Tag: District Administration

  • 10 ದಿನ ಕಳೆದ್ರೂ ಬಾರದ ವರದಿ –  ಜಿಲ್ಲಾಡಳಿತದ ವಿರುದ್ಧ ಆಕ್ರೋಶ

    10 ದಿನ ಕಳೆದ್ರೂ ಬಾರದ ವರದಿ – ಜಿಲ್ಲಾಡಳಿತದ ವಿರುದ್ಧ ಆಕ್ರೋಶ

    ಹಾವೇರಿ: ಸಾಂಸ್ಥಿಕ ಕ್ವಾರಂಟೈನ್ ಆಗಿದ್ದವರ ವರದಿ ಎಂಟು ಹತ್ತು ದಿನಗಳು ಕಳೆದರೂ ಬಾರದ ಹಿನ್ನೆಲೆ ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದೂದೀಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೊರ ರಾಜ್ಯಗಳಿಂದ ಬಂದ 60ಕ್ಕೂ ಹೆಚ್ಚಿನ ಜನರನ್ನು ಸರ್ಕಾರದ ಆದೇಶದಂತೆ ಸರ್ಕಾರಿ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯ ಜನರು ಸರಿಯಾಗಿ ಊಟವೂ ಸಿಗದೆ ಇತ್ತು ಕೊರೊನಾ ವರದಿಯೂ ಬಾರದೆ, ಮನೆಗೂ ಹೋಗಲಾಗದೆ ಪರದಾಟ ಅನುಭವಿಸುತ್ತಿದ್ದೇವೆ ಎಂದು ಜನರು ಕಿಡಿಕಾರಿದ್ದಾರೆ.

    ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರ ಸೂಕ್ತವಾದ ಸ್ಪಂದನೆ ಸಿಗದೆ ಪರದಾಡುತ್ತಿದ್ದೇವೆ. ಸರಿಯಾಗಿ ಊಟ ತಿಂಡಿ ಕೊಡಿ, ನಮ್ಮ ವರದಿ ಏನಾಗಿವೆ ಎಂದು ಹೇಳಿ ನಮ್ಮನ್ನು ಬಿಡುಗಡೆ ಮಾಡಿ ಎಂದು ಕ್ವಾರಂಟೈನ್ ಆಗಿರೋ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ವ್ಯಾಬ್ ರಿಪೋರ್ಟ್ ಬೇಗ ತರಿಸಿಕೊಂಡು ನಮ್ಮನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

  • ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಸಂಚಾರ ಬಂದ್

    ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಸಂಚಾರ ಬಂದ್

    ಚಿಕ್ಕಮಗಳೂರು: ಕಳೆದ ಬಾರಿ ತಿಂಗಳುಗಟ್ಟಲೇ ಬಂದ್ ಆಗಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶಿಸಿದ್ದಾರೆ.

    ಕಳೆದ ಬಾರಿ ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‍ನ ಹಲವೆಡೆ ಬೆಟ್ಟ-ಗುಡ್ಡಗಳು ಕುಸಿದಿದ್ದವು. ತಿಂಗಳುಗಟ್ಟಲೇ ಚಾರ್ಮಾಡಿ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಕುಸಿದಿದ್ದ ಬೆಟ್ಟಗುಡ್ಡಗಳ ಮಣ್ಣನ್ನು ತೆಗೆಯಲು ಮೂರ್ನಾಲ್ಕು ಜೆಸಿಬಿಗಳು ತಿಂಗಳುಗಟ್ಟಲೇ ಕೆಲಸ ಮಾಡಿದ್ದವು. ಅಷ್ಟೆ ಅಲ್ಲದೆ ರಸ್ತೆ ಕೂಡ ಕುಸಿದಿದ್ದು ಮತ್ತೆ ಸಂಚಾರ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿತ್ತು.

    ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾತ್ಕಾಲಿಕವಾಗಿ ಲಘು ವಾಹನಗಳು ಸಂಚರಿಸುವಂತೆ ದುರಸ್ಥಿ ಮಾಡಿತ್ತು. ತದನಂತರ ಎಲ್ಲ ರೀತಿಯ ವಾಹನಗಳು ಓಡಾಟ ಮುಂದುವರಿಸಿದ್ದವು. ಈ ವರ್ಷವೂ ಕಳೆದೊಂದು ವಾರದಿಂದ ಚಾರ್ಮಾಡಿ ಭಾಗದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲಾಡಳಿತ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಚಾರ್ಮಾಡಿ ಘಾಟಿಯಲ್ಲಿ ಮುಂದಿನ ಆದೇಶದವರೆಗೆ ಯಾವುದೇ ರೀತಿ ವಾಹನಗಳು ಸಂಚರಿಸುವಂತಿಲ್ಲ ಎಂದು ಆದೇಶಿಸಿದೆ.

    ಯಾಕಂದರೆ ಇಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಬೆಟ್ಟಗುಡ್ಡಗಳು ತೀವ್ರ ತೇವಾಂಶದಿಂದ ಕೂಡಿದ್ದು, ಮತ್ತೆ ಕುಸಿಯುವ ಸಾಧ್ಯತೆ ಇದೆ. ಹಾಗಾಗಿ ಪ್ರವಾಸಿಗರು ಹಾಗೂ ಜನಸಾಮಾನ್ಯರ ಹಿತದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ಈ ಆದೇಶ ಜಾರಿಗೆ ತಂದಿದೆ. ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಮಂಜು ಸುರಿಯುತ್ತಿದ್ದು, ರಸ್ತೆಗಳಿಗೆ ತಾತ್ಕಾಲಿಕ ತಡೆಗೋಡೆಗಳನ್ನು ನಿರ್ಮಿಸಿದ್ದು, ರಾತ್ರಿ ವೇಳೆ ಸಂಚಾರ ಸೂಕ್ತವಲ್ಲ ಎಂದು ಜಿಲ್ಲಾಡಳಿತ ಸಂಚಾರ ನಿಷೇಧಿಸಿದೆ.

  • ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ

    ಹಾವೇರಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಅದರೆ ಇಷ್ಟೆಲ್ಲ ಭಯ ಇದ್ದರೂ ಬಫರ್ ಝೋನ್‍ನಲ್ಲಿ ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ.

    ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಬಫರ್ ಝೋನ್‍ನಲ್ಲಿ ಎಗ್ಗಿಲ್ಲದೆ ಮಟನ್ ಮಾರಾಟ ಮಾಡಲಾಗಿದೆ. ಹಾನಗಲ್ ತಾಲೂಕಿನಲ್ಲಿ 30 ಪ್ರಕರಣಗಳು ಪತ್ತೆಯಾಗಿದ್ದು, ಇಷ್ಟಾದರೂ ಜನ ಎಚ್ಚೆತ್ತುಕೊಂಡಿಲ್ಲ. ಮಾತ್ರವಲ್ಲದೆ ಇದೇ ಗ್ರಾಮದ ಕೆಸಳಗಿನ ಓಣಿಯಲ್ಲಿ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಈಗಾಗಲೇ ಸೀಲ್‍ಡೌನ್ ಮಾಡಲಾಗಿದ್ದು, ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಗುರುತಿಸಿದೆ.

    ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದು ಭರ್ಜರಿಯಾಗಿ ಮಟನ್ ಮಾರಾಟ ಮಾಡಲಾಗಿದೆ. ಮಟನ್ ಮಾರಾಟ ಬಂದ್ ಮಾಡುವಂತೆ ಸ್ಥಳೀಯರು ಹೇಳಿದ್ದಾರೆ. ಇಷ್ಟಾದರೂ ಕೇಳದ ಅಂಗಡಿ ಮಾಲೀಕ ಸ್ಥಳೀಯರ ಜೊತೆ ಜಟಾಪಟಿ ನಡೆಸಿದ್ದಾನೆ. ಮಟನ್ ಮಾರಾಟ ಬಂದ್ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

  • ಕೊರೊನಾಗೆ ಮೃತಪಟ್ಟವರ ಗೌರವಯುತ ಸಂಸ್ಕಾರಕ್ಕೆ ಮುಂದಾಗಿರೋ ಸ್ವಯಂ ಸೇವಕರು!

    ಕೊರೊನಾಗೆ ಮೃತಪಟ್ಟವರ ಗೌರವಯುತ ಸಂಸ್ಕಾರಕ್ಕೆ ಮುಂದಾಗಿರೋ ಸ್ವಯಂ ಸೇವಕರು!

    ಮಡಿಕೇರಿ: ಕೊರೊನಾ ಮಹಾಮಾರಿಗೆ ಮೃತಪಟ್ಟರೆಂದರೆ ಮುಗಿಯಿತು. ಅಂತ ಸಾವನ್ನು ಅತ್ಯಂತ ಕೀಳಾಗಿ ನೋಡಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಸಂದರ್ಭ ನಡೆದುಕೊಂಡ ರೀತಿ ಅದನ್ನು ಸಾಬೀತು ಪಡಿಸಿವೆ. ಹೀಗಾಗಿ ಎಂತಹದ್ದೇ ಸಾವಿಗೂ ಗೌರವಯುವಾದ ಅಂತ್ಯ ಸಂಸ್ಕಾರವನ್ನು ಮಾಡಬೇಕೆಂಬ ದೃಷ್ಟಿಯಿಂದ ಕೊಡಗಿನ ಸ್ವಯಂ ಸೇವಕರ ತಂಡಗಳು ಸಿದ್ಧವಾಗಿವೆ.

    ಕೊರೊನಾ ಡೆಡ್ಲಿ ವೈರಸ್ ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಮೂರು ಧರ್ಮಗಳ ಸ್ವಯಂ ಸೇವಕರ ತಂಡಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮುಂದೆ ಬಂದಿವೆ. ಎಸ್‍ಡಿಪಿಐನ 30 ಯುವಕರ ತಂಡ ಜಿಲ್ಲಾಡಳಿತದಿಂದ ಈಗಾಗಲೇ ತರಬೇತಿ ಪಡೆದಿದೆ. ಹೀಗೆ ತರಬೇತಿ ಪಡೆದಿರುವ ಎಸ್‍ಡಿಪಿಐನ ಸ್ವಯಂ ಸೇವಕರ ತಂಡ ಭಾನುವಾರಷ್ಟೇ ಮೃತಪಟ್ಟ ಕುಶಾಲನಗರದ 58 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಿದೆ. ಸರ್ಕಾರದ ಮಾರ್ಗ ಸೂಚಿಯನ್ವಯ ಎಲ್ಲವನ್ನೂ ಅನುಸರಿಸಿರುವ ಸ್ವಯಂ ಸೇವಕರ ತಂಡ ಪಿಪಿಇ ಕಿಟ್ ಗಳನ್ನು ಧರಿಸಿ ಸಂಪ್ರದಾಯದಂತೆ ಶವಸಂಸ್ಕಾರ ಮಾಡಿದೆ.

    ಮಡಿಕೇರಿಯ ಎಲ್ಲಾ ಜಮಾತ್‍ಗಳು ಇದಕ್ಕಾಗಿ ಮಡಿಕೇರಿಯ ರಾಣಿಪೇಟೆಯಲ್ಲಿರುವ ಖಬರಸ್ಥಾನದಲ್ಲಿ ಒಂದು ಎಕರೆಯಷ್ಟು ಜಾಗವನ್ನು ಕೋವಿಡ್ 19 ವೈರಸ್ ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಬಿಟ್ಟುಕೊಟ್ಟಿವೆ.

    ವಿಶ್ವ ಹಿಂದೂ ಪರಿಷತ್, ಭಜರಂಗದಳದ 45 ಯುವಕರ ತಂಡವೂ ಕೋವಿಡ್ 19 ನಿಂದ ಮೃತಪಟ್ಟರೆ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ಮಾಡಲು ಸಿದ್ಧವಾಗಿದೆ. ನಮಗೂ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಇನ್ನು ಸೇವಾ ಭಾರತಿಯಿಂದಲೂ ಸ್ವಯಂ ಸೇವಕರ ತಂಡವು ಕೊರೊನಾಕ್ಕೆ ಬಲಿಯಾಗುವವರ ಶವಸಂಸ್ಕಾರ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಸಮುದಾಯದ ಸ್ವಯಂ ಸೇವಕರು ಕೂಡ ತಮ್ಮ ಸಂಪ್ರದಾಯದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ. ಹೀಗಾಗಿ ನಮಗೂ ತರಬೇತಿ ಬೇಕು ಎಂದಿದ್ದಾರೆ.

    ಜಿಲ್ಲಾಡಳಿತ ಕೂಡ ತರಬೇತಿ ನೀಡುತ್ತಿದ್ದು, ಸಂಸ್ಕಾರ ಮಾಡಲು ಸಿಬ್ಬಂದಿ ಕೊರತೆ ಇಲ್ಲ. ಆದರೆ ಸಮುದಾಯದವರು ಮುಂದೆ ಬಂದಾಗ ಸಂಸ್ಕಾರಕ್ಕೊಂದು ಅರ್ಥ ಸಿಗುತ್ತದೆ. ಹೀಗಾಗಿ ತರಬೇತಿ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಮೂರು ತಾಲೂಕುಗಳಲ್ಲೂ ಶವ ಸಂಸ್ಕಾರಕ್ಕೆ ಜಾಗ ಮೀಸಲಿರಿಸಲಾಗಿದೆ ಎಂದಿದ್ದಾರೆ.

  • ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ

    ಚಿಕ್ಕಮಗಳೂರು: ದಿನೇ ದಿನೇ ಕೊರೊನಾ ಆತಂಕ ಹೆಚ್ಚುತ್ತಿದ್ದರೂ, ಇದಾವುದನ್ನೂ ಲೆಕ್ಕಿಸದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಚಿಕ್ಕಮಗಳೂರು ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

    ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲದ ಚಿಕ್ಕಮಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ 70ರ ಗಡಿ ಮುಟ್ಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರುವ ಬಹುತೇಕರಲ್ಲಿ ಕೊರೊನಾ ಸೋಂಕು ದೃಢವಾಗುತ್ತಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಪ್ರತಿ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎಗ್ಗಿಲ್ಲದೆ ಪ್ರವಾಸಿಗರು ಬರುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಸಿಗರು ಜಿಲ್ಲೆಗೆ ಬರದಂತೆ ಸರ್ಕಾರ ಎಚ್ಚರ ವಹಿಸಬೇಕೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಹ ಮಾಡಿದ್ದರು.

    ಜೂನ್ 28ರ ಭಾನುವಾರ ಒಂದೇ ದಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಸಾವಿರಾರು ಪ್ರವಾಸಿಗರು ಬಂದಿದ್ದರು. ನೂರಾರು ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಇದರಿಂದ ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದರು. ಅಲ್ಲದೆ ಕೊರೊನಾ ಕುರಿತು ಅರಿವಿದ್ದೂ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಹಾಕುವುದನ್ನು ಮರೆತು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದರು. ಹೀಗಾಗಿ ಸ್ಥಳೀಯರು ಭಯಭೀತರಾಗಿದ್ದರು.

    ಈ ಮಧ್ಯೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಬಂದ ಪ್ರವಾಸಿಗರು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವುದನ್ನು ಕಂಡ ಸ್ಥಳಿಯರು, ತಿಳಿ ಹೇಳಿದ್ದಾರೆ. ಆಗ ಪ್ರವಾಸಿಗರು ಸ್ಥಳೀಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲಿ, ಬಿಯರ್ ಬಾಟಲಿ ಎಸೆಯುತ್ತಿದರೆಂದು ಸ್ಥಳಿಯರು-ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯುತ್ತಿತ್ತು.

    ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವರ್ತನೆ ಕಂಡ ಜಿಲ್ಲಾಡಳಿತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಪ್ರವಾಸವನ್ನು ರದ್ದುಗೊಳಿಸಿ ಎಂದು ಮನವಿ ಮಾಡಿದೆ.

  • ದಕ್ಷಿಣ ಕನ್ನಡದ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 4 ಬಡ ರೋಗಿಗಳು ಬೀದಿಗೆ

    ದಕ್ಷಿಣ ಕನ್ನಡದ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 4 ಬಡ ರೋಗಿಗಳು ಬೀದಿಗೆ

    – ಪಬ್ಲಿಕ್ ಟಿವಿ ವರದಿಯಿಂದ ಮತ್ತೆ ಆಸ್ಪತ್ರೆ ಸೇರಿದ ರೋಗಿಗಳು

    ಮಂಗಳೂರು: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ನಾಲ್ಕು ಮಂದಿ ರೋಗಿಗಳು ಬೀದಿ ಪಾಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಉಪ್ಪಿನಂಗಡಿಯ ರಘುರಾಮ, ಬೆಂಜನಪದವಿನ ಶ್ರೀನಿವಾಸ, ತಲಪಾಡಿಯ ರಮೇಶ ಮತ್ತು ಪುತ್ತೂರಿನ ಸುಂದರ ಬೀದಿಯಲ್ಲಿ ದಿಕ್ಕು ತೋಚದಂತೆ ಇರುವ ರೋಗಿಗಳು. ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೆನ್‍ಲಾಕ್‍ನಲ್ಲಿ ಮೂರು ತಿಂಗಳ ಹಿಂದೆ ನಾಲ್ವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಂತರ ವೆನ್‍ಲಾಕ್ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ಹಿನ್ನೆಲೆ ಅಲ್ಲಿನ ರೋಗಿಗಳನ್ನು ಬೇರೆ ಬೇರೆ ಖಾಸಗಿ ಆಸ್ಪತ್ರೆ ಶಿಫ್ಟ್ ಮಾಡಲಾಗಿತ್ತು. ನಿನ್ನೆಯವರೆಗೆ ನಾಲ್ವರು ರೋಗಿಗಳು ಮಂಗಳೂರು ಹೊರ ವಲಯ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಇದ್ದಕ್ಕಿದ್ದಂತೆ ಆಸ್ಪತ್ರೆಯವರು ರೋಗಿಗಳನ್ನು ರಸ್ತೆಯಲ್ಲಿ ತಂದು ಬಿಟ್ಟ ಹೋಗಿದ್ದಾರೆ. ಹೀಗಾಗಿ ಹಿರಿಯ ಜೀವಗಳು ಮಳೆ, ಚಳಿಯಲ್ಲಿ ಮಾರುಕಟ್ಟೆ ಜಗಲಿಯಲ್ಲಿ ಕುಳಿತ್ತಿದ್ದು, ಸ್ಥಳೀಯ ರಿಕ್ಷಾ ಚಾಲಕರು, ಮಾರುಕಟ್ಟೆ ವ್ಯಾಪಾರಿಗಳಿಂದ ಊಟ, ನೀರಿನ ವ್ಯವಸ್ಥೆ ಸದ್ಯಕ್ಕೆ ಮಾಡಿದ್ದಾರೆ. ನಾಲ್ವರು ರೋಗಿಗಳನ್ನು ತಮ್ಮ ಮನೆಯಿಂದ ಹೊರ ಹಾಕಿದ್ದು, ಈಗ ಅನಾರೋಗ್ಯದಿಂದ ಇರುವ ರೋಗಿಗಳನ್ನು ಆಸ್ಪತ್ರೆಯವರು ಬಿಟ್ಟು ಹೋಗಿದ್ದಾರೆ. ಹೀಗಾಗಿ ಮಾರುಕಟ್ಟೆ ಜಗಲಿಯಲ್ಲಿ ಕುಳಿತು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

