Tag: doctor

  • ಜೀವನದಲ್ಲಿ ಖುಷಿಯಿಲ್ಲ- ಪತಿ, ಇಬ್ಬರು ಮಕ್ಕಳನ್ನು ಕೊಲೆಗೈದು ವೈದ್ಯೆ ನೇಣಿಗೆ ಶರಣು

    ಜೀವನದಲ್ಲಿ ಖುಷಿಯಿಲ್ಲ- ಪತಿ, ಇಬ್ಬರು ಮಕ್ಕಳನ್ನು ಕೊಲೆಗೈದು ವೈದ್ಯೆ ನೇಣಿಗೆ ಶರಣು

    ಮುಂಬೈ: ವೈದ್ಯೆಯೊಬ್ಬಳು ಪತಿ ಹಾಗೂ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ಕೊರಡಿ ಪ್ರದೇಶದ ಓಂ ನಗರದಲ್ಲಿರುವ ಮನೆಯಲ್ಲಿ ವೈದ್ಯೆ ಡಾ. ಸುಷ್ಮಾ ರಾಣೆ(41) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮೊದಲು ಪತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಧೀರಜ್(42) ಹಾಗೂ 11 ವರ್ಷ ಹಾಗೂ 5 ವರ್ಷದ ಪುಟ್ಟ ಮಕ್ಕಳನ್ನು ಕೊಲೆ ಮಾಡಿದ್ದಾಳೆ.

    ಪತಿ ಹಾಗೂ ಮಕ್ಕಳ ಮೃತದೇಹ ಬೆಡ್ ರೂಂ ನಲ್ಲಿರುವ ಬೆಡ್ ಮೇಲೆ ಬಿದ್ದಿದ್ದರೆ, ವೈದ್ಯೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕೊರಡಿ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    ವೈದ್ಯೆಯ ಕುಟುಂಬದ ಜೊತೆ ವಾಸವಾಗಿದ್ದ 60 ವರ್ಷದ ಮಹಿಳೆ ಬೆಡ್ ರೂಮ್ ಬಾಗಿಲು ತಟ್ಟಿದರೂ ಯಾರೂ ಹೊರಬರದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ 2 ಸಿರಿಂಜ್ ಗಳು ಹಾಗೂ ಡೆತ್ ನೋಟ್ ಸಿಕಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೀವನದಲ್ಲಿ ಖುಷಿಯಿಲ್ಲ ಎಂದು ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ಸುಷ್ಮಾ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.

    ಪ್ರಾಥಮಿಕ ವರದಿಯ ಪ್ರಕಾರ, ಸುಷ್ಮಾ ತನ್ನ ಪತಿ ಹಾಗೂ ಮಕ್ಕಳನ್ನು ಪ್ರಜ್ಞಾಹೀನ ಸ್ಥಿತಿಗೆ ತರಲು ನಿದ್ರೆಯ ಮಾತ್ರೆಗಳನ್ನು ಆಹಾರದಲ್ಲಿ ನೀಡಿರಬಹುದು. ನಂತರ ಇಂಜೆಕ್ಷನ್ ಚುಚ್ಚಿ ಸಾಯಿಸಿರಬಹುದು ತಿಳಿದುಬಂದಿದೆ.

    ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ಕೊರೊನಾದಿಂದ ಮೃತಪಟ್ಟ ಡಾಕ್ಟರ್ ಕುಟುಂಬಕ್ಕೆ 1 ಕೋಟಿ ರೂ. ಚೆಕ್ ನೀಡಿದ ಕೇಜ್ರಿವಾಲ್

    ಕೊರೊನಾದಿಂದ ಮೃತಪಟ್ಟ ಡಾಕ್ಟರ್ ಕುಟುಂಬಕ್ಕೆ 1 ಕೋಟಿ ರೂ. ಚೆಕ್ ನೀಡಿದ ಕೇಜ್ರಿವಾಲ್

    ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊರೊನಾದಿಂದ ಮೃತಪಟ್ಟ ಡಾಕ್ಟರ್ ಜೋಗಿಂದರ್ ಚೌಧರಿ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಮೊತ್ತದ ಚೆಕ್ ನೀಡಿದ್ದಾರೆ.

    ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯ ಜೋಗಿಂದರ್ ಚೌಧರಿ ಕೊರೊನಾದಿಂದ ಕಳೆದ ವಾರ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಡಾಕ್ಟರ್ ಚೌಧರಿ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಆರ್ಥಿಕ ಸಹಾಯವಾಗಿ ಒಂದು ಕೋಟಿ ರೂ. ಮೊತ್ತದ ಚೆಕ್ ಅನ್ನು ಸೋಮವಾರ ಹಸ್ತಾಂತರಿಸಿದ್ದಾರೆ.

