Tag: District Offices

  • 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ – ವಿಜಯನಗರಕ್ಕೆ 53 ಕೋಟಿ ಮಂಜೂರು

    11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ – ವಿಜಯನಗರಕ್ಕೆ 53 ಕೋಟಿ ಮಂಜೂರು

    ವಿಜಯನಗರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸಲಾಯಿತು. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ದುರಸ್ತಿ, ನವೀಕರಣ ಮತ್ತು ಕಛೇರಿ ಮೂಲಸೌಕರ್ಯಕ್ಕೆ 53 ಕೋಟಿ ರೂ. ಅನುದಾನ ಒದಗಿಸಲು ಮಂಜೂರಾತಿ ನೀಡಲಾಗಿದೆ.

    ಎರಡು ಹಂತಗಳಲ್ಲಿ ಹುದ್ದೆಗಳ ಸೃಜನೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಎಸ್.ಪಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಂತ ಹಂತವಾಗಿ ಎಲ್ಲ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ: ಎಸ್ ಟಿ ಸೋಮಶೇಖರ್

    ಇದರಲ್ಲಿ ಕೆಲವು ಹುದ್ದೆಗಳನ್ನು ಬಳ್ಳಾರಿಯಿಂದ ಸ್ಥಳಾಂತರ ಮಾಡುವ ಮೂಲಕ ಹಾಗೂ ಕೆಲವು ಹುದ್ದೆಗಳ ಸೃಜನೆಯ ಮೂಲಕ ಜಿಲ್ಲಾ ಮಟ್ಟದ ಕಚೇರಿ ಸ್ಥಾಪಿಸಲಾಗುವುದು. ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ ಕರ್ನಾಟಕ ಗೃಹಮಂಡಳಿಯ 83 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅನುದಾನವನ್ನು ಎರಡು ಹಂತದಲ್ಲಿ ವರ್ಗಾಯಿಸಲಾಗುವುದು. ಅನಗತ್ಯ ಸ್ಥಳ ವ್ಯರ್ಥ ಮಾಡದೆ ಕಾರ್ಯನಿರ್ವಹಣೆಗೆ ಪೂರಕವಾಗಿ ಸುಸಜ್ಜಿತ ಜಿಲ್ಲಾಡಳಿತ ಭವನದ ನಕ್ಷೆ ರೂಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಇದನ್ನೂ ಓದಿ: ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

    ಬಳ್ಳಾರಿ ಜಿಲ್ಲೆಯ ಜಿಲ್ಲಾ ಖನಿಜ ನಿಧಿಗೆ ಸಂಬಂಧಿಸಿದಂತೆ ಈಗಾಗಲೇ 2023-24ರವರೆಗೆ ಅನುಮೋದನೆಯಾಗಿರುವ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು. ನಂತರ ಜಿಲ್ಲಾ ಖನಿಜ ನಿಧಿಯನ್ನು ಎರಡೂ ಜಿಲ್ಲೆಗಳ ನಡುವೆ ಹಂಚಿಕೆ ಮಾಡುವ ಕುರಿತು ಒಂದು ಸೂತ್ರ ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ: ಎಸ್ ಟಿ ಸೋಮಶೇಖರ್

    ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವಿಫುಲ ಅವಕಾಶವಿದ್ದು, ಹಂಪಿಯಲ್ಲಿ ಹಾಗೂ ಮತ್ತಿತರ ಪಾರಂಪರಿಕ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.