ರಾಯಚೂರು: ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತ ತನ್ನದೇಯಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕ ವಿನಾಯಿತಿ ನೀಡುತ್ತಿದೆ.
ಸಾರ್ವಜನಿಕರಿಗೂ ತೊಂದರೆಯಾಗಬಾರದು, ವ್ಯಾಪಾರಿಗಳೂ ಕಷ್ಟ ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಕಲರ್ ಕೋಡ್ ಮೂಲಕ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಟ್ಟಿದೆ. ನಗರದಲ್ಲಿರುವ ಅಂಗಡಿಗಳಿಗೆ ಹಸಿರು, ಹಳದಿ, ಕೆಂಪು ಬಣ್ಣಗಳ ಮೂಲಕ ಗುರುತಿಸಲಾಗಿದೆ. ಎಲ್ಲ ಬಣ್ಣದವರಿಗೂ ಅಂಗಡಿ ತೆರೆಯಲು ದಿನಾಂಕ ನಿಗದಿ ಮಾಡಿದ್ದು, ಆ ದಿನಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಹಸಿರು ಬಣ್ಣ ಬಳಿದಿರುವ ಅಂಗಡಿಗಳು ಸೋಮವಾರ ಮತ್ತು ಗುರುವಾರ ತೆರೆಯಬೇಕು. ಹಳದಿ ಬಣ್ಣ ಬಳೆದಿರುವ ಅಂಗಡಿಗಳು ಮಂಗಳವಾರ ಮತ್ತು ಶುಕ್ರವಾರ, ಕೆಂಪು ಬಣ್ಣ ಬಳೆದಿರುವ ಅಂಗಡಿಗಳು ಬುಧವಾರ, ಶನಿವಾರ ತೆರೆಯಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಗ್ರಾಹಕರು ಮತ್ತು ವ್ಯಾಪಾರಿಗಳಿಗೂ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಡಳಿತ ಕಲರ್ ಕೋಡ್ ಪ್ರಯತ್ನಕ್ಕೆ ಮುಂದಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಭೀತಿ ಹಿನ್ನೆಲೆ ಲಾಕ್‍ಡೌನ್ ಸಡಿಲಿಕೆಯಲ್ಲೂ ಜಿಲ್ಲಾಡಳಿತ ಹಿಡಿತ ಸಾಧಿಸುವ ನಿರ್ಧಾರ ಕೈಗೊಂಡಿದೆ.
ಚಿಕ್ಕಮಗಳೂರು: ಕೂಲಿಗಾಗಿ ರಾಜ್ಯದ ಇತರ ಜಿಲ್ಲೆಗಳಿಂದ ಬಂದು ಕೊರೊನಾದಿಂದಾಗಿ ಲಾಕ್‍ಡೌನ್ ಘೋಷಿಸಿದಾಗಿನಿಂದ ಊರಿಗೆ ಹೋಗಲಾಗದೆ ತೋಟದ ಲೈನ್ ಮನೆಗಳಲ್ಲಿ ವಾಸವಿದ್ದ ಕಾರ್ಮಿಕರನ್ನು ಜಿಲ್ಲೆಯ ಮೂಡಿಗೆರೆಯಿಂದ ಸರ್ಕಾರಿ ಬಸ್‍ನಲ್ಲಿ ತಮ್ಮ ಊರುಗಳಿಗೆ ಸ್ಥಳಾಂತರಿಸಲಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಕಾಫಿ ಹಾಗೂ ಮೆಣಸು ಕೊಯ್ಯಲು ಕೂಲಿ ಕಾರ್ಮಿಕರು ಆಗಮಿಸಿದ್ದರು. ಅವರೆಲ್ಲಾ ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ತೋಟದ ಲೈನ್ ಮನೆಗಳಲ್ಲೇ ವಾಸವಿದ್ದರು. ಇಂದು 11 ಬಸ್‍ಗಳ ಮೂಲಕ ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ವಿವಿಧ ಊರುಗಳಿಗೆ 200ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಮಕ್ಕಳನ್ನು ತಮ್ಮ ಊರುಗಳಿಗೆ ಕಳುಹಿಸಲಾಗಿದೆ.
