Tag: district hospital

  • ಮೈಸೂರು ಜಿಲ್ಲಾಸ್ಪತ್ರೆ ಲೋಕಾರ್ಪಣೆಗೊಳಿಸಿ – ಸೋಮಣ್ಣ ಬಳಿ ಮಾಜಿ ಶಾಸಕ ವಾಸು ಮನವಿ

    ಮೈಸೂರು ಜಿಲ್ಲಾಸ್ಪತ್ರೆ ಲೋಕಾರ್ಪಣೆಗೊಳಿಸಿ – ಸೋಮಣ್ಣ ಬಳಿ ಮಾಜಿ ಶಾಸಕ ವಾಸು ಮನವಿ

    ಮೈಸೂರು: ನಗರದಲ್ಲಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ಶೀಘ್ರವೇ ಲೋಕಾಪರ್ಣೆಗೊಳಿಸುವಂತೆ ಮಾಜಿ ಶಾಸಕ ವಾಸು ಅವರು ಜಿಲ್ಲಾ ಉಸ್ತುವಾರಿ ಮತ್ತು ವಸತಿ ಖಾತೆಯ ಸಚಿವ ವಿ. ಸೋಮಣ್ಣ ಅವರಲ್ಲಿ ಮನವಿ ಮಾಡಿದ್ದಾರೆ.

    ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಮೈಸೂರು, ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ ಜಿಲ್ಲೆಗಳಿಂದ ಬಡ ರೋಗಿಗಳು ಬರುತ್ತಾರೆ. ಇದರಿಂದ ಕೆ.ಆರ್ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. ಈ ಒತ್ತಡ ತಗ್ಗಿಸಲು ಹಿಂದಿನ ಸರ್ಕಾರ 64 ಕೋಟಿ ರೂ ವೆಚ್ಚದಲ್ಲಿ ಹೊಸ ಜಿಲ್ಲಾಸ್ಪತ್ರೆ ನಿರ್ಮಿಸಿದೆ. ಐದು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ತಿಯಾಗಿದೆ. ಆದರೆ, ಅವಶ್ಯಕ ಯಂತ್ರೋಪಕರಣಗಳ ಅಳವಡಿಕೆ ಬಾಕಿ ಇದೆ.

    ಕೂಡಲೇ ಯಂತ್ರೋಪಕರಣಗಳ ಅಳವಡಿಸಿ, ವೈದ್ಯಕೀಯೇತರ ಸಿಬ್ಬಂದಿಗಳು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ನೇಮಕಾತಿ ಮಾಡಿ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಿ ಎಂದು ಶಾಸಕರು ಮನವಿ ಮಾಡಿದ್ದಾರೆ.

  • ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಬಾಣಂತಿಯರ ನರಳಾಟ

    ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಬಾಣಂತಿಯರ ನರಳಾಟ

    – ಬೆಡ್ ಇಲ್ಲದೇ ನೆಲದ ಮೇಲೆ ಮಲಗುವ ಬಾಣಂತಿಯರು

    ಚಿತ್ರದುರ್ಗ: ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ತೊಂದರೆ ಆಗಬಾರದು ಅಂತ 9 ತಿಂಗಳು ಕುಟುಂಬಸ್ಥರು ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಸುರಕ್ಷಿತವಾಗಿ ನೋಡಿಕೊಂಡಿರುತ್ತಾರೆ. ಆದರೆ ಹೆರಿಗೆಗೆಂದು ಬರುವ ಮಹಿಳೆಯರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯು ಕೇವಲ ಐದು ದಿನಗಳಲ್ಲೇ ನರಕ ದರ್ಶನವನ್ನು ಮಾಡಿಸುತ್ತದೆ.

    ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬರುವ ಗರ್ಭಿಣಿಯರು ಅವರೊಂದಿಗೆ ಪೋಷಕರನ್ನು ಕರೆತರಲೇಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಒಂದು ವೇಳೆ ಅನಿವಾರ್ಯವಾಗಿ ಒಬ್ಬರೆ ಬಂದರೆ ಆಸ್ಪತ್ರೆ ಆವರಣದಲ್ಲಿ ಪುಟ್ಟ ಪುಟ್ಟ ಕಂದಮ್ಮಗಳನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ನೆಲದ ಮೇಲೆ ಬಾಣಂತಿಯರು ಕುಳಿತುಕೊಳ್ಳವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಅದರಲ್ಲೂ ರಾತ್ರಿ ಹೆರಿಗೆಯಾದ ಬಾಣಂತಿಯರಿಗೆ ವಾರ್ಡ್ ಮುಂಭಾಗದಲ್ಲಿರುವ ಗ್ರಾನೈಟ್ ಕುರ್ಚಿಗಳ ಮೇಲೆ ಅವರನ್ನು ಮಲಗಿಸಲಾಗುತ್ತದೆ. ಆ ಜಾಗ ಸಿಗದಿದ್ದಾಗ ಸಿಕ್ಕ ಸಿಕ್ಕ ಜಾಗದಲ್ಲೇ ಅಥವಾ ನೆಲದಮೇಲೆ ಬಾಣಂತಿಯರ ನರಳುಡುತ್ತಾ ಮಲಗಬೇಕಾಗುತ್ತದೆ. ಇಷ್ಟೆಲ್ಲಾ ಮನಕಲುಕುವ ದೃಶ್ಯಗಳು ಕಣ್ಣಿಗೆ ಬಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಈ ದೃಶ್ಯಗಳು ಸಾಮಾನ್ಯವೆನಿಸಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

    ಈ ಸಮಸ್ಯೆ ತಲೆದೂರಿರೋದು ಕೂಡ ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಾದ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡನಲ್ಲಿ ಎನ್ನುವುದು ಕೂಡ ವಿಪರ್ಯಾಸವೇ ಸರಿ. ನೋಡುವುದಕ್ಕೆ ಅಷ್ಟೇ ಇದು ಚಿತ್ರದುರ್ಗ ಜಿಲ್ಲಾಸ್ಪತ್ರೆ. ಆದರೆ ಯಾವುದೇ ಮೂಲ ಸೌಕರ್ಯಗಳು ಈ ಆಸ್ಪತ್ರೆಯಲ್ಲಿಲ್ಲ. ಒಂದು ವಾರ ಬಾಣಂತಿಯರು ಕಂದಮ್ಮಗಳ ಜೊತೆಗೆ ನೆಲದ ಮೇಲೆ ಮಲಗುವ ಪರಿಸ್ಥಿತಿ ಇಲ್ಲಿದೆ. ಯಾವಾಗಲೂ ಫುಲ್ ಆಗಿರುವ ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳು ರಾಜಕಾರಣಿಗಳ ಬೆಂಬಲಿಗರ ಕಡೆಯವರಿಗೆ ಮಾತ್ರ ಮೀಸಲಾಗಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಬಡವರು, ನಿರ್ಗತಿಕ ಬಾಣಂತಿಯರು ಹೆರಿಗೆಯಾದಾಗ ಬೆಡ್ ಕೇಳಿದರೆ ಇಲ್ಲಿ ಬೆಡ್ ಖಾಲಿ ಇಲ್ಲ. ಚಿಕಿತ್ಸೆ ಬೇಕಂದ್ರೆ ನೆಲದ ಮೇಲೆ ವಾಸ್ತವ್ಯ ಹೂಡಿ ಅಂತ ಸಿಬ್ಬಂದಿ ದಬಾಯಿಸುತ್ತಾರೆ. ಅಷ್ಟೇ ಅಲ್ಲದೆ ಸಿಜೇರಿಯನ್ ಆಗಿ ಹೆರಿಗೆಯಾದ ತಾಯಿಯೇ ಒಂದು ಕಡೆ ಇದ್ದರೆ, ಗಂಭೀರ ಸ್ಥಿತಿಯಲ್ಲಿರುವ ಶಿಶು ಒಂದು ಕಡೆ ಇರುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಕೆಲವು ಸಂದರ್ಭದಲ್ಲಿ ಮಗು ಕೂಡ ಅದಲು ಬದಲಾಗುವ ಆತಂಕ ಸಹ ಬಾಣಂತಿಯರನ್ನು ಕಾಡುತ್ತಿದೆ. ಹೀಗಾಗಿ ಸಮೀಪದಲ್ಲೇ ಇರುವ ವಾರ್ಡ್ ನಲ್ಲಿ ಅವಕಾಶ ಕೇಳಿದರೆ ಸಿಬ್ಬಂದಿ ಸ್ಪಂದಿಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಗೆದ್ದಂತಹ ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಇದ್ದರೆ ಬೇರೆ ಜಿಲ್ಲಾಸ್ಪತ್ರೆಗಳ ಪಾಡೇನು ಎಂಬ ಪ್ರಶ್ನೆ ನಮಗೆ ಮೂಡುತ್ತಿದೆ ಎಂದು ಸಾರ್ವಜನರಿಕರು ಅಸಮಾಧಾನ ಹೊರಹಾಕಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಜಿಲ್ಲಾಸ್ಪತ್ರೆಯ ಆರೋಗ್ಯಾಧಿಕಾರಿ ಬಸವರಾಜ್ ಪ್ರತಿಕ್ರಿಯಿಸಿದ್ದು, ಆಸ್ಪತ್ರೆಯಲ್ಲಿ ಕೇವಲ 50 ಬೆಡ್‍ಗಳ ವ್ಯವಸ್ಥೆಯಿಂದೆ. ಆದರೆ ಇಲ್ಲಿ ಒಂದು ದಿನಕ್ಕೆ 30ರಿಂದ 40 ಮಹಿಳೆಯರಿಗೆ ಹೆರಿಗೆ ಮಾಡಿಸಲಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆ ಉಂಟಾಗುವುದು ಸಹಜ. ಹೀಗಾಗಿ ಹೆಚ್ಚಿನ ಬೆಡ್‍ಗಳ ಆಸ್ಪತ್ರೆ ಜಿಲ್ಲೆಗೆ ಅಗತ್ಯವಿದೆ. ಈಗಾಗಲೇ ನೂತನ ಕಟ್ಟಡಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿ ಶೀಘ್ರದಲ್ಲೇ ಈ ಸಮಸ್ಯೆ ಬಗೆಹರೆಯಲಿದೆ ಎಂದು ಹೇಳಿದ್ದಾರೆ.

  • ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಸರ್ಕಾರಿ ವೈದ್ಯ

    ರಾಮನಗರ: ಸರ್ಕಾರಿ ವೈದ್ಯರೊಬ್ಬರು ರೋಗಿಯ ಬಳಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ರಾಮನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ವೈದ್ಯ. ನಾರಾಯಣಸ್ವಾಮಿ ಅವರು ರೋಗಿಯನ್ನು ಡಿಸ್ಚಾರ್ಜ್ ಮಾಡಲು ಮೂರು ಸಾವಿರ ರೂಪಾಯಿಗೆ ಭೇಟಿಕೆ ಇಟ್ಟಿದ್ದ. ಹೀಗಾಗಿ ರೋಗಿಯ ಸಂಬಂಧಿಕರಿಂದ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿಯೇ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

    ಸರ್ಕಾರಿ ಜಿಲ್ಲಾಸ್ಪತ್ರೆಗೆ ಅಪೆಂಡಿಕ್ಸ್ ಹಿನ್ನೆಲೆಯಲ್ಲಿ ರೋಗಿಯೊಬ್ಬರು ದಾಖಲಾಗಿದ್ದರು. ರೋಗಿಗೆ ಶಸ್ತ್ರಚಿಕಿತ್ಸೆ ಒಳಗಾಗಬೇಕು ಎಂದು ಡಾ.ನಾರಾಯಣಸ್ವಾಮಿ ತಿಳಿಸಿದ್ದಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತೆ. ಹೀಗಾಗಿ ನಾನು ಮಾಡಿರುವ ಶಸ್ತ್ರಚಿಕಿತ್ಸೆಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು.

    ಎಸಿಬಿ ಬಲೆಗೆ ಬಿದ್ದಿರುವ ವೈದ್ಯ ನಾರಾಯಣಸ್ವಾಮಿ ಅವರು ಏಳು ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡು ಶಸ್ತ್ರಚಿಕಿತ್ಸೆ ಮಾಡಿದ್ದರು. ಉಳಿದ 3,000 ರೂ.ಯನ್ನು ಶಸ್ತ್ರಚಿಕಿತ್ಸೆ ವೇಳೆ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಯನ್ನು ಡಿಸ್ಚಾರ್ಜ್ ಮಾಡುವುದನ್ನು ತಡೆದಿದ್ದರು. ಅಷ್ಟೇ ಅಲ್ಲದೆ ಹಣ ನೀಡಿಯೇ ರೋಗಿಯನ್ನು ಕರೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಇಂದು ರೋಗಿಯನ್ನ ಡಿಸ್ಚಾರ್ಜ್ ಮಾಡುವಾಗ ಹಣವನ್ನ ಪಡೆಯುತ್ತಿದ್ದ ವೈದ್ಯ ನಾರಾಯಣಸ್ವಾಮಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

  • ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ರೈತ ದಿನಾಚರಣೆ ಆಚರಿಸಿದ ಅನ್ನದಾತರು

    ಹಾವೇರಿ: ರೈತರು ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸುವ ಮೂಲಕ  ರೈತ ದಿನಾಚಾರಣೆಯನ್ನು ಆಚರಿಸಿದ್ದಾರೆ.

    ನಗರದ ಜಿಲ್ಲಾ ಆಸ್ಪತ್ರೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ರೈತ ಮುಖಂಡನಾದ ಸುರೇಶ್ ಚಲವಾದಿ ಭೇಟಿ ನೀಡಿದ್ದರು. ಅಲ್ಲದೇ ಅಲ್ಲಿನ ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ರೈತ ದಿನಾಚರಣೆಯನ್ನು ಆಚರಣೆ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಸುರೇಶ್ ಚಲವಾದಿ, ಜಗತ್ತಿನ ನಾಗರಿಕತೆ ಆರಂಭದಿಂದ ಹಿಡಿದು ಪೂರ್ವಜರ ಕಾಲಕ್ಕೂ ಮತ್ತು ಇಂದಿಗೂ ಈ ಜೀವನ ನಿಂತಿರುವುದು ವ್ಯವಸಾಯದಿಂದ. ನಾವೆಲ್ಲಾ ಬದುಕಿ ಬೆಳೆದಿದ್ದು ರೈತರಿಂದ, ನಾವಿಲ್ಲದೇ ದೇಶದಲ್ಲಿ ಯಾವ ಒಂದು ಶಕ್ತಿ ಕೂಡ ಮುಂದುವರಿಯಲೂ ಸಾಧ್ಯವಿಲ್ಲ ಎಂದರು.

    ಈ ದೇಶದ ಇತ್ತೀಚಿನ ಆಡಳಿತ ಹುನ್ನಾರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆಲ್ಲಾ ರೈತರ ತಾಳ್ಮೆ , ಮುಗ್ಧತೆ, ಒಗ್ಗಟ್ಟಿನ ಕೊರತೆ ಕಾರಣ. ಆದ್ದರಿಂದ ರೈತರು ಇನ್ನಾದರೂ ಎಚ್ಚೆತ್ತುಕೊಂಡು ದೇಶದಲ್ಲಿ ರೈತಪರ ನಾಯಕರನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೇ ಬ್ರಿಟಿಷರ ಕಾಲದಲ್ಲಿದ್ದ ಗುಲಾಮಗಿರಿ ಮರಳಿ ಬಂದರೆ ಆಶ್ವರ್ಯ ಪಡಬೇಕಿಲ್ಲ ಎಂದು ಈಗಿನ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಜಾವಗಲ್ಲ, ಶಿವಬಸಪ್ಪ ಗೋವಿ, ಹಾಲೇಶ ಕೇರೂಡಿ, ಸೇರಿದಂತೆ ಇನ್ನೂ ಮುಂತಾದವರು ಭಾಗವಹಿಸಿದ್ದರು.

  • ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಡವಟ್ಟು- ಜನಿಸಿದ್ದು ಗಂಡು, ಕೊಟ್ಟಿದ್ದು ಹೆಣ್ಣುಮಗು

    ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಎಡವಟ್ಟು- ಜನಿಸಿದ್ದು ಗಂಡು, ಕೊಟ್ಟಿದ್ದು ಹೆಣ್ಣುಮಗು

    ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯ ಎಡವಟ್ಟು ಒಂದಲ್ಲ ಎರಡಲ್ಲ, ಆದರೆ ಈ ಬಾರಿ ಮಾತ್ರ ಸಿಬ್ಬಂದಿ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಪೋಷಕರಿಗೆ ಅದಲು ಬದಲು ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಅವರಿಗೆ ಇದೇ ತಿಂಗಳು 8ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಧ್ಯರಾತ್ರಿ 12:30ರ ಸುಮಾರಿಗೆ ಹೆಣ್ಣು ಮಗು ಜನಿಸಿತ್ತು. ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಮನೆಗೆ ಭೇಟಿ ನೀಡಿ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದು ವಿಚಾರಿಸಿದ್ದಾರೆ.

    ಈ ವೇಳೆ ಮಗುವಿನ ತಾಯಿ ಮಲ್ಲೇಶ್ವರಿ ಅವರು ನಮ್ಮದು ಹೆಣ್ಣು ಮಗು ಎಂದು ಹೇಳಿದಾಗ, ದಾದಿ ತಮ್ಮಲ್ಲಿದ್ದ ದಾಖಲೆ ತೋರಿಸಿ ನೋಡಿ ಇದರಲ್ಲಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿದೆ ಎಂದು ದಾಖಲಾಗಿದೆ ಎಂದಿದ್ದಾರೆ.

    ಮಗುವಿನೊಂದಿಗೆ ಆಟವಾಡಿಕೊಂಡಿದ್ದ ತಾಯಿಯ ಮನಸ್ಸು ಕದಡಿದ್ದು, ಗಂಡು ಮಗುವಾಗಿದ್ದರು ಕೂಡ ಹೆಣ್ಣು ಮಗುವನ್ನು ನೀಡಿದ್ದಾರಾ? ಆಸ್ಪತ್ರೆಯಲ್ಲೆನಾದರು ಬದಲಾಯಿಸಿದರಾ? ಎಂಬ ಅನುಮಾನ ಕಾಡ ತೊಡಗಿತು. ಇದರಿಂದ ಮಗುವಿನ ತಂದೆ, ಅಜ್ಜ ಹಾಗೂ ಸೋದರ ಮಾವ ಸೇರಿದಂತೆ ಸಂಬಂಧಿಗಳು ಜಿಲ್ಲಾಸ್ಪತ್ರೆಗೆ ಆಗಮಿಸಿ, ಮಗುವನ್ನು ಅದಲುಬದಲು ಮಾಡಿದ್ದೀರಾ ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಆಸ್ಪತ್ರೆಯ ದಾಖಲೆಗಳಲ್ಲಿ ಮಾತ್ರ ಗಂಡು ಮಗು ಎಂದಿದ್ದು, ಪೋಷಕರಿಗೆ ಕೊಟ್ಟಿದ್ದು ಮಾತ್ರ ಹೆಣ್ಣು ಮಗುವಾಗಿದೆ. ಇದರಿಂದ ಪೋಷಕರು ಮಗುವಿನ ಡಿಎನ್‍ಎ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯರು ಮಾತ್ರ ಯಾವ ತನಿಖೆಗಾದರೂ ಸಿದ್ಧವಿದ್ದೇವೆ. ಡಿಎನ್‍ಎ ಪರೀಕ್ಷೆಗೆ ಪೋಷಕರು ಒಪ್ಪಿಕೊಂಡರೆ ಮಾಡಿಸಲು ಸಿದ್ಧ ಎಂದಿದ್ದಾರೆ.

  • ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    ಆರೋಗ್ಯ ಸಚಿವರ ವಾಸ್ತವ್ಯಕ್ಕೆ ಹೈಟೆಕ್ ಟಚ್ – ಗಬ್ಬು ನಾರುತ್ತಿದ್ದ ಜಿಲ್ಲಾಸ್ಪತ್ರೆ ಮಿಂಚಿಂಗ್

    – ಕೊನೇ ಕ್ಷಣದಲ್ಲಿ ರಾಮುಲು ವಾಸ್ತವ್ಯ ರದ್ದು

    ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಗುರುವಾರ ರಾತ್ರಿ ವಾಸ್ತವ್ಯ ಹೂಡುತ್ತಾರೆ ಎಂದು ಆರೋಗ್ಯ ಇಲಾಖೆ ಬಾರಿ ದುಂದುವೆಚ್ಚ ಮಾಡಿದೆ. ಆದರೆ ಸಚಿವರ ವಾಸ್ತವ್ಯ ದಿಢೀರ್ ರದ್ದಾಗಿದ್ದು, ಕೇವಲ ಒಂದು ರಾತ್ರಿ ವಾಸ್ತವ್ಯಕ್ಕೆ ಇಷ್ಟೊಂದು ದುಂದುವೆಚ್ಚ ಅಗತ್ಯವಿತ್ತಾ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ.

    ಚಿತ್ರದುರ್ಗ ಜಿಲ್ಲಾಸ್ಪತ್ರೆ ಸುಮಾರು 6,000 ಬೆಡ್‍ಗಳ ವ್ಯವಸ್ಥೆ ಹೊಂದಿದೆ. ಆದರೆ ವೈದ್ಯರು, ಸಿಬ್ಬಂದಿ ಕೊರತೆ ಜೊತೆಗೆ ಮೂಲಭೂತ ಸೌಲಭ್ಯಗಳು ಇಲ್ಲಿಲ್ಲ. ಹೀಗಾಗಿ, ಆರೋಗ್ಯ ಸಚಿವ ಶ್ರೀರಾಮುಲು ನಿನ್ನೆ ರಾತ್ರಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ಇದಕ್ಕಾಗಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿತ್ತು. ಸಾಮಾನ್ಯ ದಿನಗಳಲ್ಲಿ ಗಬ್ಬು ನಾರುತ್ತಿದ್ದ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ, ಹೈಟೆಕ್ ಟಚ್ ನೀಡಲಾಗಿತ್ತು.

    ಈವರೆಗೆ ಬಾಗಿಲು ತೆರೆಯದ ವಿಐಪಿ ವಾರ್ಡ್ ಗುರುವಾರ ದಿಢೀರ್ ಓಪನ್ ಆಗಿತ್ತು. ತುರ್ತು ಚಿಕಿತ್ಸಾ ವಾರ್ಡ್ ಹಾಗೂ ಜನರಲ್ ವಾರ್ಡ್ ನಲ್ಲಿ ವಾಸ್ತವ್ಯಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹೊಸ ಎಸಿ, ಟಿವಿ, ಫ್ಯಾನ್ ಹಾಗೂ ಬೆಡ್, ಕಾಟ್‍ಗಳನ್ನು ತರಿಸಿ ಭರ್ಜರಿಯಾಗಿ ಸಿದ್ಧಗೊಳಿಸಲಾಗಿತ್ತು. ಆದರೆ ಆರೋಗ್ಯ ಸಚಿವರು ಅನ್ಯ ಕಾರ್ಯನಿಮಿತ್ತ ವಾಸ್ತವ್ಯವನ್ನು ದಿಢೀರ್ ರದ್ದುಗೊಳಿಸಿದ್ದಾರೆ.

    ಕೇವಲ ಒಂದು ರಾತ್ರಿ ಬಂದು ಹೋಗುವ ಸಚಿವರ ಸ್ವಾಗತಕ್ಕಾಗಿ ಇಷ್ಟೆಲ್ಲ ಆಡಂಬರದ ಸಿದ್ಧತೆ ಮಾಡಬೇಕಿತ್ತಾ? ಅದರ ಬದಲಿಗೆ ನಿತ್ಯವೂ ಇದೇ ರೀತಿ ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಟ್ಟಿದ್ದರೆ ಆಗುತ್ತಿರಲಿಲ್ಲವೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಈ ಆಕ್ರೋಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿರೋ ಸಚಿವ ಶ್ರೀರಾಮುಲು ಇವತ್ತು ಚಿತ್ರದುರ್ಗದ ಜಿಲ್ಲಾಪಂಚಾಯತ್‍ನಲ್ಲಿ ನಡೆಯಲಿರುವ ಕೆಡಿಪಿ ಸಭೆಗೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.

  • ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಶ್ರೀರಾಮುಲು

    – ಸಿಬ್ಬಂದಿಗೆ ಸಂಬಳ ಹೆಚ್ಚಳದ ಭರವಸೆ
    – ಸಚಿವರ ಕೆಲಸಕ್ಕೆ ಶ್ಲಾಘನೆ

    ಚಾಮರಾಜನಗರ: ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಲ್ಲೇ ಸ್ನಾನ ಮುಗಿಸಿ, ಶಿವಪೂಜೆ ನೆರವೇರಿಸಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಅರಿಯಲು ಸ್ವತಃ ಆರೋಗ್ಯ ಸಚಿವರೇ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಶ್ರೀರಾಮುಲು ಆಸ್ಪತ್ರೆಯಲ್ಲಿ ತಂಗಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ಸ್ನಾನ ಮುಗಿಸಿ, ತಾವು ಉಳಿದಿದ್ದ ಕೊಠಡಿಯಲ್ಲೇ ಸಚಿವರು ಶಿವಪೂಜೆ ಮಾಡಿದರು.

    ಪೂಜೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಶ್ರೀರಾಮುಲು ಅವರು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿದ್ದು, ಶುಶ್ರೂಷಕರ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಸೇವಾಭದ್ರತೆ, ಸಂಬಳದ ಕೊರತೆ ಬಗ್ಗೆ ಸಚಿವರಲ್ಲಿ ಶುಶ್ರೂಷಕಿಯರು ಮನವಿ ಮಾಡಿದರು.

    ಆಸ್ಪತ್ರೆಯ ಸಮಸ್ಯೆ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು. ಶ್ರೀರಾಮುಲು ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ಸಚಿವರೇ ಹೀಗೆ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರ ನೀಡುವುದು ಒಂದೊಳ್ಳೆ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.

  • ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಮದ್ಯದಂಗಡಿಯಾದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ

    ಚಿಕ್ಕಮಗಳೂರು: ಒಂದೆಡೆ ಆರೋಗ್ಯ ಸಮಸ್ಯೆ ಇಟ್ಟುಕೊಂದು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನೊಂದೆಡೆ ಕುಡುಕರ ಹಾವಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯೇ ಮದ್ಯದಂಗಡಿ ರೀತಿ ಆಗಿಬಿಟ್ಟಿದೆ.

    ಹೌದು. ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಸರಿಯಾದ ಸೌಲಭ್ಯ ಸಿಗದೇ ಕಷ್ಟಪಡುತ್ತಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆ ನಿರ್ವಹಣೆಯನ್ನು ಸಿಬ್ಬಂದಿ ಸರಿಯಾಗಿ ಮಾಡದೇ ನಿರ್ಲಕ್ಷ್ಯ ತೋರಿರುವುದಕ್ಕೆ ಆಸ್ಪತ್ರೆ ಕುಡುಕರಿಗೆ ಮದ್ಯ ಸೇವಿಸೋ ಅಡ್ಡೆಯಾಗಿಬಿಟ್ಟಿದೆ. ಆಸ್ಪತ್ರೆಯ ಸುತ್ತಮುತ್ತಲ ಆವರಣ, ಶೌಚಾಲಯಗಳು ಹೀಗೆ ಎಲ್ಲೆಂದರಲ್ಲಿ ಮದ್ಯದ ಬಾಟಲಿ ಹಾಗೂ ಪ್ಯಾಕೆಟ್‍ಗಳೇ ರಾರಾಜಿಸುತ್ತಿದೆ. ಎಲ್ಲೆಂದರಲ್ಲಿ ಮದ್ಯ ಸೇವಿಸಿ ಆಸ್ಪತ್ರೆ ಆವರಣವನ್ನು ಕುಡುಕರು ಗಬ್ಬೆಬ್ಬಿಸಿದ್ದಾರೆ.

    ಅಷ್ಟೇ ಅಲ್ಲದೆ ಮದ್ಯ ಕುಡಿದು ಆಸ್ಪತ್ರೆಯ ಗೋಡೆ ಮೇಲೆ ಬಾಟಲಿಗಳನ್ನು ಕುಡುಕರು ಸಾಲಾಗಿ ಜೋಡಿಸಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಜಿಲ್ಲಾಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದು, ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಆಸ್ಪತ್ರೆ ಶೌಚಾಲಯಕ್ಕೆ ಹೋಗಲು ರೋಗಿಗಳಿಗೆ ವಾಕರಿಕೆ ಬರುವ ದುಸ್ಥಿತಿ ಇದೆ.

    ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಕಂಡು ಬೇಸತ್ತು ಹೋದ ಕೆಲ ರೋಗಿಗಳು ಆಸ್ಪತ್ರೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಮದ್ಯದ ಅವಾಂತರ ಎಲ್ಲೆಡೆ ವೈರಲ್ ಆಗಿದ್ದು, ಸ್ವಚ್ಛತೆಗೆ ಆದ್ಯತೆ ಕೊಡದ ಅಧಿಕಾರಿ, ಸಿಬ್ಬಂದಿ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರು ಗಮನಹರಿಸಿ, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

  • ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಚಿತ್ರದುರ್ಗ: ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಹಾಗು ಸೇವೆ ಪಡೆಯಬೇಕೆಂದರೆ ರೋಗಿಗಳು ಹಣ ಕೊಡಲೇಬೇಕು. ಹೀಗಾಗಿ ಆಸ್ಪತ್ರೆಯಲ್ಲಿ ಗಾಡಿ ತಳ್ಳುವ ಸಿಬ್ಬಂದಿ ಸೇರಿದಂತೆ ಹೆರಿಗೆ ವಾರ್ಡಿನಲ್ಲಿರೋ ಸ್ಟಾಫ್ ನರ್ಸ್ ಗಳವರೆಗೆ ಲಂಚ ಕೇಳೋದು ಮಾಮೂಲಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳ ಚಿಕಿತ್ಸೆಗಾಗಿ ಬಾಣಂತಿಯರು ಕಾದು ಕುಳಿತಿರುವ ದೃಶ್ಯಗಳು, ರೋಗಿಗಳು ಚಿಕಿತ್ಸೆಗಾಗಿ ಬಂದಿರುವ ದೃಶ್ಯಗಳು ಕಂಡುಬಂದರೆ, ಇನ್ನೊಂದೆಡೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಕಾಣಸಿಗುತ್ತದೆ. ಈ ಆಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಆಸ್ಪತ್ರೆ, ಆದರೆ ಇಲ್ಲಿ ಚಿಕಿತ್ಸೆ ಅನ್ನೋದು ಮರೀಚಿಕೆಯಾಗಿದೆ. ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಾದರೆ ಸಾಕು, ದಾವಣಗೆರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿನ ವೈದ್ಯರು ಕಳಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸಿಬ್ಬಂದಿಗಳಂತೂ ಮಹಾಚತುರರು, ಮಾತು ಆಡಿದರೆ ಹಣ ಕೊಡಿ ಎನ್ನುತ್ತಾರೆ. ತುರ್ತು ಚಿಕಿತ್ಸೆ ಪಡೆದು ವಾರ್ಡ್‍ಗೆ ಶಿಫ್ಟ್ ಆಗಬೇಕೆಂದರೂ ಸಿಬ್ಬಂದಿಗೆ ಲಂಚ ಕೊಡಬೇಕು. ಅಲ್ಲದೆ ಹೆರಿಗೆ ಮಾಡಿಸುವುದರಿಂದ ಹಿಡಿದು ಬಾಣಂತಿಯನ್ನು ವಾರ್ಡಿಗೆ ಕಳುಹಿಸುವಾಗಲೂ ಲಂಚ ಕೊಡಬೇಕು. ಇಲ್ಲವಾದರೆ ಹೆರಿಗೆ ಕೊಠಡಿಯಿಂದ ಬಾಣಂತಿಯನ್ನ ಇಲ್ಲಿನ ಸಿಬ್ಬಂದಿಗಳು ಶಿಫ್ಟ್ ಸಹ ಮಾಡಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

    ಈ ಲಂಚಾವತಾರದಿಂದ ಬೇಸತ್ತ ನಾಗರಿಕರು ಈ ಪ್ರಕರಣದಲ್ಲಿ ರೋಗಿಗಳ ರಕ್ತ ಹೀರುತ್ತಿರುವ ಲಂಚಬಾಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಜಯಪ್ರಕಾಶ್ ಅವರನ್ನ ಕೇಳಿದರೆ, ಪ್ರಕರಣ ಕುರಿತು ಆಸ್ಪತ್ರೆಯ ಸಿಬ್ಬಂದಿಯನ್ನ ವಿಚಾರಣೆಗೊಳಪಡಿಸುತ್ತೇವೆ. ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಕಸ ಗುಡಿಸುವವರಿಂದ ಹಿಡಿದು ಆಯುಷ್ಮಾನ್ ಕಾರ್ಡ್ ವಿತರಿಸುವ ಗುಮಾಸ್ತ ಕೂಡ ಲಂಚ ಪಡೆಯುತ್ತಿದ್ದಾರೆ. ಇಷ್ಟೇಲ್ಲ ನಡೆಯುತ್ತಿದ್ದರು ಸಹ ಜಿಲ್ಲಾ ಆರೋಗ್ಯ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂದು ನಾಮಫಲಕ ಹಾಕಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರದಲ್ಲಿ ಭಾಗಿಯಾಗಿರೋ ಆರೋಪಿಗಳಿಗೆ ಬಿಸಿ ಮುಟ್ಟಿಸಿ, ಉಳಿದವರನ್ನ ಎಚ್ಚರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

  • ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಸಚಿವರ ಆಸ್ಪತ್ರೆ ಭೇಟಿ, ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ ಆರೋಗ್ಯ ಸಚಿವರು

    ಕಲಬುರಗಿ: ಜಿಲ್ಲಾಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರಗೆ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಪ್ರತಿ ವಾರ್ಡ್ ನಲ್ಲಿಯೂ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ತರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಶಿವಾನಂದ್ ಪಾಟೀಲ್ ಸೂಚನೆ ನೀಡಿದರು.

    ಇದೇ ವೇಳೆ ಮಾತನಾಡಿದ ಅವರು, ಕಲಬುರಗಿ ಜಿಲ್ಲಾಸ್ಪತ್ರೆ ಅಲ್ಲದೇ ರಾಜ್ಯ ಸೇರಿದಂತೆ ದೇಶಾದ್ಯಂತ ರೇಬಿಸ್ ಔಷಧ ಕೊರತೆಯಿದೆ. ರೇಬಿಸ್ ಔಷಧ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ವಿವರಣೆ ಕೇಳಿದೆ. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೇಬಿಸ್ ಔಷಧ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಹೇಳಿದ್ದಾರೆ.