ಬೆಳಗಾವಿ: ರಾಜ್ಯದಲ್ಲೇ ಅತೀ ಹೆಚ್ಚು ರೋಗಿಗಳನ್ನು ಹೊಂದಿರುವ ಜಿಲ್ಲಾಸ್ಪತ್ರೆ ಅಂದರೆ ಅದು ಬೆಳಗಾವಿ ಜಿಲ್ಲಾಸ್ಪತ್ರೆ. ಆದರೆ ಈ ಆಸ್ಪತ್ರೆಯೇ ಈಗ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಬರೋ ರೋಗಿಗಳ ಸ್ಥಿತಿ ನೋಡಿದರೆ ಮನೆಯಲ್ಲೇ ಪ್ರಾಣ ಬಿಡೋದು ವಾಸಿ ಅನಿಸುತ್ತಿದೆ.
ಹೌದು. ಗುರುವಾರ ಸಂಜೆ ಎದೆ ನೋವಿನಿಂದ ರೋಗಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದು ಎಕ್ಸ್ ರೇ ತೆಗೆಸಿಕೊಂಡು ಬರುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಯಾವ ಸಿಬ್ಬಂದಿ, ನರ್ಸ್‍ಗಳೂ ಅವರ ಸಹಾಯಕ್ಕೆ ಬಂದಿಲ್ಲ. ವೈದ್ಯರ ಸೂಚನೆಯಂತೆ ಗ್ಲುಕೋಸ್ ಹಾಕಿಕೊಂಡ ಬಾಟಲಿಯನ್ನ ತಮ್ಮ ಮಗನ ಕೈಯಲ್ಲಿ ಕೊಟ್ಟು ರೋಗಿಯೇ ಒಂದು ಫ್ಲೋರ್‍ನಿಂದ ಇಳಿದು ಬಂದು ಎಕ್ಸ್ ರೇ ತೆಗೆಸಿಕೊಂಡಿದ್ದಾರೆ. ಹೀಗೆ ಓಡಾಡಿದಾಗ ಯಾರೊಬ್ಬರು ಅವರ ಸಹಾಯಕ್ಕೆ ಬಂದಿಲ್ಲ. ಮತ್ತೊಂದೆಡೆ ಗ್ಲುಕೋಸ್ ಬಾಟಲಿಯನ್ನ ತೆಗೆಯದೇ ಎಕ್ಸ್ ರೇ ತೆಗೆದಿದ್ದಾರೆ ಎಂದು ಸಾರ್ವಜನಿಕರಾದ ದೀಪಕ್ ತಿಳಿಸಿದ್ದಾರೆ.
850 ಬೆಡ್‍ನ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ನಿತ್ಯವೂ ಒಂದೂವರೆ ಸಾವಿರದಿಂದ ಎರಡು ಸಾವಿರದವರೆಗೂ ರೋಗಿಗಳು ಬರ್ತಾರೆ. ಆದರೆ ಇಷ್ಟೆಲ್ಲಾ ಇದ್ದರೂ ಈ ಆಸ್ಪತ್ರೆಯಲ್ಲಿ ಸರಿಯಾದ ವ್ಹೀಲ್‍ಚೇರ್, ಸ್ಟ್ರೇಚರ್ ವ್ಯವಸ್ಥೆಯಿಲ್ಲ. ಆಸ್ಪತ್ರೆಯಲ್ಲಿರೋ ಸಿಬ್ಬಂದಿಯಂತೂ ದೇವಲೋಕದಿಂದ ಬಿದ್ದವರಂತೆ ಆಡುತ್ತಾರೆ. ಈ ಕುರಿತು ಬೀಮ್ಸ್ ನಿರ್ದೇಶಕರನ್ನ ಕೇಳಿದರೆ ವರದಿ ನೀಡುವಂತೆ ಸಂಬಂಧಪಟ್ಟ ವೈದ್ಯರಿಗೆ ಸೂಚಿಸಿದ್ದೇನೆ ಎಂದು ಹೇಳುತ್ತಾರೆ.
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಎಮ್.ಆರ್.ಐ ಮತ್ತು ಸಿ.ಟಿ ಸ್ಕ್ಯಾನಿಂಗ್‍ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವೈದ್ಯರು ಎಮ್‍ಆರ್‍ಐ, ಸಿ.ಟಿ ಸ್ಕ್ಯಾನಿಂಗ್ ಮಾಡುತ್ತಾರೆ. ಆದರೆ ರಿಪೋರ್ಟ್ ನೀಡುವುದಿಲ್ಲ. ಕೇವಲ ಫಿಲಂ ನೋಡಿ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಈ ನಿರ್ಲಕ್ಷ್ಯದಿಂದ ರೋಗಿಗಳು ಆತಂಕಗೊಂಡಿದ್ದಾರೆ.
ಕಳೆದ ಐದು ದಿನದಿಂದ ಸಿ.ಟಿ.ಸ್ಕ್ಯಾನ್ ಮತ್ತು ಎಮ್.ಆರ್.ಐ ಸ್ಕ್ಯಾನ್‍ಗಳ ರಿಪೋರ್ಟ್ ಸಿಗುತ್ತಿಲ್ಲ. ವೈದ್ಯರು ಕೇವಲ ಸ್ಕ್ಯಾನ್ ಮಾಡಿ ನಂತರ ಸ್ಕ್ಯಾನ್ ಫಿಲಂ ನೋಡಿ ಚಿಕಿತ್ಸೆ ಕೊಡುವ ದುಃಸ್ಥಿತಿ ಬಂದಿದೆ. ಯಾಕೆ ಈ ಸಮಸ್ಯೆ ಎಂದು ಕೇಳಿದರೆ, ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಕೆಟ್ಟು ಹೋಗಿದ್ದರಿಂದ ರಿಪೋರ್ಟ್ ನೀಡಲು ಆಗುತ್ತಿಲ್ಲ ಎಂದು ಕ್ಷುಲ್ಲಕ ಕಾರಣವನ್ನು ವೈದ್ಯರು ನೀಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ 60 ಹೆಚ್ಚೂ ರೋಗಿಗಳಿಗೆ ರಿಪೋರ್ಟ್ ನೀಡದೇ ಕೇವಲ ಫಿಲಂ ನೋಡಿ ಚಿಕಿತ್ಸೆ ಕೊಡಲಾಗಿದೆ.
ಕಳೆದ ನಾಲ್ಕು ದಿನದಿಂದ ಬ್ರಾಡ್‍ಬ್ಯಾಂಡ್ ಸಂಪರ್ಕ ಇಲ್ಲ ಅದರೂ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ಸುಮ್ಮನೆ ಕೂತಿದ್ದಾರೆ. ಬಿಎಸ್‍ಎನ್‍ಎಲ್ ಕಚೇರಿಗೆ ಎರಡು ಬಾರಿ ಫೋನ್ ಮಾಡಿ ಕೈ ತೊಳೆದುಕೊಂಡಿದ್ದಾರೆ ಹೊರತು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ಕೆಲ ರೋಗಿಗಳು ರಿಪೋರ್ಟ್ ಇಲ್ಲದೆ ಚಿಕಿತ್ಸೆ ಪಡೆಯಲು ನಿರಾಕರಿಸಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವರು ವಿಧಿಯಿಲ್ಲದೆ ಫಿಲಂ ಮೂಲಕ ಚಿಕಿತ್ಸೆ ಪಡೆದು ಹೋಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿದ ಪ್ರಸಂಗವೂ ನಡೆದಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತಕ್ಷಣ ಸರಿಪಡಿಸಿಕೊಳ್ಳದ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
– ಸೆಕ್ಯೂರಿಟಿ ಕೊರತೆ ಪ್ರಕರಣಕ್ಕೆ ಕಾರಣ
– ಕಳ್ಳತನವಾಗ್ತಿದೆ ಎಂದ ಶಸ್ತ್ರಚಿಕೀತ್ಸಕ
ತುಮಕೂರು: ಇಲ್ಲಿನ ಜಿಲ್ಲಾಸ್ಪತ್ರೆಯು ಮೊಬೈಲ್ ಕಳ್ಳರ ತಾಣವಾಗಿದೆ. ಬೆಲೆಬಾಳುವ ಮೊಬೈಲನ್ನು ಮಾತ್ರ ಕದಿಯುವ ಗ್ಯಾಂಗ್ ಹುಟ್ಟಿಕೊಂಡಿದೆ ಎಂಬ ಅನುಮಾನ ಬಂದಿದೆ. ಕನಿಷ್ಟ ವಾರಕ್ಕೆರಡು ಬಾರಿಯಾದರೂ ಮೊಬೈಲ್ ಕಳ್ಳತನದ ವರದಿಯಾಗುತ್ತಿದೆ. ಇತ್ತೀಚೆಗಷ್ಟೇ ಓರ್ವ ಒಳರೋಗಿಯ ಎರಡು ಮೊಬೈಲ್‍ಗಳನ್ನು ಕಳ್ಳರು ಎಗರಿಸಿರೋದು ಕಳ್ಳರ ಜಾಲ ಇದೆ ಅನ್ನೊದಕ್ಕೆ ಇನ್ನಷ್ಟು ಪುಷ್ಟಿ ತಂದಿದೆ.
ಈ ಮೂಲಕ ತುಮಕೂರು ಜಿಲ್ಲಾ ಆಸ್ಪತ್ರೆಗೆ ಉತ್ತಮ ಆಸ್ಪತ್ರೆ ಪ್ರಶಸ್ತಿ ಬರುತ್ತಿರುವುದು ಕೇವಲ ಹೆಸರಿಗೆ ಮಾತ್ರ ಅನ್ನುವಂತಿದೆ. ಮೇಲಿನ ಅಧಿಕಾರಿಗಳು, ಪ್ರಶಸ್ತಿ ನೀಡುವ ತಂಡ ಭೇಟಿ ಕೊಡುವ ವೇಳೆ ಮಾತ್ರ ಚಂದವಾಗಿ ಕಾಣಿಸುವ ಈ ಆಸ್ಪತ್ರೆ ರೋಗಿಗಳಿಗೆ ನಿತ್ಯನರಕವಾಗಿದೆ. ಯಾಕಂದ್ರೆ ಇತ್ತಿಚೆಗೆ ರೋಗಿಗಳ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.
ಮಧ್ಯರಾತ್ರಿಯಲ್ಲಿ ಆಸ್ಪತ್ರೆ ಪ್ರವೇಶಿಸುವ ಕಳ್ಳರು ವಾರ್ಡ್ ಗಳಿಗೆ ನುಗ್ಗಿ ರೋಗಿಗಳು ಗಾಢ ನಿದ್ದೆಯಲ್ಲಿರುವಾಗ ಮೊಬೈಲ್ ಕಳ್ಳತನ ಮಾಡುತ್ತಿದ್ದಾರೆ. ವಾರ್ಡ್ ಗಳಲ್ಲಿ ಚಾರ್ಜ್ ಗೆ ಹಾಕಿದ್ದ ಅಥವಾ ಬೆಡ್, ಕಿಟಕಿ ಮೇಲೆ ಇರಿಸಿದ್ದ ಮೊಬೈಲ್‍ಗಳನ್ನು ಎಗರಿಸುತ್ತಿದ್ದಾರೆ. ವಾರಕ್ಕೆ ಕನಿಷ್ಟ ಎರಡೂ ಬಾರಿಯಾದರು ಮೊಬೈಲ್ ಕಳ್ಳತನದ ವರದಿಯಾಗ್ತಿದೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಜಾಲವಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಸುಮಾರು 36 ಸಾವಿರ ರೂಪಾಯಿ ಬೆಲೆ ಬಾಳುವ ಎರಡು ಮೊಬೈಲ್ ಕಳವಾಗಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.
ದುರಂತ ಅಂದ್ರೆ ವಾರಕ್ಕೆರಡು ಬಾರಿ ಮೊಬೈಲ್ ಕಳ್ಳತನದ ಪ್ರಕರಣ ನಡೆಯೋದನ್ನು ಸ್ವತಃ ಜಿಲ್ಲಾ ಶಸ್ತ್ರಚಿಕೀತ್ಸಕ ಡಾ.ವೀರಭದ್ರಯ್ಯ ಒಪ್ಪಿಕೊಳ್ಳುತ್ತಾರೆ. ಆದರೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ನಮಗೆ ಸೆಕ್ಯೂರಿಟಿಗಳ ಕೊರತೆ ಇದೆ. ಮೂರೂ ಪಾಳಿಯಲ್ಲಿ ಕೆಲಸ ಮಾಡಲು ಸೆಕ್ಯೂರಿಟಿ ಇದ್ದರೆ ಕಳ್ಳತನ ಕಡಿಮೆಯಾಗಬಹುದು ಎಂದು ಹೇಳುತ್ತಾರೆ.
ಹಾಸನ: ಹೆಣ್ಣು ಮಗು ಜನಿಸಿತು ಅಂತಾ ನವಜಾತ ಶಿಶುಗಳನ್ನು ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಹಾಸನ ಜಿಲ್ಲೆಯಲ್ಲಿ ಗಂಡು ಕಂದಮ್ಮನನ್ನು ಬೀದಿ ಪಾಲು ಮಾಡಿದ ಅಮಾನವೀಯ ಘಟನೆ ನಡೆದಿದೆ.
ಕೆಲ ದುಷ್ಕರ್ಮಿಗಳು ಹಾಸನ ತಾಲೂಕು ಮಾವಿನಹಳ್ಳಿ ಬಳಿ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಹೊಕ್ಕಳು ಬಳ್ಳಿಯನ್ನು ಕೂಡ ಕತ್ತರಿಸಿಲ್ಲ. ಆಗತಾನೆ ಜನಿಸಿದ ಕರುಳ ಕುಡಿಯನ್ನು ಅಮ್ಮ ಎಸೆದು ಹೋಗಿದ್ದಾಳೆ. ರಾತ್ರಿ ಮಗು ಚಳಿಯಲ್ಲಿ ನರಳಾಡಿ, ಅಳಲು ಆರಂಭಿಸಿದೆ. ಇದನ್ನು ಓದಿ:ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!
ಅದೃಷ್ಟವಶಾತ್ ಮಗು ನಾಯಿ ಬಾಯಿ ಸಿಕ್ಕಿಕೊಳ್ಳದೇ ಬದುಕುಳಿದಿದೆ. ಇತ್ತ ಮಗು ಅಳುತ್ತಿರುವ ಧ್ವನಿ ಕೇಳಿಸಿಕೊಂಡ ಕೆಲ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಅನಾಥ ಶಿಶುವನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ಡಾಕ್ಟರ್ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದರೇ, ಓರಿಜಿನಲ್ ಡಾಕ್ಟರ್ ಮನೆಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಿಗೆ ಒಂದೇ ದೊಡ್ಡ ಆಸ್ಪತ್ರೆ. ಜಿಲ್ಲಾಸ್ಪತ್ರೆಯಲ್ಲಿ 32 ಮಂದಿ ಸರ್ಕಾರಿ ವೈದ್ಯರಿದ್ದಾರೆ. ಎಲ್ಲ ವೈದ್ಯರಿಗೂ ಕೈ ತುಂಬ ಸಂಬಳ ನೀಡಲಾಗುತ್ತದೆ. ಆದ್ರೆ ದಿನೇಶ್ ಎಂಬ ನಕಲಿ ವೈದ್ಯ ಕಳೆದ ಆರು ತಿಂಗಳನಿಂದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರಾತ್ರಿ ಪಾಳಯದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನ ನೀಡುತ್ತಿದ್ದಾನೆ. ಕೇವಲ ಹೆಲ್ತ್ ಇನ್ಸ್ ಪೆಕ್ಟರ್ ತರಬೇತಿಯನ್ನ ಪಡೆದಿರುವ ದಿನೇಶ್ ಮಾತ್ರ ತಾನೇ ವೈದ್ಯ ಎಂಬಂತೆ ಚಿಕಿತ್ಸೆ ಕೊಡುತ್ತಾನೆ.
ರಾತ್ರಿ ಪಾಳಯದಲ್ಲಿ ಕೆಲಸ ಮಾಡಬೇಕಾದ ವೈದ್ಯರು ಮಾತ್ರ ಮನೆಯಲ್ಲಿ ಹಾಯಾಗಿ ನಿದ್ರೆಗೆ ಜಾರುತ್ತಾರೆ. ಅಸಲಿ ವೈದ್ಯರ ಬದಲಾಗಿ ದಿನೇಶ್ ಆ ಪಾಳಿಯಲ್ಲಿ ಐಸಿಯುನಲ್ಲಿ ಡಾಕ್ಟರ್ ಆಗಿ ಆರು ತಿಂಗಳಿನಿಂದಲೂ ಅದೆಷ್ಟೋ ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡಿದ್ದಾನೆ.
ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ರೋಗಿಗಳನ್ನ ದಾವಣಗೆರೆ ಮತ್ತು ಬೆಂಗಳೂರಿಗೆ ರೆಫರ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಡಾಕ್ಟರ್ ನೈಟ್ ಡ್ಯೂಟಿಗೆ ಬಾರದೇ ನಕಲಿ ಡಾಕ್ಟರ್ ಇರೋದು. ಈ ಅಕ್ರಮ ಜನರಿಗೆ ಗೊತ್ತಾಗುತ್ತಿದ್ದಂತೆ ನಕಲಿ ಡಾಕ್ಟರ್ ದಿನೇಶ್, ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಎಂಬವರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡಿರೋ ನಕಲಿ ಡಾಕ್ಟರ್ ಮತ್ತು ಅಕ್ರಮಕ್ಕೆ ಸಾಥ್ ಕೊಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಷಫೀವುಲ್ಲಾ ಆಗ್ರಹಿಸಿದ್ದಾರೆ.
ಈ ಅಕ್ರಮಕ್ಕೆ ಜಿಲ್ಲಾ ಸರ್ಜನ್ ಡಾಕ್ಟರ್ ಜಯಪ್ರಕಾಶ್ ಮತ್ತು ಆರ್‍ಎಂಒ ಡಾಕ್ಟರ್ ಆನಂದಪ್ರಕಾಶ್ ಸಾಥ್ ಕೊಟ್ಟಿದ್ದಾರೆ ಅನ್ನೋ ಆರೋಪವಿದ್ದು, ಈ ಅಕ್ರಮವನ್ನ ಮುಚ್ಚಿಹಾಕಲು ಆರ್‍ಟಿಐ ಅಡಿ ಸಿಸಿಟಿವಿ ಫೂಟೇಜ್ ಕೇಳಿ ಅಲ್ಲಿರುವ ದೃಶ್ಯ ಕಾಣದಂತೆ ಬ್ಲರ್ ಮಾಡಿಸಿದ್ದಾರೆ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಮತ್ತು ನಕಲಿ ವೈದ್ಯನ ಫೋನ್ ಸಂಭಾಷಣೆ ಹೀಗಿದೆ.
ಸಾಮಾಜಿಕ ಹೋರಾಟಗಾರ: ಯಾಕಪ್ಪ ಮಾಡೋಕೆ ಹೋದೆ ನೀನು..? ನಕಲಿ ಡಾಕ್ಟರ್: ಏನೋ ತಪ್ಪಾಗಿದೆ ಸರ್ ಹೋರಾಟಗಾರ: ತಪ್ಪಲ್ಲ. ಒಂದು ತಿಂಗಳಲ್ಲ, ಎಷ್ಟು ದಿನಗಳಿಂದ ಮಾಡ್ತಿದ್ಯಾ..? ಕರೆಕ್ಟಾಗಿ ಹೇಳಪ್ಪ. ಸರಿನಾ ನೀ ಮಾಡೋದು…? ಏನ್ ಮಾಡ್ಬೇಕಂತಿದಿರಾ ಮತ್ತೆ…? ಎಷ್ಟು ಜನ ಪೇಷೆಂಟ್‍ಗಳು ಹಾಳಾಗೋಗಿದಾರೆ. ಅದೇನೇನಾಗಿದೆ ಆರೇಳು ತಿಂಗಳುಗಳಿಂದ ಹೇಳು. ನಿಂದು ಕಂಪ್ಲೀಟ್ ಆಗಿದ್ಯಾ, ಇಲ್ಲಪ್ಪ ಹೇಳು. ನಕಲಿ ಡಾಕ್ಟರ್: ಸಾರ್… ಹೋರಾಟಗಾರ: ಎಷ್ಟು ಜನ ಡಾಕ್ಟರ್..? ಎಷ್ಟು ದುಡ್ಡು ಕೊಟ್ಟಿರಬಹುದು…? ಏನು 500 ಅಥವಾ 1000 ನಾ ಕೊಟ್ಟಿರಬಹುದಾ ನಿನಗೆ…? ನಕಲಿ ಡಾಕ್ಟರ್: ಇಲ್ಲ ಅಣ್ಣ, ಏನು ಇಸ್ಕೊಂಡಿಲ್ಲ.. ಹೋರಾಟಗಾರ: ಅದನ್ನೂ ಕೊಟ್ಟಿಲ್ವಾ…? ನಕಲಿ ಡಾಕ್ಟರ್: ಇಲ್ಲಣ್ಣ..ವ್ಯಾಲೆಂಟ್ರಿಯಾಗಿಯೇ ಮಾಡಿದ್ದೀನಿ.. ಹೋರಾಟಗಾರ: ಅಯ್ಯೋ ಕರ್ಮವೇ.. ನಕಲಿ ಡಾಕ್ಟರ್: ಒಂದು ರೂಪಾಯಿ ಇಸ್ಕೊಂಡಿಲ್ಲಣ್ಣ
ಹೋರಾಟಗಾರ: ಮತ್ತೆ ಹಿಂಗಾಗಿ ಬಿಟ್ರೆ ಏನ್ ಕಥೇನಪ್ಪ. ಈಗ ಅವರೆಲ್ಲ ನಿನ್ನ ತಳ್ಳಿದಾರೆ ಮುಂದಕ್ಕೆ. ಸಿಗಾಕ್ಕೊಂಡ್ರೆ ದಿನೇಶ ಸಿಗಾಕ್ಕೊತ್ತಾನೆ ಬಿಡು ಅನ್ನೋ ಮನೋಭಾವ ಆರೇಳು ಜನ ಡಾಕ್ಟರ್‍ಗಳಿಗಿದೆ. ಹೌದಾ…? ಸತ್ಯಾನಾ..? ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ…ಅದಕ್ಕೆ ನಿಮ್ ಹತ್ತಿರ ಬಂದಿದಿನಿ ಹೋರಾಟಗಾರ: ಅವರೆಲ್ಲಾ ಸೇಫ್ ಸೈಡ್ ಆಗಿ ನಿನ್ನ ತಳ್ಳಿದಾರೆ ಗೊತ್ತಾ..? ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ… ಒಂದು ರೂಪಾಯಿ ಯಾರತ್ರಾನೂ ಇಸ್ಕೊಂಡಿಲ್ಲಣ್ಣ.. ಹೋರಾಟಗಾರ: ನಾ ಹಾಗೆ ತಿಳ್ಕೊಂಡೆ. ಏನೋ 500-1000 ಕೊಟ್ಟಿರಬೇಕು. ಏನೋ ಪಾಪ ಡೈಲಿ ಕೆಲಸ ಮಾಡಿದಾನೆ ಹುಡುಗ. ಈಗ ಕೂಲಿ ಕೆಲಸ ಮಾಡೋರು ಇನ್ಯಾವ ಮಟ್ಟಕ್ಕೆ ಇರ್ತಾತರಪ್ಪ. ಅದಕ್ಕೆ ತಾನೆ ಹೋಗೋದು. ಪಾಪ ಇವನು ಅಮಾಯಕ. ಅವರನ್ನೆಲ್ಲ ಮನೆಗೆ ಮಲಗಿಕೊಳ್ಳೋಕೆ ಬಿಟ್ಟು, ಅವರ ಬಗ್ಗೆ ಬಾರಿ ಅನುಮಾನವಿದೆ.
ನಕಲಿ ಡಾಕ್ಟರ್: ಇಲ್ಲ ಸರ್ ನಾ ಯಾರತ್ರಾನೂ.. ಹೋರಾಟಗಾರ: ನಾ ಹಾಗೆ ತಿಳ್ಕೊಂಡಿದ್ದೆ. ಸರ್ ಖಂಡಿತ. ಸರ್.. (ಮೂರನೇ ವ್ಯಕ್ತಿ ಜೊತೆ ಮಾತು. ನೀವ್ಯಾರು ಗೊತ್ತಾಗಲಿಲ್ಲ..) ಮೂರನೇ ವ್ಯಕ್ತಿ: ನಾ ಲ್ಯಾಬ್ ಟೆಕ್ನಿಷೀಯನ್ ಸರ್.. ಹೋರಾಟಗಾರ: ಲ್ಯಾಬ್ ಟೆಕ್ನೇಷಿಯನ್ ಏನು.. ಎಲ್ಲಾ ನಿಮ್ ಡಿಪಾರ್ಟ್ಮೆಂಟ್… ಹಹಹ ನಕಲಿ ಡಾಕ್ಟರ್: ಒಂದು ರೂಪಾಯಿ ಯಾರತ್ರ ಇಸ್ಕೊಂಡಿಲ್ಲ. ಪೇಷೇಂಟ್ ಹತ್ತಿರ ಆಗಲಿ… ಹೋರಾಟಗಾರ: ನಾ ಯಾವತ್ತಾದ್ರೂ ನಿಮ್ ಆಸ್ಪತ್ರೆಗೆ ಬಂದಿದಿನಾ..ನಾ ಹಾಗೆ ಅನ್ಕೊಂಡಿದ್ದೆ.. ಅಲ್ಲ ಪೇಷೆಂಟ್ ನಿನಗೆ ಕೊಡಲ್ಲ. ನೀ ಡಾಕ್ಟರ್ ಅಲ್ಲ, ಪೇಷೆಂಟ್ ಹೇಗೆ ಕೊಡ್ತಾರೆ ನಿನಗೆ.. ನಕಲಿ ಡಾಕ್ಟರ್: ಇಲ್ಲ ಅಣ್ಣ ಒಂದು ರೂ.. ಹೋರಾಟಗಾರ: ನಾ ಏನ್ ತಿಳ್ಕೊಂಡಿದ್ದೆ. ಮನೇಲಿ ಮಲ್ಕೋತಾರಲ್ಲ ಡ್ಯೂಟಿ ಡಾಕ್ಟರ್..
ನಕಲಿ ಡಾಕ್ಟರ್: ಇಲ್ಲಣ್ಣ ಮನೇಲಿ ಮಲಗಲ್ಲಣ್ಣ ಹೋರಾಟಗಾರ: ಒಟ್ನಲ್ಲಿ ಅಧಿಕೃತ ಡಾಕ್ಟರ್ ನೀನೆ ಅಲ್ಲಪ್ಪ. ಅಲ್ಲಿ ಅ.. ನಕಲಿ ಡಾಕ್ಟರ್: ಇಲ್ಲ ಅಣ್ಣ..ರೂಪಾಯಿ… ಹೋರಾಟಗಾರ: ಅಲ್ಲ.. ದುಡ್ಡಿಸ್ಕೊಂಡಿಲ್ಲ ಅಂದ್ರೆ ಬೇಡ. ಸುಮ್ನೆ ಯಾಕೆ ನೀ ಅಲ್ಲಿ ಡ್ಯೂಟಿ ಮಾಡಿದೆ…? ನಕಲಿ ಡಾಕ್ಟರ್: ಏನೋ ತಪ್ಪು ಮಾಡಿದ್ದೀನಿ ಅಣ್ಣ.. ಸುಮ್ನೆ ವ್ಯಾಲೆಂಟ್ರಿ ಸರ್ವೀಸ್ ಕೊಡೋಣ ಅಂತ ಮಾಡಿದೆ ಅಣ್ಣ…
ಹೋರಾಟಗಾರ: ಡಾಕ್ಟರ್ ಕೋಟ್ ಎಲ್ಲಾ ಹಾಕ್ಕೊಂಡು ಕೂತಿದ್ದೀಯಾ..? ನಕಲಿ ಡಾಕ್ಟರ್: ಕೋಟ್ ಹಾಕಿಲ್ಲಣ್ಣ ಹೋರಾಟಗಾರ: ಡಾಕ್ಟರ್ ಕೋಟ್ ಹಾಕಿದ್ಯಾ..? ಸೆಟ್ ಹಾಕ್ಕೊಂಡಿಯ..? ನಕಲಿ ಡಾಕ್ಟರ್: ಅಣ್ಣ ಸೆಟ್ ಹಾಕ್ಕೊಂಡಿರಬಹುದು… ಕೋಟ್ ಹಾಕಿಲ್ಲಣ್ಣ.. ಹೋರಾಟಗಾರ: ಏನಪ್ಪ ನೀನು, ನಾ ಸುಮ್ ಸುಮ್ನೆ ಹೇಳ್ತಿನಾ ನಿನಗೆ. ನನಗೆ ನಿಂದೇನು ಗೊತ್ತಿಲ್ಲ. ನಾ ಸುಮ್ನೆ ಹೇಳ್ತೀನಾ.. ನೀ ಡಾಕ್ಟರ್ ಸೀಟ್‍ನಲ್ಲಿ ಕುಂತಿಲ್ವಾ..?
ನಕಲಿ ಡಾಕ್ಟರ್: ಹು ಅಣ್ಣ… ಕೂತಿದಿನಿ ಹೋರಾಟಗಾರ: ಹು. ನೀ ಡಾಕ್ಟರ್ ಮಾಡಿದಂಗೆ ಮಾಡಿದ್ಯಪ್ಪ.. ನಕಲಿ ಡಾಕ್ಟರ್: ಇಲ್ಲ ಅಣ್ಣ ಹೋರಾಟಗಾರ: ನನಗೆ ಈಗ ಗೊತ್ತಾಗ್ತಿದೆ. ನಾ ಬೇರೆ ತರ ಅನ್ಕೊಂಡಿದ್ದೆ. ನಿನಗೆ ಗೊತ್ತಿಲ್ಲ. ನೀನು ಏನು ಓದಿದಿಯ. ಚಳ್ಳಕೆರೆಲಿ ಓದಿದ್ದು. ನಿನ್ ಬಗ್ಗೆ ನಿಂದೆಲ್ಲಾ ಮಾಹಿತಿ ತಗೊಂಡಿದಿವಿ. ಒಳಗಿಂದು ನಿನಗೇನು ಮಾಹಿತಿ ಇಲ್ಲ. ಮೂರು ಜನ ಟಿವಿಯವರು ನಾನು ಸೇರಿ ನಿನ್ ರಿಪೋರ್ಟ್ ಕಲೆಕ್ಟ್ ಮಾಡರೋದು. ಬೆಂಕಿ ಅದು.ನೀ ಈಗ ಕೊನೆಗೆ ಬಂದಿದಿಯ.
ಲ್ಯಾಬ್ ಟೆಕ್ನೇಷಿಯನ್: ಇಲ್ಲ ಸಾಹೇಬ್ರು ಬೆಳಿಗ್ಗೆ ಹೇಳಿದ್ರಣ್ಣ.. ಅದಕ್ಕೆ ಹೋರಾಟಗಾರ: ಅಲ್ಲ.. ಈಗ ಎಂಡ್‍ಗೆ ಬಂದಿದಿರಿ. ನಾ ಮಾಹಿತಿ ಕೇಳಿ ಇಪ್ಪತ್ತು ದಿನಗಳಾಯ್ತು. ಅವರು ಉದ್ದೇಶ ಪೂರ್ವಕವಾಗಿ ನನಗೆ ಮಾಹಿತಿ ನೀಡಲ್ಲ ಅಂತ ಗೊತ್ತಾಯ್ತು. ಇರಲಿ… ಯಾರೋ ಬಾಳೆಹಣ್ಣು ತಿನ್ನೋದು ಯಾರ್ನೋ ಬಲಿ ಕೊಡೋದು. ಗೊತ್ತಿತ್ತು ನನಗೆ. ಪಾಪ.. ಹು. ಹೇಳಪ್ಪ. ಮತ್ತೆ ಏನ್ ಮಾಡೋಣ. ನಕಲಿ ಡಾಕ್ಟರ್: ಏನಾದರೂ ಮಾಡಣ್ಣ..ನ್ಯೂಸ್.. ಹೋರಾಟಗಾರ: ನನ್ನ ಕೈ ಮೀರೋಗಿದೆ..ನಿಜವಾಗಿಯೋ ಮೀರೋಗಿದೆ. ಟಿವಿಯವ್ರ ಕೈನಲ್ಲಿದೆ.
– ಶವ ಸಾಗಿಸದೇ ಎರಡು ಗಂಟೆ ತುರ್ತು ಚಿಕಿತ್ಸಾ ಘಟಕದಲ್ಲಿಯೇ ಇರಿಸಿದ ಸಿಬ್ಬಂದಿ
ಯಾದಗಿರಿ: ಜಿಲ್ಲಾಸ್ಪತ್ರೆಯ ಆವರಣದ ಶವಾಗಾರಕ್ಕೆ ಮೃತದೇಹ ಸಾಗಿಸಲು ದಾರಿ ಇಲ್ಲದೇ, ಎರಡು ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಶವವನ್ನು ಇಟ್ಟು ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿ ಮೆರೆದಿದ್ದಾರೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಶವ ಇರಿಸಿದ್ದ ಪರಿಣಾಮ, ರೋಗಿಗಳು ಭಯದಿಂದಲೇ ಚಿಕಿತ್ಸೆ ಪಡೆದಿದ್ದಾರೆ. ಹಲವು ದಿನಗಳಿಂದ ಇದೇ ರೀತಿಯ ಅವ್ಯವಸ್ಥೆಯಿದ್ದರೂ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮಾತ್ರ, ಯಾವುದೇ ಕ್ರಮಕೈಗೊಳ್ಳದೇ ಕಾಲ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಏನಿದು ಪ್ರಕರಣ:
ಗುರುಮಠಕಲ್ ವಿಭಾಗದ ಬಸ್ ಚಾಲಕ ಪ್ರಕಾಶ್ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗ್ಗೆ 7 ಗಂಟೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿಯ ಮಧ್ಯದಲ್ಲಿ ಪ್ರಕಾಶ್ ಮೃತಪಟ್ಟಿದ್ದಾರೆ ಅಂತ ಜಿಲ್ಲಾಸ್ಪತ್ರೆಯ ವೈದ್ಯರು ಖಚಿತ ಪಡಿಸಿದ್ದಾರೆ. ಬಳಿಕ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಮುಂದಾಗಿದ್ದರು. ಈ ವೇಳೆ ಅಲ್ಲಿಗೆ ಹೋಗಲು ದಾರಿಯೇ ಇರಲಿಲ್ಲ. ಹೀಗಾಗಿ ಎರಡು ಗಂಟೆಗಳ ಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಶವಾಗಾರದ ದಾರಿಯಲ್ಲಿ ಕೊಳಚೆ ನಿಂತಿದೆ. ಜೊತೆಗೆ ಕಸ ಬೆಳೆದು, ಕಲ್ಲುಗಳು ಎಲ್ಲಂದರಲ್ಲಿ ಬಿದ್ದಿದ್ದು, ಒಬ್ಬ ವ್ಯಕ್ತಿ ಕೂಡಾ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಮೃತದೇಹವನ್ನು ಸಾಗಿಸಲು ಕಷ್ಟವಾಗುತ್ತಿದ್ದು, ಸಿಬ್ಬಂದಿ ಮಾತ್ರ ಒಂದು ಪ್ಲಾಸ್ಟಿಕ್ ಸೀಟ್‍ನಲ್ಲಿ ಶವ ಸಾಗಿಸುತ್ತಿದ್ದಾರೆ ಎಂದು ಸಾರಿಗೆ ಸಂಸ್ಥೆ ನೌಕರರು ಆರೋಪಿಸಿದ್ದಾರೆ.
ಈ ಕುರಿತು ನಾವು ಪ್ರಶ್ನೆ ಮಾಡಿದರೂ, ಆಸ್ಪತ್ರೆಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ನಮ್ಮ ಸಾರಿಗೆ ಬಸ್ಸಿನಲ್ಲೇ ಶವವನ್ನು ಮರಳಿ ತಗೆದುಕೊಂಡು ಹೋಗುತ್ತಿದ್ದೇವೆ. ಇಲ್ಲಿನ ಶಾಸಕರು ತಕ್ಷಣವೇ ಅವ್ಯವಸ್ಥೆಯ ಪರಿಹಾರಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದಾವಣಗೆರೆ: ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಜೀವಾಂಮೃತವಿದ್ದಂತೆ. ಅಲ್ಲಿ ಹೋದ್ರೆ ನಮಗೆ ಒಳಿತು ಆಗುತ್ತೆ ಎಂಬ ನಂಬಿಕೆ ಅಲ್ಲಿಗೆ ಬಂದಂತಹ ರೋಗಿಗಳದ್ದು, ಜಿಲ್ಲೆಯ ಆಸ್ಪತ್ರೆಯಲ್ಲಿ ರೋಗಿಗಳನ್ನ ನಾಯಿಗಳಿಗಿಂತಲು ಕೀಳಾಗಿ ಕಾಣುತ್ತಾರೆ. ಅಲ್ಲದೆ ಅವರಿಗೆ ಯಾವುದೇ ಸವಲತ್ತು ನೀಡದೆ ಬದುಕಿರುವಾಗಲೆ ನರಕ ತೋರಿಸುತ್ತಾರೆ.
ಹೌದು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯಿಂದ ಹೊರಬಂದು ಮಲಗಿದ ಗರ್ಭಿಣಿ, ಇನ್ನೊಂದೆಡೆ ಬಾಣಂತಿಯರು ತಮ್ಮ ಹಸುಗೂಸನ್ನ ತೊಡೆಮೇಲೆ ಮಲಗಿಸಿಕೊಂಡು ನೆಲದ ಮೇಲೆ ಕುಳಿತಿರುತ್ತಾರೆ. ಈಗಾಗಲೇ ಹಲವು ಅವಾಂತರಗಳಿಂದ ಕುಖ್ಯಾತಿ ಗಳಿಸಿದ್ದ ಈ ಆಸ್ಪತ್ರೆ ಇದೀಗ ಪುನಃ ತನ್ನ ಎಡವಟ್ಟಿನಿಂದ ಸುದ್ದಿಯಾಗಿದೆ. ಆಸ್ಪತ್ರೆಗೆ ಬರೋ ಗರ್ಭಿಣಿಯರಿಗೆ, ಬಾಣಂತಿಯರಿಗೆ ದುಡ್ಡು ಕೊಟ್ರೆ ಮಾತ್ರವೇ ಬೆಡ್ ಕೊಡಲಾಗ್ತಿದೆ. ಹಣ ಕೊಡದಿದ್ರೆ, ಹೆರಿಗೆಯಾದ ಬಾಣಂತಿಯರಿಗೆ ಯಾವುದೇ ಸೌಲಭ್ಯ ನೀಡದೇ ಹೀನಾಯವಾಗಿ ಕಾಣ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಆಸ್ಪತ್ರೆಯಿಂದಲೇ ಹೊರಹಾಕ್ತಾರೆ ಅಂತ ಯುವ ಶಕ್ತಿ ವೇದಿಕೆಯ ರಾಜು ಆರೋಪಿಸಿದ್ದಾರೆ.
ಈ ಬಗ್ಗೆ ಗರ್ಭಿಣಿಯರು ಹಿರಿಯ ವೈದ್ಯಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡ್ರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಬೇಕಾದ್ರೆ ದುಡ್ಡು ಕೊಡ್ಬೇಕು. ಇಲ್ಲವಾದ್ರೆ ನೆಲದ ಮೇಲೆಯೇ ಚಿಕಿತ್ಸೆಪಡೀಬೇಕಾದ ಪರಿಸ್ಥಿತಿ ರೋಗಿಗಳದ್ದಾಗಿದೆ.
ಒಟ್ಟಿನಲ್ಲಿ ಬಡವರಿಗೆ ಅನುಕೂಲವಾಗಲಿ ಅಂತ ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದ್ರೆ, ಈ ವೈದ್ಯರು ಮತ್ತು ಸಿಬ್ಬಂದಿ ತಮ್ಮದೇ ಆಸ್ಪತ್ರೆ ಎನ್ನುವಂತೆ ದುರಂಹಕಾರ ತೋರಿಸ್ತಿದ್ದಾರೆ. ಇನ್ನಾದ್ರೂ ಈ ಧನದಾಹಿ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ತಾರಾ ಅಂತ ಕಾದು ನೋಡ್ಬೇಕಿದೆ.
ಕೋಲಾರ: ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಅಂದರೆ ದೂರ ಉಳಿಯುವ ರೋಗಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಆದರೆ ಕೋಲಾರ ಜಿಲ್ಲೆಯ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ರೋಗಿಗಳನ್ನು ಸೆಳೆಯುತ್ತಿದೆ.
ವರ್ಷದ ಹಿಂದೆ ಸದಾ ಗಬ್ಬುನಾರುತ್ತಿದ್ದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜನ ಹಿಂದೆ ಸರಿಯುತ್ತಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿ, ಅಧಿಕಾರಿಗಳು, ವೈದ್ಯರ ಪರಿಶ್ರಮದ ಫಲವಾಗಿ ಸರ್ಕಾರಿ ಆಸ್ಪತ್ರೆಯನ್ನು ಯಾವ ಖಾಸಗಿ ಆಸ್ಪತ್ರೆಗಿಂತ ಕಡಿಮೆ ಇಲ್ಲ ಎಂಬಂತೆ ಮಾಡಿ ತೋರಿಸಿದ್ದಾರೆ.
ರೋಗಿಗಳಿಗೆ ಉಚಿತ ಡಿಜಿಟಲ್ ಎಕ್ಸ್ ರೇ, ಉಚಿತ ರಕ್ತ ಪರೀಕ್ಷೆ, 24 ಗಂಟೆ ಉಚಿತ ಡಯಾಲಿಸೀಸ್, ಉಚಿತ ಎಂ.ಆರ್.ಐ, ಸ್ಕ್ಯಾನಿಂಗ್, ಸಿ.ಟಿ ಸ್ಕ್ಯಾನಿಂಗ್, ರಕ್ತ ವಿಧಳನಾ ಘಟಕ, ಹಾಗೂ ಗ್ರೀನ್ ಲೇಸರ್ ರೆಟಿನಾ ಚಿಕಿತ್ಸೆ, ರೋಗಿಗಳಿಗೆ ಸುಸಜ್ಜಿತ ಬೆಡ್‍ಗಳು ಸೇರಿದಂತೆ ಅವಶ್ಯಕವಾದ ಎಲ್ಲಾ ಸೇವೆಗಳನ್ನು ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಜೊತೆಗೆ ಹೊರ ರೋಗಿಗಳ ಸಂಖ್ಯೆ 1200 ರಿಂದ 1500ಕ್ಕೇರಿದೆ.
ವಿಪರ್ಯಾಸ ಅಂದ್ರೆ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಗಳ ಕೊರತೆ, ಸಿಸಿಟಿವಿ ಕ್ಯಾಮೆರಾ ಕೊರತೆ ಇದೆ. ಇದರ ಪರಿಣಾಮವಾಗಿ ನವಜಾತ ಶಿಶುಗಳ ನಾಪತ್ತೆ, ಆಸ್ಪತ್ರೆಯಲ್ಲಿ ಗಲಾಟೆ ಸೇರಿದಂತೆ ಹಲವು ದುರ್ಘಟನೆಗಳಿಗೆ ಕಾರಣವಾಗಿದೆ ಹಾಗಾಗಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಲ್ಲಿ ಭಯ ಮನೆ ಮಾಡಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ನೀಡುವುದರ ಮೂಲಕ ಮಾದರಿ ಆಸ್ಪತ್ರೆಯಾಗಿರುವ ಸರ್ಕಾರಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ರೋಗಿಗಳ ಭದ್ರತೆಗಾಗಿ ಹೊರ ಪೊಲೀಸ್ ಠಾಣೆ, ಹೋಂ ಗಾರ್ಡ್‍ಗಳ ನೇಮಕ, ಸಿಸಿ ಟಿವಿಗಳನ್ನ ಅಳವಡಿಕೆಯ ಅನಿವಾರ್ಯತೆ ಈ ಆಸ್ಪತ್ರೆಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುತ್ತಿರುವ ಈ ಸರ್ಕಾರಿ ಆಸ್ಪತ್ರೆಗೆ ಸಿಬ್ಬಂದಿ, ಹಾಗೂ ಭದ್ರತೆ ನಿಯೋಜಿಸುವ ಕೆಲಸವಾಗಬೇಕಿದೆ.
ಬೀದರ್: ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡದ ಪರಿಣಾಮ ಮಹಡಿಯಿಂದ ಮಹಡಿ ಸುತ್ತಾಡಿ ಗರ್ಭಿಣಿ ನರಕಯಾತನೆ ಅನುಭವಿಸಿದ ಅಮಾನವೀಯ ಘಟನೆ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಒಂದು ಕಡೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಮೊತ್ತೊಂದು ಕಡೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದಿದ್ದ ತುಂಬು ಗರ್ಭಿಣಿಗೆ ಸಿಬ್ಬಂದಿ ಸ್ಟ್ರೆಚರ್ ನೀಡದೆ ನಿರ್ಲಕ್ಷ್ಯ ತೊರಿದ್ದಾರೆ. ಹೆರಿಗೆ ವಾಡ್9 ಸಿಗದೇ ಮಹಡಿಯಿಂದ ಮಹಡಿ ಸುತ್ತಾಡಿ ಹೊಟ್ಟೆ ನೋವು ಕಾಣಿಸಿಕೊಂಡು ಗರ್ಭಿಣಿ ಸುಸ್ತಾಗಿ ನರಕಯಾತನೆ ಅನುಭವಿಸಿದ್ದಾರೆ.
ಬೀದರ್ ತಾಲೂಕಿನ ಕಾಶೆಂಪೂರ್ ಗ್ರಾಮದ ರೇಷ್ಮಾ ಎಂಬ ತುಂಬು ಗರ್ಭಿಣಿ ಜಿಲ್ಲಾಸ್ಪತ್ರೆಗೆ ಬಂದು ನರಕಯಾತನೆ ಅನುಭವಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ್ ಸ್ವಗ್ರಾಮದ ಗರ್ಭಿಣಿ ಮಹಿಳೆಗೆ ಈ ಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಪದೇ ಪದೇ ಈ ರೀತಿ ನಡೆಯಿವ ಅವಮಾನವೀಯ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತಿಲ್ಲ.
ಚಿತ್ರದುರ್ಗ: ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವೈದ್ಯರಿಗೆ ಜಿಲ್ಲಾಧಿಕಾರಿಯೊಬ್ಬರು ನೋಟಿಸ್ ಜಾರಿಗೊಳಿಸಿದ ಘಟನೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲಾ ವೈದ್ಯಾಧಿಕಾರಿ ಜಯಪ್ರಕಾಶ್, ಡಾ.ರವೀಂದ್ರ, ಡಾ.ಬಸವರಾಜ್, ಡಾ.ಮೋಹನ್, ಡಾ.ವೆಂಕಟೇಶ್, ಡಾ.ಸತೀಶ್ ಹಾಗೂ ಡಾ.ಆನಂದಪ್ರಕಾಶ್ ವಿರುದ್ಧ ಜಿಲ್ಲಾಧಿಕಾರಿ ವಿ.ವಿ.ಜೋತ್ನ್ನಾ ನೋಟಿಸ್ ನೀಡಿದ್ದಾರೆ.
ಇಂದು ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ, ಸುಮಾರು 10.30 ಗಂಟೆಯಾದರೂ ಆಸ್ಪತ್ರೆಗೆ ಹಾಜರಾಗದ 7 ವೈದ್ಯರ ವಿರುದ್ಧ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಅವರಿಗೆ ನೋಟಿಸ್ ನೀಡಿದ್ದು, ಸಂಜೆಯ ಒಳಗಾಗಿ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.