ಒಂದೊಂದು ಬಸ್‍ನಲ್ಲಿ ಕೇವಲ 21 ಜನ ಮಾತ್ರ ಇದ್ದು. ಎಲ್ಲರಿಗೂ ಮುಖಕ್ಕೆ ಮಾಸ್ಕ್ ಹಾಕಿ ಬಸ್‍ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರನ್ನೂ ತಮ್ಮ-ತಮ್ಮ ಊರುಗಳಿಗೆ ಕಳುಹಿಸಲಾಗಿದೆ. ಏಪ್ರಿಲ್ 25ರಂದು 5 ಬಸ್, 26ರಂದು 7 ಬಸ್ ಹಾಗೂ ಇಂದು ಒಟ್ಟು 11 ಬಸ್‍ಗಳಲ್ಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲಾಗಿದೆ.
ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಹೊರ ಜಿಲ್ಲೆಗಳಿಂದ ಬಂದ ಕೂಲಿಕಾರ್ಮಿಕರು ಕಾಫಿತೋಟದ ಲೈನ್ ಮನೆಗಳಲ್ಲೇ ವಾಸಿವಿದ್ದರು. ಕೆಲ ಕಾರ್ಮಿಕರು ಕದ್ದು ಮುಚ್ಚಿ ಊರಿಗೆ ಹೋಗಲು ಯತ್ನಿಸಿ ಸಿಕ್ಕಿಬಿದ್ದು, ಸರ್ಕಾರದ ನಿರಾಶ್ರಿತ ಘಟಕದ ಪಾಲಾಗಿದ್ದರು. ಆದರೆ ನಿನ್ನೆಯಿಂದ ಸರ್ಕಾರವೇ ಕಾರ್ಮಿಕರನ್ನು ಸ್ವಂತ ಜಿಲ್ಲೆ ಹಾಗೂ ಊರುಗಳಿಗೆ ಕಳುಹಿಸಲು ಮುಂದಾಗಿದೆ.
– ಮೀನು ಖರೀದಿಗೆ ಮುಗಿಬಿದ್ದ ವ್ಯಾಪಾರಿಗಳು
– ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಧರಿಸಿಲ್ಲ
– ಜಿಲ್ಲಾಡಳಿತದಿಂದ ಕೊರೊನಾ ಸೋಂಕು – ಆರೋಪ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕೊರೊನಾ ಹಾಟ್‍ಸ್ಪಾಟ್ ಆಗಿದೆ. ಕೊರೊನಾ ಪಾಸಿಟಿವ್ ಕೇಸ್ ಕಡಿಮೆ ಆಯಿತು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೆ ಮತ್ತೆ ಕೊರೊನಾ ಪಾಸಿಟಿವ್ ಹೆಚ್ಚಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದೀಗ ಜಿಲ್ಲಾಡಳಿತವೇ ಇಡೀ ಜಿಲ್ಲೆಯ ಜನರಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊರೊನಾ ಹರಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ದಾರಿ ಮಾಡಿಕೊಟ್ಟಿರುವ ಬೆಳವಣಿಗೆ ನಡೆದಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ರಾತ್ರಿ ವೇಳೆ ಹೊರ ರಾಜ್ಯಗಳಿಂದ ಮೀನಿನ ಲಾರಿಗಳು ಬರುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಏರ್ಪಡುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನು ಸರಬರಾಜಿಗೆ ಅನುಮತಿ ನೀಡಿದ್ದು, ಮಂಗಳೂರಿನ ಮೀನು ವ್ಯಾಪಾರಿಗಳು ಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ಯಾವುದೇ ಸಾಮಾಜಿಕ ಅಂತರ ಇಲ್ಲದೆ 2 ಸಾವಿರಕ್ಕೂ ಹೆಚ್ಚು ಮಂದಿ ಬಂದರಿನಲ್ಲಿ ಸೇರುತ್ತಿದ್ದಾರೆ. ಅನ್ ಲೋಡಿಂಗ್ ಮತ್ತು ಏಲಂ ಮೂಲಕ ವಿತರಣೆ ಮಾಡುತ್ತಿದ್ದಾರೆ. ಮಾಸ್ಕ್, ಗ್ಲೌಸ್ ಯಾವುದೇ ರಕ್ಷಾ ಕವಚ ಇಲ್ಲದೆ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.
