Tag: District Panchayat President Election

  • ಜನಸಾಮಾನ್ಯರಿಗೆ ಕೊರೊನಾ ಭೀತಿ- ‘ಕೈ’ ನಾಯಕರಿಗೆ ಚುನಾವಣೆ ಧ್ಯಾನ

    ಜನಸಾಮಾನ್ಯರಿಗೆ ಕೊರೊನಾ ಭೀತಿ- ‘ಕೈ’ ನಾಯಕರಿಗೆ ಚುನಾವಣೆ ಧ್ಯಾನ

    -ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ಮುಖಂಡರ ಸಭೆ

    ಚಿತ್ರದುರ್ಗ: ಇಡೀ ದೇಶವೇ ಕೊರೊನಾ ಸಂಕಷ್ಟದಿಂದಾಗಿ ತಲ್ಲಣಗೊಂಡಿದೆ. ಆದರೆ ಚಿತ್ರದುರ್ಗ ಜಿಲ್ಲಾಪಂಚಾಯತಿ ಅಧ್ಯಕ್ಷಗಾದಿಯ ಅಧಿಕಾರದ ಗದ್ದುಗೆಗಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಚಿತ್ರದುರ್ಗದಲ್ಲಿ ಬೃಹತ್ ಸಭೆ ನಡೆಸಿದ್ದಾರೆ.

    ಎಂಎಲ್‍ಸಿ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಕಾಂಗ್ರೆಸ್ ಜಿ.ಪಂ.ಸದಸ್ಯರ ಸಭೆ ನಡೆದಿದ್ದೂ, ಮೇ 22ಕ್ಕೆ ಜಿ.ಪಂ ಅಧ್ಯಕ್ಷರ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇಂದು ಚಿತ್ರದುರ್ಗದ ಹೊರವಲಯದ ದೊಡ್ಡಸಿದ್ದವನಹಳ್ಳಿ ಬಳಿ ಇರುವ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರದ ರವಿಕುಮಾರ್ ತೋಟದಲ್ಲಿ 200ಕ್ಕೂ ಹೆಚ್ಚು ಕೈ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

    ಜಿಲ್ಲೆಯಲ್ಲಿ ಈಗಾಗಲೇ 9 ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಚಿತ್ರದುರ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಇಂದು ಜಿಲ್ಲೆಯಲ್ಲಿ 2 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಕಾಂಗ್ರೆಸ್ ನಾಯಕರು ಸಾಮಾಜಿಕ ಅಂತರವನ್ನು ಮರೆತು ನಿರ್ಭಯವಾಗಿ ಸಭೆ ಸೇರಿದ್ದರು.

    ಸಭೆಯಲ್ಲಿ ಹತ್ತಕ್ಕೂ ಹೆಚ್ಚು ಮಹಿಳಾ ಜಿಲ್ಲಾ ಪಂಚಾಯಿತಿ ಸದಸ್ಯರು, ಅವರ ಪತಿದೇವರುಗಳು ಕೂಡ ಭಾಗಿಯಾಗಿದ್ದರು. ಅಲ್ಲದೇ ಕಳೆದ ಮೂರು ಅವಧಿಯಲ್ಲೂ ಕಾಂಗ್ರೆಸ್ಸಿನ ಸದಸ್ಯರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸದ್ಯ ಒಡೆದ ಮಡಕೆಯಾಗಿದ್ದ ಕಾಂಗ್ರೆಸ್‍ನಲ್ಲಿ ಇದೀಗ ಮಾಜಿ ಸಚಿವರಾದ ಹೆಚ್.ಆಂಜನೇಯ, ಡಿ.ಸುಧಾಕರ್, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಚಳ್ಳಕೆರೆ ಶಾಸಕ ರಘುಮೂರ್ತಿ, ಎಂಎಲ್‍ಸಿ ಜಯಮ್ಮ ಬಾಲರಾಜ್ ಹಲವರು ಭಾಗಿಯಾಗಿ ಅಧ್ಯಕ್ಷ ಗಾದಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಚರ್ಚಿಸಿ ಅಂತಿಮಗೊಳಿಸಿದ್ದಾರೆ.

    ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಂಎಲ್‍ಸಿ ಹೆಚ್.ಎಂ ರೇವಣ್ಣ ಅವರು, ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದೇವೆ. ಆದರೆ ಯಾವುದೇ ಲಾಕ್‍ಡೌನ್ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಕೋಟೆನಾಡಿನ ಜನರು, ಲಾಕ್‍ಡೌನ್ ಉಲ್ಲಂಘನೆ ವಿಚಾರದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯನಾ ಎಂಬ ಪ್ರಶ್ನೆಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ.