Tag: doctor

  • ಹಾಡಹಗಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಬರ್ಬರವಾಗಿ ಕೊಂದ್ರು!

    ಹಾಡಹಗಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಬರ್ಬರವಾಗಿ ಕೊಂದ್ರು!

    ಜೈಪುರ: ಹಾಡಹಗಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ರಾಜಸ್ಥಾನದ ಭರತ್ ಪುರ್ ನಲ್ಲಿ ನಡೆದಿದೆ.

    ಹೌದು. ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ನಡುರಸ್ತೆಯಲ್ಲಿಯೇ ಈ ಕೃತ್ಯ ಎಸಗಲಾಗಿದೆ.

    ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ನಡುರಸ್ತೆಯಲ್ಲಿಯೇ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ಅಲ್ಲದೆ ಕಿರಾತಕರು ವೈದ್ಯರಿದ್ದ ಕಾರಿನತ್ತ ತೆರಳಿದ್ದಾರೆ. ಇತ್ತ ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ ದಂಪತಿ ಕಾರಿನ ಕಿಟಿಕಿ ಗ್ಲಾಸ್ ಕೆಳಗೆ ಮಾಡಿ ನೋಡುತ್ತಿದ್ದಂತೆಯೇ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

    ದಂಪತಿ ಸಾವನ್ನಪ್ಪಿರುವುದು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ದುಷ್ಕರ್ಮಿಗಳು ಮತ್ತೆ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾರೆ. ಈ ಬೆಚ್ಚಿ ಬೀಳಿಸಿರುವ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮೇಲ್ನೋಟಕ್ಕೆ ಇದೊಂದು ಸೇಡು ತೀರಿಸಿಕೊಳ್ಳುವ ಸಲುವಾಗಿ ನಡೆದ ಕೊಲೆಯೆಂದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಯಾಕೆಂದರೆ ಎರಡು ವರ್ಷಗಳ ಹಿಂದೆ ಯುವತಿಯೊಬ್ಬಳ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ದಂಪತಿ ಭಾಗಿಯಾಗಿರುವ ಆರೋಪವಿದೆ. ಅಲ್ಲದೆ ಆ ಯುವತಿ ವೈದ್ಯರೊಂದಿಗೆ ಸಂಬಂಧದಲ್ಲಿದ್ದಳು ಎಂಬುದಾಗಿ ತಿಳಿದುಬಂದಿದೆ.

    ಸದ್ಯ ದಂಪತಿಯನ್ನು ಕೊಲೆ ಮಾಡಿರುವ ವ್ಯಕ್ತಿಯನ್ನು ಯುವತಿ ಸಹೋದರ ಎಂದು ಗುರುತಿಸಲಾಗಿದೆ.

  • ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ

    ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ

    ತುಮಕೂರು: ಜಿಲ್ಲೆಯಲ್ಲಿ ಕೊರೊನಾಗೆ ಸರ್ಕಾರಿ ವೈದ್ಯನ ಮೊದಲ ಬಲಿಯಾಗಿದೆ. ಊರ್ಡಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮಂಜುನಾಥ್ (45) ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

