– 2 ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ ಯುವ ವೈದ್ಯ
– ಸಾವನ್ನು ಕಣ್ಣಾರೆ ನೊಡಲಾಗದೆ ನೊಂದು ಆತ್ಮಹತ್ಯೆ
ನವದೆಹಲಿ: ನಿತ್ಯ ಕೊರೊನಾ ರೋಗಿಗಳಿಗೆ ತಮ್ಮ ಶಕ್ತಿಯನ್ನೂ ಮೀರಿ ಸಹಾಯ ಮಾಡುವ ಮೂಲಕ ಸೋಂಕಿತರ ಜೀವವನ್ನು ಉಳಿಸುತ್ತಿದ್ದರು. ಆದರೂ ಹಲವು ಜನ ಕೊರೊನಾಗೆ ಬಲಿಯಾಗಿದ್ದಾರೆ. ನಿತ್ಯ ನೂರಾರು ಜನ ಕೊರೊನಾಗೆ ಬಲಿಯಾಗುತ್ತಿರುವುದನ್ನು ಕಂಡು, ಬೇಸತ್ತು ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.
ಈ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಾಜಿ ಮುಖ್ಯಸ್ಥ ಡಾ.ರವಿ ವಾಂಖೇಡ್ಕರ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಡಾ.ವಿವೇಕ್ ರೈ ಅದ್ಭುತ ವೈದ್ಯರಾಗಿದ್ದರು. ಉತ್ತರ ಪ್ರದೇಶದ ಗೋರಖ್‍ಪುರ ನಿವಾಸಿಯಾಗಿದ್ದರು. ಕೊರೊನಾ ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿ ನೂರಾರು ಜನರ ಪ್ರಾಣ ಉಳಿಸಿದ್ದರು. ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೊರೊನಾದಿಂದಾಗಿ ಹೆಚ್ಚು ಜನ ಪ್ರಾಣ ಬಿಡುತ್ತಿರುವುದನ್ನು ಕಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡಾ.ವಾಂಖೇಡ್ಕರ್ ತಿಳಿಸಿದ್ದಾರೆ.
ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಕಣ್ಣೆದುರೇ ಸಾಯುತ್ತಿರುವ ಜನರ ನೋವು ಹಾಗೂ ಭಾವನೆಗಳೊಂದಿಗೆ ಜೀವಿಸುವುದಕ್ಕಿಂತ ಸಾಯುವುದೇ ಮೇಲೆಂದು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ ಎಂದು ಡಾ.ವಾಂಖೆಡ್ಕರ್ ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟು ನಿರ್ವಹಿಸುವಾಗ ಭಾವನಾತ್ಮಕ ಒತ್ತಡಗಳು ಎದುರಾಗುತ್ತವೆ. ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿಯೇ ಯುವ ವೈದ್ಯ ಸಾವನ್ನಪ್ಪಿದ್ದಾರೆ. ಇದು ಕೊಲೆಗಿಂತ ಕಡಿಮೆ ಏನಲ್ಲ. ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ ಹಾಗೂ ಕೆಟ್ಟ ಆಡಳಿತ ಎಂದು ಐಎಂಎ ಮಾಜಿ ಅಧ್ಯಕ್ಷರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ದೆಹಲಿಯ ಮಾಳ್ವಿಯಾ ನಗರ ಠಾಣೆಯ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೈದ್ಯರು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ದೆಹಲಿ ಸ್ಥಿತಿ ಇನ್ನೂ ಗಂಭೀರವಾಗಿದೆ. ಆಕ್ಸಿನ್, ಐಸಿಯು ಬೆಡ್ ಸಿಗದೆ ಹಲವರು ಪ್ರಾಣ ಬಿಡುತ್ತಿದ್ದಾರೆ. ಇದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ.