Tag: District Administration

  • ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ದಂಡು- ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

    ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ದಂಡು- ಮಾಸ್ಕ್ ಧರಿಸದವರಿಗೆ ಬಿತ್ತು ದಂಡ

    – ವೀಕೆಂಡ್ ಮಸ್ತ್ ಮಜಾ, ಸುರಕ್ಷತಾ ಕ್ರಮ ಮರೆತರು
    – ಕಾರು, ಬೈಕ್ ಗಳಲ್ಲಿ ಪ್ರವಾಸಿಗರ ಲಗ್ಗೆ

    ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಅನ್‍ಲಾಕ್ 4 ಮಾರ್ಗಸೂಚಿ ಪ್ರಕರಟಿಸಿದ್ದು, ಪ್ರವಾಸಿ ತಾಣಗಳು ಹಾಗೂ ಮೆಟ್ರೊ ರೈಲು ಸಂಚಾರಕ್ಕೂ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ನಂದಿ ಗಿರಿಧಾಮವನ್ನು ಸಹ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಪ್ರವಾಸಿಗರು ಸಹ ನಂದಿ ಗಿರಿಧಾಮದಲ್ಲಿ ವೀಕೆಂಡ್ ಮಜಾ ಮಾಡುತ್ತಿದ್ದಾರೆ. ಆದರೆ ಎಷ್ಟೇ ಎಚ್ಚರಿಕೆ, ಅರಿವು ಮೂಡಿಸಿದರೂ ಕೊರೊನಾ ನಿಯಮ ಪಾಲಿಸುತ್ತಿಲ್ಲ. ಹೀಗೆ ಮಾಸ್ಕ್ ಧರಿಸಿದೇ ಆಗಮಿಸಿದ ಪ್ರವಾಸಿಗರಿಗೆ ದಂಡ ವಿಧಿಸಿ ಬುದ್ಧಿ ಕಲಿಸಲಾಗಿದೆ.

    ಕೊರೊನಾ ಹಿನ್ನೆಲೆ ಆತಂಕದ ನಡುವೆ ನಂದಿ ಗಿರಿಧಾಮವನ್ನು ಇಂದು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಈ ಕುರಿತು ವಿಷಯ ತಿಳಿಯುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಆದರೆ ಕೊರೊನಾ ನಿಯಮಗಳ ಪಾಲನೆಯನ್ನು ಮರೆಯುತ್ತಿದ್ದು, ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಈ ರೀತಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರಿಗೆ ಬುದ್ಧಿ ಕಲಿಸಲಾಗುತ್ತಿದ್ದು, ದಂಡ ಹಾಕಲಾಗುತ್ತಿದೆ.

    ಇಂದು ಬೆಳಗ್ಗೆ 8ಕ್ಕೆ ನಂದಿ ಗಿರಿಧಾಮದ ಚೆಕ್‍ಪೋಸ್ಟ್ ತೆಗೆದಿದ್ದೇ ತಡ ಮುಂಜಾನೆಯಿಂದಲೇ ಕಾತರದಿಂದ ಕಾಯುತ್ತಿದ್ದ ಪ್ರವಾಸಿಗರು, ನಂದಿ ಬೆಟ್ಟಕ್ಕೆ ಲಗ್ಗೆಯಿಟ್ಟರು. ಕೊರೊನಾ ಹರಡುವಿಕೆ ಹಿನ್ನೆಲೆ ಮಾರ್ಚ್ 14 ರಿಂದ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಮಾಡಿತ್ತು. ಸುಮಾರು 5 ತಿಂಗಳ ನಂತರ ಇಂದಿನಿಂದ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

    ಇಂದು ಬೆಳ್ಳಂ ಬೆಳಗ್ಗೆ ನೂರಾರು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿ ನಂದಿಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದರು. ಜಿಲ್ಲಾಡಳಿತ ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೊರೊನಾ ನಿಯಮ ಪಾಲನೆ ಕಡ್ಡಾಯ ಮಾಡಿದೆ. ಆದರೆ ಪ್ರವಾಸಿಗರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸದವರಿಗೆ ತಲಾ 100 ರೂಪಾಯಿ ದಂಡ ವಿಧಿಸಿ ಬುದ್ಧಿ ಕಲಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

  • ಶತಮಾನ ಪೂರೈಸಿರುವ 36 ಶಾಲೆಗಳ ಅಭಿವೃದ್ಧಿ- ಪಾರಂಪರಿಕತೆ ಜೊತೆ ಹೈಟೆಕ್ ಸ್ಪರ್ಶ

    ಶತಮಾನ ಪೂರೈಸಿರುವ 36 ಶಾಲೆಗಳ ಅಭಿವೃದ್ಧಿ- ಪಾರಂಪರಿಕತೆ ಜೊತೆ ಹೈಟೆಕ್ ಸ್ಪರ್ಶ

    – ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಮಾಸ್ಟರ್ ಪ್ಲಾನ್

    ಚಾಮರಾಜನಗರ: ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ ಬೆನ್ನಲ್ಲೇ ಶತಮಾನ ಪೂರೈಸಿರುವ ಶಾಲೆಗಳಿಗೆ ಆಧುನಿಕ ಟಚ್ ನೀಡಲು ಜಿಲ್ಲಾಡಳಿತ ಮುಂದಾಗಿದೆ.

    ಇದರಿಂದಾಗಿ ಜಿಲ್ಲೆಯಲ್ಲಿ ಶತಮಾನೋತ್ಸವ ಪೂರೈಸಿರುವ ಶಾಲೆಗಳಲ್ಲಿ ಗತ ವೈಭವ ಮರುಕಳಿಸಲಿದ್ದು, ಈ ಶಾಲೆಗಳ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗದಂತೆ ನವೀಕರಿಸಿ ಮೂಲ ಸೌಕರ್ಯ ಕಲ್ಪಿಸಿ ಐತಿಹಾಸಿಕ ಸ್ಥಳಗಳನ್ನಾಗಿ ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈಗಾಗಲೇ ಮೂರು ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ತಲಾ 5 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

    ಶಿಕ್ಷಣ ಸಚಿವರೇ ಉಸ್ತುವಾರಿ ವಹಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ 100 ವರ್ಷ ಪೂರೈಸಿರುವ 36 ಸರ್ಕಾರಿ ಶಾಲೆಗಳಿವೆ. ಅವುಗಳ ಇತಿಹಾಸಕ್ಕೆ ಧಕ್ಕೆಯಾಗದಂತೆ ಹೊಸ ಮೆರಗು ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಶಾಲೆಗಳ ಇತಿಹಾಸ, ಆರಂಭ, ನಡೆದು ಬಂದ ಹಾದಿಯ ದಾಖಲೀಕರಣ ಮಾಡಿ, ಇಂದಿನ ಪೀಳಿಗೆಗೆ ಪರಿಚಯಿಸಲು ಪ್ರತಿ ಶಾಲೆಯ ಆವರಣದಲ್ಲಿ ಶಾಲಾ ಇತಿಹಾಸ, ಮಹತ್ವ, ವೈಶಿಷ್ಟ್ಯಗಳ ಬಗ್ಗೆ ಪ್ರಚುರ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಐತಿಹಾಸಿಕ ಶಾಲೆಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಶಾಲೆಗಳ ಅಭಿವೃದ್ಧಿಗಾಗಿ ಜಿಲ್ಲಾ ಮಟ್ಟದ ಸಮಿತಿಯನ್ನೂ ಸಹ ರಚಿಸಿದೆ.

    1916ರಲ್ಲಿ ನಿರ್ಮಾಣವಾಗಿರುವ ಗುಂಡ್ಲುಪೇಟೆ ತಾಲೂಕು ಹಂಗಳ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, 1900 ರಲ್ಲಿ ಆರಂಭವಾದ ಹನೂರು ತಾಲೂಕು ರಾಮಾಪುರ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ಹಾಗೂ 1909 ರಲ್ಲಿ ನಿರ್ಮಿಸಿರುವ ಕೊಳ್ಳೇಗಾಲ ತಾಲೂಕು ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ರಾಜ್ಯ ವಲಯ ಯೋಜನೆಯಡಿ ತಲಾ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿಯನ್ನು ಈಗಾಗಲೇ ರಚನೆ ಮಾಡಿದ್ದು, ಹಂತ ಹಂತವಾಗಿ ಶಾಲೆ ಅಭಿವೃದ್ಧಿ ಮಾಡಲೂ ಪ್ಲಾನ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಶತಮಾನಗಳ ಇತಿಹಾಸ ಸಾರುತ್ತಿರುವ ಈ ಶಾಲೆಗಳ ವೈಭವವನ್ನು ಮರಕಳಿಸುವಂತೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಳೆ ವಿದ್ಯಾರ್ಥಿಗಳ ಸಂಘ ರಚಿಸಲು ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಬಗ್ಗೆ ವಿಶೇಷ ಪ್ರೀತಿ ಅಭಿಮಾನದಿಂದ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಲು ಮುಂದೆ ಬರಬಹುದು ಎಂಬ ನಿರೀಕ್ಷೆ ಜಿಲ್ಲಾಡಳಿತದ್ದಾಗಿದೆ.

