Tag: District

  • ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ

    ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ ಜಿಟಿ ಮಳೆ

    ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಭಾನುವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ಮತ್ತಿಕೆರೆ, ಹೆಬ್ಬಾಳ, ಯಶವಂತಪುರ ರಾಜಾಜಿನಗರ, ವಿಜಯನಗರ, ಸ್ಯಾಟಲೈಟ್ ಹಾಗೂ ಜಾಲಹಳ್ಳಿ ಕ್ರಾಸ್ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಭಾನುವಾರವೂ ಬೆಳ್ಳಂಬೆಳಗ್ಗೆ ಮಳೆಯಾಗಿತ್ತು. ಇಂದು ಕೂಡ ಮುಂದುವರಿದಿದೆ. ಪರಿಣಾಮ ಬೆಳಗ್ಗೆ ಕೆಲಸಕ್ಕೆ ತೆರಳುವವರಿಗೆ ಕಿರಿಕಿರಿ ಉಂಟುಮಾಡಿದೆ.

    ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ನಾಳೆಯೂ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಸೆ.24ರವರೆಗೂ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ್‍ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಬಳ್ಳಾರಿಯನ್ನು ಇಬ್ಭಾಗ ಮಾಡಲು ಬಿಡಲ್ಲ- ಶಾಸಕ ಸೋಮಶೇಖರ್ ರೆಡ್ಡಿ

    ಬಳ್ಳಾರಿಯನ್ನು ಇಬ್ಭಾಗ ಮಾಡಲು ಬಿಡಲ್ಲ- ಶಾಸಕ ಸೋಮಶೇಖರ್ ರೆಡ್ಡಿ

    – ಹೊಸಪೇಟೆಯನ್ನು ಜಿಲ್ಲೆಯಾಗಿ ಮಾಡ್ಬೇಡಿ

    ಬಳ್ಳಾರಿ: ಜಿಲ್ಲೆಯನ್ನು ಇಬ್ಭಾಗ ಮಾಡಲು ಬಿಡಲ್ಲ. ಹೊಸಪೇಟೆ ಜಿಲ್ಲೆ ಮಾಡಿದರೆ ಇದೊಂದು ತುಘಲಕ್ ದರ್ಬಾರ್ ಆಗುತ್ತದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ನಗರದ ತಾಳೂರು ರಸ್ತೆಯ ಒಂದನೇ ವಾರ್ಡಿನಲ್ಲಿ ಮಳೆ ಹಾನಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆ ಮಾಡುವ ವಿಚಾರ ನಮಗೆ ಒಪ್ಪಿಗೆ ಇಲ್ಲ. ಬಳ್ಳಾರಿ ಜಿಲ್ಲೆಯ ಹೆಸರನ್ನೇ ವಿಜಯನಗರ ಎಂದು ಬದಲಿಸಿವುದು ಭಾವನಾತ್ಮಕ ವಿಚಾರ, ಮುಂದೆ ಕೂಡ ಅಖಂಡ ಜಿಲ್ಲೆ ಒಗ್ಗಟ್ಟಾಗಿಯೇ ಇರಬೇಕು. ಈ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿ ಮಾಡುತ್ತೇವೆ. ಜಿಲ್ಲೆಯನ್ನು ವಿಭಜಿಸುವ ಪ್ರಕ್ರಿಯೆಗೆ ಸ್ವಾಮೀಜಿಗಳು ಬೆಂಬಲ ನೀಡಿರುವುದು ಬೇಸರ ತರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಹೊಸಪೇಟೆ ಜಿಲ್ಲೆ ಆಗ್ಬೇಕು- ಎರಡು ವಿಶೇಷ ವಿಮಾನದಲ್ಲಿ ಬರಲಿದೆ ನಿಯೋಗ

    ನಿಯೋಗದ ಜೊತೆಗೆ ಹೋದವರೆಲ್ಲ ಸ್ವಾರ್ಥಿಗಳು. ಯಾರದ್ದೋ ಸ್ಚಾರ್ಥಕ್ಕೆ ವಿಜಯನಗರ ಜಿಲ್ಲೆ ಮಾಡುತ್ತಿದ್ದಾರೆ ಎಂದು ಶಾಸಕರು, ಆನಂದ್ ಸಿಂಗ್ ಗೆ ಟಾಂಗ್ ಕೊಟ್ಟರು. ಆಖಂಡ ಬಳ್ಳಾರಿ ಜಿಲ್ಲೆ ನಮ್ಮ ಆಗ್ರಹ. ಬಳ್ಳಾರಿಗೆ ಜಿಲ್ಲೆಗೆ ವಿಜಯನಗರವೆಂದು ನಾಮಕರಣ ಮಾಡಿ. ಬೆಳಗಾವಿಯಲ್ಲಿ 18 ತಾಲೂಕುಗಳಿವೆ. ಅನಂತಪುರ ಜಿಲ್ಲೆ 300 ಕಿ.ಮಿ. ವಿಸ್ತೀರ್ಣ ಇದೆ. ಅವರಗಿಲ್ಲದ ತೊಂದರೆ ನಮಗೆ ಬಂದಿದೆಯಾ? ಬೆಳಗಾವಿ ಯಾಕೆ ವಿಭಜನೆ ಮಾಡ್ತಿಲ್ಲ? ಬಳ್ಳಾರಿಯೇ ಕಣ್ಣಿಗೆ ಕಾಣ್ತಿದೆಯಾ? ಜಿಲ್ಲೆಯ ಯಾವ ನಾಯಕರ ಅಭಿಪ್ರಾಯವೂ ಪಡೆದಿಲ್ಲ. ಹೀಗಾಗಿ ಈ ಬಗ್ಗೆ ತರಾತುರಿಯಲ್ಲಿ ಘೋಷಣೆ ಮಾಡದಂತೆ ಸಿಎಂ ಬಳಿ ಮನವಿ ಮಾಡುವುದಾಗಿ ತಿಳಿಸಿದರು.

  • ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಜಗಳ ಆಡಿರೋದು ಕೆಟ್ಟ ಗಳಿಗೆ – ಆನಂದ್ ಸಿಂಗ್ ಹೋರಾಟಕ್ಕೆ ಕಂಪ್ಲಿ ಗಣೇಶ್ ಸಾಥ್

    ಬಳ್ಳಾರಿ: ನಾವು ಜಗಳ ಆಡಿರೋದು ಒಂದು ಕೆಟ್ಟ ಗಳಿಗೆ ಆನಂದ್ ಸಿಂಗ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯನ್ನು ಹೊಸ ಜಿಲ್ಲೆಯಾಗಿ ಮಾಡಬೇಕು ಎಂದು ಹೊರಟಿರುವ ಅನರ್ಹ ಶಾಸಕ ಆನಂದ್ ಸಿಂಗ್‍ಗೆ ಬೆಂಬಲ ನೀಡುವುದಾಗಿ ಹೇಳಿದರು. ಇದರ ಜೊತೆಗೆ ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಕಂಪ್ಲಿ ಕೂಡ ಹೊಸಪೇಟೆಗೆ ಸೇರಿಸಲು ಮನವಿ ಮಾಡುತ್ತೆವೆ. ಹೊಸಪೇಟೆ ಜಿಲ್ಲೆಯಾದರೇ ಕಂಪ್ಲಿ ಹೊಸಪೇಟೆ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳುವ ಮೂಲಕ ಆನಂದ್ ಸಿಂಗ್ ನಿಯೋಗದಲ್ಲಿ ನಾನು ಕೂಡ ಇರುತ್ತೇನೆ ಎಂದು ಹೇಳಿದರು. ಇಂದು ಅನಂದ್ ಸಿಂಗ್ ನೇತೃತ್ವದ ನಿಯೋಗ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಹೊಸಪೇಟೆಯನ್ನು ಜಿಲ್ಲೆ ಮಾಡಲು ಮನವಿ ಸಲ್ಲಿಸಲಿದ್ದಾರೆ.

  • ಹೊಸಪೇಟೆ ಜಿಲ್ಲೆ ಆಗ್ಬೇಕು- ಎರಡು ವಿಶೇಷ ವಿಮಾನದಲ್ಲಿ ಬರಲಿದೆ ನಿಯೋಗ

    ಹೊಸಪೇಟೆ ಜಿಲ್ಲೆ ಆಗ್ಬೇಕು- ಎರಡು ವಿಶೇಷ ವಿಮಾನದಲ್ಲಿ ಬರಲಿದೆ ನಿಯೋಗ

    ಬಳ್ಳಾರಿ: ಹೊಸಪೇಟೆಯನ್ನು ಜಿಲ್ಲೆ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂಗ್, ಎರಡು ವಿಶೇಷ ವಿಮಾನದ ಮೂಲಕ ನಿಯೋಗವನ್ನು ಬೆಂಗಳೂರಿಗೆ ಕರೆ ತರಲಿದ್ದಾರೆ.

    ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ಜಿಲ್ಲೆ ಮಾಡಲು ಸಿಎಂ ಯಡಿಯೂರಪ್ಪ ಮೇಲೆ ಒತ್ತಡ ಹಾಕಲು ಆನಂದ್ ಸಿಂಗ್ ಸಿದ್ಧತೆ ನಡೆಸುತ್ತಿದ್ದಾರೆ. ಹೊಸಪೇಟೆ ವ್ಯಾಪ್ತಿಯ ಸ್ವಾಮೀಜಿ, ಸಂಘ ಸಂಸ್ಥೆ, ಮುಖಂಡರನ್ನು ಎಂಎಲ್‍ಸಿಗಳನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಿದ್ದಾರೆ.

    ಎರಡು ವಿಶೇಷ ವಿಮಾನಗಳಲ್ಲಿ ಹೊರಟಿರುವ ನಿಯೋಗದಲ್ಲಿ ಉಜ್ಜೈನಿ ಶ್ರೀ, ಸಂಗನ ಬಸವ ಶ್ರೀಗಳು ಸೇರಿದಂತೆ ಮಾಜಿ ಶಾಸಕ ಸಿರಾಜ್ ಶೇಖ್, ನೇಮಿರಾಜ ನಾಯ್ಕ ಮತ್ತು ಕಾಂಗ್ರೆಸ್ ಎಂಎಲ್‍ಸಿ ಅಲ್ಲಂ ವೀರಭದ್ರಪ್ಪ ಮತ್ತು ಕೆ.ಸಿ. ಕೊಂಡಯ್ಯ ಇರಲಿದ್ದಾರೆ. ಈ ನಿಯೋಗವು ಇಂದು ಹತ್ತು ಗಂಟೆಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೊಸಪೇಟೆಯನ್ನು ಜಿಲ್ಲೆ ಮಾಡಲೇಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದೆ ಎನ್ನಲಾಗಿದೆ.

  • ಆರೋಗ್ಯ ಸಚಿವರ ಜಿಲ್ಲೆಯಲ್ಲೇ ತುಕ್ಕು ಹಿಡಿದು ನಿಂತ ಅಂಬುಲೆನ್ಸ್- ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ

    ಆರೋಗ್ಯ ಸಚಿವರ ಜಿಲ್ಲೆಯಲ್ಲೇ ತುಕ್ಕು ಹಿಡಿದು ನಿಂತ ಅಂಬುಲೆನ್ಸ್- ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ

    ಚಿತ್ರದುರ್ಗ: ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಜಿಲ್ಲೆಯ ಸಮಸ್ಯೆಗಳಿಗೆಲ್ಲಾ ಪರಿಹಾರವಾಗುತ್ತವೆ ಎಂಬ ನಂಬಿಕೆಯಲ್ಲಿ ಎಲ್ಲಾ ಜಿಲ್ಲೆಗಳ ಜನರಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.

    ಹೊರಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ರಂಗು ರಂಗಿನ ಬಣ್ಣದಿಂದ ಮಿಂಚುವ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಮಲಗಲು ಸುಸಜ್ಜಿತ ಬೆಡ್‍ಗಳಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದ್ದೂ, ಆರೋಗ್ಯ ಸಚಿವರ ಮಹತ್ವಾಕಾಂಕ್ಷೆ ಯೋಜನೆ ಎನಿಸಿದ್ದ 108 ಅಂಬುಲೆನ್ಸ್‌ಗಳು ಸಹ ಕೆಟ್ಟು ಮೂಲೆ ಸೇರಿದೆ.

    ರೋಗಿಗಳ ಪಾಲಿಗೆ ಪ್ರಾಣ ಉಳಿಸುವ ಸಂಜೀವಿನಿಯಾಗಬೇಕಿದ್ದ ಜಿಲ್ಲಾಸ್ಪತ್ರೆಯ ಅಂಬುಲೆನ್ಸ್‌ಗಳು ತುಕ್ಕು ಹಿಡಿದು ಮೂಲೆ ಸೇರಿದೆ. ಹೀಗೆ ಕೆಟ್ಟು ನಿಂತಿರುವ ಅಂಬುಲೆನ್ಸ್‌ಗಳು ಅಕ್ರಮ ಚಟುವಟಿಕೆಯ ತಾಣಗಳಾಗಿವೆ. ಆಸ್ಪತ್ರೆಯಲ್ಲಿ ಹನಿ ನೀರಿಗೂ ರೋಗಿಗಳು ಪರದಾಟ ನಡೆಸುತ್ತಿದ್ದರೂ ಕೇಳುವವರು ಇಲ್ಲದಂತಾಗಿದೆ. ಸುಸಜ್ಜಿತ ಬೆಡ್‍ಗಳಿಲ್ಲದೆ ರೋಗಿಗಳು ಕಷ್ಟಪಡುತ್ತಿದ್ದಾರೆ. ಹರಿದು, ಹಳೆಯದಾದ ಬೆಡ್‍ಗಳ ಮೇಲೆ ಅಧಿಕಾರಿಗಳು ತೇಪೆ ಹಾಕಿದ್ದಾರೆ.

    ಅಂಬುಲೆನ್ಸ್‌ಗಾಗಿ ರೋಗಿಗಳ ಪರದಾಡುತ್ತಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿರೋದು ಕೇವಲ ಎರಡು ಅಂಬುಲೆನ್ಸ್ ಇದೆ, ಅದು ಕೂಡ ರಿಪೇರಿಗೆ ಅಂತ ಮೂಲೆ ಸೇರಿ ತುಕ್ಕು ಹಿಡಿದಿವೆ. ಇನ್ನು 17 ಸರ್ಕಾರಿ 108 ಅಂಬುಲೆನ್ಸ್‌ಗಳು ಮದ್ಯವ್ಯಸನಿಗಳ ಅಕ್ರಮ ಚಟುವಟಿಕೆ ಕೇಂದ್ರವಾಗಿದೆ. ಈ ನಿರ್ಲಕ್ಷ್ಯದಿಂದ ಸರ್ಕಾರಿ ಅಂಬುಲೆನ್ಸ್‌ಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಬೇರೆ ದಾರಿಯಿಲ್ಲದೆ ಖಾಸಗಿ ಅಂಬುಲೆನ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಖಾಸಗಿ ಅಂಬುಲೆನ್ಸ್‌ಗಳ ದರ್ಬಾರ್ ಜೋರಾಗಿದೆ.

    ಈ ಮಧ್ಯೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗು ಖಾಸಗಿ ಅಂಬುಲೆನ್ಸ್ ಮಾಲಿಕರು ಕೈ ಕೈ ಮಿಲಾಯಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಹೀಗಾಗಿ ಖಾಸಗಿ ಅಂಬುಲೆನ್ಸ್ ಹಾವಳಿಗೆ ಬ್ರೇಕ್ ಹಾಕೋರು ಯಾರು ಇಲ್ಲದಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈಗಲಾದರೂ ಬಡ ರೋಗಿಗಳ ನೆರವಿಗೆ ಆರೋಗ್ಯ ಸಚಿವ ಶ್ರೀರಾಮುಲು ಬರುತ್ತಾರಾ ಎಂದು ಕಾದು ನೋಡಬೇಕಿದೆ.

  • ರಣಬಿಸಿಲಿಗೆ ತತ್ತರಿಸಿದ ರಾಯಚೂರು ಜಿಲ್ಲೆಯ ಜನರು

    ರಣಬಿಸಿಲಿಗೆ ತತ್ತರಿಸಿದ ರಾಯಚೂರು ಜಿಲ್ಲೆಯ ಜನರು

    ರಾಯಚೂರು: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ರಂಗೇರಿದ್ದರೆ. ಬಿಸಿಲನಾಡು ರಾಯಚೂರಿನಲ್ಲಿ ಮಾತ್ರ ಚುನಾವಣಾ ಕಣ ಮಂಕಾದ್ರೂ ರಣಬಿಸಿಲೇ ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ. ಚುನಾವಣೆ ಹಿನ್ನೆಲೆ ಸರ್ಕಾರಿ ಕಚೇರಿ ಸಮಯದಲ್ಲೂ ಬದಲಾವಣೆಯಾಗದ ಹಿನ್ನೆಲೆ ಚುನಾವಣಾ ಸಿಬ್ಬಂದಿಯೂ ಬಿಸಿಲಿಗೆ ನಲುಗಿಹೋಗಿದ್ದಾರೆ. ಇನ್ನೂ ಸಾರ್ವಜನಿಕರಂತೂ ಮನೆಯಿಂದ ಹೊರಬರಲು ಹೆದರುವಂತಾಗಿದ್ದು, ಮಣ್ಣಿನ ಗಡಿಗೆ, ಜ್ಯೂಸ್ ವ್ಯಾಪಾರ ಜೋರಾಗಿ ನಡೆದಿದೆ.

    ಬಿಸಿಲನಾಡು ರಾಯಚೂರು ಈಗ ಅಕ್ಷರಶಃ ರಣಬಿಸಿಲಿನಿಂದಾಗಿ ಬೆಂದು ಹೋಗುತ್ತಿದೆ. ಚುನಾವಣೆಯ ಕಾವು ಜಿಲ್ಲೆಯಲ್ಲಿ ಕಾಣದಿದ್ದರೂ ಕಳೆದ ವರ್ಷಕ್ಕಿಂತಲೂ ಈ ಬಾರಿ ಅತೀ ಹೆಚ್ಚು ಬಿಸಿಲು ದಾಖಲಾಗುವ ಲಕ್ಷಣಗಳಿದ್ದು ಜನ ತತ್ತರಿಸಿ ಹೋಗಿದ್ದಾರೆ. ಬಿರು ಬೇಸಿಗೆಯಲ್ಲೇ ಲೋಕಸಭಾ ಚುನಾವಣೆ ಬಂದಿರುವುದು ರಾಯಚೂರಿನ ಸರ್ಕಾರಿ ನೌಕರರಿಗಂತೂ ಹೇಳತೀರದ ಕಷ್ಟತಂದಿದೆ. ಯಾಕಂದ್ರೆ ಬೇಸಿಗೆ ಆರಂಭದಲ್ಲೇ ರಣಬಿಸಿಲು ಬಂದಿದ್ದು, ಮತದಾನ ವೇಳೆಗೆ ಅದಿನ್ನೆಷ್ಟು ತಾಪಮಾನ ದಾಖಲಾಗಿರುತ್ತದೋ ಗೊತ್ತಿಲ್ಲ.

    ಈಗಾಗಲೇ 39 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಧ್ಯಾಹ್ನ ಹೊರಗಡೆ ಬರುವುದೇ ಕಷ್ಟವಾಗಿದೆ. ಅತಿಯಾದ ಬಿಸಿಲಿನಿಂದಾಗಿ ಕಳೆದ ವರ್ಷ ಶಿಶುಗಳು ತೀವ್ರತರದ ಕಾಯಿಲೆಗಳಿಗೆ ತುತ್ತಾಗಿದ್ದವು. ಕೆಲ ಗ್ರಾಮಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಜನ ಬಳಲಿದ್ದರು. ಇನ್ನೂ ಈ ಬಾರಿಯ ಬಿಸಿಲು ಯಾವ್ಯಾವ ಸಮಸ್ಯೆಗಳನ್ನು ತಂದೊಡ್ಡಲಿದೆಯೋ ಗೊತ್ತಿಲ್ಲ. ಸಾರ್ವಜನಿಕರಂತೂ ಈ ಬಾರಿಯ ಬಿಸಿಲಿಗೆ ಹೆದರಿದ್ದಾರೆ.

    ಆರ್ ಟಿಪಿಎಸ್ ಜೊತೆ ವೈಟಿಪಿಎಸ್ ಶಾಖೋತ್ಪನ್ನು ವಿದ್ಯುತ್ ಕೇಂದ್ರ ಕಾರ್ಯಾರಂಭಿಸಿದ್ದು ಕೂಡ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣಿನ ಅಂಗಡಿಗಳು, ಎಳನೀರು, ಜ್ಯೂಸ್ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ವಿದ್ಯುತ್ ಲೋಡ್ ಶಡ್ಡಿಂಗ್ ಹಿನ್ನೆಲೆ ಫ್ಯಾನ್, ರೆಫ್ರಜರೇಟರ್ ಕೆಲಸ ಮಾಡದೇ ತತ್ತರಿಸುವ ಜನ ಮನೆಯಲ್ಲಿ ತಣ್ಣನೆ ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಅವಲಂಬಿಸುತ್ತಿದ್ದಾರೆ. ಹೀಗಾಗಿ ಬೇಸಿಗೆ ಕಾಲದ ವ್ಯಾಪಾರಗಳು ಜೋರಾಗಿ ನಡೆದಿವೆ.

    ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಬಿ.ವಿ.ನಾಯಕ್‍ಗೆ ಎದುರಾಳಿಯಾಗಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಚುನಾವಣಾ ರಂಗು ಇನ್ನೂ ಏರಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಂತೂ ಬಿಸಿಲಿನಿಂದ ಎಲ್ಲರೂ ಹೈರಾಣಾಗುವುದಂತೂ ಸತ್ಯ.

  • ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ – ಮಗ ಸತ್ತ ವಾರಕ್ಕೆ ತಾಯಿ ಸಾವು

    ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ – ಮಗ ಸತ್ತ ವಾರಕ್ಕೆ ತಾಯಿ ಸಾವು

    ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಮತ್ತಿಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಈ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.

    ಸಾಗರ ತಾಲೂಕು ಅರಲಗೋಡು ಗ್ರಾಮದ ಶ್ವೇತಾ (17) ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದು, ಮಧ್ಯಾಹ್ನ ವಾಟೆಮಕ್ಕಿ ಗ್ರಾಮದ ರಾಮಕ್ಕ ಎಂಬ ಮಹಿಳೆ ಮೃತಪಟ್ಟಿದ್ದಾರೆ.

    ಕಳೆದ ಒಂದು ವಾರದಿಂದ ಇಬ್ಬರು ಮಂಗನ ಕಾಯಿಲೆಯಿಂದ ಜ್ವರದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಮೃತ ರಾಮಕ್ಕನ ಮಗ ಮಂಜುನಾಥ್ ಕಳೆದ ವಾರ ಹಿಂದೆಯಷ್ಟೇ ಮಂಗನ ಕಾಯಿಲೆಗೆ ಬಲಿಯಾಗಿದ್ದ. ಪ್ರಮುಖವಾಗಿ ಸಾಗರ ತಾಲೂಕಿನ ಐದು ಜನ ಮಂಗನ ಕಾಯಿಲೆಗೆ ಮೃತಪಟ್ಟಿದ್ದಾರೆ, ತೀರ್ಥಹಳ್ಳಿ ತಾಲೂಕಿನ ಇಬ್ಬರು ಮೃತಪಟ್ಟಿದ್ದರು.

    ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನ ಐವತ್ತಕ್ಕೂ ಹೆಚ್ಚು ಜನ ಸ್ಥಳೀಯ ಹಾಗೂ ಶಿವಮೊಗ್ಗ, ಮಣಿಪಾಲ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ ಪ್ರಸಕ್ತ ವರ್ಷ ಮುಂಚಿತವಾಗಿಯೇ ಕಾಣಿಸಿಕೊಂಡಿದೆ. ಅಂದಹಾಗೇ ಕಾಡಿನಲ್ಲಿ ಸತ್ತು ಬೀಳುತ್ತಿರುವ ಮಂಗಗಳಿಂದ ಮನುಷ್ಯರಿಗೆ ಈ ಸೋಂಕು ಹರಡುತ್ತಿದ್ದು, ಸೂಕ್ತ ಮುಂಜಾಗ್ರತಾ ವಹಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ವಿಫಲವಾಗಿದೆ. ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಸಾಗರ, ತೀರ್ಥಹಳ್ಳಿ ತಾಲೂಕಿನ ಜನರಲ್ಲಿ ಆತಂಕ ಹೆಚ್ಚಾಗಿದೆ.

    ಕ್ಯಾಸಣೂರ್ ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಎಂದು ಇದನ್ನು ಕರೆಯುತ್ತಾರೆ. ಪ್ರತಿ ವರ್ಷ ಈ ಭಾಗದಲ್ಲಿ ಸುಮಾರು 400ಕ್ಕೂ ಹೆಚ್ಚು ಕೆಎಫ್‍ಡಿ ಪ್ರಕರಣಗಳು ಇಲ್ಲಿ ಪತ್ತೆಯಾಗುತ್ತದೆ. ಜ್ವರ, ವಾಂತಿ, ಅತಿಸಾರ ಮತ್ತು ರಕ್ತಸ್ರಾವ ಈ ಕಾಯಿಲೆಯ ಲಕ್ಷಣಗಳಾಗಿದೆ. ಅಂದಹಾಗೇ ಈ ಮಂಗನ ಕಾಯಿಲೆ 1957 ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಕಾಯಿಲೆಗೆ ಕಾರಣವಾದ ವೈರಾಣು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಗುರುತಿಸಿದ್ದ ಕಾರಣ ಇಕ್ಕೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಹೆಸರು ನೀಡಲಾಗಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಮಂಗಗಳಲ್ಲಿದ್ದ ಉಣ್ಣೆಗಳು ಬಂದು ಮನುಷ್ಯರಿಗೆ ಕಚ್ಚಿದಾಗ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಸೋಂಕಿನಿಂದ ಮಂಗಗಳು ಸಾಯುತ್ತಿದ್ದ ಕಾರಣ ಇದನ್ನು ಮಂಗನ ಕಾಯಿಲೆ ಎಂದು ಕರೆಯಲಾಗಿತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ರಾಜ್ಯಕ್ಕೆ ಮುಂಗಾರು ಮಳೆ ಖುಷಿ: ಜುಲೈನಲ್ಲೇ ಬಹುತೇಕ ಜಲಾಶಯಗಳು ಭರ್ತಿ

    ಬೆಂಗಳೂರು: ಮುಂಗಾರು ಮಳೆ ಈ ಬಾರಿ ರಾಜ್ಯಕ್ಕೆ ಖುಷಿ ತಂದಿದೆ. ಮುಂಗಾರು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಆವರಿಸಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮತ್ತೊಂದು ಸಂತಸ ಅಂದರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದರೆ ಈ ಬಾರಿ ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗುತ್ತಿವೆ.

    ಪ್ರತಿ ವರ್ಷವೂ ನೀರಿಗಾಗಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಈಗ ಬಾಯಿ ಬಂದ್ ಮಾಡಿಕೊಂಡಿದೆ. ಕಾರಣ ಅಷ್ಟರ ಮಟ್ಟಿಗೆ ಕೆಆರ್‌ಎಸ್ ನಿಂದ ನೀರು ಹರಿದು ಹೋಗುತ್ತಿದೆ. ಇನ್ನೂ ಎರಡು ದಿನ ಮಳೆಯಾಗಲಿದ್ದು ಇವತ್ತು ಸಹ ರಾಜ್ಯದ ಹಲವೆಡೆ ಬಿಟ್ಟೂ ಬಿಡದೆ ಮಳೆಯಾಗಿದೆ.

    ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದೆ. ಕಳಸ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಭಾಗದಲ್ಲಿ ವರುಣ ರುದ್ರನರ್ತನ ಮಾಡುತ್ತಿದ್ದಾನೆ. 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕಳೆದ 8-10 ವರ್ಷಗಳಿಂದ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿಯಲ್ಲಿ 15 ವರ್ಷಗಳಲ್ಲೇ ದಾಖಲೆ ಮಟ್ಟದ ಮಳೆಯಾಗಿದೆ. ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ರೈತರು ಖುಷಿ ಜೊತೆಗೆ ಕಾಫಿ, ಮೆಣಸು, ಅಡಿಕೆಗೆ ಕೊಳೆ ರೋಗದ ಭೀತಿ ಶುರುವಾಗಿದ್ದರಿಂದ ಆತಂಕದಲ್ಲಿದ್ದಾರೆ. ಕಂಬಿಹಳ್ಳಿಯಲ್ಲಿ ಗೋಡೆ ಕುಸಿದು ವನಜಾ (48) ಎನ್ನುವವರು ಮೃತಪಟ್ಟಿದ್ದಾರೆ.

    ಕೊಡಗು: ಜಿಲ್ಲೆಯಲ್ಲಿ ಮಳೆಯ ಆರ್ಭಟ ನಿಲ್ಲುತ್ತಿಲ್ಲ. ಕಾವೇರಿ ನದಿಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಮತ್ತಷ್ಟು ನೆಲಕ್ಕೆ ಉರುಳುತ್ತಿವೆ. ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಕೆಎಸ್‍ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಅದೃಷ್ಟವಶಾತ್ ವಿದ್ಯುತ್ ಇಲ್ಲದ ಕಾರಣ ಅನಾಹುತ ಸಂಭವಿಸಿಲ್ಲ.

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ವರ್ಷಧಾರೆ ಆಗುತ್ತಿದೆ. ಉಪ್ಪಿನಂಗಡಿ-ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಹೊಸ್ಮಠ ಸೇತುವೆ ಮತ್ತೆ ಮತ್ತೆ ಮುಳುಗಡೆ ಆಗುತ್ತಿದೆ. ಹಾಗಾಗಿ, ರಸ್ತೆ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ವ್ಯಾಪಕ ಮಳೆಯಾಗಿದ್ದು ಕೆರೆಕಟ್ಟೆಗಳು ನೀರು ತುಂಬಿ ತುಳುಕುತ್ತಿವೆ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಕಾರವಾರದಲ್ಲಿ ಮಳೆಯ ಆರ್ಭಟ ಅಲ್ಪಪ್ರಮಾಣದಲ್ಲಿ ಇಳಿಮುಖವಾಗಿದೆ.

    ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಕೊಯ್ನಾ ದಡದಲ್ಲಿ ನಿರಂತರ ಮಳೆಯಿಂದಾಗಿ, ಕೃಷ್ಣಾ ನದಿ ಮೈದುಂಬಿದೆ. ನೀರಿನ ಹರಿವು ಹೆಚ್ಚಾಳದಿಂದ ನದಿ ತೀರದ ಜಮಖಂಡಿಯ ಮತ್ತೂರು, ಮೈಗೂರು, ಕಂಕನವಾಡಿ, ಶೂರ್ಪಾಲಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು ಸಿಲುಕುವ ಸಾಧ್ಯತೆ ಇದೆ. ಜಮಖಂಡಿಯ ಹಿಪ್ಪರಿಗೆ ಬ್ಯಾರೇಜ್‍ನ ಒಳ ಹಾಗೂ ಹೊರ ಹರಿವು ಹೆಚ್ಚಾಗಿದೆ. ಕೃಷಿ, ಕೂಲಿ, ಸಂತೆ ಜಾನುವಾರುಗಳಿಗೆ ಮೇವು ಸಾಗಾಟಕ್ಕೆ ಜನ ಬೋಟ್ ಅವಲಂಬಿಸುತ್ತಿದ್ದಾರೆ.