    ಕಳೆದ ಒಂದು ವಾರದ ಹಿಂದೆ ಪಾಸಿಟಿವ್ ಬಂದಿತ್ತು. ತುಮಕೂರು ನಗರದ ಆದರ್ಶ ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ಪಡೆದಿದ್ದರೂ, ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಮೂರು ದಿನದ ಹಿಂದೆ ಸಿದ್ದಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮೊದಲೇ ಬಿಪಿ, ಶುಗರ್ ನಿಂದ ಬಳಲುತಿದ್ದ ಡಾ.ಮಂಜುನಾಥ್ ಗೆ ಕೋವಿಡ್ ಇನ್ನಷ್ಟು ಸಂಕಷ್ಟ ತಂದೊಡ್ಡಿ ಆರೋಗ್ಯ ಬಿಗಡಾಯಿಸಿತು. ಪರಿಣಾಮ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    ವ್ಯಾಕ್ಸಿನ್ ತೆಗೆದುಕೊಳ್ಳುವಲ್ಲಿ ಡಾ.ಮಂಜುನಾಥ್ ಅಸಡ್ಡೆ ತೋರಿದ್ದರು ಎನ್ನಲಾಗಿದೆ. ಆರೋಗ್ಯ ಇಲಾಖೆಯ ಪ್ರತಿಯೊಬ್ಬರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂಬ ಆದೇಶ ಇದ್ದರೂ, ಇವರು ಒಂದೂ ಡೋಸ್ ನ್ನು ತೆಗೆದುಕೊಂಡಿಲ್ಲ. ವ್ಯಾಕ್ಸಿನ್ ತೆಗೆದುಕೊಂಡಿದ್ದರೆ ಜೀವಕ್ಕೆ ಅಪಾಯವಾಗುತ್ತಿರಲಿಲ್ಲ ಎನ್ನಲಾಗಿದೆ.

    ಡಾ.ಮಂಜುನಾಥ್ ಅವಿವಾಹಿತರಾಗಿದ್ದು, ಒಂಟಿಯಾಗಿ ವಾಸವಿದ್ದರು ಎನ್ನಲಾಗಿದೆ. ಇವರಿಗೆ ವ್ಯಾಕ್ಸಿನ್ ಬಗ್ಗೆ ನಂಬಿಕೆ ಇರಲಿಲ್ಲ. ಕೋವಿಡ್ ಬಂದರೂ ನಾನು ಜಯಿಸುತ್ತೇನೆ ಎನ್ನುತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಅಪಘಾತಕ್ಕೀಡಾಗಿ ಗಾಯಗೊಂಡ ವೈದ್ಯ – ಕಾರಿನಿಂದ ಇಳಿಯದೆ ಅಮಾನವೀಯತೆ ತೋರಿದ ಬಿಜೆಪಿ ಶಾಸಕ

    ಅಪಘಾತಕ್ಕೀಡಾಗಿ ಗಾಯಗೊಂಡ ವೈದ್ಯ – ಕಾರಿನಿಂದ ಇಳಿಯದೆ ಅಮಾನವೀಯತೆ ತೋರಿದ ಬಿಜೆಪಿ ಶಾಸಕ

    – ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ವೈದ್ಯ ಸಾವು

    ಚಿಕ್ಕಮಗಳೂರು: ಅಪಘಾತದಿಂದ ರಸ್ತೆ ಬದಿಯಲ್ಲೇ ವೈದ್ಯರೊಬ್ಬರು ನರಳಾಡಿದರೂ ಕಾರಿನಿಂದ ಕೆಳಗಿಳಿಯದೆ ಬಿಜೆಪಿ ಶಾಸಕರೊಬ್ಬರು ಅಮಾನವೀಯತೆ ತೋರಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರಿಂದ ವೈದ್ಯ ಡಾ. ರಮೇಶ್ ಪ್ರಾಣಬಿಟ್ಟಿದ್ದಾರೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಈ ವೇಳೆ ಶಾಸಕ ಡಿ ಎಸ್ ಸುರೇಶ್ ಅವರು ಅದೇ ದಾರಿಯಲ್ಲಿ ಲಕ್ಕವಳ್ಳಿಯಿಂದ ತರೀಕೆರೆಗೆ ಬರ್ತಿದ್ದರು. ಅಪಘಾತ ಕಂಡ ಶಾಸಕರು, ಇನ್ನೋವಾ ಕಾರಿನಲ್ಲೇ ಕೂತು ನೋಡಿದ್ದಾರೆ. ಬಳಿಕ ಶಾಸಕರ ಗನ್‍ಮ್ಯಾನ್ ಅಂಬುಲೆನ್ಸ್ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಬರೋವರೆಗೂ ಶಾಸಕರು ಮಾತ್ರ ಕಾರಿನಲ್ಲೇ ಕುಳಿತಿದ್ದು, ವೈದ್ಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಉಡಾಫೆ ತೋರಿದ್ದಾರೆ.

    ಘಟನೆ ನಡೆದು 20 ನಿಮಿಷದ ಬಳಿಕ ಗಾಯಾಳು ವೈದ್ಯರನ್ನು ಅಂಬುಲೆನ್ಸ್ ನಲ್ಲಿ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೀಗಾಗಿ ತಡವಾಗಿದ್ದರಿಂದ ರಸ್ತೆ ಮಧ್ಯೆಯೇ ಡಾ. ರಮೇಶ್ ಪ್ರಾಣ ಬಿಟ್ಟಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದ ಶಾಸಕರು ಕಾರಲ್ಲಿ ಕರೆದುಕೊಂಡು ಹೋಗಿದ್ದರೆ ವೈದ್ಯರ ಪ್ರಾಣ ಉಳಿಯುತ್ತಿತ್ತು. ಯಾಕಂದರೆ ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಕಾರಲ್ಲಿ ಮೂರ್ನಾಲ್ಕು ನಿಮಿಷದ ದಾರಿ ಅಷ್ಟೆ ಇತ್ತು.

    ಒಟ್ಟಿನಲ್ಲಿ ಅಮಾನವೀಯತೆ ತೋರಿದ್ದರಿಂದ ಶಾಸಕರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  • ಕೋವಿಡ್ ನಿಯಮ ಪಾಲಿಸದ ನರ್ಸಿಂಗ್ ಹೋಂ ವೈದ್ಯರಿಗೆ ಡಿಸಿ ನೋಟಿಸ್

    ಕೋವಿಡ್ ನಿಯಮ ಪಾಲಿಸದ ನರ್ಸಿಂಗ್ ಹೋಂ ವೈದ್ಯರಿಗೆ ಡಿಸಿ ನೋಟಿಸ್

    ಚಾಮರಾಜನಗರ: ಕೋವಿಡ್ ನಿಯಮ ಪಾಲಿಸದ ನರ್ಸಿಂಗ್ ಹೋಂವೈದ್ಯರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

    ಹನೂರು ತಾಲೂಕಿನ ಭಾರತಿ ನರ್ಸಿಂಗ್ ಹೋಂ ವೈದ್ಯ ಡಾ. ಪ್ರಕಾಶ್ ಹಾಗೂ ಸ್ನೇಹ ನರ್ಸಿಂಗ್ ಹೋಂನ ಡಾ. ಮಂಜುನಾಥ್ ಕೊರೊನಾ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೋವಿಡ್ ನಿಯಮ, ಮಾರ್ಗಸೂಚಿ ಪಾಲಿಸದ ಹಾಗೂ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ಬಂದವರ ಐಎಲ್‍ಐ, ಸಾರಿ ಪ್ರಕರಣಗಳ ಪರಿಶೀಲನೆ ನಡೆಸಿ ಕೋವಿಡ್ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎರಡು ನಸಿರ್ಂಗ್ ಹೋಂ ವೈದ್ಯರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

    ವೈದ್ಯರು ಕೋವಿಡ್-19 ನಿಯಮ ಮತ್ತು ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸದೇ ಇರುವುದು, ಜೊತೆಗೆ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಸುತ್ತಿರಲಿಲ್ಲ ಎನ್ನಲಾಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಿದ್ದರು. ಆದರೂ, ಕೋವಿಡ್ ನಿಯಮ ಪಾಲಿಸದಿದ್ದರಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, ಸೂಕ್ತ ಸಮಜಾಯಿಷಿ ಕೊಡದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

  • ಕೊರೊನಾ ಸೋಂಕಿಗೆ ಬಳ್ಳಾರಿಯ ವೈದ್ಯ ಬಲಿ

    ಕೊರೊನಾ ಸೋಂಕಿಗೆ ಬಳ್ಳಾರಿಯ ವೈದ್ಯ ಬಲಿ

    ಬಳ್ಳಾರಿ: ಕೊರೊನಾ ಮಹಾ ಮಾರಿ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದ್ದು, ಸೋಂಕಿಗೆ ವೈದ್ಯ ಬಲಿಯಾಗಿದ್ದಾರೆ. ಕರೋನಾ ಸೋಂಕಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ಸಾವಿಗೀಡಾಗಿದ್ದಾರೆ.

    ವಿಜಯ ಶಂಕರ್ (52) ಮೃತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಮ್ಸ್ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಒಂದು ವಾರದಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೈದ್ಯರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

    ಫ್ರೆಂಟ್ ಲೈನ್ ವಾರಿಯಾರ ಆದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಎರಡೂ ಡೋಜ್ ವ್ಯಾಕ್ಸಿನ್ ಸಹ ಪಡೆದಿದ್ದರು. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಕಿಡ್ನಿ ಕಸಿ ಮಾಡಿಸಿಕೊಂಡಿದ್ದು, ವೈದ್ಯರು ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದ ಸಾವಿಗೀಡಾಗಿದ್ದಾರೆ.

  • ಪಬ್ಲಿಕ್ ಹೀರೋ, ಹಿರಿಯ ವೈದ್ಯ ಅಶೋಕ್ ಸೊನ್ನದ್ ಕೊರೊನಾಗೆ ಬಲಿ

    ಪಬ್ಲಿಕ್ ಹೀರೋ, ಹಿರಿಯ ವೈದ್ಯ ಅಶೋಕ್ ಸೊನ್ನದ್ ಕೊರೊನಾಗೆ ಬಲಿ

    ಬಾಗಲಕೋಟೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ನಿಸ್ವಾರ್ಥ ಸೇವೆಗೈದು ಪಬ್ಲಿಕ್ ಹೀರೋ ಆಗಿದ್ದ ಹಿರಿಯ ವೈದ್ಯ ಅಶೋಕ್ ಸೊನ್ನದ ಕೊರೊನಾಗೆ ಬಲಿಯಾಗಿದ್ದಾರೆ.

    ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಂಟನೂರು ಗ್ರಾಮದವರಾದ ಡಾ.ಅಶೋಕ್ ಸೊನ್ನದ್ ತಮ್ಮ ನಿಸ್ಚಾರ್ಥ ಸೇವೆಯಿಂದಲೇ ಗುರುತಿಸಿಕೊಂಡವರು. ಸಕ್ಕರೆ ಕಾಯಿಲೆ ಹಾಗೂ ಕ್ಲಿಷ್ಟ ಹುಣ್ಣು ರೋಗಕ್ಕೆ ಉಚಿತ ಚಿಕಿತ್ಸೆ ನೀಡಿ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಅಮೆರಿಕಾದಲ್ಲೇ ನೆಲೆಸಿರುವ ತಮ್ಮ ಕಟುಂಬದೊಂದಿಗೆ ಇರೋದನ್ನ ಬಿಟ್ಟು ತಾಯ್ನಾಡಿಗೆ ಬಂದು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದರು.

    ಡಾ. ಅಶೋಕ್ ಸೊನ್ನದ್ ತಮ್ಮ ತಾಯಿಯವರಾದ ಪಾರ್ವತಿಬಾಯಿ ಹೆಸರಲ್ಲಿ ಆಸ್ಪತ್ರೆ ತೆರೆದು, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಇಡೀ ಕುಟುಂಬವನ್ನ ಅಮೆರಿಕಾದಲ್ಲೇ ಬಿಟ್ಟು ಬಂದು, ಇಲ್ಲಿಯ ಜನರಿಗೆ ಆರೋಗ್ಯ ಸೇವೆ ಮಾಡುವಲ್ಲಿ ಖುಷಿ ಕಂಡಿದ್ರು. ಕಳೆದ ಒಂದು ವಾರದ ಹಿಂದೆ ಡಾ.ಸೊನ್ನದ್ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು, ಬೆಳಾಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಸೊನ್ನದ್ ಅವರು ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಅಲ್ಲದೇ ಡಾ ಅಶೋಕ್ ಸೊನ್ನದ ಅವರ ಮನೆಯಲ್ಲಿ 7 ಜನ ಗೌರವ ಡಾಕ್ಟರೇಟ್ ಪಡೆದದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಅಲ್ಲದೇ ನಿಸ್ವಾರ್ಥ ಆರೋಗ್ಯ ಸೇವೆ ಸಲ್ಲಿಸುತ್ತಿದ್ದ ಡಾ ಅಶೋಕ್ ಸೊನ್ನದವರನ್ನ 2014 ರಲ್ಲಿ ಪಬ್ಲಿಕ್ ಹೀರೋ ಎಂದು ಗುರುತಿಸಿತ್ತು. ನಂತ್ರ 2020ರಲ್ಲಿ ಇವರ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಡಾ ಅಶೋಕ್ ಸೊನ್ನದ್ ಅವರ ನಿಸ್ವಾರ್ಥ ಸೇವೆ ಇಂದಿನ ಪೀಳಿಗೆಯ ವೈದ್ಯಲೋಕ್ಕೆ ಮಾದರಿಯಾಗಿದೆ.

  • ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    ಬ್ಲ್ಯಾಕ್ ಫಂಗಸ್‍ನಿಂದ ಕಣ್ಣು ಕಳೆದುಕೊಂಡ ವ್ಯಕ್ತಿ

    – ಕುಟುಂಬಸ್ಥರ ಅನುಮತಿ ಪಡೆದು ಆಪರೇಷನ್

    ಕಲಬುರಗಿ: ಕೊರೊನಾದಿಂದ ತತ್ತರಿಸಿದ ಕಲಬುರಗಿಯಲ್ಲಿ ಇದೀಗ ಬ್ಲ್ಯಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಬ್ಲ್ಯಾಕ್ ಫಂಗಸ್‍ಗೇ ಗುರಿಯಾಗಿದ ವ್ಯಕ್ತಿಯೊಬ್ಬರ ಬಲಗಣ್ಣು ತೆಗೆದು ವೈದ್ಯರು ಅವರ ಜೀವ ಉಳಿಸಿದ್ದಾರೆ.

    ಕಲಬುರಗಿಯ ನಿವಾಸಿಯಾದ ಅನಿಲ್ ಕುಮಾರ್ ಅವರಿಗೆ 8 ದಿನಗಳ ಹಿಂದೆ ಬಲಗಣ್ಣಿನ ಬಳಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಆದಾದ ಬಳಿಕ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ಅವರ ಸಂಬಂಧಿಕರು ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ನಂತರ ಆತನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಔಷಧಿ ಮೂಲಕ ಬ್ಲ್ಯಾಕ್ ಫಂಗಸ್ ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಸಿದ್ದಾರೆ. ಆದರೆ ಎಷ್ಟೇ ಔಷಧಿ ಇಂಜಕ್ಷನ್ ನೀಡಿದರೂ, ಬ್ಲ್ಯಾಕ್ ಫಂಗಸ್ ಮಾತ್ರ ಕಡಿಮೆಯಾಗಲಿಲ್ಲ.

    ಯಾವ ಔಷಧಿ ನೀಡಿದರೂ ಅನಿಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ, ಕುಟುಂಬಸ್ಥರ ಜೊತೆ ಚರ್ಚಿಸಿ ಬ್ಲ್ಯಾಕ್ ಫಂಗಸ್ ಆಗಿರುವ ಬಲಗಣ್ಣು ತೆಗೆದರೆ ಮಾತ್ರ ಇವರು ಉಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಮೆದುಳಿಗೂ ಸಹ ಇದು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಹೀಗಾಗಿ ಕುಟುಂಬಸ್ಥರ ಅನುಮತಿ ಪಡೆದು ಬ್ಲ್ಯಾಕ್‍ಫಂಗಸ್ ಆದ ಬಲಗಣ್ಣನ್ನು ಆಪರೇಷನ್ ಮಾಡಿ ವೈದ್ಯರು ತೆಗೆದಿದ್ದಾರೆ. ಇದೀಗ ಅನಿಲ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

  • ಕೊರೊನಾ ನಿಯಂತ್ರಣ ಅಭಿಯಾನ- ಧರ್ಮ ಪ್ರಚಾರ ಮಾಡಿದ ಡಾಕ್ಟರ್

    ಕೊರೊನಾ ನಿಯಂತ್ರಣ ಅಭಿಯಾನ- ಧರ್ಮ ಪ್ರಚಾರ ಮಾಡಿದ ಡಾಕ್ಟರ್

    ಭೋಪಾಲ್: ಗುತ್ತಿಗೆ ಮಹಿಳಾ ವೈದ್ಯೆಯೊಬ್ಬರು, ಕೊರೊನಾವೈರಸ್ ಸೋಂಕಿನಿಂದ ದೂರವಿರಲು, ಸಾಂಕ್ರಾಮಿಕದಿಂದ ಗುಣಮುಖರಾಗಲು ನಿರ್ದಿಷ್ಠ ಧರ್ಮವೊಂದರ ದೇವರನ್ನು ಪೂಜಿಸುವಂತೆ ಜನರಿಗೆ ಹೇಳುತ್ತಾ ಧರ್ಮ ಪ್ರಚಾರ ಮಾಡಿರುವ ಡಾಕ್ಟರ್ ವೀಡಿಯೋ ವೈರಲ್ ಆಗಿದೆ.

    ರಾಟ್ಲಾಂ ಜಿಲ್ಲೆಯ ಭಜ್ನಾ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಅಭಿಯಾನ ವೇಳೆ ಸರ್ಕಾರದ ಗುತ್ತಿಗೆ ವೈದ್ಯೆಯೊಬ್ಬರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಚಾರ ಮಾಡುತ್ತಿದ್ದ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಧಾರ್ಮಿಕ ಕರಪತ್ರಗಳು ಕೂಡಾ ಆ ಮಹಿಳೆ ಬಳಿ ಪತ್ತೆಯಾಗಿವೆ. ವರದಿ ತಯಾರಿಸಿ, ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಬಿಎಸ್ ಠಾಕೂರ್ ಹೇಳಿದ್ದಾರೆ.

    ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ವ್ಯಕ್ತಿಯೊಂದಿಗೆ ಮಾಸ್ಕ್ ಧರಿಸಿರುವ ಮಹಿಳಾ ಡಾಕ್ಟರ್ ಮಾತನಾಡುವ ದೃಶ್ಯ ವೀಡಿಯೋದಲ್ಲಿದೆ. ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗುವುದಾಗಿ ಏಕೆ ಜನರಿಗೆ ಹೇಳುತ್ತಿದ್ದೀರಿ? ತಮ್ಮ ಸ್ವಂತ ಧರ್ಮದ ಪ್ರಾರ್ಥನೆ ಮಾಡುವಂತೆ ಜನರಿಗೆ ಏಕೆ ಹೇಳುತ್ತಿಲ್ಲ? ಎಂದು ಕೇಳುತ್ತಾನೆ. ಆದಕ್ಕೆ ಪ್ರತಿಕ್ರಿಯಿಸುವ ಆ ಮಹಿಳೆ, ಯೇಸುವನ್ನು ಪ್ರಾರ್ಥಿಸುವುದರಿಂದ ಗುಣಮುಖರಾಗಿದ್ದಾಗಿ ಜನರು ಹೇಳುತ್ತಿರುವುದನ್ನು ಕೇಳಿದ್ದಾಗಿ ಹೇಳುವುದು ವಿಡಿಯೋದಲ್ಲಿದೆ.

