಅರಿವಾಗಿದೆ. ಆದ್ರೂ ಇಂತಹ ಸಂದರ್ಭದಲ್ಲೂ ಕೆಲ ವೈದ್ಯರು ಕೊರೊನಾಗೆ ಹೆದರಿ ಆಸ್ಪತ್ರೆ ಲಾಕ್ ಮಾಡಿದ್ದು ಉಂಟು. ಆದ್ರೆ ಇಲ್ಲೊಬ್ಬ ಖಾಸಗಿ ಆಸ್ಪತ್ರೆ ವೈದ್ಯರು ಮಾತ್ರ ತಮ್ಮ ಆಸ್ಪತ್ರೆ ಮುಚ್ಚಿ ನೇರವಾಗಿ ಜನರ ಬಳಿಯೇ ಹಳ್ಳಿಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ಕೊಡ್ತಿದ್ದಾರೆ. ರಾಷ್ಟ್ರೀಯ ವೈದ್ಯರ ದಿನದಿಂದ ಸಮಾಜಮುಖಿ ಮಾದರಿ ವೈದ್ಯರ ಕಾರ್ಯ ನೆನೆಯುವ ವರದಿ ಇದಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಪೀಪಲ್ಸ್ ಖಾಸಗಿ ಆಸ್ಪತ್ರೆಯ ವೈದ್ಯ ಅನಿಲ್ ಕುಮಾರ್ ಕೋವಿಡ್-19 ಸಂಕಷ್ಟದ ಸಮಯದಲ್ಲಿ ತಮ್ಮ ತಾಲೂಕಿನ ಬಡ ಜನರ ಆರೋಗ್ಯ ಕಾಯೋಕೆ ಮುಂದಾಗಿದ್ದಾರೆ. ಕೊರೊನಾ ಆರಂಭದಿಂದ ಹಾಗೂ ಲಾಕ್‍ಡೌನ್ ಆದ ನಂತರ ಖುದ್ದು ತಾವೇ ಪ್ರತಿದಿನ 2-3 ಹಳ್ಳಿಗಳಂತೆ ಹಳ್ಳಿ ಹಳ್ಳಿಗೂ ಹೋಗಿ ಜನರ ಆರೋಗ್ಯ ತಪಾಸಣೆ ಮಾಡುತ್ತಾ ಬರುತ್ತಿದ್ದಾರೆ.

    ಕೇವಲ ಆರೋೀಗ್ಯ ತಪಾಸಣೆ ಅಷ್ಟೇ ಅಲ್ಲದೆ ಆನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸಲಹೆ ಸೇವೆ ಮಾಡುತ್ತಾ ಉಚಿತವಾಗಿ ಔಷಧಿಗಳನ್ನ ಕೊಡುತ್ತಿದ್ದಾರೆ. ಲಾಕ್‍ಡೌನ್ ಇರುವವರೆಗೂ ಹಳ್ಳಿ ಹಳ್ಳಿಗಳಿಗೂ ತೆರಳಿ ಸೇವೆ ನೀಡಿದ್ದ ವೈದ್ಯ ಅನಿಲ್ ಕುಮಾರ್, ಈಗ ಜನ ನರೇಗಾ ಮೂಲಕ ಕೆಲಸ ಮಾಡುವ ಆಯಕಟ್ಟಿನ ಸ್ಥಳಗಳಿಗೆ ತೆರಳಿ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಬಡ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕೋವಿಡ್ 19 ವಿರುದ್ಧ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಇಷ್ಟು ದಿನ ಬಾಗೇಪಲ್ಲಿ ತಾಲೂಕಿನಲ್ಲಿ ಮಾಡುತ್ತಿದ್ದ ಸೇವೆಯನ್ನ ಈಗ ಪಕ್ಕದ ಗುಡಿಬಂಡೆ ಗೌರಿಬಿದನೂರು ತಾಲೂಕಿಗೆ ವಿಸ್ತರಿಸುತ್ತಿದ್ದು, ವೈದ್ಯರ ಈ ಸೇವೆಯನ್ನ ಜನ ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಬಾಗೇಪಲ್ಲಿಯ ಪೀಪಲ್ಸ್ ಆಸ್ಪತ್ರೆ ಅಂದ್ರೆ ಜನಸಾಮಾನ್ಯರ ವೈದ್ಯ ಅಂತಲೇ ಪ್ರಖ್ಯಾತ ಪಡೆದಿರುವ ವೈದ್ಯ ಅನಿಲ್ ಕುಮಾರ್ ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಸೇವೆಯನ್ನ ಕರ್ತವ್ಯ ಅಂತ ಭಾವಿಸಿ ಬಡ ಜನರ ಸೇವೆ ಮಾಡುತ್ತಿರೋದು ನಿಜಕ್ಕೂ ಶ್ಲಾಘನೀಯವೇ ಸರಿ. ರಾಷ್ಟ್ರೀಯ ವೈದ್ಯರ ದಿನದಂದು ಈ ವೈದ್ಯರಿಗೆ ನಮ್ಮದೊಂದು ಸಲಾಂ.

  • 52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ದೃಢ

    52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ದೃಢ

    – ನಗರದ 4 ಅಂಗನವಾಡಿ ಮಕ್ಕಳಿಗೆ ಕೊರೊನಾಂತಕ

    ಬೆಂಗಳೂರು: ಸುಮಾರು 52 ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದ ವೈದ್ಯೆಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದೆ.

    ಯಲಹಂಕ ಬಳಿಯ ಅಟ್ಟೂರು ಹಾಗೂ ಅಟ್ಟೂರು ಬಡಾವಣೆಯ ಅಂಗನವಾಡಿ ಸೇರಿದಂತೆ, ನಗರದ 4 ಅಂಗನವಾಡಿ ಕೇಂದ್ರಗಳಲ್ಲಿ ಈ ಡಾಕ್ಟರ್ ಆರೋಗ್ಯ ತಪಾಸಣೆ ನಡೆಸಿದ್ದರು. ಆಗ ತಾನೇ ಹುಟ್ಟಿದ ಮಕ್ಕಳಿಂದ 3 ವರ್ಷದ ಮಕ್ಕಳವರೆಗೆ ಆರೋಗ್ಯ ತಪಾಸಣೆ ನಡೆಸಿದ್ದರು. ಈಗ ಈ ಎಲ್ಲ ಮಕ್ಕಳ ಪೋಷಕರಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ.

    4 ಅಂಗನವಾಡಿ ಕೇಂದ್ರದಲ್ಲಿ ಒಟ್ಟು 52 ಮಕ್ಕಳಿದ್ದರು ಎಂದು ಹೇಳಲಾಗಿದೆ. ಒಂದೊಂದು ಅಂಗನವಾಡಿಯಲ್ಲಿ 13 ಮಕ್ಕಳಿಗೆ ತಪಾಸಣೆ ನಡೆಸಿದ್ದರು ಎನ್ನಲಾಗಿದೆ. ಕಳೆದ ಜೂನ್ 22ರಂದು ವೈದ್ಯೆ ಮಕ್ಕಳಿಗೆ ತಪಾಸಣೆ ನಡೆಸಿದ್ದರು. ಆದರೆ ಜೂನ್ 27ಕ್ಕೆ ವೈದ್ಯೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮಕ್ಕಳಿಗೆ ತಪಾಸಣೆ ನಡೆಸಿದ ಐದೇ ದಿನಗಳಲ್ಲಿ ವೈದ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಕ್ಕಳ ಪೋಷಕರಿಗೆ ಆತಂಕ ಹೆಚ್ಚಾಗಿದೆ.

    ಇದರ ಜೊತೆಗೆ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ವೇಳೆ ವೈದ್ಯರು ಕೈಗೆ ಗ್ಲೌಸ್ ಕೂಡ ಬಳಸಿರಲಿಲ್ಲ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಗ್ಲೌಸ್ ಬಳಕೆ ಮಾಡದೇ ಇರುವುದರಿಂದ ತಪಾಸಣೆಗೆ ಒಳಗಾಗಿರುವ ಮಕ್ಕಳಿಗೆ ಸೋಂಕು ಹರಡುವ ಭೀತಿ ಹೆಚ್ಚಾಗಿದೆ.

  • ‘ಗುಡ್‍ಬೈ ಡ್ಯಾಡಿ, ಅವರು ವೆಂಟಿಲೇಟರ್ ತೆಗೆದು ಹಾಕಿದ್ರು’- ಸಾಯೋ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳಿಸಿದ ಮಗ

    ‘ಗುಡ್‍ಬೈ ಡ್ಯಾಡಿ, ಅವರು ವೆಂಟಿಲೇಟರ್ ತೆಗೆದು ಹಾಕಿದ್ರು’- ಸಾಯೋ ಮುನ್ನ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳಿಸಿದ ಮಗ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುವ ಕೆಲವೇ ನಿಮಿಷಗಳ ಮೊದಲು ಸೆಲ್ಫಿ ವಿಡಿಯೋ ಮಾಡಿ 26 ವರ್ಷದ ಯುವಕನೊಬ್ಬ ತನ್ನ ತಂದೆಗೆ ಕಳುಹಿಸಿದ ಕರುಣಾಜನಕ ಘಟನೆಯೊಂದು ನಡೆದಿದೆ.

    ಹೌದು. ಯುವಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಹೈದರಾಬಾದ್ ನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಶುಕ್ರವಾರ ರಾತ್ರಿ ಯುವಕ ತನ್ನ ತಂದೆ ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿದ್ದಾನೆ. ವಿಡಿಯೋದಲ್ಲಿ ಆಸ್ಪತ್ರೆಯ ಬೆಡ್ ನಲ್ಲಿ ಯುವಕ ಮಲಗಿದ್ದಾನೆ. ಅಲ್ಲದೆ ವೈದ್ಯರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನಗೆ ಉಸಿರಾಡಲು ಕಷ್ಟವಾಗುತ್ತಿದೆ. ಬೈ ಡ್ಯಾಡಿ ಎಂದು ಹೇಳಿರುವುದು ಕಣ್ಣೀರು ತರಿಸುತ್ತಿದೆ. ಭಾನುವಾರದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಕಳೆದ ಮೂರು ಗಂಟೆಗಳಿಂದ ವೈದ್ಯರು ಆಕ್ಸಿಜನ್ ಸಹಾಯ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಯುವಕ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಅವರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನ್ನ ಹೃದಯಬಡಿತ ನಿಂತು ಹೋಗಿದ್ದು, ಸದ್ಯ ಶ್ವಾಸಕೋಶ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಟ್ಟಿನಲ್ಲಿ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ. ಬೈ ಡ್ಯಾಡಿ, ಬೈ ಆಲ್, ಬೈ ಡ್ಯಾಡಿ ಅಂತ ಯುವಕ ಗೋಗರೆದ ದೃಶ್ಯ ಮನಕಲುಕುವಂತಿದೆ.

    ಕೊರೊನಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರವನ್ನು ಶನಿವಾರ ತಂದೆಯೇ ನೆರವೇರಿಸಿದ್ದಾರೆ. ಮಗ ತನ್ನ ಉಸಿರು ನಿಲ್ಲಿಸುವ ಕೆಲ ನಿಮಿಷಗಳ ಮೊದಲು ನನಗೆ ವಿಡಿಯೋ ಕಳುಹಿಸಿದ್ದನು ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಜೂನ್ 24ರಂದು ತೀವ್ರವಾಗಿ ಬಳಲುತ್ತಿದ್ದ ನನ್ನ ಮಗನನ್ನು ನಗರದಲ್ಲಿರುವ ಚೆಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಆದರೆ ಇದೀಗ ನಮಗೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಆರೋಪ ತಳ್ಳಿಹಾಕಿದ ಆಸ್ಪತ್ರೆ ಮೇಲ್ವಿಚಾರಕ:
    ವೆಂಟಿಲೇಟರ್ ತೆಗೆದುಹಾಕಿರುವ ವಿಚಾರವನ್ನು ಆಸ್ಪತ್ರೆಯ ಮೇಲ್ವಿಚಾರಕ ಮೆಹಬೂಬ್ ಖಾನ್ ತಳ್ಳಿ ಹಾಕಿದ್ದಾರೆ. ರೋಗಿಯ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಹೀಗಾಗಿ ಆತನಿಗೆ ಆಕ್ಸಿಜನ್ ಸಹಾಯ ನೀಡಲು ಸಾಧ್ಯವಾಗಿಲ್ಲ. ಹೃದಯಾಘಾತವೇ ಆತನ ಸಾವಿಗೆ ಕಾರಣ. ಯುವಕನನ್ನು ಉಳಿಸಿಕೊಳ್ಳಲು ನಮ್ಮ ಆಸ್ಪತ್ರೆಯ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

  • ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    ಹಾವೇರಿಯಲ್ಲಿ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ

    – 69ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಇಂದು ಒಬ್ಬ ವೈದ್ಯ, ಮೂವರು ಆಶಾ ಕಾರ್ಯಕರ್ತೆಯರು ಸೇರಿ 12 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಆಂತಕ್ಕೀಡು ಮಾಡಿದೆ.

     

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರಿನಲ್ಲಿ ವೈದ್ಯ ಸೇರಿ ಐವರಿಗೆ ಸೋಂಕು ಧೃಡಪಟ್ಟಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರೋಗಿ ನಂ.9546 ಪ್ರಾಥಮಿಕ ಸಂಪರ್ಕದಿಂದ ಈ ಐವರಿಗೆ ಸೋಂಕು ತಗುಲಿದೆ.

    ಹಾನಗಲ್ ಪಟ್ಟಣದ ಮೂವರು ಆಶಾ ಕಾರ್ಯಕರ್ತೆಯರಿಗೆ ಕೊರೊನಾ ಸೋಂಕು ತಗುಲಿದ್ದು, ಆಶಾ ಕಾರ್ಯಕರ್ತೆಯರಿಗೆ ನಿಗದಿತ ತಪಾಸಣೆ ನಡೆಸಿದ್ದರಿಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಸವಣೂರು ಪಟ್ಟಣದ ಕಂಟೈನ್ಮೆಂಟ್ ಝೋನ್‍ನ 23 ವರ್ಷದ ಗರ್ಭೀಣಿ ಮಹಿಳೆ ರೋಗಿ ನಂ.8699 ಸಂಪರ್ಕದಿಂದ ಇಬ್ಬರಿಗೆ ಸೋಂಕು ತಗುಲಿದೆ. ರಾಣೆಬೆನ್ನೂರು ನಗರದ ರೋಗಿ ನಂ.9411ರ ಪ್ರಾಥಮಿಕ ಸಂಪರ್ಕದಿಂದ ಐದು ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದೆ.

    ಒಟ್ಟು 12 ಸೋಂಕಿತರನ್ನು ಜಿಲ್ಲಾಸ್ಪತ್ರೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರು ವಾಸವಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಇಂದು 12 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿದೆ.