Tag: District Commissioner

  • ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಲಾಕ್‍ಡೌನ್ ನಿರ್ಧಾರ ರಾಜ್ಯಗಳಿಗೆ ಬಿಟ್ಟರೆ ಬಿಎಸ್‍ವೈ ಪ್ಲಾನ್ ಏನು?

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹಿನ್ನೆಲೆ ಮೇ 3ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಆ ಬಳಿಕ ಕೇಂದ್ರ ಸರ್ಕಾರವು ಲಾಕ್‍ಡೌನ್ ನಿರ್ಧಾರವನ್ನು ರಾಜ್ಯಗಳಿಗೆ ಬಿಟ್ಟರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿನ ನಡೆ ಏನು ಎಂಬ ಚರ್ಚೆ ಶುರುವಾಗಿದೆ.

    ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಕೊರೊನಾ ತಡೆಗೆ ಮೋದಿ ‘ತ್ರಿ’ ಸೂತ್ರ- ಕರ್ನಾಟಕದ 6 ಜಿಲ್ಲೆಗಳು ರೆಡ್ ಝೋನ್

    ಡಿಸಿಗಳ ಸಲಹೆ ಏನು?
    ಲಾಕ್‍ಡೌನ್ ಸಡಿಲಿಕೆಗೆ ಬಹುತೇಕ ಜಿಲ್ಲಾಧಿಕಾರಿಗಳಿಂದ 50:50 ಅಭಿಪ್ರಾಯ ವ್ಯಕ್ತವಾಗಿದೆ. ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಷರತ್ತಿನ ಸಡಿಲಿಕೆಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ. ರೆಡ್, ಆರೆಂಜ್, ಯೆಲ್ಲೋ ಜಿಲ್ಲೆಗಳ ಡಿಸಿಗಳು ಸಡಿಲಿಕೆಗೆ ಸಮ್ಮತಿ ಸೂಚಿಸಿಲ್ಲ. ಲಾಕ್‍ಡೌನ್ ಸಡಿಲಿಸಿದರೆ ಅಪಾಯ ಆಹ್ವಾನಿಸಿದಂತೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಲಾಕ್‍ಡೌನ್‍ಗೆ ಬಿಎಸ್‍ವೈ ಮಂತ್ರ:
    ಮುಖ್ಯಕಾರ್ಯದರ್ಶಿ ಅವರು ಎಲ್ಲಾ ಜಿಲ್ಲಾಧಿಕಾರಿಗಗಳ ಅಭಿಪ್ರಾಯದ ವರದಿ ಸಿದ್ಧಪಡಿಸುತ್ತಿದ್ದಾರೆ. ಸಿಎಸ್ ವರದಿ ನಂತರ ಸಂಪುಟದಲ್ಲಿ ಸಿಎಂ ಬಿಎಸ್‍ವೈ ಚರ್ಚೆ ಮಾಡಲಿದ್ದಾರೆ. ಬಹುತೇಕ ಲಾಕ್‍ಡೌನ್ ಮುಂದುವರಿಕೆಗೆ ಸಿಎಂ ಒಲವು ಎನ್ನಲಾಗುತ್ತಿದೆ.

    ಗ್ರೀನ್ ಝೋನ್‍ಗಳಲ್ಲಿ ಸದ್ಯಕ್ಕಿಂತ ಪರಿಸ್ಥಿತಿ ಸುಧಾರಿಸಿದರೆ ಷರತ್ತಿನ ಸಡಿಲಿಕೆಗೆ ಚಿಂತನೆ ನಡೆದಿದೆ. ಇತ್ತ ರೆಡ್, ಯೆಲ್ಲೋ, ಆರೆಂಜ್ ಝೋನ್‍ಗಳಲ್ಲಿ ಸಡಿಲಿಕೆ ಕೊಡದಿರಲು ತೀರ್ಮಾನವನ್ನು ಸಿಎಂ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಅಧಿಕಾರಿಗಳ ನಿರ್ಲಕ್ಷ್ಯ- ಪ್ರವಾಹ ಸಂತ್ರಸ್ತರ ನೆರವಿಗೆ ಬಿಡುಗಡೆಯಾಗಿದ್ದ 1 ಕೋಟಿ ರೂ. ಮತ್ತೆ ಡಿಸಿ ಖಾತೆಗೆ

    ಮಡಿಕೇರಿ: ಕೊಡಗು ಜಿಲ್ಲೆ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಕಳೆದ 2 ವರ್ಷಗಳಲ್ಲಿ ಸುಮಾರೂ 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿವೆ. ಕಳೆದ ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾವೇರಿ ಉಕ್ಕಿ ಹರಿದ ರಭಸಕ್ಕೆ ಮನೆ ಮಠಗಳನ್ನು ಕಳೆದುಕೊಂಡಿದ್ದ ಎಷ್ಟೋ ಜನರಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರೆತ್ತಿಲ್ಲ. ನೂರಾರು ರೈತರಿಗೆ ಬೆಳೆ ಪರಿಹಾರವೂ ಸಿಕ್ಕಿಲ್ಲ. ಆದರೆ ಅಧಿಕಾರಿಗಳು ಮಾತ್ರ ಎನ್‍ಡಿಆರ್ ಎಫ್ ನಿಂದ ಬಂದಿದ್ದ ಹಣದಲ್ಲಿ ಒಂದು ಕೋಟಿ ರೂಪಾಯಿಯನ್ನು ಬಳಸದೆ ಜಿಲ್ಲಾಧಿಕಾರಿಗೆ ವಾಪಸ್ಸ್ ಕಳುಹಿಸಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನಾದ್ಯಂತ ಆಗಿದ್ದ ಪ್ರಾಕೃತಿಕ ನಷ್ಟದ ತುರ್ತು ಸೇವೆಗಳಿಗೆ ಮತ್ತು ಪರಿಹಾರಗಳಿಗೆ ಬಳಸಲು ಜಿಲ್ಲಾಧಿಕಾರಿ ಒಂದು ಕೋಟಿ ರೂ. ಹಣವನ್ನು ವಿರಾಜಪೇಟೆಗೆ ನೀಡಿದ್ದರು. ಆದರೆ ತಾಲೂಕು ಕಚೇರಿ ಶಿರಸ್ತೆದಾರ್ ಪೊನ್ನು ಮತ್ತು ಕೇಸ್ ವರ್ಕರ್ ಧನಂಜಯ್ ಡಿಸಿ ನೀಡಿದ್ದ ಚೆಕನ್ನು ತಹಶೀಲ್ದಾರ್ ಅವರ ಖಾತೆಗೆ ಜಮಾಮಾಡಿಲ್ಲ. ಹೀಗಾಗಿ ಚೆಕ್ ಸಮಯ ಮುಗಿದುಹೋಗಿ ಬಳಕೆ ಬಾರದಂತಾಗಿದೆ.

    ಈ ಕುರಿತು ವಿರಾಜಪೇಟೆ ತಹಶೀಲ್ದಾರ್ ಮಹೇಶ್ ಅವರನ್ನು ಕೇಳಿದರೆ, ಕೆಲಸದ ಒತ್ತಡದಿಂದ ಚೆಕನ್ನು ಖಾತೆಗೆ ಜಮಾ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚೆಕ್ ಹಾಗೆ ಉಳಿದಿದ್ದು, ಜಿಲ್ಲಾಧಿಕಾರಿಯವರಿಗೆ ವಾಪಸ್ಸ್ ಕಳುಹಿಸಿದ್ದೇವೆ ಎನ್ನುತ್ತಾರೆ. ಆದರೆ ಯಾರಿಂದ ತಪ್ಪಾಯಿತು ಅವರ ವಿರುದ್ಧ ತುಟಿ ಬಿಚ್ಚುತ್ತಿಲ್ಲ.

    ಪ್ರವಾಹ ಉಕ್ಕಿ ಹರಿದಾಗ ಸಂತ್ರಸ್ತ ಕೇಂದ್ರಗಳನ್ನು ನಡೆಸಲು ಇದೇ ತಾಲೂಕು ಆಡಳಿತ ಸ್ಥಳೀಯರಿಂದಲೇ ವಸ್ತುಗಳನ್ನು ಖರೀದಿಸಿತ್ತು. ಬಳಿಕ ಐದು ತಿಂಗಳಾದ್ರೂ ಬಡ ವ್ಯಾಪಾರಿಗಳಿಗೆ ಹಣವನ್ನು ಪಾವತಿಸದೆ ಇದ್ದ ಕಾರಣ ವ್ಯಾಪಾರಿಗಳು ಪರದಾಡುವಂತಾಗಿತ್ತು. ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆಗೂ ವ್ಯಾಪಾರಿಗಳು ಮುಂದಾಗಿದ್ದರು. ಎಷ್ಟೋ ಸಂತ್ರಸ್ತರಿಗೆ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.

    ತಕ್ಷಣಕ್ಕೆ ಸಿಕ್ಕಿದ್ದ 10 ಸಾವಿರ ಪರಿಹಾರ ಹಣ ಬಿಟ್ಟರೆ ಮತ್ತೆ ಯಾವುದೇ ಪರಿಹಾರ ಲಭಿಸಿಲ್ಲ. ಹೀಗಾಗಿ ಕೊಟ್ಟ ಹಣವನ್ನೂ ಬಳಸದೆ ಚೆಕನ್ನು ವಾಪಸ್ ಮಾಡುತ್ತಿದ್ದಂತೆ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ವಿರಾಜಪೇಟೆಯ ಶಿರಸ್ತೇದಾರ್ ಮತ್ತು ಕೇಸ್ ವರ್ಕರ್ ಧನಂಜಯ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಸರಿಯಾದ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ಚೆಕ್ ವಾಪಸ್ ಆಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮಗೆ ಬೇಕಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ವಿದ್ಯಾರ್ಥಿಗಳಿಗೆ ಕಳಪೆ ಆಹಾರ ಪೂರೈಕೆ ಸಾಬೀತು- ಸಿಬ್ಬಂದಿಗೆ ಡಿಸಿ ತರಾಟೆ

    ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹುಳು ಮಿಶ್ರಿತ ಆಹಾರ ಸೇವಿಸಿ 30ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆದರ್ಶ ವಿದ್ಯಾಲಯಕ್ಕೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು.

    ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ನಿನ್ನೆ ಸಂಭವಿಸಿದ ಘಟನೆಯ ಕುರಿತು ಆದರ್ಶ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಡುಗೆ ತಯಾರಿಸುವ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಡುಗೆಗೆ ಬಳಕೆ ಮಾಡಿರುವುದೇ ಕಾರಣ ಎಂಬುದು ಭೇಟಿ ವೇಳೆ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

    ಆದರ್ಶ ವಿದ್ಯಾಲಯದ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ತನಿಖೆಗೆ ಆದೇಶಿಸುವಂತೆಯೂ ಮನವಿ ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದ ಅಕ್ಕಿ, ಬೇಳೆ, ಗೋಧಿ ಉತ್ಪನ್ನಗಳಲ್ಲಿ ಹುಳುಗಳು ಇರುವುದು ಪತ್ತೆಯಾಯಿತು. ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣಗಳನ್ನು ಬಳಕೆ ಮಾಡುತ್ತಿರುವ ವಿಷಯವೂ ಬೆಳಕಿಗೆ ಬಂದಿದೆ.

    ನವೆಂಬರ್ ಅಂತ್ಯಕ್ಕೆ ಅವಧಿ ಮುಗಿದಿರುವ ಹಾಲಿನ ಪುಡಿಯ ಪೊಟ್ಟಣ ಬಳಕೆ ಮಾಡುತ್ತಿರುವ ಬಗ್ಗೆ ಆದರ್ಶ ವಿದ್ಯಾಲಯದ ಸಿಬ್ಬಂದಿಗಳನ್ನು ಅಭಿರಾಮ್ ಜಿ ಶಂಕರ್ ಪ್ರಶ್ನಿಸಿ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದಕ್ಕೆ ಶಾಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

  • ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ – ಜಿಲ್ಲಾಧಿಕಾರಿ ಆದೇಶ

    ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ – ಜಿಲ್ಲಾಧಿಕಾರಿ ಆದೇಶ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇದೀಗ ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.

    ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಇದೀಗ ನಿಷೇಧ ಮಾಡಿರುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಹಳೆ ಮೈಸೂರು ಭಾಗದ ಜೀವ ನಾಡಿಯಾಗಿದ್ದ ಕೆಆರ್‍ಎಸ್ ಡ್ಯಾಂಗೆ ಅಪಾಯ ಎದುರಾಗುತ್ತಿದೆ ಎಂದು ವರದಿಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು.

    ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಸಾಕಷ್ಟು ಬಾರಿ ಸುದ್ದಿ ಬಿತ್ತರವಾಗಿತ್ತು. ಹೀಗಾಗಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೇಬಿ ಬೆಟ್ಟದ ಗಣಿಗಾರಿಕೆಯನ್ನು ನಿಷೇಧ ಮಾಡಲು ಜಿಲ್ಲಾಧಿಕಾರಿಗೆ ಆದೇಶ ನೀಡಿದರು. ಇದೀಗ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಬೇಬಿ ಬೆಟ್ಟದ ಗಣಿಗಾರಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

    ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗಾಗಿ ಬಳಕೆ ಮಾಡುತ್ತಿದ್ದ ಎಲ್ಲಾ ಯಂತ್ರೋಪಕರಣಗಳನ್ನು ಖಾಲಿ ಮಾಡಬೇಕೆಂದು ಸಹ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಆದೇಶವನ್ನು ಮೀರಿ ಗಣಿಗಾರಿಕೆ ನಡೆಸಿದರೆ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವ್ಯಕ್ತಿಗೆ ಜಿಲ್ಲಾಧಿಕಾರಿ ಕ್ಲಾಸ್

    ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವ್ಯಕ್ತಿಗೆ ಜಿಲ್ಲಾಧಿಕಾರಿ ಕ್ಲಾಸ್

    ದಾವಣಗೆರೆ: ತಮಗೆ ನ್ಯಾಯ ಸಿಗಲಿಲ್ಲ ಎಂದು ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಗೆ ಜಿಲ್ಲಾಧಿಕಾರಿಗಳೇ ಕ್ಲಾಸ್ ತೆಗೆದುಕೊಂಡು ಬುದ್ದಿವಾದ ಹೇಳಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಲಿಂಗರಾಜ್ ಎಂಬವರು ನಾಲ್ಕು ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ.

    ಶಾಸಕ ಮಾಡಾಳ್ ವಿರುಪಾಕ್ಷಪ್ಪ ನವರ ಶಿಫಾರಸ್ಸಿನಿಂದ ಬೇರೆಯವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರಿಂದ ಇಂದು ನಿಂಗರಾಜ್ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ವಿಷ ಕುಡಿಯುವುದಾಗಿ ಹೆದರಿಸಿದ್ದಾರೆ. ಇದರಿಂದ ಕೋಪಗೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಆತ್ಮಹತ್ಯೆ ಯತ್ನ ಮಾಡುತ್ತೇನೆ ಎಂದ ನಿಂಗರಾಜ್‍ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.

    ಏನ್ ಸಾಧನೆ ಮಾಡಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ. ನಾನು 5 ವರ್ಷ ಮಗುವಾಗಿದ್ದಾಗ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ತಾಯಿ ರೊಟ್ಟಿ ಮಾಡಿ ಖಾನಾವಳಿಗೆ ಮಾರಿ ಜೀವನ ನಡೆಸುತ್ತಾ ನನ್ನನ್ನು ಸಾಕಿದ್ದಾರೆ. ಕಷ್ಟದಿಂದ ಓದಿ ಜಿಲ್ಲಾಧಿಕಾರಿಯಾಗಿದ್ದೇನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಗ್ರಾಮದಲ್ಲಿ ಹೋಗಿ ಅಲ್ಲಿನ ಜನರನ್ನು ಕೇಳಿ ನಮ್ಮ ಕಷ್ಟ ಏನು ಎಂದು ಗೊತ್ತಾಗುತ್ತೆ. ದುಡಿದು ತಿನ್ನುವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿಯಲ್ಲ ನೀನೆಂತ ಗಂಡಸು ಎಂದು ಖಡಕ್ ಆಗಿ ನಿಂಗರಾಜ್ ಗೆ ಬುದ್ದಿ ಹೇಳಿದರು.

    ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಿನ್ನ ಸಮಸ್ಯೆಯನ್ನು ಬಗೆಹರಿಸಿ ನಾನು ನಿನಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತನ್ನ ಕಷ್ಟದ ಜೀವನ ನೆನಪಿಸಿಕೊಂಡು ಕಣ್ಣಲ್ಲಿ ನೀರು ತಂದರು.

  • ಗ್ರಾಮವಾಸ್ತವ್ಯ ಮಾಡಿ ನಮ್ಮೂರಿನ ಯುವಕರಿಗೆ ಕಂಕಣ ಭಾಗ್ಯ ಕರುಣಿಸಿ – ಸಿಎಂ ಸ್ಪಂದನೆ

    ಗ್ರಾಮವಾಸ್ತವ್ಯ ಮಾಡಿ ನಮ್ಮೂರಿನ ಯುವಕರಿಗೆ ಕಂಕಣ ಭಾಗ್ಯ ಕರುಣಿಸಿ – ಸಿಎಂ ಸ್ಪಂದನೆ

    ಕಾರವಾರ: ತಮ್ಮ ಗ್ರಾಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಿ ವಾಸ್ತವ್ಯ ಮಾಡಿ ಇಲ್ಲಿನ ರಸ್ತೆ ಸಮಸ್ಯೆ ಬಗೆಹರಿಸಿ ತಮ್ಮೂರಿನ ಯುವಕರಿಗೆ ಕಂಕಣಭಾಗ್ಯ ಕರುಣಿಸಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೇದಿನಿ ಗ್ರಾಮ ಜನರು ಮನವಿ ಮಾಡಿದ್ದರು.

    ಪಬ್ಲಿಕ್ ಟಿವಿ ಈ ವರದಿಯನ್ನು ಪ್ರಸಾರ ಮಾಡಿ ಗ್ರಾಮದ ಜನರ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿತ್ತು. ಈ ವರದಿಯನ್ನು ಗಮನಸಿದ್ದ ಸಿಎಂ ಅವರು ವಾಸ್ತವ ಸ್ಥಿತಿ ತಿಳಿಯಲು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದರು.

    ಸಿಎಂ ಆದೇಶ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿ.ಐ.ಓ ರೋಷನ್ ರವರು ಏಳು ಕಿಲೋಮೀಟರ್ ರಸ್ತೆಯಲ್ಲಿ ನಡೆದು ಕುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಗ್ರಾಮ ಸಮಸ್ಯೆಗಳ ಬಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಗ್ರಾಮಸ್ಥರ ಬಹುದಿನಗಳ ಬೇಡಿಕೆ ಆಗಿರುವ ರಸ್ತೆ ಕಾಮಗಾರಿ ನಡೆಸಲು ಕೂಡ ಕ್ರಮಕೈಗೊಳ್ಳಲಾಗುವುದು. ತಕ್ಷಣದಲ್ಲಿ ರಸ್ತೆ ಮಾಡಿಕೊಡುವ ಬಗ್ಗೆ ಸರ್ಕಾರಕ್ಕೆ ವರಿದಿ ಸಲ್ಲಿಸುತ್ತೇವೆ. ಅಲ್ಲದೇ ವಿದ್ಯುತ್ ಸಮಸ್ಯೆಗೂ ಶೀಘ್ರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಳ್ಳಾರಿ ಡಿಸಿಯಾಗಿ ನಕುಲ್ ಅಧಿಕಾರ ಸ್ವೀಕಾರ

    ಬಳ್ಳಾರಿ ಡಿಸಿಯಾಗಿ ನಕುಲ್ ಅಧಿಕಾರ ಸ್ವೀಕಾರ

    ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಎಸ್.ಎಸ್ ನಕುಲ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಪ್ರಭಾರ ಜಿಲ್ಲಾಧಿಕಾರಿಗಳಾದ ಜಿಪಂ ಸಿಇಒ ಕೆ. ನಿತೀಶ್ ಅವರು ಅಧಿಕಾರ ಹಸ್ತಾಂತರಿಸಿದರು.

    ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು ಬೆಂಗಳೂರಿನ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಜಾಗಕ್ಕೆ ಎಸ್.ಎಸ್ ನಕುಲ್ ಅವರನ್ನು ನೇಮಿಸಿತ್ತು.

    ಈ ಮೊದಲು ನಕುಲ್ ಅವರು ಬಳ್ಳಾರಿ ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ.ವಿ ರಾಮ್ ಪ್ರಸಾತ್ ಮನೋಹರ್ ಅವರು ಬಳ್ಳಾರಿ ಜಿಲ್ಲಾಧಿಕಾರಿಯಾಗಿ 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

    ಅಧಿಕಾರ ಸ್ವೀಕರಿಸಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಶುಭಾಶಯ ಕೋರಿದರು. ನಂತರ ಅವರು ಅಧಿಕಾರಿಗಳ ಸಭೆ ನಡೆಸಿ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಿಮ್ಮ ತಪ್ಪು ಮುಚ್ಚಿಕೊಳ್ಳಲು ನೋಟಿಸ್ ನೀಡಿದ್ದೀರಿ- ಡಿಸಿಗೆ ಸುಮಲತಾ ಖಡಕ್ ಉತ್ತರ

    ನಿಮ್ಮ ತಪ್ಪು ಮುಚ್ಚಿಕೊಳ್ಳಲು ನೋಟಿಸ್ ನೀಡಿದ್ದೀರಿ- ಡಿಸಿಗೆ ಸುಮಲತಾ ಖಡಕ್ ಉತ್ತರ

    ಮೈಸೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ ಎಂದು ಮಂಡ್ಯ ಜಿಲ್ಲಾಧಿಕಾರಿ ನೋಟಿಸ್‍ಗೆ ಸುಮಲತಾ ಲಿಖಿತ ಉತ್ತರ ನೀಡಿದ್ದಾರೆ.

    ಚುನಾವಣಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಒತ್ತಡ ಹೇರಿದ್ದಾರೆ ಎಂಬ ಸುಮಲತಾ ಹೇಳಿಕೆಯನ್ನು ಪ್ರಶ್ನಿಸಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಮಂಜುಶ್ರೀ, ಸುಮಲತಾಗೆ ನೋಟಿಸ್ ನೀಡಿದ್ದರು. ಈ ನೋಟಿಸ್‍ಗೆ ಉತ್ತರ ನೀಡಿರುವ ಸುಮಲತಾ, ನಾನು ಹೇಳಿರುವ ಮಾತುಗಳೆಲ್ಲ ವಾಸ್ತವಾಂಶಕ್ಕೆ ಅನುಗುಣವಾಗಿವೆ. ನಿಮ್ಮ ಹಾಗೂ ನಿಮ್ಮ ಸಿಬ್ಬಂದಿ ನಡವಳಿಕೆ ನೋಡಿ ಆ ಮಾತು ಹೇಳಿದ್ದೇನೆ. ನಾನು ಯಾರನ್ನು ವ್ಯಕ್ತಿಗತವಾಗಿ ಅವಹೇಳನ ಮಾಡಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಅಲ್ಲದೆ ನಿಖಿಲ್ ನಾಮಪತ್ರ ಅರ್ಜಿ ಪರಿಶೀಲನೆಯ ವಿಡಿಯೋ ಕೇಳಿದರೆ ನೀವು ಒಂದು ತುಣುಕು ಮಾತ್ರ ಕೊಟ್ಟಿದ್ದೀರಿ ಇದು ಕರ್ತವ್ಯಲೋಪವಲ್ಲವೇ? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಿಮ್ಮ ತಪ್ಪು ಮುಚ್ಚಿಕೊಳ್ಳಲು ನನಗೆ ನೋಟಿಸ್ ನೀಡಿದ್ದೀರಿ. ನಿಮ್ಮ ತಪ್ಪುಗಳನ್ನು ಮಾಧ್ಯಮದ ಮುಂದೆ ಹೇಳಿದ್ದೇನೆ. ಇದು ನನ್ನ ಹಕ್ಕು ಊಹಾಪೋಹದ ಮಾಹಿತಿ ಆಧರಿಸಿ ನಾನು ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಯಾವುದೇ ಅಪರಾಧ ನಾನು ಮಾಡಿಲ್ಲ ಎಂದು ಹೇಳಿದ್ದಾರೆ.

    ತಾವು ನೀಡಿರುವ ನೋಟಿಸ್ ಕಾನೂನು ಬಾಹಿರವಾಗಿದ್ದು, ಇದನ್ನು ಈ ಹಂತದಲ್ಲೇ ಕೈಬಿಟ್ಟು ನ್ಯಾಯ ಪರಿಪಾಲನೆ ಮಾಡಿ ಎಂದು ಕೋರಿದ್ದಾರೆ.

  • ಗಾಂಧಿ ಜಯಂತಿ ಅಂಗವಾಗಿ ಚರಂಡಿ ಸ್ವಚ್ಛಗೊಳಿಸಿದ ಗದಗ್ ಜಿಲ್ಲಾಧಿಕಾರಿ

    ಗಾಂಧಿ ಜಯಂತಿ ಅಂಗವಾಗಿ ಚರಂಡಿ ಸ್ವಚ್ಛಗೊಳಿಸಿದ ಗದಗ್ ಜಿಲ್ಲಾಧಿಕಾರಿ

    ಗದಗ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್‍ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಗದಗ್ ನಲ್ಲಿ ನಡೆದ ಸ್ವಚ್ಛತಾ ಶ್ರಮದಾನಕ್ಕೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಚರಂಡಿ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.

    ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಹಾಗೂ ನಗರಸಭೆ ವತಿಯಿಂದ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಹಿರೇಮಠ ಹ್ಯಾಂಡ್ ಗ್ಲೌಸ್ ಹಾಗೂ ಮಾಸ್ಕ್ ಹಾಕಿಕೊಂಡು ಪೊರಕೆ ಹಿಡಿದು ಮುಂದಾಳತ್ವ ವಹಿಸಿ ಕ್ಲೀನ್ ಮಾಡಲು ಮುಂದಾದರು. ನಗರ ಮುಳಗುಂದ ನಾಕಾ, ಹಸಿರುಕೆರಿ, ಚನ್ನಮ್ಮ ವೃತ್ತ ಸೇರಿದಂತೆ ಅನೇಕ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

    ಈ ಮೂಲಕ ಸ್ಥಳೀಯ ಸಾರ್ವಜನಿಕರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು. ಪ್ರತಿಯೊಬ್ಬರೂ ಕಾಳಜಿ ನಿಷ್ಠೆಯಿಂದ ಸ್ವಚ್ಛತೆ ಕೆಲಸ ಮಾಡಬೇಕು. ಮನೆ, ಓಣಿ, ಊರು ಸುತ್ತಲಿನ ಪರಿಸರ ಹಾಗೂ ಮಾಲಿನ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಇದು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್, ಉಪವಿಭಾಗಾಧಿಕಾರಿ ಪಿ.ಎಸ್ ಮಂಜುನಾಥ್, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ಸೇರಿದಂತೆ ವಿವಿಧ ಶಾಲಾ-ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿಡಿಯೋ: ಬೊಂಬೆ ಹೇಳುತೈತೆ ಹಾಡಿಗೆ ಬಳ್ಳಾರಿ ಡಿಸಿಯಿಂದ ಸಖತ್ ಸ್ಟೆಪ್!

    ವಿಡಿಯೋ: ಬೊಂಬೆ ಹೇಳುತೈತೆ ಹಾಡಿಗೆ ಬಳ್ಳಾರಿ ಡಿಸಿಯಿಂದ ಸಖತ್ ಸ್ಟೆಪ್!

    ಬಳ್ಳಾರಿ: ಕಂದಾಯ ಇಲಾಖೆಯ ಸಿಬ್ಬಂದಿ ಹಾಡಿದ ಹಾಡಿಗೆ ಬಳ್ಳಾರಿ ಜಿಲ್ಲಾಧಿಕಾರಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ.

    ಜಿಲ್ಲಾ ಮಟ್ಟದ ಕಂದಾಯ ದಿನಾಚರಣೆಯ ನಿಮಿತ್ತ ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಇಲಾಖೆಯ ಸಿಬ್ಬಂದಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ’ ಎಂಬ ಹಾಡನ್ನು ಹಾಡಿದ್ದಾರೆ.

    ಈ ಹಾಡು ಹಾಡುತ್ತಿದ್ದಂತೆಯೇ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ವೇದಿಕೆಯ ಮೇಲೆ ಹತ್ತಿ ಕುಣಿಯುವ ಮೂಲಕ ತಾವು ಕೂಡ ಪವರ್ ಸ್ಟಾರ್ ಅಭಿಮಾನಿ ಎಂದು ತೋರಿಸಿಕೊಟ್ಟರು.

    ಇಲಾಖೆಯ ಸಿಬ್ಬಂದಿಗಳಿಗಾಗಿ ದಿನವಿಡೀ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಬಳ್ಳಾರಿ ಜಿಲ್ಲಾಧಿಕಾರಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಿಬ್ಬಂದಿ ಜೊತೆ ಬೆರೆತು ಸಂಭ್ರಮಿಸಿದ್ದು ವಿಶೇಷವಾಗಿತ್ತು.

    https://www.youtube.com/watch?v=3KBS4_WzRzA