    ಧಾರವಾಡ: ಧಾರವಾಡದಲ್ಲಿ ಬೆಳಗ್ಗೆಯೇ ಮಳೆರಾಯ ಅಬ್ಬರಿಸಿದ್ದರಿಂದ ನಗರದ ಜನ ಜೀವನ ಅಸ್ತವ್ಯಸ್ತವಾಗಿ ಪರದಾಡಬೇಕಾಯಿತು.

    ಯಾದಗಿರಿ: ಜಿಲ್ಲೆಯ ಶಹಾಪೂರ, ಸುರಪುರಗಳಲ್ಲಿ ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ, ದಟ್ಟವಾದ ಮೋಡಗಳು ಆವರಿಸಿದ್ದವು.

    ಕೋಲಾರ: ಕರಾವಳಿ, ಮಲೆನಾಡು ಮಾತ್ರವಲ್ಲ ಬರದ ನಾಡು ಕೋಲಾರದಲ್ಲೂ ವರ್ಷಧಾರೆ ಇದೆ. 3 ದಿನಗಳಿಂದ ಜಿಲ್ಲೆಯ ಹಲವೆಡೆ ಗಾಳಿ ಸಹಿತ ಮಳೆಯಾಯಿತು. ರೈತರು ಈಗಲೇ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

     

    ಬೆಂಗಳೂರು: ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಆನೇಕಲ್ ಗಳಲ್ಲೂ ಮಳೆಯಾಯಿತು. ಮಧ್ಯಾಹ್ನವೇ ಮಳೆಯ ಅರ್ಭಟ ಶುರುವಾಗಿ ಅರ್ಧ ಗಂಟೆ ಬಿರುಗಾಳಿ ಸಹಿತ ಮಳೆಯಾಯಿತು. ನೆಲಮಂಗಲದ ನಿಡುವಂದ ಬಳಿ ಭಾರೀ ಮಳೆಯಿಂದಾಗಿ ರಸ್ತೆ ಕಾಣದೆ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಬಂಡಹಳ್ಳಿ ಹೊರವಲಯದಲ್ಲಿ ತಮಿಳುನಾಡಿನಿಂದ ಆಂಧ್ರ ಪ್ರದೇಶಕ್ಕೆ ರವಾನೆ ಆಗುತ್ತಿದ್ದ ಹೆಟೆನ್ಷನ್ ವಿದ್ಯುತ್ ಟವರ್ ಕಳಪೆ ಕಾಮಗಾರಿಯಿಂದಾಗಿ ಬಿರುಗಾಳಿಗೆ ಮುರಿದು ಬಿದ್ದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ವಿದ್ಯುತ್ ತಂತಿ ಅಳವಡಿಸದ ಕಾರಣ ಅನಾಹುತ ತಪ್ಪಿದೆ.

  • ವರ್ಷದ ಮೊದಲ ಚಂದ್ರಗ್ರಹಣ ದರ್ಶನ-  ಮಧ್ಯರಾತ್ರಿವರೆಗೂ ನಭದಲ್ಲಿ ಕೇತುಗ್ರಸ್ತನ ಕೌತುಕ

    ವರ್ಷದ ಮೊದಲ ಚಂದ್ರಗ್ರಹಣ ದರ್ಶನ- ಮಧ್ಯರಾತ್ರಿವರೆಗೂ ನಭದಲ್ಲಿ ಕೇತುಗ್ರಸ್ತನ ಕೌತುಕ

    ಬೆಂಗಳೂರು: ವರ್ಷದ ಮೊದಲ ಚಂದ್ರಗ್ರಹಣಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಸುಮಾರು 2 ಗಂಟೆಗಳವರೆಗೆ ಚಂದ್ರಗ್ರಹಣನಿಗೆ ಕೇತುಗ್ರಸ್ತ ಚಂದ್ರಗ್ರಹಣವಾಗಿತ್ತು. ರಾತ್ರಿ 10.52ಕ್ಕೆ ಆರಂಭವಾದ ಗ್ರಹಣ ರಾತ್ರಿ 12.48ಕ್ಕೆ ಕೊನೆಯಾಯಿತು.

    ಸೋಮವಾರ ಹುಣ್ಣಿಮೆ. ಹುಣ್ಣಿಮೆ ದಿನದಂದು ಬಾನಿನಲ್ಲಿ ಹೊಳೆದು ರಾತ್ರಿ ಕಳೆದು ಬೆಳಕು ನೀಡಬೇಕಿದ್ದ ಚಂದಿರ ಎರಡು ತಾಸು ಕರಿ ಚೆಂಡಿನಂತಾಗಿದ್ದ. ಸೂರ್ಯ-ಚಂದ್ರನ ನಡುವೆ ಭೂಮಿ ಬಂದ ಕಾರಣ ಕೆಲ ಹೊತ್ತು ಚಂದಿರ ತನ್ನ ಪ್ರಭೆಯನ್ನೇ ಕಳೆದುಕೊಂಡು ಕತ್ತಲಲ್ಲಿ ಮರೆಯಾಗಿದ್ದ. ಭಾರತೀಯ ಸಂಪ್ರದಾಯದಲ್ಲಿ ಚಂದ್ರಗ್ರಹಣಕ್ಕೆ ಸಾಕಷ್ಟು ಮಹತ್ವವವಿದೆ.

    ಧಾರ್ಮಿಕ ದೃಷ್ಟಿಕೋನದಲ್ಲಿ ನೋಡೋದಾದ್ರೆ, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಹುಣ್ಣಿಮೆ ದಿನವಾದ ನಿನ್ನೆ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸಿದೆ. ಈ ಹೊತ್ತಲ್ಲಿ ಉಪವಾಸ ಆಚರಣೆ ಮಾಡಲಾಯಿತು. ಹಲವಾರು ಕಡೆಗಳಲ್ಲಿ ದೇವರ ದರ್ಶನ ಇರಲಿಲ್ಲ. ಇತ್ತ ವೈಜ್ಞಾನಿಕ ಲೋಕಕ್ಕೂ ಇದು ಕೌತುಕ ಕ್ಷಣವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನೆಹರು ತಾರಾಲಯ ಸೇರಿದಂತೆ ಹಲವಾರು ಕಡೆಗಳಲ್ಲಿ ದೂರದರ್ಶಕದ ಮೂಲಕ ಚಂದಿರನನ್ನು ವೀಕ್ಷಿಸಿ ಸಂಭ್ರಮಪಟ್ಟರು.

