Tag: district hospital

  • ಸ್ಮಶಾನ ಜಾಗಕ್ಕಾಗಿ ಹೊಡೆದಾಟ: 50ಕ್ಕೂ ಹೆಚ್ಚು ಜನರಿಗೆ ಗಾಯ

    ಸ್ಮಶಾನ ಜಾಗಕ್ಕಾಗಿ ಹೊಡೆದಾಟ: 50ಕ್ಕೂ ಹೆಚ್ಚು ಜನರಿಗೆ ಗಾಯ

    ಕೋಲಾರ: ಸ್ಮಶಾನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಹೊಡೆದಾಡಿಕೊಂಡು, 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ವೇಮಗಲ್ ಹೋಬಳಿಯ ಹೊಲೇರಹಳ್ಳಿಯಲ್ಲಿ ನಡೆದಿದೆ.

    ಇಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನದ ಸರ್ವೇ ನಡೆಸುತ್ತಿದ್ದರು. ಸ್ಥಳದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ಸೇರಿದ್ದರು. ಸಶ್ಮಾನ ಜಾಗ ಒತ್ತುವರಿ ಆಗಿಲ್ಲ ಎಂದು ಒಂದು ಗುಂಪು ವಾದಕ್ಕೀಳಿದಾಗ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಪರಿಸ್ಥಿತಿ ಕೈ ಮೀರಿದ ಪರಿಣಾಮ ಹೊಡೆದಾಡಿಕೊಂಡಿದ್ದು, ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಗುಂಪು ಘರ್ಷಣೆ ಏಕೆ?
    ಸ್ಮಶಾನದ ಒತ್ತುವರಿ ಮಾಡಲಾಗಿದೆ ಎಂದು ಹೊಲೇರಹಳ್ಳಿಯ ಗ್ರಾಮದ ಒಂದು ಗುಂಪು ಕಂದಾಯ ಇಲಾಖೆಗೆ ದೂರು ನೀಡಿತ್ತು. ಆದರೆ ಯಾವುದೇ ಒತ್ತುವರಿ ಆಗಿಲ್ಲವೆಂದು ಮತ್ತೊಂದು ಗುಂಪಿನ ಸದಸ್ಯರು ಪಟ್ಟು ಹಿಡಿದಿದ್ದರು. ದೂರು ದಾಖಲಿಸಿಕೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸ್ಮಶಾನ ಸರ್ವೇಗೆ ಗ್ರಾಮಕ್ಕೆ ಬಂದಿದ್ದಾಗ ಗುಂಪುಗಳು ಹೊಡೆದಾಡಿಕೊಂಡಿವೆ.

    ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೇಮಗಲ್ ಠಾಣೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ವೇಮಗಲ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

    ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ

    ಕೋಲಾರ: ಇಂದು ಬೆಳ್ಳಂಬೆಳಗ್ಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಕಳ್ಳತನಾಗಿದೆ. ಮಂಗಳವಾರ ಬೆಳಗ್ಗೆ ಜನಿಸಿದ್ದ ಹೆಣ್ಣು ಮಗುವೊಂದನ್ನ ಆಸ್ಪತ್ರೆ ವಾರ್ಡ್ ನಿಂದ ಕಳ್ಳತನ ಮಾಡಿದ್ದಾರೆ ಅಥವಾ ಉದ್ದೇಶ ಪೂರ್ವಕವಾಗಿ ಕಿಡ್ನಾಪ್ ಮಾಡಿದ್ದಾರೆ ಅನ್ನೋ ಅನುಮಾನ ಇದೀಗ ಮೂಡಿದೆ.

    ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಮ್ಮಸಂದ್ರ ಗ್ರಾಮದ ವೇಣುಕುಮಾರಿ ಹಾಗೂ ನಾರಾಯಣಸ್ವಾಮಿ ಎಂಬ ದಂಪತಿಗಳಿಗೆ ಜನಿಸಿದ್ದ ಹೆಣ್ಣು ಮಗು ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಳ್ಳತನವಾಗಿದೆ. ತಾಯಿ ಪಕ್ಕದಲ್ಲೇ ಮಲಗಿದ್ದ ಮಗುವನ್ನು ಯಾರೋ ಅಪರಿಚಿತರು ಕಿಡ್ನಾಪ್ ಮಾಡಿದ್ದಾರೆ. ಎರಡು ಗಂಟೆವರೆಗೂ ಎಚ್ಚರವಾಗಿದ್ದ ತಾಯಿ ವೇಣುಕುಮಾರಿ ನಿದ್ದೆಗೆ ಜಾರಿದ ತಕ್ಷಣವೇ ಮಗುವನ್ನು ಅಲ್ಲಿಂದ ಕಳ್ಳತನ ಮಾಡಲಾಗಿದೆ.

    ಕಳ್ಳತನವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ನಾರಾಯಣಸ್ವಾಮಿ ಹಾಗೂ ಸಂಬಂಧಿಕರು ಮಗುವನ್ನು ಆಸ್ಪತ್ರೆ ಸುತ್ತಮುತ್ತ ಹಾಗೂ ಕೋಲಾರ ನಗರದಲ್ಲೂ ಸಹ ಹುಡುಕಾಟ ಮಾಡಿದ್ದಾರೆ. ಆದರೂ ಮಗುವಿನ ಸುಳಿವು ಮಾತ್ರ ಸಿಕ್ಕಿಲ್ಲ. ಕೋಲಾರ ಜಿಲ್ಲಾಸ್ಪತ್ರೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಜೊತೆಗೆ ಸೆಕ್ಯೂರಿಟಿ ವ್ಯವಸ್ಥೆ ಕೂಡಾ ಇದೆ ಹೀಗಿದ್ರು ಮಗು ಕಳ್ಳತನವಾಗಿರುವ ಬಗ್ಗೆ ಮಗುವಿನ ಪೋಷಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಫೆಬ್ರವರಿ-24 ರಂದು ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಗಂಡು ಶಿಶು ಕಿಡ್ನಾಪ್ ಆಗಿತ್ತು. ಆದ್ರೆ ಇದುವರೆಗೂ ಮಗುವಿನ ಸುಳಿವು ಸಿಕ್ಕಿಲ್ಲ. ಇತ್ತೀಚೆಗೆ ಹೈದರಾಬಾದ್‍ನ ಆಸ್ಪತ್ರೆಯಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆಯಾಗಿತ್ತು.

  • ಗಂಡು ಮಗು ಜನಿಸಿ ಹೆಣ್ಣು ಮಗುವನ್ನು ತಾಯಿಗೆ ನೀಡಿದ್ರು- ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

    ಗಂಡು ಮಗು ಜನಿಸಿ ಹೆಣ್ಣು ಮಗುವನ್ನು ತಾಯಿಗೆ ನೀಡಿದ್ರು- ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ

    ದಾವಣಗೆರೆ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಆಗ ತಾನೇ ಹುಟ್ಟಿದ ನವಜಾತ ಶಿಶುವನ್ನು ಅದಲು ಬದಲು ಮಾಡಿದ್ದಾರೆಂದು ರೋಗಿಯ ಸಂಬಂಧಿಕರು ಅರೋಪಿಸುತ್ತಿದ್ದಾರೆ.

    ದಾವಣಗೆರೆಯ ಹರಿಹರದ ತಾಲೂಕಿನ ಯಲವಟ್ಟಿ ಗ್ರಾಮದ ಅಶಾಬಾಯಿ ಎಂಬವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಸಂಜೆ 7 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಇನ್ನೂರು ರೂಪಾಯಿ ಕೊಡಿ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ರು.

    ಗಂಡು ಮಗು ಹುಟ್ಟಿದೆ ಎಂದು ಖುಷಿಯಿಂದ ಇನ್ನೂರು ರೂಪಾಯಿ ಕೊಟ್ಟಿದ್ದಾರೆ. ಆದ್ರೆ ಒಂದು ಗಂಟೆಯ ನಂತರ ಹೆಣ್ಣು ಮಗು ಹುಟ್ಟಿದೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಹುಟ್ಟಿದ ಗಂಡು ಮಗುವಿನ ಬದಲು ವೈದ್ಯರು ಹೆಣ್ಣು ಮಗುವನ್ನು ನೀಡಿದ್ದಾರೆ. ಗಂಡು ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂದು ಆಶಾಬಾಯಿ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕೂಡಲೇ ಮೇಲಾಧಿಕಾರಿಗಳು ಬಂದು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಓತ್ತಾಯಿಸಿದ್ರು. ಇನ್ನು ಗಲಾಟೆ ಜೋರಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ರು.

  • ದಾಖಲಾಗಿದ್ದ ರೋಗಿಯನ್ನು ಆಸ್ಪತ್ರೆಯಿಂದ ಹೊರ ಹಾಕಿದ ನರ್ಸ್ ಗಳು

    ದಾಖಲಾಗಿದ್ದ ರೋಗಿಯನ್ನು ಆಸ್ಪತ್ರೆಯಿಂದ ಹೊರ ಹಾಕಿದ ನರ್ಸ್ ಗಳು

    ಮಂಗಳೂರು: ಗ್ಲುಕೋಸ್ ಗಲಾಟೆಯಲ್ಲಿ ಬಡ ರೋಗಿಯೊಬ್ಬರನ್ನು ಮಂಗಳೂರಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನರ್ಸ್‍ಗಳೇ ಆಸ್ಪತ್ರೆಯಿಂದಲೇ ಹೊರಹಾಕಿದ್ದಾರೆ.

    ಶ್ವಾಸಕೋಶ ತೊಂದರೆಯಿಂದ ಬಳಲ್ತಿದ್ದ ಪುತ್ತೂರಿನ ರಾಜಕುಮಾರ್ ಜೂನ್ 28ರಂದು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ನಿತ್ರಾಣ ಹಿನ್ನೆಲೆಯಲ್ಲಿ ದಿನಕ್ಕೆ ಎಂಟು ಬಾಟಲ್ ಗ್ಲೂಕೋಸ್ ನೀಡುವಂತೆ ವೈದ್ಯರು ನರ್ಸ್ ಗಳಿಗೆ ಸೂಚಿಸಿದ್ದರು.

    ವೈದ್ಯರು ಹೋದ ಬಳಿಕ ಫ್ರೀ ಸಿಗುತ್ತೆ ಅಂತಾ ಇಷ್ಟೊಂದು ಗ್ಲುಕೋಸ್ ಕೊಡುವುದಾ? ದಿನಕ್ಕೆ ಎರಡು ಗ್ಲೂಕೋಸ್ ಸಾಕು ಅಲ್ಲಿದ್ದ ನರ್ಸ್ ಗಳು ಎಂದಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಚಿಕಿತ್ಸೆ ನಿಲ್ಲಿಸಿದ್ದಲ್ಲದೆ, ಬೆಡ್ಡಿನಲ್ಲಿದ್ದ ರೋಗಿಯನ್ನು ನೇರವಾಗಿ ಸಿರಿಂಜ್ ತೆಗೆಯದೇ ಹೊರಕ್ಕೆ ಕಳುಹಿಸಿದ್ದಾರೆ.

    ಇಬ್ಬರು ಸಣ್ಣ ಮಕ್ಕಳು ಮತ್ತು ಪತ್ನಿಯ ಜೊತೆ ಹೊರಬಂದಿರುವ ರೋಗಿ ರಾಜಕುಮಾರ್ ಕುಟುಂಬ ಕಂಗಾಲಾಗಿದ್ದು, ವೈದ್ಯಾಧಿಕಾರಿ ಮತ್ತು ನರ್ಸ್ ಗಳ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಆಗಿದ್ರೂ ಸ್ಕ್ಯಾನಿಂಗ್, ಎಕ್ಸ್ ರೇ ಸಹಿತ ಔಷಧಿಗಳಿಗೂ ಹಣ ಪಡೆಯುತ್ತಿದ್ದಾರೆ. ಮೆಡಿಕಲ್ ಗೆ ಚೀಟಿ ಬರೆದುಕೊಟ್ಟು ಬಡ ರೋಗಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಮೆಟ್ಟಿಲಲ್ಲೇ ಕುಳಿತು ಮಗುವಿಗೆ ಹಾಲು, ಬಾತ್ ರೂಂ ಪಕ್ಕನೇ ಊಟ- ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ!

    ಮೆಟ್ಟಿಲಲ್ಲೇ ಕುಳಿತು ಮಗುವಿಗೆ ಹಾಲು, ಬಾತ್ ರೂಂ ಪಕ್ಕನೇ ಊಟ- ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ!

    ಚಾಮರಾಜನಗರ: ರಾಜ್ಯಕ್ಕೆ ಇಬ್ಬರು ಸಚಿವರನ್ನು ನೀಡಿರುವ ಗಡಿ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಚಿಂತಜನಕವಾಗಿದೆ.

    ರೋಗಿಗಳಿಗೆ ಮಲಗಲು ಬೆಡ್ ಮತ್ತು ಕುಳಿತುಕೊಳ್ಳಲು ಚೇರೂ ಇಲ್ಲದೆ ನೆಲದ ಮೇಲೆ ಮಲಗುವ ಮತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆಯನ್ನೂ ನೀಡುತ್ತಿಲ್ಲ.

    ಇದಲ್ಲದೇ ಬಾಣಂತಿಯರು ತಮ್ಮ ಮಗುವಿಗೆ ಹಾಲುಣಿಸಲು ಸ್ಥಳವಿಲ್ಲದೇ ಮೆಟ್ಟಿಲುಗಳ ಮೇಲೆ ಕುಳಿತು ಹಾಲುಣಿಸುವಂತಾಗಿದೆ. ಊಟ ಮಾಡಲು ಜಾಗವಿಲ್ಲದ ಕಾರಣ ರೋಗಿಗಳು ಬಾತ್ ರೂಂ ಪಕ್ಕ, ಓಡಾಡುವ ಜಾಗದಲ್ಲಿ ಕುಳಿತು ಊಟ ಮಾಡ್ಬೇಕಾಗಿದೆ. ಈ ಬಗ್ಗೆ ಸಚಿವರುಗಳಾದ ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್‍ಗೆ ದೂರು ನೀಡಿ ಒಂದು ವಾರ ಕಳೆದ್ರೂ ಆಸ್ಪತ್ರೆಯತ್ತ ಯಾರೋಬ್ಬರು ಮುಖ ಮಾಡಿಲ್ಲ. ಇದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.

  • ಆಸ್ಪತ್ರೆಯಲ್ಲಿ ಮಗುಬಿಟ್ಟು ಕರುಳಬಳ್ಳಿ ಕಡಿದುಕೊಂಡಳು!

    ಆಸ್ಪತ್ರೆಯಲ್ಲಿ ಮಗುಬಿಟ್ಟು ಕರುಳಬಳ್ಳಿ ಕಡಿದುಕೊಂಡಳು!

    ಧಾರವಾಡ: ಎಷ್ಟೋ ಜನರು ಮಕ್ಕಳೇ ಆಗಲಿಲ್ಲವೆಂದು ಜೀವನದಲ್ಲಿ ಜಿಗುಪ್ಸೆ ಹೊಂದುತ್ತಾರೆ. ಆದರೆ ತಾಯಿಯೊಬ್ಬಳು ತನ್ನ ಎರಡು ತಿಂಗಳ ಮಗುವನ್ನು ಜಿಲ್ಲಾಸ್ಪತ್ರೆ ಆವರಣದ ಕ್ಯಾಂಟಿನ್ ಬಳಿ ಬಿಟ್ಟು ಹೋದ ಘಟನೆ ಧಾರವಾಡದಲ್ಲಿ ಮಂಗಳವಾರ ನಡೆದಿದೆ.

    ಬಿಟ್ಟು ಹೋಗಿರುವ ಹೆಣ್ಣು ಮಗು ಕೇವಲ ಎರಡು ತಿಂಗಳ ಹಸುಗುಸು. ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಗುವನ್ನು ಹೊತ್ತು ಸಂದೇಹಾಸ್ಪದವಾಗಿ ಓಡಾಡುತ್ತಿದ್ದ ಮಹಿಳೆಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ಮಕ್ಕಳಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ

    ಆಸ್ಪತ್ರೆಯ ಆವರಣದಲ್ಲಿ ಮಗುವೊಂದೇ ಇರುವುದನ್ನು ಕಂಡ ಜನರು, ಎತ್ತಿಕೊಂಡು ಹೋಗಿ ಆಸ್ಪತ್ರೆಯ ವೈದ್ಯರಿಗೆ ಮುಟ್ಟಿಸಿದ್ದಾರೆ. ಸದ್ಯ ವೈದ್ಯರು ಮಗುವನ್ನು ಐಸಿಯುನಲ್ಲಿ ಇಟ್ಟು ಆರೈಕೆ ಮಾಡುತ್ತಿದ್ದಾರೆ. ನಂತರ ಮಗುವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸುಪರ್ದಿಗೆ ನೀಡುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಮಗುವನ್ನು ಬಿಟ್ಟು ಹೋದ ಪ್ರಕರಣ ಕುರಿತು ಉಪನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮಗು ಬಿಟ್ಟು ಹೋಗಿರುವ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ.

  • ಗದಗ ಜಿಲ್ಲೆಯ ವ್ಯಕ್ತಿಗೆ ನಿಪಾ ವೈರಸ್‍ನ ಲಕ್ಷಣಗಳಿಲ್ಲ

    ಗದಗ ಜಿಲ್ಲೆಯ ವ್ಯಕ್ತಿಗೆ ನಿಪಾ ವೈರಸ್‍ನ ಲಕ್ಷಣಗಳಿಲ್ಲ

    ಗದಗ: ಜಿಲ್ಲೆ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ವ್ಯಕ್ತಿಯೊಬ್ಬರಿಗೆ ನಿಪಾ ವೈರಸ್ ಕಾಣಿಸಿಕೊಂಡಿಲ್ಲ ಎಂದು ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ಗಂಗಾಧರ್ ಎಂಬವರಿಗೆ ನಿಪಾ ವೈರಸ್ ಕಾಣಿಸಿಕೊಂಡಿದೆ ಎಂಬ ಶಂಕೆಯಿಂದ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅವರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ವೈರಲಾಜಿ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಫಲಿತಾಂಶ ಬಂದಿದ್ದು, ಗಂಗಾಧರ್ ಅವರಿಗೆ ನಿಪಾ ವೈರಸ್ ಕಾಣಿಸಿಕೊಂಡಿಲ್ಲ, ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯ ಭೂಸರೆಡ್ಡಿ ಹೇಳಿದ್ದಾರೆ. ಇದನ್ನು ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಗಂಗಾಧರ್ ಅವರು ಕಳೆದ 6 ತಿಂಗಳಿನಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ನಿಪಾ ವೈರಸ್ ಹಾವಳಿ ಹೆಚ್ಚಾಗಿದ್ದರಿಂದ ಅವರು ತಮ್ಮ ಗ್ರಾಮಕ್ಕೆ ಬಂದಿದ್ದರು. ಒಂದು ವಾರದಿಂದ ಜ್ವರ, ಕೆಮ್ಮು, ತಲೆಸುತ್ತು ಕಾಣಿಸಿಕೊಂಡಿದ್ದರಿಂದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಿಪಾ ಶಂಕೆ ವ್ಯಕ್ತವಾಗಿದ್ದರಿಂದ ರಕ್ತದ ಮಾದರಿಯನ್ನು ಪುಣೆಗೆ ಕಳುಹಿಸಲಾಗಿತ್ತು. ಸದ್ಯ ಗಂಗಾಧರ್ ರಕ್ತದಲ್ಲಿ ನಿಪಾ ವೈರಸ್ ಇಲ್ಲವೆಂದು ಎಂದು ರಿಪೋರ್ಟ್ ಮೂಲಕ ಸ್ಪಷ್ಟವಾಗಿದೆ.

  • ಯಾರದ್ದೋ ಶವವನ್ನು ಇನ್ಯಾರಿಗೋ ಕೊಟ್ಟ ಜಿಲ್ಲಾಸ್ಪತ್ರೆ ಸಿಬ್ಬಂದಿ- ಯುವತಿ ಶವವೆಂದು 60ರ ಮಹಿಳೆಯ ಶವ ಅಂತ್ಯಕ್ರಿಯೆ

    ಯಾರದ್ದೋ ಶವವನ್ನು ಇನ್ಯಾರಿಗೋ ಕೊಟ್ಟ ಜಿಲ್ಲಾಸ್ಪತ್ರೆ ಸಿಬ್ಬಂದಿ- ಯುವತಿ ಶವವೆಂದು 60ರ ಮಹಿಳೆಯ ಶವ ಅಂತ್ಯಕ್ರಿಯೆ

    ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯಲ್ಲಿ ಯಾರದ್ದೋ ಶವವನ್ನು ಬೇರೆಯವರಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ.

    ದಾವಣಗೆರೆ ತಾಲೂಕಿನ ಬೂದಾಳ್ ಗ್ರಾಮದ ಕೆಂಚಮ್ಮ(60) ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೆಂಚಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ್ದರು. ಬುಧವಾರ ಕೆಂಚಮ್ಮ ಅವರ ಶವಪರೀಕ್ಷೆ ಮಾಡಿ ಶವವನ್ನು ನೀಡಲಾಗುವುದು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

    ಕೆಂಚಮ್ಮ

     

    ಮಂಗಳವಾರ ಮಲೇಬೆನ್ನೂರು ಗ್ರಾಮದ 28 ವರ್ಷದ ಶಿಲ್ಪಾ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಬುಧವಾರ ರಾತ್ರಿ ಆಸ್ಪತ್ರೆ ಸಿಬ್ಬಂದಿ ಯುವತಿಯ ಶವದ ಬದಲು ಕೆಂಚಮ್ಮ ಅವರ ಶವವನ್ನು ಮಲೇಬೆನ್ನೂರು ಗ್ರಾಮಸ್ಥರಿಗೆ ನೀಡಿದ್ದಾರೆ. ಮಲೇಬೆನ್ನೂರು ಗ್ರಾಮಸ್ಥರು ರಾತ್ರೋರಾತ್ರಿ ಮುಖವನ್ನೂ ನೋಡದೇ ನಮ್ಮ ತಾಯಿಯ ಶವವನ್ನೇ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಕೆಂಚಮ್ಮರ ಮಗ ಹನುಮಂತು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಶಿಲ್ಪಾ

    ಕೆಂಚಮ್ಮರ ಕುಟುಂಬಸ್ಥರು ಜಿಲ್ಲಾಸ್ಪತೆಯ ಶವಾಗಾರದ ಮುಂದೆ ಶವಕ್ಕಾಗಿ ರೋಧಿಸುತ್ತಿದ್ದಾರೆ. ಇನ್ನು ಶವಾಗಾರದಲ್ಲಿ ಉಳಿದಿರುವ ಶಿಲ್ಪಾ ಶವವವನ್ನು ಪಡೆಯಲು ಯಾರು ಮುಂದಾಗುತ್ತಿಲ್ಲ. ಮೇಲ್ನೋಟಕ್ಕೆ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾಣುತ್ತಿದ್ದು, ಇದೂವರೆಗೂ ಯಾವ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯೆನ್ನು ನೀಡಿಲ್ಲ. ಈ ಸಂಬಂಧ ಜಿಲ್ಲಾಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ವಿರುದ್ಧ ದೂರನ್ನು ನೀಡಲು ಕೆಂಚಮ್ಮರ ಮಗ ಮುಂದಾಗಿದ್ದಾರೆ.

  • ಜಿಲ್ಲಾಸ್ಪತ್ರೆಯ ಎಕ್ಸ್-ರೇ ಕೋಣೆಯಲ್ಲಿ ಬೆಂಕಿ- ನಾಲ್ವರು ಅಸ್ವಸ್ಥ

    ಜಿಲ್ಲಾಸ್ಪತ್ರೆಯ ಎಕ್ಸ್-ರೇ ಕೋಣೆಯಲ್ಲಿ ಬೆಂಕಿ- ನಾಲ್ವರು ಅಸ್ವಸ್ಥ

    ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯ ಎಕ್ಸ್ ರೇ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಸಿಬ್ಬಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

    ಎಸಿ ಸ್ಟೆಬಿಲೈಜರ್ ಸ್ಫೋಟಗೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಫೈರ್ ಎಕ್ಸ್ಟಿಂಗ್ಯುಶರ್‍ನಿಂದ ಬೆಂಕಿ ನಂದಿಸಲು ಮುಂದಾದ್ರು. ಬೆಂಕಿ ನಂದಿಸಿದ ನಂತರ ಕೋಣೆಯಲ್ಲಿನ ಮಷೀನ್ ಹೊರತಗೆಯಲು ಹೋದಾಗ ದಟ್ಟ ಹೊಗೆಯಿಂದಾಗಿ ನಾಲ್ವರು ಡಿ-ಗ್ರೂಪ್ ಸಿಬ್ಬಂದಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಸಾತಲಿಂಗ್, ಫಜಲ್ ರಾಚಪ್ಪಾ ಹಾಗೂ ರವಿಕುಮಾರ್ ಎಂದು ಗುರುತಿಸಲಾಗಿದೆ.

    ಡಿ ಗ್ರೂಪ್ ನೌಕರರು ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಹೊರತಂದಿದ್ದಾರೆ. ಸದ್ಯ ಅಸ್ವಸ್ಥಗೊಂಡ ನಾಲ್ವರು ಸಿಬ್ಬಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

  • ಸಾಯೋ ಸ್ಥಿತಿಯಲ್ಲಿದ್ರೂ ಕಾರ್ಡ್ ಇಲ್ಲದಿದ್ರೆ ಚಿಕಿತ್ಸೆ ಸಿಗಲ್ಲ-ಇದು ಹಾಸನ ಜಿಲ್ಲಾಸ್ಪತ್ರೆಯ ಸ್ಥಿತಿ

    ಸಾಯೋ ಸ್ಥಿತಿಯಲ್ಲಿದ್ರೂ ಕಾರ್ಡ್ ಇಲ್ಲದಿದ್ರೆ ಚಿಕಿತ್ಸೆ ಸಿಗಲ್ಲ-ಇದು ಹಾಸನ ಜಿಲ್ಲಾಸ್ಪತ್ರೆಯ ಸ್ಥಿತಿ

    ಹಾಸನ: ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಹೊಂದಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಲ್ಲಿ ಹಾಸನ ಜಿಲಾಸ್ಪತ್ರೆಯೂ ಒಂದಾಗಿದೆ. ಆದರೆ ರೋಗಿಗಳು ಚಿಕಿತ್ಸೆಗಾಗಿ ಬಂದ್ರೆ ಆಸ್ಪತ್ರೆಯಲ್ಲಿ ಇನ್ನಷ್ಟು ನರಳುವ ಪರಿಸ್ಥಿತಿಯಿದೆ.

    ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ರೋಗಿಯೂ ಚಿಕಿತ್ಸಾ ಕಾರ್ಡ್ ಪಡೆಯುವುದು ಕಡ್ಡಾಯ. ಆದ್ರೆ ಗಂಟೆಗಟ್ಟಲೆ ಕಾಯಿಸ್ತಾರೆ. ನಿತ್ರಾಣಗೊಳ್ಳುವಷ್ಟು ಸರದಿ ಸಾಲಲ್ಲಿ ನಿಲ್ಲಬೇಕು. ಬಡ ಹಾಗೂ ಮಧ್ಯಮ ವರ್ಗದವರು ಅದರಲ್ಲೂ ತೀವ್ರ ನಿತ್ರಾಣವಾಗಿರುವ ರೋಗಿಗಳಂತೂ ಚೀಟಿ ಕೈ ಸೇರೋವರೆಗೆ ನೆಲದಲ್ಲೇ ಮಲಗಿ ಕಣ್ಣೀರಿಡುತ್ತಿದ್ದಾರೆ.

    ವಯೋ ವೃದ್ಧರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲಲಾಗದೇ ಸುಸ್ತುಪಡುವ ದೃಶ್ಯ ನೋಡಿದವರನ್ನು ಅಯ್ಯೋ ಎನ್ನಿಸುತ್ತದೆ. ರೋಗಿಗಳು ಒಬ್ಬೊಬ್ಬರೇ ಆಸ್ಪತ್ರೆಗೆ ಬಂದರೆ ಮುಗಿದು ಹೋಯ್ತು. ಎಷ್ಟೇ ನೋವಾದ್ರೂ, ಸುಸ್ತಾದರೂ ಕಾರ್ಡ್ ಪಡೀಲೇಬೇಕು. ಸಾಯೋ ಸ್ಥಿತಿಯಲ್ಲಿದ್ರೂ ನಿಮಗೆ ಕಾರ್ಡ್ ಇಲ್ದೆಯಿದ್ರೆ ಚಿಕಿತ್ಸೆ ಸಿಗುವುದಿಲ್ಲ.

    ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿಯವರನ್ನು ಈ ಬಗ್ಗೆ ಕೇಳಿದ್ರೆ ಸಿಸ್ಟಂ ಪ್ರಾಬ್ಲಂ ಇತ್ಯಾದಿ ಕಾರಣ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ಹೆಚ್ಚು ಕಡಿಮೆ ಆಗಿ ಸಾವು-ನೋವು ಸಂಭವಿಸಿದ್ರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಸಂಬಂಧಪಟ್ಟವರೇ ಉತ್ತರಿಸಬೇಕು.