ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ (Vijay Deverakonda) ನಡುವೆ ನಿಶ್ಚಿತಾರ್ಥವಾಗಿರುವ ವದಂತಿ ಇದೆ. ರಶ್ಮಿಕಾ ಕೈಯಲ್ಲಿರುವ ಉಂಗುರವೂ ಈ ವಿಚಾರಕ್ಕೆ ಸಾಕ್ಷಿ ಹೇಳುತ್ತಿದೆ. ಆದರೆ ಇಬ್ಬರೂ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಅಲ್ಲದೇ ಇಬ್ಬರೂ ಔಟಿಂಗ್ ಹೋದ್ರೂ ಒಟ್ಟಿಗೆ ಕಾಣಿಸಿಕೊಳ್ತಿಲ್ಲ. ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಮನೆಯಲ್ಲೇ ರಶ್ಮಿಕಾ ಮಂದಣ್ಣ (Rashmika Mandanna) ದೀಪಾವಳಿ ಹಬ್ಬ ಆಚರಿಸಿ ಸಿಕ್ಕಿಬಿದ್ದಿದ್ದಾರೆ.
ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಈ ಬಾರಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ಒಂದಷ್ಟು ಫೋಟೋ ಹಾಗೂ ವೀಡಿಯೋಗಳಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಿರುವುದು ಕಾಣುತ್ತಿದೆ. ಆದರೆ ದೃಶ್ಯದಲ್ಲೆಲ್ಲೂ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿಲ್ಲ. ವಿಶೇಷ ಅಂದ್ರೆ ರಶ್ಮಿಕಾ ಧ್ವನಿ ಮಾತ್ರ ಸ್ಪಷ್ಟವಾಗಿ ಕೇಳಿಸುತ್ತಿದೆ. ಪಟಾಕಿ ಸಿಡಿಯುವಾಗ ಎಲ್ಲರೂ ಜೋರಾಗಿ ನಕ್ಕಿರೋದನ್ನ ಫ್ಯಾನ್ಸ್ ಪತ್ತೆಹಚ್ಚಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ನಗು ಕ್ಲಿಯರ್ ಆಗಿ ಕೇಳಿಸುತ್ತಿದೆ. ಈ ವೀಡಿಯೋವನ್ನ ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ್ದಾರೆ.
ಅಫಿಷಿಯಲ್ ಅನೌನ್ಸ್ಮೆಂಟ್ ಆಗೋವರೆಗೂ ರಶ್ಮಿಕಾ ಹಾಗೂ ವಿಜಯ್ ತಮ್ಮ ಪ್ರೀತಿಯ ವಿಚಾರವನ್ನ ಗುಟ್ಟಾಗಿ ಇಡುವ ನಿರ್ಧಾರಕ್ಕೆ ಬಂದಂತಿದೆ. ಹೀಗಾಗಿ ಅಡ್ಡಗೋಡೆ ಮೇಲೆ ದೀಪವಿಡುವಂತೆ ವರ್ತಿಸುತ್ತಿರುತ್ತಾರೆ. ಇದೀಗ ವಿಜಯ್ ದೇವರಕೊಂಡ ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ರಶ್ಮಿಕಾ ಧ್ವನಿ ಇರುವುದನ್ನ ಕೇಳಿಸಿಕೊಂಡಿರುವ ಅಭಿಮಾನಿಗಳು ಕೂಡ ಅದನ್ನು ಗುರುತಿಸಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಕಣ್ಣಾಮುಚ್ಚಾಲೆ ಆಟವಂತೂ ಮುಂದುವರೆದಿದೆ.
ಕೈಯಲ್ಲಿ ಸುರ್‌ಸುರ್ ಬತ್ತಿ ಸುತ್ತಿಸುತ್ತ, ಕಾಲಿನಡಿ ‘ಕೃಷ್ಣನ ಚಕ್ರ’ ತಿರುಗಿಸುತ್ತಾ ಬೆಳಕಿನ ಚಿತ್ತಾರದಲ್ಲಿ ಕುಣಿದಾಡುವ ಕಲರ್‌ಫುಲ್ ದೀಪಾವಳಿ ಹಬ್ಬ (Deepavali Festival) ಆಚರಿಸೋದು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ? ಹಾಗೇ ಕಿವಿ ಗಡಚಿಕ್ಕುವಂತೆ ಶಬ್ಧ ಮಾಡುವ ಪಟಾಕಿ, ಆಕಾಶಕ್ಕೆ ಮಿಂಚು ಹೊಡೆದಂತೆ ಮಾಡುವ ಬಗೆ ಬಗೆಯ ರಾಕೆಟ್ ಹಾರಿಸೋದೇ ಒಂದು ಚೆಂದ. ಎಲ್ಲ ಸಮುದಾಯದ ಜನರೂ ಸಹ ಅಪ್ಪಿ.. ಒಪ್ಪಿ ಸ್ವಾಗತಿಸುವ ಈ ಹಬ್ಬಕ್ಕಾಗಿ ವರ್ಷದಿಂದ ಕಾಯುತ್ತಿರುತ್ತಾರೆ. ಈ ಹಬ್ಬಕ್ಕೆ ಇಂದು ತೆರೆ ಎಳೆಯುವ ಸಮಯ ಬಂದುಬಿಟ್ಟಿದೆ.
ದೀಪಾವಳಿ ಕತ್ತಲು ಸರಿಸಿ ಬೆಳಗುವ ಹಬ್ಬ ಮಾತ್ರವಲ್ಲ, ನಮ್ಮೊಳಗೂ ಬೆಳಕು ಹರಿವ ಧ್ಯೋತಕವೂ ಹೌದು. ದುಃಖ ದುಮ್ಮಾನಗಳನ್ನು ಸರಿಸಿ ಸಂತಸದ ಹಣತೆ ಹೊತ್ತಿಸುವ ದಿನವೇ ಈ ದೀಪಾವಳಿ.
ಹಬ್ಬದ ಆಚರಣೆ ಹಿಂದಿನ ಪುರಾಣಗಳೂ ಇದೇ ಸಾರವನ್ನ ಜಗತ್ತಿಗೆ ಸಾರಿವೆ. ಮನೆಯ ಮುಂದೆ ಹಚ್ಚಿಟ್ಟ ಸಾಲು ಸಾಲು ಹಣತೆಗಳು, ಬಾನಲ್ಲಿ ಬೆಳಕಿನ ಚಿತ್ತಾರ, ಒಮ್ಮೊಮ್ಮೆ ಬೆಚ್ಚಿಬೀಳಿಸುವ ಪಟಾಕಿ ಶದ್ಧ, ಹೊಸ ಬಟ್ಟೆ, ಸಿಹಿತಿನಿಸಿಗಳು… ದೀಪಾವಳಿ ಎಂದಾಕ್ಷಣ ಮನದಲ್ಲಿ ತೆರೆದುಕೊಳ್ಳುವ ಚಿತ್ರಗಳಿವು. ಆದ್ರೆ ಇವೆಲ್ಲದರೊಂದಿಗೆ ದೀಪಾವಳಿ ಶ್ರೇಷ್ಠ ಅನ್ನಿಸುವುದು ಅದರ ಆಚರಣೆ ಹಿಂದಿನ ಪುರಾಣಗಳಿಂದ, ಅವು ಸಾರಿರುವ ಸಂದೇಶಗಳಿಂದ. ಕತ್ತಲನ್ನು ಹೊಡೆದೋಡಿಸುವ ಸಂಕೇತವಾಗಿ ಆಚರಿಸುವ ದೀಪಾವಳಿ ಹಿಂದೆ ಹಲವು ಕಥೆಗಳಿವೆ. ಬೆಳಕಿನ ಈ ಹಬ್ಬಕ್ಕೆ ಪುರಾಣದ, ಸಂಪ್ರದಾಯ-ಸಂಸ್ಕೃತಿಯ ದೊಡ್ಡ ಹಿನ್ನೆಲೆಯೇ ಇದೆ.
ಹಲವು ಧರ್ಮಗಳಲ್ಲಿ ದೀಪಾವಳಿ ಆಚರಣೆ ನಡೆಯುತ್ತದೆ. ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು ಈ ಹಬ್ಬವನ್ನು ವಿವಿಧ ಕಾರಣಗಳಿಗೆ ಆಚರಿಸುತ್ತಾರೆ. ಹಿಂದೂಗಳ ಪ್ರಕಾರ, ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ರಾಮನಿಗೆ, ಊರಿನಲ್ಲಿ ಸಾಲು ದೀಪಗಳ ಸ್ವಾಗತ ನೀಡಿ, ಅಂದು ದೀಪಾವಳಿಯನ್ನು ಆಚರಿಸಲಾಯಿತು. ದುಷ್ಟಶಕ್ತಿ ಸಂಹಾರದ ಗುರುತಾಗಿ ಈ ಹಬ್ಬದ ಆಚರಣೆ ನಡೆಯಿತಂತೆ.
ಜೈನರಲ್ಲಿ, ಮಹಾವೀರರು ಮೋಕ್ಷ ಪಡೆದ ದಿನದ ಗುರುತಿಗೆ ಈ ದಿನ ಹಬ್ಬ ಆಚರಿಸುತ್ತಾರೆ. ಮಹಾವೀರರ ನಿರ್ವಾಣ ಸ್ಥಳವಾದ ಬಿಹಾರದ ಪಾವಾಪುರಿಗೆ ಯಾತ್ರೆ ಕೈಗೊಳ್ಳುವುದೂ ಇದೆ. ಸಿಖ್ಖರಿಗೆ ಗುರು ಹರಗೋವಿಂದರು ಮೊಘಲರಿಂದ ಬಿಡುಗಡೆಗೊಂಡ, ಹಲವು ರಾಜರನ್ನೂ ಬಂಧನದಿಂದ ಮುಕ್ತಗೊಳಿಸಿದ ದಿನ. ಈ ಹಬ್ಬ ಮನದ ದುಃಖವೆಂಬ ಬಂಧನದಿಂದ ಬಿಡುಗಡೆಗೊಳ್ಳುವ ಸೂಚಕವೂ ಹೌದಂತೆ.
ದಕ್ಷಿಣ ಭಾರತದಲ್ಲಿ ದೀಪಾವಳಿಯನ್ನು ಮೂರು ದಿನಗಳ ಕಾಲ ಆಚರಿಸುವ ರೂಢಿಯಿದೆ. ಆಚರಣೆಯು ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ಜಗತ್ತಿಗೆ ಕಂಟಕನಾದ ನರಕಾಸುರನನ್ನು ಸಂಹಾರ ಮಾಡಿದ ದಿನವೇ ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. 2ನೇ ದಿನ ಲಕ್ಷ್ಮೀ ಪೂಜೆ, 3ನೇ ಬಲಿಪಾಢ್ಯಮಿ ದಿನದಂದು ಗೋ ಪೂಜೆ ಆಚರಿಸಲಾಗುತ್ತದೆ.
ರೈತಾಪಿ ವರ್ಗ ಕೃಷಿ ಕಾರ್ಯ ಮುಗಿಸುವ ಸಮಯ ಇದಾಗಿದ್ದು, ಮೈಗೊತ್ತಿಕೊಂಡಿರುವ ಭತ್ತದ ಜುಂಗನ್ನು ಬಿಡಿಸಲು ಕೊಯ್ಲು ಕೆಲಸ ಸಂಪೂರ್ಣ ಮುಗಿದ ನಂತರ ತೈಲಾಭ್ಯಂಜನ ಮಾಡಿಕೊಳ್ಳುತ್ತಿದ್ದರು. ಚರ್ಮಕ್ಕೆ ಆದ ತುರಿಕೆ, ನವೆಯನ್ನು ನಿವಾರಿಸಿಕೊಳ್ಳುವ ಚಿಕಿತ್ಸಾ ಪದ್ಧತಿಯಾಗಿ ಸ್ನಾನ ನಡೆಯುತ್ತಿತ್ತು. ಇದನ್ನೇ ನೀರು ತುಂಬುವ ಹಬ್ಬ ಎಂದು ಆಚರಿಸಲಾಗುತ್ತೆ. ಆ ದಿನ ಕೆಲವು ಔಷಧಿಯ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಕಾಯಿಸಿ, ಕುದಿಸಿ ಔಷಧಿಯ ಸಂಶಗಳನ್ನು ಎಣ್ಣೆಗೆ ಸೇರಿಸಿ, ವಿಶೇಷವಾಗಿ ತಯಾರಿಸಿ ಮೈಗೆ ಹಚ್ಚಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡಲಾಗುತ್ತದೆ. ಇದು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ದೇಹ, ಮನಸ್ಸಿನ ಜಡ್ಡನ್ನು ತೊಡೆದುಹಾಕುತ್ತದೆ ಅನ್ನೋದು ನಂಬಿಕೆ.
ಹೀಗೆ ಹಲವು ವಿಧಗಳನ್ನ ದೀಪಾವಳಿ ಆಚರಣೆ ನಡೆಯುತ್ತದೆ. ಆದ್ರೆ ಆಚರಣೆಯ ಕವಲುಗಳು ಹಲವು ಇದ್ದರೂ ಉದ್ದೇಶ ಒಂದೇ. ಕತ್ತಲನ್ನು ತೊಲಗಿಸಿ, ಜ್ಞಾನ ದೀವಿಗೆಯನ್ನು ಮನದಲ್ಲಿ ಹೊತ್ತಿಸುವುದು ಆ ಬೆಳಕಿನಲ್ಲೇ ಬದುಕನ್ನು ನಡೆಸುವುದು. ಅದಕ್ಕಾಗಿ ಬದುಕಲ್ಲಿ ಮತ್ತೆ ಮತ್ತೆ ದೀಪಾವಳಿ ಆಚರಿಸೋಣ….
ನವದೆಹಲಿ: ದೀಪಾವಳಿ ಹಬ್ಬದ ವೇಳೆ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ಸ್ಥಿತಿಗೆ ತಲುಪಿದೆ. ಇಂದು ಬೆಳಗ್ಗೆ 5:30ಕ್ಕೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 346 ದಾಖಲಾಗಿದೆ.
ಹೆಚ್ಚಿನ ಪ್ರದೇಶಗಳು ಇಂದು ರೆಡ್‌ಝೋನ್‌ನಲ್ಲಿದೆ. ಸುಪ್ರೀಂ ಕೋರ್ಟ್ ನಿಷೇಧವನ್ನು ತೆರವುಗೊಳಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಹಸಿರು ಪಟಾಕಿಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಗಿತ್ತು. ಆದರೂ, ದೆಹಲಿಯ ವಾಯು ಗುಣಮಟ್ಟ ಅತ್ಯಂತ ಕಳಪೆ ವಿಭಾಗಕ್ಕೆ ಕುಸಿದಿದೆ.
ನಿನ್ನೆ ರಾತ್ರಿ 10 ಗಂಟೆಗೆ, 38 ಮಾನಿಟರಿಂಗ್ ಕೇಂದ್ರಗಳ ಪೈಕಿ 36 ಕೇಂದ್ರಗಳಲ್ಲಿ ಮಾಲಿನ್ಯ ಮಟ್ಟವು ಕೆಂಪು ವಲಯದಲ್ಲಿ ದಾಖಲಾಗಿದೆ. ಇದು ದೆಹಲಿಯಾದ್ಯಂತ ಅತ್ಯಂತ ಕಳಪೆಯಿಂದ ಭಯಾನಕ ವಾಯು ಗುಣಮಟ್ಟವನ್ನು ಸೂಚಿಸುತ್ತದೆ.
– ಸಂಸ್ಥೆಗೆ ಲಕ್ಷಾಂತರ ರೂ. ನಷ್ಟ; ಆಗ್ರಾ- ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಘಟನೆ
ಲಕ್ನೋ: ದೀಪಾವಳಿ ಹಬ್ಬಕ್ಕೆ ಬೋನಸ್ (Diwali Bonus) ಕೊಟ್ಟಿಲ್ಲ ಅಂತ ಟೋಲ್ ಸಂಗ್ರಹಿಸದೇ ವಾಹನಗಳನ್ನು ಫ್ರೀ ಬಿಟ್ಟು ಟೋಲ್ ಸಿಬ್ಬಂದಿ ಮುಷ್ಕರ ನಡೆಸಿದ ಘಟನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇನಲ್ಲಿ ನಡೆದಿದೆ. ಇದರಿಂದ ಸಾವಿರಾರು ವಾಹನಗಳು ಟೋಲ್ (Toll) ಪಾವತಿಸದೇ ಹೋಗಿದ್ದು, ನಿರ್ವಹಿಸುವ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ದೀಪಾವಳಿ (Deepavali) ಪ್ರಯುಕ್ತ ಬೋನಸ್ ನಿರಾಕರಿಸಿದ ಹಿನ್ನೆಲೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ವೇ (Agra Lucknow Expressway) ಟೋಲ್ ನಿರ್ವಾಹಕರು ಎಲ್ಲಾ ವಾಹನಗಳನ್ನ ಫ್ರೀ ಬಿಟ್ಟಿದ್ದಾರೆ. ಟೋಲ್ ಪಾವತಿಸದೇ ವಾಹನಗಳು ಹೊರಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಎಕ್ಸ್‌ಪ್ರೆಸ್ ವೇ ಆಗ್ರಾ ಮತ್ತು ಲಕ್ನೋ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ.
ʻಕಳೆದ ಒಂದು ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದ್ರೆ ಅವರು ಹಬ್ಬಕ್ಕೆ ಯಾವುದೇ ಬೋನಸ್ ಕೊಟ್ಟಿಲ್ಲ. ತುಂಬಾ ಕಷ್ಟಪಟ್ಟಿ ಕೆಲಸ ಮಾಡ್ತಿದ್ದೇವೆ. ಮೊದಲೇ ವೇತನವನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಈಗ ಬೋನಸ್ ಕೇಳಿದ್ರೆ ನಮ್ಮನ್ನೇ ಕೆಲಸರಿಂದ ತೆಗೆಯುವುದಾಗಿ ಹೆದರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಟೋಲ್ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಉದ್ಯೋಗಿ ಮಾತನಾಡಿ, ಶ್ರೀಸಾಯಿ ಮತ್ತು ದಾತಾರ್ ಸಂಸ್ಥೆಗಾಗಿ ಕೆಲಸ ಮಾಡ್ತಿದ್ದಾರೆ. ದೀಪಾವಳಿ ಹಬಕ್ಕೆ ಬೋನಸ್ ಕೊಡಲಾಗುವುದು. ಹಣವನ್ನ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದಾಗಿ ಹೇಳಿದ್ದರು. ಆದ್ರೂ ಕೂಡ ಬೋನಸ್ ಕೊಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಈವರೆಗೆ ಟೋಲ್ ನಿರ್ವಹಣೆ ಮಾಡುವ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪಣಜಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಗೋವಾ ಕರಾವಳಿಯಲ್ಲಿ (Goa Coast) ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದರು. ಗೋವಾದ ಕಾರವಾರ ಕರಾವಳಿಯಲ್ಲಿರುವ ಐಎನ್ಎಸ್ ವಿಕ್ರಾಂತ್‌ಗೆ ಭೇಟಿ ನೀಡಿದ ಅವರು ನೌಕಾಪಡೆ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ್ರು. ಈ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಬ್ರಹ್ಮೋಸ್ (BrahMos), ಆಕಾಶ್ ಕ್ಷಿಪಣಿಗಳ ಸಾಮರ್ಥ್ಯವನ್ನು ಕೊಂಡಾಡಿದರು.
