ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದ ಮೂರು ತಿಂಗಳ ಗಂಡು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಕೋರೇನಹಳ್ಳಿ (Korenahalli) ಗ್ರಾಮದ ಗಂಗರಾಜು, ಸಂಧ್ಯಾ ದಂಪತಿಯ ಮೂರು ತಿಂಗಳ ಗಂಡು ಮಗು ಮೂತ್ರ ವಿಸರ್ಜನೆ ಸಮಸ್ಯೆ ಹಾಗೂ ಪದೇ, ಪದೇ ವಾಂತಿ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಚಿಕಿತ್ಸೆಗೆಂದು ಶನಿವಾರ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೃದಯ ಸಮಸ್ಯೆ ಇರಬಹುದು ಅಂತ ಜಯದೇವ ಆಸ್ಪತ್ರೆಗೆ (Jayadeva Hospital) ಕಳುಹಿಸಿ ಪರೀಕ್ಷೆಗಳನ್ನು ಮಾಡಿಸಿಕೊಂಡು ಬರಲು ತಿಳಿಸಿಲಾಗಿತ್ತು. ನಂತರ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ಬಳಿಕ ಹೃದಯ ಸಮಸ್ಯೆ ಇಲ್ಲ ಅಂತ ವರದಿ ಬಂದಿದೆ. ಆದರೆ ತದನಂತರ ತಡರಾತ್ರಿ ಸಹ ಮಗು ಅದೇ ರೀತಿ ವಾಂತಿ ಸಮಸ್ಯೆಯಿಂದ ಪುನಃ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: EDಗೆ ಕಿರುಕುಳ ಸಂಸ್ಥೆ ಎಂದು ಮರುನಾಮಕರಣ ಮಾಡಬೇಕು: ಡಿ.ಕೆ ಸುರೇಶ್

ಬೆಳಗ್ಗೆ ಚೆನ್ನಾಗಿಯೇ ಇದ್ದ ಮಗುವಿಗೆ ಯಾಕೆ ಪದೇ, ಪದೇ ವಾಂತಿ ಆಗುತ್ತಿದೆ ಎಂಬುದನ್ನು ಅರಿಯಲು ವೈದ್ಯರು ರಕ್ತ ಪರೀಕ್ಷೆಗೆ ಒಳಪಡಿಸಲು ತಿಳಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ದಾದಿ ರಕ್ತ ಸಂಗ್ರಹಣೆ ಮಾಡುವಾಗ ಮಗುವಿಗೆ ಏಕಾಏಕಿ ಮೂರ್ಛೆ ರೋಗದ ಲಕ್ಷಣಗಳು ಕಂಡು ಬಂದಿದೆ. ನಂತರ ದಿಢೀರನೇ ಹೃದಯ ಬಡಿತ ನಿಂತಿದ್ದು ಮಗು ಸಾವನ್ನಪ್ಪಿದೆ. ಇದರಿಂದ ಚೆನ್ನಾಗಿಯೇ ಇದ್ದ ಮಗು ರಕ್ತ ಸಂಗ್ರಹಣೆ ಮಾಡಿದ ಕಾರಣ ಸಾವನ್ನಪ್ಪಿದೆ. ಸರಿಯಾಗಿ ರಕ್ತ ತೆಗೆದುಕೊಂಡಿಲ್ಲ ಅಂತ ಪೋಷಕರು ದಾದಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಮಗು ಚೆನ್ನಾಗಿತ್ತು. ರಾತ್ರಿ ಸಿರಪ್ ಚಿಕಿತ್ಸೆ ಕೊಟ್ಟ ನಂತರ ಮೂತ್ರ ವಿಸರ್ಜನೆ ಆಗುತ್ತಿತ್ತು. ಡಿಸ್ಚಾರ್ಜ್ ಮಾಡುತ್ತೇವೆ ಅಂತ ಸಹ ವೈದ್ಯರು ಹೇಳಿದ್ದರು. ಆದರೆ ಈಗ ಏಕಾಏಕಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಾರದರ್ಶಕ ಪಕ್ಷ, ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ: ಸಲೀಂ ಅಹ್ಮದ್
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ರಾಜಾರೆಡ್ಡಿ, ಮಗುವಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪವಾಗಿಲ್ಲ. ಸಮಪರ್ಕವಾಗಿಯೇ ಚಿಕಿತ್ಸೆ ಕೊಡಲಾಗಿದೆ. ವೈದ್ಯರ ಸೂಚನೆ ಮೇರೆಗೆ ದಾದಿ ರಕ್ತ ಸಂಗ್ರಹಣೆ ಮಾಡಿದ್ದಾರೆ. ಆದರೆ ಮಗುವಿನ ಸಾವಿಗೆ ನಿಖರ ಕಾರಣ ಏನು ಎಂಬುದು ಅರಿಯಲು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ತಿಳಿಯಲಿದೆ ಎಂದು ತಿಳಿಸಿದ್ದಾರೆ.




