    ಬೆಂಗಳೂರಿನ ವಿಶೇಷ ಪ್ರಸಿದ್ಧ ಕಾಡುಮಲ್ಲೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ನಡೆದಿದೆ. ಈಶ್ವರನಿಗೆ ಪ್ರಿಯವಾದ ಬಿಲ್ವಪತ್ರೆ, ಹಾಲಿನ ಅಭಿಷೇಕ ಮಾಡಲಾಯ್ತು. ಇನ್ನು ನರಸಿಂಹಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಹೋಮ-ಹವನ ನಡೆದಿದೆ. ಮಂಗಳೂರಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೀತು. ದೇವಿಯ ಸ್ವಯಂ ಭೂಲಿಂಗಕ್ಕೆ ವಿಶೇಷ ಅರ್ಚನೆ ಮಾಡಲಾಯಿತು.

    ಅರಮನೆ ನಗರಿ ಮೈಸೂರಲ್ಲೂ ಚಂದ್ರಗ್ರಹಣ ದರ್ಶನ ಪಡೆದ್ರು. ಗ್ರಹಣದ ಹೊತ್ತಲ್ಲಿ ಸಾಂಸ್ಕøತಿಕ ನಗರಿಯ ದೇವಸ್ಥಾನಗಳಲ್ಲಿ ಪೂಜೆಗಳು ನಡೆದಿದ್ದು ವಿಶೇಷವಾಗಿತ್ತು. ಅಮೃತೇಶ್ವರ ದೇವಾಲಯದಲ್ಲಿ ಗ್ರಹಣ ಶಾಂತಿ ನಡೀತು. ದೇವರಾಜ ಮೊಹಲ್ಲಾದಲ್ಲಿರುವ ಸತ್ಯನಾರಾಯಣ ದೇವರ ಸನ್ನಿಧಿಯಲ್ಲಿ ಇವತ್ತು ಬೆಳಗ್ಗೆ 9 ಗಂಟೆಗೆ ಗೃಹತ್ ಶಾಂತಿ ಹೋಮ ನಡೆಯಲಿದೆ. ಇದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.

    ಬಳ್ಳಾರಿಯಲ್ಲಿರುವ ಪ್ರಸಿದ್ಧ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರೆವೇರಿತು. ನಸುಕಿನ ಜಾವ 4.30ರಿಂದಲೇ ಕನಕದುರ್ಗಮ್ಮನ ವಿಶೇಷ ಅರ್ಚನೆ ಅರ್ಪಿಸಲಾಯಿತು. ಚಂದ್ರಗ್ರಹಣದ ಬಳಿಕ ನಡೆದ ಮೊದಲ ಪೂಜೆಯಲ್ಲಿ ಭಾಗಿಯಾದ ನೂರಾರು ಭಕ್ತರು ಪುನೀತರಾದರು.

    ಇನ್ನು ರಾಯಚೂರಿನಲ್ಲಿರುವ ಗುರುರಾಘವೇಂದ್ರಸ್ವಾಮಿಗಳ ಮಂತ್ರಾಲಯದ ಮಠದಲ್ಲೂ ಪೂಜೆ ಪುನಸ್ಕಾರ ಜೋರಾಗಿದೆ. ಬೆಳಗ್ಗೆಯೇ ದೇಗುಲವನ್ನು ಶುಚಿಗೊಳಿಸಲಾಯ್ತು. ನಂತರ ವಿಶೇಷ ಪೂಜೆ ಆರಂಭವಾಗಿದೆ. ಆಗಸ್ಟ್ 12ರವರೆಗೆ ನಡೆಯಲಿರುವ ಆರಾಧನ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿರುವ ಭಕ್ತರು ಉರುಳು ಸೇವೆ ಭಕ್ತಿಯನ್ನು ಅರ್ಪಿಸಿದರು.

    ಇನ್ನು ಗೋಕರ್ಣದ ಮಹಾಬಲೇಶ್ವರ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವಧಾನ್ಯ ಅಭಿಷೇಕ, ಪಂಚಾಮೃತ ಅಭಿಷೇಕ, ನಾಗಾಭರಣ ಪೂಜೆ ನಡೀತು. ಖಂಡಾಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಸಾವಿರಾರು ಭಕ್ತರು ಕಾವೇರಿಯಲ್ಲಿ ತೀರ್ಥಸ್ನಾನ ಮಾಡಿದ್ರು. ಶ್ರೀರಂಗಪಟ್ಟಣದ ಘೋಸಾಯಿ ಘಟ್ಟದ ಕಾವೇರಿ ನದಿ ದಂಡೆಯಲ್ಲಿ ರಾತ್ರಿ 11 ಗಂಟೆಗೆ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿಶೇಷ ಪೂಜೆ ನಡೀತು. ಗ್ರಹಣ ಬಿಟ್ಟ ಬಳಿಕ ಶಾಂತಿ ಹೋಮ ನಡೀತು.

    ಇತ್ತ ಚಿನ್ನದ ನಾಡು ಕೋಲಾರದಲ್ಲಿರುವ ಗಂಗಮ್ಮ ದೇವಸ್ಥಾನದಲ್ಲೂ ಬೆಳಗ್ಗೆಯಿಂದಲೇ ಹೋಮ-ಹವನ ನಡೆಯುತ್ತಿದೆ. ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗ್ತಿದೆ. ಯಾದಗಿರಿಯಲ್ಲಿ ಹಳೇ ಕಾಲದ ಪದ್ಧತಿಯಂತೆ ಚಂದ್ರಗ್ರಹಣ ವೀಕ್ಷಿಸಿದ್ದು ವಿಶೇಷವಾಗಿತ್ತು. ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒಣಕೆ ನಿಲ್ಲಿಸಿದಾಗ ಒಣಕೆ ನೇರವಾಗಿ ನಿಂತ್ರೆ ಚಂದ್ರಗ್ರಹಣ ಪ್ರಾರಂಭವಾಗಿದೆ. ಒಣಕೆ ನೆಲಕ್ಕೆ ಬಿದ್ರೆ ಗ್ರಹಣ ಬಿಟ್ಟಿದೆ ಅನ್ನೋದು ಹಳೇ ಕಾಲದ ವಿಧಿ ವಿಧಾನ. ಇದೇ ಪದ್ಧತಿಯಲ್ಲಿ ಯಾದಗಿರಿ ನಗರದಲ್ಲಿ ಗ್ರಹಣ ವೀಕ್ಷಿಸಲಾಯಿತು.

    ಹಾಸನದಲ್ಲಿ ಗ್ರಹಣ ನಿಮಿತ್ತ ಹಾಸನಾಂಬ ರಸ್ತೆಯ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೀತು. ನವಗ್ರಹ ಜಪ, ಸೂರ್ಯಚಂದ್ರ ಮೃತ್ಯುಂಜಯ ಮಂತ್ರ ಪಠಿಸಿ ಮಧ್ಯರಾತ್ರಿವರೆಗೂ ಪ್ರಾರ್ಥಿಸಲಾಯ್ತು. ಖಂಡಗ್ರಾಸ ಚಂದ್ರಗ್ರಹಣ ಪ್ರಯುಕ್ತ ಹೊರನಾಡಿನ ಅನ್ನಪೂರ್ಣೇಶ್ವರಿ ಮತ್ತು ಶೃಂಗೇರಿ ದೇವಾಲಯಕ್ಕೆ ರಾತ್ರಿ 9 ಗಂಟೆಗೆ ಬಾಗಿಲು ಹಾಕಲಾಯ್ತು. ಗ್ರಹಣ ಆರಂಭವಾಗಿ ಮುಗಿಯುವ ಹೊತ್ತಿಗೆ ದೇವಸ್ಥಾನದ ದ್ವಾರಗಳನ್ನು ಆಧಿಶಕ್ತಿ ಅನ್ನಪೂರ್ಣೇಶ್ವರಿ ಮತ್ತು ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಲಾಯ್ತು. ಗ್ರಹಣ ಬಿಡುವವರೆಗೆ ಪೂಜೆ ನೆಡರವೇರಿತು.

    ತುಮಕೂರಲ್ಲಿ ಸಿಗ್ನಾ ಯುವ ಸಮುದಾಯ ವೇದಿಕೆ ಮತ್ತು ತುಮಕೂರು ವಿಜ್ಞಾನ ಕೇಂದ್ರ ಗ್ರಹಣದ ಹೊತ್ತಲ್ಲಿ ಊಟ ಆಯೋಜಿಸಿತ್ತು. ಈ ಮೂಲಕ ಗ್ರಹಣದ ಹೊತ್ತಲ್ಲಿ ಊಟ ಮಾಡಿದ್ರೆ ಕೇಡಾಗುತ್ತೆ ಅನ್ನೋ ಮೂಢನಂಬಿಕೆಯನ್ನು ಹೋಗಲಾಡಿಸುವ ಯತ್ನ ಮಾಡಿದ್ರು. ನಗರದ ಟೌನ್‍ಹಾಲ್ ವೃತ್ತದಲ್ಲಿ ಚಿತ್ರಾನ್ನ, ಉಪಿಟ್ಟು ಸೇವಿಸಿದ್ರು.

  • ರಾಜ್ಯದ ರೈತರಿಗೆ ಕಹಿ ಸುದ್ದಿ, ಜುಲೈನಲ್ಲೂ ಮಳೆ ಕೈ ಕೊಡುವ ಸಾಧ್ಯತೆ!

    ರಾಜ್ಯದ ರೈತರಿಗೆ ಕಹಿ ಸುದ್ದಿ, ಜುಲೈನಲ್ಲೂ ಮಳೆ ಕೈ ಕೊಡುವ ಸಾಧ್ಯತೆ!

    ಬೆಂಗಳೂರು: ರಾಜ್ಯದ ರೈತರಿಗೆ ಕಹಿ ಸುದ್ದಿ. ಜುಲೈ ತಿಂಗಳಲ್ಲಿ ಮುಂಗಾರು ಮಳೆ ಕೈಕೊಡುವ ಸಾಧ್ಯತೆ ಇದೆ.

    ಇನ್ನೂ ಮುಂದಿನ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಮೋಡಗಳು ಕೊರತೆಯಿಂದಾಗಿ ಹವಾಮಾನ ಬದಲಾವಣೆಯಾಗದ ಕಾರಣ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕಳೆದ ವರ್ಷದ ಜೂನ್‍ನಲ್ಲಿ ಸುರಿದ ಮಳೆ ಈ ವರ್ಷವು ಸುರಿದಿಲ್ಲ. ರಾಜ್ಯದ 14 ಜಿಲ್ಲೆಗಳಲ್ಲಿ ಜೂನ್ ತಿಂಗಳಲ್ಲಿ ಮಳೆಯ ಕಡಿಮೆಯಾಗಿದೆ. ಶೇಕಡಾ 5 ರಷ್ಟು ಈ ಬಾರಿ ಜೂನ್ ತಿಂಗಳಲ್ಲಿ ಮಳೆಯ ಕೊರತೆ ಕಂಡಿದೆ. ಕಳೆದ ವರ್ಷ ಜೂನ್‍ನಲ್ಲಿ 220 ಎಂಎಂ ಮಳೆಯಾಗಿದ್ದರೆ, ಈ ಬಾರಿ ಕೇವಲ 185 ಎಂಎಂ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

    ಈ ವರ್ಷ ಜೂನ್‍ನಲ್ಲಿ ಮಳೆಯ ಪ್ರಮಾಣದ ಅಂಕಿ ಅಂಶದ ಪ್ರಕಾರ ಮಲೆನಾಡಿನ ಎರಡು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡಿದೆ. ಕರಾವಳಿ ಭಾಗದ ಮೂರು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಣಿಸಿದೆ. ದಕ್ಷಿಣ ಒಳನಾಡಿನ 9 ಜಿಲ್ಲೆಯಲ್ಲಿ ಮಳೆಯ ಕೊರತೆ ಇದೆ. ಉತ್ತರ ಒಳನಾಡಿನ ನಾಲ್ಕು ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡಿದೆ ಶ್ರೀನಿವಾಸ್ ರೆಡ್ಡಿ ತಿಳಿಸಿದರು.