    “ನಮ್ಮ ಕೊರೊನಾ ವಾರಿಯರ್ ಡಾ.ಜೋಗಿಂದರ್ ಚೌಧರಿ ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಪ್ರಾಣವನ್ನು ಪಣಕ್ಕಿಟ್ಟು ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸಿದ್ದರು. ಆದರೆ ಕೊರೊನಾ ಸೋಂಕಿನಿಂದಾಗಿ ಡಾ. ಚೌಧರಿ ಇತ್ತೀಚೆಗೆ ನಿಧನರಾಗಿದ್ದಾರೆ. ನಾನು ಅವರ ಕುಟುಂಬದವರನ್ನು ಭೇಟಿಯಾಗಿ 1 ಕೋಟಿ ರೂ. ಆರ್ಥಿಕ ನೆರವು ನೀಡಿದ್ದೇನೆ. ಇದು ಡಾಕ್ಟರ್ ಕುಟುಂಬಕ್ಕೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ” ಎಂದು ಕೇಜ್ರಿವಾಲ್ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಜೊತೆಗೆ ಚೆಕ್ ನೀಡುತ್ತಿರುವ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾರೆ. ಡಾಕ್ಟರ್ ಚೌಧರಿ ಮಧ್ಯಪ್ರದೇಶದ ಸಿಂಗರೌಲಿಯ ಮೂಲದವರಾಗಿದ್ದು, 2019 ನವೆಂಬರ್‌ನಲ್ಲಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

    ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೌಧರಿ ಕುಟುಂಬಸ್ಥರು ಚಿಕಿತ್ಸೆಗಾಗಿ 3.4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.

    ಇತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರು ತಮ್ಮ ಅಸೋಸಿಯೇಷನ್ ನಿಂದ ಚಿಕಿತ್ಸೆಗೆ 2.4 ಲಕ್ಷ ರೂ. ಧನ ಸಹಾಯ ಮಾಡಿದ್ದರು. ಚೌಧರಿ ಅವರ ತಂದೆ ರೈತರಾಗಿದ್ದು, ಮಗನ ಚಿಕಿತ್ಸೆಗೆ ನೆರವಾಗುವಂತೆ ಆಸ್ಪತ್ರೆ ಮಂಡಳಿಗೆ ಪತ್ರ ಬರೆದಿದ್ದರು. ಅಂಬೇಡ್ಕರ್ ಆಸ್ಪತ್ರೆ ಸಹ ಚೌಧರಿ ಚಿಕಿತ್ಸಾ ವೆಚ್ಚಕ್ಕೆ ವಿನಾಯ್ತಿ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

  • ತಿಥಿ ಕಾರ್ಯ ಮಾಡಿದ್ದ ವೈದ್ಯರ ಕುಟುಂಬಕ್ಕೆ ಆತಂಕ – 8 ಮಂದಿಗೆ ಸೋಂಕು

    ತಿಥಿ ಕಾರ್ಯ ಮಾಡಿದ್ದ ವೈದ್ಯರ ಕುಟುಂಬಕ್ಕೆ ಆತಂಕ – 8 ಮಂದಿಗೆ ಸೋಂಕು

    ಕೋಲಾರ : ನಗರದ ವೈದ್ಯರ ಕುಟುಂಬವೊಂದು ಕುಟುಂಬ ಸಮೇತರಾಗಿ ಕೋವಿಡ್ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೋಲಾರ ನಗರದ ವೈದ್ಯರೊಬ್ಬರ ಕುಟುಂಬದ ಹಿರಿಯರೊಬ್ಬರು ಕಳೆದ ಹನ್ನೊಂದು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಹಾಗೂ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಇದೇ ನೋವಿನಲ್ಲಿ ಇಡೀ ಕುಟುಂಬ ಮೃತರ ಹನ್ನೊಂದನೇ ದಿನದ ತಿಥಿ ಕಾರ್ಯ ಮಾಡಿದ್ದರು. ಈ ವೇಳೆ ಇಡೀ ಕುಟುಂಬಕ್ಕೊಂದು ಆಘಾತಕಾರಿ ಸುದ್ದಿಯೊಂದು ಎರಗಿ ಬಂದಿದ್ದು, ಕುಟುಂಬದ 8 ಜನರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

    ಇಡೀ ಕುಟುಂಬಕ್ಕೆ ಕೊರೊನಾ ಸೊಂಕು ತಗುಲಿದ್ದಾದರೂ ಹೇಗೆ ಎನ್ನುವುದನ್ನು ಹುಡುಕಿದಾಗ ಅಲ್ಲಿ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಮೃತಪಟ್ಟಿದ್ದ ಕುಟುಂಬದ ಹಿರಿಯ ವ್ಯಕ್ತಿಯ ಪತ್ನಿಗೆ ಅನಾರೋಗ್ಯ ಕಾಡಿತ್ತು, ಈ ವೇಳೆ ಅವರನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ಅನಾರೋಗ್ಯ ಪೀಡಿತರ ಆರೈಕೆಗಾಗಿ ಆಸ್ಪತ್ರೆಗೆ ಹೋಗಿ ಬಂದಿದ್ದರು.

    ವೈದ್ಯರ ಕುಟುಂಬವಾಗಿದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕುಟುಂಬದ ಸದಸ್ಯರೆಲ್ಲ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಈ ವೇಳೆ ಕುಟುಂಬಸ್ಥರೆಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    ಸದ್ಯ ಮನೆಯನ್ನು ಸೀಲ್‌ಡೌನ್ ಮಾಡಿರುವ ನಗರಸಭೆ ಹಾಗೂ ಆರೋಗ್ಯ ಇಲಾಖೆ ಸೋಂಕು ನಿವಾರಕ ಸಿಂಪಡಣೆ ಮಾಡಿದೆ. ಸೋಂಕಿತರೆಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾರಲ್ಲೂ ಯಾವುದೇ ರೋಗ ಲಕ್ಷಣಗಳಿಲ್ಲ ಹಾಗಾಗಿ ಅವರನ್ನು ಎರಡನೇ ಬಾರಿ ಟೆಸ್ಟ್‌ಗೆ ಒಳಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಿದ್ದಾರೆ.

  • ಕೊರೊನಾದಿಂದ ತಾಯಿ ಸಾವು- ಸಿಟ್ಟಿಗೆದ್ದ ಮಗನಿಂದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ

    ಕೊರೊನಾದಿಂದ ತಾಯಿ ಸಾವು- ಸಿಟ್ಟಿಗೆದ್ದ ಮಗನಿಂದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ

    ಮುಂಬೈ: ಕೋವಿಡ್ 19 ನಿಂದಾಗಿ ಸಾವನ್ನಪ್ಪಿದ ಮಹಿಳೆಯ ಮಗ, ವೈದ್ಯರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಲಾತುರ್ ನಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ.

    ಈ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಆಲ್ಪಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಹಲ್ಲೆಗೈದವನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಆತ 35 ವರ್ಷದ ಉದ್ಗಿರ್ ನಿವಾಸಿ ಎಂದು ತಿಳಿಸಿದ್ದಾರೆ.

    ಜುಲೈ 25ರಂದು ಕೊರೊನಾ ವೈರಸ್ ಪಾಸಿಟಿವ್ ಎಂದು ದಢಪಟ್ಟ ಬಳಿಕ 60 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾದರು. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

    ಇತ್ತ ವೈದ್ಯ ಡಾ. ದಿನೇಶ್ ವರ್ಮಾ ಅವರು ಮಹಿಳೆಯ ಸ್ಥಿತಿಯ ಬಗ್ಗೆ ಆಕೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಇನ್ನು ಮಹಿಳೆ ಮೃತಪಟ್ಟ ಬಳಿಕ ಆಕೆಯ ಮಗ ಹಾಗೂ ಮೂವರು ಸಂಬಂಧಿಕರು ವೈದ್ಯರ ಜೊತೆ ತೀವ್ರ ವಾಗ್ವಾದಕ್ಕಳಿದರು.

    ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಮೃತ ಮಹಿಳೆಯ ಮಗ ಹರಿತವಾದ ಆಯುಧದಿಂದ ವೈದ್ಯನ ಎದೆ, ಕುತ್ತಿಗೆ ಹಾಗೂ ಕೈಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಾಯಗೊಂಡ ವೈದ್ಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರ ವೈದ್ಯರು, ಸೂಕ್ತ ರಕ್ಷಣೆ ಕೊಡಿ ಎಂದು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

  • ಗಾಂಜಾ ಸಿಕ್ಕಿಲ್ಲವೆಂದು 20 ಸೆಂ.ಮೀ ಉದ್ದದ ಚಾಕುವನ್ನೇ ನುಂಗಿದ 28ರ ಯುವಕ!

    ಗಾಂಜಾ ಸಿಕ್ಕಿಲ್ಲವೆಂದು 20 ಸೆಂ.ಮೀ ಉದ್ದದ ಚಾಕುವನ್ನೇ ನುಂಗಿದ 28ರ ಯುವಕ!

    – ಹೊಟ್ಟೆನೋವು ಎಂದು ಬಂದಾಗ ವೈದ್ಯರೇ ದಂಗಾದ್ರು

    ನವದೆಹಲಿ: ಅನೇಕ ಸವಾಲುಗಳನ್ನು ಎದುರಿಸಿರುವ ದೆಹಲಿಯ ಏಮ್ಸ್ ವೈದ್ಯರಿಗೆ ವಿಚಿತ್ರ ಸವಾಲೊಂದು ಎದುರಾಗಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು. 28 ವರ್ಷದ ಯುವಕನೊಬ್ಬನ ಲಿವರ್ ನಿಂದ 20 ಸೆಂ.ಮೀ ಉದ್ದದ ಚಾಕುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಯುವಕನ ಸ್ಥಿತಿ ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಯುವಕ ಒಂದೂವರೆ ತಿಂಗಳ ಹಿಂದೆ ಚಾಕುವನ್ನು ನುಂಗಿದ್ದು, ಆರಾಮಾಗಿಯೇ ಇದ್ದನಂತೆ. ಆದರೆ ಇತ್ತೀಚೆಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಆತನನ್ನು ಪರೀಕ್ಷೆ ಮಾಡಿದ ವೈದ್ಯರು, ಎಕ್ಸ್ ರೇ ತೆಗೆಯಬೇಕು ಎಂದು ಹೇಳಿದ್ದಾರೆ. ಅಂತೆಯೇ ಎಕ್ಸ್ ರೇ ತೆಗೆದು ನೋಡಿದಾಗ ಆತನ ಲಿವರ್ ನಲ್ಲಿ ಚಾಕು ಕಂಡು ವೈದ್ಯರಿಗೇ ಶಾಕ್ ಆಗಿದೆ.

    ಯುವಕನಿಗೆ ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಆತನ ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ. ಅಂತೆಯೇ 3-4 ಗಂಟೆಗಳ ಕಾಲ ಸರ್ಜರಿ ನಡೆಸಿದ ಬಳಿಕ ವೈದ್ಯರ ತಂಡ ಚಾಕು ಹೊರತೆಗೆಯುವಲ್ಲಿ ಯಶಸ್ಸು ಕಂಡಿದೆ.

    ಚಾಕು ಲಿವರ್‍ನ ಪ್ರಮುಖ ರಕ್ತನಾಳದ ಬಳಿ ಸಿಲುಕಿಕೊಂಡಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ವೇಳೆ ಸ್ವಲ್ಪ ಎಡವಟ್ಟಾಗುತ್ತಿದ್ದರೂ ಯುವಕನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಷ್ಟು ಜಾಗರೂಕತೆ ವಹಿಸಿ ನಮ್ಮ ತಂಡ ಸರ್ಜರಿ ಮಾಡಿತು ಎಂದು ವೈದ್ಯ ಡಾ. ಎನ್.ಆರ್ ದಾಸ್ ತಿಳಿಸಿದರು.

    ಒಬ್ಬ ವ್ಯಕ್ತಿ ಇಡೀ ಚಾಕುವನ್ನು ನುಂಗಿ ಬದುಕುಳಿದಿದ್ದು ಇದೇ ಮೊದಲು. ಇದೂವರೆಗೂ ಸೂಜಿ, ಪಿನ್ ಹಾಗೂ ಮೀನಿನ ಕೊಕ್ಕೆಯಂತಹ ಅತೀ ಸೂಕ್ಷ್ಮವಾದ ವಸ್ತುಗಳನ್ನು ನುಂಗಿದ 2 ಅಥವಾ 3 ಪ್ರಕರಣಗಳನ್ನು ನೋಡಿರುವುದಾಗಿ ಏಮ್ಸ್ ವೈದ್ಯರು ತಿಳಿಸಿದ್ದಾರೆ.

    ಈ ರೋಗಿ ಮೂಲತಃ ಹರಿಯಾಣದವನಾಗಿದ್ದು, ಮಾದಕ ವ್ಯಸನಿಯಾಗಿದ್ದಾನೆ. ಈತನಿಗೆ ಒಂದು ದಿನ ಗಾಂಜಾ ಸಿಕ್ಕಿಲ್ಲ ಎಂದು ಬೇಸರದಿಂದ ಚಾಕುವನ್ನೇ ನುಂಗಿದ್ದಾನೆ ಎಂದು ವರದಿಯಾಗಿದೆ.

  • ಸರ್ಕಾರಿ ವೈದ್ಯನ ಕಳ್ಳಾಟ ಬಯಲು ಮಾಡಿದ ಮೂರನೇ ಪತ್ನಿ

    ಸರ್ಕಾರಿ ವೈದ್ಯನ ಕಳ್ಳಾಟ ಬಯಲು ಮಾಡಿದ ಮೂರನೇ ಪತ್ನಿ

    ವಿಜಯಪುರ: ನಾಲ್ಕನೇ ಮದುವೆಯಾಗಲು ಸಿದ್ಧತೆ ನಡೆಸಿಕೊಂಡಿದ್ದ ಪತಿಯ ಕಳ್ಳಾಟವನ್ನು ಮೂರನೇ ಪತ್ನಿ ಬಯಲು ಮಾಡಿದ್ದಾರೆ. ನಾಲ್ಕನೇ ಮದುವೆಯನ್ನು ತಡೆಯಬೇಕೆಂದು ಪತಿಯ ವಿರುದ್ಧ ಮೂರನೇ ಪತ್ನಿ ನೀತಾ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಡಾ.ಮಂಜುನಾಥ್ ನಾಲ್ಕನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಮಂಜುನಾಥ್ ಸದ್ಯ ಆನೇಕಲ್ ತಾಲೂಕಿನ ಇಂದಲವಾಡಿ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈಗ ಧಾರವಾಡ ಮೂಲದ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಾನೆ. ನೀತಾ ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

    ಮೊದಲ ಪತ್ನಿಗೆ ಒಂದು ಗಂಡು ಮಗುವಿದ್ದು, ಎರಡನೇ ಪತ್ನಿಗೆ ಹಣ ನೀಡಿ ರಾಜಿ ಮಾಡಿಕೊಂಡಿದ್ದಾನೆ. ನನಗೆ ಸುಳ್ಳು ಹೇಳಿ ಮಂಜುನಾಥ್ ಮದುವೆ ಆಗಿದ್ದನು. ಆರಂಭದ ಎರಡು ವರ್ಷ ಚೆನ್ನಾಗಿಯೇ ಇದ್ದ ಪತಿ ನನ್ನಿಂದ ದೂರವಾದನು. ಹೀಗಾಗಿ ಪತಿ ವಿರುದ್ಧ ದೂರು ದಾಖಲಿಸಿದ್ದೇನೆ. ಡಿವೋರ್ಸ್, ವಿಧವೆಯರನ್ನು ಟಾರ್ಗೆಟ್ ಮಾಡಿ ಮಂಜುನಾಥ್ ಮದುವೆ ಆಗುತ್ತಾನೆ ಎಂದು ಮೂರನೇ ಪತ್ನಿ ನೀತಾ ಆರೋಪಿಸಿದ್ದಾರೆ.

  • ಕೊರೊನಾಗೆ 27 ವರ್ಷದ ಡಾಕ್ಟರ್ ಬಲಿ- ಚಿಕಿತ್ಸೆಗೆ 2 ಲಕ್ಷ ರೂ. ನೀಡಿದ ಸಹ ವೈದ್ಯರು

    ಕೊರೊನಾಗೆ 27 ವರ್ಷದ ಡಾಕ್ಟರ್ ಬಲಿ- ಚಿಕಿತ್ಸೆಗೆ 2 ಲಕ್ಷ ರೂ. ನೀಡಿದ ಸಹ ವೈದ್ಯರು

    ನವದೆಹಲಿ: ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಶನಿವಾರ ರಾತ್ರಿ ವೈದ್ಯ ಜೋಗಿಂದರ್ ಚೌಧರಿ ನಿಧನರಾಗಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಇವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು.

    ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚೌಧರಿ ಕುಟುಂಬಸ್ಥರು ಚಿಕಿತ್ಸೆಗಾಗಿ 3.4 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇತ್ತ ಬಾಬಾ ಸಾಹೇಬ್ ಅಂಬೇಡ್ಕರ್ ವೈದ್ಯರು ತಮ್ಮ ಅಸೋಸಿಯೇಶನ್ ನಿಂದ ಚಿಕಿತ್ಸೆಗೆ 2.4 ಲಕ್ಷ ರೂ. ಧನ ಸಹಾಯ ಮಾಡಿದ್ದರು.

