Tag: District Administration

  • ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಬಂದರೂ ಕ್ವಾರಂಟೈನ್ ಮಾಡದ ಜಿಲ್ಲಾಡಳಿತ

    ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಬಂದರೂ ಕ್ವಾರಂಟೈನ್ ಮಾಡದ ಜಿಲ್ಲಾಡಳಿತ

    – ಕೊಪ್ಪಳದಲ್ಲಿ ಹೆಚ್ಚಿದ ಆತಂಕ

    ಕೊಪ್ಪಳ: ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಿಂದ ನಾಲ್ವರು ಕಾರ್ಮಿಕರು ರಾಜ್ಯಕ್ಕೆ ವಲಸೆ ಬಂದರೂ ಅವರನ್ನು ಕ್ವಾರಂಟೈನ್ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

    ಸೋಮವಾರ ಸಂಜೆ 6ಕ್ಕೆ ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಆಗಮಿಸಿದ್ದು, ಇದುವರೆಗೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿಲ್ಲ. ಕೊಪ್ಪಳ ಜಿಲ್ಲೆಯ ನಾಲ್ವರು ಕಾರ್ಮಿಕರು ಸಹ ಬೇಕರಿಯಲ್ಲಿ ಕೆಲಸ ಮಾಡುವವರಾಗಿದ್ದು, ಮಾಹಾರಾಷ್ಟ್ರದ ಖೇಡ್ ನಿಂದ ಆಗಮಿಸಿದ್ದಾರೆ. ಸೋಮವಾರ ಸಂಜೆಯಿಂದ ಕೊಪ್ಪಳ ಬಸ್ ನಿಲ್ದಾಣದಲ್ಲಿಯೇ ಇದ್ದಾರೆ. ಇಷ್ಟಾದರೂ ಈ ಕಾರ್ಮಿಕರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿಲ್ಲ.

    ಸೋಮವಾರ ಸಂಜೆಯಿಂದಲೇ ಇಲ್ಲಿ ಕುಳಿತಿದ್ದೇವೆ. ನಮಗೆ ಊಟ ಕೊಟ್ಟಿಲ್ಲ, ನೀರಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ನಾಲ್ವರು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹರಾಷ್ಟ್ರದಿಂದ ವಿಜಯಪುರದವರೆಗೂ ರೈಲಿನ ಮೂಲಕ ಬಂದಿದ್ದು, ವಿಜಯಪುರದಿಂದ ಕೊಪ್ಪಳಕ್ಕೆ ಬಸ್‍ನಲ್ಲಿ ಬಂದಿದ್ದಾರೆ. ಕೊರೊನಾ ಹಾಟ್‍ಸ್ಪಾಟ್ ಮಹಾರಾಷ್ಟ್ರದಿಂದ ಆಗಮಿಸಿದರೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಇದಕ್ಕೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    – ಶ್ರಮಿಕ್ ರೈಲು ಮೂಲಕ ಬಿಹಾರಿನತ್ತ 1,452 ವಲಸಿಗರು

    – ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟ ಜಿಲ್ಲಾಡಳಿತ

    – ಭಾವುಕರಾದ ವಲಸೆ ಕಾರ್ಮಿಕರು

    ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್‍ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು.

    ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ಬಸ್‍ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲದೆ ಅವರಿಗೆ ನೀಡಲಾದ ಟಿಕೆಟ್, ಹಿಂಬದಿ ಬರೆದಿದ್ದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ವ್ಯವಸ್ಥಿತವಾಗಿ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟರು.

    ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದುದ್ದೇಶದಿಂದ ಪ್ರತಿಯೊಬ್ಬರಿಗೂ ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.

    ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯವರು ಮಾಸ್ಕ್ ಗಳನ್ನು ವಿತರಿಸಿದರು. ಈ ಎಲ್ಲ ಆತಿಥ್ಯವನ್ನು ನೋಡಿದ ವಲಸೆ ಕಾರ್ಮಿಕರು ಭಾವುಕರಾಗಿ ಸಂತಸದಿಂದ ಸಿಬ್ಬಂದಿಯತ್ತ ಕೈ ಬೀಸಿದರು.

    ರೈಲು ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಈ ರೈಲು ಬಿಹಾರದ ಸಹಸ್ರಾಗೆ ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

    ಈಗ ಒಂದು ರೈಲು ಬಿಹಾರಕ್ಕೆ ತೆರಳುತ್ತಿದ್ದು, ಇನ್ನೂ ಹೆಚ್ಚಿನ ವಲಸಿಗರು ಬಿಹಾರಕ್ಕೆ ತೆರಳುವುದಾದರೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉತ್ತರ ಪ್ರದೇಶಕ್ಕೆ ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 10ಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ವಲಸಿಗರು ತೆರಳಲಿದ್ದಾರೆ. ಈಗಾಗಲೇ ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಟಿಕೆಟ್ ಸಹ ನೀಡಲಾಗಿದೆ ಎಂದು ವಿವರಿಸಿದರು.

  • ಸರ್ಕಾರದಿಂದ 5 ಸಾವಿರ ರೂ. ನೆರವು – ಯಾವ ಕಾಮಿರ್ಕರಿಗೆ ಅನ್ವಯ? ಯಾವ ದಾಖಲೆ? ಎಲ್ಲಿ ಸಲ್ಲಿಸಬೇಕು?

    ಸರ್ಕಾರದಿಂದ 5 ಸಾವಿರ ರೂ. ನೆರವು – ಯಾವ ಕಾಮಿರ್ಕರಿಗೆ ಅನ್ವಯ? ಯಾವ ದಾಖಲೆ? ಎಲ್ಲಿ ಸಲ್ಲಿಸಬೇಕು?

    ಮಡಿಕೇರಿ: ಲಾಕ್‍ಡೌನ್ ಸಮಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ಕಾರ್ಮಿಕರಿಗೆ ಧನ ಸಹಾಯ ಮಾಡಲು ಮುಂದಾಗಿದೆ.

    ಈಗ ಈ ಧನಸಹಾಯವನ್ನು ಪಡೆಯಲು ಕಾರ್ಮಿಕರು ಯಾವ ಮಾರ್ಗವನ್ನು ಅನುಸರಿಸಬೇಕು ಮತ್ತು ಸರ್ಕಾರದ ಈ ಹಣವನ್ನು ಪಡೆಯಲು ಯಾರು ಅರ್ಹರು ಎಂಬ ಮಾಹಿತಿಯನ್ನು ಮಡಿಕೇರಿ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಡಿಕೇರಿ ಜಿಲ್ಲಾಡಳಿತ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದೆ.

    ಕರ್ನಾಟಕ ಸರ್ಕಾರದ ಅದೇಶದನ್ವಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯವರ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕ ಫಲಾನುಭವಿಗಳ ಖಾತೆಗೆ ಒಂದು ಬಾರಿ ಮಾತ್ರ ಐದು ಸಾವಿರ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ.

    ಯಾರು ಅರ್ಹರು?
    ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಎಲ್ಲಾ ನೋಂದಾಯಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ.

    ಅರ್ಜಿ ಸಲ್ಲಿಕೆ ಹೇಗೆ?
    ಆಯಾ ತಾಲೂಕಿನ ಹಿರಿಯ ನಿರೀಕ್ಷಕರು ಅಥವಾ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

    ದಾಖಲೆ ಏನು ಬೇಕು?
    1. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರುವ ಬಗ್ಗೆ ಪಡೆದ ನೋಂದಾಯಿತ ಗುರುತಿನ ಚೀಟಿಯ ಪ್ರತಿ
    2. ಆಧಾರ್ ಕಾರ್ಡ್ ಪ್ರತಿ
    3. ಬ್ಯಾಂಕ್ ಅಕೌಂಟ್ ನಂಬರ್, ಐಎಫ್‍ಸಿ ಕೋಡ್, ಹೆಸರು, ವಿಳಾಸ ಇರುವ ಬ್ಯಾಂಕ್ ಪಾಸ್ ಪುಸ್ತಕದ ಸ್ಪಷ್ಟವಾದ ಪ್ರತಿ

  • ಸಕ್ಕರೆ ನಾಡನ್ನು ಬಿಡದ ಮುಂಬೈ ನಂಜು- 925 ಜನರ ವರದಿಗಾಗಿ ಕಾಯುತ್ತಿರೋ ಜಿಲ್ಲಾಡಳಿತ

    ಸಕ್ಕರೆ ನಾಡನ್ನು ಬಿಡದ ಮುಂಬೈ ನಂಜು- 925 ಜನರ ವರದಿಗಾಗಿ ಕಾಯುತ್ತಿರೋ ಜಿಲ್ಲಾಡಳಿತ

    ಮಂಡ್ಯ: ಸಕ್ಕರೆ ನಾಡು ಮಂಡ್ಯಗೆ ಮುಂಬೈ ಕೊರೊನಾ ನಂಜು ಬಿಟ್ಟು ಬಿಡದೆ ಕಾಡುತ್ತಿದೆ. ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 4 ಪ್ರಕರಣಗಳು ದೂರದ ಮಹಾರಾಷ್ಟ್ರದ ನಂಟನ್ನು ಹೊಂದಿವೆ.