    ಏಕಾಏಕಿ ವಯಸ್ಸಾದ ಯಾರು ಇಲ್ಲದ ಹಿರಿಯ ಜೀವಗಳನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದರ ವಿರುದ್ಧ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿ, ಆದಷ್ಟು ಶೀಘ್ರವಾಗಿ ಇವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿದ್ದು ಬಳಿಕ ಜಿಲ್ಲಾಡಳಿತ ಎಚ್ಚೆತ್ತು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಎಲ್ಲಾ ನಾಲ್ಕು ರೋಗಿಗಳನ್ನು ಜಿಲ್ಲಾ ಇಎಸ್‍ಐ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 3 ದಿನ ಮಾದಪ್ಪನ ದರ್ಶನಕ್ಕೆ ಬ್ರೇಕ್

    3 ದಿನ ಮಾದಪ್ಪನ ದರ್ಶನಕ್ಕೆ ಬ್ರೇಕ್

    ಚಾಮರಾಜನಗರ: ಮೂರು ದಿನಗಳ ಕಾಲ ಇತಿಹಾಸ ಪ್ರಸಿದ್ಧ ಮಲೆ ಮಾದಪ್ಪನ ದರ್ಶನವಿಲ್ಲ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೆ ದೇವಸ್ಥಾನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಈಗ ಜೂನ್ 19ರಿಂದ 21ರವರೆಗೆ ಮಾದಪ್ಪನ ದರ್ಶನಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ದರ್ಶನ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಆದೇಶ ಹೊರಡಸಿದ್ದಾರೆ.

    ಜೂನ್ 19ರಂದು ದೇವರಿಗೆ ಎಣ್ಣೆ ಮಜ್ಜನ ಕಾರ್ಯಕ್ರಮವಿದೆ. ಇದರ ಜೊತೆಗೆ 20, 21ರಂದು ಅಮವಾಸ್ಯೆ ಪೂಜೆ ಹಿನ್ನೆಲೆ, ಮಾದಪ್ಪನ ಬೆಟ್ಟಕ್ಕೆ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಕೊರೊನಾ ವಿರುದ್ಧದ ಸಂರಕ್ಷಣಾ ದೃಷ್ಟಿಯಿಂದ ಮೂರು ದಿನಗಳ ದರ್ಶನ ನಿಷೇಧ ಮಾಡಲಾಗಿದೆ. ಸುಮಾರು 50 ಸಾವಿರ ಜನರು ಬೆಟ್ಟಕ್ಕೆ ಬರುವ ನಿರೀಕ್ಷೆ ಇದ್ದು, ಮುಂಜಾಗ್ರತಾ ದೃಷ್ಟಿಯಿಂದ ಮಾದಪ್ಪನ ದರ್ಶನಕ್ಕೆ ಅವಕಾಶ ಕೊಡದಿರಲೂ ಜಿಲ್ಲಾಡಳಿತದ ನಿರ್ಧಾರ ಮಾಡಿದೆ.

  • ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಹೋಮ್ ಕ್ವಾರಂಟೈನ್‍ನಲ್ಲಿದ್ದವರು ಹೊರಗಡೆ ಓಡಾಟ- ನಾಲ್ವರ ವಿರುದ್ಧ ಎಫ್‍ಐಆರ್

    ಯಾದಗಿರಿ: ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದರೆ ಹೊರಗಡೆ ಓಡಾಡುತ್ತಿದ್ದು, ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

    ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವಿವಿಧ ತಾಂಡಗಳ 4 ಜನರ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಭಾನು(42), ಲಕ್ಕರ್(52), ಶಂಕರ್(27), ರವಿ(26)ಯವರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದು, ಈಗಾಗಲೇ ಹಾಸ್ಟೆಲ್ ಕ್ವಾರೆಂಟನ್ ಮುಗಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಬೇಕಾಬಿಟ್ಟಿಯಾಗಿ ಓಡಾಡಿದ್ದಾರೆ.

     

    ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಿ, ಲಾಕ್‍ಡೌನ್ ನಿಯಮಗಳನ್ನು ಮೀರಿ ತಮ್ಮ ತಾಂಡಗಳಲ್ಲಿ ತಿರುಗಾಟ ನಡೆಸಿದ್ದರು. ಈ ಹಿನ್ನೆಲೆ ಇವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಬಾಲಕಿಯ ರಿಪೋರ್ಟ್‌ನಲ್ಲಿ ಅದಲು ಬದಲು- ಮಂಡ್ಯ ಜಿಲ್ಲಾಡಳಿತದಿಂದ ಮಹಾ ಎಡವಟ್ಟು

    ಬಾಲಕಿಯ ರಿಪೋರ್ಟ್‌ನಲ್ಲಿ ಅದಲು ಬದಲು- ಮಂಡ್ಯ ಜಿಲ್ಲಾಡಳಿತದಿಂದ ಮಹಾ ಎಡವಟ್ಟು

    ಮಂಡ್ಯ: ಬಾಲಕಿಯ ರಿಪೋರ್ಟ್‌ನಲ್ಲಿ ಅದಲು ಬದಲು ಮಾಡುವ ಮೂಲಕ ಮಂಡ್ಯ ಜಿಲ್ಲಾಡಳಿತದ ಮಹಾ ಎಡವಟ್ಟು ಮಾಡಿಕೊಂಡಿದೆಯಾ ಎಂಬ ಅನುಮಾನ ಮೂಡಿದೆ. ಕೊರೊನಾ ಪಾಸಿಟಿವ್ ಬಂದ ಬಾಲಕಿಯನ್ನು ಕ್ವಾರಂಟೈನ್ ಮಾಡಿ, ನೆಗೆಟಿವ್ ಬಂದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಿದೆ.

    ಮುಂಬೈನಿಂದ ಬಂದಿದ್ದ ಬಾಲಕಿ ಹಾಸ್ಟೆಲ್ ಕ್ವಾರಂಟೈನ್‍ಗೆ, ರಾಣಿಬೆನ್ನೂರಿನಿಂದ ಬಂದಿದ್ದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಕಳುಹಿಸಲಾಗಿದೆ. ಇಬ್ಬರೂ ಬಾಲಕಿಯರು ಪೋಷಕರ ಜೊತೆ ಪಾಂಡವಪುರ ತಾಲೂಕಿಗೆ ಬಂದಿದ್ದರು. ಮೇ 18ರಂದು ಇಬ್ಬರು ಬಾಲಕಿಯರಿಗೆ ತಪಾಸಣೆ ಮಾಡಲಾಗಿತ್ತು. ರಾಣಿಬೆನ್ನೂರಿನಿಂದ ಬಂದ ಬಾಲಕಿಗೆ 11 ವರ್ಷ, ಮುಂಬೈನಿಂದ ಬಂದಿದ್ದ ಬಾಲಕಿಗೆ 7 ವರ್ಷ. ಮೇ 21ರಂದು ಇಬ್ಬರ ವರದಿ ಬಂದಿತ್ತು. ಇಬ್ಬರ ವರದಿ ಪೈಕಿ ಓರ್ವ ಬಾಲಕಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ರೋಗಿ 1475 ಮೇ 21ರಂದು ಪಾಸಿಟಿವ್ ಬಂದಿದೆ. ಇದು ಮುಂಬೈನಿಂದ ಬಂದ ಬಾಲಕಿಯ ರಿಪೋರ್ಟ್ ಆಗಿದೆ. ಆದರೆ ಜಿಲ್ಲಾಡಳಿತ ರಾಣಿಬೆನ್ನೂರಿನಿಂದ ಬಂದ ಬಾಲಕಿಗೆ ಪಾಸಿಟಿವ್ ಬಂದಿದೆ ಎಂದು ಗುರುತು ಮಾಡಿದೆ. ನಂತರ ರಾಣಿಬೆನ್ನೂರಿನಿಂದ ಬಂದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಮುಂಬೈ ಬಾಲಕಿಯನ್ನು ಕ್ವಾರಂಟೈನ್ ಕೇಂದ್ರದಲ್ಲೇ ಜಿಲ್ಲಾಡಳಿತ ಉಳಿಸಿದೆ. ಮೇ 24 ರಂದು ಮುಂಬೈ ಬಾಲಕಿಗೆ ಪಾಸಿಟಿವ್ ಬಂದಿದೆ. ಆ ಬಾಲಕಿಗೆ ಪಾಸಿಟಿವ್ ಇದೆ, ರೋಗಿ 2020 ಎಂದು ಗುರುತು ಮಾಡಿದೆ. ಆದರೆ ಮುಂಬೈನಿಂದ ಬಾಲಕಿಗೆ 21ರಂದು ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಹೇಳಿತ್ತು.

    ಜಿಲ್ಲಾಡಳಿತದ ಎಡವಟ್ಟಿನ ಕಹಾನಿ:
    ಹೆಲ್ತ್ ಬುಲೆಟಿನ್‍ನಲ್ಲಿ ನಮೂದಾಗಿರುವ ಟ್ರಾವೆಲ್ ಹಿಸ್ಟರಿ ಅನುಮಾನಕ್ಕೆ ಕಾರಣವಾಗಿದೆ. ದಿನಾಂಕ 21 ರಂದು ಪ್ರಕಟವಾಗಿದ್ದ ರೋಗಿ 1475 ಸೋಂಕಿತ ಬಾಲಕಿ ಹಾಗೂ 24 ಪ್ರಕಟವಾಗಿರುವ ರೋಗಿ 2020ರ ಬಾಲಕಿ ಒಬ್ಬಳೇನಾ ಅಥವಾ ಸೋಂಕು ತಗುಲಿರುವುದು ಒಬ್ಬರಿಗೆ, ಚಿಕಿತ್ಸೆ ನೀಡಿದ್ದು ಮತ್ತೊಬ್ಬರಿಗಾ ಎಂಬ ಅನುಮಾನ ಮೂಡಿದೆ.

    21ರ ಹೆಲ್ತ್ ಬುಲೆಟಿನ್ ಪ್ರಕಾರ ಸೋಂಕಿತ ಬಾಲಕಿಗೆ 7 ವರ್ಷ, ಮುಂಬೈನಿಂದ ಬಂದಿರುವ ಟ್ರಾವಲ್ ಹಿಸ್ಟರಿ ಇದೆ. 24ರ ಹೆಲ್ತ್ ಬುಲೆಟಿನ್‍ನಲ್ಲೂ 2020ರ ಸಂಖ್ಯೆಯ ಬಾಲಕಿಗೂ ಏಳು ವರ್ಷ ಮುಂಬೈನಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. 21 ರಂದೇ ಬಾಲಕಿಗೆ ಪಾಸಿಟಿವ್ ಬಂದಿದ್ದರೆ ಆಕೆಯನ್ನ ಐಶೋಲೇಷನ್ ವಾರ್ಡಿಗೆ ಕರೆತರದೆ ಹಾಸ್ಟೆಲ್ ಕ್ವಾರಂಟೈನ್‍ನಲ್ಲಿ ಇಟ್ಟಿದ್ದು ಯಾಕೆ ಎಂಬ ಅನುಮಾನ ಮೂಡಿದೆ.

    ಬಾಲಕಿಯನ್ನ ಗುರುತಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದ್ದು, ಪಾಸಿಟಿವ್ ಬಂದಿರುವ ಬಾಲಕಿಯನ್ನ ಹಾಸ್ಟೆಲ್ ಕ್ವಾರಂಟೈನ್‍ನಲ್ಲಿ ಇಟ್ಟು, ನೆಗೆಟಿವ್ ಬಂದಿದ್ದ ಬಾಲಕಿಯನ್ನ ಐಶೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಿದ್ದಾರೆ. ರಾಣಿಬೆನ್ನೂರು ಟ್ರಾವಲ್ ಹಿಸ್ಟರಿ ಹೊಂದಿರುವ 11 ವರ್ಷದ ಬಾಲಕಿಗೆ ಪಾಸಿಟಿವ್ ಎಂದು ಜಿಲ್ಲಾಡಳಿತ ಚಿಕಿತ್ಸೆ ನೀಡುತ್ತಿದೆ. ಇಬ್ಬರು ಬಾಲಕಿಯ ಗಂಟಲು ದ್ರವ ಒಂದೇ ದಿನ ಒಂದೇ ಸಮಯದಲ್ಲಿ ತೆಗೆದು ಟೆಸ್ಟ್ ಗೆ ಕಳುಹಿಸಿದ್ದರಿಂದ ಎಡವಟ್ಟು ಆಗಿದೆ ಎನ್ನಲಾಗಿದೆ.

    11 ವರ್ಷದ ಬಾಲಕಿ ಮೇ 17ರಂದು ತನ್ನ ಕುಟುಂಬದ ಜತೆ ರಾಣೆ ಬೆನ್ನೂರಿನಿಂದ ಚಿನಕುರುಳಿಗೆ ಬಂದಿದ್ದಳು. ಜಿಲ್ಲೆ ಪಾಂಡವಪುರ ತಾಲೂಕಿನ ನಾರಾಯಣಪುರ ಗ್ರಾಮದ ಬಾಲಕಿ ಮೇ 13 ರಂದು ತಮ್ಮ ಕುಟುಂಬಸ್ಥರ ಜೊತೆ ಮುಂಬೈನಿಂದ ಬಂದಿದ್ದಳು. ಇಬ್ಬರು ಬಾಲಕಿಯ ಕುಟುಂಬಸ್ಥರಿಗೆ ಮೇ 18 ರಂದು ಪಾಂಡವಪುರದಲ್ಲಿ ಕೊವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಇಲಾಖೆಯ ಅಧಿಕಾರಿಗಳು ಎಡವಟ್ಟು ಮಡಿದ್ದು, ಬಾಲಕಿಯರನ್ನ ಅದಲು ಬದಲಾಗಿ ಗುರುತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕ್ವಾರಂಟೈನ್ ನಲ್ಲಿರಬೇಕಾದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಬಾಲಕಿ ಕ್ವಾರಂಟೈನ್‍ಗೆ ಹೋಗಿದ್ದಾಳೆ.

    ಮುಂಬೈ ಟ್ರಾವಲ್ ಹಿಸ್ಟರಿ ಹೊಂದಿದ್ದ ಬಾಲಕಿಗೆ ನೆಗೆಟಿವ್ ಬಂದಿದೆ ಅನ್ನೋದು ನಂಬದೆ ಮತ್ತೆ ಟೆಸ್ಟ್ ಮಾಡುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದ್ದಾರೆ. ಪುಟ್ಟರಾಜು ಒತ್ತಾಯಕ್ಕೆ ಮಣಿದು ಟೆಸ್ಟ್ ನಡೆಸಿದಾಗ ಆಕೆಗೆ ಪಾಸಿಟಿವ್ ಬಂದಿದೆ. ಇತ್ತ ಸರ್ಕಾರ ಬಿಡುಗಡೆ ಮಾಡಿರುವ 2 ಹೆಲ್ತ್ ಬುಲೆಟಿನ್‍ನಲ್ಲಿ ಎಲ್ಲೂ 11 ವರ್ಷದ ಬಾಲಕಿಗೆ ಪಾಸಿಟಿವ್ ಇದೆ ಅನ್ನೋ ಪ್ರಸ್ತಾಪ ಇಲ್ಲ. ಹೀಗಾಗಿ ಅಧಿಕಾರಿಗಳು ಎಡವಟ್ಟು ಬಹಿರಂಗವಾಗಿದೆ. ಈ ಪ್ರಕರಣ ಕುರಿತು ಸಮಗ್ರ ತನಿಖೆಗೆ ಮಾಡಬೇಕು ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

  • ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

    ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

    ಉಡುಪಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿದೆ. ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ.

    ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತಿದೆ. ಡಿಎಚ್‍ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 ಪ್ರಯಾಣಿಕರು, ನೆನ್ನೆ ಮಸ್ಕತ್‍ನಿಂದ ಬಂದ 21 ಪ್ರಯಾಣಿಕರ ಗಂಟಲು ದ್ರವ ತೆಗೆದು ಪರೀಕ್ಷೆಗೆ ನೀಡಲಾಗಿದೆ.

    ಈ ಪೈಕಿ ದುಬೈ ಪ್ರಯಾಣಿಕರು ಮತ್ತು ಮುಂಬೈ ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರ ವರದಿ ಬರುವ ಸಾಧ್ಯತೆ ಇದೆ. ಕ್ವಾರಂಟೈನ್ ಸೆಂಟರ್ ನಲ್ಲಿ ಇರುವ ಜ್ವರ ಶೀತದ ಲಕ್ಷಣ ಇರುವವರ ವರದಿಯೂ ಇಂದು ಕೈಸೇರಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಇರುವ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ವರದಿಗಳೂ ಬರುವ ಸಾಧ್ಯತೆ ಇದೆ.

    ಉಡುಪಿ ಡಿಎಚ್‍ಒ ಡಾ. ಸುಧೀರ್ ಚಂದ್ರಸೂಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಸೋಂಕಿತರ ಸಂಪರ್ಕರವರು, ಜೊತೆ ಪ್ರಯಾಣಿಸಿದವರ ಗಂಟಲು ಮಾದರಿ ಮೊದಲು ತೆಗೆಯುತ್ತೇವೆ. ಮಹಾರಾಷ್ಟ್ರದ ರೆಡ್ ಝೋನ್ ನಿಂದ ಬಂದವರಿಗೂ ಆದ್ಯತೆ ಇದೆ. ವಿದೇಶದಿಂದ ಬಂದವರ ವೈದ್ಯಕೀಯ ಪರೀಕ್ಷೆ ಮಾಡುವ ಒತ್ತಡ ಕೂಡ ಇದೆ. ಮುಂದಿನ ಕೆಲ ದಿನಗಳು ಕಷ್ಟಕರ ಪರಿಸ್ಥಿತಿ ಇರಬಹುದು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದರು.