Tag: District

  • ಕೊರೊನಾದಿಂದ ಮೃತಪಟ್ಟ ತಾಯಿ – ಅಂತ್ಯಕ್ರಿಯೆ ಮಾಡಲು ಒಪ್ಪದ ಮಗ

    ಕೊರೊನಾದಿಂದ ಮೃತಪಟ್ಟ ತಾಯಿ – ಅಂತ್ಯಕ್ರಿಯೆ ಮಾಡಲು ಒಪ್ಪದ ಮಗ

    ಚಂಡೀಗಢ: ತನಗೆ ಕೊರೊನಾ ಸೋಂಕು ತಗಲುತ್ತದೆ ಎಂಬ ಭಯದಿಂದ ಕೊರೊನಾದಿಂದ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆ ಮಾಡಲು ಮಗ ಒಪ್ಪದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಪಂಜಾಬ್ ರಾಜ್ಯದ ಶಿಮ್ಲಾಪುರಿ ಗ್ರಾಮದ 69 ವರ್ಷದ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಮಾರ್ಚ್ 31ರಂದು ದಾಖಲು ಮಾಡಲಾಗಿತ್ತು. ಆದರೆ ಕೊರೊನಾ ಸೋಂಕು ತೀವ್ರವಾದ ಕಾರಣ ಅವರು ಕಳೆದ ಭಾನುವಾರ ಮೃತಪಟ್ಟಿದ್ದಾರೆ.

    ಭಾನುವಾರ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಮೃತಪಟ್ಟ ನಂತರ ಆಸ್ಪತ್ರೆಯವರು ಮನೆಯವರಿಗೆ ಮೃತದೇಹವನ್ನು ಹಸ್ತಾಂತರಿಸಲು ನೋಡಿದ್ದಾರೆ. ಆದರೆ ಮನೆಯವರು ಮೃತದೇಹವನ್ನು ನೋಡಲು ಹತ್ತಿರ ಸಹ ಬಂದಿಲ್ಲ. ಇನ್ನೊಂದು ವಿಪರ್ಯಾಸವೆಂದರೆ ಅಂತ್ಯಕ್ರಿಯೆ ನಡೆಸಲು ಬೇಕಾದ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ ಎಂದರೂ ಆಕೆಯ ಮಗ ಅಂತಿಮ ವಿಧಿವಿಧಾನ ನಡೆಸಲು ಮುಂದೆ ಬರಲಿಲ್ಲ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಇಕ್ಬಾಲ್ ಸಿಂಗ್ ಸಂಧು ಅವರು, ಅಂತ್ಯಕ್ರಿಯೆ ಮಾಡಲು ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುತ್ತೇವೆ. ಜೊತೆಗೆ ಸೋಂಕು ನಿಮಗೆ ತಗುಲದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರೂ ಆಕೆಯ ಮಗ ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಇದನ್ನು ಕಂಡು ನಮಗೆ ಶಾಕ್ ಆಯ್ತು. ಕೊನೆಗೆ ಜಿಲ್ಲಾಡಳಿತದ ಕಡೆಯಿಂದ ಅಂತ್ಯಕ್ರಿಯೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.

    ಜಿಲ್ಲಾಡಳಿತದಿಂದ ಸೋಮವಾರ ರಾತ್ರಿ ಕೊರೊನಾ ಸೋಂಕಿತಳ ಅಂತ್ಯಕ್ರಿಯೆ ಮಾಡಿದ್ದೇವೆ. ಆದರೆ ಈ ಸಮಯದಲ್ಲೂ ಆಕೆಯ ಕುಟುಂಬದವರು ಮತ್ತು ಮಗ ಹತ್ತಿರ ಕೂಡ ಬರಲಿಲ್ಲ. ಕೊನೆಯದಾಗಿ ಆಕೆಯ ಮುಖವನ್ನು ಅವರು ನೋಡಲಿಲ್ಲ. 100 ಮೀಟರ್ ದೂರದಲ್ಲಿ ನಿಂತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು ಎಂದು ಇಕ್ಬಾಲ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ. ಇದೇ ರೀತಿಯ ಘಟನೆ ಪಂಜಾಬ್‍ನಲ್ಲಿ ಇನ್ನೊಂದು ನಡೆದಿದ್ದು, ಕೊರೊನಾದಿಂದ ಸತ್ತ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ಆ ಊರಿನವರು ಸ್ಮಶಾನಕ್ಕೆ ಸ್ಥಳವನ್ನು ನೀಡಿರಲಿಲ್ಲ.

  • ಜರ್ಮನಿಯಿಂದ ಬಂದ ಯುವತಿಗೆ ಜ್ವರ- ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು

    ಜರ್ಮನಿಯಿಂದ ಬಂದ ಯುವತಿಗೆ ಜ್ವರ- ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು

    – ಕೊರೊನಾ ಭೀತಿಯಲ್ಲಿ ರೇಷ್ಮೆನಗರಿ ಜನ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಇದೀಗ ಕೊರೊನಾ ಭೀತಿ ಶುರುವಾಗಿದ್ದು, ಜರ್ಮನಿಯಿಂದ ವಾಪಸ್ ಬಂದ ಯುವತಿ ಆಸ್ಪತ್ರೆಗೆ ದಾಖಲಾಗಿರುವುದು ಸಾರ್ವಜನಿಕರ ಆತಂಕವನ್ನುಂಟು ಮಾಡಿದೆ.

    ಚನ್ನಪಟ್ಟಣ ನಗರದ ಯುವತಿ ಕಳೆದ ಒಂದು ವರ್ಷದಿಂದ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಯಲ್ಲಿದ್ದಳು. ವ್ಯಾಸಂಗ ಮುಗಿಸಿ ಕಳೆದ ಮೂರು ದಿನಗಳ ಹಿಂದೆ ಪಟ್ಟಣಕ್ಕೆ ಆಗಮಿಸಿದ್ದಳು. ಭಾನುವಾರ ಸಂಜೆ ಯುವತಿಗೆ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಯುವತಿಯ ತಂದೆಯೇ ಸ್ವತಃ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‍ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಬೆಳಗ್ಗೆ ನೇರವಾಗಿ ಜಿಲ್ಲಾಸ್ಪತ್ರೆಯ ಕೊರೊನಾ ಸೋಂಕು ಘಟಕಕ್ಕೆ ಯುವತಿ ತನ್ನ ಪೋಷಕರ ಜೊತೆ ಆಗಮಿಸಿದ್ದು, ಸ್ಕ್ರೀನಿಂಗ್ ಒಳಗಾಗಿದ್ದಾಳೆ. ಯುವತಿಯ ಜೊತೆಗೆ ಆಕೆಯ ಸಂಪರ್ಕದಲ್ಲಿದ್ದ ಪೋಷಕರ ಪರೀಕ್ಷೆಯೂ ನಡೆಸಲಾಗಿದೆ. ಅಲ್ಲದೇ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಮೂವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಜನರ ಗಂಟಲು ದ್ರವವನ್ನು ಹಾಗೂ ರಕ್ತದ ಪರೀಕ್ಷೆಗಾಗಿ ಸ್ಯಾಂಪಲ್‍ನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಿಎಚ್‍ಓ ಹೇಳಿದ್ದಾರೆ.

    ಸಾರ್ವಜನಿಕರು ಯಾವುದೇ ರೀತಿಯ ಆಂತಕಕ್ಕೆ ಒಳಗಾಗಬೇಕಿಲ್ಲ. ಇದು ಶಂಕಿತ ಪ್ರಕರಣ ಅಷ್ಟೇ ವರದಿ ಪಡೆಯಲು ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿದೆ. ಮುನ್ನೆಚರಿಕಾ ಕ್ರಮವಹಿಸುವುದು ಉತ್ತಮ ಎಂದು ಡಿಎಚ್‍ಓ ಡಾ.ನಿರಂಜನ್ ತಿಳಿಸಿದರು.

    ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ಕಂಡುಬಂದಿಲ್ಲ. ಹೊರದೇಶದಿಂದ ಹಾಗೂ ಹೊರಭಾಗದಿಂದ ಬರುವವರ ಮೇಲೆ ಕಣ್ಣಿಡಲಾಗುತ್ತಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿರುವ ಯುವತಿ ಹಾಗೂ ಪೋಷಕರ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಯುವತಿಗೆ ಕೇವಲ ಜ್ವರ ಮಾತ್ರವೇ ಇರುವುದು ನೆಗಡಿ, ಕೆಮ್ಮು ಇಲ್ಲ. ಹಾಗಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ತಿಳಿಸಿದರು.

  • ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕೊರೊನಾ ಭೀತಿಗೆ ಕಾರವಾರ ಬಂದರಿನಲ್ಲಿ ಹೈ ಅಲರ್ಟ್ – ಜಿಲ್ಲಾಸ್ಪತ್ರೆಗೆ ಕದಂಬ ನೌಕಾ ನೆಲೆಯಿಂದ 100 ಹಾಸಿಗೆ

    ಕಾರವಾರ: ವಿಶ್ವದೆಲ್ಲೆಡೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಕರ್ನಾಟಕಕ್ಕೂ ಕಾಲಿಟ್ಟಿದೆ. ಕೊರೊನಾ ಭೀತಿಗೆ ಮುಂಜಾಗೃತ ಕ್ರಮವಾಗಿ ಕಾರವಾರ ಬಂದರು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ನೌಕಾ ನೆಲೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್‍ರವರು ಸಭೆ ನಡೆಸಿದರು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾದಿಸಿ ಕೊರೊನಾ ಸೋಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಂಡು ಕಟ್ಟೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.

    ಕಾರವಾರ ಬಂದರಿನಲ್ಲಿ ವಿದೇಶಿ ಹಡಗುಗಳು ಆಗಮಿಸುವುದರಿಂದ ಮುಖ್ಯವಾಗಿ ಅಲ್ಲಿ ತೀವ್ರ ನೀಗಾ ಇರಿಸಬೇಕು. ಆಗಮಿಸಿದ ಹಡಗುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ಮಾಡುವುದು ಕಡ್ಡಾಯವಾಗಿದ್ದು, ಇದರ ಮಾಹಿತಿಯನ್ನು ಪ್ರತಿ ದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪಡೆದು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

    ಈ ಬಗ್ಗೆ ಕದಂಬ ನೌಕಾ ನೆಲೆ ಅಧಿಕಾರಿ ಮಾತನಾಡಿ, ನೌಕಾ ನೆಲೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇರುವುದರಿಂದ ಜಿಲ್ಲಾಸ್ಪತ್ರೆಗೆ 100 ಹಾಸಿಗೆಗಳನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೆ ಈಗಾಗಲೇ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಿದೇಶದಿಂದ ಬರುವ ಹಡಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಚಿತವಾಗಿಯೇ ಎಲ್ಲ ಹಡಗುಗಳಲ್ಲಿ ವೈದ್ಯಕೀಯ ತಂಡವನ್ನು ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾತನಾಡಿ, ಪ್ರಮುಖವಾಗಿ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರ ತಂಡ ರಚಿಸಿಕೊಂಡು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬಹುದಾದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ವೈದ್ಯರ ಸಹಾಯದೊಂದಿಗೆ ತಪಾಸಣೆ ಮಾಡುವ ಮೂಲಕ ಹೆಚ್ಚಿನ ಜಾಗೃತಿ ವಹಿಸಲಾಗುವುದು ಎಂದರು.

    ಸಭೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದು, ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ.

    ಕಾರವಾರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲು:
    ಕಾರವಾರ ಗಡಿ ಪ್ರದೇಶವಾಗಿರುವ ಹಿನ್ನೆಲೆ ನೆರೆಯ ಗೋವಾ, ಮುಂಬೈನಿಂದ ವಿದೇಶಿ ಪ್ರಜೆಗಳು ಈ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದರ ಜೊತೆಗೆ ಸಮುದ್ರದ ಮೂಲಕವು ಹಡಗುಗಳು ಬರುವುದರಿಂದ ತೀವ್ರ ನಿಗಾ ಬಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಕಟ್ಟಡವನ್ನು ಮೀಸಲಿಡಲಾಗಿದೆ. 5 ಮಹಿಳೆಯರು, 5 ಪುರುಷರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರತ್ಯೇಕ ಸಿಬ್ಬಂದಿಗಳನ್ನು ಆರೋಗ್ಯ ಇಲಾಖೆ ನೇಮಿಸಿದೆ.

  • ಮೂಢನಂಬಿಕೆಗೆ ಜಿಲ್ಲಾಡಳಿತದಿಂದ ತಿಲಾಂಜಲಿ – 1 ಸಾವಿರ ಕುರಿ ಮರಿ ರಕ್ಷಣೆ

    ಮೂಢನಂಬಿಕೆಗೆ ಜಿಲ್ಲಾಡಳಿತದಿಂದ ತಿಲಾಂಜಲಿ – 1 ಸಾವಿರ ಕುರಿ ಮರಿ ರಕ್ಷಣೆ

    ಯಾದಗಿರಿ: ಪ್ರಸಿದ್ಧ ಯಾದಗಿರಿ ಮಲ್ಲಯ್ಯ ಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ಮಕರ ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಭಕ್ತರಸಾಗರವೇ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ನಡೆಯುವ ವಿಚಿತ್ರ ಪದ್ಧತಿ, ಮೂಢನಂಬಿಕೆಗೆ ಈ ಬಾರಿ ಜಿಲ್ಲಾಡಳಿತ ತಿಲಾಂಜಲಿ ಹಾಡಿದ್ದು ವಿಶೇಷವಾಗಿದೆ.

    ಈ ಹಿಂದೆ ದೇವರಿಗೆ ಹರಕೆ ಹೊತ್ತ ಭಕ್ತರು ಕುರಿ ಮರಿಗಳನ್ನು ದೇವರ ಪಲ್ಲಕ್ಕಿ ಮೇಲೆ ಎಸೆಯುತ್ತಿದ್ದರು. ಆದರೆ ಇದು ಪ್ರಾಣಿ ಹಿಂಸೆಯಾದ ಕಾರಣ ಈ ಮೂಢನಂಬಿಕೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಹೀಗಾಗಿ ಭಕ್ತರು ತರುವ ಕುರಿ ಮರಿಗಳನ್ನು ದಾರಿಯಲ್ಲಿಯೇ ತಡೆದು ಅವುಗಳನ್ನು ಪಶುಪಾಲನಾ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಬಾರಿಯ ಜಾತ್ರೆಯಲ್ಲಿ ಒಟ್ಟು 1 ಸಾವಿರ ಕುರಿ ಮರಿಗಳನ್ನು ರಕ್ಷಿಸಲಾಗಿದೆ. ಹೀಗೆ ವಶಪಡಿಸಿಕೊಂಡ ಕುರಿ ಮರಿಗಳನ್ನು ಟೆಂಡರ್ ಪ್ರಕ್ರಿಯೆ ಮೂಲಕ ಕುರಿ ಸಾಕಾಣಿಕೆ ಮಾಡುವವರಿಗೆ ಮತ್ತೆ ನೀಡಲಾಗುತ್ತಿದೆ.

    ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಳ್ಳಕಾಕರಿಂದ ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೆರೆ ಮತ್ತು ದೇವಸ್ಥಾನ ಸುತ್ತಲೂ ಈ ಬಾರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಒಟ್ಟು 550 ಪೊಲೀಸ್ ಸಿಬ್ಬಂದಿ ಈ ಜಾತ್ರೆಯಲ್ಲಿ ಗಸ್ತು ಕಾಯುತ್ತಿದ್ದಾರೆ.

  • ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಾಣ ಮಾಡಿರುವ ನೂತನ ಗಾಜಿನ ಮನೆ ತೆರವುಗೊಳಿಸಿ, ಕೆರೆಯ ಮೂಲ ಸ್ವರೂಪ ಮರುಸೃಷ್ಟಿ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

    ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ, ಒಂದಲ್ಲ ಎರಡಲ್ಲ ಅಂತ ಸರಿ ಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆರೆಯಂಗಳದಲ್ಲೇ 70 ಎಕೆರೆ ಪ್ರದೇಶಕ್ಕೆ ಕಾಂಪೌಂಡ್ ಹಾಕಿ, ಅದರೊಳಗೆ ಗಾಜಿನ ಮನೆ, ಉದ್ಯಾನವನ ಎಂದು ಗಿಡ ನೆಟ್ಟು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ.

    70 ಎಕೆರೆ ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾಡಳಿತದ ಅನುದಾನದಿಂದ ಮೂರೂವರೆ ಕೋಟಿ ಖರ್ಚು ಮಾಡಿ ಸುಸಜ್ಜಿತ ಗಾಜಿನ ಮನೆ ನಿರ್ಮಾಣವಾಗಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಸರಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ, 70 ಎಕೆರೆ ಪ್ರದೇಶಕ್ಕೆ ತಡೆಗೋಡೆ, ತಡೆಗೋಡೆಗೆ ಮುಖ್ಯ ದ್ವಾರ ಬಾಗಿಲು. ಅದರಲ್ಲಿ ಉದ್ಯಾನವನ ಅಭಿವೃದ್ಧಿ ಉದ್ಯಾನವನಕ್ಕೆ ನೀರೊದಗಿಸಲು ಕೊಳವೆಬಾವಿ, ಹಾಗೂ ನೀರು ಶೇಖರಿಸಲು ತೊಟ್ಟಿ, ವಾಚ್ ಗಾರ್ಡ್ ಮನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನ ನಡೆಸಲಾಗಿದೆ.

    ಆದರೆ ಕೆರೆಗಳನ್ನು ಉಳಿಸಬೇಕಾದ ಅಧಿಕಾರಿಗಳೇ ಕೆರೆಗೆ ಕಂಟಕವಾಗಿದ್ದಾರೆ ಎಂದು ಬೆಂಗಳೂರು ಮೂಲದ ನಾರಾಯಣ ಎನ್ನುವವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ರು. ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಸರ್ಕಾರಿ ಖರಾಬ್ ಅಂತ ಅಧಿಕಾರಿಗಳು ದಾಖಲೆಗಳಲ್ಲಿ ತಿದ್ದಿತೀಡಿ ಅದರಲ್ಲಿ 70 ಎಕೆರೆಯನ್ನು ಉದ್ಯಾನವನ ಮಾಡಿ ಗಾಜಿನ ಮನೆ ನಿರ್ಮಾಣ ಮಾಡಿದ್ದಾರೆ ಅಂತ ನಾರಾಯಣ ಎಂಬವರು ಲೋಕಾಯುಕ್ತ ಸಂಸ್ಥೆ ಮೊರೆ ಹೋದ ಕಾರಣ, ಪರ ವಿರೋಧ ವಾದ ಆಲಿಸಿದ ಲೋಕಾಯುಕ್ತರು, ಕೆರೆಯಲ್ಲಿ ಕಾಮಗಾರಿ ಮಾಡಿದ್ದು ತಪ್ಪು ಅಂತ ಎತ್ತಿ ಹಿಡಿದಿದ್ದು, ಕೆರೆಯಂಗಳದಲ್ಲಿ ನಿರ್ಮಿಸಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ಮೊದಲಿನಂತೆಯೇ ಕೆರೆಯನ್ನು ಮರುಸೃಷ್ಟಿಸಿ ಅಂತ ಆದೇಶ ಮಾಡಿದ್ದಾರೆ.

    ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರ ಆದೇಶ ಅನುಷ್ಠಾನ ಮಾಡುವಂತೆ ಸೂಚಿಸಿದೆ. ಕೆರೆ ಹಾಗೂ ಕರೆಯಂಗಳದಲ್ಲಿ ಯಾವುದೇ ಕಾಮಗಾರಿಗಳನ್ನ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈಗ ಸರಿಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಗಾಜಿನಮನೆ ಎಲ್ಲವೂ ಕೆರೆಗೆ ಆಹಾರವಾಗಲಿದೆ ಎಂಬ ಆತಂಕ ಕಾಡುತ್ತಿದೆ.

    ಇದ್ರಿಂದ ಸದ್ಯ ಪೇಚಿಗೆ ಸಿಲಿಕಿರೋ ಅಧಿಕಾರಿಗಳು ಗಾಜಿನಮನೆ ತೆರವು ಮಾಡೋದಾ ಇಲ್ಲ ಸುಮ್ಮನಿರೋದಾ ಎಂದು ಇಕ್ಕಟ್ಟಿಗೆ ಸಿಲುಕಿ ಮೀನಾಮೇಷ ಎಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರ ತೆರಿಗೆ ಹಣದ ಆರೂವರೆ ಕೋಟಿ ಕೆರೆಯ ನೀರಿಗೆ ಹೋಮ ಮಾಡಿದಂತಾಗುತ್ತಿದೆಯಲ್ಲಾ ಎಂಬುದು ಸಹ ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

  • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.

    ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.

    2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.

  • ಬಳ್ಳಾರಿ ಬಿಜೆಪಿಯಲ್ಲಿ ಧಗ ಧಗ- ನಗರಾಭಿವೃದ್ಧಿ ಪ್ರಾಧಿಕಾರ ನೇಮಕಾತಿ ವಾಪಾಸ್ ಪಡೆದ ಬಿಎಸ್‍ವೈ

    ಬಳ್ಳಾರಿ ಬಿಜೆಪಿಯಲ್ಲಿ ಧಗ ಧಗ- ನಗರಾಭಿವೃದ್ಧಿ ಪ್ರಾಧಿಕಾರ ನೇಮಕಾತಿ ವಾಪಾಸ್ ಪಡೆದ ಬಿಎಸ್‍ವೈ

    ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಿದ್ದ ಸರ್ಕಾರ ಕೂಡಲೇ ಜಾರಿಯಾಗುವಂತೆ ನೇಮಕಾತಿ ಆದೇಶವನ್ನು ವಾಪಾಸ್ ಪಡೆದಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದಮ್ಮೂರು ಶೇಖರ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಜಿಲ್ಲಾ ಕಾರ್ಯಕರ್ತರಿಂದ ನೇಮಕಕ್ಕೆ ವಿರೋಧ ವ್ಯಕ್ತವಾದ ಪರಿಣಾಮ ನೇಮಕಾತಿ ಆದೇಶವನ್ನು ವಾಪಾಸ್ ಪಡೆದಿದ್ದಾಗಿ ತಿಳಿಸಿದರು.

    ಇದಕ್ಕೂ ಮುನ್ನ ದಮ್ಮೂರು ಶೇಖರ್ ನೇಮಕ ವಿರೋಧಿಸಿ ಪ್ರತಿಕಾಗೋಷ್ಠಿ ನಡೆಸಿದ್ದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಜಿಲ್ಲೆಯ 20 ಕ್ಕೂ ಹೆಚ್ಚು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದ್ದರು. ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಅವರು ರಾಜೀನಾಮೆ ಸ್ವೀಕಾರ ಮಾಡಿದ್ದರು. ಬಿಜೆಪಿ ನಾಯಕರ ಕಲಹ ಬಹಿರಂಗವಾಗುತ್ತಿದಂತೆ ಎಚ್ಚೆತ್ತ ಸಿಎಂ ಬಿಎಸ್‍ವೈ ಅವರು, ನೇಮಕಾತಿ ಆದೇಶವನ್ನು ವಾಪಾಸ್ ಪಡೆದ್ದು, ಜಿಲ್ಲಾ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.

    ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಲಿಂಗಪ್ಪ ಅವರು ಶಾಸಕ ಸೋಮಶೇಖರ ರೆಡ್ಡಿ ಮತ್ತು ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಹಣ ಕೊಟ್ಟು ಏನನ್ನಾದರೂ ಖರೀದಿ ಮಾಡಲು ಸಾಧ್ಯವಿಲ್ಲ, ಹೀಗೆ ಖರೀದಿ ಮಾಡಲು ಹೋದವರು ಪರಿಸ್ಥಿತಿ ಏನಾಗಿದೆ ಗೊತ್ತಿದೆ ಎಂದು ಹೇಳಿ ಪರೋಕ್ಷವಾಗಿ ಟೀಕಿಸಿದರು. ಅಲ್ಲದೇ ರಾಜೀನಾಮೆ ನೀಡಿ ಮತ್ತೆ ಗೆದ್ದು ಬನ್ನಿ ಎಂದು ಸೋಮಶೇಖರ್ ರೆಡ್ಡಿಗೆ ಸವಾಲು ಎಸೆದರು.

  • ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಬಳ್ಳಾರಿ ಬದಲು ಚಿತ್ರದುರ್ಗ ಉಸ್ತುವಾರಿ – ಮಲತಾಯಿ ಧೋರಣೆ ತೋರಿದ್ರಾ ಶ್ರೀರಾಮುಲು

    ಚಿತ್ರದುರ್ಗ: ಬಳ್ಳಾರಿ ಉಸ್ತುವಾರಿ ಕೊಡಿ ಎಂದು ಸಿಎಂ ಯಡಿಯೂರಪ್ಪನವರಿಗೆ ದುಂಬಾಲು ಬಿದ್ದಿದ್ದ ಆರೋಗ್ಯ ಸಚಿವ ಶ್ರೀರಾಮುಲು, ಇದೀಗ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಿಕ್ಕಿರೋದಕ್ಕೆ ಮಲತಾಯಿ ಧೋರಣೆ ತೋರುತಿದ್ದಾರಾ ಎಂಬ ಅನುಮಾನ ಚಿತ್ರದುರ್ಗದ ಜನರಲ್ಲಿ ಕಾಡುತ್ತಿದೆ.

    ಯಾಕೆಂದರೆ ಗುರುವಾರ ರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಚಿವ ಶ್ರೀರಾಮುಲು ಅವರ ವಾಸ್ತವ್ಯಕ್ಕಾಗಿ ಭರ್ಜರಿ ಸಿದ್ಧತೆ ಮಾಡಲಾಗಿತ್ತು. ವಿಐಪಿ ವಾರ್ಡಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಮಾದರಿಯಲ್ಲಿ ಎಸಿ, ಟಿವಿ ಹಾಗೂ ಇತರೆ ಐಶಾರಾಮಿ ಪೀಠೋಪಕರಣಗಳಿಂದ ಮದುವಣಗಿತ್ತಿಯಂತೆ ಅಲಂಕರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಅಚ್ಚರಿಯ ವಿಸಿಟ್ ಕೊಡ್ತಿನಿ ಎಂದು ನೆಪ ಹೇಳಿರುವ ಸಚಿವವರು ಗುರುವಾರ ರಾತ್ರಿ ಚಿತ್ರದುರ್ಗದ ಜಿಲ್ಲಾಸ್ಪತ್ರೆ ವಾಸ್ತವ್ಯವನ್ನು ರದ್ದುಗೊಳಿಸಿ ಮಲತಾಯಿ ಧೋರಣೆ ತೋರುತ್ತಿದ್ದಾರೆಂಬ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಗಿದೆ. ಇದನ್ನೂ ಓದಿ:ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    ಅಲ್ಲಿನ ನೀರಿನ ಸಮಸ್ಯೆ, ವೈದ್ಯರ ಕೊರತೆ ಮತ್ತು ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಅಹವಾಲು ಸಲ್ಲಿಸಬೇಕೆಂದು ಕಾತರದಿಂದ ಕಾಯ್ದಿದ್ದ ದುರ್ಗದ ಜನರಿಗೆ ಇದರಿಂದಾಗಿ ಬಾರಿ ನಿರಾಸೆಯಾಗಿದೆ. ಈ ಬಗ್ಗೆ ಪಬ್ಲಿಕ್ ಟಿವಿ ಕೂಡ ವಿಸ್ತ್ರತ ವರದಿ ಬಿತ್ತರಿಸಿ ಸಚಿವರ ಗಮನ ಸೆಳೆದಿತ್ತು. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದ ಜನರಿಗೆ ಸಚಿವರ ವಾಸ್ತವ್ಯ ರದ್ದಾಗಿರುವುದು ಭಾರೀ ಬೇಸರ ಮೂಡಿಸಿದೆ.

    ಹೀಗಾಗಿ ಶೀಘ್ರದಲ್ಲೇ ಈ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ರಾಮುಲು ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಬ್ರೇಕ್ ಹಾಕುತ್ತಾರಾ ಅಥವಾ ಮಲತಾಯಿ ಧೋರಣೆ ಮುಂದುವರಿಸುತ್ತಾರಾ ಎಂದು ಕಾದು ನೋಡಬೇಕಿದೆ.

  • ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಮಾಡಿದೆ – ಕಟೀಲ್

    ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಮಾಡಿದೆ – ಕಟೀಲ್

    ರಾಯಚೂರು: ರಾಜ್ಯದಲ್ಲಿನ ಜಿಲ್ಲೆಗಳ ಸಂಖ್ಯೆ 32, 34 ಎಂದು ವಿವಾದ ಸೃಷ್ಠಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊನೆಗೆ 30 ಜಿಲ್ಲೆಗಳು ಇದೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

    ರಾಯಚೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕಟೀಲ್ ಜಿಲ್ಲೆಗಳ ಸಂಖ್ಯೆಯ ನನ್ನ ಹೇಳಿಕೆಗೆ ಕೆಲವರು ಪ್ರತಿಕ್ರಿಯೆ ನೀಡಿದ್ದರು, ಬೆಂಗಳೂರಿನಲ್ಲಿ ಕುಳಿತು ಮಾತನಾಡುವವರಷ್ಟು ನಾನು ಬುದ್ದಿವಂತನಲ್ಲ. ರಾಜ್ಯದಲ್ಲಿ 30 ಜಿಲ್ಲೆ ಇರುವುದು ನಿಜ ಪಕ್ಷ ಸಂಘಟನಾ ಹಾಗೂ ಅಭಿವೃದ್ಧಿಗಾಗಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಬಿಜೆಪಿ ಮಾಡಿಕೊಂಡಿದೆ ಎಂದು ಹೇಳಿದರು.

    ಪಕ್ಷ ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವುದು ನನಗೆ ಕೊಟ್ಟ ಹುದ್ದೆಯಲ್ಲ, ಜವಾಬ್ದಾರಿ. ಮಹಾತ್ಮಗಾಂಧಿ ರಾಮರಾಜ್ಯ ಆಗಬೇಕು ಎಂದು ಬಯಸಿದರು. ಸ್ವಾತಂತ್ರ್ಯ ಬಳಿಕ ಗಾಂಧಿ ಹೆಸರಿನಲ್ಲಿ ರಾಜಕೀಯ ಆರಂಭವಾಯಿತು. ರಾಮನಂತ ಆದರ್ಶ ವ್ಯಕ್ತಿಗಳನ್ನು ನಿರ್ಮಿಸಿದರೆ ಮಾತ್ರ ದೇಶ ಅಭಿವೃದ್ಧಿ ಆಗುತ್ತೆ. ನರೇಂದ್ರ ಮೋದಿ ಗಾಂಧಿ ಕನಸುಗಳನ್ನ ನನಸು ಮಾಡಲು ಪ್ರಯತ್ನ ಮಾಡಿದ್ದಾರೆ. ಕಾಶ್ಮೀರ ನಮ್ಮದು, ಈ ದೇಶದಲ್ಲಿ ಎರಡು ಧ್ವಜಗಳಿರಬಾರದು ಎಂದು ಕಾಶ್ಮೀರಕ್ಕೆ ಮೋದಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ತಿಳಿಸಿದರು.

    ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕಟೀಲ್ ನೆರೆ ಪರಿಹಾರದ ವಿಚಾರದಲ್ಲಿ ಯಾರೂ ಮಾಡದಷ್ಟು ಕೆಲಸ ಸಿಎಂ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೇ ಮಾಡುತ್ತೇವೆ. ಯಡಿಯೂರಪ್ಪ ಸಿಎಂ ಆಗಿ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

  • ಮಳೆಗೆ ಮುಳುಗಿದ ಓಕಳಿಪುರಂ ಅಂಡರ್‌ಪಾಸ್‌- ಮಳೆ ನೀರಲ್ಲಿ ನಿಂತು ಕುಡುಕನ ರಂಪಾಟ

    ಮಳೆಗೆ ಮುಳುಗಿದ ಓಕಳಿಪುರಂ ಅಂಡರ್‌ಪಾಸ್‌- ಮಳೆ ನೀರಲ್ಲಿ ನಿಂತು ಕುಡುಕನ ರಂಪಾಟ

    – ರಾಯಚೂರಲ್ಲಿ ಜನಜೀವನ ಅಸ್ತವ್ಯಸ್ತ

    ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಹಿಕ್ಕಾ ಚಂಡಮಾರುತದ ಎಫೆಕ್ಟ್ ನಿಂದ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

    ಬೆಂಗಳೂರಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಓಕಳಿಪುರಂ ಅಂಡರ್ ಪಾಸ್‍ ಸಂಪೂರ್ಣ ಜಲಾವೃತವಾಗಿದೆ. ಅಂಡರ್ ಪಾಸ್‍ ಮೂಲಕ ಬಂದ ವಾಹನ ಸವಾರರು ಪರದಾಡಿದರು. ಓಕಳಿಪುರಂ ಅಂಡರ್ ಪಾಸ್‍ನ ಮಳೆ ನೀರಲ್ಲಿ ಕುಡುಕನೊಬ್ಬ ಪುಂಡಾಟ ನಡೆಸಿದ್ದಾನೆ. ಅಂಡರ್ ಪಾಸ್‍ನಲ್ಲಿ ನಿಂತು ವಾಹನ ಸವಾರರಿಗೆ ಅವಾಜ್ ಹಾಕಿದ್ದಾನೆ.

    ಯಲಹಂಕ, ಹೆಬ್ಬಾಳ, ಮಲ್ಲೇಶ್ವರಂ, ಸದಾಶಿವ ನಗರ, ವೈಟ್‍ಫೀಲ್ಡ್, ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ರಸ್ತೆಗಳು ಜಲಾವೃತವಾಗಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಇನ್ನೂ 2 ದಿನ ಬೆಂಗಳೂರಲ್ಲಿ ಮಳೆ ಸುರಿಯಲಿದ್ದು, ಹಳದಿ ಅಲರ್ಟ್ ಮುಂದುವರಿದಿದೆ.

    ರಾಯಚೂರು ಜಿಲ್ಲೆಯಾದ್ಯಂತ ರಾತ್ರಿಯಿಡೀ ಮಳೆ ಆಗಿದೆ. ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ನಾನಾ ಅವಸ್ಥೆ ಪಟ್ಟಿದ್ದಾರೆ. ಸಿಯತಲಾಬ್ ಪ್ರದೇಶದಲ್ಲಿ ಮನೆಗಳು ಜಲಾವೃತವಾಗಿವೆ. ಶ್ರೀರಾಮನಗರ ಕಾಲೋನಿಯಲ್ಲಿರುವ ಕೊದಂಡರಾಮ ದೇವಸ್ಥಾನ ಆವರಣ ಕೆರೆಯಂತಾಗಿದೆ. ಮಳೆಯಿಂದಾಗಿ ನಗರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮಾನ್ವಿಯ ಮುಷ್ಟೂರು ಸೇತುವೆ, ಲಿಂಗಸುಗೂರಿನ ಉಪ್ಪಾರ ನಂದಿಹಾಳ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿವೆ.

    ಕೋಲಾರ ಜಿಲ್ಲೆಯ ಹಲವೆಡೆ ನಿನ್ನೆ ಮಳೆರಾಯ ಅಬ್ಬರಿಸಿದ್ದಾನೆ. 2 ದಿನದ ಮಳೆಗೆ ಜಿಲ್ಲೆಯ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿವೆ. ರಾಗಿ, ಜೋಳ, ಅವರೆ, ತೊಗರಿಗೆ ಮರು ಜೀವ ಬಂದಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಮುಂಗಾರು ಮಳೆಗೆ ಕ್ಯಾರೆ ಎನ್ನದ ಕೋಲಾರ ಜಿಲ್ಲಾಡಳಿತ ಹಿಕ್ಕಾ ಚಂಡಮಾರುತ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

    ಚಂಡಮಾರುತದಿಂದ 4 ದಿನ ಜೋರು ಮಳೆ ಆಗೋದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಸಾರ್ವಜನಿಕ ಆಸ್ತಿಪಾಸ್ತಿ, ಯಾವುದೇ ಜೀವ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ತಾಲೂಕು ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ವಿಪತ್ತು ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ ಹಾಗೂ ನುರಿತ ವಿಪತ್ತು ತಂಡ ರಚನೆ ಮಾಡಿದೆ.