ಇಂದು ಅದ್ಭುತ ದಿನ, ಈ ದೃಶ್ಯ ಅವಿಸ್ಮರಣೀಯ. ಈ ದಿನ ನನ್ನ ಬಳಿ ಒಂದು ಕಡೆ ಸಾಗರವಿದೆ, ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಬಲವಿದೆ. ಇನ್ನೊಂದೆಡೆ ಅನಂತ ದಿಗಂತ, ಅನಂತ ಆಕಾಶ ಹಾಗೂ ಅನಂತ ಶಕ್ತಿಯ ಸಂಕೇತವಾದ ಐಎನ್ಎಸ್ ವಿಕ್ರಾಂತ್ (INS Vikrant) ಇದೆ. ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ (Deepavali Festival) ಆಚರಿಸುತ್ತಿರುವುದು ನನ್ನ ಅದೃಷ್ಟ. ಐಎನ್ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಸಂಕೇತ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದ್ರೆ ಈ ಮೂರು ಪಡೆಗಳ ಪ್ರಚಂಡ ಸಮನ್ವಯವು ಪಾಕಿಸ್ತಾನವನ್ನು (Pakistan) ಆಪರೇಷನ್ ಸಿಂಧೂರದಲ್ಲಿ ಶರಣಾಗುವಂತೆ ಮಾಡಿತು. ಬ್ರಹ್ಮೋಸ್ ಆಕಾಶ್ ನಂತರ ಕ್ಷಿಪಣಿಗಳು ಆಪರೇಷನ್ ಸಿಂಧೂರದಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿವೆ. ಹೀಗಿ ಇಂದು ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ ಎಂದು ಮೋದಿ ಹೇಳಿದರು.
Will always cherish the cultural programme on board INS Vikrant last evening. The naval personnel are truly creative and versatile. They penned a song ‘Kasam Sindoor Ki’ which will remain etched in my memory. pic.twitter.com/3S6bruQAkT
ನಾನು ಮಿಲಿಟರಿ ಉಪಕರಣಗಳ ಶಕ್ತಿಯನ್ನು ನೋಡುತ್ತಿದ್ದೆ, ಈ ಬೃಹತ್ ಹಡಗುಗಳು, ಗಾಳಿಗಿಂತಲೂ ವೇಗವಾಗಿ ಹಾರುವ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು ಅವು ತಮ್ಮಲ್ಲಿಯೇ ಪ್ರಭಾವಶಾಲಿಯಾಗಿವೆ. ಇದರ ಜೊತೆಗೆ ಅವುಗಳನ್ನು ನಿರ್ವಹಿಸುವವರ ಶೌರ್ಯ ಸಾಹಸ, ಅವುಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುತ್ತವೆ. ಉದಾಹರಣೆಗೆ ಈ ಹಡಗುಗಳು ಕಬ್ಬಿಣದಿಂದಲೇ ಮಾಡಿರಬಹುದು ಆದ್ರೆ, ನೀವು ಹತ್ತಿದಾಗ ಅವು ಜೀವಂತ ಹಾಗೂ ಉಸಿರಾಟ ಇರುವ ಶಕ್ತಿಶಾಲಿ ಅಸ್ತ್ರಗಳಾಗಿ ಬದಲಾಗುತ್ತವೆ ಎಂದು ಸೈನಿಕರನ್ನ ಶೌರ್ಯವನ್ನು ಹಾಡಿಹೊಗಳಿದರು.
Highlights from INS Vikrant, including the Air Power Demo, a vibrant cultural programme and more… pic.twitter.com/Br943m0oCC
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಅವರು ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. 2014ರಲ್ಲಿ ಲಡಾಖ್‌ನಲ್ಲಿರುವ ಸಿಯಾಚಿನ್ ಹಿಮನದಿಗೆ ಭೇಟಿ ನೀಡಿದ್ದರು. 2015 ರಲ್ಲಿ, ಅವರು 1965ರ ಭಾರತ-ಪಾಕಿಸ್ತಾನ ಯುದ್ಧದ ವೀರರಿಗೆ ಗೌರವ ಸಲ್ಲಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು. 2016 ರಲ್ಲಿ, ದೀಪಾವಳಿಯಂದು ಹಿಮಾಚಲ ಪ್ರದೇಶದ ಭಾರತ-ಚೀನಾ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿದರು. 2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯದಲ್ಲಿ ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. 2018 ರಲ್ಲಿ, ಪ್ರಧಾನಿಯವರು ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಕಳೆದರು. 2019 ರಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು.
2020ರಲ್ಲಿ, ಪ್ರಧಾನ ಮಂತ್ರಿಗಳು ರಾಜಸ್ಥಾನದ ಜೈಸಲ್ಮೇರ್‌ನ ಲೋಂಗೆವಾಲಾದಲ್ಲಿದ್ದರು. 2021 ರಲ್ಲಿ, ಪ್ರಧಾನ ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. 2022 ರಲ್ಲಿ, ಪ್ರಧಾನ ಮಂತ್ರಿ ಮೋದಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾರ್ಗಿಲ್‌ಗೆ ಭೇಟಿ ನೀಡಿದರು. 2023 ಮತ್ತು 2024 ರಲ್ಲಿ, ಅವರು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ನಿಯೋಜಿಸಲಾದ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.
ಬೆಳಕಿನ ಹಬ್ಬ ದೀಪಾವಳಿ (Deepavali 2025) ಬರುತ್ತಿದೆ, ಬದುಕಿನ ಕತ್ತಲು ಸರಿಸಿ ಪ್ರತಿಯೊಬ್ಬರ ಬಾಳಲ್ಲೂ ಮೂಡಿಸುವ ಈ ಹಬ್ಬ ಎಲ್ಲರಿಗೂ ವಿಶೇಷ. ದೀಪಾವಳಿ ಎಂದಾಕ್ಷಣ ಮನಸ್ಸು ಪುಳಕಿತಗೊಳ್ಳುತ್ತದೆ, ಉತ್ಸಾಹದಿಂದ ಕುಣಿಯುತ್ತದೆ. ಮನೆ, ಮನಗಳಲ್ಲೂ ದೀಪಗಳು ಪ್ರಜ್ವಲಿಸುತ್ತವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳಿಲ್ಲದೇ ದೀಪಾವಳಿ ಪೂರ್ಣಗೊಳ್ಳುವುದಿಲ್ಲ. ಹೆಣ್ಣು ಮಕ್ಕಳು ದೀಪ ಹಚ್ಚಿ ಮನೆಯನ್ನು ಬೆಳಗಿದರೆ, ಗಂಡು ಮಕ್ಕಳು ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಮತ್ತೊಂದು ಕಡೆ ಪಟಾಕಿ ಬಳಕೆ ಹೆಚ್ಚಾಗುತ್ತಿದ್ದಂತೆ ಪರಿಸರ ಮಾಲಿನ್ಯ ಕೂಡ ಆಗುತ್ತದೆ ಅನ್ನೋ ಕಾರಣಕ್ಕೆ ಪಟಾಕಿಗೆ ಬೇಡಿಕೆ ಕಡಿಮೆಯೂ ಆಯ್ತು. ಆ ಬಳಿಕ ಕಡಿಮೆ ಮಾಲಿನ್ಯ ಹೊರಸೂಸುವ ಹಸಿರುವ ಪಟಾಕಿಗೆ ಅವಕಾಶ ಮಾಡಿಕೊಡಲಾಯಿತು. ಅದರಲ್ಲೂ ದೆಹಲಿಯಲ್ಲಿ ಪ್ರತಿ ವರ್ಷ ಉಂಟಾಗುವ ಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ (Supreme Court) ಕೂಡ ಹಸಿರುವ ಪಟಾಕಿಗಷ್ಟೇ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಸಮವನ್ನೂ ನಿಗದಿ ಮಾಡಿದೆ.
ಆದ್ರೆ ಹಸಿರು ಪಟಾಕಿ (Green Firecracker) ಅಂದ್ರೇನು ಅನ್ನೋ ವಿಷಯದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಹಸಿರು ಪಟಾಕಿ ಅಂದ್ರೆ ಏನು? ಸಾಮಾನ್ಯ ಪಟಾಕಿಗಿಂತ ಇದು ಹೇಗೆ ಭಿನ್ನ? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಹಸಿರು ಪಟಾಕಿ ಎಂದರೇನು?
ಹಸಿರು ಪಟಾಕಿಗಳು ಪರಿಸರ ಸ್ನೇಹಿ ಪಟಾಕಿಗಳಾಗಿದ್ದು, ಸಾಂಪ್ರದಾಯಿಕ ಪಟಾಕಿಗಳಿಗಿಂತ ಕಡಿಮೆ ವಾಯು ಮತ್ತು ಶಬ್ದ ಮಾಲಿನ್ಯ ಉಂಟುಮಾಡುತ್ತವೆ. ಇವುಗಳನ್ನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಅದರ ಅಂಗಸಂಸ್ಥೆಯಾದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಅಭಿವೃದ್ಧಿಪಡಿಸಿದೆ. ಹಸಿರು ಪಟಾಕಿಗಳು ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನ ಹೊಂದಿದ್ದು, ಸ್ಫೋಟಗೊಂಡಾಗ ಕಡಿಮೆ ಹೊಗೆ ಹೊರಸೂಸುತ್ತವೆ.
ʻಹಸಿರು ಪಟಾಕಿ’ ಪರಿಸರ ಸ್ನೇಹಿಯೇ?
ಹಸಿರು ಪಟಾಕಿ ಪರಿಸರಕ್ಕೆ ತೊಂದರೆಯಾಗದಂತೆ ಬಳಸಲೆಂದು ತಯಾರಿಸಲ್ಪಟ್ಟ ಪಟಾಕಿಗಳು. ಇವು ಕಡಿಮೆ ಶಬ್ದ ಹೊಂದಿರುವುದರ ಜೊತೆಗೆ ಇದರಿಂದ ಹೊರಸೂಸುವ ಮಲಿನ ಹೊಗೆಯೂ ಕಡಿಮೆಯಾಗಿರುತ್ತದೆ. ಈ ಕಾರಣದಿಂದ ಈ ಪಟಾಕಿಗಳು ಪರಿಸರ ಸ್ನೇಹಿ ಎನಿಸಿಕೊಂಡಿವೆ. ಜೊತೆಗೆ ಮಾನವನ ಆರೋಗ್ಯದ ಮೇಲೂ ಈ ಪಟಾಕಿಗಳು ಗಣನೀಯ ಪರಿಣಾಮ ಬೀರುವುದಿಲ್ಲ. ಇದು ಇತರ ಪಟಾಕಿಗಳಿಂದ ಈ ಪಟಾಕಿಗಳನ್ನ ಭಿನ್ನವಾಗಿಸುತ್ತವೆ.
ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿಗೆ ಇರುವ ವ್ಯತ್ಯಾಸ ಏನು?
* ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ.
* ಆದ್ರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ.30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ ಹೊರಸೂಸುತ್ತದೆ.
* ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನ ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ.
* ಸಾಮಾನ್ಯ ಪಟಾಕಿಗಳಲ್ಲಿನ ವಿಷಕಾರಿ ಲೋಹಗಳನ್ನು ಕಡಿಮೆ ಅಪಾಯಕಾರಿ ಸಂಯುಕ್ತಗಳೊಂದಿಗೆ ಬದಲಾಯಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ.
* ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರಕಾರ, ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಳಪೆಯಾಗಿರುವ ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ.
ಹಸಿರು ಪಟಾಕಿ ಪರಿಕಲ್ಪನೆ ಶುರುವಾಗಿದ್ದು ಯಾವಾಗ?
ಪ್ರತಿವರ್ಷವೂ ದೀಪಾವಳಿಯ ಸಮಯದಲ್ಲಿ ದೆಹಲಿ ಸೇರಿ ಇತರೆ ಬೃಹತ್ ನಗರ ಭಾಗಗಳಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ಈ ಕಾರಣದಿಂದಲೇ ಸಾಮಾನ್ಯ ಪಟಾಕಿಗಳಿಗಿಂತ ಶೇ.30ರಷ್ಟು ಕಡಿಮೆ ಮಾಲಿನ್ಯತೆ ಹೊರಸೂಸುವ ಹಸಿರು ಪಟಾಕಿಗಳನ್ನು 2019ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಪರಿಚಯಿಸಿತು. ಇವುಗಳಲ್ಲಿ ಬೇರಿಯಂ ಲವಣಗಳು, ಅಲ್ಯೂಮಿನಿಯಂ, ಸ್ಟ್ರ್ಯಾಷಿಯಂ, ಲಿಥಿಯಂ, ಆರ್ಸೆನಿಕ್, ಆಂಟಿಮನಿ ಮತ್ತು ಸೀಸದಂತಹ ನಿಷೇಧಿತ ವಸ್ತುಗಳನ್ನ ಬಳಸದೆಯೇ ತಯಾರಿಸಲಾಗುತ್ತದೆ.
ಹಸಿರು ಪಟಾಕಿಗಳ ತಯಾರಿಕೆ ಹೇಗೆ?
ಸಿಎಸ್‌ಐಆರ್-ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಪ್ರಕಾರ, ಹಸಿರು ಪಟಾಕಿಗಳನ್ನು ಕಡಿಮೆ ಗಾತ್ರದ ಶೆಲ್, ಬೂದಿ ಬಳಕೆಯಿಲ್ಲದೇ, ಸಂಯೋಜನೆ ವೇಳೆ ಕಚ್ಚಾವಸ್ತುಗಳನ್ನ ಕಡಿಮೆ ಬಳಸಿ ಹಾಗೂ ಕಡಿಮೆ ಹೊಗೆ ಹೊರಸೂಸುವಿಕೆಯ ದೃಷ್ಟಿಯಿಂದ ಧೂಳು ನಿರೋಧಕಗಳಂತೆ ನೀರಿನ ಆವಿಯನ್ನು ಬಳಸಲಾಗುತ್ತದೆ. ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.
ಹಸಿರು ಪಟಾಕಿ ಎಲ್ಲಿ ಸಿಗುತ್ತೆ? ಗುರುತಿಸುವುದು ಹೇಗೆ?
ಹಸಿರು ಪಟಾಕಿಗಳ ಲಭ್ಯತೆ ಹಾಗೂ ಅವುಗಳನ್ನ ಗುರುತಿಸುವ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಗಷ್ಟೇ ಮಾರಾಟಕ್ಕೆ ಅನುಮತಿ ನೀಡಿರುತ್ತದೆ. ಗ್ರಾಹಕರು ತಾವು ಖರೀದಿಸುವ ಪಟಾಕಿಗಳು ಹಸಿರು ಪಟಾಕಿ ಹೌದೆ? ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು, ಪಟಾಕಿ ಪ್ಯಾಕ್ ಮೇಲಿನ ಬಾರ್ ಕೋಡ್ ಸ್ಕ್ಯಾನ್ ಮಾಡಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಸಹ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿದೆ.
ಪಟಾಕಿ ಸಿಡಿಸುವ ಮುನ್ನ ಗಮನದಲ್ಲಿಡಿ
* ಹಸಿರು ಪಟಾಕಿಗಳನ್ನು ಸಿಡಿಸುವಾಗ ಪಟಾಕಿ ಹಾಗೂ ನಿಮ್ಮ ನಡುವಿನ ಅಂತರ ಹೆಚ್ಚಿರಬೇಕು.
* ಕೈಯನ್ನು ನೇರವಾಗಿ ಇರಿಸಿ ಪಟಾಕಿಗೆ ಕಿಡಿ ತಾಗಿಸಬೇಕು. ಪಟಾಕಿಗಳನ್ನು ಸಿಡಿಸುವಾಗ ಬೂಟುಗಳನ್ನು ಧರಿಸುವುದು ಉತ್ತಮ.
* ಆಟದ ಮೈದಾನಗಳಂತಹ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಒಳಿತು.
* ಹಸಿರು ಪಟಾಕಿಗಳನ್ನು ಬೆಳಗಿಸುವ ಸಂದರ್ಭದಲ್ಲಿ ಒಂದೆರಡು ಬಕೆಟ್‌ಗಳಷ್ಟು ನೀರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು.
* ಪಟಾಕಿ ಸಿಡಿಸುವವರು ಉದ್ದವಾದ, ಸಡಿಲವಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.
ಬೆಳಕಿನ ಹಬ್ಬ ದೀಪಾವಳಿ (Deepavali 2025) ಬರುತಿದೆ. ಬೆಳಕು ಜ್ಞಾನದ ಸಂಕೇತ. ನವೋಲ್ಲಾಸದ ಪ್ರತೀಕ. ಅಜ್ಞಾನದ ಕತ್ತಲಿನಿಂದ ಸುಜ್ಞಾನವೆಂಬ ಬೆಳಕಿನ ಕಡೆಗೆ ಸಾಗುವ ಮಾರ್ಗ. ಕೇಡಿನ ವಿರುದ್ಧ ಒಳಿತಿನ ವಿಜಯದ ಸಂಕೇತ. ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಸ್ಥಾನ ಮತ್ತು ಸಂಪ್ರದಾಯ ಇದೆ. ಮನೆ ಮನೆಗಳಲ್ಲಿ ಹಣತೆಗಳು ಬೆಳಗುತ್ತವೆ. ನಮ್ಮೊಳಗಿನ ಕೆಡುಕು, ಅಹಂ ಭಾವವು ದೀಪದ ಬತ್ತಿ ಇದ್ದಂತೆ. ಬೆಂಕಿ ಇಟ್ಟಾಗ ಕೇಡಿನ ಬತ್ತಿ ಸುಟ್ಟು ಹೋದಂತೆ ನಮ್ಮಲ್ಲಿ ಜ್ಞಾನದ ಬೆಳಕು ಹೊಮ್ಮುತ್ತದೆ. ಮನೆಗಳಷ್ಟೇ ಅಲ್ಲ ಮನಸ್ಸುಗಳು ಬೆಳಗಿದಾಗ ಈ ಹಬ್ಬಕ್ಕೊಂದು ಅರ್ಥ ಬರುತ್ತದೆ.
ಕಾಲ ಬದಲಾದಂತೆ ಆಧುನಿಕತೆ ಬೆಳೆದಂತೆ ದೀಪಾವಳಿ ಆಚರಣೆಯಲ್ಲೂ ಹೊಸತನ ಬಂದಿದೆ. ಹಿಂದೆಲ್ಲ ಮನೆಗಳಲ್ಲಿ ಹಣತೆಗಳನ್ನು ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು. ಈಗ ಆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಬಂದಿದೆ. ತರಹೇವಾರಿ ಬೆಳಕು ಹೊಮ್ಮಿಸಿ ಚಿತ್ತಾರ ಮೂಡಿಸುವ ಪಟಾಕಿ ಸಿಡಿಸಿ ಹಬ್ಬ ಆಚರಿಸಲಾಗುತ್ತದೆ. ಪಟಾಕಿ ಹೊಡೆದು ಆಚರಿಸುವ ದೀಪಾವಳಿ ಸಂತೋಷ, ಬೆಳಕು ಮತ್ತು ನಗುವನ್ನು ತರುತ್ತದೆ. ಜೊತೆಗೆ ಎಚ್ಚರಿಕೆಯನ್ನೂ ಸಹ ಬಯಸುತ್ತದೆ. ಪ್ರತಿ ವರ್ಷ, ಅಜಾಗರೂಕತೆ ಮತ್ತು ಅರಿವಿನ ಕೊರತೆಯಿಂದಾಗಿ ಸಾವಿರಾರು ಪಟಾಕಿ ಸಂಬಂಧಿತ ಅವಘಡಗಳು ಸಂಭವಿಸುತ್ತವೆ. ಈ ದೀಪಾವಳಿ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು, ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಶಾಂತಿಯುತವಾಗಿಡಲು ಮತ್ತು ನಿಮ್ಮ ಹಬ್ಬವನ್ನು ನಿಜವಾಗಿಯೂ ಪ್ರಕಾಶಮಾನವಾಗಿಡಲು ಒಂದಷ್ಟು ಟಿಪ್ಸ್‌ಗಳಿವೆ. ಇದನ್ನೂ ಓದಿ: ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ
1.ಪಟಾಕಿಗಳನ್ನು ಬುದ್ಧಿವಂತಿಕೆಯಿಂದ ಆರಿಸಿ
ದೀಪಾವಳಿ ಅಂದ್ರೆ ಪಟಾಕಿ ಅನ್ನೋ ಕಾಲ ಇದು. ಎಲ್ಲೆಡೆ ಪಟಾಕಿಗಳ ಸದ್ದು ಕೇಳಿಬರುತ್ತದೆ. ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬೇಕು ಎನ್ನುವವರು ಪರವಾನಗಿ ಪಡೆದ ಅಂಗಡಿಗಳಿಂದ ಮಾತ್ರ ಪಟಾಕಿಗಳನ್ನು ಖರೀದಿಸಿ. ಸ್ಥಳೀಯವಾಗಿ ತಯಾರಿಸಿದ ಅಥವಾ ಲೇಬಲ್ ಇಲ್ಲದ, ಅಸುರಕ್ಷಿತ ಅಥವಾ ಕಾನೂನುಬಾಹಿರ ಪಟಾಕಿಗಳನ್ನು ಖರೀದಿಸಬೇಡಿ. ಸರಿಯಾದ ಸುರಕ್ಷತಾ ಸೂಚನೆಗಳು ಮತ್ತು ಉತ್ಪಾದನಾ ವಿವರಗಳಿರುವ ಪ್ಯಾಕೇಜಿಂಗ್ ಪಟಾಕಿಗಳು ಆಯ್ಕೆ ಒಳ್ಳೆಯದು.
2.ಸುರಕ್ಷಿತ ಉಡುಪುಗಳನ್ನು ಧರಿಸಿ
ಪಟಾಕಿಗಳನ್ನು ಹಚ್ಚುವಾಗ ಸಡಿಲವಾದ, ಸಿಂಥೆಟಿಕ್ ಅಥವಾ ಹರಿಯುವ ಬಟ್ಟೆಗಳನ್ನು ಕೈಬಿಡಿ. ಬೆಂಕಿ ತಾಗಿದರೆ ಅಂತಹ ಬಟ್ಟೆಗಳು ಸುಲಭವಾಗಿ ಹೊತ್ತಿಕೊಳ್ಳಬಹುದು. ಬೆಂಕಿಯಿಂದ ಹೆಚ್ಚು ಹಾನಿಗೊಳಗಾಗದ ಹತ್ತಿ ಅಥವಾ ನೈಸರ್ಗಿಕ ಬಟ್ಟೆಗಳನ್ನು ಧರಿಸಿ. ನಿಮ್ಮ ಕೂದಲು ಉದ್ದವಾಗಿದ್ದರೆ ಅದನ್ನು ಹಿಂದಕ್ಕೆ ಕಟ್ಟಿಕೊಳ್ಳಿ.
3.ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ
ಪಟಾಕಿ ಹೊಡೆಯುವಾಗ ಉತ್ಸಾಹ, ಹುಮ್ಮಸ್ಸು ಸ್ವಲ್ಪ ಹೆಚ್ಚೇ ಇರುತ್ತದೆ. ಆಗಂತ ಎಚ್ಚರಿಕೆ ತಪ್ಪಿ ಪಟಾಕಿ ಹಚ್ಚುವ ಕೆಲಸ ಮಾಡಬಾರದು. ಜನಸಂದಣಿ, ಮನೆಗಳು ಅಥವಾ ವಾಹನಗಳ ಹತ್ತಿರ ಎಂದಿಗೂ ಪಟಾಕಿಗಳನ್ನು ಹಚ್ಚಬೇಡಿ. ಕನಿಷ್ಠ 10-15 ಅಡಿಗಳಷ್ಟು ಸುರಕ್ಷಿತ ಅಂತರ ನಿಯಮವನ್ನು ಅನುಸರಿಸಿ. ನೀವು ಪಟಾಕಿಯನ್ನು ಹಚ್ಚುವ ಮೊದಲು ಸುತ್ತಮುತ್ತ ಹತ್ತಿರದಲ್ಲಿ ಯಾರಾದರು ಇದ್ದಾರೆಯೇ? ಇದ್ದರೆ ಪಟಾಕಿ ವಿಚಾರದಲ್ಲಿ ಜಾಗೃತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನೂ ಓದಿ: ದೀಪಾವಳಿಗೆ ಬೆಳ್ಳಿ-ಬಂಗಾರ ಬಲು ಭಾರ – 10 ಗ್ರಾಂ ಚಿನ್ನ ಒಂದೂವರೆ ಲಕ್ಷಕ್ಕೆ ತಲುಪುತ್ತಾ?
4.ಪಟಾಕಿ ಹಚ್ಚಲು ಗಂಧದಕಡ್ಡಿ ಅಥವಾ ಲಾಂಗ್ ಸ್ಟಿಕ್ ಬಳಸಿ
ಪಟಾಕಿ ಹಚ್ಚಲು ಬೆಂಕಿಕಡ್ಡಿಗಳು ಅಥವಾ ಲೈಟರ್‌ಗಳನ್ನು ಎಂದಿಗೂ ಬಳಸಬೇಡಿ. ಮೇಣದಬತ್ತಿ, ಸ್ಪಾರ್ಕ್ಲರ್ ಅಥವಾ ಧೂಪದ್ರವ್ಯದ ಕಡ್ಡಿಯನ್ನು (ಗಂಧದಕಡ್ಡಿ) ಬಳಸಿ. ಪಟಾಕಿಯ ಫ್ಯೂಸ್ ಬೆಳಗಿದ ನಂತರ ಸುರಕ್ಷಿತವಾಗಿ ದೂರ ಹೋಗಲು ಈ ವಿಧಾನ ನಿಮಗೆ ಸಹಕಾರಿ. ಪಟಾಕಿ ಹಚ್ಚುವಾಗಲೇ ನೀವು ಸ್ವಲ್ಪ ದೂರ ನಿಲ್ಲುವುದರಿಂದ ಯಾವುದೇ ಅಪಾಯ ಇರಲ್ಲ.