    ಈ ವಿಡಿಯೋವನ್ನು ಕೆಲ ಬಿಜೆಪಿ ಮುಖಂಡರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ತನಿಖೆ ನಂತರ ಕೇಸ್ ದಾಖಲಿಸಲಾಗುವುದು ಎಂದು ಭಜ್ನಾ ಪೊಲೀಸ್ ಠಾಣೆ ಉಸ್ತುವಾರಿ ದಿಲೀಪ್ ರಾಜೊರಿಯಾ ಹೇಳಿದ್ದಾರೆ. ಈವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

  • ಪುತ್ರನನ್ನು ಕಳೆದುಕೊಂಡ ತಂದೆ-1 ಕೋಟಿ ಪರಿಹಾರ ಕೊಟ್ಟ ಕೇಜ್ರಿವಾಲ್

    ಪುತ್ರನನ್ನು ಕಳೆದುಕೊಂಡ ತಂದೆ-1 ಕೋಟಿ ಪರಿಹಾರ ಕೊಟ್ಟ ಕೇಜ್ರಿವಾಲ್

    ನವದೆಹಲಿ: ಕೊರೊನಾ ವಾರಿಯರ್ ಆಗಿರುವ ವೈದ್ಯರೊಬ್ಬರು ಕೋವಿಡ್‍ಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬರೋಬ್ಬರಿ 1ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ಕೊಟ್ಟಿದ್ದಾರೆ.

    ಡಾ. ಅನಾಸ್(26) ಮೃತ ವೈದ್ಯರಾಗಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಅರವಿಂದ ಕೇಜ್ರಿವಾಲ್ ಅವರು ಸಹಾಯವನ್ನು ಮಾಡಿದ್ದಾರೆ.

    ಮೃತ ಡಾ. ಅನಾಸ್ ಅವರ ಮನೆಗೆ ಭೇಟಿನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 1 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದ್ದಾರೆ. ನನ್ನ ಪುತ್ರ ಕರ್ತವ್ಯದ ಮೇಲಿದ್ದು, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳು ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ ಎಂದು ಅನಾಸ್ ಅವರ ತಂದೆ ಹೇಳಿದ್ದಾರೆ.

  • ಖಾಸಗಿ ವೈದ್ಯರು ಗ್ರಾಮ ದತ್ತು ಸ್ವೀಕರಿಸಿ, ಕೊರೊನಾ ನಿಯಂತ್ರಿಸಬಹುದು- ದಾವಣಗೆರೆ ಡಿಸಿ ಮನವಿ

    ಖಾಸಗಿ ವೈದ್ಯರು ಗ್ರಾಮ ದತ್ತು ಸ್ವೀಕರಿಸಿ, ಕೊರೊನಾ ನಿಯಂತ್ರಿಸಬಹುದು- ದಾವಣಗೆರೆ ಡಿಸಿ ಮನವಿ

    ದಾವಣಗೆರೆ: ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಅತಿ ವೇಗವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಸಗಿ ವೈದ್ಯರು ಗ್ರಾಮ ದತ್ತು ಪಡೆಯಬೇಕು. ಸತತ 10 ದಿನಗಳ ಕಾಲ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ, ರೋಗಪತ್ತೆ, ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ ಮಾಡಿದರು.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿನ 2ನೇ ಅಲೆ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅನೇಕರು ನಮ್ಮ ಕಣ್ಣಮುಂದೆಯೇ ಮರೆಯಾಗುತ್ತಿದ್ದಾರೆ. ಸದ್ದಿಲ್ಲದೆ ಸೋಂಕು, ಬಡವರು, ಶ್ರೀಮಂತರು, ನಿರ್ಗತಿಕರು ಎನ್ನದೆ ಬಹಳಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ದಾವಣಗೆರೆಯ ಶೇ.70ರಷ್ಟು ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಅಲ್ಲಿನ ಜನರಿಗೆ ಸರಿಯಾದ ಮಾರ್ಗದರ್ಶನ, ಜಾಗೃತಿ ಹಾಗೂ ಚಿಕಿತ್ಸೆ ಸಿಗದೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ವೈದ್ಯರು ಒಂದೊಂದು ಗ್ರಾಮವನ್ನು ದತ್ತು ಪಡೆದು ಚಿಕಿತ್ಸೆ ನೀಡಬೇಕು ಎಂದರು.

    ಈ ಹಿಂದೆ ಸಂಭವಿಸಿದ ಲಾತೂರ್ ಭೂಕಂಪ, ಕಂಡು ಕೇಳರಿಯದ ಪ್ರವಾಹ, ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾದ ಭೂಕುಸಿತ ಸಂದರ್ಭಗಳಲ್ಲಿ ಜಿಲ್ಲೆಯ ಖಾಸಗಿ ವೈದ್ಯರ ತಂಡ, ದುರಂತ ಸ್ಥಳಗಳಿಗೆ ತೆರಳಿ, ಜನರ ಪ್ರಾಣ ರಕ್ಷಣೆ ಮಾಡಿದ ನಿದರ್ಶನವಿದೆ. ಹೀಗಾಗಿ ಜಿಲ್ಲೆಯ ವೈದ್ಯರ ಬಗ್ಗೆ ನಮಗೆ ಹೆಮ್ಮೆ ಇದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಮಗಳಲ್ಲಿ ವೇಗವಾಗಿ ವ್ಯಾಪಿಸುತ್ತಿದೆ, ಜಿಲ್ಲೆ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ತಿಳಿಸಿದರು.

    ಲಾಕ್‍ಡೌನ್ ಪರಿಣಾಮವಾಗಿ ನಗರ, ಪಟ್ಟಣಗಳಿಂದ ಗ್ರಾಮಗಳಿಗೆ ಹಿಂದಿರುಗಿದ ಜನರಿಂದ ಸೋಂಕು ವ್ಯಾಪಕವಾಗುತ್ತಿದೆ. ಗ್ರಾಮಗಳಲ್ಲಿ ರೋಗದ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಜನರು ತಪ್ಪು ಕಲ್ಪನೆ ಹಾಗೂ ಭೀತಿಯಿಂದ ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳದೆ, ರೋಗ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರು ರೋಗವನ್ನು ಬೇರೆಯವರಿಗೆ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಶೇ.70ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತಿವೆ. ಹೀಗಾಗಿ ಕೋವಿಡ್ ಸೋಂಕಿನ ಕುರಿತು ಗ್ರಾಮೀಣ ಜನರಲ್ಲಿ ಸರಿಯಾದ ತಿಳುವಳಿಕೆ, ಅರಿವು ಮೂಡಿಸಬೇಕಿದೆ, ಇದರ ಜೊತೆಗೆ ಅವರಲ್ಲಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಚಿಕಿತ್ಸೆಯ ಬಗ್ಗೆ ಹಾಗೂ ಸರ್ಕಾರ ನಿಮ್ಮೊಂದಿಗಿದೆ ಎನ್ನುವ ವಿಶ್ವಾಸವನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.

    ಗ್ರಾಮಗಳು ಉಳಿದರೆ, ಇಡೀ ದೇಶ ಉಳಿದಂತೆ. ಯಾವುದೇ ಗ್ರಾಮದಲ್ಲಿ 15 ರಿಂದ 20 ಜನರಲ್ಲಿ ಸೋಂಕು ಇರುವುದು ದೃಢಪಟ್ಟಲ್ಲಿ ಆಯಾ ಗ್ರಾಮದ ಶಾಲೆ ಅಥವಾ ಸಮುದಾಯ ಭವನದಲ್ಲಿಯೇ ಕೋವಿಡ್ ಕೇರ್ ಸೆಂಟರ್ ತೆರೆದು, ಸೋಂಕಿತರಿಗೆ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲಾಡಳಿತ ಸಿದ್ಧವಿದೆ. ಅದ್ದರಿಂದ ಖಾಸಗಿ ವೈದ್ಯರು ಕನಿಷ್ಟ 2 ತಿಂಗಳು ಗ್ರಾಮಗಳ ದತ್ತು ಸ್ವೀಕರಿಸಬೇಕು. ಖಾಸಗಿ ಹಾಗೂ ಸರ್ಕಾರಿ ವೈದ್ಯರನ್ನು ಒಳಗೊಂಡ ನಿಯೋಜಿತ ತಂಡಗಳು ದತ್ತು ಸ್ವೀಕೃತ ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿನ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಮನವಿ ಮಾಡಿದರು.