ದಿನಕ್ಕೆ ನೂರಕ್ಕೂ ಹೆಚ್ಚು ಹೊರ ರಾಜ್ಯದ ಲಾರಿಗಳು ಬರುತ್ತಿದ್ದು, ಇಲ್ಲಿಂದ ಖರೀದಿಸಿದ ಮೀನುಗಳನ್ನು ಮರುದಿನ ಕರಾವಳಿಯಾದ್ಯಂತ ಸರಬರಾಜು ಮಾಡಲಾಗುತ್ತೆ. ಈ ಮೂಲಕ ಉಚಿತವಾಗಿ ಕೊರೊನಾ ಕೂಡ ಗ್ರಾಮ ಗ್ರಾಮಗಳಿಗೆ ಸರಬರಾಜು ಆಗುವ ಅಪಾಯ ಎದುರಾಗಿದೆ. ಹಿಂದೆಲ್ಲಾ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಹೊರ ರಾಜ್ಯಕ್ಕೆ ಮೀನು ಸಾಗಾಟ ಆಗುತ್ತಿತ್ತು. ಈಗ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆ ಇಲ್ಲದ ಕಾರಣ ಆಂಧ್ರ ಪ್ರದೇಶ, ತಮಿಳನಾಡು ಕಡೆಯಿಂದ ಮೀನು ಪೂರೈಕೆಯಾಗುತ್ತಿದೆ.
ಮುಸ್ಲಿಮರಿಗೆ ರಂಜಾನ್ ಆಗಿರುವ ಕಾರಣ ರಾತ್ರಿ ವೇಳೆ ಮೀನು ವಹಿವಾಟು ನಡೆಸಲು ಜಿಲ್ಲಾಡಳಿತ ವಿಶೇಷ ಅನುಮತಿ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡದಿರುವುದು ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ.
ಇದೇ ರೀತಿ ಮುಂದುವರಿದರೆ ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಕೊರೊನಾ ಫ್ರೀಯಾಗಿ ರಾಜ್ಯದೆಲ್ಲೆಡೆ ರವಾನೆಯಾಗುವ ಸಾಧ್ಯತೆಯಿದೆ. ಇಂತಹ ಅವ್ಯವಸ್ಥೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರು ಕಾರಣರಾಗಲಿದ್ದಾರೆ. ರಾಜ್ಯದೆಲ್ಲೆಡೆ ಲಾಕ್‍ಡೌನ್ ಇದ್ದರೂ ರೆಡ್‍ಝೋನ್ ಮಂಗಳೂರಿನಲ್ಲಿ ಮೀನು ವಹಿವಾಟಿಗೆ ಅವಕಾಶ ಕೊಟ್ಟಿದ್ದು, ಹೇಗೆ ಅನ್ನುವ ಪ್ರಶ್ನೆಗೆ ಸ್ವತಃ ಮೀನುಗಾರಿಕೆ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಉತ್ತರ ನೀಡಬೇಕಷ್ಟೆ.
ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯಾಧಿಕಾರಿ, ಡಿಸಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಒಳ್ಳೆಯ ಸೌಲಭ್ಯಗಳನ್ನೂ ಒದಗಿಸಿದೆ.
ತೊಟ್ಟ ಬಟ್ಟೆಯಲ್ಲೇ ಕಾರವಾರದ ಪತಂಜಲಿ ಆಸ್ಪತ್ರೆಗೆ ತೆರಳಿದ್ದವು, ಬರುವಾಗ ಅವರ ಬಟ್ಟೆ ಹಾಕಿಕೊಂಡು ಬಂದಿದ್ದೆವು. ಅವರೇ ಚಪ್ಪಲಿಯನ್ನೂ ಕೊಟ್ಟಿದ್ದರು, ಮಹಿಳೆಯರಿಗೂ ಬಟ್ಟೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ನಮ್ಮಲ್ಲಿ ಬಹಳಷ್ಟು ಚೆನ್ನಾಗಿದ್ದರು. ಉತ್ತಮ ಚಿಕಿತ್ಸೆ ನೀಡಿದರು. ನಮಗಾಗಿ ವೈದ್ಯಾಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ದಾರೆ. ಅತ್ಯುತ್ತಮವಾಗಿ ನಮ್ಮ ಜತೆ ಬೆರೆತುಕೊಂಡು ಗುಣಮುಖಗೊಳಿಸಿದರು ಎಂದು ಡಿಸ್ಟಾರ್ಜ್ ಗೊಂಡ ಸೋಂಕಿತ ಸಂಖ್ಯೆ 98 ಹಾಗೂ ಸೋಂಕಿತ 36 ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂದು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೋಂಕಿತ ರೋಗಿ ಸಂಖ್ಯೆ 98, ಭಟ್ಕಳದ 26 ವರ್ಷದ ಯವಕನಾಗಿದ್ದು, ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು.
ಅಲ್ಲದೇ ಈ ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಯುವಕನಲ್ಲಿ ಸೋಂಕು ದೃಢಪಟ್ಟ ಬಳಿಕ ಯುವಕನನ್ನು ಮಾರ್ಚ್ 31ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಬಳಿಕ ಕೊರೊನಾ ವೈರಸ್ ಕಾಟದಿಂದ ಯುವಕ ಗುಣಮುಖನಾಗಿದ್ದಾನೆ.
ಈ ಹಿಂದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತ ಸಂಖ್ಯೆ 36 ದುಬೈನಿಂದ ಮಾ. 19ಕ್ಕೆ ಮುಂಬೈಗೆ ತಲುಪಿದ್ದರು. ರೈಲಿನ ಮೂಲಕ ಮಾ. 20ಕ್ಕೆ ಭಟ್ಕಳಕ್ಕೆ ಬಂದಿದ್ದ 65 ವರ್ಷದ ಸೋಂಕಿತ ಸಂಖ್ಯೆ 36 ರಿಗೆ, ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾ. 21ರಂದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪರೀಕ್ಷೆ ವರದಿಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಬಳಿಕ ಈ ಹಿಂದೆಯೇ ಪತಂಜಲಿ ಆಸ್ಪತ್ರೆಯಿಂದ ಸೋಂಕಿತ ಸಂಖ್ಯೆ 36 ಬಿಡುಗಡೆಯಾಗಿದ್ದರು.
ಉಡುಪಿ: ಮಹಾಮಾರಿ ಕೊರೊನಾ ವೈರಸ್‍ಗೆ ಕಡಿವಾಣ ಹಾಕಿರುವ ಉಡುಪಿ ಜಿಲ್ಲೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಕಳೆದ 2 ವಾರಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29ರಂದು ಕೊನೆಯದಾಗಿ ಕೊರೊನಾ ಸೋಂಕಿತರೊಬ್ಬರು ಪತ್ತೆಯಾಗಿದ್ದರು. ಅದಾದ ಬಳಿಕ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದ ಕೂಡಲೇ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಕೇಂದ್ರ ಪ್ರಶಂಸಿದೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನೀಡಿಲ್ಲ ಎಂದು ಡಿಸಿ ತಿಳಿಸಿದರು.
ಹೊರ ಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ. ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.
ಖಡಕ್ ರೂಲ್ಸ್:
ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಿಸಿದ್ದೇ ತಡ ಉಡುಪಿಯಲ್ಲಿ ಚೆಕ್ ಪೋಸ್ಟನ್ನು ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಬೆಳಗ್ಗೆ 11ರ ನಂತರ ಓಡಾಡುವ ಎಲ್ಲಾ ವಾಹನವನ್ನು ಬಿಡದೆ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಕಾರಣ ಕೇಳಿ, ವಿನಾಯಿತಿ ನಿಯಮಕ್ಕೆ ಅನ್ವಯವಾಗದಿದ್ದರೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಣಿಪಾಲ ಉಡುಪಿಯಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, 247 ಮೆಡಿಕಲ್‍ಗಳು, ಫಾರ್ಮಸಿ ಇರೋದ್ರಿಂದ ಈ ನಗರಗಳ ನಡುವೆ ಸ್ವಲ್ಪ ಸಾರ್ವಜನಿಕರ ಓಡಾಟ ಇದೆ.
ಮಂಗಳವಾರ ಒಂದೇ ದಿನ 20 ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದಾಖಲು ಮಾಡಕೊಂಡಿದ್ದಾರೆ. ಈ ನಡುವೆ ಹೊರ ಜಿಲ್ಲೆಗಳಿಗೆ ಹೋಗಲು ಜನ ಪೊಲೀಸ್ ಪಾಸ್‍ಗೆ ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯದ ವಿಚಾರ ಬಿಟ್ಟು ಬೇರೆ ಯಾವ ವಿಚಾರಕ್ಕೂ ಪಾಸ್ ಕೊಡಲ್ಲ ಅಂತ ಎಸ್ ಪಿ. ವಿಷ್ಣುವರ್ಧನ್ ಹೇಳಿದ್ದಾರೆ.