    ಚೌಧರಿ ಅವರ ತಂದೆ ರೈತರಾಗಿದ್ದು, ಮಗನ ಚಿಕಿತ್ಸೆಗೆ ನೆರವಾಗುವಂತೆ ಆಸ್ಪತ್ರೆ ಮಂಡಳಿಗೆ ಪತ್ರ ಬರೆದಿದ್ದರು. ಅಂಬೇಡ್ಕರ್ ಆಸ್ಪತ್ರೆ ಸಹ ಚೌಧರಿ ಚಿಕಿತ್ಸಾ ವೆಚ್ಚಕ್ಕೆ ವಿನಾಯ್ತಿ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಚೌಧರಿ ತಂದೆಯ ಪತ್ರಕ್ಕೆ ಸ್ಪಂದಿಸಿದ್ದ ಆಸ್ಪತ್ರೆ ಮಂಡಳಿ ಪೂರ್ಣ ಚಿಕಿತ್ಸೆ ವೆಚ್ಚ ಭರಿಸಲು ಮುಂದಾಗಿತ್ತು.

    ಡಾಕ್ಟರ್ ಚೌಧರಿ ಮಧ್ಯಪ್ರದೇಶದ ಸಿಂಗರೌಲಿಯ ಮೂಲದವರಾಗಿದ್ದು, 2019 ನವೆಂಬರ್ ನಲ್ಲಿ ಅಂಬೇಡ್ಕರ್ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.

    ಕಳೆದ ವಾರ ದೆಹಲಿಯ 42 ವರ್ಷದ ಡಾ.ಜಾವೇದ್ ಅಲಿ ಸಹ ಕೊರೊನಾದಿಂದಾಗಿ ಮೃತಪಟ್ಟಿದ್ದರು. ಜಾವೇದ್ ಮೂರು ತಿಂಗಳಿನಿಂದ ರಜೆ ಪಡೆಯದೇ ಸೋಂಕಿತರ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಜಾವೇದ್ ಅಲಿ ನಿಧನದ ಕೇಜ್ರಿವಾಲ್ ಸರ್ಕಾರ ಕುಟುಂಬಕ್ಕೆ 1 ಕೋಟಿ ರೂ. ನೀಡುವದಾಗಿ ಘೋಷಿಸಿದೆ.

  • ಕೊರೊನಾಗೆ ಬಲಿಯಾದ ವೈದ್ಯನ ಕುಟುಂಬಕ್ಕೆ 1 ಕೋಟಿ ಪರಿಹಾರ

    ಕೊರೊನಾಗೆ ಬಲಿಯಾದ ವೈದ್ಯನ ಕುಟುಂಬಕ್ಕೆ 1 ಕೋಟಿ ಪರಿಹಾರ

    ನವದೆಹಲಿ: ಕೊರೊನಾ ಎಂಬ ಚೀನಿ ವೈರಸ್ ಗೆ ಇದೀಗ ವಾರಿಯರ್ಸ್ ಗಳು ಕೂಡ ಬಲಿಯಾಗುತ್ತಿದ್ದಾರೆ. ಹೀಗೆ ಬಲಿಯಾದ ವೈದ್ಯರೊಬ್ಬರ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ಪರಿಹಾರ ಘೋಷಿಸಿದೆ.

    ಈ ವಾರದ ಆರಂಭದಲ್ಲಿ ಕೋವಿಡ್ 19ಗೆ ಬಲಿಯಾದ ವೈದ್ಯರ ಕುಟುಂಬಕ್ಕೆ ಈ ಪರಿಹಾರ ಘೋಷಿಸಿರುವುದಾಗಿ ಕೊರೊನಾ ವೈರಸ್ ನಿಂದ ಗುಣಮುಖರಾಗಿರುವ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

    ಕೋವಿಡ್ 19 ರೋಗಿಗಳನ್ನು ನೋಡಿಕೊಳ್ಳುತ್ತಿದ್ದ ಹಾಗೂ ದೆಹಲಿ ಸರ್ಕಾರದ ಒಪ್ಪಂದಲ್ಲಿದ್ದ ವೈದ್ಯರ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಲು ನಿರ್ಧರಿಸುವುದಾಗಿ ಸತ್ಯೇಂದರ್ ಹೇಳಿದ್ದಾರೆ. ಇದನ್ನೂ ಓದಿ: ಸೋಂಕಿತರ ಸೇವೆ ಮಾಡಿದ ವೈದ್ಯ ಕೊರೊನಾಗೆ ಬಲಿ- ಸರ್ಕಾರದಿಂದ ಸಿಗಲಿಲ್ಲ ನೆರವು