5.ನೀರು ಮತ್ತು ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಇಟ್ಟುಕೊಳ್ಳಿ
ತುರ್ತು ಸಂದರ್ಭಗಳನ್ನು ನಿಭಾಯಿಸಲು ಬಕೆಟ್‌ಗಳಲ್ಲಿ ನೀರು, ಮರಳಿನ ರಾಶಿ ಇಟ್ಟುಕೊಳ್ಳಿ. ಪಟಾಕಿಗಳಿಂದ ಹೆಚ್ಚಿನ ಬೆಂಕಿ ಹಾನಿ ತಪ್ಪಿಸಲು ಈ ಕ್ರಮ ಸಹಕಾರಿ. ಸಣ್ಣಪುಟ್ಟ ಸುಟ್ಟಗಾಯಗಳನ್ನು ತಕ್ಷಣವೇ ನಿರ್ವಹಿಸಲು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಸಿದ್ಧವಾಗಿಡಿ.
6.ಮಕ್ಕಳು ಪಟಾಕಿ ಹೊಡೆಯುವಾಗ ನಿಗಾವಹಿಸಿ
ಮಕ್ಕಳು ಪಟಾಕಿ ಹೊಡೆಯುವಾಗ ದೊಡ್ಡವರು ನಿಗಾವಹಿಸಬೇಕು. ವಯಸ್ಕರು ಅವರಿಗೆ ಮಾರ್ಗದರ್ಶನ ನೀಡಬೇಕು. ಮಕ್ಕಳ ವಯಸ್ಸಿಗೆ ಅನುಗುಣವಾದ ಸುರಸುರಬತ್ತಿ, ಹೂವಿನಕುಂಡ, ಸ್ಪಾರ್ಕ್ಲರ್‌ಗಳು, ಕೃಷ್ಣನಚಕ್ರ ಇರುತ್ತವೆ. ಅವುಗಳನ್ನು ಬಳಸುವಂತೆ ತಿಳಿಹೇಳಬೇಕು.
7.ಮತ್ತೆ ಮತ್ತೆ ಬೆಂಕಿ ಹಚ್ಚಬೇಡಿ
ಒಂದು ವೇಳೆ ಪಟಾಕಿ ಹೊತ್ತಿಕೊಳ್ಳದಿದ್ದರೆ, ಅದಕ್ಕೆ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸಬೇಡಿ. ತಕ್ಷಣ ಅದರ ಮೇಲೆ ನೀರು ಸುರಿದು ಸುರಕ್ಷಿತವಾಗಿ ವಿಲೇವಾರಿ ಮಾಡಿ. ಅದು ಅನಿರೀಕ್ಷಿತವಾಗಿ ಸ್ಫೋಟಗೊಳ್ಳಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಿ.
8.ಜನದಟ್ಟಣೆ ಇರುವ ಅಥವಾ ಸುತ್ತುವರಿದ ಪ್ರದೇಶಗಳ ಆಯ್ಕೆ ಬೇಡ
ಸೀಮಿತ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಉಸಿರುಗಟ್ಟುವಿಕೆ, ಅಪಘಾತಗಳು ಅಥವಾ ಬೆಂಕಿ ಅವಘಡ ಕೂಡ ಸಂಭವಿಸಬಹುದು. ಸುರಕ್ಷಿತವಾಗಿ ಹಬ್ಬ ಆಚರಿಸಲು ತೆರೆದ ಮೈದಾನಗಳು ಅಥವಾ ಗೊತ್ತುಪಡಿಸಿದ ವಲಯಗಳನ್ನು ಆರಿಸಿಕೊಳ್ಳಿ.
9.ಸಾಕುಪ್ರಾಣಿಗಳು ಮತ್ತು ಪರಿಸರವನ್ನು ರಕ್ಷಿಸಿ
ಜೋರಾಗಿ ಶಬ್ದ ಉಂಟುಮಾಡುವ ಪಟಾಕಿಗಳು ಪ್ರಾಣಿಗಳನ್ನು ಭಯಭೀತಗೊಳಿಸಬಹುದು. ಜೊತೆಗೆ ಗಾಳಿಯನ್ನು ಕಲುಷಿತಗೊಳಿಸಬಹುದು. ಪರಿಸರಸ್ನೇಹಿ ಮತ್ತು ಹೆಚ್ಚು ಶಬ್ದ ಬರದ ಪಟಾಕಿಗಳನ್ನು ಆರಿಸಿಕೊಳ್ಳಿ. ಪ್ರಾಣಿಗಳ ಕಾಳಜಿ, ಹೆಚ್ಚಿನ ವಾಯುಮಾಲಿನ್ಯ ತಪ್ಪಿಸಲು ಈ ಕ್ರಮ ಅನುಸರಿಸಿ.
10.ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ
ಪಟಾಕಿ ಸಿಡಿಸಿ ಮೋಜು-ಮಸ್ತಿ ಮಾಡಿದ ನಂತರ ಸುಟ್ಟ ಕ್ರ‍್ಯಾಕರ್ ಅವಶೇಷಗಳನ್ನು ಸ್ವಚ್ಛಗೊಳಿಸಿ. ಒಣ ತ್ಯಾಜ್ಯದ ತೊಟ್ಟಿಗಳಲ್ಲಿ ತಕ್ಷಣ ಅವುಗಳನ್ನು ಎಸೆಯಲು ಹೋಗಬೇಡಿ. ಇದರಿಂದ ಬೆಂಕಿ ಅವಘಡ ಸಂಭವಿಸಬಹುದು. ಆಕಸ್ಮಿಕ ಬೆಂಕಿಯನ್ನು ತಡೆಗಟ್ಟಲು ಮೊದಲು ಸುಟ್ಟ ಪಟಾಕಿಗಳನ್ನು ನೀರಿನಲ್ಲಿ ನೆನೆಸಿ ನಂತರ ವಿಲೇವಾರಿ ಮಾಡಿ.