ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ಹೊರ ರಾಜ್ಯಕ್ಕೆ ಹೊರಡಲು ಪ್ರವಾಸಿ ಕಾರ್ಮಿಕರು ತಯಾರಾಗಿದ್ದು, ಒಟ್ಟು 13,671 ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಕಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಪ್ರತಿಯೊಬ್ಬ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಹೊಸಪೇಟೆಯಿಂದ ಮೇ 17 ರಂದು ತೆರಳಲಿರುವ ಎರಡು ವಿಶೇಷ ರೈಲಿನಲ್ಲಿ ಕಾರ್ಮಿಕರನ್ನು ಕಳಿಸಿ ಕೊಡಲಿದೆ. ಬಹುತೇಕ ಕಾರ್ಮಿಕರು, ಬಳ್ಳಾರಿ ಸಂಡೂರು ಹೊಸಪೇಟೆ ಸೇರಿದಂತೆ ಜಿಲ್ಲೆಯಲ್ಲಿ ಇರುವ ಗಣಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಬಳ್ಳಾರಿ ಹೊಸ ಬಸ್ ನಿಲ್ದಾಣ ಹಾಗೂ ಸಂಡೂರು ಹೊಸಪೇಟೆಯಲ್ಲಿ ಕಾರ್ಮಿಕರ ಸ್ಕ್ರೀನಿಂಗ್ ನಡೆಯುತ್ತಲಿದೆ.
ಪ್ರತಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಜಿಲ್ಲಾಡಳಿತ ಆರೋಗ್ಯ ಕಾರ್ಡ್ ನೀಡಲಿದ್ದು, ಆರೋಗ್ಯ ಕಾರ್ಡ್ ಹೊಂದಿದವರು ಟಿಕೆಟ್ ಪಡೆದು ಪ್ರಯಾಣ ಮಾಡಬಹುದಾಗಿದೆ. ಉಳಿದಂತೆ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ಬಸ್‍ನಲ್ಲಿ ಸಂಚಾರ ಮಾಡುವ ಮನಸ್ಸು ಇದ್ದವರನ್ನು ಬಸ್‍ನಲ್ಲಿ ಕಳುಹಿಸಿ ಕೊಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈವರೆಗೂ ಯಾರು ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್‍ನಲ್ಲಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೇರೆ ಬೇರೆ ರಾಜ್ಯದ ಒಟ್ಟು 13,671 ಜನ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಸಿದ್ದರೆ. ಉತ್ತರ ಪ್ರದೇಶದ ಸುಮಾರು 3,300 ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಆದರೆ ಬೆಂಗಳೂರಿನಲ್ಲಿ ಇಳಿಕೆ ಕಂಡಿದೆ.
ರೆಡ್ ಝೋನ್ ಮೈಸೂರು ಜಿಲ್ಲೆಯಲ್ಲಿ ಒಟ್ಟು 28 ಕಂಟೈನ್‍ಮೆಂಟ್ ವಲಯಗಳಿವೆ. ಇದರಲ್ಲಿ ಮೈಸೂರು ನಗರದ ಕೆಲವು ಪ್ರದೇಶ, ನಂಜನಗೂಡಿನ ಕೆಲವು ಬಡಾವಣೆ, ಮೈಸೂರು ತಾಲೂಕು ಕೆಲವು ಏರಿಯಾ ಹಾಗೂ ಟೀ ನರಸೀಪುರದ 1 ಗ್ರಾಮ ಸೇರಿವೆ.
ಸಿಲಿಕಾನ್ ಸಿಟಿಯಲ್ಲಿ ಕಂಟೈನ್‍ಮೆಂಟ್ ಝೋನ್‍ಗಳ ಸಂಖ್ಯೆ 25ರಿಂದ 22ಕ್ಕೆ ಇಳಿಕೆಯಾಗಿದೆ. ಕೆಂಪು ವಲಯವನ್ನ ತೆಗೆದು ನೇರಳೆ ಮತ್ತು ಕಡು ನೇರಳೆ ಎರಡು ವಲಯಗಳನ್ನ ಬಿಬಿಎಂಪಿ ವಿಂಗಡನೆ ಮಾಡಿದೆ. ಹೊರಮಾವು, ಗುರಪ್ಪನ ಪಾಳ್ಯ ಮತ್ತು ಜೆಪಿ ನಗರವನ್ನು ಕಂಟೈನ್‍ಮೆಂಟ್ ಝೋನ್‍ನಿಂದ ಕೈ ಬಿಡಲಾಗಿದೆ.
ಆರೆಂಜ್ ಝೋನ್ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್‍ಮೆಂಟ್ ವಲಯಗಳಿವೆ. ಮಳವಳ್ಳಿ ಪಟ್ಟಣದಲ್ಲಿ 7, ಮಂಡ್ಯ ನಗರದ ಪೇಟೆ ಬೀದಿ, ಸ್ವರ್ಣಸಂದ್ರ ಬಡಾವಣೆ, ನಾಗಮಂಗಲದ 1 ಬಡಾವಣೆ, ಪಾಂಡವಪುರದ ಡಿ ಕೋಡಗಹಳ್ಳಿ, ಕೆ.ಆರ್.ಪೇಟೆ ರಾಜಘಟ್ಟ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.
ಆರೆಂಜ್ ಝೋನ್ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 18 ಕಂಟೈನ್‍ಮೆಂಟ್ ವಲಯಗಳಿವೆ. ಕಲಬುರಗಿ ನಗರದಲ್ಲಿ 15, ಚಿತ್ತಾಪುರದಲ್ಲಿ 2 ಹಾಗೂ ಆಳಂದದಲ್ಲಿ 1 ಇದೆ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 10 ಕಂಟೈನ್‍ಮೆಂಟ್ ವಲಯಗಳಿವೆ. ಜಮಖಂಡಿ 3 ಏರಿಯಾ, ಮುಧೋಳದ ಸಾಯಿನಗರ ಬಡಾವಣೆ, ಬಾಗಲಕೋಟೆ ನಗರದ 6 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.
ಆರೆಂಜ್ ಝೋನ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಕಂಟೈನ್‍ಮೆಂಟ್ ವಲಯಗಳಿವೆ. ಮಂಗಳೂರು ನಗರದಲ್ಲೇ 4, ಬಂಟ್ವಾಳದಲ್ಲಿ 3, ಪುತ್ತೂರಿನಲ್ಲಿ 2 ಇವೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಹಿರೇಬಾಗೇವಾಡಿಯಲ್ಲಿ 3, ಬೆಳಗಾವಿ ನಗರದಲ್ಲಿ 1, ಹುಕ್ಕೇರಿಯಲ್ಲಿ 1, ರಾಯಬಾಗದಲ್ಲಿ 1 ಇದೆ.
ಕಿತ್ತಳೆ ವಲಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 6 ಕಂಟೈನ್‍ಮೆಂಟ್ ವಲಯಗಳಿವೆ. ಚಿಕ್ಕಬಳ್ಳಾಪುರ ನಗರದ 4 ವಾರ್ಡ್, ಗೌರಿಬಿದನೂರಿನ 2 ವಾರ್ಡ್ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 4 ಕಂಟೈನ್‍ಮೆಂಟ್ ವಲಯಗಳಿವೆ. ವಿಜಯಪುರದ ಚಪ್ಪರ್ ಬಂದ್ ಸುತ್ತಮುತ್ತಲ ಪ್ರದೇಶ 3, ಬಾರಾಮಮಾನ್ 1 ಇದೆ.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3 ಕಂಟೈನ್‍ಮೆಂಟ್ ವಲಯಗಳಿವೆ. ಹೊಸಪೇಟೆ ನಗರ, ಸಿರಗುಪ್ಪ ಎಚ್ ಹೊಸಹಳ್ಳಿ, ಬಳ್ಳಾರಿ ತಾಲೂಕಿನ ಗುಗ್ಗರಹಟ್ಟಿ ಕಂಟೈನ್‍ಮೆಂಟ್ ಝೋನ್‍ಗಳಾಗಿವೆ. ಬೀದರ್ ನಲ್ಲಿ ಒಟ್ಟು 2 ಕಂಟೈನ್‍ಮೆಂಟ್ ಝೋನ್‍ಗಳಿವೆ. ಬೀದರ್ ತಾಲೂಕು ಓಲ್ಡ್ ಸಿಟಿ ಹಾಗೂ ಬಸವಕಲ್ಯಾಣ. ದಾವಣಗೆರೆಯ 2 ಪ್ರದೇಶ ಭಾಷಾನಗರ ಹಾಗೂ ಜಾಲಿನಗರ, ಗದಗನ ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ಸರ್ಕಲ್ ಪ್ರದೇಶಗಳು ಕಂಟೈನ್‍ಮೆಂಟ್ ಝೋನ್‍ಗಳಾಗಿವೆ.
ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ನಗರ ಮಾತ್ರ ಕಂಟೈನ್‍ಮೆಂಟ್ ಝೋನ್ ಆಗಿದೆ. ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರವನ್ನು ಕಂಟೈನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಹೋಗಲು ರಾಜ್ಯ ಸರ್ಕಾರ ಶನಿವಾರದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬೆನ್ನಲ್ಲೇ ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ.
ಉಡುಪಿಯನ್ನು ಹೊರತುಪಡಿಸಿ ರಾಜ್ಯದ 12 ಹಸಿರು ವಲಯ ಜಿಲ್ಲೆಗಳಲ್ಲಿ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಆದರೆ ಜಿಲ್ಲೆಯ ಒಳಗೆ ಮಾತ್ರ ಬಸ್‍ಗಳು ಸಂಚರಿಸಲಿವೆ. ಅಂತರ್ ಜಿಲ್ಲೆಯ ಬಸ್ ಸಂಚಾರ ಇರುವುದಿಲ್ಲ.
ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ, ಚಿತ್ರದುರ್ಗ, ಚಾಮರಾಜನಗರ, ಕೋಲಾರ, ರಾಮನಗರ, ಹಾವೇರಿ, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭವಾಗಲಿದೆ. ಆದರೆ ಖಾಸಗಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ.
ಬಸ್‍ಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸಲೇ ಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರಯಾಣಿಕರಿಗೆ ಥರ್ಮಲ್ ಪರೀಕ್ಷೆ ಕಡ್ಡಾಯವಾಗಬೇಕು. ಒಂದು ಬಸ್‍ನಲ್ಲಿ ಸೀಟ್ ಸಂಖ್ಯೆ ಅರ್ಧದಷ್ಟು ಮಾತ್ರ ಜನರು ಪ್ರಯಾಣಿಸಬೇಕು.
ಚಿಕ್ಕಮಗಳೂರಿನ ಜಿಲ್ಲೆಯೊಳಗೆ ನಾಳೆಯಿಂದ ಶೇಕಡ 25ರಷ್ಟು ಬಸ್ ಓಡಾಡಲು ಅನುಮತಿ ನೀಡಲಾಗಿದೆ. ಒಂದು ಬಸ್‍ನಲ್ಲಿ 27 ಜನ ಮಾತ್ರ ಸಂಚಾರ ಮಾಡಬೇಕು. ಅರ್ಧಗಂಟೆ ಮುಂಚೆ ಬಸ್ ನಿಲ್ದಾಣಕ್ಕೆ ಬರಬೇಕು. ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಸ್ಯಾನಿಟೈಸರ್ ನಿಂದ ಕೈ ತೊಳೆದು ಬಸ್ ಹತ್ತಬೇಕು. ಬಸ್‍ನಲ್ಲಿ ಏನನ್ನೂ ತಿನ್ನುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ನವದೆಹಲಿ: ಕೊರೊನಾ ವೈರಸ್ ಹೆಡೆಮುರಿ ಕಟ್ಟಲು ಮತ್ತಷ್ಟು ಕಠಿಣ ನಿಯಮಗಳ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯಗಳನ್ನಾಗಿ ವಿಭಜಿಸಿದೆ.
ಕೊರೊನಾ ತೀವ್ರತೆ ಹೆಚ್ಚಿರುವ ಹಾಟ್ ಸ್ಪಾಟ್ 170 ಜಿಲ್ಲೆಗಳ ಪೈಕಿ 113 ಜಿಲ್ಲೆಗಳನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೊನಾ ಸೋಂಕಿನ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ. ಕರ್ನಾಟಕದ 8 ಜಿಲ್ಲೆಗಳು ಹಾಟ್ ಸ್ಪಾಟ್‍ನಲ್ಲಿದ್ದು, 11 ಜಿಲ್ಲೆಗಳು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೋನಾ ಸೋಂಕಿನ ಸಂಖ್ಯೆಗಳ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ.
ದೇಶದಲ್ಲಿ ಕೊರೊನಾ ಸೋಂಕು ಕ್ಷಣ ಕ್ಷಣಕ್ಕೂ ತೀವ್ರ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಸೋಂಕು ವ್ಯಾಪಿಸುತ್ತಿರುವ ಪರಿ ಕೇಂದ್ರ ಸರ್ಕಾರವನ್ನು ಕಂಗೆಡಿಸಿದೆ. 2 ಸಾವಿರ ಸೋಂಕಿತರು ಇರುವ ಮುಂಬೈ ನಗರ ಮತ್ತೊಂದು ವುಹಾನ್ ಆಗಿಬಿಡುತ್ತಾ ಎಂಬ ಆತಂಕ ಮನೆ ಮಾಡಿದೆ.
ಸಮುದಾಯಕ್ಕೆ ಎಲ್ಲಿ ಹರಡುತ್ತೋ ಎಂಬ ಭಯ ಕಾಡುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 38 ಮಂದಿ ಬಲಿ ಆಗಿದ್ದಾರೆ. ಸೋಂಕಿತರ ಸಂಖ್ಯೆ 12 ಸಾವಿರ ಸಮೀಪಿಸಿದೆ. ಮೃತರ ಸಂಖ್ಯೆ 405 ಆಗಿದೆ. ಕೊರೊನಾ ಭಯದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹೋಂ ಕ್ವಾರಂಟೇನ್‍ನಲ್ಲಿದ್ದಾರೆ.
ಹೇಗಿರುತ್ತೆ ಕೊರೊನಾ ಹಾಟ್‍ಸ್ಪಾಟ್ ರೆಡ್ ಝೋನ್ ಜಿಲ್ಲೆ?
– ಭಾರತದಲ್ಲಿ 170 ಕೊರೋನಾ ಹಾಟ್‍ಸ್ಪಾಟ್ ಜಿಲ್ಲೆಗಳು
– ನಾಲ್ಕು ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ಡಬಲ್ ಆಗ್ತಿರುವ ಜಿಲ್ಲೆಗಳು ಹಾಟ್‍ಸ್ಪಾಟ್ ವ್ಯಾಪ್ತಿಗೆ
– ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಜನ ಹೊರಗೆ ಓಡಾಡುವಂತೆಯೇ ಇಲ್ಲ
– ಜನ ಸಂಪೂರ್ಣವಾಗಿ ತಮ್ಮ ಮನೆಗಳಿಗೆ ಸೀಮಿತ ಆಗಬೇಕು
– ಜನತೆಗೆ ಬೇಕಿರುವ ಅಗತ್ಯ ವಸ್ತು, ಸೇವೆಗಳು ಸ್ಥಳೀಯ ಆಡಳಿತದಿಂದ ಪೂರೈಕೆ
– ಮನೆ ಮನೆಗೆ ತೆರಳಿ ಎಲ್ಲರಿಗೂ ಕೊರೋನಾ ಟೆಸ್ಟ್
– ಸೋಂಕಿತರ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚುವ ಕೆಲಸ, ಕ್ವಾರಂಟೇನ್
– ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಣೆ
ಹೇಗಿರುತ್ತೆ ಕೊರೊನಾ ನಾನ್ ಹಾಟ್‍ಸ್ಪಾಟ್ ಆರೆಂಜ್ ಝೋನ್ ಜಿಲ್ಲೆ
– 207 ಜಿಲ್ಲೆಗಳನ್ನು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಿರುವ ಕೇಂದ್ರ
– ಈ ಪ್ರದೇಶಗಳು ಶೀಘ್ರವಾಗಿ ಹಾಟ್‍ಸ್ಪಾಟ್ ಪ್ರದೇಶಗಳಾಗಿ ಬದಲಾಗುವ ಆತಂಕ
– ಸೋಂಕಿತರು ಇರುವ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ (3 ಕಿ.ಮೀ. ವ್ಯಾಪ್ತಿ)
– ಸೋಂಕಿತರು ಇರುವ ಪ್ರದೇಶಕ್ಕೆ ಯಾರು ಕಾಲಿಡುವಂತಿಲ್ಲ
– ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಟೆಸ್ಟ್
– ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗೆ ಕ್ರಮ, ಮನೆ ಮನೆ ಪರೀಕ್ಷೆ
– ಸೋಂಕು ಕಡಿಮೆ ಆದರೆ, ಏ.20 ಬಳಿಕ ಲಾಕ್‍ಡೌನ್ ಸಡಿಲಿಕೆ (ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ)
ಹೇಗಿರುತ್ತೆ ಹಸಿರು ವಲಯದ ಜಿಲ್ಲೆ (ಗ್ರೀನ್ ಝೋನ್)
– ದೇಶದಲ್ಲಿ 263 ಜಿಲ್ಲೆಗಳು ಹಸಿರು ವಲಯದ ವ್ಯಾಪ್ತಿಗೆ
– ಕಳೆದ 28 ದಿನಗಳಿಂದ ಸೋಂಕು ಪತ್ತೆಯಾಗದ ಜಿಲ್ಲೆಗಳು
– ಇಲ್ಲಿ ಇದುವರೆಗೂ ಕೊರೊನಾ ಸೋಂಕಿತರು ಕಂಡುಬಂದಿಲ್ಲ
– ಹಸಿರುವಲಯದ ಜಿಲ್ಲೆಗಳಿಗೆ ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಜಿಲ್ಲೆಗಳಿಂದ ಸಂಪರ್ಕ ಕಟ್
– ಕೊರೊನಾ ಸೋಂಕು ಹರಡದಂತೆ ತೀವ್ರ ಕಟ್ಟೆಚ್ಚರ
ಬೆಂಗಳೂರು: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಹೊಸ 7 ಕೇಸ್ ಪತ್ತೆಯಾದ ಹಿನ್ನೆಲೆ ಕರ್ನಾಟಕದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿದೆ. ಹೀಗಾಗಿ ರಾಜ್ಯದ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗಿದೆ.
ಕಳೆದ ದಿನವೇ ಬೆಂಗಳೂರನ್ನು ಲಾಕ್‍ಡೌನ್ ಮಾಡಲಾಗಿತ್ತು. ಆದರೆ ಇಂದು ಅತೀ ಹೆಚ್ಚು ಕೊರೊನಾ ಕೇಸ್‍ಗಳು ಪತ್ತೆ ಆಗಿರುವ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‍ಗಳು ಎಂದಿನಂತೆ ಓಡಾಡುತ್ತಿದ್ದವು. ಆಟೋ, ಟ್ಯಾಕ್ಸಿಗಳ ಸಂಚಾರವೂ ಎಂದಿನಂತೆ ಇತ್ತು. ಬಹುತೇಕ ಕಡೆ ಅಂಗಡಿ ಮುಂಗಟ್ಟು ತೆರೆದಿತ್ತು. ಸರ್ಕಾರಿ ಕಚೇರಿಗಳನ್ನು ಓಪನ್ ಮಾಡಲಾಗಿತ್ತು.
ಈ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿತ್ತು. ತಕ್ಷಣ ಮಧ್ಯಾಹ್ನ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ತಜ್ಞರ ಸಲಹೆಯನ್ನು ಮೀರಿ ಇಡೀ ರಾಜ್ಯವನ್ನು ಲಾಕ್‍ಡೌನ್ ಮಾಡದೇ, ಅರ್ಧಂಬರ್ಧ ಕರ್ಫ್ಯೂ ತೀರ್ಮಾನ ಕೈಗೊಂಡರು. ಮತ್ತದೇ ಕೊರೊನಾ ಪೀಡಿತ 9 ಜಿಲ್ಲೆಗಳಿಗೆ ಅನ್ವಯವಾಗುವಂತೆ ತಕ್ಷಣದಿಂದಲೇ ಜಾರಿ ಆಗುವಂತೆ ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಂಡಿದೆ.
ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಏಪ್ರಿಲ್ 1 ರವರೆಗೂ ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮೈಸೂರು, ಕಲಬುರ್ಗಿ, ಕೊಡಗು, ಧಾರವಾಡ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಕರ್ನಾಟಕದಲ್ಲಿ ಇದುವರೆಗೆ ಒಟ್ಟು 33 ವ್ಯಕ್ತಿಗಳಿಗೆ #COVIDー19 ಸೋಂಕು ಖಚಿತವಾಗಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡುವವರೆಗೂ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಾಗುವುದಿಲ್ಲ. ನಾಗರಿಕರು ಗೊಂದಲಕ್ಕೀಡಾಗಬಾರದು ಎಂದು ಈ ಕ್ರಮ ಕೈಗೊಳ್ಳಲಾಗಿದೆ. #IndiaFightsCoronavirus
9 ಜಿಲ್ಲೆಗಳಲ್ಲಿ ಏನಿರಲ್ಲ:
* ನಾಳೆಯಿಂದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರ ರದ್ದು (9 ಜಿಲ್ಲೆಗಳಿಂದ ಇತರೆ ಜಿಲ್ಲೆ ಸಂಪರ್ಕಿಸುವ ಸಾರಿಗೆ ಬಂದ್)
* ಖಾಸಗಿ ಬಸ್‍ಗಳು, ಆಟೋ-ಕ್ಯಾಬ್, ಟ್ಯಾಕ್ಸಿಗಳ ಓಡಾಡಲ್ಲ..!
* ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಇರಲ್ಲ
* ಅಂಗಡಿ, ಮಾರ್ಕೆಟ್, ಹೋಟೆಲ್ ಬಂದ್
* ಎಂಆರ್‌ಪಿ ಶಾಪ್, ಬಾರ್ & ರೆಸ್ಟೋರೆಂಟ್ ಬಂದ್
* ದೇವಸ್ಥಾನ ಬಂದ್, ಧಾರ್ಮಿಕ ಆಚರಣೆಗಳಿಗೆ ನಿಷೇಧ (ಬೆಂಗಳೂರು ಕರಗ ಸೇರಿ)
* ಗೃಹಬಂಧನದಲ್ಲಿ ಇರುವವರು ಹೊರ ಬಂದರೆ ಕ್ರಿಮಿನಲ್ ಕೇಸ್, ಜೈಲು ಶಿಕ್ಷೆ (ಹೋಂ ಕ್ವಾರಂಟೈನ್ ಮೇಲೆ ಖಾಕಿ ನಿಗಾ)
* ಗಾರ್ಮೆಂಟ್ಸ್, ಕಾರ್ಖಾನೆ ಬಂದ್ (ವೇತನ ಸಹಿತ ರಜೆ ನೀಡಬೇಕು)
* ದಿನಗೂಲಿ ನೌಕರರಿಗೆ ಸರ್ಕಾರದಿಂದಲೇ ಆಹಾರದ ವ್ಯವಸ್ಥೆ
* ಕರ್ಫ್ಯೂ ಆದೇಶ ಉಲ್ಲಂಘಿಸಿದ್ರೆ 2 ವರ್ಷ ಜೈಲು (ಐಪಿಸಿ ಸೆಕ್ಷನ್ 270(ಸೋಂಕು ಹರಡುವವರ ವಿರುದ್ಧದ ಕೇಸ್)ರ ಅಡಿಯಲ್ಲಿ ಕೇಸ್)
* ಸರ್ಕಾರಿ ಮತ್ತು ಸರ್ಕಾರೇತರ ಇಲಾಖೆಗಳ ಅಗತ್ಯ ಸೇವೆ ಮಾತ್ರ ಲಭ್ಯ
* 50 ವರ್ಷ ಮೇಲ್ಪಟ್ಟ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ರಜೆ
* ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವ ಉದ್ಯೋಗಿಗಳಿಗೂ ರಜೆ
9 ಜಿಲ್ಲೆಗಳಲ್ಲಿ ಏನೇನು ಇರುತ್ತೆ:
* ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾಂಸ, ಮೀನು, ಹಣ್ಣುಗಳು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳ ಸೇವೆ ಲಭ್ಯ.
* ಪೆಟ್ರೋಲ್ ಬಂಕ್, ಎಲ್ ಪಿಜಿ ಗ್ಯಾಸ್ ಕೇಂದ್ರಗಳು, ಆಯಿಲ್ ಏಜೆನ್ಸಿಗಳು ಮತ್ತು ಸಂಬಂಧಿತ ಗೋದಾಮುಗಳು, ಎಲ್ಲ ರೀತಿಯ ಸರಕು ಸಾಗಣೆ ಸೇವೆಗಳು ಲಭ್ಯ.
* ಆಸ್ಪತ್ರೆಗಳು, ಕ್ಲಿನಿಕ್ ಗಳು, ಮೆಡಿಕಲ್ ಶಾಪ್‍ಗಳು, ಆಪ್ಟಿಕಲ್ ಸ್ಟೋರ್‌ಗಳು, ಡಯಾಗ್ನೋಸ್ಟಿಕ್ ಕೇಂದ್ರಗಳು, ಇತರೇ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಕೇಂದ್ರಗಳು, ಗೋದಾಮುಗಳು ಮತ್ತು ಕಾರ್ಖಾನೆಗಳ ಸೇವೆ ಲಭ್ಯ.
* ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸೇವೆಗಳು ಲಭ್ಯ.
* ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಗಳು ಮತ್ತು ಅಂಚೆ ಸೇವೆಗಳು ಲಭ್ಯ.
* ಅಗತ್ಯ ಸೇವೆಗಳನ್ನು ನಿರ್ವಹಿಸುವ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ.
* ವಿದ್ಯುತ್, ನೀರು ಮತ್ತು ಇತರೇ ಪೌರ ಸೇವೆಗಳು ಲಭ್ಯ.
* ಬ್ಯಾಂಕ್ ಸೇವೆಗಳು, ಎಟುಎಂ ಕೇಂದ್ರಗಳು, ಟೆಲಿಕಾಂ ಕೇಂದ್ರಗಳು, ಇಂಟರ್ನೆಟ್ ಮತ್ತು ಕೇಬಲ್ ಸೇವೆಗಳು ಲಭ್ಯ.
* ಇ ಕಾಮರ್ಸ್ ಅಥವಾ ಆನ್ ಲೈನ್ ಮೂಲಕ ಹೋಂ ಡೆಲಿವರಿ ಸೇವೆಗಳು, ರೆಸ್ಟೋರೆಂಟ್ ಹೋಂ ಡೆಲಿವರಿ ಸೇವೆಗಳು ಲಭ್ಯ.
* ಸರ್ಕಾರದ ಕ್ಯಾಂಟೀನ್ ಸೇವೆಗಳು ಲಭ್ಯ.
* ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳ ಸೇವೆ ಲಭ್ಯ
* ಖಾಸಗಿ ಭದ್ರತಾ ಸೇವೆಗಳು ಲಭ್ಯ.
ಯಾದಗಿರಿ: ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲವೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ನಳಿನ್ ಕುಮಾರ್ ಕಟೀಲ್ ನಮ್ಮ ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 30 ಜಿಲ್ಲೆಗಳಿದ್ದರೂ ನಗರದ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲೆಷ್ಟು ಜಿಲ್ಲೆಗಳಿವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವಿರಿ & @BJP4Karnataka ದ ಅಧ್ಯಕ್ಷರಾಗಿರುವಿರಿ, ಪ್ರಾಥಮಿಕ ಶಾಲೆಯ ಪಠ್ಯ ಪುಸ್ತಕವನ್ನು ಒಮ್ಮೆ ಕೊಂಡು ಓದಿ, ಕನಿಷ್ಠವಾದರೂ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿರಿ. pic.twitter.com/sEexeCFIIp
ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಿದ ಮೇಲೆ ಇಡೀ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ಜಿಲ್ಲೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟನೆಯ ಪರ್ವ ನಡೆಸುತ್ತಿದ್ದೇವೆ. ಮತಗಟ್ಟೆ ಸಮಿತಿ ರಚನೆ ಮಾಡುವುದು, ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದೇವೆ. ಈಗಾಗಲೇ 31 ಜಿಲ್ಲೆಗಳ ಪ್ರವಾಸ ಮಾಡಿದ್ದು, ರಾಯಚೂರಿನ ನಂತರ ಯಾದಗಿರಿ 32ನೇ ಜಿಲ್ಲೆಗೆ ಆಗಮಿಸಿದ್ದೇನೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಹೇಳಿದರು.
ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ನಿಮಿತ್ತ ರಾಷ್ಟ್ರಾದ್ಯಂತ ಪಾದಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿಯೂ ಪ್ರತಿ ಜಿಲ್ಲೆಗಳಲ್ಲಿ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ. ಈ ಆಚರಣೆಗೆ ವೇಗ ನೀಡಲು ಯಾದಗಿರಿಗೆ ಆಗಮಿಸಿದ್ದೇನೆ. ಈಗಾಗಲೇ 31 ಜಿಲ್ಲೆಗಳನ್ನು ಪ್ರವಾಸ ಮಾಡಿ ಈಗ 32ನೇ ಜಿಲ್ಲೆ ಯಾದಗಿರಿಗೆ ಬಂದಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಹವಾಮಾನ ಇಲಾಖೆಯು ರಾಜ್ಯದ 6 ಜಿಲ್ಲೆಗಳಿಗೆ ಇಂದು ಹಳದಿ ಅಲರ್ಟ್ ಘೋಷಿಸಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಎಂ ಮೈತ್ರಿ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆ ಭಾರೀ ಮಳೆಯಾಗಲಿದೆ. ಕರಾವಳಿ ಪ್ರದೇಶಗಳಲ್ಲಿ ಇನ್ನೂ ಎರಡ್ಮೂರು ದಿನಗಳ ಕಾಲ ವರುಣ ಅಬ್ಬರಿಸುವ ಸಾಧ್ಯತೆಗಳಿದೆ. ಕೆಲವು ಭಾಗಗಳಲ್ಲಿ 7ರಿಂದ 11 ಸೆಂಟಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಸಂಜೆ ಚದುರಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಸುಂದರ್ ಎಂ ಮೈತ್ರಿ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಘಟನೆ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಶಿವಾನಂದಪ್ಪ ಹರಿಜನ (45) ಮೃತ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಶಿವಮೊಗ್ಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ ಜಿಲ್ಲೆಯಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತಿದ್ದು, ಸವಾರರು ಪರದಾಡುವಂತಾಗಿದೆ.
ಬೆಂಗಳೂರು: ರಾಜ್ಯದಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಪ್ರವಾಹಕ್ಕೆ ಇದುವರೆಗೆ 9 ಮಂದಿ ಮೃತಪಟ್ಟಿದ್ದು, 52 ಜಾನುವಾರು ಬಲಿಯಾಗಿವೆ.
ರಾಜ್ಯದ 12 ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರವಾಹ ಉಂಟಾಗಿದೆ. ಈ ಪ್ರದೇಶಗಳ 503 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ 44,000 ಜನರನ್ನು ಈಗಾಗಲೇ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಮುಟ್ಲುಪಾಡಿಯಲ್ಲಿ ರಣ ಭೀಕರ ಬಿರುಗಾಳಿ- 100 ಮನೆಗಳಿಗೆ ಹಾನಿ
ಪ್ರವಾಹದಿಂದಾಗಿ 2,611 ಮನೆಗಳು ಹಾನಿಯಾಗಿವೆ. ಸಂತ್ರಸ್ತರಿಗಾಗಿ 272 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 17,000 ಮಂದಿ ಆಶ್ರಯ ಪಡೆದಿದ್ದಾರೆ. ಹಳ್ಳ ಹಾಗೂ ನದಿ ಪಾತ್ರದ ಜಮೀನು ಸೇರಿದಂತೆ 1,48,293 ಹೆಕ್ಟೇರ್ ಜಮೀನುಗಳ ಬೆಳೆ ನಾಶವಾಗಿದೆ.
ವರುಣ ಅಬ್ಬರಕ್ಕೆ ಮೂಕ ಪ್ರಾಣಿಗಳ ವೇದನೆ ಮುಗಿಲು ಮುಟ್ಟಿದೆ. ಕೆಲವರು ಜಾನುವಾರುಗಳನ್ನು ತಮ್ಮ ಜೊತೆಗೆ ಕರೆದೊಯ್ದರೆ ಕೆಲವರು ಗ್ರಾಮಗಳಲ್ಲೇ ಬಿಟ್ಟು ಹೋಗಿದ್ದಾರೆ. ಸ್ಥಳೀಯರ ಜೊತೆ ಸೇರಿ ಎಸ್‍ಡಿಆರ್‍ಎಫ್ ತಂಡವು ಸುಮಾರು 17,000 ಜಾನುವಾರುಗಳನ್ನು ರಕ್ಷಣೆ ಮಾಡಿದೆ. ಅವುಗಳಿಗೆ 3,000 ಕ್ಯಾಂಪ್ ವ್ಯವಸ್ಥೆ ಮಾಡಲಾಗಿದ್ದು, ಮೇವು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಘಟಪ್ರಭಾ ಪ್ರವಾಹದಲ್ಲಿ ಸಿಲುಕಿದ್ದ ತಂದೆ, ಮಗನ ರಕ್ಷಣೆ
ಬೆಂಗಳೂರು: ನಗರದಲ್ಲಿ ಭಾನುವಾರ ಸಂಜೆ ಅಬ್ಬರಿಸಿದ್ದ ಮಳೆ ಮತ್ತೆ ರಾತ್ರಿ ಕೂಡ ಸುರಿದಿದೆ. ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ತ್ಯಾಗರಾಜನಗರದ ವಿದ್ಯಾಪೀಠ ಸರ್ಕಲ್ ಬಳಿ ಶ್ರೀ ಸಾಯಿ ಸನ್ನಿಧಿ ಅಪಾರ್ಟ್ ಮೆಂಟ್ ಸೆಲ್ಲರ್‍ಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ ಪರಿಣಾಮ 5 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಕಾಂಪೌಂಡ್ ಕುಸಿದಿದ್ದಕ್ಕೆ 10 ಕ್ಕೂ ಹೆಚ್ಚು ಕಾರುಗಳು 6 ದ್ವಿಚಕ್ರ ವಾಹನಳಿಗೆ ಹಾನಿಯಾಗಿದೆ.
ನಗರದಲ್ಲಿ 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಕೆಲವು ಕಡೆ ಬಿರುಗಾಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಮರಗಳ ರೆಂಬೆಗಳು ಮುರಿದು ಬಿದ್ದಿವೆ. ವಿದ್ಯಾಪೀಠ ಸರ್ಕಲ್‍ನಲ್ಲಿ ಮಳೆ ನೀರು ನುಗ್ಗಿ ಕಾಂಪೌಂಡ್ ಕುಸಿದು ಅಪಾರ್ಟ್ ಮೆಂಟ್‍ನಲ್ಲಿ ನಿಲ್ಲಿಸಿದ್ದ ಕಾರಿಗೆ ಡ್ಯಾಮೇಜ್ ಆಗಿದೆ.
ಎಲ್ಲೆಲ್ಲಿ, ಎಷ್ಟೆಷ್ಟು ಮರ ಬಿದ್ದಿದೆ?:
ಕೊಡಿಗೇಹಳ್ಳಿ-1
ಸಹಕಾರನಗರ-2
ವಿದ್ಯಾರಣ್ಯಪುರ -2
ಕಾಚರಕನಹಳ್ಳಿ-1
ಸುಲ್ತಾನ್ ಪಾಳ್ಯ-1
ಲುಂಬಿಣಿಗಾರ್ಡನ್-1
ಹೆಚ್.ಬಿ.ಆರ್ ಲೇಔಟ್-1
ಲುಂಬಿಣಿಗಾರ್ಡನ್-1
ಹೆಚ್‍ಎಸ್‍ಆರ್.ಲೇಔಟ್-1 ಮರ ಬಿದ್ದ ವರದಿಯಾಗಿದೆ.
ಇತ್ತ ರಾಜ್ಯದ ಹಲವೆಡೆಯೂ ಭಾರೀ ಮಳೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿ 50 ವರ್ಷದ ರೈತ ಬಸವರಾಜು ಸೌಧೆ ತರಲು ಹೋದಾಗ ಸಿಡಿಲು ಬಡಿದು ಮೃತಪಟ್ಟರೆ, ಇದೇ ತಾಲೂಕಿನ ಹಂದನಕೆರೆ ಗ್ರಾಮ 75 ವರ್ಷದ ಗಂಗಮ್ಮ ದನ ಮೇಯಿಸಲು ಹೋದಾಗ ಶೆಡ್ ಕುಸಿದು ಸಾವನ್ನಪ್ಪಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮಳೆರಾಯನ ಆರ್ಭಟ ಜೋರಾಗಿದ್ದು, ಮಳೆ ಸಾಕಪ್ಪ ಸಾಕು ಅನ್ನುವಷ್ಟರ ಮಟ್ಟಿಗೆ ರೌದ್ರ ನರ್ತನ ತೋರುತ್ತಿದ್ದಾನೆ. ಆದರೆ ಇನ್ನೊಂದು ಭಾಗದಲ್ಲಿ ಮಳೆಯ ಕೊರತೆಯಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಮಳೆ ಅನೇಕ ಅನಾಹುತಗಳನ್ನು ಸೃಷ್ಟಿ ಮಾಡಿದ್ದು, ನಿರೀಕ್ಷೆಗೂ ಮೀರಿ ವರುಣ ದೇವ ಕೃಪೆ ತೋರಿದ್ದಾನೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ. 25 ರಷ್ಟು ಮಳೆಯಾಗಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದ್ದು, ವಾಡಿಕೆಯಷ್ಟು ಮಳೆಯಾಗದೇ ಇರುವುದು ಜನರಲ್ಲಿ ಆತಂಕ ಮೂಡಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಭಾಗದ 7 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ.
ಬೆಂಗಳೂರಿನಲ್ಲಿ ಕೂಡ ಈ ವರ್ಷ ಭಾರಿ ಮಳೆಯ ಕೊರತೆಯಾಗಿದ್ದು, ವಾಡಿಕೆಯಂತೆ 27 ಸೆ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 17 ಸೆ.ಮೀ ಮಳೆಯಾಗಿದೆ. ಶೇ. 25 ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಮಲೆನಾಡು ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಸದ್ಯ ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ವರುಣ ಒಂದು ಕಡೆ ಪ್ರವಾಹ ಸೃಷ್ಟಿ ಮಾಡಿದರೆ, ಇನ್ನೊಂದು ಕಡೆ ಬರಗಾಲ ಛಾಯೆ ಮೂಡಿದೆ.