    ಸೋಮವಾರ ಡಾ. ಜಾವೇದ್ ಅಲಿ ಅವರು ನಿಧನರಾದರು. ಅವರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಡಾ. ಅಲಿ ಅವರು ಕೆಲವು ವರ್ಷಗಳ ಹಿಂದೆ ದೆಹಲಿ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಸೇರಿದ್ದರು. ಇವರು ಮಾರ್ಚ್‍ನಿಂದ ಕ್ವಾರಂಟೈನ್ ಕೇಂದ್ರ, ಕೋವಿಡ್ 19 ಆರೈಕೆ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೊರೊನಾಗೆ ಬಲಿಯಾದರು.

    ಪತಿ ರೋಗಿಗಳ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಮಾರ್ಚ್ ನಿಂದ ಒಂದು ರಜೆ ಪಡೆದಿರಲಿಲ್ಲ. ರಂಜಾನ್ ಹಬ್ಬದ ದಿನವೂ ಆಸ್ಪತ್ರೆಯಲ್ಲಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ 10 ದಿನ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಕೊನೆಯ ಬಾರಿ ನನಗೆ ಮತ್ತು ನನ್ನ ಇಬ್ಬರು ಮಕ್ಕಳಿಗೂ ಅವರ ಮುಖ ನೋಡಲು ಸಹ ಅವಕಾಶ ನೀಡಲಿಲ್ಲ ಎಂದು ಹೇಳುತ್ತಾ ಜಾವೇದ್ ಪತ್ನಿ ಹೀನಾ ಕಣ್ಣೀರು ಹಾಕಿದ್ದರು.

  • ರಕ್ತ ನೀಡಿ ರೋಗಿಯ ಕೊನೆಯುಸಿರು ಉಳಿಸಿದ ಏಮ್ಸ್ ಜೂನಿಯರ್ ವೈದ್ಯ

    ರಕ್ತ ನೀಡಿ ರೋಗಿಯ ಕೊನೆಯುಸಿರು ಉಳಿಸಿದ ಏಮ್ಸ್ ಜೂನಿಯರ್ ವೈದ್ಯ

    – ಡಾಕ್ಟರ್ ಆಗಿರುವ ನನ್ನ ಆದ್ಯ ಕರ್ತವ್ಯ ಎಂದ ಫವಾಜ್

    ನವದೆಹಲಿ: ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯೊಬ್ಬರಿಗೆ ತನ್ನದೇ ರಕ್ತ ನೀಡಿ ಜೀವ ಉಳಿಸುವ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಯ ಜೂನಿಯರ್ ಡಾಕ್ಟರ್ ಮಾನವೀಯತೆ ಮೆರೆದಿದ್ದಾರೆ. ಸದ್ಯ ವೈದ್ಯರಿಗೆ ಮೆಚ್ಚುಗೆಯ ಮಹಾಪೂರಗಳೇ ಹರಿದುಬರುತ್ತಿದೆ.

    ಹೌದು. 24 ವರ್ಷದ ಮೊಹದ್ ಫವಾಜ್ ಮಾನವೀಯತೆ ಮೆರೆದ ಜೂನಿಯರ್ ಡಾಕ್ಟರ್. ವ್ಯಕ್ತಿಯೊಬ್ಬರು ಸೆಪ್ಟಿಕ್ ಶಾಕ್ ಅಥವಾ ವಿಷ ರಕ್ತ ಆಘಾತ(ರಕ್ತಕ್ಕೆ ಸಂಬಂಧಿಸಿದ ಒಂದು ಮಾರಣಾಂತಿಕ ಕಾಯಿಲೆ)ಯಿಂದ ಬಳಲುತ್ತಿದ್ದು, ಅವರಿಗೆ ಅರ್ಜೆಂಟಾಗಿ ಸರ್ಜರಿ ಆಗಬೇಕಾಗಿತ್ತು. ಆದರೆ ತಕ್ಷಣಕ್ಕೆ ರಕ್ತ ಲಭ್ಯವಿರಲಿಲ್ಲ. ಹೀಗಾಗಿ ಯೋಚನೆ ಮಾಡದೇ ತಾನೇ ರಕ್ತ ನೀಡಲು ಫವಾಜ್ ನಿರ್ಧರಿಸಿದ್ದಾರೆ.

    ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಫವಾಜ್, ಮಂಗಳವಾರ ರೋಗಿ ತನ್ನ ಪತ್ನಿಯೊಂದಿಗೆ ಆಸ್ಪತ್ರೆಗೆ ಬಂದರು. ಆತನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ವಿಷ ರಕ್ತ ಕಾಯಿಲೆಗೆ ಒಳಗಾಗಿದ್ದನು ಎಂದರು.

    ಅಲ್ಲದೆ ಅದಾಗಲೇ ಈ ಸೋಂಕು ವ್ಯಕ್ತಿಯ ಕಾಲು ಪೂರ್ತಿ ಹರಡಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಅದಕ್ಕಾಗಿ ರಕ್ತದ ಅವಶ್ಯಕತೆ ಇತ್ತು. ಆದರೆ ರೋಗಿಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಂದಿರಲಿಲ್ಲ. ಪರಿಣಾಮ ವೈದ್ಯರು ತಾವೇ ರಕ್ತದ ವ್ಯವಸ್ಥೆ ಮಾಡಿಕೊಂಡರು.

    ನಾನೊಬ್ಬ ವೈದ್ಯನಾಗಿ ನನ್ನ ಕೆಲಸ ಮಾಡಿದ್ದೇನೆ. ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ರಕ್ತದ ಕೊರತೆ ಇತ್ತು. ಆದರೆ ರೋಗಿಗೆ ತುರ್ತಾಗಿ ರಕ್ತ ಬೇಕಾಗಿತ್ತು. ಅಲ್ಲದೆ ರಕ್ತದ ವ್ಯವಸ್ಥೆ ಮಾಡಲು ರೋಗಿಯ ಕುಟುಂಬಸ್ಥರಿಗೆ ಸಮಯವೂ ಬೇಕಾಗಿತ್ತು. ಹಾಗಾಗಿ ತಾನು ರಕ್ತದಾನ ಮಾಡಲು ಹಾಗೂ ಬ್ಲಡ್ ಬ್ಯಾಂಕಿನಿಂದ ರಕ್ತದ ಘಟಕಗಳನ್ನು ಪಡೆಯಲು ನಿರ್ಧರಿಸಿದೆ ಎಂದು ಫವಾಜ್ ಹೇಳಿದ್ದಾರೆ.

    ರೋಗಿ ಪತ್ನಿಯ ಸ್ಥಿತಿ ಕೂಡ ರಕ್ತದಾನ ಮಾಡುವಂತಿರಲಿಲ್ಲ. ಹೀಗಾಗಿ ಬೇರೆ ದಾರಿ ಇರಲಿಲ್ಲ ಎಂದು ಇದೇ ವೇಳೆ ವೈದ್ಯ ತಿಳಿಸಿದ್ದಾರೆ. ನಂತರ ಫವಾಜ್ ಸೇರಿದಂತೆ ವೈದ್ಯರ ತಂಡ ರೋಗಿಯ ಶಸ್ತ್ರಚಿಕಿತ್ಸೆ ನೆರವೇರಿಸಿದರು.

  • ಕೊರೊನಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    ಕೊರೊನಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    – ಆಸ್ಪತ್ರೆಯಲ್ಲೇ ಎರಡು ಬಾರಿ ಅತ್ಯಾಚಾರಕ್ಕೆ ಯತ್ನ
    – ಆಫ್ ಡ್ಯೂಟಿ ವೇಳೆ ನೀಚ ಕೃತ್ಯ

    ಲಕ್ನೋ: ಕೊರೊನಾ ಸೋಂಕಿತ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಉತ್ತರ ಪ್ರದೇಶದ ಅಲಿಘಡದಲ್ಲಿ ಈ ನೀಚ ಕೃತ್ಯ ಜರುಗಿದೆ. 28 ವರ್ಷದ ಕೊರೊನಾ ಸೋಂಕಿತೆ ಮೇಲೆ ಆಫ್ ಡ್ಯೂಟಿ ವೈದ್ಯನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಬಾರಿ ವೈದ್ಯ ಈ ಹೀನಾಯ ಕೃತ್ಯವೆಸೆಗಿದ್ದಾನೆ.

    ಕೊರೊನಾ ಸೋಂಕು ತಗುಲಿ ಮಹಿಳೆ ಅಲಿಘಡದ ಡಿಡಿಯು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಾತ್ರಿ ವೇಳೆ ಆಫ್ ಡ್ಯೂಟಿಯಲ್ಲಿದ್ದ ವೈದ್ಯನೊಬ್ಬ ಸೋಂಕಿತೆ ವಾರ್ಡ್‍ಗೆ ಬಂದು ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಈ ಬಗ್ಗೆ ಸೋಂಕಿತೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.