Tag: doctor

  • ರಿಯಲ್ ಲೈಫ್ ಮುನ್ನಬಾಯ್ MBBS – ಮತ್ತೊಬ್ಬರ ಕೈನಲ್ಲಿ ಮೆಡಿಕಲ್ ಎಕ್ಸಾಂ ಬರೆಸಿದ ಭೂಪ

    ರಿಯಲ್ ಲೈಫ್ ಮುನ್ನಬಾಯ್ MBBS – ಮತ್ತೊಬ್ಬರ ಕೈನಲ್ಲಿ ಮೆಡಿಕಲ್ ಎಕ್ಸಾಂ ಬರೆಸಿದ ಭೂಪ

    ಜೈಪುರ: ಬಾಲಿವುಡ್‍ನ ಫೇಮಸ್ ಚಲನಚಿತ್ರ ಮುನ್ನಬಾಯ್ ಎಂಬಿಬಿಎಸ್ ಸಿನಿಮಾದ ರೀತಿಯ ಘಟನೆಯೊಂದು ನಿಜ ಜೀವನದಲ್ಲಿ ನಡೆದಿದೆ. ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದ ವ್ಯಕ್ತಿಯೋರ್ವ ಪರೀಕ್ಷೆ ಬರೆಯಲು ಮತ್ತೊಬ್ಬ ವ್ಯಕ್ತಿಯನ್ನು ತನ್ನ ಜಾಗದಲ್ಲಿ ಕೂರಿಸಿದ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಮನೋಹರ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಜಸ್ಥಾನ ಪಾಲಿ ಜಿಲ್ಲೆಯ ನಿವಾಸಿಯಾಗಿದ್ದಾನೆ. ಆರೋಪಿ ಮನೋಹರ್ ಸಿಂಗ್ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‍ಬಿಇ) ನಡೆಸಿದ ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ ಬರೆಯಲು ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದನು.

    ಇತರ ದೇಶಗಳ ಪ್ರಾಥಮಿಕ ವೈದ್ಯಕೀಯ ಕೋರ್ಸ್‍ಗಳನ್ನು ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭಾರತೀಯರಿಗಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೊನೆಯ ಎಫ್‍ಎಂಜಿಇ ಸ್ಕ್ರೀನಿಂಗ್ ಪರೀಕ್ಷೆಯನ್ನು 2020ರ ಡಿಸೆಂಬರ್ 4 ರಂದು ನಡೆಸಲಾಗಿತ್ತು ಮತ್ತು ಮನೋಹರ್ ಸಿಂಗ್‍ಗೆ ಮಥುರಾ ರಸ್ತೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನೀಡಲಾಗಿತ್ತು. ಪರೀಕ್ಷೆ ವೇಳೆ ಅರ್ಜಿ ನಮೂನೆಯಲ್ಲಿ ಸಲ್ಲಿಸಲಾಗಿದ್ದ ಫೋಟೋ ಮತ್ತು ಪರೀಕ್ಷಾ ದಿನದಂದು ತೆಗೆದ ಎರಡು ಫೋಟೋಗಳ ನಡುವೆ ಹೊಂದಾಣಿಕೆಯಿಲ್ಲದಿರುವುದರಿಂದ ಮನೋಹರ್ ಸಿಂಗ್‍ನನ್ನು ಫೇಸ್ ಐಡಿ ಪರಿಶೀಲನೆ ನಡೆಸಲು ಫೆಬ್ರವರಿ 13ರಂದು ಕರೆಯಲಾಗಿತ್ತು. ಆದರೆ ಆತ ಪರಿಶೀಲನೆಗೆ ಬಂದಿರಲಿಲ್ಲ.

    ಬುಧವಾರ ಫೇಸ್ ಐಡಿ ಪರಿಶೀಲನೆಗೆಂದು ಮನೋಹರ್ ಸಿಂಗ್ ಎನ್‍ಇಬಿಗೆ ಭೇಟಿ ನೀಡಿದ್ದನು. ಈ ವೇಳೆ ಪರೀಕ್ಷೆಯ ದಿನದಂದು ತೆಗೆದ ಫೋಟೋದೊಂದಿಗೆ ಫೇಸ್ ಐಡಿ ಕುರಿತಂತೆ ಪರಿಶೀಲನೆ ನಡೆಸಿದಾಗ ಹೊಂದಾಣಿಕೆ ಕಂಡು ಬಂದಿಲ್ಲ. ಹೀಗಾಗಿ ಆರೋಪಿಯನ್ನು ಪ್ರಶ್ನಿಸಿದಾಗ ತಪ್ಪಾಗಿ ಉತ್ತರ ನೀಡಿದ್ದಾನೆ. ಇದರಿಂದ ಅನುಮಾನಗೊಂಡು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆತನ ಬಳಿ ಇದ್ದ ಪರೀಕ್ಷಾ ಪ್ರವೇಶ ಪತ್ರ, ಎಂಬಿಬಿಎಸ್ ಪದವಿ ಅರ್ಜಿ ನಮೂನೆಗಳನ್ನು ವಶಪಡಿಸಿಕೊಂಡಿರುವುದಾಗಿ ಎಂದು ಉಪ ಪೊಲೀಸ್ ಆಯುಕ್ತ(ಆಗ್ನೇಯ) ಆರ್ ಪಿ ಮೀನಾ ತಿಳಿಸಿದ್ದಾರೆ.

    ಬಳಿಕ ವಿಚಾರಣೆ ವೇಳೆ, ಆರೋಪಿ ತಜಕಿಸ್ತಾನದಿಂದ ಎಂಬಿಬಿಎಸ್ ಪದವಿ ಪಡೆದಿದ್ದು, ಆರು ವರ್ಷಗಳಿಂದ ಎಫ್‍ಎಂಜಿಇ ಪರೀಕ್ಷೆ ಪಾಸ್ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಪರೀಕ್ಷೆ ಬರೆಯಲು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದು ಮನೋಹರ್ ಸಿಂಗ್ ಬಳಿ ವೈದ್ಯ 4 ಲಕ್ಷ ರೂ. ಪಡೆದಿರುವುದಾಗಿ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

  • ಹಾಡಹಗಲೇ ಡಾಕ್ಟರ್ ಹೊಟ್ಟೆಗೆ ಚಾಕು ಇರಿತ – ವ್ಯಕ್ತಿ ಅರೆಸ್ಟ್

    ಹಾಡಹಗಲೇ ಡಾಕ್ಟರ್ ಹೊಟ್ಟೆಗೆ ಚಾಕು ಇರಿತ – ವ್ಯಕ್ತಿ ಅರೆಸ್ಟ್

    ಕಲಬುರಗಿ: ಹಾಡಹಗಲೇ ವ್ಯಕ್ತಿಯೊಬ್ಬ ವೈದ್ಯರ ಹೊಟ್ಟೆಗೆ ಚಾಕುವಿನಿಂದ ಇರಿದು ಇದೀಗ ಪೊಲೀಸರ ಅತಿಥಿಯಾದ ಘಟನೆ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದಿನ ಸಿದ್ದಗಂಗಾ ಡೆಂಟಲ್ ಆಸ್ಪತ್ರೆ ಮುಂದೆ ನಡೆದಿದೆ.

    ಡಾ. ವಿಶ್ವನಾಥ್ ಪಾಟೀಲ್ ಚಾಕು ಇರಿತಕ್ಕೊಳಗಾದ ವೈದ್ಯ. ಇವರು ರಸ್ತೆ ಬದಿ ಡಸ್ಟರ್ ಕಾರು ನಿಲ್ಲಿಸಿ ಕಾಂಪ್ಲೆಕ್ಸ್ ವೊಂದರ ಕಡೆ ಹೋಗ್ತಿದ್ದರು. ಈ ವೇಳೆ ಏಕಾಏಕಿ ಬಂದ ಅನಾಮಧೇಯ ವ್ಯಕ್ತಿ ವೈದ್ಯರಿಗೆ ಚಾಕುವಿನಿಂದ ಇರಿದಿದ್ದಾನೆ.

    ಚಾಕು ಇರಿತದಿಂದ ವಿಶ್ವನಾಥ್ ಹೊಟ್ಟೆಯಿಂದ ರಕ್ತಸ್ರಾವವಾಗಿದೆ. ಇತ್ತ ಚಾಕು ಇರಿದ ವ್ಯಕ್ತಿಯ ಬಳಿ ನೋಟ್ ಬುಕ್ ಹಾಗೂ ಅದರಲ್ಲಿ ಡಾ. ವಿಶ್ವನಾಥ್‍ರ ಡಿಟೈಲ್ಸ್ ಪತ್ತೆಯಾಗಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ವ್ಯಕ್ತಿಯನ್ನ ಬಂಧಿಸಿದ್ದಾರೆ.

  • ಗಂಟಲು ಸೀಳಿ, ಕಾರು ಹರಿಸಿ ಪತ್ನಿಯ ಕೊಲೆ- ಮಾವನ ಮೇಲೆ ಹಲ್ಲೆಗೈದು ಎಸ್ಕೇಪ್ ಆಗುವಾಗ ಕಾರು ಪಲ್ಟಿ

    ಗಂಟಲು ಸೀಳಿ, ಕಾರು ಹರಿಸಿ ಪತ್ನಿಯ ಕೊಲೆ- ಮಾವನ ಮೇಲೆ ಹಲ್ಲೆಗೈದು ಎಸ್ಕೇಪ್ ಆಗುವಾಗ ಕಾರು ಪಲ್ಟಿ

    ಚೆನ್ನೈ: ಪತ್ನಿಯ ಗಂಟಲು ಸೀಳಿ, ಆಕೆಯ ಮೇಲೆ ಕಾರು ಹರಿಸಿ ಪತಿ ಕೊಲೆ ಮಾಡಿರುವ ಘಟನೆ ಕಾಂಚಿಪುರಂ ಜಿಲ್ಲೆಯಲ್ಲಿ ನಡೆದಿದೆ.

    ಕೀರ್ತನಾ(28) ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆ ಮಾಡಿದ ಪತಿಯನ್ನು ಡಾ. ಗೋಕುಲ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಪತ್ನಿಯನ್ನು ಕೊಲೆ ಮಾಡಿದ್ದು ಮಾತ್ರವಲ್ಲದೆ, ಮಾವನ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

    ಕೀರ್ತನಾ ಖಾಸಗಿ ಆಸ್ಪತ್ರೆಯಲ್ಲಿ ಹೆಚ್‍ಆರ್ ಆಗಿ ಕೆಲಸ ಮಾಡುತ್ತಿದ್ದು, ಗೋಕುಲ್ ವೈದ್ಯನಾಗಿದ್ದನು. ದಂಪತಿ ನಡುವೆ ಆಗಾಗ ಕಲಹವಾಗುತ್ತಲೆ ಇತ್ತು. ಲಾಕ್‍ಡೌನ್ ಸಮಯದಲ್ಲಿ ಇಬ್ಬರು ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಈ ವೇಳೆ ದಂಪತಿ ನಡುವೆ ಜಗಳವಾಗಿ ವಿಚ್ಛೇದನ ಪಡೆಯಲು ಮುಂದಾಗಿದ್ದರು.

    ಒಂದುದಿನ ಇಬ್ಬರ ನಡುವೆ ವಿಪರೀತ ಜಗಳವಾಗಿದೆ. ಆಗ ಗೋಕುಲ್ ಸಿಟ್ಟಿನಿಂದ ಕೀರ್ತನಾ ಗಂಟಲನ್ನು ಚಾಕುವಿನಿಂದ ಸೀಳಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಕೀರ್ತನಾ ತಂದೆ ಆಕೆಯ ರಕ್ಷಣೆಗೆಂದು ಹೋಗಿದ್ದಾರೆ. ಆಗ ಅವರ ಮೇಲೆಯೂ ಗೋಕುಲ್ ಹಲ್ಲೆ ಮಾಡಿ ಕೀರ್ತನಾಳನ್ನು ಮನೆಯಿಂದ ಹೊರಗೆ ತಳ್ಳಿದ್ದಾನೆ. ನಂತರ ಆಕೆಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಇದನ್ನು ಗಮನಿಸಿದ ನೆರೆಹೊರೆಯವರು ಬಂದು ತಂದೆ- ಮಗಳ ರಕ್ಷಣೆಗೆ ಮುಂದಾಗಿದ್ದಾರೆ. ಗೋಕುಲ್ ಭಯದಿಂದ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

    ಕೀರ್ತಾನಾ ಸಾವನ್ನಪ್ಪಿದ್ದಾಳೆ. ಈಕೆ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಹೊರೆಯವರು ನೀಡಿದ ಮಾಹಿತಿಯನ್ನು ಆಧರಿಸಿ ಎಸ್ಕೇಪ್ ಆಗುತ್ತಿದ್ದ ಗೋಕುಲ್‍ನನ್ನು ಪೊಲೀಸರು ಹೆದ್ದಾರಿಯಲ್ಲಿ ತಡೆದಿದ್ದಾರೆ. ತಪ್ಪಿಸಿಕೊಳ್ಳಲು ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುವ ವೇಳೆ ಗೋಕುಲ್ ಇದ್ದಕಾರು ಪಲ್ಟಿಯಾಗಿದೆ. ಗೋಕುಲ್‍ಗೆ ಚಿಕಿತ್ಸೆಯನ್ನು ನೀಡಿ ಬಂಧಿಸಲಾಗಿದೆ.

  • ಗಂಡು ಮಗುವಿಗೆ ಜನ್ಮ ನೀಡಿದ ಎರಡು ದಿನದ ಬಳಿಕ ಬಾಣಂತಿ ಸಾವು!

    ಗಂಡು ಮಗುವಿಗೆ ಜನ್ಮ ನೀಡಿದ ಎರಡು ದಿನದ ಬಳಿಕ ಬಾಣಂತಿ ಸಾವು!

    ಚಿಕ್ಕಮಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಎರಡು ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಕಡೂರು ತಾಲೂಕಿನ ಅಂಚೆಚೋಮನಹಳ್ಳಿ ಗ್ರಾಮದ ಶೀಲಾ(22) ಮೃತ ದುರ್ದೈವಿ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಸಂಬಂಧಿಕರು ಆರೋಪಿಸಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಮೃತಳ ಶವವನ್ನು ಪೊಲೀಸ್ ಠಾಣೆ ಮುಂದಿಟ್ಟು ಸಂಬಂಧಿಕರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ ಹಾಗೂ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮದುವೆಯಾಗಿ ಮೂರು ವರ್ಷವಾಗಿದೆ. ಮೊದಲ ಮಗು ಹೆಣ್ಣಾಗಿದ್ದು, ಈಗ ಮುದ್ದಾದ ಗಂಡು ಮಗು ಜನಿಸಿದೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಅಮ್ಮನನ್ನು ಕಳೆದುಕೊಂಡಿದೆ ಹಾಗೂ ಪೋಷಕರು ಮಗಳನ್ನು ಕಳೆದುಕೊಂಡಿದ್ದೇವೆ ಎಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಗೋಳಾಡಿದ್ದಾರೆ.

    ಎರಡು ದಿನದ ಹಿಂದೆ ಡೆಲಿವರಿಯಾದ ಶೀಲಾಗೆ ತೀವ್ರವಾದ ರಕ್ತಸ್ರಾವ ಆಗುತ್ತಿತ್ತು. ನಂತರ ವೈದ್ಯರು ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದರು. ಬಾಣಂತಿಯನ್ನು ಶಿವಮೊಗ್ಗಕ್ಕೆ ಕರೆದೊಯ್ದು ಚಿಕಿತ್ಸೆಗೆ ಸಿದ್ಧತೆ ನಡೆಸಿಕೊಳ್ಳುವ ಮುನ್ನವೇ ಸಾವಿಗೀಡಾಗಿದ್ದಾರೆ. 22 ವರ್ಷದ ಯುವತಿ ಸಾವಿಗೆ ಕಡೂರು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿ ವೈದ್ಯರ ವಿರುದ್ಧ ಪೊಲೀಸ್ ಠಾಣೆ ಮುಂದೆ ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಅಕ್ಷಯ್, ಈಗಾಗಲೇ ಡಿ.ಎಚ್.ಓ ಜೊತೆ ಮಾತನಾಡಿದ್ದು, ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ತನಿಖೆಯ ರಿಪೋರ್ಟ್ ಬಂದ ಬಳಿಕ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

  • ರೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣಬೇಕು: ಡಾ.ಕೆ ಸುಧಾಕರ್

    ರೋಗಿಗಳನ್ನು ಕುಟುಂಬದ ಸದಸ್ಯರಂತೆ ಕಾಣಬೇಕು: ಡಾ.ಕೆ ಸುಧಾಕರ್

    – ಬಜೆಟ್‍ನಿಂದ ಆರೋಗ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ

    ಬೆಂಗಳೂರು: ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ ನೀಡಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದರು.

    ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಸಾಮಾನ್ಯ ಜನರು ಹೇಳುತ್ತಾರೆ. ವೈದ್ಯರು ತಮ್ಮ ಕುಟುಂಬದ ಸದಸ್ಯರು ಬಂದಾಗ ಹೇಗೆ ಚಿಕಿತ್ಸೆ ನೀಡುತ್ತಾರೋ ಹಾಗೆಯೇ ಪ್ರತಿ ರೋಗಿಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಲಿದೆ. ಇದಕ್ಕೆ ವೈದ್ಯರ ಸಹಕಾರ ಅತಿ ಅಗತ್ಯ. ಶೇ.70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದು, ಶೇ.20-25 ರಷ್ಟು ಆರೋಗ್ಯ ಕೇಂದ್ರಗಳು ಹಳ್ಳಿಗಳಲ್ಲಿವೆ. ಆದ್ದರಿಂದ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

    ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳ ಪ್ರಮುಖ ಆರೋಗ್ಯ ಸೇವಾ ಕೇಂದ್ರಗಳಾಗಿದ್ದು, ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಈ ಬಾರಿ 2.3 ಲಕ್ಷ ಕೋಟಿ ರೂ. ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.137 ರಷ್ಟು ಹೆಚ್ಚಿದೆ ಎಂದರು.

    ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಕಾಲೇಜು ಜೀವನದ ಬಳಿಕ ಹೊರಜಗತ್ತಿಗೆ ಕಾಲಿಡಬೇಕಾಗುತ್ತದೆ. ಆದರೆ ಕಾಲೇಜು ಮುಗಿದ ಕೂಡಲೇ ಕಲಿಕೆ ಮುಗಿಯುವುದಿಲ್ಲ. ಕಲಿಕೆ, ಅಧ್ಯಯನ, ಆವಿಷ್ಕಾರ ಜೀವನದುದ್ದಕ್ಕೂ ನಿರಂತರವಾಗಿರುತ್ತದೆ. ಕೋವಿಡ್ ಸಮಯದಲ್ಲಿ ಎಲ್ಲ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಧೈರ್ಯ ತೋರಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಅಭಿನಂದನೆಗಳು ಎಂದರು.

    ಈಗ ನಾವು ಕೊರೊನಾದ ಕೊನೆಯ ಹಂತದಲ್ಲಿದ್ದೇವೆ. ಕೊರೊನಾ ಸೋಂಕು ಆರಂಭದ 10 ತಿಂಗಳ ಬಳಿಕ ಲಸಿಕೆ ದೊರೆತಿದ್ದು, ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

  • ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ವೈದ್ಯನ ಕಿರುಕುಳಕ್ಕೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ

    ಯಾದಗಿರಿ: ಅಮ್ಮಾಪುರದ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿವೆ. ವೈದ್ಯ ರಾಹಿಲ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರೆ, ಕೆಲವರು ಕಣ್ಣೀರು ಸಹ ಹಾಕಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರದ ವೈದ್ಯ ಡಾ.ಎಂ.ಎಂ.ರಾಹೀಲ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿವೆ. ಡಾ.ಎಂ.ಎಂ.ರಾಹೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲಾಗಿ ಸಹೋದ್ಯೋಗಿಗಳಿಗೆ ಬೇಕಂತಲೇ ಹಾಜರಾತಿ ಕಡಿಮೆ ಹಾಕುವುದು. ವಿಶೇಷ ಭತ್ಯೆ ಕಟ್ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡ್ತಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬಾಯಿ ಬಂದಂತೆ ನಿಂದಿಸುತ್ತಾರೆ. ರಾಹೀಲ್ ವರ್ತನೆಯಿಂದ ಆಸ್ಪತ್ರಗೆ ರೋಗಿಗಳು ಬರಲು ಭಯಪಡುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

    ವೈದ್ಯ ರಾಹಿಲ್ ನಿರ್ಲಕ್ಷ್ಯ ಔಷಧಿ, ಸ್ಯಾನಿಟೆರಿ ಪ್ಯಾಡ್ ಗಳು ಹಂಚಿಕೆಯಾಗಿದೆ ಆಸ್ಪತ್ರೆಯ ಮೂಲೆಯಲ್ಲಿ ಸೇರಿವೆ. ಆಸ್ಪತ್ರೆಗೆಂದು ಮಂಜೂರಾಗಿರುವ ಬೆಲೆ ಬಾಳುವ ವೈದ್ಯಕೀಯ ಪೀಠೋಪಕರಣಗಳು, ಕಚೇರಿ ಬಳಕೆ ವಸ್ತುಗಳು ಸಹ ತುಕ್ಕು ಹಿಡಿಯುತ್ತಿವೆ. ಈ ಎಲ್ಲಾ ವಿಚಾರವಾಗಿ ಹಿರಿಯ ಅಧಿಕಾರಿಗಳಿಗೆ ಸಿಬ್ಬಂದಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

  • ನೀಟ್ ಪರೀಕ್ಷೆಯಲ್ಲಿ ಪಾಸ್ – ವೈದ್ಯನಾಗಲು ಮುಂದಾದ ’64’ರ ಯುವಕ

    ನೀಟ್ ಪರೀಕ್ಷೆಯಲ್ಲಿ ಪಾಸ್ – ವೈದ್ಯನಾಗಲು ಮುಂದಾದ ’64’ರ ಯುವಕ

    ಭುವನೇಶ್ವರ: 40 ವರ್ಷಗಳ ಜೀವನದಲ್ಲಿ ಕಠಿಣ ಕೆಲಸ ಮತ್ತು ಮಕ್ಕಳನ್ನು ಬೆಳೆಸಿದ ನಂತರ ಒಬ್ಬ ಯಶಸ್ವಿ ವ್ಯಕ್ತಿ ಬಹುಶಃ ಮೊಮ್ಮಕ್ಕಳೊಂದಿಗೆ ಸಮಯ ಕಳೆಯಲು, ತೋಟಗಾರಿಕೆ ಮಾಡಿಕೊಂಡು, ತಮ್ಮ ಸಂಬಂಧಿಗಳೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುವುದು ಸರ್ವೇಸಾಮಾನ್ಯ. ಆದರೆ ಒಡಿಶಾದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರು ವೈದ್ಯರಾಗಲು ಮುಂದಾಗಿದ್ದಾರೆ.

    1956 ರಲ್ಲಿ ಜನಿಸಿದ ಜೇ ಕಿಶೋರ್ ಪ್ರಧಾನ್ ಇದೀಗ ವೈದ್ಯರಾಗಲು ನೀಟ್ ಬರೆದು ತೇರ್ಗಡೆಗೊಂಡವರು. ಒಡಿಶಾದ ಪ್ರಧಾನ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಬುರ್ಲಾದ ವೀರ್ ಸುರೇಂದ್ರ ಸಾಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ (ವಿಮ್ಸಾರ್)ನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ತರಗತಿಗಾಗಿ ತಯಾರಾಗಿದ್ದಾರೆ.

    ಒಡಿಶಾದ ಬಾರ್ ಗ ಜಿಲ್ಲೆಯ ಅಟಾಬಿರಾದವರಾದ ಜೇ ಕಿಶೋರ್ ಪ್ರಧಾನ್ ಎಂಬಿಬಿಎಸ್ ಕಲಿಯಲು ಬೇಕಾದ ಎಲ್ಲಾ ತಯಾರಿ ಮುಗಿಸಿದ್ದಾರೆ. ಹಿರಿಯ ನಾಗರೀಕರಾದ ಇವರಿಗೆ ಹೃದ್ರೋಗ, ಶ್ವಾಸಕೋಶದ ಕಾಯಿಲೆ ಮತ್ತು ನೆಫ್ರಾಲಜಿ ಪರೀಕ್ಷೆಯಿಂದ ರಿಯಾಯಿತಿ ಕೊಡಲಾಗಿದ್ದು, ಅಧ್ಯಯನಕ್ಕಾಗಿ ಅವಕಾಶ ಮಾಡಿ ಕೊಡಲಾಗಿದೆ.

    2016ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಪ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ನಂತರ ಇದೀಗ ಈ ನಿರ್ಧಾರವನ್ನು ಕಂಡು ಹಲವರು ಅಶ್ಚರ್ಯಗೊಂಡಿದ್ದಾರೆ. ಜೇ ಕಿಶೋರ್ ಪ್ರಧಾನ್ ಅವರು ಅನೇಕ ವರ್ಷಗಳಿಂದ ಕಂಡಿದ್ದ ಕನಸನ್ನು ನನಸು ಮಾಡಲು ಹೊರಟಿದ್ದು ಇದರ ಕುರಿತು ಹೇಳಿಕೆ ಕೊಟ್ಟಿದ್ದಾರೆ. 1970 ದಶಕದಲ್ಲಿ ನನ್ನ ಕನಸನ್ನು ಈಡೇರಿಸಲು ಆಗಿರಲಿಲ್ಲ. ನಂತರ ತಯಾರಿಯನ್ನು ನಿರಂತರ ಮುಂದುವರಿಸಿದೆ. ಬಿಎಸ್ಸಿ ಸೇರಿಕೊಂಡ ನಂತರ ಈ ಕನಸಿಗೆ ಇನ್ನಷ್ಟೂ ರೆಕ್ಕೆ ಪುಕ್ಕಗಳು ಸೇರಿದವು ಆದರೆ ಸಾಧಿಸಲು ಆಗಿರಲ್ಲ. ಈ ಪ್ರಜ್ಞೆ ನನ್ನನ್ನು ಕಾಡುತ್ತಲೇ ಇತ್ತು ಎಂದಿದ್ದಾರೆ.

    ಇದಲ್ಲದೆ ನಾನು ವೈದ್ಯಕೀಯ ವಿಜ್ಞಾನಕ್ಕೆ ಹೆಚ್ಚಿನ ಒಲವನ್ನು ತೋರಿದ್ದು 1982ರಲ್ಲಿ. ನನ್ನ ತಂದೆ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 1987ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಉನ್ನತ ಚಿಕಿತ್ಸೆಗಾಗಿ ವೆಲ್ಲೂರಿಗೆ ಕರೆದೊಯ್ಯಲಾಯಿತು. ಯಶಸ್ವಿ ಚಿಕಿತ್ಸೆಯ ಪರಿಣಾಮವಾಗಿ ನನ್ನ ತಂದೆ ಜನವರಿ 2010ರ ವರೆಗೆ ಬದುಕುಳಿದರು. ಇದರಿಂದ ನನಗೆ ಇನ್ನಷ್ಟೂ ಹೆಚ್ಚಿನ ಗಮನ ವೈದ್ಯಕೀಯದತ್ತ ನೆಟ್ಟಿತು ಎಂದು ವಿವರಿಸಿದರು.

    ವೈದ್ಯಕೀಯ ಅಧ್ಯಯನದ ಹೆಚ್ಚಿನ ಆಸಕ್ತಿಯಿಂದಾಗಿ 15 ವರ್ಷಗಳ ಬ್ಯಾಕಿಂಗ್ ಸೇವೆಯ ನಂತರ ಸ್ವಯಂಪ್ರೇರಿತ ನಿವೃತ್ತಿ ಪಡೆದುಕೊಳ್ಳುವ ಹುಚ್ಚಾಟಕ್ಕೆ ಹೋಗಿದ್ದೆ, ಆದರೆ ಕೊನೆಗೆ ಕುಟುಂಬ ನಡೆಸುವ ಯೋಚನೆಯ ಪರಿಣಾಮ ಕೆಲಸ ತ್ಯಜಿಸುವ ಯೋಚನೆ ಕೈ ಬಿಟ್ಟೆ.

    ನನಗೆ ಅವಳಿ ಹೆಣ್ಣು ಮಕ್ಕಳಿದ್ದಾರೆ. ಅವರು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅವರ ತಯಾರಿಯಲ್ಲಿ ನಾನು ಸಹಾಯ ಮಾಡುತ್ತಿದ್ದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದ ನನ್ನನ್ನು ಗಮನಿಸಿದ ನನ್ನ ಮಕ್ಕಳು ಕಲಿಕೆಗೆ ನನ್ನನ್ನು ಪ್ರೇರೇಪಿಸಿದರು ಎನ್ನುತ್ತಾರೆ ಕಿಶೋರ್ ಪ್ರಧಾನ್.

    ಅಧ್ಯಯನಕ್ಕಾಗಿದ್ದ ವಯಸ್ಸಿನ ಮಿತಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಇದೂ ನನ್ನ ಸಂಕಲ್ಪವನ್ನು ಈಡೇರಿಸಲು ದಾರಿ ಮಾಡಿ ಕೊಟ್ಟಿತ್ತು ಮತ್ತು ಎಂಬಿಬಿಎಸ್ ಕಲಿಯುವುದನ್ನು ಸವಾಲಾಗಿ ಸ್ವೀಕರಿಸಿದೆ ಎಂದರು. ನೀಟ್‍ನಲ್ಲಿ 175 ಅಂಕಗಳಿಸುವ ಮೂಲಕ 5,94,380ನೇ ರ್ಯಾಂಕ್‍ಗಳಿಸಿ ವಿಮ್ಸಾರ್‍ನಲ್ಲಿ ಎಂಬಿಬಿಎಸ್ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

    ನನ್ನ ಅವಳಿ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಕಳೆದ ತಿಂಗಳು ದುರದೃಷ್ಟಕರವಾಗಿ ನಿಧನ ಹೊಂದಿದ್ದರಿಂದ ಈ ಸಂಭ್ರಮವನ್ನು ಆಚರಿಸಲು ಸಾಧ್ಯವಾಗಿಲ್ಲ ಇದನ್ನು ಹೊರತು ನಾನು ಮಗಳ ನೆನಪಿಗಾಗಿ ಅಧ್ಯಯನ ಮಾಡುತ್ತೇನೆ ಎನ್ನುತ್ತಾರೆ ಕಿಶೋರ್ ಪ್ರಧಾನ್.

    ಪ್ರಧಾನ್ ಅವರು ಎಂಬಿಬಿಎಸ್ ಮುಗಿಸುವ ಹೊತ್ತಿಗೆ ಅವರಿಗೆ 69 ವರ್ಷವಾಗುತ್ತದೆ. ಅಧ್ಯಯನದ ನಂತರ ಸೇವೆ ಸೇರಲು ಸಿದ್ಧರಾಗಿದ್ದೀರ ಎಂದು ಪ್ರಶ್ನಿಸಿದಾಗ ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ 5 ವರ್ಷಗಳ ನಂತರದ ದಿನಗಳಲ್ಲಿ ಖಾಸಗಿಯಾಗಿ ಅಭ್ಯಾಸ ಮಾಡುತ್ತಲೇ ಇರುತ್ತೇನೆಂದು ಹೇಳಿದರು.

    ಕಿಶೋರ್ ಪ್ರಧಾನ್ ಪದವಿ ಮುಗಿದ ತಕ್ಷಣ ಟೆಲಿಕಾಂ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ನಂತರ ಕೆಲಕಾಲ ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರೆಕಾಲಿಕ ಶಿಕ್ಷಕರಾಗಿ ಸೇರಿದ್ದರು. ನಂತರ 1983ರಲ್ಲಿ ಎಸ್‍ಬಿಐ ಉದ್ಯೋಗಿಯಾದರು.

    ವಿಮ್ಸಾರ್‍ನ ಡೀನ್ ಮತ್ತು ಪ್ರಾಂಶುಪಾಲರಾದ ಬ್ರಜಮೋಹನ್ ಮಿಶ್ರಾ ಮಾತನಾಡಿ, ನಾನು ಪ್ರಧಾನ್ ಅವರಿಂದ ಒಂದು ವರ್ಷ ಹಿರಿಯವನಾಗಿದ್ದು ಈ ವಯಸ್ಸಿನಲ್ಲಿ ಪ್ರಧಾನ್ ಸಾಧನೆಗೆ ಪದಗಳೇ ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್‍ನ ಆದೇಶದಂತೆ ಅಧ್ಯಯನಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಅವರನ್ನು ವೈದ್ಯಕೀಯವಾಗಿ ಅರ್ಹರೆಂದು ಹೇಳಲಾಗಿದ್ದು ಕೆಲವು ದಾಖಲೆಗಳ ಪರಿಶೀಲನೆಗಾಗಿ ಮತ್ತು ಸಹಿ ಹಾಕಿ ಕೋರ್ಸ್‍ಗೆ ಸೇರಲು ಹೇಳಲಾಗಿದೆ ಎಂದು ಮಿಶ್ರಾ ಹೇಳಿದರು.

    ನಾನು ಅವರನ್ನು ಸಹಪಾಠಿ ಎಂದು ಪರಿಗಣಿಸುತ್ತೇನೆ. ನನಗೆ ಹೊಸ ರೀತಿಯ ಅನುಭವಾಗಿದೆ ಅವರ ಮಿದುಳುಗಳು ವೈದ್ಯಕೀಯ ಅಧ್ಯನಕ್ಕಾಗಿ ಸಿದ್ಧವಾಗಿರುವುದರಿಂದಾಗಿ ಅವರಿಗೆ ಯಾವುದೇ ಸಮಸ್ಯೆ ಕಾಡಲಾರದು ಎಂದು ಸಂತಸ ಹಂಚಿಕೊಂಡರು.

  • ರೂಪಾಂತರಗೊಂಡಿರುವ ವೈರಸ್ ವೇಗವಾಗಿ ಹಬ್ಬುತ್ತೆ: ಲಂಡನ್ ವೈದ್ಯ ಡಾ.ಚಿರನ್

    ರೂಪಾಂತರಗೊಂಡಿರುವ ವೈರಸ್ ವೇಗವಾಗಿ ಹಬ್ಬುತ್ತೆ: ಲಂಡನ್ ವೈದ್ಯ ಡಾ.ಚಿರನ್

    ಬೆಂಗಳೂರು: ಕೊರೊನಾ ರೂಪಾಂತರದ ಪ್ರಕರಣಗಳು ಸೆಪ್ಟಂಬರ್‍ನಲ್ಲಿ ಮೊದಲು ಲಂಡನ್‍ನಲ್ಲಿ ಕಾಣಿಸಿಕೊಂಡಿದ್ದು, ಈಗಿರುವ ಕೊರೊನಾ ವೈರಸ್‍ಗಿಂತ ಬಹುಬೇಗ ಹರಡುತ್ತಿದೆ ಎಂದು ಲಂಡನಲ್ಲಿರುವ ಮೈಸೂರು ಮೂಲದ ವೈದ್ಯ ಡಾ.ಚಿರನ್ ಕೃಷ್ಣಸ್ವಾಮಿ ತಿಳಿಸಿದರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ತುಂಬಾ ವೇಗವಾಗಿ ಹರಡುತ್ತಿದೆ. ಈ ಹಿಂದಿನ ಕೊರೊನಾ ವೈರಸ್‍ಗಿಂತ ರೂಪಾಂತರವಾಗಿರುವ ವೈರಸ್ ಹೆಚ್ಚು ಕಾಡುತ್ತಿದೆ. ಇಂಗ್ಲೆಂಡ್‍ನಲ್ಲಿ ಸೋಮವಾರ 33 ಸಾವಿರ ಪಾಸಿಟಿವ್ ಕೇಸ್ ಬಂದಿವೆ. ಇದಕ್ಕೂ ಮೊದಲು ಕೇವಲ 5-10 ಸಾವಿರ ಕೊರೊನಾ ಪ್ರಕರಣಗಳು ಕಂಡುಬರುತ್ತಿದ್ದವು ಎಂದು ವಿವರಿಸಿದರು.

    ಮೂಲದಲ್ಲಿ ಬಂದ ಕೊರೊನಾ ವೈರಸ್‍ಗೆ ಹೋಲಿಸಿದರೆ ಈಗ ರೂಪಾಂತರಗೊಂಡಿರುವ ವೈರಸ್ ತುಂಬಾ ಪ್ರಬಲವಾಗಿದೆ. 17 ಪ್ರೊಟೀನ್‍ಗಳ ವ್ಯತ್ಯಾಸವಿದೆ. ಹೀಗಾಗಿ ಹೆಚ್ಚು ಆತಂಕ ಸೃಷ್ಟಿಸಿದೆ ಎಂದು ವೈದ್ಯರು ತಿಳಿಸಿದರು.

    ಇಂಗ್ಲೆಂಡ್ ಸರ್ಕಾರ ಸಹ ಲಾಕ್‍ಡೌನ್ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ. ನಾಲ್ಕು ಭಾಗಗಳಾಗಿ ವಿಂಗಡಿಸಿ ಲಾಕ್‍ಡೌನ್ ಮಾಡಲಾಗಿದ್ದು, ಟಯರ್ 4ರಲ್ಲಿ ತುಂಬಾ ಕಟ್ಟುನಿಟ್ಟಿನ ಲಾಕ್‍ಡೌನ್ ವಿಧಿಸಲಾಗಿದೆ. ಲಂಡನ್ ಸುತ್ತಲಿನ ಜಾಗ ಟಯರ್ 4ರಲ್ಲಿದೆ. ಮಧ್ಯ ಹಾಗೂ ಉತ್ತರ ಭಾಗದ ಇಂಗ್ಲೆಂಡ್‍ನಲ್ಲಿ ಟಯರ್ 1,2,3 ಯಾಗಿ ಬೇರ್ಪಡಿಸಿ ಲಾಕ್‍ಡೌನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮೂಲ ಕೊರೊನಾ ವೈರಸ್ ಲಕ್ಷಣಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ಈ ಹಿಂದಿನದ್ದಕ್ಕಿಂತ ಇದು ಬಹುಬೇಗ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕೊರೊನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ರೀತಿಯಲ್ಲೇ ರೂಪಾಂತರ ಹೊಂದಿದ ವೈರಸ್‍ನ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದರು.

    ಕಟ್ಟುನಿಟ್ಟಿನ ಲಾಕ್‍ಡೌನ್ ಮಾತ್ರವಲ್ಲದೆ, ಟೆಸ್ಟಿಂಗ್ ಹಾಗೂ ಸ್ಕ್ರೀನಿಂಗ್ ಬಿಗಿಗೊಳಿಸಲಾಗಿದೆ. ಲಂಡನ್ ಏರಿಯಾದಲ್ಲಿ ಟಯರ್ 4 ಲಾಕ್‍ಡೌನ್ ವಿಧಿಸಿ ನಿರ್ಬಂಧ ಹೇರಲಾಗಿದೆ. ಪ್ರತಿ ದಿನ 1 ಲಕ್ಷಕ್ಕೂ ಅಧಿಕ ಜನರನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ. ಇದರಲ್ಲಿ ಸೋಮವಾರ 33 ಸಾವಿರ ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.

    ಲಂಡನ್‍ನಲ್ಲಿ ಕೊರೊನಾ ಲಸಿಕೆ ನೀಡುವುದನ್ನು ಪ್ರಾರಂಭಿಸಿ 10 ದಿನಗಳಾಗಿವೆ. ಮೊದಲ ದಿನ 80 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ವೈರಸ್‍ನಲ್ಲಿ ಸಣ್ಣ ಬದಲಾವಣೆಯಾಗಿದ್ದರಿಂದ ಲಸಿಕೆ ಕೆಲಸ ಮಾಡುವುದಿಲ್ಲ ಎಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ವೈರಸ್ ಬೇಗ ಹರಡಲು ಚಳಿಗಾಲವೂ ಕಾರಣವಿರಬಹುದು. ತುಂಬಾ ಬೇಗ ಟೆಸ್ಟ್, ಟ್ರೇಸಿಂಗ್, ಟ್ರ್ಯಾಕಿಂಗ್ ಮಾಡುತ್ತಿದ್ದಾರೆ ಎಂದು ವಿವರಿಸಿದರು.

    ಡಿ.15ರಿಂದ ಹೊರಗಡೆಯಿಂದ ಬಂದವರು 15 ದಿನಗಳ ಕಾಲ ಕ್ವಾರಂಟೈನ್ ಆಗಲೇಬೇಕು. ಬಳಿಕ ಅವರ ಸ್ವಂತ ಖರ್ಚಿನಲ್ಲೇ ಆರ್‍ಟಿಪಿಸಿಆರ್ ಟೆಸ್ಟ್ ಮಾಡಿಸಿ ಬಳಿಕ ಕೆಲಸಕ್ಕೆ ತರಳಬಹುದು. ತುಂಬಾ ಸೂಕ್ಷ್ಮವಾಗಿ ನಿರ್ವಹಿಸುತ್ತಿರುವುದರಿಂದ ಇದು ಬೇಗ ಬೆಳಕಿಗೆ ಬಂದಿದೆ ಎಂದರು.

  • ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆಗೆ ವೈದ್ಯರಿಂದ ಕಿರುಕುಳ

    ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ ಮಹಿಳೆಗೆ ವೈದ್ಯರಿಂದ ಕಿರುಕುಳ

    ಪಾಟ್ನಾ: ಮಗುವಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋದ ಮಹಿಳೆಗೆ ವೈದ್ಯರು ಕಿರುಕುಳ ನೀಡಿರುವ ಘಟನೆ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ನಡೆದಿದೆ.

    ಮಗುವಿನ ಚಿಕಿತ್ಸೆಗಾಗಿ ಆಗಮಿಸಿದ ಮಹಿಳೆಗೆ ವೈದ್ಯರು ಕಿರುಕುಳ ನೀಡಿದ್ದಾರೆ. ಈ ವಿಚಾರವನನು ಮಹಿಳೆ ತನ್ನ ಮನೆಗೆ ಬಂದು ಕುಟುಂಬದವರಲ್ಲಿ ವಿವರಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂತ್ರಸ್ತ ಮಹಿಳೆ ಕುಟುಂಬವು ವೈದ್ಯರ ಚಿಕಿತ್ಸಾಲಯಕ್ಕೆ ಹೋಗಿ ಗಲಾಟೆ ಮಾಡಿದ್ದಾರೆ. ನಂತರ ಸಂತ್ರಸ್ತ ಮಹಿಳೆಯ ಕುಟುಂಬ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದೆ.

    ದೂರು ಸ್ವೀಕರಿಸಿದ ಪೊಲೀಸರು ವೈದ್ಯರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಸಮಸ್ತಿಪುರ- ಪಾಟ್ನಾ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಹತ್ತಿರದ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ.

    ಈ ಘಟನೆಯ ವರದಿಯಾದ ಕೂಡಲೇ ಸ್ಥಳೀಯ ಪೊಲೀಸರು ಮತ್ತು ಡಿಎಸ್‍ಪಿ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆಯಿಂದ ಎಫ್‍ಐಆರ್ ದಾಖಲಾಗಿದೆ.

  • ಉತ್ತರ ಪ್ರದೇಶದಲ್ಲಿ ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ 10 ವರ್ಷ ಸೇವೆ ಕಡ್ಡಾಯ, ಉಲ್ಲಂಘಿಸಿದ್ರೆ 1 ಕೋಟಿ ದಂಡ

    ಉತ್ತರ ಪ್ರದೇಶದಲ್ಲಿ ಪಿಜಿ ವೈದ್ಯ ವಿದ್ಯಾರ್ಥಿಗಳಿಗೆ 10 ವರ್ಷ ಸೇವೆ ಕಡ್ಡಾಯ, ಉಲ್ಲಂಘಿಸಿದ್ರೆ 1 ಕೋಟಿ ದಂಡ

    ಲಕ್ನೋ: ಸ್ನಾತಕೋತ್ತರ ಮೆಡಿಕಲ್‌ ಓದಿ ಕೊನೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಲು ನಿರಾಕರಿಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತರ ಪ್ರದೇಶ ಸರ್ಕಾರ ಬಿಸಿ ಮುಟ್ಟಿಸಿದೆ.

    ಇನ್ನು ಮುಂದೆ ಉತ್ತರ ಪ್ರದೇಶದಲ್ಲಿ ಸ್ನಾತಕೋತ್ತರ ವೈದ್ಯ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕಡ್ಡಾಯವಾಗಿ 10 ವರ್ಷ ಸೇವೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಆದೇಶವನ್ನು ಉಲ್ಲಂಘನೆ ಮಾಡಿದರೆ 1 ಕೋಟಿ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

    ರಾಜ್ಯ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಅಮಿತ್‌ ಮೋಹನ್‌ ಈ ನಿರ್ಧಾರವನ್ನು ತಿಳಿಸಿದ್ದು, ಯಾರಾದರೂ ಸ್ನಾತಕೋತ್ತರ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದರೆ ಮೂರು ವರ್ಷ ಅವರನ್ನು ಪಿಜಿ ಶಿಕ್ಷಣದಿಂದ ಡಿಬಾರ್‌ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ಓದಿದ ಮೆಡಿಕಲ್‌ ವಿದ್ಯಾರ್ಥಿಗಳು 2 ವರ್ಷ ಕಾಲ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವಂತೆ 2018ರಲ್ಲಿ ಮಾರ್ಗಸೂಚಿ ಪ್ರಕಟಿಸಿತ್ತು. ಈ ಮಾರ್ಗಸೂಚಿಯನ್ನು ಉಲ್ಲಂಘನೆ ನಡೆದರೆ ಎಂಬಿಬಿಎಸ್‌/ಬಿಡಿಎಸ್‌ ವಿದ್ಯಾರ್ಥಿಗಳಿಗೆ 10 ಲಕ್ಷ, ಎಂಡಿ/ ಎಂಎಸ್‌ ವಿದ್ಯಾರ್ಥಿಗಳಿಗೆ 40 ಲಕ್ಷ, ಪಿಜಿ ಡಿಪ್ಲೋಮಾ/ಎಂಡಿಎಸ್‌ ವಿದ್ಯಾರ್ಥಿಗಳು 20 ಲಕ್ಷ ದಂಡವನ್ನು ಪಾವತಿಸಬೇಕಿತ್ತು.

    ಕೇಂದ್ರ ಸರ್ಕಾರದ ನಿಯಮದ ಅನ್ವಯ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಪಡೆದ ಡಿಗ್ರಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವೈದ್ಯ ಸೇವೆಗೆ ಸೇರುವ ಮೊದಲು 1 ವರ್ಷ ಗ್ರಾಮೀಣ ಭಾಗದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಕಡ್ಡಾಯ ಮಾಡಲಾಗಿದೆ.

    ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರತೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಎಂಬಿಬಿಎಸ್‌ ಓದಿದ ವಿದ್ಯಾರ್ಥಿಗಳು ಸರ್ಕಾರಿ ಸೇವೆಗೆ ಹಾಜರಾಗಾದೇ ದಂಡವನ್ನು ಪಾವತಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪ್ರವೇಶ ಪಡೆಯುವುದಕ್ಕೆ ಮುನ್ನವೇ ಗ್ರಾಮೀಣ ಭಾಗದಲ್ಲಿ ಸೇವೆ ಮಾಡುತ್ತೇನೆ ಎಂದು ಬಾಂಡ್‌ಗೆ ಸಹಿ ಹಾಕಿದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ನೀಡಲಾಗುತ್ತದೆ.