Tag: District Governance

  • ಎರಡು ತಿಂಗಳು ಕೇರಳದಿಂದ ದಕ್ಷಿಣ ಕನ್ನಡ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ

    ಎರಡು ತಿಂಗಳು ಕೇರಳದಿಂದ ದಕ್ಷಿಣ ಕನ್ನಡ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ

    ಮಂಗಳೂರು: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಹಾಗೂ ನಿಫಾ ಆತಂಕ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎರಡು ತಿಂಗಳುಗಳ ಕಾಲ ಕೇರಳದಿಂದ ಜಿಲ್ಲೆಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ತುರ್ತು ಕಾರಣವಿಲ್ಲದೆ ಯಾರೂ ಅನಗತ್ಯ ಪ್ರಯಾಣಿಸಬೇಡಿ ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.

    ಕೇರಳದಲ್ಲಿ ಕೋವಿಡ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸದ್ಯ ಕೋವಿಡ್ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಇದರ ಜೊತೆಗೆ ನಿಫಾ ವೈರಸ್ ಸಹ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೊರೊನಾ ಪಾಸಿಟಿವ್ ಪ್ರಕರಣ ದಿನಿನಿತ್ಯ 200 ಮೇಲೆ ಬರ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಿಂದ ದ.ಕ ಜಿಲ್ಲೆಗೆ ಬರುವವರು ಹಾಗೂ ಅಲ್ಲಿಗೆ ತೆರಳುವವರಿಗೆ ನಿರ್ಬಂಧ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸೂಚನೆಗಳನ್ನು ನೀಡಿದ್ದು, ಕೇರಳದಿಂದ ಬರುವ ಪ್ಯಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ವಿದ್ಯಾರ್ಥಿಗಳು ಸಹ ಅಕ್ಟೋಬರ್ ಅಂತ್ಯವರೆಗೆ ಮಂಗಳೂರಿಗೆ ಬರಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ಕೇರಳದಲ್ಲಿದ್ದವರಿಗೆ ಈ ಬಗ್ಗೆ ಆಯಾ ಶಿಕ್ಷಣ ಸಂಸ್ಥೆ ಸೂಚನೆ ನೀಡುವಂತೆ ಹೇಳಲಾಗಿದೆ. ಇದರ ಜೊತೆಗೆ ಕೇರಳಕ್ಕೆ ತೆರಳುವ ಉದ್ದೇಶ ಇದ್ದವರು ಅಕ್ಟೋಬರ್ ಅಂತ್ಯದವರೆಗೆ ತಮ್ಮ ಪ್ರಯಾಣವನ್ನು ಮುಂದೂಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆಸ್ಪತ್ರೆ, ನರ್ಸಿಂಗ್ ಹೋಮ್, ಕಚೇರಿ, ಹೊಟೇಲ್, ಕೈಗಾರಿಕೆಗಳಲ್ಲಿರುವ ಕೇರಳ ಮೂಲದ ಸಿಬ್ಬಂದಿ ಸಹ ಕೇರಳದಿಂದ ಬಂದು ಹೋಗುವುದನ್ನು ಕಡಿಮೆಗೊಳಿಸಿ ಎಂದು ಹೇಳಲಾಗಿದೆ. ಉದ್ಯೋಗದಾತರು ಕೇರಳ ಮೂಲದ ಸಿಬ್ಬಂದಿಯನ್ನು ಪ್ರವೇಶ ಮಾಡದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ತುರ್ತು ಕಾರಣವಿಲ್ಲದೇ ಪ್ರಯಾಣಿಸಬೇಡಿ ಎಂದು ಜಿಲ್ಲಾಡಳಿತ ಸೂಚಿಸಿದೆ. ಇದನ್ನೂ ಓದಿ: ಇಂದು 1074 ಪಾಸಿಟಿವ್, 4 ಸಾವು – ಪಾಸಿಟಿವಿಟಿ ರೇಟ್ 0.63%ಕ್ಕೆ ಇಳಿಕೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡರೂ ಕೇಸ್ 100ಕ್ಕಿಂತ ಕೆಳಗೆ ಬರುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ನೀಡಿರುವ ಈ ಸೂಚನೆ ಎಷ್ಟು ಪರಿಣಾಮಕಾರಿಯಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  • ವದಂತಿ ನಂಬಿ ಮಂಗ್ಳೂರು ಟೌನ್‍ಹಾಲ್ ಎದುರು ಜಮಾಯಿಸಿದ ವಲಸೆ ಕಾರ್ಮಿಕರು

    ವದಂತಿ ನಂಬಿ ಮಂಗ್ಳೂರು ಟೌನ್‍ಹಾಲ್ ಎದುರು ಜಮಾಯಿಸಿದ ವಲಸೆ ಕಾರ್ಮಿಕರು

    ಮಂಗಳೂರು: ಎರಡು ವಾರಗಳ ಹಿಂದೆ ವದಂತಿ ನಂಬಿ ಮುಂಬೈನಲ್ಲಿ ಸಾವಿರಾರು ವಲಸೆ ಕಾರ್ಮಿಕರು ರೈಲ್ವೇ ಸ್ಟೇಷನ್‍ಗೆ ಬಂದಿದ್ದರು. ಆ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹೆಣಗಾಡಿದರು. ಇಂತದ್ದೆ ಸನ್ನಿವೇಶ ಇಂದು ಮಂಗಳೂರಿನಲ್ಲಿ ಕಂಡು ಬಂತು.

    ಜಿಲ್ಲಾಡಳಿತ ತಮ್ಮನ್ನು ಸ್ವಗ್ರಾಮಗಳಿಗೆ ಕಳಿಸಲಿದೆ ಎಂಬ ವದಂತಿ ನಂಬಿದ ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಂಗಳೂರಿನ ಟೌನ್‍ಹಾಲ್‍ನಲ್ಲಿ ಕಾಣಿಸಿಕೊಂಡರು. ಸಾಮಾಜಿಕ ಅಂತರಪಾಲಿಸದೆ ಗುಂಪು ಸೇರಿದ್ದರು. ಇದು ವದಂತಿ ಹೋಗಿ ಎಂದರೂ ಯಾರೂ ಕೇಳಲಿಲ್ಲ.

    ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ದುಡಿಯುತ್ತಿದ್ದ ಸುಮಾರು 1 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಬಂದು ಸೇರಿದ್ದರು. ಕೆಲ ಕಾರ್ಮಿಕರು ಊರಿಗೆ ಹೋಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

    ಬಹುತೇಕರು ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರಾಗಿದ್ದು, ಕಳೆದ ಎರಡು ದಿನಗಳಲ್ಲಿ 60 ಬಸ್ ಗಳಲ್ಲಿ 780 ಕಾರ್ಮಿಕರನ್ನು ಕಳುಹಿಸಲಾಗಿತ್ತು. ಹೀಗಾಗಿ ಇನ್ನುಳಿದ ಕಾರ್ಮಿಕರು ತಮ್ಮ ತಮ್ಮ ಊರಿಗೆ ಹೋಗಲೆಂದು ಜಿಲ್ಲಾಡಳಿತದ ನೆರವಿಗಾಗಿ ಕಾಯುತ್ತಿದ್ದಾರೆ. ಬಳಿಕ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೊನೆಗೂ ಕಾರ್ಮಿಕರ ಮನವಿಗೆ ಸ್ಪಂಧಿಸಿದ ಜಿಲ್ಲಾಡಳಿತ ಕಾರ್ಮಿಕರನ್ನು ಊರಿಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದೆ.

  • ದತ್ತಜಯಂತಿಗೆ ಕಾಫಿನಾಡಲ್ಲಿ ಖಾಕಿಗಳ ಸರ್ಪಗಾವಲು

    ದತ್ತಜಯಂತಿಗೆ ಕಾಫಿನಾಡಲ್ಲಿ ಖಾಕಿಗಳ ಸರ್ಪಗಾವಲು

    – 3 ದಿನಗಳ ಕಾಲ ಪ್ರವಾಸಿಗರ ಆಗಮನಕ್ಕೆ ನಿಷೇಧ

    ಚಿಕ್ಕಮಗಳೂರು: ದತ್ತಜಯಂತಿ ಆಚರಣೆ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾದ್ಯಂತ 35 ಚೆಕ್ ಪೋಸ್ಟ್, 48 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, 800ಕ್ಕೂ ಅಧಿಕ ಕ್ಯಾಮೆರಾ ಹಾಗೂ 5 ಸಾವಿರಕ್ಕಿಂತಲೂ ಅಧಿಕ ಪೊಲೀಸರು ಕಾಫಿನಾಡಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

    ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಜಿಲ್ಲಾಡಳಿತ ಜಿಲ್ಲಾದ್ಯಂತ ಸರ್ಪಗಾವಲನ್ನು ಹಾಕಿದೆ. ಡಿಸೆಂಬರ್ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟವನ್ನ ನಿಷೇಧಿಸಿಸಲಾಗಿದೆ.

    ನಿಷೇಧ: ಡಿ.12 ರಂದು ಚಿಕ್ಕಮಗಳೂರಿನ ಕೆ.ಎಂ.ರಸ್ತೆ, ಐ.ಜಿ. ರಸ್ತೆ, ಬಸವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಆಲ್ದೂರು ಪಟ್ಟಣ, ಹಾಂದಿಯಿಂದ ವಸ್ತಾರೆವರೆಗೆ ಅಂಗಡಿ-ಮುಂಗಟ್ಟುಗಳನ್ನ ಮುಚ್ಚುವಂತೆ ಆದೇಶಿಸಲಾಗಿದೆ. ಡಿ. 10 ರಿಂದ 12ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಿಗಿರಿ, ದತ್ತಪೀಠ, ಗಾಳಿಕೆರೆ, ಮಾಣಿಕ್ಯಾಧಾರಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿಷೇಧಿಸಿದ್ದಾರೆ.

    ಡಿ.10 ರಂದು ಅನಸೂಯ ಜಯಂತಿ. ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠದಲ್ಲಿ ಪೂಜೆ-ಹೋಮ-ಹವನ ನಡೆಸಲಿದ್ದಾರೆ. ಡಿ.11 ರಂದು ನಗರದಲ್ಲಿ 10 ಸಾವಿರಕ್ಕೂ ಅಧಿಕ ದತ್ತಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಡಿ.12 ರಂದು ರಾಜ್ಯಾದ್ಯಂತ ಬರಲಿರೋ 20 ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ದತ್ತಪೀಠದಲ್ಲಿ ಹೋಮ-ಹವನ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕೂಡ ಹೈ-ಅಲರ್ಟ್ ಘೋಷಿಸಿದೆ. ಜಿಲ್ಲಾದ್ಯಂತ 5 ಸಾವಿರಕ್ಕೂ ಅಧಿಕ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪೊಲೀಸರು ಪಥಸಂಚಲನ ನಡೆಸಿದರು.