  • ಪ್ರವಾಸಿಗರಿಗೆ ಕಾಫಿನಾಡು ಮುಕ್ತ- ಷರತ್ತು ಬದ್ಧ ಅನುಮತಿ

    ಪ್ರವಾಸಿಗರಿಗೆ ಕಾಫಿನಾಡು ಮುಕ್ತ- ಷರತ್ತು ಬದ್ಧ ಅನುಮತಿ

    ಚಿಕ್ಕಮಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಇದೀಗ ಪ್ರವಾಸಿಸಗರಿಗೆ ಷರತ್ತು ಬದ್ಧ ಅನುಮತಿ ನೀಡಿ, ಜಿಲ್ಲಾಡಳಿತ ನಿರ್ಬಂಧವನ್ನು ತೆರವುಗೊಳಿಸಿದೆ.

    ಪ್ರವಾಸಿಗರು ಕಾರು, ಬೈಕ್, ಜೀಪ್‍ನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದ್ದು, ದೊಡ್ಡ ವಾಹನಗಳು, ಖಾಸಗಿ ಬಸ್‍ಗಳಲ್ಲಿ ಬರುವುದನ್ನು ನಿರ್ಬಂಧಿಸಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರವಾಸಿ ತಾಣಗಳಲ್ಲಿ ಗುಂಪಾಗಿ ಸೇರುವಂತಿಲ್ಲ. ಹೆಚ್ಚಿನ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

    ಪ್ರವಾಸಿ ತಾಣಗಳಲ್ಲಿ ಬಳಸಿದ ಯಾವುದೇ ರೀತಿಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜಿಲ್ಲೆಯ ಹೋಮ್ ಸ್ಟೇ, ರೆಸಾರ್ಟ್, ಹೊಟೇಲ್ ಮಾಲೀಕರಿಗೂ ಜಿಲ್ಲಾಡಳಿತ ಸೂಚನೆ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಪ್ರವಾಸಿಗರು ಗುಂಪಾಗಿ ಸೇರಲು ಅವಕಾಶ ನೀಡಬಾರದು. ಪ್ರತಿ ಪ್ರವಾಸಿಗರಿಗೂ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸುವುದನ್ನು ಕಡ್ಡಾಯಗೊಳಿಸಿದೆ. ಪ್ರವಾಸಿಗರು ತಂಗುವ ಕೊಠಡಿಯನ್ನು ಆಗಾಗ ಸ್ಯಾನಿಟೈಸ್ ಮಾಡುವಂತೆ ಆದೇಶಿಸಿದೆ. ಸಿಬ್ಬಂದಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ಕೊರೋನಾ ಗುಣಲಕ್ಷಣ ಇದೆಯಾ ಎಂದು ಖಚಿತಪಡಿಸಿಕೊಳ್ಳಬೇಕು. ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ಸಿಬ್ಬಂದಿಗೆ ತಿಳಿಸಬೇಕೆಂದು ಸೂಚಿಸಿದೆ.

    ಲಾಕ್‍ಡೌನ್ ಸಡಿಲಗೊಂಡ ಬಳಿಕ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಹೇರಳವಾಗಿತ್ತು. ಈ ಹಿನ್ನೆಲೆ ಜಿಲ್ಲೆಯ ಜನ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ಮನವಿ ಮಾಡಿದ್ದರು. ಕೊರೊನಾ ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿತ್ತು. ಇಂದು ನಿರ್ಬಂಧವನ್ನು ತೆರವುಗೊಳಿಸಿ, ಷರತ್ತು ಬದ್ಧ ಅನುಮತಿ ನಿಡಿದೆ.

  • ಮಂಡ್ಯದಲ್ಲಿ ಮನೆ ಬಾಗಿಲಿಗೆ ಬರಲಿದ್ದಾನೆ ಆಯುರ್ವೇದ ಗಣಪ

    ಮಂಡ್ಯದಲ್ಲಿ ಮನೆ ಬಾಗಿಲಿಗೆ ಬರಲಿದ್ದಾನೆ ಆಯುರ್ವೇದ ಗಣಪ

    – ಕೇವಲ 120 ರೂ.ಗೆ ಸಿಗಲಿದೆ ಆಯುರ್ವೇದ ಗಣೇಶ

    ಮಂಡ್ಯ: ಕೊರೊನಾ ಹಿನ್ನೆಲೆ ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಿಸಲು ಆಗುತ್ತಿಲ್ಲ. ಆದರೆ ಅರ್ಥಗರ್ಭಿತವಾಗಿ ಆಚರಿಸಬಹುದು ಎಂಬುದನ್ನು ಮಂಡ್ಯದ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ತೋರಿಸಿಕೊಟ್ಟಿದ್ದು, ಜೇಡಿ ಮಣ್ಣಿನ ಹಣಪನನ್ನು ಪರಿಚಯಿಸುತ್ತಿದ್ದಾರೆ.

    ನಾಳೆಯಿಂದ ಗಣೇಶ ಹಬ್ಬ ಆರಂಭವಾಗಲಿದ್ದು, ನಾಳೆ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಕೊರೊನಾ ನಡುವೆ ಹಬ್ಬವನ್ನು ಹೇಗೆ ಆಚರಿಸುವುದು ಎಂದು ತಲೆಕೆಡಿಸಿಕೋಳ್ಳುವವರಿಗೆ ಮಂಡ್ಯ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ಕುರಿತು ತಿಳಿಸಿವೆ.

    ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಖರೀದಿಸಿ, ಪೂಜಿಸಿ ಬಳಿಕ ಪಾಟ್‍ನಲ್ಲಿ ವಿಸರ್ಜಿಸುವುದು. ಮೂರ್ತಿ ಸಂಪೂರ್ಣ ಕರಗಿದ ಬಳಿಕ ಆಯುರ್ವೇದ ಗುಣಗಳುಳ್ಳ ಗಿಡಗಳ ಬೀಜವನ್ನು ಪಾಟ್‍ಗೆ ಹಾಕಿ ನೀರೆರೆಯಿರಿ. ಇದರಿಂದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದರ ಜೊತೆಗೆ ಔಷಧ ಗುಣಗಳುಳ್ಳ ಗಿಡವನ್ನು ಮನೆಯಲ್ಲೇ ಬೆಳೆದಂತಾಗುತ್ತದೆ ಎಂಬುದು ಜಿಲ್ಲಾಡಳಿತದ ಪ್ಲಾನ್.

    ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಐಡಿಯಾ ಚೆನ್ನಾಗಿದೆ ಆದರೆ ಜೇಡಿ ಮಣ್ಣು, ಆಯುರ್ವೇದ ಸಸಿ ಬೀಜಗಳನ್ನು ಎಲ್ಲಿಂದ ತರೋದು ಎಂದು ಚಿಂತಿಸುವವರಿಗೆ ಅದಕ್ಕೂ ಜಿಲ್ಲಾಡಳಿತ ಪರಿಹಾರ ನೀಡಿದೆ. ಮಂಡ್ಯದ ವಿ.ಸಿ.ಫಾರಂನಲ್ಲಿರುವ ಆರಾಧ್ಯ ಆಗ್ರೋ ಫುಡ್ ಅಂಡ್ ಬೇವರೇಜ್ ನವರು ಜಿಲ್ಲಾಡಳಿತ ಪ್ಲಾನ್‍ಗೆ ಪೂರಕವಾಗಿ ಜೇಡಿ ಮಣ್ಣಿನ ಗಣಪನನ್ನು ಸಿದ್ಧಪಡಿಸಿದ್ದಾರೆ. ಮೂರ್ತಿ ಜೊತೆಗೆ ಪಾಟ್ ಮತ್ತು ಔಷಧಿ ಗುಣಗಳುಳ್ಳ ಗಿಡಗಳ ಬೀಜಗಳನ್ನ ನೀಡಲಿದ್ದಾರೆ. ಅತ್ಯಂತ ಕಡಿಮೆ ಬೆಲೆ ಅಂದ್ರೆ 120ರೂ.ಗೆ ಗೌರಿ-ಗಣೇಶ ಮೂರ್ತಿಗಳು ಸಿಗಲಿದ್ದು, ಇಂತಹ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಔಷಧೀಯ ಗುಣಗಳುಳ್ಳ ಗಿಡಗಳನ್ನು ಮನೆಯಲ್ಲೇ ಬೆಳೆಸಬಹುದಾಗಿದೆ.

    ಈ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸುವ ಪ್ರಾತ್ಯಕ್ಷಿಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲಾಗಿದೆ. ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿ ಮಾತನಾಡಿದ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಿ, ಪರಿಸರ ಉಳಿಸಬೇಕು. ಪರಿಸರ ಅಸಮತೋಲನದಿಂದ ಸಾಕಷ್ಟು ಅನಾಹುತಗಳನ್ನು ನೋಡುತ್ತಿದ್ದೇವೆ. ಹೀಗಾಗಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವ ಜೊತೆಗೆ ಪರಿಸರ ಉಳಿಸುವ ನೂತನ ಯೋಜನೆಯನ್ನು ಬೆಂಬಲಿಸಬೇಕಿದೆ ಎಂದು ಕರೆ ನೀಡಿದ್ದಾರೆ.

  • ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗದಲ್ಲಿ ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ – ಜಿಲ್ಲಾಡಳಿತ ಆದೇಶ

    ಶಿವಮೊಗ್ಗ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿಯ ಗಣಪತಿ ಉತ್ಸವವನ್ನು ರಾಜ್ಯ ಸರ್ಕಾರದ ಆದೇಶದ ಅನ್ವಯ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿಯ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಈಗಾಗಿ ನಾಗರಿಕರು ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿ ಸಂಜೆ ವಿಸರ್ಜನೆ ಮಾಡುವ ಮೂಲಕ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಸೋಂಕು ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವವನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಗಣಪತಿ ಹಬ್ಬ ಕೇವಲ ಈ ವರ್ಷಕ್ಕೆ ಅಷ್ಟೇ ಸೀಮಿತವಾಗಿಲ್ಲ. ಮುಂದಿನ ಬಾರಿಯೂ ಗಣೇಶ ಹಬ್ಬ ಬರುತ್ತದೆ. ಈಗಾಗಿ ಜೀವ ಉಳಿದರೆ ಮುಂದಿನ ಬಾರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬಹುದು ಎಂದರು.

    ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಗಣಪತಿ ಪ್ರತಿಷ್ಠಾಪನೆ ಮಾಡಿ. ಆದರೆ ಗಣಪತಿ ತರುವ ವೇಳೆಯಲ್ಲಿ ಆಗಲಿ, ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆಗಲಿ ಮೆರವಣಿಗೆ ಮಾಡುವಂತಿಲ್ಲ. ಮನೆಯಲ್ಲಿ ಕೂರಿಸುವ ಗಣಪತಿ ಮೂರ್ತಿ 2 ಅಡಿ ಮೀರಬಾರದು. ಜೊತೆಗೆ 4 ಜನಕ್ಕಿಂತ ಹೆಚ್ಚಿನ ಮಂದಿ ಭಾಗವಹಿಸಬಾರದು. ಅದೇ ರೀತಿ ಸಾರ್ವಜನಿಕವಾಗಿ ಕೂರಿಸುವ ಗಣಪತಿ 4 ಅಡಿಗಿಂತ ಮೀರಿರಬಾರದು ಹಾಗೂ ಗಣಪತಿ ತರಲು 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಅಲ್ಲದೇ ಮುಂಜಾನೆ ಗಣಪತಿ ಪ್ರತಿಷ್ಠಾಪಿಸಿದರೆ ಸಂಜೆ ಕತ್ತಲು ಕಳೆಯುವುದರೊಳಗೆ ಗಣಪತಿ ವಿಜರ್ಜನೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ತೀರ್ಮಾನದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ತೀರ್ಮಾನಕ್ಕೆ ಎಲ್ಲಾ ಗಣಪತಿ ಸಂಘಟನೆಗಳು ಬದ್ಧರಾಗಿರಬೇಕು. ಗಣಪತಿ ಪ್ರತಿಷ್ಠಾಪಿಸಬೇಡಿ ಎಂದು ಜಿಲ್ಲಾಡಳಿತ ಹೇಳುತ್ತಿಲ್ಲ. ಯಾವುದೇ ಸಂಘಟನೆಯವರಾಗಲಿ ಕೂಡ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಮ್ಮ ಜೀವಕ್ಕೆ ಆಪತ್ತು ಉಂಟಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

  • ಧಾರವಾಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು 7 ಕೋಟಿ ಸಿಎಸ್‍ಆರ್ ನಿಧಿ ಸಂಗ್ರಹ

    ಧಾರವಾಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು 7 ಕೋಟಿ ಸಿಎಸ್‍ಆರ್ ನಿಧಿ ಸಂಗ್ರಹ

    ಹುಬ್ಬಳ್ಳಿ: ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್, ಟಾಟಾ, ಏಕಸ್ ಸೇರಿದಂತೆ ಹಲವು ಕಂಪನಿಗಳು ಸಿಎಸ್‍ಆರ್ ನಿಧಿಯಡಿ ಜಿಲ್ಲೆಯಲ್ಲಿ ಕೋವಿಡ್ ತುರ್ತು ಪರಿಸ್ಥಿತಿ ಎದುರಿಸಲು 7 ಕೋಟಿ ರೂಪಾಯಿ ಧನ ಸಹಾಯ ನೀಡಿವೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

    ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಉದ್ಯಮಿದಾರರು ಹಾಗೂ ಕೈಗಾರಿಕಾ ಸಂಘದ ಪ್ರತಿನಿಧಿಗಳೊಂದಿಗೆ ಕೋವಿಡ್-19 ನಿಯಂತ್ರಣ ಮತ್ತು ಸಿಎಸ್‍ಆರ್ ನಿಧಿ ಬಳಕೆ ಕುರಿತು ನಡೆದ ಸಭೆಯಲ್ಲಿ ಡಿಸಿ ಮಾತನಾಡಿದರು.

    ಧಾರವಾಡ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಗಳ ಸಿಎಸ್‍ಆರ್ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್, ಬೆಡ್, ಆಕ್ಸಿ, ಪಲ್ಸ್ ಮೀಟರ್, ಆಕ್ಸಿಜನ್, ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.

    ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ನಗರಗಳಾಗಿವೆ. ಕಂಪನಿಗಳು ನಿಧಿ ನೀಡಲು ಮುಂದೆ ಬಂದರೆ ಜಿಲ್ಲಾಡಳಿತ ಸರಿಯಾದ ರೀತಿಯಲ್ಲಿ ನಿಧಿ ಬಳಕೆಗೆ ಅನುವುಮಾಡಿಕೊಡಲಿದೆ ಎಂದರು.

    ಲಕ್ಷಣ ರಹಿತ ಕೋವಿಡ್ ರೋಗಿಗಳಿಗಾಗಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಇಲ್ಲಿಗೆ ಆಟದ ಸಾಮಾನುಗಳು, ಪುಸ್ತಕ, ಟಿವಿ ಸೆಟ್, ಆರ್‍ಓ ಪ್ಲಾಂಟ್, ಬಿಸಿ ನೀರು ತಯಾರಿಸುವ ಘಟಕಗಳನ್ನು ಸಿಎಸ್‍ಆರ್ ನಿಧಿಯಡಿ ಕಂಪನಿಗಳು ನೀಡಬಹುದು. ಸಾಂಕ್ರಾಮಿಕ ರೋಗದ ತರುವಾಯ ಇವು ವಿದ್ಯಾರ್ಥಿಗಳಿಗೆ ಬಳಕೆಯಾಗಲಿವೆ. ಕಂಪನಿಗಳು ಇಚ್ಛಿಸಿದರೆ ಜಿಲ್ಲಾಡಳಿತದ ವತಿಯಿಂದ ನೌಕರರ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಡೆಸಲಾಗುವುದು ಎಂದರು.

  • ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ತಪಾಸಣೆ ವೇಳೆ ಡಿಸಿ ನಂಬರ್ ಕೊಟ್ಟ ಸೋಂಕಿತ – ಕರೆ ಸ್ವೀಕರಿಸಿ ದಂಗಾದ ಜಿಲ್ಲಾಧಿಕಾರಿ

    ಮೈಸೂರು: ತಪಾಸಣೆ ವೇಳೆ ಮೈಸೂರು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕೊರೊನಾ ಸೋಂಕಿತನೊಬ್ಬ ಕಿತಾಪತಿ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ನಡೆದಿದೆ.

    ಕೊರೊನಾ ತಪಾಸಣೆಗೆ ಬಂದ ವ್ಯಕ್ತಿಯೋರ್ವ ಪರೀಕ್ಷೆ ವೇಳೆ ತನ್ನ ನಂಬರ್ ಬದಲಿಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಅವರ ನಂಬರ್ ಅನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಯಾಮಾರಿಸಿದ್ದಾನೆ. ಇದಾದ ಬಳಿಕ ಆ ವ್ಯಕ್ತಿಯ ಕೊರೊನಾ ವರದಿ ಬಂದಿದ್ದು, ಆತನಿಗೆ ಕೊರೊನಾ ಇರುವುದು ದೃಢಪಟ್ಟಿದೆ.

    ಕೊರೊನಾ ದೃಢಪಟ್ಟ ವ್ಯಕ್ತಿ ನೀಡಿದ ನಂಬರ್ ಗೆ ಮೈಸೂರು ಜಿಲ್ಲಾಡಳಿತದ ಕೊರೊನಾ ಕಂಟ್ರೋಲ್ ರೂಂನಿಂದ ಕರೆ ಮಾಡಿದ್ದಾರೆ. ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಈ ಮಾತುಗಳನ್ನು ಕೇಳಿ ಒಮ್ಮೆ ಗಾಬರಿಯಾದ ಡಿಸಿಯವರು, ನನಗೆ ಕೊರೊನಾ ಇದ್ಯಾ ಎಂದು ಭಾವಿಸಿ ನಾನ್ ರೀ ಜಿಲ್ಲಾಧಿಕಾರಿ ಮಾತಾನಾಡುತ್ತಿದ್ದೇನೆ ಎಂದು ಡಿಸಿ ಅಭಿರಾಮ್ ಅವರು ಹೇಳಿದ್ದಾರೆ.

    ಆಗ ಜಿಲ್ಲಾಡಳಿತದವರು ನಂಬರ್ ನೋಡಿ ಚೆಕ್ ಮಾಡಿದಾಗ ಕೊರೊನಾ ಸೋಂಕಿತ ಪರೀಕ್ಷೆ ವೇಳೆ ಆತನ ನಂಬರ್ ಬದಲು ಡಿಸಿ ಅವರ ನಂಬರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ತಪ್ಪು ನಂಬರ್ ಕೊಟ್ಟು ಕೊರೊನಾ ಸೋಂಕಿತ ಎಸ್ಕೇಪ್ ಆಗಿದ್ದು, ಸೋಂಕಿತನಿಗಾಗಿ ಅಧಿಕಾರಿಗಳು ಹುಡುಕಾಟ ಶುರು ಮಾಡಿದ್ದಾರೆ.

    ಈ ವಿಚಾರವಾಗಿ ಬೇಸರದಿಂದ ಈ ರೀತಿ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಗೆ ಸಲಹೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಅವರು, ಈ ರೀತಿ ಮಾಡಿದರೆ ಕೊರೊನಾ ಸಮಸ್ಯೆ ಜಿಲ್ಲೆಯಲ್ಲಿ ಮತ್ತಷ್ಟು ಉಲ್ಬಣ ಆಗಲಿದೆ. ಸಾರ್ವಜನಿಕರು ಕೊರೊನಾ ಕಂಟ್ರೋಲ್ ರೂಂಗೆ ಸರಿಯಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

  • ಯಾದಗಿರಿಯಲ್ಲಿ ಒಂದು ವಾರ ಮತ್ತೆ ಲಾಕ್‍ಡೌನ್- ಜಿಲ್ಲಾಡಳಿತದಿಂದ ಅಧಿಕೃತ ಆದೇಶ

    ಯಾದಗಿರಿಯಲ್ಲಿ ಒಂದು ವಾರ ಮತ್ತೆ ಲಾಕ್‍ಡೌನ್- ಜಿಲ್ಲಾಡಳಿತದಿಂದ ಅಧಿಕೃತ ಆದೇಶ

    ಯಾದಗಿರಿ: ಕಳೆದ ಒಂದು ವಾರದಿಂದ ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡ ಹಿನ್ನೆಲೆ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 22ರ ವರೆಗೆ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಯಾದಗಿರಿ ಜಿಲ್ಲಾಡಳಿತ ಅಧಿಕೃತ ಆದೇಶ ಹೊರಡಿಸಿದ್ದು, ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಕೋವಿಡ್-19 ನಿಯಂತ್ರಣ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹಾಲು, ತರಕಾರಿ, ಹಣ್ಣು, ದಿನಪತ್ರಿಕೆ ಮಾರಾಟಕ್ಕೆ ಸಂಜೆ 5ರ ತನಕ ಅನುಮತಿ ನೀಡಲಾಗಿದೆ. ಅಗತ್ಯ ಸೇವೆಗಳಾದ ಔಷಧಿ, ಆಸ್ಪತ್ರೆ, ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ಅನುಮತಿ ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ರಸಗೊಬ್ಬರ, ಕೃಷಿ ಉಪಕರಣಗಳು, ಬೀಜ, ಬೆಳೆ ಮಾರಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.

    ಒಂದು ವಾರ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧವಿದ್ದು, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಪಾರ್ಕ್, ಟೀ ಪಾಯಿಂಟ್, ಸಭೆ, ಸಮಾರಂಭಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಅನವಶ್ಯಕವಾಗಿ ಹೊರಗಡೆ ಸಂಚರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿರ್ದೇಶಿಸಿದೆ.

  • ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧ

    ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿಷೇಧ

    ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹಬ್ಬುತ್ತಿದೆ. ಲಾಕ್‍ಡೌನ್ ಮಾಡಬೇಕೆ, ಬೇಡವೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಇದರ ಮಧ್ಯೆ ಇದೀಗ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕ ಪ್ರವೇಶ ಬಂದ್ ಮಾಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

    ತಕ್ಷಣದಿಂದ ಜಾರಿಯಾಗುವಂತೆ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ಕಾರ್ಯಾಲಯ ಸಂಪರ್ಕಿಸುವ ಕಚೇರಿಯನ್ನು ಸಾರ್ವಜನಿಕ ಪ್ರವೇಶದಿಂದ ಹೊರಗಿಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ಸಿಬ್ಬಂದಿ ಕೋವಿಡ್-19 ನಿರ್ವಹಣೆಯ ಒಂದಿಲ್ಲೊಂದು ತಂಡಗಳಲ್ಲಿ ನೇರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಅಥವಾ ಇನ್ನಿತರ ರೀತಿಯಲ್ಲಿ ತೊಡಕಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

    ಜನರ ಅನುಕೂಲಕ್ಕಾಗಿ ಕಿಯೋಸ್ಕ್ ಅಳವಡಿಸಲಾಗುತ್ತಿದ್ದು, ಜನ ಅನ್‍ಲೈನ್ ಮೂಲಕ ಯಾವುದೇ ರೀತಿಯ ವರದಿ ಅಥವಾ ಅರ್ಜಿಗಳನ್ನು ಪಡೆದುಕೊಳ್ಳಬಹುದು ಎಂದು ಅದೇಶದಲ್ಲಿ ತಿಳಿಸಲಾಗಿದೆ. ಕಿಯೋಸ್ಕ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಅಗತ್ಯ ಮುಂಜಾಗ್ರತೆ ವಹಿಸಿ ಸಾರ್ವಜನಿಕರ ಅರ್ಜಿಗಳಿಗೆ ಸ್ಪಂದಿಸುವಂತೆ ಹಾಗೂ ಕೆಲಸ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.

  • ಕಾಟಾಚಾರಕ್ಕೆ ಚೆಕ್ ಪೋಸ್ಟ್ ಸ್ಥಾಪನೆ- ಜಿಲ್ಲಾಡಳಿತದ ವಿರುದ್ಧ ಜನ ಆಕ್ರೋಶ

    ಕಾಟಾಚಾರಕ್ಕೆ ಚೆಕ್ ಪೋಸ್ಟ್ ಸ್ಥಾಪನೆ- ಜಿಲ್ಲಾಡಳಿತದ ವಿರುದ್ಧ ಜನ ಆಕ್ರೋಶ

    ಚಾಮರಾಜನಗರ: ಜಿಲ್ಲೆಯಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ಕಡೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಮರು ಸ್ಥಾಪಿಸಲಾಗಿದೆ. ಆದರೆ ಈ ಚೆಕ್ ಪೋಸ್ಟ್ ಗಳು ನಾಮಕಾವಸ್ಥೆ ಎಂಬಂತಿದ್ದು ಇವುಗಳ ಉದ್ದೇಶವೇ ವಿಫಲವಾಗಿದೆ.

    ಹೊರ ಜಿಲ್ಲೆಗಳಿಂದ ಅನಾವಶ್ಯಕವಾಗಿ ಬರುವವರನ್ನು ನಿರ್ಬಂಧಿಸುವುದು ಉಳಿದವರನ್ನು ಚೆಕ್ ಪೋಸ್ಟ್ ಗಳಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ತಪಾಸಣೆ ನಡೆಸುವುದು, ರೋಗ ಲಕ್ಷಣ ಇದ್ದರೆ ವಾಪಸ್ ಕಳುಹಿಸುವ ಉದ್ದೇಶದಿಂದ ಈ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹಾಗೆಯೇ ಚಾಮರಾಜನಗರ ಜಿಲ್ಲೆಯಿಂದ ಹೊರಜಿಲ್ಲೆಗಳಿಗೆ ಕಾರಣವಿಲ್ಲದೆ ಹೋಗುವವರಿಗೆ ನಿರ್ಬಂಧ ಹೇರುವುದು ಈ  ಚೆಕ್ ಪೋಸ್ಟ್ ಗಳ ಉದ್ದೇಶವಾಗಿದೆ. ಆದರೆ ಇಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ವಾಹನಗಳು  ಚೆಕ್ ಪೋಸ್ಟ್ ಗಳ ಮೂಲಕ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ.

    ಪ್ರತಿ ಚೆಕ್ ಪೋಸ್ಟ್ ಗು ಒಬ್ಬ ನೂಡಲ್ ಅಧಿಕಾರಿ ಸೇರಿದಂತೆ ಒಂದು ಪಾಳಿಗೆ ಆರು ಮಂದಿ ಸರ್ಕಾರಿ ನೌಕರರನ್ನು ನಿಯೋಜಿಸಲಾಗಿದೆ. ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ. ಇವರ ಜೊತೆ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಿಂದ ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬಾಣಹಳ್ಳಿ, ಹೆಗ್ಗವಾಡಿ, ಹಿರಿಕಾಟಿ, ಟಗರಪುರ ಸತ್ತೇಗಾಲ ಬಳಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು ಇವುಗಳ ಉದ್ದೇಶ ಕಾರ್ಯಗತವಾಗದೆ ನಿಷ್ಪ್ರಯೋಜಕವಾಗಿವೆ.

    ಚೆಕ್ ಪೋಸ್ಟ್ ಗಳ ಬಳಿ ಶಾಮಿಯಾನಗಳನ್ನು ಹಾಕಲಾಗಿದೆ. ತಮ್ಮ ಸರದಿ ಬಂದಾಗ ಇಲ್ಲಿಗೆ ಬರುವ ಸರ್ಕಾರಿ ನೌಕರರು ಮತ್ತು ಪೊಲೀಸರು ಶಾಮಿಯಾನದಡಿ ಕುಳಿತು ತಮ್ಮ ಅವಧಿ ಮುಗಿದ ನಂತರ ಹೋಗತೊಡಗಿದ್ದಾರೆ. ಹಾಗಾಗಿ ಯಾವ ಪುರುಷಾರ್ಥಕ್ಕೆ ಈ  ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂಬ ಆರೋಪಗಳು ಕೇಳಿಬರತೊಡಗಿವೆ.