ವಿಜಯಪುರ: ಕೊರೊನಾ ಸೋಂಕಿತ ವೃದ್ಧೆಯ ಪತಿ ಕಳೆದ ಭಾನುವಾರ ರಾತ್ರಿ ಮೃತಪಟ್ಟಿದ್ದು, ಸೋಂಕಿಗೆ ಬಲಿಯಾಗಿರಬಹುದೇ ಎನ್ನುವ ಪ್ರಶ್ನೆ ಎದ್ದಿತ್ತು. ಈಗ ಅವರು ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಸರ್ಕಾರ ಪ್ರಕಟಿಸಿದೆ.
ಭಾನುವಾರ ಮಧ್ಯಾಹ್ನ ವೃದ್ಧೆಗೆ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 24 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೇ ಅದೇ ರಾತ್ರಿ ವೃದ್ಧೆಯ ಪತಿ (69) ಮೃತಪಟ್ಟಿದ್ದರು.
ಶನಿವಾರ ರಾತ್ರಿ ದಿಢೀರ್ ಆಗಿ ರಾಜ್ಯ ಸರ್ಕಾರ ನಗರದ ಚಪ್ಪರ ಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಲು ಸೂಚನೆ ನೀಡಿತ್ತು. ಕೂಡಲೇ ಜಿಲ್ಲಾಡಳಿತ ಚಪ್ಪರಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಈ ಚಪ್ಪರ ಬಂದ್ ಕಾಲೋನಿ ನಿವಾಸಿ 60 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದನ್ನು ರಾಜ್ಯ ಸರಕಾರ ದೃಢಪಡಿಸಿತ್ತು. ಇದಾದ ನಂತರ ಆಕೆಯ ಪತಿ ಮೃತಪಟ್ಟಿದ್ದರು.
ವೃದ್ಧನ ಕುಟುಂಬ ಅವಿಭಾಜ್ಯ ಕುಟುಂಬ ಆಗಿದ್ದು, ಮನೆಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 24 ಜನರು ಇದ್ದಾರೆ. ಒಟ್ಟು 22 ಜನರ ಗಂಟಲು ದ್ರವವನ್ನ ಪರೀಕ್ಷೆಗೆ ಕಳಿಸಲಾಗಿದೆ. ಪಾಸಿಟಿವ್ ಬಂದಿದ್ದ ವೃದ್ಧೆ ಮನೆ ಬಿಟ್ಟು ಎಲ್ಲೂ ಹೋಗಿರಲಿಲ್ಲ. ಆದರೆ ಪತಿ ಮಹಾರಾಷ್ಟ್ರದಲ್ಲಿ ಸಂಬಂಧಿಕರ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆದ್ದರಿಂದ ಅಲ್ಲಿಂದಲೇ ಕೊರೋನಾ ಬಂದಿರಬಹುದಾ ಎನ್ನುವ ಪ್ರಶ್ನೆ ಎದ್ದಿತ್ತು.
ಸೋಂಕಿತ ವೃದ್ಧೆ ಏಪ್ರಿಲ್ 6ರಂದು ಎರಡು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಲ್ಲಿಯು ಕೂಡ ಚಿಕಿತ್ಸೆ ನೀಡಿದ್ದರೂ ಗುಣಮುಖವಾಗಿರಲಿಲ್ಲ. ಈ ವೇಳೆ ಆಸ್ಪತ್ರೆಯವರಿಗೆ ಕೋವಿಡ್-19 ಇರುವ ಶಂಕೆ ಕಂಡುಬಂದು ಏಪ್ರಿಲ್ 9 ರಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆಗ ವೃದ್ಧೆಯನ್ನು ಜಿಲ್ಲಾಸ್ಪತ್ರೆ ದಾಖಲಿಸಿ ಜಿಲ್ಲಾಡಳಿತ ಗಂಟಲು ದ್ರವ ಪರೀಕ್ಷೆಗೆ ಕಳಿಸಿತ್ತು. ಅವರ ಆರೋಗ್ಯ ಗಂಭೀರವಾದ ಕಾರಣ ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ವೃದ್ಧೆ ಬಗ್ಗೆ ಮಾಹಿತಿ ಕಲೆ ಹಾಕಲು ಹೋಗಿ ಅವರ ಮನೆಯಲ್ಲಿ ಚಹಾ ಕುಡಿದು ಬಂದಿದ್ದ ಗೋಲಗುಂಬಜ್ ಪಿಎಸ್‍ವೈ ಸೇರಿದಂತೆ ಇಬ್ಬರು ಪೇದೆಗಳ ಮೇಲೆ ನಿಗಾ ಇಡಲಾಗಿತ್ತು. ವೃದ್ಧೆಯ ಚಿಕಿತ್ಸೆಗಾಗಿ ಓಡಾಡಿದ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಒಟ್ಟು 100 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಹುಬ್ಬಳ್ಳಿ: ಹುಬ್ಬಳ್ಳಿಯ ಮುಲ್ಲಾ ಓಣಿಯ ಕೊರೊನಾ ಸೋಂಕಿತನ ಅಣ್ಣ ರೋಗಿ ನಂಬರ್-236 ಟ್ರಾವೆಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು, ಸಂಪರ್ಕದಲ್ಲಿರುವವರು ಕೂಡಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ.
ಪಿ.194ನ ಅಣ್ಣ ಪಿ-236 ಇಡೀ ಹುಬ್ಬಳ್ಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಸುತ್ತಾಡಿದ್ದಾನೆ. ಮಾರ್ಚ್ 23ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಫುಟ್ ವೇರ್ ಅಂಗಡಿ ಓಪನ್ ಮಾಡಿದ್ದಾನೆ.
ಅಂದೇ ಭಾರತ ಲಾಕ್‍ಡೌನ್ ಮೊದಲ ದಿನವಾದ್ದರಿಂದ ವ್ಯಾಪಾರ ನಡೆಸಿದ್ದ. ವ್ಯಾಪಾರ ಮುಗಿಸಿ ಎಲ್‍ಐಸಿ ಕಚೇರಿಗೆ ತೆರಳಿ ಪ್ರೀಮಿಯಂ ಭರ್ತಿ ಮಾಡಿದ್ದಾನೆ. ಅಲ್ಲಿಂದ ರಾತ್ರಿ 8 ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾನೆ. ಮಾರ್ಚ್ 24ರಂದು ಬೆಳಗ್ಗೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಪ್ರಯಾಣ ಮಾಡಿದ್ದಾನೆ. ಹಳೇ ಹುಬ್ಬಳ್ಳಿಯಲ್ಲಿ ದಿನಸಿ, ಹಣ್ಣು, ಕಿರಾಣಿ ಸಾಮಾನು ಖರೀದಿಸಿ ಬಳಿಕ ಇಂಡಿಪಂಪ್, ಕೇಶ್ವಾಪುರ, ದುರ್ಗದಬೈಲ್ ಮಾರ್ಕೆಟ್ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿಗೆ ಸುತ್ತಾಡಿದ್ದಾನೆ.
ಹೀಗಾಗಿ ಈತನ ಸಂಪರ್ಕದಲ್ಲಿರುವವರು ಹತ್ತಿರ ಆಸ್ಪತ್ರೆ ಅಥವಾ ಕಿಮ್ಸ್ ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ. ಈತನು ಸಂಚರಿಸಿರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದ ಎಂಬುವುದು ಕೊಂಚ ನಿರಾಳತೆಯನ್ನು ತಂದುಕೊಟ್ಟಿದೆ. ಆದರೆ ಕೂಡಲೇ ಮುಂಜಾಗ್ರತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ.
ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಜಾರಿಮಾಡಿರುವ ಲಾಕ್‍ಡೌನ್‍ನಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಪಪ್ಪಾಯಿ ಜಮೀನಿನಲ್ಲಿಯೇ ಹಾಳಾಗುತ್ತಿರೋದನ್ನ ಕಂಡು ರೈತ ಕಂಗಾಲಾಗಿದ್ದಾರೆ.
ದೇವರಗುಡ್ಡ ಗ್ರಾಮದ ರೈತ ಹನುಮಂತಪ್ಪ ನಾಯರ್ ತಮ್ಮ ಮೂರು ಎಕ್ರೆ ಜಮೀನಿನಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ದರು. ಪಪ್ಪಾಯಿ ರೈತರ ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿತ್ತು. ಆದ್ರೆ ಲಾಕ್‍ಡೌನ್‍ನಿಂದ ಖರೀದಿಗೆ ವ್ಯಾಪಾರಸ್ಥರು ಬರದೆ ಪಪ್ಪಾಯಿ ಜಮೀನಿನಲ್ಲಿ ಹಾಳಾಗುತ್ತಿದೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಪಪ್ಪಾಯಿ ಹಾಳಾಗ್ತಿರೋದಕ್ಕೆ ರೈತ ಹನುಮಂತಪ್ಪ ಕಣ್ಣೀರಿಡುತ್ತಿದ್ದಾರೆ.
ಜಿಲ್ಲಾಡಳಿತ ಜಮೀನಿನಲ್ಲಿ ಕೊಳೆಯುತ್ತಿರೋ ಪಪ್ಪಾಯಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಹೀಗೆ ರೈತರು ನಷ್ಟ ಅನುಭವಿಸುತ್ತಿದ್ದರೆ ಜೀವನ ಮಾಡೋದು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಉಡುಪಿ: ಉತ್ತರ ಕನ್ನಡ ಜಿಲ್ಲೆಯ ಕೊರೊನಾ ಸೋಂಕಿತ ಗರ್ಭಿಣಿಗೆ ಉಡುಪಿಯಲ್ಲಿ ಚಿಕಿತ್ಸೆ ಶುರು ಮಾಡಲಾಗಿದೆ. ಈ ಮೂಲಕ ಉಡುಪಿ ಜಿಲ್ಲಾಡಳಿತ ಮಾನವೀಯತೆ ಮೆರೆದಿದೆ.
ಭಟ್ಕಳ ಮೂಲದ 26 ವರ್ಷದ ಗರ್ಭಿಣಿಯನ್ನು ಉಡುಪಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ. ಉಡುಪಿ ನಗರದಲ್ಲಿರುವ ಟಿಎಂಎಪೈ ಆಸ್ಪತ್ರೆಯಲ್ಲಿ ವಿಶೇಷ ನಿಗಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯನ್ನು ಉಡುಪಿಗೆ ಶಿಫ್ಟ್ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾಡಳಿತವನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾನವೀಯತೆ ಮೆರೆದಿದ್ದು, ಉಡುಪಿಯಲ್ಲಿ ಚಿಕಿತ್ಸೆ ಕೊಡುವುದಾಗಿ ಸಮ್ಮತಿ ನೀಡಿದ್ದಾರೆ. ಭಟ್ಕಳದಿಂದ ಕೊರೊನಾ ಸೋಂಕಿತ ಗರ್ಭಿಣಿಯನ್ನು ಉಡುಪಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಶುರು ಮಾಡಲಾಗಿದೆ. ಉಡುಪಿಯ ಟಿಎಂಎಪೈ ಆಸ್ಪತ್ರೆಯನ್ನು ಕೊರೊನಾ ರೋಗಿಗಳಿಗಾಗಿ ಸಂಪೂರ್ಣವಾಗಿ ಮೀಸಲಿಡಲಾಗಿದೆ. ಇಲ್ಲಿ ವೆಂಟಿಲೇಷನ್ ಮತ್ತು ಐಸಿಯು ವಿಭಾಗದಲ್ಲಿ ಕೆಎಂಸಿ ಮಣಿಪಾಲದ ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಲಾಗಿದೆ. ಅವರಿಂದಲೇ ಸದ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್‍ಒ ಡಾ.ಸುಧೀರ್ ಚಂದ್ರ ಸೂಡಾ, ಮಾನವೀಯತೆಯ ನೆಲೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ನಮ್ಮ ಜಿಲ್ಲೆಯ ಕೊರೊನಾ ರೋಗಿಗಳಿಗಾಗಿಯೇ ಈ ಆಸ್ಪತ್ರೆಯನ್ನು ಈವರೆಗೆ ಮೀಸಲಿಟ್ಟಿದ್ದೆವು. ವಿಶೇಷ ಪ್ರಕರಣ ಆಗಿರುವುದರಿಂದ ಮಹಿಳೆಗೆ ಇಲ್ಲಿ ಚಿಕಿತ್ಸೆ ಕೊಡುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಎಲ್ಲ ವಿಷಯದಲ್ಲಿ ಇದನ್ನು ಮುಂದುವರಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಗದಗ: ಕೊರೊನಾ ವೈರಸ್‍ನಿಂದ ನಗರದಲ್ಲಿ 80 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಮೃತದೇಹವನ್ನ ಜಿಲ್ಲಾಡಳಿತ ನೇತೃತ್ವದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಸರ್ಕಾರದ ಪ್ರೊಟೊಕಾಲ್ ಪ್ರಕಾರ ವೈರಸ್ ಸೋಂಕಿತ ವೃದ್ದೆಯನ್ನ ನಗರದ ಬೆಟಗೇರಿ ಮುಕ್ತಿಧಾಮದಲ್ಲಿ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ವೈದ್ಯರು ಹಾಗೂ ಸಿಬ್ಬಂದಿಗಳು ಪಿ.ಪಿ.ಇ ಕಿಟ್ ಧರಿಸಿಕೊಂಡು ಗದಗ ಜಿಮ್ಸ್ ಆಸ್ಪತ್ರೆಯ ಶ್ರದ್ಧಾಂಜಲಿ ವಾಹನದ ಮೂಲಕ ಮುಕ್ತಿಧಾಮಕ್ಕೆ ಮೃತ ದೇಹದ ರವಾನೆ ಮಾಡಿ ಅಂತ್ಯಕ್ರಿಯೆ ಮಾಡಿ ಮುಗಿಸಿದರು.
ಸೋಂಕಿತ ವ್ಯಕ್ತಿ ಮೃತಪಟ್ಟ ವೇಳೆ ಸರ್ಕಾರದ ನಿಯಮಗಳು:
* ಸರ್ಕಾರ ವಿಪತ್ತು ನಿರ್ವಹಣಾ ನಿಯಮಗಳ ಪ್ರಕಾರ ಕುಟುಂಬಸ್ತರಿಗೆ ಮಾಹಿತಿ ನೀಡಲಾಗುತ್ತೆ.
* ಸಂಬಂಧಿಕರು ಮೃತದೇಹದ ಬಳಿ ಬರುವುದು ಅಥವಾ ಮುಟ್ಟುವುದು ಮಾಡುವಂತಿಲ್ಲ.
* ಪಿಪಿಇ ಕಿಟ್ ಧರಿಸಿದವರಿಂದ ಮಾತ್ರ ಮೃತದೇಹ ರವಾನೆ ಮಾಡಬೇಕು.
* ಸಂಬಂಧಿಕರಾಗಲಿ, ಇತರೆ ಅಧಿಕಾರಿ, ಸಿಬ್ಬಂದಿಗಳಾಗಲಿ ಮೃತ ದೇಹದ ಬಳಿಗೆ ಬರಲು ಬಿಡುವುದಿಲ್ಲ.
* ಸರ್ಕಾರದ ಪ್ರೊಟೊಕಾಲ್ ಪ್ರಕಾರ ಶವವನ್ನು ದಹನ(ಸುಡುವ) ಅಥವಾ ಹೂಳುವ ಮೂಲಕ ಅಂತ್ಯಕ್ರಿಯೆ ಮಾಡಬೇಕು.
* ಮೃತ ವ್ಯಕ್ತಿಗೆ ಬಳಸಿದ ವಸ್ತು ಅಥವಾ ಪರಿಕರಗಳನ್ನು ಜೈವಿಕ ತ್ಯಾಜ್ಯ ನಿರ್ವಹಣಾ ಪ್ರಕಾರ ಸಂಸ್ಕರಿಸಬೇಕು.
* ವೈರಸ್ ಸೋಂಕಿತ ಮೃತ ವ್ಯಕ್ತಿಗೆ ಬಳಸಿದ ಪರಿಕರಗಳನ್ನ ಬಯೋಮೆಡಿಕಲ್ ವೆಸ್ಟ್ ಮ್ಯಾನೆಜ್‍ಮೆಂಟ್ ನಿಯಮ ಪ್ರಕಾರ ಸಂಸ್ಕರಿಸಿ ವಿಲೆವಾರಿ ಮಾಡಬೇಕು. ಹೀಗೆ ಸರ್ಕಾರದ ಈ ಎಲ್ಲಾ ನಿಯಮಗಳ ಪ್ರಕಾರ ವೃದ್ಧೆಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲಾಯಿತು.