Tag: doctor

  • ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    ಮಹಿಳೆಯ ಹೊಟ್ಟೆಯಲ್ಲಿ 4 ಅಡಿ ಹಾವು ಪತ್ತೆ- ವಿಡಿಯೋ

    – ಬಾಯಿಯಿಂದ ಜೀವಂತವಾಗಿ ಬಂದ ನಾಗಪ್ಪ
    – ಹೇಗೆ ಹೊಟ್ಟೆ ಸೇರಿತ್ತು ಗೊತ್ತಾ?

    ಮಾಸ್ಕೋ: ಮಹಿಳೆಯ ಹೊಟ್ಟೆಯಿಂದ ಸುಮಾರು 4 ಅಡಿ ಉದ್ದದ ಹಾವನ್ನು ತೆಗೆಯುವುದನ್ನು ನೋಡಿದರೇನೆ ಒಂದು ಕ್ಷಣ ಹೃದಯ ಬಡಿತವೇ ಹೆಚ್ಚಾಗುತ್ತೆ. ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಹಿಳೆಯ ಹೊಟ್ಟೆಯೊಳಗೆ ಸುಮಾರು 4 ಅಡಿ ಉದ್ದದ ಹಾವು ಪತ್ತೆಯಾಗಿರುವ ಘಟನೆ ರಷ್ಯಾದ ಡಾಗೆಸ್ಥಾನ್‍ನ ಲೆವಾಶಿಯಲ್ಲಿ ನಡೆದಿದೆ. ವೈದ್ಯರು ಮಹಿಳೆಯ ಬಾಯಿಯಿಂದ ಬರೋಬ್ಬರಿ ನಾಲ್ಕು ಅಡಿ ಉದ್ದದ ಹಾವನ್ನು ಹೊರ ತೆಗೆದಿದ್ದಾರೆ. ಹೊಟ್ಟೆ ನೋವಿನಿಂದ ಮಹಿಳೆ ಒದ್ದಾಡುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ವೈದ್ಯರಿಗೂ ಈ ಕುರಿತು ಏನೂ ತಿಳಿದಿಲ್ಲ. ನಂತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಏನೋ ಇದೆ ಎಂಬುದು ಅರಿವಾಗಿದೆ. ನಂತರ ಮಹಿಳೆಗೆ ಅರವಳಿಕೆ ನೀಡಿ ಪ್ರಜ್ಞಾಹೀನಗೊಳಿಸಿದ್ದಾರೆ.

    ಬಾಯಿಯಿಂದ ಟ್ಯೂಬ್ ಹಾಕಿ ಏನಿದೆ, ಇದರಿಂದ ತೆಗೆಯಬಹುದೇ ಎಂದು ಟ್ಯೂಬ್ ಹಾಕಿ ಪರಿಶೀಲಿಸಿದ್ದಾರೆ. ಈ ವೇಳೆ ಹಾವು ಬುಸ್ ಎಂದು ಹೊರ ಬಂದಿದೆ. ಇದನ್ನು ನೋಡಿದ ವೈದ್ಯೆ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹಾವನ್ನು ಹೊಟ್ಟೆಯಿಂದ ಹೊರ ತೆಗೆಯುವ ಸಂಪೂರ್ಣ ಚಿತ್ರಣವನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಹಾವು ಹೊಟ್ಟೆ ಹೊಕ್ಕಿದ್ದು ಹೇಗೆ?
    ತೋಟದ ಮನೆಯಲ್ಲಿ ಮಹಿಳೆ ಮಲಗಿದಾಗ ಬಾಯಿ ತೆರೆದಿದ್ದು, ಈ ವೇಳೆ ಸಮೀಪಕ್ಕೆ ಬಂದ ಹಾವು ಬಿಲದಂತೆ ಕಂಡ ಬಾಯಿಯಲ್ಲೇ ಹೊಕ್ಕಿದೆ. ಮಹಿಳೆ ಎದ್ದ ತಕ್ಷಣ ಭಾರೀ ಪ್ರಮಾಣ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಹಾವನ್ನು ಹೊರ ತೆಗೆದಿದ್ದಾರೆ. ಆದರೆ ಹಾವಿನ ಹಾಗೂ ಮಹಿಳೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

  • ಕೊರೊನಾ ಗೆದ್ದ 110 ವರ್ಷದ ಅಜ್ಜಿ- ಸಚಿವರಿಂದ ವೈದ್ಯರಿಗೆ ಮೆಚ್ಚುಗೆ

    ಕೊರೊನಾ ಗೆದ್ದ 110 ವರ್ಷದ ಅಜ್ಜಿ- ಸಚಿವರಿಂದ ವೈದ್ಯರಿಗೆ ಮೆಚ್ಚುಗೆ

    – ಇದೊಂದು ಹೆಮ್ಮೆಯ ವಿಚಾರವೆಂದ ಸಚಿವರು

    ತಿರುವನಂತಪುರಂ: ಕೊರೊನಾ ವಿರುದ್ಧದ ಹೋರಾಟದಲ್ಲಿ 110 ವರ್ಷದ ಅಜ್ಜಿ ಗೆಲುವು ಸಾಧಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಮಲಪ್ಪುರಂ ಜಿಲ್ಲೆಯ ರಂದಾಥನಿ ವರಿಯಾಥ್ ಪಥು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಉತ್ತರ ಕೇರಳದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರ ಪೈಕಿ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸಂತಸ ವ್ಯಕ್ತಪಡಿಸಿದ್ದಾರೆ.

    ಆಗಸ್ಟ್ 18ರಂದು 110 ವರ್ಷದ ಅಜ್ಜಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಜ್ಜಿ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾರೆ. ಪಥು ಅವರಿಗೆ ಮಗಳಿಂದ ಕೊರೊನಾ ಸೋಂಕು ತಗುಲಿತ್ತು. ಅವರಿಗೆ ಸಣ್ಣ ಪ್ರಮಾಣದ ಗುಣಲಕ್ಷಣಗಳಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

    ಇಷ್ಟೊಂದು ವಯಸ್ಸಾದ ಅಜ್ಜಿಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಅವರನ್ನು ಮೆಚ್ಚಲೇಬೇಕು ಎಂದು ಆರೋಗ್ಯ ಸಚಿವೆ ವೈದ್ಯರಿಗೆ ಶುಭ ಕೊರಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದಲ್ಲಿ ರಾಜ್ಯದ ಆರೋಗ್ಯ ಇಲಾಖೆಗೆ ಇದೊಂದು ಹೆಮ್ಮೆಯ ವಿಚಾರವಾಗಿದೆ ಎಂದು ಸಚಿವೆ ಶೈಲಜಾ ತಿಳಿಸಿದ್ದಾರೆ.

    ಪಥು ಅವರನ್ನು ಉಳಿಸಿದ್ದಕ್ಕೆ ಕುಟುಂಬಸ್ಥರು ಸಹ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಅಜ್ಜಿಯನ್ನು ಮನೆಯಲ್ಲೇ ಕಾಳಜಿಯಿಂದ ನೋಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಈ ಹಿಂದೆ 105 ವರ್ಷದ ಮಹಿಳೆ ಹಾಗೂ 103 ವರ್ಷದ ಪುರುಷ ಕೊರೊನಾದಿಂದ ಗುಣಮುಖರಾಗಿದ್ದರು. ಇದೀಗ 110 ವರ್ಷದ ಅಜ್ಜಿ ಗುಣಮುಖರಾಗಿದ್ದಾರೆ.

  • ಸಾವನ್ನಪ್ಪಿದ್ದಾಳೆಂದ ವೈದ್ಯರು- ಅಂತ್ಯಸಂಸ್ಥಾರಕ್ಕೆ ಕೊಂಡೊಯ್ಯುವಾಗ ಎಚ್ಚರಗೊಂಡ ಮಹಿಳೆ

    ಸಾವನ್ನಪ್ಪಿದ್ದಾಳೆಂದ ವೈದ್ಯರು- ಅಂತ್ಯಸಂಸ್ಥಾರಕ್ಕೆ ಕೊಂಡೊಯ್ಯುವಾಗ ಎಚ್ಚರಗೊಂಡ ಮಹಿಳೆ

    – ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಕುಟುಂಬಸ್ಥರು

    ಲಕ್ನೋ: ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ. ಆದರೆ ಅಂತ್ಯಸಂಸ್ಕಾರಕ್ಕೆ ಕರೆದೊಯ್ಯುವ ವೇಳೆ ಮಹಿಳೆ ಎಚ್ಚರಗೊಂಡಿದ್ದು, ಸ್ಥಳದಲ್ಲಿದ್ದ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ.

    ಉತ್ತರ ಪ್ರದೇಶದ ಮೀರತ್‍ನಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು 20 ವರ್ಷ ಆಸ್ಮಾ ಎಂದು ಗುರುತಿಸಲಾಗಿದೆ. ಮವಾನಾ ನಗರದ ಮೊಹಲ್ಲಾ ಮುನ್ನಾಲಾಲ್ ನಿವಾಸಿಯಾಗಿದ್ದಾರೆ. ಆರೋಗ್ಯದಲ್ಲಿ ತುಂಬಾ ಏರುಪೇರಾದ ಕಾರಣ ಆಗಸ್ಟ್ 24ರಂದು ಮಹಿಳೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಬುಧವಾರ ವೈದ್ಯರು ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. ನಂತರ ಅಂತ್ಯಕ್ರಿಯೆಗಾಗಿ ಮನೆಗೆ ಕೊಂಡೊಯ್ಯುವಾಗ ಮಹಿಳೆ ಎಚ್ಚರಗೊಂಡಿದ್ದಾಳೆ. ರೋಗಗ್ರಸ್ಥ ಮಹಿಳೆಗೆ ದೆಹಲಿಯ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಮಹಿಳೆ ಪ್ರಜ್ಞಾಹೀನವಾಗಿದ್ದು, ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

    ವೈದ್ಯರು ತಿಳಿಸಿದ ಬಳಿಕ ಕುಟುಂಬಸ್ಥರು ಮಹಿಳೆ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ದೆಹಲಿಯ ಆಸ್ಪತ್ರೆಯಿಂದ ಮವಾನಾದ ಅವರ ಮನೆಗೆ ಮಹಿಳೆಯನ್ನು ಕೊಂಡೊಯ್ಯುತ್ತಿದ್ದಾಗ ಗಾಜಿಯಾಬಾದ್ ಬಳಿ ಮಹಿಳೆ ಎಚ್ಚರಗೊಂಡಿದ್ದು, ಬದುಕಿರುವ ಕುರಿತ ಲಕ್ಷಣಗಳನ್ನು ತೋರಿಸಿದ್ದಾರೆ. ಕುಟುಂಬಸ್ಥರು ತಕ್ಷಣ ಅಂತ್ಯಸಂಸ್ಕಾರದ ಸಿದ್ಧತೆಯನ್ನು ಮುಂದೂಡಿದ್ದು, ಮನೆಗೆ ಕರೆದೊಯ್ದು ಆಕ್ಸಿಜೆನ್ ವ್ಯವಸ್ಥೆ ಮಾಡಿದ್ದಾರೆ.

    ಈ ಕುರಿತ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳಿಯರೆಲ್ಲ ಮಹಿಳೆ ನೋಡಲು ಅವರ ಮನೆ ಕಡೆ ಧಾವಿಸಿದ್ದಾರೆ. ಘಟನೆ ಕುರಿತು ಮವಾನಾ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸತೀಶ್ ಭಾಸ್ಕರ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ. ಇಂತಹ ಸುದ್ದಿಯನ್ನು ನಾವು ಈ ಹಿಂದೆ ಎಂದೂ ಕೇಳಿಲ್ಲ. ಆದರೂ ಕೆಲವು ಬಾರಿ ರೋಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಈ ರೀತಿಯಾಗುತ್ತದೆ ಎಂದು ತಿಳಿಸಿದ್ದಾರೆ.

  • ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಮಾಂಗಲ್ಯ ಸರವಿತ್ತು, ಮೃತದೇಹದ ಮೇಲೆ ಇರಲಿಲ್ಲ!

    ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಮಾಂಗಲ್ಯ ಸರವಿತ್ತು, ಮೃತದೇಹದ ಮೇಲೆ ಇರಲಿಲ್ಲ!

    – ಮಾಂಗಲ್ಯ ಸರ, ಉಂಗುರು ಸಿಕ್ಕರೂ ಕಳ್ಳ ಸಿಗಲಿಲ್ಲ
    – 13 ದಿನದ ಬಳಿಕ ಪೇಪರ್ ನಲ್ಲಿ ಸುತ್ತಿ ಕಳ್ಳನೇ ಇಟ್ಟೋದ್ನಂತೆ
    – ನಾವು ಕದ್ದಿಲ್ಲವೆಂದ ಆಸ್ಪತ್ರೆ ಸಿಬ್ಬಂದಿ

    ಚಿಕ್ಕಮಗಳೂರು: ಕೊರೊನಾ ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಕೊರಳಲ್ಲಿ ಮಾಂಗಲ್ಯ ಸರವಿತ್ತು. ಆದರೆ ಮೃತರಾದ ಬಳಿಕ ಮೃತದೇಹ ಹೊರ ತಂದಾಗ ಮಾಂಗಲ್ಯ ಸರ ಹಾಗೂ ಕೈಯಲ್ಲಿದ್ದ ಉಂಗುರ ಇಲ್ಲದಂತಾಗಿತ್ತು. ಈ ಕುರಿತು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದರು. ಆದರೆ 13 ದಿನದ ಬಳಿಕ ಕಳ್ಳನೇ ಮಾಂಗಲ್ಯ ಸರ ಇಟ್ಟು ಹೋದನಂತೆ.

    ಈ ಘಟನೆ ಜಿಲ್ಲೆಯಲ್ಲಿ ಆಗಸ್ಟ್ 10ರಂದು ನಡೆದಿತ್ತು. ನಾಲ್ಕೈದು ತಿಂಗಳಿಂದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರೋ ವೈದ್ಯರು, ನರ್ಸ್‍ಗಳ ಮೇಲೆ ಅನುಮಾನ ಮೂಡುವಂತ ಘಟನೆ ಇದಾಗಿತ್ತು. ತಾಲೂಕಿನ ತೇಗೂರಿನ ಪ್ರೇಮಕುಮಾರಿಯವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಗಸ್ಟ್ 8ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೇಮಕುಮಾರಿ ಆಗಸ್ಟ್ 10ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಆಗಸ್ಟ್ 11ರಂದು ಅವರ ಅಂತ್ಯಸಂಸ್ಕಾರವೂ ನಡೆಯಿತು. ಆದರೆ ಅದೇ ದಿನ ಮಧ್ಯಾಹ್ನ ಅವರ ಸಂಬಂಧಿಕರಿಗೆ ಮಹಿಳೆ ಮೈಮೇಲಿದ್ದ ವಡವೆಗಳನ್ನ ಕೊಡುವಾಗ ಆಸ್ಪತ್ರೆ ಸಿಬ್ಬಂದಿ ಕೈಬಳೆ, ಕಾಲುಂಗುರ ಹಾಗೂ ಕಿವಿ ಓಲೆಯನ್ನು ಮಾತ್ರ ನೀಡಿದ್ದಾರೆ.

    ಈ ವೇಳೆ ಕುಟುಂಬಸ್ಥರು ಉಂಗುರ ಹಾಗೂ ಮಾಂಗಲ್ಯ ಸರ ಎಲ್ಲಿ ಎಂದು ಕೇಳಿದಾಗ ನಮಗೆ ಗೊತ್ತಿಲ್ಲ, ರಾತ್ರಿ ಪಾಳಿಯಲ್ಲಿದ್ದವರನ್ನು ಕೇಳಿ ಎಂದಿದ್ದರಂತೆ. ಬಳಿಕ ಕುಟುಂಬಸ್ಥರು ಜಿಲ್ಲಾ ಸರ್ಜನ್ ಅವರಿಗೆ ಲಿಖಿತ ದೂರು ನೀಡಿದ್ದರು. ಜಿಲ್ಲಾ ಸರ್ಜನ್ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆಸಿ ವಿಚಾರಿಸಿದಾಗಲೂ ಸಿಬ್ಬಂದಿ ನಮಗೆ ಗೊತ್ತಿಲ್ಲ ಎಂದಿದ್ದರು. ಮೃತ ಪ್ರೇಮಕುಮಾರಿ ಕುಟುಂಬಸ್ಥರು ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಪ್ರೇಮಕುಮಾರಿ ಜೀವಂತವಾಗಿದ್ದಾಗ ಇದ್ದ ಫೋಟೋಗಳನ್ನ ಜಿಲ್ಲಾ ಸರ್ಜನ್ ಹಾಗೂ ಪೊಲೀಸರಿಗೆ ನೀಡಿದ್ದರು. ಎಫ್‍ಐಆರ್ ದಾಖಲಿಸದ ಪೊಲೀಸರು ಕೆಲವರ ಮೇಲೆ ಅನುಮಾನವಿದೆ, ವಿಚಾರಿಸುತ್ತೇವೆ ಎಂದಿದ್ದರಂತೆ. ಆದರೆ, ತಾಳಿ ಮಾತ್ರ ಸಿಗಲಿಲ್ಲ.

    ಆಸ್ಪತ್ರೆಯ ಸಿಸಿಟಿವಿಯಲ್ಲಿ ಸಹ ಯಾರು ಕದ್ದಿದ್ದಾರೆಂಬ ಸ್ಪಷ್ಟ ಮಾಹಿತಿ ಇರಲಿಲ್ಲ. ಆಗಸ್ಟ್ 10 ಹಾಗೂ 11 ರಂದು ರಾತ್ರಿ ಕೆಲಸ ಮಾಡಿದ್ದ ಓರ್ವ ವೈದ್ಯ, ಓರ್ವ ಸ್ಟಾಪ್ ನರ್ಸ್, ಹೌಸ್ ಕೀಪಿಂಗ್ ಮತ್ತು ಬಾಡಿ ಶೀಫ್ಟ್ ಮಾಡಿದ ನಾಲ್ವರ ಮೇಲೆ ಅನುಮಾನವಿದೆ ಎಂದು ಅವರನ್ನೂ ವಿಚಾರಣೆಗೊಳಪಡಿಸಿದರು. ಆದರೂ ಎಲ್ಲರದ್ದೂ ಒಂದೇ ಉತ್ತರ ನಮಗೆ ಗೊತ್ತಿಲ್ಲ ಎಂಬುದು.

    ಈ ಬಗ್ಗೆ ಪೊಲೀಸರು ಹಲವರನ್ನ ವಿಚಾರಣೆಗೊಳಪಡಿಸಿದ್ದರು. ಮೃತ ಪ್ರೇಮಕುಮಾರಿ ಕುಟುಂಬಸ್ಥರು ಆಸ್ಪತ್ರೆಯೊಳಗಿನ ಕಳ್ಳರದ್ದೇ ಈ ಕೆಲಸ, ಹೊರಗಿನ ಕಳ್ಳರು ಬರಲು ಹೇಗೆ ಸಾಧ್ಯ ಎಂದು ಆಸ್ಪತ್ರೆಯ ಸಿಬ್ಬಂದಿ ಮೇಲೆ ಅನುಮಾನಗೊಂಡು ಅವರೇ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇತ್ತ ಪೊಲೀಸರು ತನಿಖೆ ಮುಂದುವರೆಸಿದ್ದರು. ಆದರೂ ಕಳ್ಳರು ಪತ್ತೆಯಾಗಿರಲಿಲ್ಲ. ಆದರೆ ಕೋವಿಡ್ ಆಸ್ಪತ್ರೆಯೊಳಗೆ ಸರ ಹಾಗೂ ಉಂಗುರವನ್ನು ಕವರ್‍ನಲ್ಲಿ ಹಾಕಿ, ಪೇಪರ್‍ನಲ್ಲಿ ಸುತ್ತಿ ಟೇಬಲ್ ಮೇಲೆ ಇಟ್ಟಿದ್ದಾರೆ. ಸರ ಹಾಗೂ ಉಂಗುರ ಕದ್ದ ಕಳ್ಳ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಯೋ ಅಥವಾ ಹೊರಗಿನ ಕಳ್ಳನೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಯಾರಾದರೂ ಕದ್ದಿರಲಿ ವಡವೆ ಸಿಕ್ಕಿತಲ್ಲ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳ ಇನ್ನೂ ನಿಗೂಢವಾಗಿಯೇ ಉಳದಿದ್ದಾನೆ.

  • ನನ್ನದು ಒನ್ ಸೈಡ್ ಲವ್, ಒಪ್ಪದಕ್ಕೆ ಕೊಂದೆ-ತಪ್ಪೊಪ್ಪಿಕೊಂಡ ವೈದ್ಯ

    ನನ್ನದು ಒನ್ ಸೈಡ್ ಲವ್, ಒಪ್ಪದಕ್ಕೆ ಕೊಂದೆ-ತಪ್ಪೊಪ್ಪಿಕೊಂಡ ವೈದ್ಯ

    -ಮನೆಯ ಬಳಿ ಪಿಕ್ ಮಾಡಿದ್ದ

    ಲಕ್ನೋ: ಆಗ್ರಾದ ಮೆಡಿಕಲ್ ವಿದ್ಯಾರ್ಥಿನಿ ಡಾ.ಯೋಗಿತಾ ಗೌತಮ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

    ಡಾ. ವಿವೇಕ್ ತಿವಾರಿ ಬಂಧಿತ ಆರೋಪಿ. ಮೊರದಾಬಾದ್ ವಿಶ್ವವಿದ್ಯಾಲಯದಲ್ಲಿ ವಿವೇಕ್ ತಿವಾರಿ ಮತ್ತು ಯೋಗಿತಾ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನಲ್ಲಿ ಸೀನಿಯರ್ ಆಗಿದ್ದ ವಿವೇಕ್ ಎರಡು ವರ್ಷಗಳ ಹಿಂದೆ ಯೋಗಿತಾ ಮುಂದೆ ಮದುವೆ ಪ್ರಸ್ತಾಪ ಇರಿಸಿದ್ದ. ಆದ್ರೆ ಯೋಗಿತಾ ಪ್ರಪೋಸಲ್ ತಿರಸ್ಕರಿಸಿದ್ದು. ತದನಂತರ ಯೋಗಿತಾ ಆಗ್ರಾದ ಎಸ್.ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ತ್ರೀರೋಗ ವಿಭಾಗದಲ್ಲಿ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದರು.

    ಆಗ್ರಾದ ಜಲೌನ್ ಗೆ ಮೆಡಿಕಲ್ ಆಫಿಸರ್ ಆಗಿ ವಿವೇಕ್ ವರ್ಗಾವಣೆಗೊಂಡಿದ್ದನು. ಆಗಸ್ಟ್ 18ರಂದು ಮಾತನಾಡುವ ನೆಪದಲ್ಲಿ ಯೋಗಿತಾರನ್ನ ಕರೆದಿದ್ದಾನೆ. ತನ್ನ ಕಾರಿನಲ್ಲಿಯೇ ಯೋಗಿತಾ ವಾಸವಾಗಿದ್ದ ಬಾಡಿಗೆ ಮನೆಯಿಂದ ಪಿಕ್ ಮಾಡಿದ್ದಾನೆ. ಈ ವೇಳೆ ಕಾರ್ ನಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ವಿವೇಕ್ ಬಲವಾಗಿ ಯೋಗಿತಾ ತಲೆಗೆ ಹೊಡೆದಿದ್ದಾನೆ. ಪರಿಣಾಮ ಯೋಗಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಯೋಗಿತಾ ಶವವನ್ನು ದೌಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಮ್ರೌಲಿ ಕತ್ರಾ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾನೆ.

    ಆಗಸ್ಟ್ 18 ಮಂಗಳವಾರ ರಾತ್ರಿ ಯೋಗಿತಾ ಪೋಷಕರು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಡಾ.ವಿವೇಕ್ ತಿವಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸ್ ವಿಚಾರಣೆ ವೇಳೆ ಆರೋಪಿ ವಿವೇಕ್, ತನ್ನದು ಒನ್ ಸೈಡ್ ಲವ್, ಪ್ರೀತಿ ಒಪ್ಪಿಕೊಳ್ಳದಕ್ಕೆ ಜಗಳ ನಡೆದಾಗ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದರಿಂದ ಸಾವನ್ನಪ್ಪಿದಳು ಎಂದು ವಿವೇಕ್ ಒಪ್ಪಿಕೊಂಡಿದ್ದಾನೆ.

  • ಮೈಸೂರಲ್ಲಿ ಇಂದೂ ನಡೆಯುತ್ತಿಲ್ಲ ಕೊರೊನಾ ಟೆಸ್ಟಿಂಗ್

    ಮೈಸೂರಲ್ಲಿ ಇಂದೂ ನಡೆಯುತ್ತಿಲ್ಲ ಕೊರೊನಾ ಟೆಸ್ಟಿಂಗ್

    – ಡಾಟಾ ಎಂಟ್ರಿಯೂ ಇಲ್ಲ, ಟೆಸ್ಟಿಂಗ್ ಸಹ ಇಲ್ಲ

    ಮೈಸೂರು: ಟಿಎಚ್‍ಒ ಡಾ.ನಾಗೇಂದ್ರ ಆತ್ಮಹತ್ಯೆಯಿಂದಾಗಿ ಮೈಸೂರು ಜಿಲ್ಲೆಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ಕೊರೊನಾ ಪರೀಕ್ಷೆ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ.

    ಮೈಸೂರಿನ ನಂಜನಗೂಡು ಟಿಎಚ್‍ಒ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಸಮಸ್ಯೆ ಬಗೆಹರಿಯುವವರೆಗೂ ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಶುಕ್ರವಾರದಿಂದಲೇ ಕೊರೊನಾ ಪರೀಕ್ಷೆ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಕೂಡ ಕೊರೊನಾ ಟೆಸ್ಟ್ ನಡೆಯುತ್ತಿಲ್ಲ. ಟೆಸ್ಟ್ ಮಾತ್ರವಲ್ಲ ಡಾಟಾ ಎಂಟ್ರಿ ಸಹ ನಡೆಯುತ್ತಿಲ್ಲ. ಸಮಸ್ಯೆ ಬಗೆಹರಿಯದಿದ್ದರೆ ಸೋಮವಾರದಿಂದ ರಾಜ್ಯಾದ್ಯಂತ ಕೊರೊನಾ ಟೆಸ್ಟ್ ಪ್ರಕ್ರಿಯೆ ನಿಲ್ಲುತ್ತದೆ ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

    ಇದಿಂದಾಗಿ ಸೋಮವಾರದಿಂದ ರಾಜ್ಯದ ಪರಿಸ್ಥಿತಿ ಗಂಭೀರ ಎನ್ನುವಂತಾಗಿದ್ದು, ವೈದ್ಯರು ನಿಲು ಬದಲಿಸುತ್ತಾರಾ ಕಾದು ನೋಡಬೇಕಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವೈದ್ಯಕೀಯ ಸಿಬ್ಬಂದಿ ಮನವೊಲಿಸುವ ಪ್ರಯತ್ನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದಯವಿಟ್ಟು ಕರ್ತವ್ಯಕ್ಕೆ ಹಾಜರಾಗಿ, ಇಂತಹ ತುರ್ತು ಪರಿಸ್ಥಿತಿಯಲ್ಲಿ ಹಠ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸರ್ಕಾರ ಡಾ.ನಾಗೇಂದ್ರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಘೋಷಿಸಿದ್ದು, ಅವರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ಕೊಡಿಸುವುದಾಗಿ ಸಹ ಭರವಸೆ ನೀಡಲಾಗಿದೆ. ಅಲ್ಲದೆ ವೈದ್ಯರ ಕೆಲಸದ ಒತ್ತಡ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಸರ್ಕಾರ ತಿಳಿಸಿದೆ.

  • ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ- ಜಿ.ಪಂ. ಸಿಇಒ ವಿರುದ್ಧ ಎಫ್‍ಐಆರ್ ದಾಖಲು

    – ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ

    ಮೈಸೂರು: ತೀವ್ರ ಸಂಚಲನ ಸೃಷ್ಟಿಸಿರುವ ನಂಜನಗೂಡು ಟಿಎಚ್‍ಓ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ದಂಬಂಧಿಸಿದಂತೆ ಜಿ.ಪಂ. ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಇಒ ಪ್ರಶಾಂತ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದೂರು ದಾಖಲಾದ ಹಿನ್ನೆಲೆ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಡಾ.ನಾಗೇಂದ್ರ ತಂದೆ ರಾಮಕೃಷ್ಣ ಅವರು ಮಗನ ಆತ್ಮಹತ್ಯೆ ಕುರಿತು ದೂರು ದಾಖಲಿಸಿದ್ದರು.

    ದೂರಿನಲ್ಲಿ ತಮ್ಮ ಮಗನ ಮೇಲೆ ಒತ್ತಡ ಇರುವುದರ ಬಗ್ಗೆ ತಂದೆ ಆರೋಪಿಸಿದ್ದಾರೆ. ಡಾ.ನಾಗೇಂದ್ರ ಅವರಿಗೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೋಳ್ಳುತ್ತೇವೆ ಎಂದು ಅಧಿಕಾರಿ ಹೆದರಿಸುತ್ತಿದ್ದರು ಎಂದು ತಂದೆ ಆರೋಪಿಸಿದ್ದಾರೆ. ನಾಗೇಂದ್ರ ತಂದೆ ರಾಮಕೃಷ್ಣ ಅವರ ದೂರಿನ ಅನ್ವಯ ಸಿಇಓ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡಿರುವ ಡಾ.ನಾಗೇಂದ್ರ ಕುಟುಂಬಕ್ಕೆ ಸರ್ಕಾರ 30 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದು, ನಾಗೇಂದ್ರ ಪತ್ನಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕಿ ಹುದ್ದೆ ನೀಡಲಾಗುವುದು. ತನಿಖೆ ನಡೆಸಿ ಅಧಿಕಾರಿ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು. ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ. ಎಲ್ಲರಿಗೂ ಕೆಲಸದ ಒತ್ತಡವಿರುತ್ತದೆ. ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿದ್ದಾರೆ.

  • ಡ್ರೈ ಫ್ರೂಟ್ಸ್‌ನಲ್ಲಿ ಅರಳಿದ ಗಣಪ – ಕೊರೊನಾ ಸೋಂಕಿತರಿಗೆ ವಿತರಣೆ

    ಡ್ರೈ ಫ್ರೂಟ್ಸ್‌ನಲ್ಲಿ ಅರಳಿದ ಗಣಪ – ಕೊರೊನಾ ಸೋಂಕಿತರಿಗೆ ವಿತರಣೆ

    – ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯೆಯಿಂದ ಪ್ರತಿಷ್ಠಾಪನೆ

    ಗಾಂಧಿನಗರ: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿ, ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಗುಜರಾತ್‍ನಲ್ಲಿ ವ್ಯದ್ಯೆಯೊಬ್ಬರು ಡ್ರೈ ಫ್ರೂಟ್ಸ್‌ನಿಂದ ಗಣಪನ ವಿಗ್ರಹ ಸಿದ್ಧ ಮಾಡಿದ್ದಾರೆ.

    ಗುಜರಾತ್‍ನ ಸೂರತ್ ನಿವಾಸಿ ಡಾ.ಅದಿತಿ ಮಿತ್ತಲ್ ಅವರು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ಗಣಪತಿ ವಿಗ್ರಹವನ್ನು ತಯಾರಿಸಿದ್ದಾರೆ. ಈ ಪರಿಸರ ಸ್ನೇಹಿ ಗಣಪನ ವಿಗ್ರಹವು ಸುಮಾರು 20 ಇಂಚುಗಳಷ್ಟಿದೆ. ಇದನ್ನು ತಯಾರಿಸಲು ವಾಲ್‍ನಟ್ಸ್, ಕಡಲೆಕಾಯಿ, ಗೋಡಂಬಿ ಮತ್ತು ಬಾದಾಮಿ ಮುಂತಾದ ಡ್ರೈ ಫ್ರೂಟ್ಸ್ ಬಳಸಲಾಗಿದೆ. ಕಣ್ಣುಗಳನ್ನು ಗೋಡಂಬಿಯಿಂದ ತಯಾರಿಸಲಾಗಿದೆ.

    ಈ ವರ್ಷ ಕೊರೊನಾದಿಂದ ದೇಶದೆಲ್ಲೆಡೆ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಪರಿಸರ ಸ್ನೇಹಿ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಹೀಗಾಗಿ ಡಾ. ಮಿತ್ತಲ್ ಅವರು ಕೂಡ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ವಿಗ್ರಹವನ್ನು ಸ್ಥಾಪಿಸಲು ನಿರ್ಧರಿಸಿದ್ದರು. ಅದರಂತೆಯೇ ಆಸ್ಪತ್ರೆಯಲ್ಲಿ ಡ್ರೈ ಫ್ರೂಟ್ಸ್‌ನಿಂದ ವಿಗ್ರಹ ಸ್ಥಾಪಿಸಿ ಪೂಜೆ ಸಲ್ಲಿಸಿದ್ದಾರೆ.

    ನಾನು ಈ ವಿಗ್ರಹವನ್ನು ಒಣ ಹಣ್ಣುಗಳಿಂದ ತಯಾರಿಸಿದ್ದೇನೆ. ಅದನ್ನು ಕೋವಿಡ್ ಆಸ್ಪತ್ರೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪೂಜೆಯ ನಂತರ ಡ್ರೈ ಫ್ರೂಟ್ಸ್‌ಗಳನ್ನು ಆಸ್ಪತ್ರೆಯಲ್ಲಿ ರೋಗಿಗಳಿಗೆ ವಿತರಿಸುವ ಮೂಲಕ ಸಾಂಪ್ರದಾಯಕವಾಗಿ ಗಣಪನ ವಿಗ್ರಹವನ್ನು ವಿಸರ್ಜನೆ ಮಾಡಲಾಗುವುದು ಎಂದು ಡಾ.ಮಿತ್ತಲ್ ಹೇಳಿದ್ದಾರೆ.

  • ಮೊದಲು ನೀವು ಇಲ್ಲಿಂದ ಹೊರಟು ಹೋಗಿ- ಸುಧಾಕರ್‌ಗೆ ವೈದ್ಯೆ ತರಾಟೆ

    ಮೊದಲು ನೀವು ಇಲ್ಲಿಂದ ಹೊರಟು ಹೋಗಿ- ಸುಧಾಕರ್‌ಗೆ ವೈದ್ಯೆ ತರಾಟೆ

    ಮೈಸೂರು: ಆತ್ಮಹತ್ಯೆ ಮಾಡಿಕೊಂಡ ನಂಜನಗೂಡಿನ ಟಿಹೆಚ್‍ಒ ಅವರ ಅಂತಿಮ ದರ್ಶನಕ್ಕೆ ಹೋಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮಹಿಳಾ ವೈದ್ಯೆಯೊಬ್ಬರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಆರೋಗ್ಯಾಧಿಕಾರಿ ನಾಗೇಂದ್ರ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾಗೇಂದ್ರ ಅವರು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಅವರು ಕಳೆದ ಒಂದು ವರ್ಷದಿಂದ ನಂಜನಗೂಡಿನಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ನಾಗೇಂದ್ರ ಅವರ ಅಂತಿಮ ದರ್ಶನ ಪಡೆಯಲು ಸುಧಾಕರ್ ಅವರು ಮೈಸೂರಿಗೆ ಹೋಗಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ವೈದ್ಯೆಯೊಬ್ಬರು, 30 ಲಕ್ಷ ಪರಿಹಾರ ಕೊಡ್ತೀರಾ? ನಾವು ವೈದ್ಯರು ನಮ್ಮ ಒಂದು ತಿಂಗಳ ಸಂಬಳ ಕೊಡುತ್ತೇವೆ. ಆದೇ ಕೋಟ್ಯಂತರ ರೂ. ಆಗುತ್ತದೆ. ನೀವು ಹೊರಟು ಹೋಗಿ ಇಲ್ಲಿಂದ ಎಂದು ಸುಧಾಕರ್‌ಗೆ ವೈದ್ಯೆ ತರಾಟೆ ತೆಗೆದುಕೊಂಡರು. ವೈದ್ಯೆಗೆ ಉತ್ತರಿಸಲಾಗದ ಸುಧಾಕರ್ ಅವರು ಮೂಕ ಪ್ರೇಕ್ಷಕರಂತೆ ನಿಂತುಕೊಂಡಿದ್ದರು.

    ನಮಗೆ ಐಎಎಸ್ ಅಧಿಕಾರಿಗಳ ಹಿಡಿತದಿಂದ ತಪ್ಪಿಸಿ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ. ಅವರನ್ನು ಅಮಾನತುಗೊಳಿಸಿ ಎಂದು ಸುಧಾಕರ್ ಅವರಿಗೆ ವೈದ್ಯರು ಒತ್ತಾಯ ಮಾಡಿದರು. ಇದೇ ವೇಳೆ ಮೃತ ನಾಗೇಂದ್ರ ಕೆಲಸ ನೆನೆದು ಡಾ. ರವೀಂದ್ರ ಅವರು ಕಣ್ಣೀರು ಹಾಕಿದರು. ಸಿಇಒ ಅನ್ನು ಅಮಾನತು ಮಾಡಿ ಪ್ರಕರಣ ದಾಖಲಿಸದಿದ್ದರೆ, ನಾಳೆಯಿಂದ ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಮೈಸೂರು ಆರೋಗ್ಯ ಇಲಾಖೆ ವೈದ್ಯರು ಸುಧಾಕರ್‌ಗೆ ಎಚ್ಚರಿಕೆ ನೀಡಿದರು.

  • ಕಾಲೇಜಿನ ಅನತಿ ದೂರದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ

    ಕಾಲೇಜಿನ ಅನತಿ ದೂರದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆ

    -ವೈದ್ಯನಿಂದ ಕಿರುಕುಳ, ಬೆದರಿಕೆ ಆರೋಪ
    -ವಿದ್ಯಾರ್ಥಿನಿ ಪೋಷಕರಿಂದ ದೂರು ದಾಖಲು

    ಲಕ್ನೋ: ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ಬೆಳಗ್ಗೆ 25 ವರ್ಷದ ಮೆಡಿಕಲ್ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಕಾಲೇಜಿನ ಅನತಿ ದೂರದಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

    ವಿದ್ಯಾರ್ಥಿನಿ ಯೋಗಿತಾ ಗೌತಮ್ ದೆಹಲಿಯ ಶಿವಪುರಿಯ ನಿವಾಸಿಯಾಗಿದ್ದು, ಆಗ್ರಾದಲ್ಲಿ ವಾಸವಾಗಿದ್ದರು. ಯುವತಿಯ ದೇಹದ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆ ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಯುವತಿ ಪೋಷಕರು ಮಗಳು ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಷಕರು ದೂರು ದಾಖಲಿಸಿದ ಕೆಲ ಗಂಟೆಯಲ್ಲಿ ಯುವತಿ ಶವ ಪತ್ತೆಯಾಗಿದೆ.

    ಕಾಲೇಜಿನ ಓರ್ವ ವೈದ್ಯ ಪುತ್ರಿಗೆ ಕಿರುಕುಳ ನೀಡುತ್ತಿದ್ದ. ಬೆದರಿಕೆ ಸಹ ಹಾಕಿದ್ದನು ಎಂದು ಯುವತಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರನಿನ್ವಯ ಪೊಲೀಸರು ವೈದ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಬಬಲೂ ಕುಮಾರ್, ಪೋಷಕರ ಪ್ರಕಾರ ಜಾಲೌನ್ ನಗರದ ವೈದ್ಯನೋರ್ವ ಮಗಳಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಧಮ್ಕಿ ಸಹ ಹಾಕಿದ್ದನು. ಬುಧವಾರ ಬೆಳಗ್ಗೆ ದೊರೆತ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಯುವತಿಯ ಕತ್ತು ಮತ್ತು ತಲೆಯ ಭಾಗಗಳಲ್ಲಿ ಗಾಯಗಳು ಕಂಡು ಬಂದಿವೆ. ಘಟನೆಗೂ ಮುನ್ನ ಯುವತಿ ಜೊತೆ ಗಲಾಟೆ ನಡೆದಿರೋದು ಬೆಳಕಿಗೆ ಬಂದಿದೆ. ಘಟನಾ ಸ್ಥಳದ ವ್ಯಾಪ್ತಿಯ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.