Tag: District Partition

  • ಬಳ್ಳಾರಿ ವಿಭಜನೆ ವಿರೋಧಿಸಿ ರಾಜೀನಾಮೆಗೆ ನಾನು ಸಿದ್ಧ: ಸೋಮಶೇಖರ ರೆಡ್ಡಿ

    ಬಳ್ಳಾರಿ ವಿಭಜನೆ ವಿರೋಧಿಸಿ ರಾಜೀನಾಮೆಗೆ ನಾನು ಸಿದ್ಧ: ಸೋಮಶೇಖರ ರೆಡ್ಡಿ

    ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ನನ್ನ ಕ್ಷೇತ್ರದ ಜನ ಇಷ್ಟಪಟ್ಟರೆ ರಾಜೀನಾಮೆ ನೀಡುವುದಾಗಿ ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬಳ್ಳಾರಿಯಲ್ಲಿಂದು ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ಜಿಲ್ಲೆ ವಿಭಜನೆ ವಿಚಾರವಾಗಿ ರಾಜೀನಾಮೆ ನೀಡಿ ಅಂದ್ರೆ ನಾನು ರಾಜೀನಾಮೆ ನೀಡುವೆ. ನನ್ನನ್ನು ಮತಗಳು ಹಾಕಿ ಚುನಾಯಿಸಿದ ಮತದಾರರು ಹೇಳಿದ್ರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದರು.

    ಈ ಜಿಲ್ಲೆಯ ವಿಭಜನೆ ಮಾಡೋ ವಿಚಾರವಾಗಿ ನನಗೆ ಪಶ್ಚಿಮ ತಾಲೂಕುಗಳ ಜನರು ಫೋನ್ ಮಾಡಿ ಮಾತನಾಡಿದ್ದಾರೆ. ಯಾಕೇ ವಿಭಜನೆ ಮಾಡ್ತಾರೆ ಅಂತ ಗೋಳು ಹೇಳಿಕೊಂಡಿದ್ದಾರೆ. ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಇದ್ದಾರೆ ನಿಮ್ಮದೇ ಸರ್ಕಾರ ಇದೆ ಹಣ ತಂದು ಅಭಿವೃದ್ಧಿ ಮಾಡಬಹುದನ್ನು ಬಿಟ್ಟು ವಿಭಜನೆ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾ ಕೇಂದ್ರ ಕಚೇರಿಗಳು ಬೇಕಾದರೆ ಹೊಸಪೇಟೆಗೆ ಶಿಫ್ಟ್ ಆಗಲಿ. ಆದರೆ ಜಿಲ್ಲೆ ಒಡೆಯೋದು ಬೇಡ ಅಂತ ಮನವಿ ಮಾಡುವೆ ಎಂದು ತಿಳಿಸಿದರು.

    ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳ್ಳಾರಿ ಜಿಲ್ಲೆಗೆ ಸೇರಿಸೋದು ಬೇಡ. ಈ ಬಗ್ಗೆ ನಾನು ಶ್ರೀರಾಮುಲು ಅವರ ಮನವೊಲಿಸುವೆ. ನಾಳೆ ನೆರೆಯ ಆಂಧ್ರ ಪ್ರದೇಶದ ನಾನಾ ತಾಲೂಕುಗಳು ಬರುತ್ತವೆ ಚಳ್ಳಕೆರೆನೂ ಕೇಳುತ್ತಾರೆ. ಹಾಗೆ ಸೇರಿಸುತ್ತಾ ಹೋದರೆ ಸೌಲಭ್ಯದಿಂದ ನಮ್ಮ ಭಾಗದ ಮಕ್ಕಳು ವಂಚಿತರಾಗುತ್ತಾರೆ. ಯಾವುದೇ ಕಾರಣಕ್ಕೂ ಮೊಳ ಕಾಲ್ಮೂರು ಬಳ್ಳಾರಿಗೆ ಸೇರಿಸೋದು ಬೇಡ ಎಂದು ಆಗ್ರಹಿಸಿದ್ದಾರೆ.

  • ಯಾವ ಪುರುಷಾರ್ಥಕ್ಕೆ ಹೊಸ ಜಿಲ್ಲೆ – ಬಿಎಸ್‍ವೈ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

    ಯಾವ ಪುರುಷಾರ್ಥಕ್ಕೆ ಹೊಸ ಜಿಲ್ಲೆ – ಬಿಎಸ್‍ವೈ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ

    ಬಳ್ಳಾರಿ: ಬಳ್ಳಾರಿಯನ್ನು ವಿಭಾಗಿಸಿ ವಿಜಯನಗರ ಹೊಸ ಜಿಲ್ಲೆ ಮಾಡಬೇಕೆಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರದ ಕುರಿತು ಮತ್ತೊಬ್ಬ ಬಿಜೆಪಿ ಶಾಸಕ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿ ಬಳ್ಳಾರಿಯಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ತಿಂಗಳು 19 ರಂದು ಸಿಎಂ ಯಡಿಯೂರಪ್ಪ ವಿಜಯನಗರ ಜಿಲ್ಲೆ ಮಾಡಬೇಕೆಂದು ಪತ್ರ ಬರೆದಿದ್ದಾರೆ. ಹೊಸ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಹೊಸ ಜಿಲ್ಲೆ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ನಾವು ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ನಮ್ಮ ಅಭಿಪ್ರಾಯ ಪಡೆಯಬೇಕಿತ್ತು. ಸಿಎಂ ಯಡಿಯೂರಪ್ಪ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಇದು ಆತುರದ ನಿರ್ಧಾರವಾಗಿದೆ. ಕೆಲವರ ಹಿತಾಸಕ್ತಿಗೆ ಬಿಎಸ್‍ವೈ ಮಣಿದಿದ್ದಾರೆ. ಇದು ಸರಿಯಲ್ಲ ಎಂದು ಪರೋಕ್ಷವಾಗಿ ಆನಂದ್ ಸಿಂಗ್ ಅವರಿಗೆ ರೆಡ್ಡಿ ಟಾಂಗ್ ನೀಡಿದ್ದಾರೆ.

    ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಜಿಲ್ಲೆ ಆಗಬೇಕೆಂದು ಹೋರಾಟ ನಡೆಯುತ್ತಿದ್ದು, ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಅಶಾಂತಿ ವಾತವರಣ ನಿರ್ಮಾಣವಾಗಿದೆ. ಹಂಪಿ, ಟಿಬಿ ಡ್ಯಾಂ ನಮ್ಮ ಹೆಮ್ಮೆ, ಯಡಿಯೂಪ್ಪನವರು ಸಿಎಂ ಆಗಬೇಕಾದರೆ ನಾವೂ ಕೂಡ ಬೆಂಬಲ ಕೊಟ್ಟವರು. ನಮ್ಮನ್ನೂ ಪರಿಗಣಿಸಬೇಕಿದೆ ಎಂದು ತಿಳಿಸಿದರು.

    ಈಗ ಬೆಳಗಾವಿ, ಶಿರಸಿ, ಹೋರಾಟಗಳು ನಡೆಯುತ್ತಿವೆ. ದಯವಿಟ್ಟು ಜಿಲ್ಲೆ ಒಡೆಯಬೇಡಿ. ನಾವು ಒಗ್ಗಟ್ಟಾಗಿ ಇರಲು ಬಿಡಿ. ಬಳ್ಳಾರಿ ಒಡೆಯುವುದಾದರೆ ಹರಪನಹಳ್ಳಿ ಜಿಲ್ಲೆ ಮಾಡಿ. ನಮ್ಮ ಮೊದಲ ಆದ್ಯತೆ ಜಿಲ್ಲೆ ಅಖಂಡವಾಗಿಯೇ ಇರಲಿ. ಜಿಲ್ಲೆಯನ್ನು ಮಾಡಲೇಬೇಕು ಅಂದಾಗ ಹರಪನಹಳ್ಳಿ ಮಾಡಿ. ಆನಂದ್ ಸಿಂಗ್ ಮನವಿ ಪತ್ರ ಸಲ್ಲಿಸಿದ ಮರುದಿನವೇ ಪ್ರತಿಕ್ರಿಯೆ ನೀಡುತ್ತಾರೆ. ಅವಸರದ ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯಬೇಕು. ವೈಜ್ಞಾನಿಕವಾಗಿ ಇದು ಸರಿಯಲ್ಲ. ಮೊದಲು ಕರೆದು ಮಾತನಾಡಲಿ. ಗೌರವಾನ್ವಿತ ಸಿಎಂ ಆಲೋಚನೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಿ. ಜಿಲ್ಲೆ ಒಡೆಯುವುದನ್ನು ವಿರೋಧಿಸಿ ಬಳ್ಳಾರಿ ಬಂದ್‍ಗೆ ಕರೆ ನೀಡಿರುವುದಕ್ಕೆ ನನ್ನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.