    ಮುಂಬೈನಿಂದ ವಾಪಸ್ಸಾಗಿದ್ದ ನಾಲ್ವರಿಗೆ ಕೊರೊನಾ ದೃಢವಾಗಿದೆ. ಮಂಡ್ಯ ಜಿಲ್ಲೆಯ 36 ಸೋಂಕಿತರ ಪೈಕಿ ಮುಂಬೈನಿಂದ ವಾಪಸ್ ಆಗಿದ್ದ 15 ಮಂದಿಗೆ ಸೋಂಕು ತಗುಲಿದೆ. ಮುಂಬೈ ನಿಂದ ವಾಪಸ್ ಬಂದ ಕೆ.ಆರ್.ಪೇಟೆ ತಾಲೂಕಿನ 10 ಮಂದಿ, ಪಾಂಡವಪುರದ 3, ನಾಗಮಂಗಲದ ಒಬ್ಬ ಹಾಗೂ ಚನ್ನರಾಯಪಟ್ಟಣ ಮೂಲದ ಒಬ್ಬರಿಗೆ ಕೊರೊನಾ ಬಂದಿದೆ.

    ಕೆ.ಆರ್.ಪೇಟೆ ತಾಲೂಕಿಗೆ ಮುಂಬೈನಿಂದ ಹೆಚ್ಚು ಜನರು ವಾಪಸ್ ಬಂದಿದ್ದು, ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಿದ್ದವರು ಸೋಂಕು ಹೊತ್ತು ಜಿಲ್ಲೆಗೆ ವಾಪಸ್ ಆಗಿದ್ದಾರೆ. ಹೀಗಾಗಿ ಮುಂಬೈನಿಂದ ವಾಪಸ್ ಬರುತ್ತಿರುವವರು ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಹೊರ ರಾಜ್ಯದಿಂದ ಮಂಡ್ಯಕ್ಕೆ ಬರುವವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿದೆ. ಬಂದವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸಲಾಗುತ್ತಿದೆ. ಈ ಪೈಕಿ ಇನ್ನೂ 925 ಜನರ ಪರೀಕ್ಷಾ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಈ 925 ಪೈಕಿ ಮುಂಬೈನಿಂದ ವಾಪಸ್ಸಾಗಿರುವವರ ಸಂಖ್ಯೆ ಎಷ್ಟು ಅನ್ನೋದನ್ನು ಜಿಲ್ಲಾಡಳಿತ ಬಿಟ್ಟು ಕೊಟ್ಟಿಲ್ಲ.

  • ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಜೀವನಕ್ಕೆ ಬೇಕಾದ ಸೌಲಭ್ಯ ಕೊಡಿ – ಕಪ್ಪುಪಟ್ಟಿ ಧರಿಸಿ ಬಂದ ಕೊರೊನಾ ವಾರಿಯರ್ಸ್

    ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 560 ನೌಕರರು ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಕೊರೊನಾ ಕ್ವಾರಂಟೈನ್ ಕೇಂದ್ರಗಳಲ್ಲಿ ಇವರ ಸೇವೆ ಅತ್ಯಗತ್ಯವಾಗಿದೆ.

    ಹೀಗಿದ್ದರೂ ಈ ನೌಕರರ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿಫಲವಾಗಿದೆ. ಈ ನೌಕರರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಕೇಂದ್ರ ಸರ್ಕಾರದ ಆರೋಗ್ಯ ಸಿಬ್ಬಂದಿಗೆ ನೀಡಿರುವ ಯೋಜನೆಗಳು ಮತ್ತು ಸೌಲಭ್ಯಗಳು ಈ ವರ್ಗದ ನೌಕರರಿಗೆ ಅನ್ವಯವಾಗುವುದಿಲ್ಲ ಎಂಬುವುದು ಈ ನೌಕರರ ಆರೋಪವಾಗಿದೆ. ಹೀಗಾಗಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ಎಲ್ಲರಿಗೂ ಒಂದೇ ಕುಡಿಯುವ ನೀರಿನ ಪಾತ್ರೆ

    ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ಎಲ್ಲರಿಗೂ ಒಂದೇ ಕುಡಿಯುವ ನೀರಿನ ಪಾತ್ರೆ

    – ಜಿಲ್ಲಾಡಳಿತದ ಸಂಪೂರ್ಣ ನಿರ್ಲಕ್ಷ್ಯ

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಡಳಿತದ ಮತ್ತೊಂದು ನಿರ್ಲಕ್ಷ್ಯ ಬಯಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಕನಿಷ್ಠ ಸೌಲಭ್ಯವನ್ನೂ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕ್ವಾರಂಟೈನ್‍ನಲ್ಲಿರುವವರು ಪರದಾಡುವಂತಾಗಿದೆ.

    ನಗರದ ಕಲಾ ಕಾಲೇಜು ಸಮೀಪದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯಿಂದ ಕೂಡಿದ್ದು, ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿ ವಿಡಿಯೋ ಮೂಲಕ ಅನಾವರಣಗೊಳಿಸಿದ್ದಾರೆ. ಮಲಗಲು ಹಾಸಿಗೆ ಇಲ್ಲ, ಊಟ ಸರಿ ಇಲ್ಲ, ಎಲ್ಲರಿಗೂ ಒಂದೇ ಶೌಚಾಲಯ, ಕುಡಿಯುವ ನೀರಿನ ಪಾತ್ರೆ ಕೂಡ ಒಂದೆಯಾಗಿದ್ದು, ಇದರಿಂದಾಗಿ ಕ್ವಾರಂಟೈನಲ್ಲಿರುವವರು ಭಯದಲ್ಲೇ ಬದುಕುತ್ತಿದ್ದಾರೆ. ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರೆ ಇತರರಿಗೂ ಹರಡುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸೊಳ್ಳೆಗಳ ಕಾಟಕ್ಕೆ ಕ್ವಾರಂಟೈನ್ ಕೇಂದ್ರದಲ್ಲಿರುವ ಬೇರೆ ಜಿಲ್ಲೆಯವರು ನಲುಗಿ ಹೋಗಿದ್ದು, ರಾಜ್ಯದ ವಿವಿಧೆಡೆಗಳಿಂದ ಬಂದಿರುವ 15ಕ್ಕೂ ಹೆಚ್ಚು ಜನರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿವಿಧೆಡೆಗಳಿಂದ ಬಂದವರನ್ನು ಒಂದೇ ಕಡೆ ಕೂಡಿ ಹಾಕಿದ್ದು, ಸರಿಯಾದ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಇದರಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ಹರಡುತ್ತದೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ನಮಗೆ ಕರೊನಾ ಇಲ್ಲ, ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೆ ಈ ಅವ್ಯವಸ್ಥೆಯಿಂದಾಗಿ ಬೇರೆಯವರಿಂದ ನಮಗೆ ಸೋಂಕು ಆವರಿಸುವ ಭೀತಿ ಎದುರಾಗಿದೆ. ನಮಗೆ ಕರೊನಾ ಸೋಂಕು ತಗುಲಿದರೆ ಜಿಲ್ಲಾಡಳಿತ, ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಮ್ಮನ್ನು ಬೇರೆಡೆ ಸ್ಥಳಾಂತರಿಸಿ ಎಂದು ಯುವಕ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.

  • ಶಿವಮೊಗ್ಗಕ್ಕೆ ತಬ್ಲಿಘಿಗಳ ಎಂಟ್ರಿ – ಮಲೆನಾಡಿಗರನ್ನು ಆವರಿಸಿಕೊಂಡ ಕೊರೊನಾ ಭೀತಿ

    ಶಿವಮೊಗ್ಗಕ್ಕೆ ತಬ್ಲಿಘಿಗಳ ಎಂಟ್ರಿ – ಮಲೆನಾಡಿಗರನ್ನು ಆವರಿಸಿಕೊಂಡ ಕೊರೊನಾ ಭೀತಿ

    ಶಿವಮೊಗ್ಗ: ಗ್ರೀನ್ ಝೋನ್‍ನಲ್ಲಿದ್ದ ಚಿತ್ರದುರ್ಗ ಜಿಲ್ಲೆ ತಬ್ಲಿಘಿಗಳ ಎಂಟ್ರಿಯಿಂದ ರೆಡ್ ಝೋನ್‍ಗೆ ಬಂದಿದ್ದು, ಇದೇ ಹಾದಿಯಲ್ಲೀಗ ಶಿವಮೊಗ್ಗ ಇದೆ ಎನಿಸುತ್ತಿದೆ. ಯಾಕಂದ್ರೆ ಇದೀಗ ಶಿವಮೊಗ್ಗಕ್ಕೆ ತಬ್ಲಿಘಿಗಳ ಎಂಟ್ರಿಯಾಗಿದ್ದು, ಮಲೆನಾಡಿಗರಲ್ಲಿ ಕೊರೊನಾ ಭೀತಿ ಹೆಚ್ಚಿಸಿದೆ.

    ಜಿಲ್ಲೆಯ ಶಿಕಾರಿಪುರ ಮೂಲದ 8 ಮತ್ತು ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್‍ನ ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದು, ಇದು ಮಲೆನಾಡಿಗರಲ್ಲಿ ಭೀತಿ ಹೆಚ್ಚಿಸಿದೆ. ಮಾರ್ಚ್ 5ರಂದು ಗುಜರಾತ್‍ನ ಅಹಮದಾಬಾದ್‍ಗೆ ದಾವಣಗೆರೆಯಿಂದ ರೈಲಿನ ಮೂಲಕ ಜಿಲ್ಲೆಯ 9 ಜನರು ತೆರಳಿದ್ದರು. ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ ಲಾಕ್‍ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್‍ನಲ್ಲಿ ಕೂಡ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶುಕ್ರವಾರ ರಾತ್ರಿ ಈ ತಬ್ಲಿಘಿಗಳು ಮುಂಬೈ, ಬೆಳಗಾವಿ ಮೂಲಕ ಇದೀಗ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದಾರೆ. ಇವರೆಲ್ಲರನ್ನೂ ಪ್ರಾಥಮಿಕ ಹಂತದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಲಾಗಿದೆ.

    ಕಳೆದ 50 ದಿನಗಳಿಂದ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ದಿನದ 24 ಗಂಟೆಯೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ, ರಾತ್ರಿ-ಹಗಲು ಕೊರೊನಾ ನಿಯಂತ್ರಣ ಮಾಡುವಲ್ಲಿ ಹಾಗೂ ಜಿಲ್ಲೆಗೆ ಕೊರೊನಾ ಹರಡದಂತೆ ಶ್ರಮಿಸುತ್ತಿದ್ದಾರೆ. ಅದರೊಂದಿಗೆ ಎಲ್ಲಾ ತಹಶೀಲ್ದಾರ್ ಗಳು, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು, ಗ್ರಾಮ ಪಂಚಾಯ್ತಿ ನೌಕರರು, ಆರೋಗ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ, ನಗರಸಭೆ, ಪಟ್ಟಣ ಪಂಚಾಯ್ತಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗದ ಹಿನ್ನೆಲೆ ಜಿಲ್ಲೆ ಹಸಿರು ಪಟ್ಟಿಯಲ್ಲಿದೆ. ಆದರೆ ಜನರ ಜಿಲ್ಲಾಡಳಿತಕ್ಕೆ ಸಹಕಾರ ನೀಡದೇ, ವಿನಾಕಾರಣ ತಿರುಗಾಟದಿಂದಾಗಿ ಇದೀಗ ಕೊರೊನಾ ನಿಯಂತ್ರಣ ಕೈತಪ್ಪಿ ಹೋಗುವ ಎಲ್ಲಾ ಸಾಧ್ಯತೆ ಕಾಣಿಸುತ್ತಿದೆ.

    ಅಲ್ಲದೇ ಈಗಾಗಲೇ ಬೇರೆ ಜಿಲ್ಲೆ-ರಾಜ್ಯದಿಂದ ನೂರಾರು ವಾಹನಗಳು ಶಿವಮೊಗ್ಗ ಜಿಲ್ಲೆಯೆಲ್ಲೆಡೆ ಓಡಾಡತೊಡಗಿದ್ದು, ಇದು ಸ್ಥಳೀಯರಲ್ಲಿ ಭಯ ಹೆಚ್ಚಾಗುವಂತೆ ಮಾಡಿದೆ. ಇದೆಲ್ಲದರ ಜೊತೆಯಲ್ಲಿ ಸುಳ್ಳು ಸುದ್ದಿಗಳನ್ನು ಒಂದು ವರ್ಗ ಹಬ್ಬಿಸುತ್ತಿದ್ದು, ಇದು ಕೂಡ ಭಯದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಜನರು ಸಹ ಎಂದೂ ತರಕಾರಿ-ಹಣ್ಣುಗಳನ್ನು ನೋಡಿಯೇ ಇಲ್ಲವೆಂಬ ರೀತಿಯಲ್ಲಿ ಖರೀದಿಗೆ ಮುಗಿ ಬಿದ್ದಿರುವುದನ್ನ ಗಮನಿಸಿದರೆ ಜಿಲ್ಲೆ ಹಸಿರು ಹೋಗಿ ಕೆಂಪು ಪಟ್ಟಿಗೆ ಬರುವ ಸಾಧ್ಯತೆ ಹೆಚ್ಚಿದೆ. ಈ ಪರಿಸ್ಥಿತಿ ಕೈ ಮೀರಿ ಹೋದರೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳು, ಕಳೆದ ಒಂದೂವರೆ ತಿಂಗಳಿನಿಂದ ಪಟ್ಟ ಶ್ರಮ ವ್ಯರ್ಥವಾಗಲಿದ್ದು, ಜನರು ಈ ಬಗ್ಗೆ ಯೋಚಿಸಿ ಜಿಲ್ಲಾಡಳಿತಕ್ಕೆ ಸಹಕರಿಸಿ, ವಿನಾಕಾರಣ ಓಡಾಡದೆ ಜಾಗೃತಿವಹಿಸಬೇಕಿದೆ.

  • ದಾವಣಗೆರೆಗೆ ಹೋಗಿ ಕೊರೊನಾ ಹೊತ್ತು ತಂದ ಸಂಡೂರಿನ ಮಹಿಳೆ

    ದಾವಣಗೆರೆಗೆ ಹೋಗಿ ಕೊರೊನಾ ಹೊತ್ತು ತಂದ ಸಂಡೂರಿನ ಮಹಿಳೆ

    – ಟ್ರಾವೆಲ್ ಹಿಸ್ಟರಿಗಾಗಿ ತಲೆ ಕೆಡಿಸಿಕೊಂಡ ಆರೋಗ್ಯ ಇಲಾಖೆ

    ಬಳ್ಳಾರಿ: ಜಿಲ್ಲೆಯ ನೆರೆಯ ದಾವಣಗೆರೆ ಜಿಲ್ಲೆಗೆ ಹೋಗಿ ಬಂದ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ 37 ವರ್ಷದ ಮಹಿಳೆಯೋರ್ವಳು ಮಹಾಮಾರಿ ಕೊರೊನಾ ವೈರಸ್ ಅನ್ನು ಹೊತ್ತು ತಂದಿದ್ದಾರೆ.

    ದಾವಣಗೆರೆಯಲ್ಲಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಂಡೂರು ತಾಲೂಕಿನ ಕೃಷ್ಣಾನಗರದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ, ಬಳ್ಳಾರಿ ತಾಲೂಕುಗಳಿಗಷ್ಟೇ ಸೀಮಿತವಾಗಿದ್ದ ಮಹಾಮಾರಿ ಕೊರೊನಾ ಸಂಡೂರು ತಾಲೂಕಿಗೂ ಲಗ್ಗೆಯಿಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೂ 15 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿದೆ. ಇವುಗಳ ಪೈಕಿ 11 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

    ಈ ಮಹಿಳೆ ಕ್ವಾರಂಟೈನ್‍ನಲ್ಲಿ ಇರಲಿಲ್ಲ. ಪಕ್ಕದ ದಾವಣಗೆರೆ ಜಿಲ್ಲೆಗೆ ತೆರಳಿದ್ದ ಈ ಮಹಿಳೆ ವಿಳಾಸ ಪಡೆದ ಜಿಲ್ಲಾಡಳಿತ, ಆ ಮಹಿಳೆಯಲ್ಲಿ ಕೆಮ್ಮು- ನೆಗಡಿ, ಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಸಂಡೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‍ಗೆ ರವಾನೆ ಮಾಡಲಾಗಿತ್ತು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಲ್ಯಾಬ್ ನಲ್ಲಿ ಈ ಮಹಿಳೆಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ ಎಂದು ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಕೊರೊನಾ ಪಾಸಿಟಿವ್ ವರದಿ ಬಂದ ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಆ ಮಹಿಳೆಯನ್ನ ರವಾನೆ ಮಾಡಲಾಗಿದೆ. ಈ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿರೋದಕ್ಕೆ ಟ್ರಾವೆಲ್ ಹಿಸ್ಟರಿ ಇಲ್ಲ. ಟ್ರಾವೆಲ್ ಹಿಸ್ಟರಿ ಇಲ್ಲದೇ ಮಹಾಮಾರಿ ಕೊರೊನಾ ಸೋಂಕು ದೃಢವಾಗಿರುವುದಕ್ಕೆ ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಟ್ರಾವೆಲ್ ಹಿಸ್ಟರಿ ಪತ್ತೆ ಹೆಚ್ಚುತ್ತಿರುವ ಜಿಲ್ಲಾಡಳಿತ, ಮಹಿಳೆಯ ಕುಟುಂಬಸ್ಥರನ್ನ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದವವರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಆದರೆ ಸೋಂಕಿತ ಮಹಿಳೆ ಮಾತ್ರ ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತಿಲ್ಲ ಎಂಬ ಮಾಹಿತಿಯು ಮೂಲಗಳಿಂದ ಲಭ್ಯವಾಗಿದೆ.

  • ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿ: ಗ್ರೀನ್ ಝೋನ್‍ನಲ್ಲಿ ಉಡುಪಿ ಜಿಲ್ಲೆ ಇದ್ದರೂ ಮದ್ಯದಂಗಡಿಗೆ ಬ್ರೇಕ್ ಹಾಕಲಾಗಿದೆ. ಉಡುಪಿಯಲ್ಲಿ ಮದ್ಯಕ್ಕೂ ಮಧ್ಯಾಹ್ನದ ಲಗಾಮು ಹಾಕಲಾಗಿದೆ.

    ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ನಿಯಮದ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ ಏಳರವರೆಗೆ ಎಣ್ಣೆ ಶಾಪ್‍ಗಳು ತೆರೆದಿರಬೇಕು. ಆದರೆ ಉಡುಪಿಯಲ್ಲಿ ಮಧ್ಯಾಹ್ನ ಒಂದಕ್ಕೆ ಸೀಮಿತ ಮಾಡಲಾಗಿದೆ. ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಸುಳಿವು ನೀಡಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ. ವೈನ್ ಶಾಪ್ ಎಂಎಸ್‍ಐಎಲ್‍ಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯುತ್ತೇವೆ. ನಮ್ಮ ಜಿಲ್ಲೆಗೆ ವೈನ್ ಶಾಪ್ ಮದ್ಯದಂಗಡಿ ಮುಖ್ಯ ಅಲ್ಲ. ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ. ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳನ್ನು ಒಂದು ವಾರ ಓಪನ್ ಮಾಡುವುದಿಲ್ಲ. ಸಲೂನ್ ಪಾರ್ಲರ್ ತೆರೆಯಲು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿವೆ ಎಂದು ತಿಳಿಸಿದರು.

    ಕೇಂದ್ರದ ನಿರ್ದೇಶನ ಇದ್ದರೂ, ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಲಾಕ್‍ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ. ರಾಜ್ಯ ಸರ್ಕಾರ ಹೇಳಿದರೂ ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದು ರಘುಪತಿ ಭಟ್ ಹೇಳಿದರು.

    ಅಗತ್ಯ ವಸ್ತುಗಳಿಗೆ ಒಂದು ಗಂಟೆಯೊಳಗೆ ವಿನಾಯಿತಿ ಕೊಟ್ಟು ಮದ್ಯದಂಗಡಿಯನ್ನು ಸಂಜೆಯವರೆಗೆ ತೆರೆಯುವುದು ಸರಿಯಲ್ಲ ಎಂಬ ಚರ್ಚೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನ ಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

  • ಹಸಿರು ವಲಯದಲ್ಲಿದ್ದ ದಾವಣಗೆರೆ ಕೆಂಪು ವಲಯದತ್ತ ಹೆಜ್ಜೆ..!

    ಹಸಿರು ವಲಯದಲ್ಲಿದ್ದ ದಾವಣಗೆರೆ ಕೆಂಪು ವಲಯದತ್ತ ಹೆಜ್ಜೆ..!

    ದಾವಣಗೆರೆ: ಕಳೆದ ಮೂವತ್ತು ದಿನಗಳಿಂದ ಒಂದೇ ಒಂದು ಪಾಸಿಟಿವ್ ಪ್ರಕರಣಗಳು ಇಲ್ಲದ ದಾವಣಗೆರೆಯನ್ನು ಹಸಿರು ವಲಯಕ್ಕೆ ಸೇರಿಸಲಾಗಿತ್ತು. ಆದರೆ ಈಗ ಹಸಿರು ಝೋನ್ ನಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದಾವಣಗೆರೆ ಡೇಂಜರ್ ಝೋನ್‍ಗೆ ಒಳಪಟ್ಟಿದೆ. ಕಳೆದ 30 ದಿನಗಳಿಂದಲೂ ಯಾವುದೇ ಸೋಂಕಿತರು ಪತ್ತೆಯಾಗದ ಕಾರಣ ದಾವಣಗೆರೆ ಹಸಿರುವಲಯಕ್ಕೆ ಸೇರ್ಪಟ್ಟಿತ್ತು. ಆದರೆ ನಿನ್ನೆ ಹಾಗೂ ಇಂದು 2 ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಳದಿ ವಲಯಕ್ಕೆ ಸೇರ್ಪಡೆಯಾಗಿದೆ.

    ನಿನ್ನೆ ನಗರದ ಭಾಷಾನಗರದಲ್ಲಿ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು. ಭಾಷಾನಗರ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಅಲ್ಲದೇ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನರನ್ನು ಪ್ರತೇಯಕ ಹೋಟೆಲ್ ಒಂದರಲ್ಲಿ ಐಸೋಲೇಷನ್‍ನಲ್ಲಿ ಮಾಡಲಾಗಿದೆ. 2ನೇ ಹಂತದ ಸಂಪರ್ಕದಲ್ಲಿದ್ದ 45 ಜನರನ್ನು ಪತ್ತೆ ಮಾಡಲಾಗಿದ್ದು, ಈಗಾಗಲೇ ಒಟ್ಟು 56 ಜನರ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇವರು ಕೆಲಸ ಮಾಡುತ್ತಿದ್ದ ನಗರ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.

    ಇಂದು ಬೆಳಗ್ಗೆ ದಾವಣಗೆರೆಯ ಜಾಲಿನಗರದ ನಿವಾಸಿಯೊಬ್ಬರಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏಪ್ರೀಲ್ 27 ರಂದು ದಾಖಲಾಗಿದ್ದರು. ಕೋವಿಡ್ ವಾರ್ಡ್‍ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ರವಾನೆ ಮಾಡಲಾಗಿತ್ತು. ಇಂದು ವರದಿ ಲಭ್ಯವಾಗಿದ್ದು ವೃದ್ಧನಿಗೆ ಸೋಂಕು ಇರುವುದು ಖಚಿತವಾಗಿದೆ. ವೃದ್ಧನ ಟ್ರಾವಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಶೋಧ ನಡೆಸಿದೆ. ವೃದ್ಧನ ಸಂಪರ್ಕದಲ್ಲಿದ್ದ ಕುಟುಂಬದ ಒಂದೂವರೆ ವರ್ಷದ ಒಂದು ಮಗು ಹಾಗೂ ಮೂರು ವರ್ಷದ ಇನ್ನೊಂದು ಮಗು ಸೇರಿ ಒಂಬತ್ತು ಜನರನ್ನ  ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್‍ಗೆ ರವಾನೆ ಮಾಡಲಾಗಿದೆ.

    ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು 2 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದೆ. ಸೋಂಕಿತರಿಬ್ಬರ ಮಾಹಿತಿ ಪಡೆಯಲಾಗಿದ್ದು ಬಾಷಾನಗರ ಹಾಗೂ ಜಾಲಿನಗರ ಎರಡನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಸೋಂಕು ಪತ್ತೆಯಾದ ಸ್ಟಾಫ್ ನರ್ಸ್ ಪ್ರಕರಣಕ್ಕೂ ಈಗ ಪತ್ತೆಯಾದ ವೃದ್ಧನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರ ಟ್ರಾವೆಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಇಬ್ಬರ ಟ್ರಾವೆಲ್ ಹಿಸ್ಟರಿ ಕಲೆ ಹಾಕುವುದು ಸಾಕಷ್ಟು ಸವಾಲಾಗಿರುವ ಹಿನ್ನೆಲೆ ಯಾರಿಂದ ಇವರಿಗೆ ಸೋಂಕು ತಗಲಿದೆ ಎನ್ನುವುದನ್ನು ಪತ್ತೆ ಮಾಡಬೇಕಿದೆ.