Tag: doctor

  • ವೈದ್ಯನ ಎಡವಟ್ಟಿನಿಂದ ಕಣ್ಣು ಕಳೆದುಕೊಂಡ ಬಾಲಕ – ಮಗನಿಗಾಗಿ ಜಮೀನು ಮಾರಿದ ತಂದೆ

    ವೈದ್ಯನ ಎಡವಟ್ಟಿನಿಂದ ಕಣ್ಣು ಕಳೆದುಕೊಂಡ ಬಾಲಕ – ಮಗನಿಗಾಗಿ ಜಮೀನು ಮಾರಿದ ತಂದೆ

    – ಎಫ್‍ಐಆರ್ ಆದ್ರೂ ಚಾರ್ಜ್‍ಶೀಟ್ ಸಲ್ಲಿಸದ ಪೊಲೀಸರು

    ಶಿವಮೊಗ್ಗ: ನಗುನಗುತ್ತಾ ಎಲ್ಲ ಮಕ್ಕಳಂತೆ ಆಡಿ, ಕುಣಿದು ಬೆಳೆಯಬೇಕಿದ್ದ ಮಗು ಇದೀಗ ತಂದೆಯನ್ನು ಬಿಟ್ಟು ಇರದಂತಹ ಸ್ಥಿತಿಗೆ ಬಂದಿದೆ. ಆರ್.ಎಂ.ಪಿ ವೈದ್ಯ ಮಾಡಿದ ನಿರ್ಲಕ್ಷತೆ ಹಾಗೂ ಎಡವಟ್ಟಿನಿಂದ ಬಾಲಕ ತನ್ನ ಎರಡು ಕಣ್ಣನ್ನು ಕಳೆದುಕೊಳ್ಳುವಂತಾಗಿದೆ.

    ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ನಿವಾಸಿ ಗಿರೀಶ್ ಅವರ ಪುತ್ರ ಶರತ್ ಹುಟ್ಟಿದಾಗ ಎಲ್ಲರಂತೆ ಕಣ್ಣು ಚೆನ್ನಾಗಿಯೇ ಇತ್ತು. ಎಲ್ಲರ ಜೊತೆ ಆಡಿ ಕುಣಿದು ನಲಿಯುತ್ತಿದ್ದ. ಆದರೆ ಇದೀಗ ತಂದೆಯ ಆಶ್ರಯ ಇದ್ದರೆ ಮಾತ್ರ ಓಡಾಟ. ಇಲ್ಲದಿದ್ದರೆ ಕುಳಿತಲ್ಲಿಯೇ ಕುಳಿತುಕೊಳ್ಳುವಂತಹ ದಯನೀಯ ಸ್ಥಿತಿ ಬಂದಿದೆ.

    ಬಾಲಕ ಶರತ್‍ನಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಒಂದು ದಿನ ಏಕಾಏಕಿ ಜ್ವರ ಕಾಣಿಸಿಕೊಂಡಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಂದೆ ಗಿರೀಶ್ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಶಿರಾಳಕೊಪ್ಪದ ಕ್ಲಿನಿಕ್‍ವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯ ಯಾವ ರೀತಿ ಚಿಕಿತ್ಸೆ ಕೊಟ್ಟನೋ ಏನೋ? ವೈದ್ಯ ಚಿಕಿತ್ಸೆ ಕೊಟ್ಟ ಕೆಲ ಸಮಯದ ನಂತರವೇ ಶರತ್ ಮೈಮೇಲೆ ಬೊಬ್ಬೆ ಬಂದಿದೆ. ನಂತರ ಕಣ್ಣು ಸಹ ಕಾಣದಂತಾಗಿದೆ. ವೈದ್ಯನ ಎಡವಟ್ಟಿಗೆ ಬಾಲಕ ಕಣ್ಣು ಕಳೆದುಕೊಂಡು ಕುರಡನಾಗಿದ್ದಾನೆ. ಕಣ್ಣು ಕಾಣಿಸದೇ ಇದ್ದಾಗ ಈತನ ತಂದೆ ಶಿವಮೊಗ್ಗದ ಇತರೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಸಹ ಚಿಕಿತ್ಸೆ ಫಲಕೊಟ್ಟಿಲ್ಲ.

    ಮೊದಲೇ ಕೂಲಿ ಮಾಡಿಕೊಂಡು ಬದುಕುತ್ತಿದ್ದ ಗಿರೀಶ್‍ನಿಗೆ ವೈದ್ಯನ ಎಡವಟ್ಟಿನಿಂದ ಮಗನ ಎರಡು ಕಣ್ಣು ಹೋಗಿರುವುದು ಗರ ಬಡಿದಂತಾಗಿದೆ. ಮಗನಿಗೆ ಚಿಕಿತ್ಸೆ ಕೊಡಿಸಲು ಇದ್ದ ಎರಡು ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ನಂತರ ಇದು ಸಾಲದ್ದಕ್ಕೆ ಜೀವನಕ್ಕೆ ಆಧಾರವಾಗಿದ್ದ ಎರಡು ಹಸುಗಳನ್ನು ಸಹ ಮಾರಾಟ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಗನಿಗೆ ಕಣ್ಣು ಕೊಡಿಸಲು ತಂದೆ ಗಿರೀಶ್ ಅಲೆದಾಡಿದ ಊರಿಲ್ಲ, ನಗರಗಳಿಲ್ಲ. ಆದರೆ ಎಡವಟ್ಟು ಮಾಡಿದ ವೈದ್ಯ ಮಾತ್ರ ಆರಂಭದಲ್ಲಿ ಯಾರಿಗೂ ಗೊತ್ತಾಗದಿರಲಿ ಎಂಬ ಕಾರಣದಿಂದ ಚಿಕಿತ್ಸೆಗೆ ಸ್ವಲ್ಪ ಹಣದ ಸಹಾಯ ಮಾಡಿ ನಂತರ ಸುಮ್ಮನಾಗಿ ಬಿಟ್ಟಿದ್ದಾನೆ.

    ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ ಆರ್.ಎಂ.ಪಿ ವೈದ್ಯನ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಎಫ್‍ಐಆರ್ ದಾಖಲಾಗಿ 8 ತಿಂಗಳು ಕಳೆದಿವೆ. ಆದರೆ ಪೊಲೀಸರು ಮಾತ್ರ ಇನ್ನೂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಚಾರ್ಜ್ ಶೀಟ್ ಹಾಕಲು ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಯಾವ ಕಾಣದ ಶಕ್ತಿ ತಡೆಯುತ್ತಿವೆಯೋ ಗೊತ್ತಿಲ್ಲ.

  • ಚಿಕಿತ್ಸೆಗೆ ಬಂದಿದ್ದ 4 ಮಕ್ಕಳ ತಾಯಿಯ ಜೊತೆ ವೈದ್ಯನ ಲವ್‌, ಕಾರಿನಲ್ಲಿ ಕೊಲೆ

    ಚಿಕಿತ್ಸೆಗೆ ಬಂದಿದ್ದ 4 ಮಕ್ಕಳ ತಾಯಿಯ ಜೊತೆ ವೈದ್ಯನ ಲವ್‌, ಕಾರಿನಲ್ಲಿ ಕೊಲೆ

    – ಒಂದು ತಿಂಗಳ ನಂತರ ಕೊಲೆ ಕೇಸ್‌ ಬೇಧಿಸಿದ ಪೊಲೀಸರು
    – ಇಬ್ಬರಿಗೂ ಮದುವೆಯಾಗಿದ್ದರೂ ಲವ್‌

    ಲಕ್ನೋ: ಕ್ಲಿನಿಕ್‍ಗೆ ಬಂದ ವಿವಾಹಿತ ಮಹಿಳೆಯನ್ನು ಪ್ರೀತಿಸಿ ಆಕೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಿದ್ದಾರೆ.

    ಇಸ್ಮಾಯಿಲ್(33) ಬಂಧಿತ ವೈದ್ಯ. ಸೆಪ್ಟೆಂಬರ್‌ನಲ್ಲಿ ಈತ 4 ಮಕ್ಕಳ ತಾಯಿಯನ್ನು ಕೊಲೆ ಮಾಡಿದ್ದ. ಈಗ ಪೊಲೀಸರು ಈತನ ಮೇಲೆ ವಿವಿಧ ಐಪಿಸಿ ಸೆಕ್ಷನ್‍ಗಳನ್ನು ಹಾಕಿ ಬಂಧಿಸಿದ್ದಾರೆ.

    ಪ್ರಕರಣ ಪತ್ತೆಯಾಗಿದ್ದು ಹೇಗೆ?
    ಸೆಪ್ಟೆಂಬರ್ 7ರಂದು ಮಹಿಳೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ಪತಿ ಗಾಜಿಯಾಬಾದ್ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಕಾಣೆಯಾದ ಮಹಿಳೆಯ ಫೋಟೋವನ್ನು ಇತರ ಜಿಲ್ಲೆಗಳು ಮತ್ತು ರಾಜ್ಯಗಳ ಪೊಲೀಸ್ ಠಾಣೆಗಳೊಂದಿಗೆ ಹಂಚಿಕೊಂಡು ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಒಂದು ತಿಂಗಳ ಹುಡುಕಾಟದ ನಂತರವೂ ಮಹಿಳೆಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.

    ಅಕ್ಟೋಬರ್ 15ರಂದು ಕುರುಕ್ಷೇತ್ರದಲ್ಲಿ ಒಂದು ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಮುಖ ಮತ್ತು ನಾಪತ್ತೆಯಾಗಿದ್ದ ಮಹಿಳೆಯ ಫೋಟೋ ಹೋಲಿಕೆಯಾಗುತ್ತದೆ ಎಂದು ಹರ್ಯಾಣ ಪೊಲೀಸರು ಗಾಜಿಯಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಶವ ಪತ್ತೆಯಾದ ಬಳಿಕ ಆಕೆಯ ಫೋನ್ ಕರೆ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ವೈದ್ಯ ಇಸ್ಮಾಯಿಲ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

    ಕೊಲೆ ಮಾಡಿದ್ದು ಯಾಕೆ?
    ಇಸ್ಮಾಯಿಲ್ ಕ್ಲಿನಿಕ್ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಮಹಿಳೆಯೊಬ್ಬಳು ಕ್ಲಿನಿಕ್‍ಗೆ ಚಿಕಿತ್ಸೆಗೆ ಬಂದಿದ್ದಳು. ಈತ ನೀಡಿದ ಚಿಕಿತ್ಸೆಯಿಂದ ಆಕೆ ಗುಣವಾಗಿದ್ದರು. ನಂತರ ಇಬ್ಬರು ಹೆಚ್ಚು ಸ್ನೇಹಿತರಾಗಿದ್ದು ಬಳಿಕ ಈ ಸ್ನೇಹ ಪ್ರೀತಿಗೆ ತಿರುಗಿತ್ತು.

    ಇಬ್ಬರು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಸೆಪ್ಟೆಂಬರ್ 7ರಂದು ಮಹಿಳೆಯನ್ನು ಪಹಾರ್‌ಗಂಜ್‌ ಹೋಟೆಲ್‍ಗೆ ದ್ವಿಚಕ್ರವಾಹನದಲ್ಲಿ ಕರೆದೊಕೊಂಡು ಹೋಗಿದ್ದ. ಮರುದಿನ ಕಾರನ್ನು ಬಾಡಿಗೆ ಪಡೆದು ಚಂಡೀಗಢಕ್ಕೆ ಹೋಗುವಾಗ ದಾರಿ ಮಧ್ಯೆ ಇಬ್ಬರ ನಡುವೆ ಜಗಳವಾಗಿದೆ.

    ಇಬ್ಬರಿಗೂ ಮದುವೆಯಾಗಿದ್ದರೂ ಮಹಿಳೆ ವೈದ್ಯನ ಬಳಿ ತನ್ನ ಜೊತೆ ವಾಸಿಸುವಂತೆ ಪೀಡಿಸುತ್ತಿದ್ದಳು. ಜಗಳ ಜೋರಾಗುತ್ತಿದ್ದಂತೆ ಅಸ್ತಮಾ ರೋಗಿಯಾಗಿದ್ದ ಮಹಿಳೆಗೆ ಉಸಿರಾಟ ತೊಂದರೆ ಪ್ರಾರಂಭವಾಗಿದೆ. ಹೀಗಾಗಿ ಇಸ್ಮಾಯಿಲ್ ಇಂಜೆಕ್ಷನ್ ಮೂಲಕ ಔಷಧಿ ನೀಡಿದ್ದು, ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ವೇಳೆ ಟವಲ್ ನಿಂದ ಮಹಿಳೆಯನ್ನು ಉಸಿರುಗಟ್ಟಿಸಿ ಕಾರಿನಲ್ಲೇ ಇಸ್ಮಾಯಿಲ್ ಕೊಲೆಗೈದಿದ್ದಾನೆ. ಬಳಿಕ ಆಕೆಯ ಶವವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಮನೆಗೆ ಮರಳಿದ್ದ.

    ವಿಚಾರಣೆ ವೇಳೆ ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದಕ್ಕೆ ನಾನು ಕೊಲೆ ಮಾಡಿರುವುದಾಗಿ ಇಸ್ಮಾಯಿಲ್ ಕೃತ್ಯವನ್ನು‌ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಬಳಿಕ ತನಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಯಾರಿಗೂ ಅನುಮಾನ ಬಾರದಂತೆ ಕ್ಲಿನಿಕ್‌ ನಡೆಸುತ್ತಿದ್ದ.

  • ವೈದ್ಯರ ಮಾಸ್ಕ್ ಹಿಡಿದೆಳೆದ ನವಜಾತ ಶಿಶು – ಕೊರೊನಾಗೆ ಅಂತ್ಯಕಾಲ ಅಂದ್ರು ನೆಟ್ಟಿಗರು

    ವೈದ್ಯರ ಮಾಸ್ಕ್ ಹಿಡಿದೆಳೆದ ನವಜಾತ ಶಿಶು – ಕೊರೊನಾಗೆ ಅಂತ್ಯಕಾಲ ಅಂದ್ರು ನೆಟ್ಟಿಗರು

    – ವೈದ್ಯರ ಫೋಟೋ ಸಿಕ್ಕಾಪಟ್ಟೆ ವೈರಲ್

    ದುಬೈ: ಆಗತಾನೇ ಹುಟ್ಟಿದ ಕೂಸು ವೈದ್ಯರ ಮಾಸ್ಕ್ ಬಲವಾಗಿ ಎಳೆದಿದ್ದು, ಮಾಸ್ಕ್ ತೆಗೆಯಲು ಯತ್ನಿಸಿದೆ. ಈ ಫೋಟೋ ಇದೀಗ ಸಖತ್ ವೈರಲ್ ಆಗಿದ್ದು, ಮಹಾಮಾರಿ ಕೊರೊನಾ ತೊಲಗಲಿದೆ. ಅಲ್ಲದೆ ಸದ್ಯದಲ್ಲೇ ಮಾಸ್ಕ್ ಹಾಕಿಕೊಳ್ಳದೇ ಓಡಾಡುವ ದಿಗಳು ಬರಲಿವೆ, ಇದು ಅದರ ಮುನ್ಸೂಚನೆ ಎಂಬ ಹಲವು ರಿತಿಯ ಚರ್ಚೆ ನಡೆಯುತ್ತಿದೆ.

    ಈ ಫೋಟೋವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವೈದ್ಯ ಸಮೀರ್ ಚೀಬ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಇದಕ್ಕೆ ಸಾಲುಗಳನ್ನು ಬರೆದಿರುವ ವೈದ್ಯರು, ಶೀಘ್ರದಲ್ಲೇ ಮಾಸ್ಕ್ ತೆಗೆಯುವ ಮುನ್ಸೂಚನೆ ಸಿಕ್ಕಿದೆ ಎಂದಿದ್ದಾರೆ. ಕಪ್ಪು-ಬಿಳಿ ಬಣ್ಣದ ಚಿತ್ರವನ್ನು ಅವರು ಹಂಚಿಕೊಂಡಿದ್ದು, ಮುದ್ದಾದ ಫೋಟೋಗೆ ಸಾಕಷ್ಟು ಜನ ಮಾರುಹೋಗಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದ್ದು, ಸಾಕಷ್ಟು ಜನ ತಮ್ಮ ಅಭಿಪ್ರಾಯ ತಿಳಿಸಿ ಫೋಟೋ ಪೋಸ್ಟ್ ಮಾಡುತ್ತಿದ್ದಾರೆ. ಪ್ರಪಂಚ ಕೊರೊನಾ ಮಣಿಸಿ ಸಹಜ ಸ್ಥಿತಿಗೆ ಮರಳಲಿದೆ. ಈ ಚಿತ್ರ ಅದರ ಸಂಕೇತವಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನೂ ಹಲವರು ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

    ಫೋಟೋ ಆಫ್ ದಿ ಇಯರ್, ಗಾಡ್ ಬ್ಲೆಸ್ ಯು ಎಂದು ಇನ್‍ಸ್ಟಾಗ್ರಾಮ್ ಬಳಕೆದರರೊಬ್ಬರು ತಿಳಿಸಿದ್ದಾರೆ. ತುಂಬಾ ಸುಂದರವಾದ ಹಾಗೂ ಅರ್ಥಗರ್ಭಿತ ಚಿತ್ರ ಇದಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ತುಂಬಾ ಸುಂದರ ಚಿತ್ರ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಶಿಶುಗಳು ಗರ್ಭದಲ್ಲಿರುವಾಗಲೇ ತಮ್ಮ ಗುರುತನ್ನು ರೂಪಿಸುತ್ತವೆ. ಈ ಚಿಕ್ಕ ಮಗು ಖಂಡಿತವಾಗಿಯೂ ಮಾಸ್ಕ್ ಧರಿಸುವುದನ್ನು ದ್ವೇಷಿಸುತ್ತದೆ ಎಂದು ಕಮೆಂಟ್ ಮಾಡಿದರೆ, ಸುಂದರವಾದ ಚಿತ್ರ ಡಾಕ್ಟರ್, ಹೌದು ಶೀಘ್ರದಲ್ಲೇ ಆ ದಿನ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

  • ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    – ವೈದ್ಯೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ

    ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    ತ್ರಿಶೂರ್ ಮೂಲದ ದಂತವೈದ್ಯ ಡಾ.ಸೋನಾರನ್ನು ಆರೋಪಿ ಮಹೇಶ್ ಕೊಲೆ ಮಾಡಿದ್ದನು. ಸೋನಾ ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಕೊಲೆ ಮಾಡಿದ ನಂತರ ಆರೋಪಿ ಎರಡು ದಿನಗಳ ಕಾಲ ಪರಾರಿಯಾಗಿದ್ದನು. ಆದರೆ ಕೇರಳ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.

    “ನಾವು ಮಂಗಳವಾರ ಆರೋಪಿ ಮಹೇಶ್‍ನನ್ನು ಬಂಧಿಸಿದ್ದೇವೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಸದ್ಯಕ್ಕೆ ಪ್ರಾಥಮಿಕ ವಿಚಾರಣೆ ಮಾಡುತ್ತಿದ್ದೇವೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಹೇಶ್ ಮೃತ ಡಾ.ಸೋನಾ ಜೊತೆ ಎರಡು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದನು. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದನು. ಹೀಗಾಗಿ ಸೋನಾರ ದಂತ ಚಿಕಿತ್ಸಾಲಯದಲ್ಲಿ ನಿರ್ಮಾಣ ಕೆಲಸ ಮಾಡಿದ್ದನು. ಇದಕ್ಕಾಗಿ ಸುಮಾರು 7 ಲಕ್ಷ ಹಣ ಖರ್ಚಾಗಿತ್ತು. ಆದರೆ ಮಹೇಶ್ ಸೋನಾರಿಂದ 22 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಾನೆ. ಹೀಗಾಗಿ ಹಣಕಾಸಿನ ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲದೇ ಸೋನಾ ತನ್ನ ಕ್ಲಿನಿಕ್‍ನಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ:
    ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದರು. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದನು.

    ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು.

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದು, ಪರಾರಿಯಾಗಿದ್ದನು.

    ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಹನಿಮೂನ್ ರಾತ್ರಿಯೇ ಸತ್ಯ ಬಿಚ್ಚಿಟ್ಟ ಡಾಕ್ಟರ್ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

    ಹನಿಮೂನ್ ರಾತ್ರಿಯೇ ಸತ್ಯ ಬಿಚ್ಚಿಟ್ಟ ಡಾಕ್ಟರ್ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

    – ಹನಿಮೂನ್‍ನಿಂದ ಬಂದು ತವರು ಮನೆಗೆ ಹೋದ ವಧು

    ಲಕ್ನೋ: ವೈದ್ಯನೊಬ್ಬ ಹನಿಮೂನ್ ರಾತ್ರಿಯೇ ತಾನೊಬ್ಬ ಸಲಿಂಗಕಾಮಿ, ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಪತ್ನಿಯ ಮುಂದೆ ಸತ್ಯ ಬಾಯಿಬಿಟ್ಟಿದ್ದಾನೆ. ಅಲ್ಲದೇ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದು, ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮಹಿಳೆ ತನ್ನ ಪತಿಯ ವಿರುದ್ಧ ಆಗ್ರಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾಳೆ. ಮದುವೆ ನಂತರ ಹನಿಮೂನ್‍ಗಾಗಿ ಹೋಟೆಲ್‍ವೊಂದಕ್ಕೆ ಹೋಗಿದ್ದೆವು. ಆದರೆ ಆ ರಾತ್ರಿಯೇ ಪತಿ ಸತ್ಯ ಬಿಚ್ಚಿಟ್ಟಿದ್ದಾನೆ. ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ಯತ್ನಿಸಿದ. ಅತ್ತೆ ಕೂಡ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಕೊತ್ವಾಲಿ ಪ್ರದೇಶದ ಮೂಲದ ಯುವತಿ 2019 ಮೇ ತಿಂಗಳಲ್ಲಿ ಹತ್ರಾಸ್ ಮೂಲದ ಹುಡುಗನ ಜೊತೆ ಮದುವೆಯಾಗಿದ್ದಳು. ಆತ ವೃತ್ತಿಯಲ್ಲಿ ವೈದ್ಯನಾಗಿದ್ದನು. ಮದುವೆಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ನಮ್ಮ ಅತ್ತೆ-ಮಾವ ಸಂತೋಷವಾಗಿರಲಿಲ್ಲ. ವಿವಾಹವಾದ ಎರಡು ದಿನಗಳ ನಂತರ ಪತಿ ಮನಾಲಿಗೆ ಹನಿಮೂನ್‍ಗೆ ಕರೆದುಕೊಂಡು ಹೋಗಿದ್ದನು. ಅಲ್ಲಿನ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದೆವು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಮಹಿಳೆ ಆರೋಪ:
    ಹನಿಮೂನ್ ರಾತ್ರಿಯೇ ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದನು. ಅಲ್ಲದೇ ಹೋಟೆಲ್‍ನಲ್ಲಿಯೇ ನನಗೆ ಥಳಿಸಿ, ಕೊಲೆ ಮಾಡಲು ಪ್ರಯತ್ನಿಸಿದನು.  ಜೊತೆಗೆ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಇದಕ್ಕೆ ವಿರೋಧಿಸಿದಕ್ಕೆ ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ಬಿಸಾಡಿದನು. ಈ ವೇಳೆ ಹೋಟೆಲ್ ಸಿಬ್ಬಂದಿ ನನ್ನ ರಕ್ಷಣೆ ಮಾಡಿದರು.

    ಈ ಬಗ್ಗೆ ಮಾಹಿತಿ ಪಡೆದು ಮನಾಲಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ ಪತಿ ಪೊಲೀಸರೊಂದಿಗೆ ಶಾಂತವಾಗಿ ಮಾತನಾಡಿದನು. ಬಳಿಕ ಇಬ್ಬರೂ ವಾಪಸ್ ಮನೆಗೆ ಬಂದೆವು. ಆದರೆ ನಾನು ಪೋಷಕರ ಮನೆಗೆ ಹೋದೆ. ಕೆಲ ದಿನಗಳ ನಂತರ ಅತ್ತೆ ನಮ್ಮ ಮನೆಗೆ ಬಂದು 10 ಲಕ್ಷ ರೂಪಾಯಿ ವರದಕ್ಷಿಣೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪತಿಯ ವಿರುದ್ಧ ಅನೇಕ ಪ್ರಕರಣಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ವಿಷ ಸೇವಿಸಿದ ಡಾಕ್ಟರ್ ಪತಿ-ಮಕ್ಕಳ ಜೊತೆ ವಾಟರ್ ಟ್ಯಾಂಕಿಗೆ ಜಿಗಿದ ಪತ್ನಿ

    ವಿಷ ಸೇವಿಸಿದ ಡಾಕ್ಟರ್ ಪತಿ-ಮಕ್ಕಳ ಜೊತೆ ವಾಟರ್ ಟ್ಯಾಂಕಿಗೆ ಜಿಗಿದ ಪತ್ನಿ

    – ಬದುಕುಳಿದ ಮಗಳು, ಮೂವರ ಸಾವು
    – ನನ್ನ ಸಾವಿಗೇ ಆ ದೇವರೇ ಕಾರಣ

    ಚಂಡೀಗಢ: ವೈದ್ಯ ಪತಿ ಆತ್ಮಹತ್ಯೆಗೆ ಮಾಡಿಕೊಂಡ ಸುದ್ದಿ ಕೇಳಿದ ಪತ್ನಿ ಇಬ್ಬರು ಮಕ್ಕಳ ಜೊತೆ ನೀರಿನ ಟ್ಯಾಂಕಿಗೆ ಹಾರಿರುವ ಹೃದಯ ವಿದ್ರಾವಕ ಘಟನೆ ಹರಿ ಯಾಣದ ರೋಹ್ಟಕ್ ನಲ್ಲಿ ನಡೆದಿದೆ. ಘಟನೆಯಲ್ಲಿ ಪವಾಡ ರೀತಿಯಲ್ಲಿ ದಂಪತಿಯ ಪುತ್ರಿ ಬದುಕುಳಿದಿದ್ದಾಳೆ.

    ಸಾಂದರ್ಭಿಕ ಚಿತ್ರ

    ಮೃತ ವೈದ್ಯ ಪ್ರಮೋದ್ ಸಹಾರಣ್ ರೋಹ್ಟಕ್ ನಗರದ ಹೆಲ್ತ್ ಯೂನಿವರ್ಸಿಟಿಯ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಬುಧವಾರ ಸಂಜೆ ಆರು ಗಂಟೆಗೆ ಕಹ್ನೊಲಿ ಗ್ರಾಮದ ಬಳಿ ಕಾರ್ ನಿಲ್ಲಿಸಿ ವಿಷ ಸೇವನೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಲಭ್ಯವಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಪತಿ ಪ್ರಮೋದ್ ಸಾವಿನ ಸುದ್ದಿ ತಿಳಿಯುತ್ತಲೇ ಪತ್ನಿ ಮೀನಾಕ್ಷಿ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ತೆರಳಿದ್ದಾರೆ. ಸೋನಿಪತ್ ರಸ್ತೆಯ ಸೆಕ್ಟೆರ್ 2ರಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ಮಕ್ಕಳ ಸಮೇತ ಜಿಗಿದಿದ್ದಾರೆ. ಮೀನಾಕ್ಷಿ ಮತ್ತು ಕಿರಿಯ ಪುತ್ರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಹಿರಿಯ ಮಗಳ ಈಜಿಕೊಂಡು ಮೇಲೆ ಬಂದಿದ್ದಾಳೆ. ಇಂದು ಬೆಳಗ್ಗೆ ಟ್ಯಾಂಕ್ ನಿಂದ ಇಬ್ಬರ ಶವವನ್ನ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಜೀವನದಲ್ಲಿ ಓಡಾಟಗಳಿಂದ ಬೇಸುತ್ತಿದ್ದೇನೆ. ನನ್ನ ಸಾವಿಗೆ ಆ ದೇವರೇ ಹೊಣೆ. ಪೊಲೀಸರು ನನ್ನ ಸಾವಿಗೆ ಯಾರನ್ನು ಹೊಣೆ ಮಾಡಬೇಡಿ ಎಂದು ಪ್ರಮೋದ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಮೃತ ವೈದ್ಯ ಪ್ರಮೋದ್, ರಾಜಸ್ಥಾನದ ರಾಯಗಢ ಜಿಲ್ಲೆಯವರಾಗಿದ್ದು, ಕೆಲಸದ ನಿಮಿತ್ ರೋಹ್ಟಕ್ ನಗರದಲ್ಲಿ ನೆಲೆಸಿದ್ದರು. ಇನ್ನು ಪ್ರಮೋದ್ ಪತ್ನಿ ಜೀವಶಾಸ್ತ್ರದ ಉಪನ್ಯಾಸಕಿ ಆಗಿದ್ದರು.

  • ಮಗುವಿನ ಲಿಂಗ ನೋಡಲು ಹೊಟ್ಟೆಗೆ ಇರಿತ- ಗಂಡು ಶಿಶು ಸಾವು

    ಮಗುವಿನ ಲಿಂಗ ನೋಡಲು ಹೊಟ್ಟೆಗೆ ಇರಿತ- ಗಂಡು ಶಿಶು ಸಾವು

    – ಇನ್ಮುಂದೆ ಗರ್ಭಧರಿಸಲು ಸಾಧ್ಯವಿಲ್ಲ ಎಂದ ವೈದ್ಯರು

    ಲಕ್ನೋ: ವ್ಯಕ್ತಿಯೊಬ್ಬ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದನು. ಇದೀಗ ಮಹಿಳೆಯ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿದ್ದು, ಹೊಟ್ಟೆಯಲ್ಲಿ ಗಂಡು ಮಗುವಿತ್ತು ಎಂಬುದು ಗೊತ್ತಾಗಿದೆ. ಅಲ್ಲದೇ ಆಕೆಯ ಗರ್ಭಕೋಶಕ್ಕೆ ತೀವ್ರವಾಗಿ ಗಾಯಗಳಾಗಿರುವ ಪರಿಣಾಮ ಇನ್ನೂ ಮುಂದೆ ಮಹಿಳೆ ಗರ್ಭಧರಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಹೆಣ್ಣೋ, ಗಂಡೋ ನೋಡಲು ಪತ್ನಿ ಹೊಟ್ಟೆಗೆ ಇರಿದ ಪತಿ

    ಈ ಭಯಾನಕ ಘಟನೆ ಉತ್ತರ ಪ್ರದೇಶದ ಬುದೌನ್‍ನಲ್ಲಿ ಭಾನುವಾರ ನಡೆದಿತ್ತು. ಏಳು ತಿಂಗಳ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮೂಲಕ ಅನಿತಾ ದೇವಿಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗರ್ಭದಲ್ಲಿದ್ದ ಗಂಡು ಶಿಶು ಸಾವನ್ನಪ್ಪಿದೆ. ಅಲ್ಲದೇ ದೇವಿಯ ಗರ್ಭಾಶಯಕ್ಕೆ ತೀವ್ರವಾಗಿ ಗಾಯವಾದ ಕಾರಣ ಆಕೆ ಮುಂದೆ ಎಂದಿಗೂ ಗರ್ಭಧರಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯಕ್ಕೆ ದೇವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪತಿ ಪನ್ನಾಲಾಲ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಶಿಶುವಿನ ಮರಣದ ನಂತರ ಪೊಲೀಸರು ಹೆಚ್ಚಿನ ಪ್ರಕರಣಗಳನ್ನು ಆತನ ವಿರುದ್ಧ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಇನ್ನೂ ಐದು ಮಕ್ಕಳು ಅನಿತಾಳ ಸಂಬಂಧಿಕರ ಮನೆಯಲ್ಲಿದ್ದಾರೆ.

    ನನ್ನ ಸಹೋದರಿ ಸ್ಥಿತಿ ನೋಡಿ ನಾನು ಭರವಸೆ ಕಳೆದುಕೊಂಡಿದ್ದೆ. ಆದರೆ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ದೇವರಂತೆ ಬಂದು ನನ್ನ ಸಹೋದರಿಯ ಜೀವವನ್ನು ಉಳಿಸಿದರು. ದುರದೃಷ್ಟವಶಾತ್ ಆಕೆಯ ಗರ್ಭದಲ್ಲಿರುವ ಮಗು ನಿಜವಾಗಿ ಗಂಡು ಮಗುವಾಗಿತ್ತು. ಆದರೆ ಗರ್ಭಾಶಯಕ್ಕೆ ಆದ ಗಾಯದಿಂದಾಗಿ ಮಗು ಸಾವನ್ನಪ್ಪಿದೆ. ಅಲ್ಲದೇ ತನ್ನ ತಂಗಿ ಮತ್ತೆ ಗರ್ಭಧರಿಸಲು ಸಾಧ್ಯವಾಗದಿರಬಹುದು ಅಂತ ವೈದ್ಯರು ತಿಳಿಸಿದ್ದಾರೆ ಎಂದು ದೇವಿಯ ಸಹೋದರ ರವಿ ಸಿಂಗ್ ಹೇಳಿದ್ದಾರೆ.

    ಮಹಿಳೆಯ ವೈದ್ಯಕೀಯ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ನಾವು ಭ್ರೂಣ ಹತ್ಯೆಯ ಆರೋಪವನ್ನು ಆತನ ವಿರುದ್ಧ ದಾಖಲಿಸುತ್ತೇವೆ. ಈಗಾಗಲೇ ಆರೋಪಿ ಪನ್ನಾಲಾಲ್‍ನನ್ನು ಜೈಲಿಗೆ ಕಳುಹಿಸಲಾಗಿದೆ. ಸದ್ಯಕ್ಕೆ ಹೆಚ್ಚಿನ ತನಿಖೆಗಾಗಿ ನಾವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುಧಾಕರ್ ಪಾಂಡೆ ತಿಳಿಸಿದರು.

    ನಡೆದಿದ್ದೇನು?
    ಆರೋಪಿ ಪನ್ನಾಲಾಲ್ ಮತ್ತು ಪತ್ನಿ ಅನಿತಾ ದೇವಿ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಪನ್ನಾಲಾಲ್‍ಗೆ ಗಂಡು ಮಗುವಿನ ಅತಿಯಾದ ವ್ಯಾಮೋಹವಿತ್ತು. ಈ ಸಂಬಂಧ ದಂಪತಿ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು. ಭಾನುವಾರ ದಂಪತಿ ನಡುವೆ ಹುಟ್ಟುವ ಮಗುವಿನ ಬಗ್ಗೆ ಜಗಳ ನಡೆದಿದೆ. ಈ ವೇಳೆ ಪನ್ನಾಲಾಲ್ ಮಗು ಯಾವುದು ಎಂದು ನೋಡಲು ಏಳು ತಿಂಗಳ ಗರ್ಭಿಣೆ ಹೊಟ್ಟೆಗೆ ಇರಿದಿದ್ದನು.

  • ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    ಹಿಂದಿ ಬರಲ್ಲ, ಲೋನ್ ಕೊಡಲ್ಲ- ವೈದ್ಯರ ಸಾಲದ ಅರ್ಜಿ ವಜಾಗೊಳಿಸಿದ ಬ್ಯಾಂಕ್

    – ಹಿಂದಿ ಮಾತ್ರ ಬರೋದು, ಲೋನ್ ಕೊಡಲ್ಲ ಎಂದ ಬ್ಯಾಂಕ್ ವ್ಯವಸ್ಥಾಪಕ

    ಚೆನ್ನೈ: ಹಿಂದಿ ಭಾಷೆ ಬಾರದ್ದಕ್ಕೆ ಸರ್ಕಾರಿ ನಿವೃತ್ತ ವೈದ್ಯರೊಬ್ಬರ ಸಾಲದ ಅರ್ಜಿಯನ್ನು ಬ್ಯಾಂಕ್ ವಜಾಗೊಳಿಸಿರುವ ಆಘಾತಕಾರಿ ಘಟನೆ ನಡೆದಿದೆ.

    ತಮಿಳುನಾಡಿನ ಅರಿಯಾಲೂರು ಜಿಲ್ಲೆಯ ಜಯಂಕೊಂಡನ್‍ನಲ್ಲಿ ಘಟನೆ ನಡೆದಿದ್ದು, ವೈದ್ಯ ಬಾಲಸುಬ್ರಹ್ಮಣಿಯನ್ ಅವರ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇಂಡಿಯನ್ ಓವರ್‍ಸೀಸ್ ಬ್ಯಾಂಕ್‍ನ ಗಂಗಾಯಿಕೊಂಡ ಚೋಝಾಪುರಂ ಶಾಖೆಯ ಅಧಿಕಾರಿಗಳು ಈ ರೀತಿ ವರ್ತಿಸಿದ್ದಾರೆ. ವೈದ್ಯರು ಕಳೆದ 15 ವರ್ಷಗಳಿಂದ ಈ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಕೇವಲ ಹಿಂದಿ ಬಾರದ ಒಂದೇ ಕಾರಣಕ್ಕೆ ಸಾಲದ ಅರ್ಜಿಯನ್ನು ವಜಾಗೊಳಿಸಲಾಗಿದೆ.

    ಸಾಲಕ್ಕಾಗಿ ವೈದ್ಯರು ಎಲ್ಲ ದಾಖಲೆಗಳನ್ನು ಒದಗಿಸಿದ್ದು, ಬ್ಯಾಂಕ್ ವ್ಯವಸ್ಥಾಪಕ ನನಗೆ ಹಿಂದಾ ಮಾತ್ರ ತಿಳಿದಿದೆ. ಸಾಲದ ಅರ್ಜಿಯನ್ನು ಎಂದು ಸಾಲದ ಅರ್ಜಿಯನ್ನು ಪುರಸ್ಕರಿಸಿಲ್ಲ. ಡಾ.ಬಾಲಸುಬ್ರಹ್ಮಣಿಯನ್ ಅವರು ಇದೀಗ ಬ್ಯಾಂಕ್‍ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ಒಂದು ಲಕ್ಷ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

    ಈ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರ ನಡೆಯನ್ನು ಖಂಡಿಸಿದ್ದು, ತಮಿಳರ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಸಂಜನಾ ಪತಿ ನನಗೆ ಚಿಕಿತ್ಸೆ ನೀಡಿದ್ರು – ಡಾಕ್ಟರ್ ಜೊತೆ ಸಂಜನಾ ಮದ್ವೆ ಆಗಿದ್ದಾರಾ?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ನಟಿ ಸಂಜನಾ ಮನೆಯ ಮೇಲೆ ದಾಳಿದ್ದರು. ಇದೀಗ ಸಂಜನಾರನ್ನು ಬಂಧಿಸಿ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಆದರೆ ಈ ಮಧ್ಯೆ ನಟಿ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಮನೆಯಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ನ್ಯೂರೋ ಸರ್ಜನ್ ಕರೆಯಲು ಗಲಾಟೆ ಮಾಡಿದ್ದರು ಎನ್ನಲಾಗಿದೆ. ಅದೇ ಅಪಾರ್ಟ್ ಮೆಂಟ್ ಅಲ್ಲಿ ಡಾಕ್ಟರ್ ವಾಸಿಸುತ್ತಿದ್ದು, ಆತನ ಜೊತೆ ಸಂಜನಾ ಸ್ನೇಹ ಇಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಅವರಿಬ್ಬರು ಅಮೆರಿಕಾಗೆ ಹೋಗಿ ಮದುವೆ ಆಗಿದ್ದಾರೆ ಎಂದು ಗುಮಾನಿ ಸಹ ಇದೆ. ಹೀಗಾಗಿ ಸಂಜನಾ ಡಾಕ್ಟರ್ ಕರೆಯಲು ಒತ್ತಾಯಿಸಿದ್ದರು ಎನ್ನಲಾಗಿದೆ.

    ವೈದ್ಯ ಸಂಜನಾರನ್ನು ಮದುವೆ ಆಗಿದ್ದಾರೋ ಅಥವಾ ಲಿವ್ ಇನ್ ಸಂಬಂಧ ಇಟ್ಟುಕೊಂಡಿದ್ದಾರೋ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ರಾಹುಲ್ ತಂದೆ ರಾಮಚಂದ್ರ ಮೂರು ದಿನಗಳ ಹಿಂದೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಂಜನಾ ಪತಿ ಚಿಕಿತ್ಸೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು.

    ಮೂರು ದಿನಗಳ ಹಿಂದೆ ರಾಹುಲ್ ತಂದೆ ಪಬ್ಲಿಕ್ ಟಿವಿ ಜೊತೆ ಮಾತನಾಡುವ ವೇಳೆ, ನನ್ನ ಮಗನಿಗೆ ಸಂಜನಾ ಒಬ್ಬರೇ ಪರಿಚಯ ಇರುವುದು. ರಾಹುಲ್ ಎಂಜಿನಿಯರ್ ಮಾಡಿ ಆರ್ಕಿಟೆಕ್ಚರ್ ಕೆಲಸ ಮಾಡುತ್ತಿದ್ದಾನೆ. ಒಮ್ಮೆ ಸಂಜನಾ ಮನೆಗೆ ಹೋಗಿ ಇಂಟಿರಿಯರ್ ಡಿಸೈನರ್ ಕೆಲಸ ಮಾಡಿಕೊಟ್ಟಿದ್ದನು. ಅಂದಿನಿಂದ ಇಬ್ಬರಿಗೂ ಪರಿಚಯವಾಗಿದೆ. ಅವರ ಮನೆ ಇವನು, ನಮ್ಮ ಮನೆಗೆ ಸಂಜನಾ ಬಂದು ಹೋಗುತ್ತಿದ್ದರು ಎಂದು ಹೇಳಿದ್ದರು.

     

    ಅಲ್ಲದೇ ಅವರ ಬರ್ತ್ ಡೇ ಪಾರ್ಟಿಗೆ ಇವನು ಹೋಗುತ್ತಿದ್ದನು. ಇವನ ಹುಟ್ಟುಹಬ್ಬಕ್ಕೆ ಸಂಜನಾ ಕೂಡ ಬರುತ್ತಿದ್ದಳು. ಅವರಿಬ್ಬರದ್ದು ಅಣ್ಣ-ತಂಗಿ ಸಂಬಂಧ ಬೇರೆ ಏನು ಇಲ್ಲ. ನನಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಒಮ್ಮೆ ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದರು. ಸಂಜನಾ ಪತಿ ಕೂಡ ರಾಹುಲ್‍ಗೆ ಪರಿಚಯ, ಸಂಜನಾ ಪತಿ ಡಾಕ್ಟರ್ ಆಗಿದ್ದು, ನಮಗೆ ಸಹಾಯ ಮಾಡಿದ್ದರು ಎಂದು ರಾಮಚಂದ್ರ ಪ್ರತಿಕ್ರಿಯಿಸಿದ್ದರು.

  • ಅತ್ಯಾಚಾರಕ್ಕೆ ಒಳಗಾದ ಯುವತಿಯ ಮರಣೋತ್ತರ ವರದಿ ನೀಡಲು ವೈದ್ಯನ ನಕಾರ

    ಅತ್ಯಾಚಾರಕ್ಕೆ ಒಳಗಾದ ಯುವತಿಯ ಮರಣೋತ್ತರ ವರದಿ ನೀಡಲು ವೈದ್ಯನ ನಕಾರ

    – ನ್ಯಾಯಕ್ಕಾಗಿ ಸಂಬಂಧಿಕರಿಂದ ಆಗ್ರಹ

    ಹಾಸನ: ಅತ್ಯಾಚಾರಕ್ಕೆ ಒಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿಯ ಮರಣೋತ್ತರ ಪರೀಕ್ಷೆ ವರದಿ ನೀಡದೇ, ಹಾಸನ ಜಿಲ್ಲಾಸ್ಪತ್ರೆ ವೈದ್ಯರು ತಮ್ಮ ವಿರೋಧಿ ಬಣದ ವಕೀಲರೊಂದಿಗೆ ಶಾಮೀಲಾಗಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

    ಹಾಸನ ತಾಲೂಕಿನ ಅದ್ದಿಹಳ್ಳಿಯಲ್ಲಿ ಯುವತಿ ಪ್ರಿಯಾಂಕ ಆಗಸ್ಟ್ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಯುವತಿಯ ಪೋಷಕರು, ನಮ್ಮ ಗ್ರಾಮದವನೇ ಆದ ಯುವಕನೊಬ್ಬ ನಮ್ಮ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ್ದರಿಂದ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪ ಮಾಡಿದ್ದರು.

    ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಆದರೆ ಆರೋಪಿ ಪರ ವಾದ ಮಾಡುತ್ತಿರುವ ವಕೀಲರ ಸಹೋದರ ವೈದ್ಯರಾಗಿದ್ದು, ಅವರೇ ಯುವತಿಯ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಒಂದು ವಾರ ಕಳೆದರೂ ಮರಣೋತ್ತರ ಪರೀಕ್ಷೆ ವರದಿ ನೀಡಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದ ಎರಡು ದಿನಗಳಲ್ಲಿ ಮರಣೋತ್ತರ ವರದಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ವೈದ್ಯರು ಶಾಮೀಲಾಗಿರುವ ಅನುಮಾನ ಮೂಡಿದ್ದು, ಮರಣೋತ್ತರ ಪರೀಕ್ಷೆ ವರದಿ ನೀಡುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ಸಂಬಂಧಿಕರು ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ.