Tag: District Administration

  • ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಅರ್ಭಟ ಹೆಚ್ಚಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಹ ಹಾಗೂ ಭೂಕುಸಿತ ಉಂಟಾಗುವ ಸ್ಥಳಗಳನ್ನು ಗುರುತು ಮಾಡಿದೆ.

    ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲುವಿನ 771 ಕುಟುಂಬದ 2688, ಮಡಿಕೇರಿ ನಗರ ವ್ಯಾಪ್ತಿಯ 381 ಕುಟುಂಬದ 1948, ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ಹುದಿಕೇರಿ, ಬಾಳೆಲೆ ಹೋಬಳಿಯ 192 ಕುಟುಂಬದ 660, ಕುಶಾಲನಗರ ನಗರ ವ್ಯಾಪ್ತಿಯ 347 ಕುಟುಂಬದ 1366, ಸೋಮವಾರಪೇಟೆ ಹೋಬಳಿಯ ಕುಶಾಲನಗರ, ಸುಂಟಿಕೊಪ್ಪ, ಶಾಂತಳ್ಳಿ, ಕೊಡ್ಲಿಪೇಟೆ ವ್ಯಾಪ್ತಿಯ 796 ಕುಟುಂಬದ 2796, ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ 213 ಕುಟುಂಬದ 922, ವೀರಾಜಪೇಟೆ ಗ್ರಾಮಾಂತರದ 112 ಕುಟುಂಬದ 442, ವೀರಾಜಪೇಟೆ ನಗರದ 66 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾದ ಪಟ್ಟಿಯಲ್ಲಿವೆ.

    77 ಕಾಳಜಿ ಕೇಂದ್ರ ಸೇರಿದಂತೆ 5 ತಾಲೂಕಿನ ಎಲ್ಲ ಹೋಬಳಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಕೇಂದ್ರಗಳನ್ನು ಗುರುತಿಸಿದೆ. ಮಳೆ ಹೆಚ್ಚಾಗಿ, ಸಮಸ್ಯೆ ಸಂಭವಿಸಿದರೆ ತ್ವರಿತವಾಗಿ ಕಾಳಜಿ ಕೇಂದ್ರಕ್ಕೆ ಬೇಕಾದ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

  • ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ದಶಕದಿಂದ ಹಕ್ಕು ಪತ್ರಕ್ಕಾಗಿ ನೆರೆ ಪೀಡಿತರ ಹೋರಾಟ – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ

    ಕಲಬುರಗಿ: ಪ್ರತಿ ವರ್ಷ ಮಹಾರಾಷ್ಟ್ರದಲ್ಲಿ ಧಾರಕಾರ ಮಳೆಯಾದ್ರೆ ಕಲಬುರಗಿ ಜಿಲ್ಲೆಯ ಭೀಮಾ ನದಿಯಲ್ಲಿ ಪ್ರವಾಹ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅಫಜಲಪುರದ ದುಧಣಗಿ ಗ್ರಾಮ ಇಡೀ ಜಲಾವೃತಗೊಂಡು ಜನ ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದರು. ಈ ಗ್ರಾಮದ ಜನರಿಗೆ ಸ್ಥಳಾಂತರಕ್ಕೆ ಗ್ರಾಮದ ಹೊರವಲಯದಲ್ಲಿ ಜಮೀನು ಗುರುತಿಸಿ 10 ವರ್ಷ ಕಳೆದಿದ್ದರೂ ಹಕ್ಕುಪತ್ರ ನೀಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿಯ ನಿರಂತರ ವರದಿಯ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

    ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಪ್ರವಾಹ ಬಂದು ಉಂಟಾಗಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು. ಈ ಕುರಿತು ಪಬ್ಲಿಕ್ ಟಿವಿ ನೆರೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿ, ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಕಲಬುರಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಇದನ್ನೂ ಓದಿ: ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ

    ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಇದೀಗ ನೆರೆ ಪೀಡಿತ ದುಧಣಗಿ ಗ್ರಾಮದ 546 ಕುಟುಂಬಗಳಿಗೆ ಹಕ್ಕು ಪತ್ರ ನೀಡಿದೆ. ಈ ಮೂಲಕ ಇನ್ನೇನು ಕೆಲ ದಿನಗಳಲ್ಲಿ ಪ್ರವಾಹ ಬರುತ್ತೆ ಅಂತಾ ಗ್ರಾಮದ ಜನ ಆತಂಕದಲ್ಲಿರುವಾಗಲೇ ಜಿಲ್ಲಾಡಳಿತ ಗ್ರಾಮದ ಪುನರ್‍ವಸತಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

  • ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

    ಕೋವಿಡ್ ನಡುವೆ ಕೊಡಗಿನಲ್ಲಿ ಮತ್ತೆ ಪ್ರವಾಹದ ಭೀತಿ

    ಮಡಿಕೇರಿ: ಕೋವಿಡ್ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.

    ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಬಾರಿಯೂ ಪ್ರವಾಹ ಉದ್ಭವಿಸುವುದಿಲ್ಲ ಎನ್ನುವ ಯಾವ ಖಾತರಿಯೂ ಇಲ್ಲ. ಇದರ ನಡುವೆ ಕೋವಿಡ್ ಸೋಂಕಿನ ಭೀತಿ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರಿಗೆ ಆತಂಕ ಶುರುವಾಗಿದೆ.

    ಮಳೆ ಹೆಚ್ಚಾಯಿತೆಂದರೆ ಕೊಡಗಿನ ಭಾಗಮಂಡಲದಿಂದ ಆರಂಭವಾಗಿ ಇತ್ತ ಕಣಿವೆ ಗ್ರಾಮದವರೆಗೂ ಕಾವೇರಿ ನದಿ ದಂಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರ ಗುಂಡಿ ಬರಡಿ ಸೇರಿದಂತೆ ಹಲವು ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತವೆ. ಇದನ್ನು ಓದಿ: ಹಿಂದೂ ಧಾರ್ಮಿಕ ದತ್ತಿಯಿಂದ ಮಸೀದಿ, ಮದರಸಾಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರ- ವಿಹೆಚ್‍ಪಿ ವಿರೋಧ

    ಈ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಬದಲಿ ವಸತಿ ವ್ಯವಸ್ಥೆ ಆಗಿಲ್ಲ. ಹೀಗಾಗಿ ನದಿ ದಂಡೆಯಲ್ಲಿಯೇ ಮತ್ತೆ ಶೆಡ್‍ಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಈ ಬಾರಿಯೂ ಪ್ರವಾಹ ಎದುರಾಗಿದ್ದೇ ಆದಲ್ಲಿ ಇಂತಹ ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಕಳೆದ ಮೂರು ವರ್ಷದಂತೆ ಈ ಬಾರಿಯೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾಗಿರುವುದು ಅಗತ್ಯ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದಾರೆ.

    ಜಿಲ್ಲಾಡಳಿತ ಈ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರೆ ಕೋವಿಡ್ ಸೋಂಕು ತೀವ್ರವಾಗಿ ಹರಡುವುದು ಖಚಿತ. ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ. ಕುಂಬಾರಗುಂಡಿ, ನೆಲ್ಯಹುದಿಕೇರಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಇಂದಿಗೂ ಸಾಕಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸ್ಥಿತಿ ಹೀಗಿರುವಾಗ ಪ್ರವಾಹ ಎದುರಾಗುತ್ತಿದ್ದಂತೆ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸಿದ್ದೆ ಆದಲ್ಲಿ ಕೋವಿಡ್ ಸೋಂಕು ಕಾಳಜಿ ಕೇಂದ್ರಗಳಿಗೆ ಬರುವ ಎಲ್ಲರಿಗೂ ಹರಡುವುದು ಸತ್ಯ. ಇದನ್ನು ಓದಿ: ತರಕಾರಿ ವಾಹನದಲ್ಲಿ ಮದ್ಯ ಸಾಗಾಟ – 500 ಲೀಟರ್ ಎಣ್ಣೆ ವಶಕ್ಕೆ ಪಡೆದ ಪೊಲೀಸರು

    ಈ ಪ್ರವಾಹ ಎದುರಾಗುವ ಎಲ್ಲಾ ಗ್ರಾಮಗಳ್ಲಲಿರುವ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡುವಂತೆ ಜನ ಆಗ್ರಹಿಸುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಾದರೆ ಮಳೆಯ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದೆವು. ಆದರೆ ಈ ಬಾರಿ ಕೋವಿಡ್ ಸೋಂಕು ಇರುವುದರಿಂದ ಸಂಬಂಧಿಕ ಮನೆಗಳಿಗೂ ಹೋಗುವುದಕ್ಕೆ ಹಿಂದೆ ಮುಂದೆ ನೋಡಬೇಕಾಗಿದೆ. ಹೀಗಾಗಿ ತಕ್ಷಣವೇ ಜನರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

  • ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರಿನಲ್ಲಿ ನಿಯಂತ್ರಣ, ಜಿಲ್ಲೆಗಳಲ್ಲಿ ಸ್ಫೋಟ – ಕೊರೊನಾ ಹೆಚ್ಚಾಗಲು ಕಾರಣ ಏನು?

    ಬೆಂಗಳೂರು: ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಸಾಂಕ್ರಾಮಿಕ ರೋಗ, ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಜಿಲ್ಲೆಗಳಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ.

    ಯಾಕೆ ಹೆಚ್ಚಾಯ್ತು?
    ಆರಂಭದ ಹಂತದಲ್ಲಿ ಸರ್ಕಾರ ಕೇವಲ ಬೆಂಗಳೂರಿನತ್ತ ಗಮನವನ್ನು ಕೇಂದ್ರೀಕರಿಸಿತು. ಜಿಲ್ಲೆಗಳಿಗೆ ಬೆಂಗಳೂರಿನಿಂದ ಗುಳೆ ಹೊರಡುವ ಸಮಯದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಗೋಜಿಗೆ ಹೋಗದೇ ಸುಮ್ಮನಾಯಿತು. ಹೀಗಾಗಿ ನಗರದತ್ತ ಇದ್ದ ಕೊರೊನಾ ಇದೀಗ ಹಳ್ಳಿಗಳಿಗಳಲ್ಲಿಯೂ ಹಬ್ಬುತ್ತಿದೆ.

    ಮಾರ್ಗಸೂಚಿ ಸಡಿಲಿಕೆ ಮಾಡಿದ್ದರಿಂದ ಉಸ್ತುವಾರಿ ಸಚಿವರುಗಳು ಆಯಾಯ ಜಿಲ್ಲೆಯ ಪರಿಸ್ಥಿತಿಯನ್ನು ಮನಕಂಡು ಟಫ್ ರೂಲ್ಸ್ ತರುವುದಕ್ಕೆ ಹೊರಟಿದ್ದರು. ಆದರೆ ಸರ್ಕಾರ ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಕಾರಣ ನೀಡಿ ಟಫ್ ರೂಲ್ಸ್‍ಗೆ ಅವಕಾಶ ನೀಡಲಿಲ್ಲ.

    ಗ್ರಾಮೀಣ ಭಾಗದಲ್ಲಿ ಖಾಕಿ ಫೋರ್ಸ್‍ನ್ನು ಜನರನ್ನು ನಿಯಂತ್ರಿಸಲು ಇನ್ನಷ್ಟು ಹೆಚ್ಚಾಗಿ ಬಳಸಬೇಕಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಜನರು ಓಡಾಟ ನಡೆಸಿದರು. ಅಲ್ಲದೆ ಮದುವೆ ಸಮಾರಂಭಗಳಿಗೆ ಅವಕಾಶ ಕೊಂಡಿದ್ದರಿಂದ ಸ್ಥಳೀಯ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹೆಚ್ಚಿನ ಜನ ಸೇರುತ್ತಿದ್ದರು.

    ಲಾಕ್‍ಡೌನ್ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನೂ ಹೆಚ್ಚು ಕೇಸ್ ಇರುವ ಭಾಗದಲ್ಲಿ ಮಾರ್ಕೆಟ್‍ಗಳ ತೆರೆದಿದ್ದರಿಂದ ಜನರು ಹೆಚ್ಚಾಗಿ ಸೇರುತ್ತಿದ್ದರು. ಜಿಲ್ಲೆಗಳಲ್ಲಿ ಟೆಸ್ಟಿಂಗ್‍ನತ್ತ ಕೂಡ ಗಮನವೇ ಹರಿಸಿಲ್ಲ. ಟೆಸ್ಟಿಂಗ್ ಹೆಚ್ಚಿಸಬೇಕಾಗಿತ್ತು.

    ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್‍ನಲ್ಲಿ ಜಿಲ್ಲಾಡಳಿತ ಕೂಡ ಎಡವಿತು. ಈ ಎಲ್ಲಾ ಕಾರಣಗಳಿಂದ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

  • ಕೊಡಗಿನಲ್ಲಿ ಮಂಗಳವಾರ, ಶುಕ್ರವಾರ ಅರ್ಧ ದಿನ ಮಾತ್ರ ಅಂಗಡಿ ಓಪನ್

    ಕೊಡಗಿನಲ್ಲಿ ಮಂಗಳವಾರ, ಶುಕ್ರವಾರ ಅರ್ಧ ದಿನ ಮಾತ್ರ ಅಂಗಡಿ ಓಪನ್

    – ಉಳಿದ ದಿನ ಪೂರ್ತಿ ಬಂದ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳಿಗೆ ಜಿಲ್ಲಾಡಳಿತ ಮುಂದಾಗಿದೆ.

    ಇನ್ನೂ ಮುಂದೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಜಿಲ್ಲೆಯಾದ್ಯಂತ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ದಿನಸಿ, ಹಣ್ಣು-ತರಕಾರಿ, ಮಾಂಸದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಹಾಗೂ ಉಳಿದ ದಿನ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳಿಗೆ ಬಂದ್ ಅನ್ವಯಿಸುವುದಿಲ್ಲ. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಪತ್ರಿಕೆ ವಿತರಣೆಗೆ ಪ್ರತಿನಿತ್ಯ ಬೆಳಗ್ಗೆ 6 ರಿಂದ 10 ಗಂಟೆವರೆಗೆ ವಹಿವಾಟಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು-ಮೈಸೂರು ಕೇರಳದಿಂದ ಬಂದವರಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಜಿಲ್ಲಾಧಿಕಾರಿ, ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ಪಡೆಗಳು ಹೊರ ಊರುಗಳಿಂದ ಬಂದವರು ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಸೋಂಕು ತಡೆಯಲು ಪ್ರತಿಯೊಬ್ಬರೂ ಜಿಲ್ಲಾ ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ಮಸ್ಕಿ ಉಪಚುನಾವಣೆ ಮತ ಎಣಿಕೆ – ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

    ಮಸ್ಕಿ ಉಪಚುನಾವಣೆ ಮತ ಎಣಿಕೆ – ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

    – ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ

    ರಾಯಚೂರು: ನಾಳೆ ನಡೆಯಲಿರುವ ಮಸ್ಕಿ ಉಪಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರದ ಎಸ್‍ಆರ್‍ಪಿಎಸ್ ಪಿಯು ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ ನಿಯಮ ಪಾಲನೆ ಮಾಡಿ ಮತ ಎಣಿಕೆಗೆ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಚುನಾವಣಾಧಿಕಾರಿ ಹಾಗೂ ರಾಯಚೂರು ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುತ್ತದೆ. 3 ಕೊಠಡಿಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಕೊಠಡಿಗೆ 4 ರಂತೆ ಒಟ್ಟು 12 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ 3 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಕೌಂಟಿಂಗ್ ಸೂಪರ್ ವೈಸರ್, ಕೌಂಟಿಂಗ್ ಅಸಿಸ್ಟೆಂಟ್, ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸುತ್ತಾರೆ. ಪ್ರತಿ ಟೇಬಲ್‍ಗೆ ಒಬ್ಬ ಮತ ಎಣಿಕೆ ಏಜೆಂಟ್‍ಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೂ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಮಸ್ಕಿ ಕಣದಲ್ಲಿ 8 ಜನ ಅಭ್ಯರ್ಥಿಗಳು ಇದ್ದು, ಕೋವಿಡ್ ನಿಯಮದಂತೆ ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಬಳಕೆ ಕಡ್ಡಾಯ ಹಾಗೂ ಮತ ಎಣಿಕೆ ವೇಳೆ ಇಬ್ಬರ ಮಧ್ಯೆ ಒಬ್ಬ ಏಜೆಂಟ್ ಪಿಪಿಇ ಕಿಟ್ ಧರಿಸಬೇಕು.

    ಒಟ್ಟು 26 ಸುತ್ತಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ವಿಜಯೋತ್ಸವ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ ಹೊರಗಡೆ ಜನ ಸೇರುವುದು ಸಹ ಚುನಾವಣೆ ಆಯೋಗ ನಿಷೇಧಿಸಿದೆ ಅಂತ ರಾಯಚೂರು ಡಿಸಿ ಆರ್. ವೆಂಕಟೇಶ್ ಕುಮಾರ್ ಹೇಳಿದ್ದಾರೆ.

    ಚುನಾವಣೆಯಲ್ಲಿ ಒಟ್ಟು 1,45,458 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶೇ 70.48 ರಷ್ಟು ಮತದಾನವಾಗಿತ್ತು. 175 ಅಂಚೆ ಮತ ಪತ್ರಗಳಿವೆ. ಕಾಂಗ್ರೆಸ್‍ನ ಬಸನಗೌಡ ತುರ್ವಿಹಾಳ ಹಾಗೂ ಬಿಜೆಪಿಯ ಪ್ರತಾಪಗೌಡ ಪಾಟೀಲ್ ಮಧ್ಯೆ ತೀವ್ರ ಪೈಪೋಟಿಯಿದೆ. ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದು ಭವಿಷ್ಯ ನಾಳೆ ಪ್ರಕಟವಾಗಲಿದೆ.

  • ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಕೋವಿಡ್ ಕೇರ್ ಸೆಂಟರ್ ತೆರೆಯಲು ಆದಿವಾಸಿಗಳ ಅಕ್ರೋಶ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಹೆಚ್ಚುವರಿಯಾಗಿ ಬೇಡ್ ಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯುವುದಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಆದಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲಾಡಳಿತ ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಭಾಗದ ಮೊರಾರ್ಜಿ ಶಾಲೆಯ ಸುತ್ತ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್ ಸೆಂಟರ್ ಆರಂಭಿಸಿದರೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ರಸ್ತೆಗೆ ಕಲ್ಲುಗಳನ್ನು ಅಡ್ಡ ಹಾಕಿ ಪ್ರತಿಭಟನೆ ಮಾಡಿದ್ದಾರೆ.

    ಶಾಲೆಯ ಸುತ್ತ ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿವೆ. ಕೋವಿಡ್ ಕೇರ್ ಸೆಂಟರ್ ತೆರೆದಲ್ಲಿ ನಮ್ಮೆಲ್ಲರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ನಮ್ಮಲ್ಲಿ ಒಬ್ಬರಿಗೆ ಸೋಂಕು ಹರಡಿದರೆ ಎಲ್ಲರಿಗೂ ಹರಡುವುದು ಖಚಿತ. ಇಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬದಲು ಸರ್ಕಾರವೇ ವಿಷ ಕೊಡಲಿ ಎಂದು ಆದಿವಾಸಿಗಳ ಮುಖಂಡ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮದುವೆ ಮಾಡ್ಬೇಕಾದ್ರೆ ಅನುಮತಿ ಜೊತೆ ಕೈ ಬ್ಯಾಂಡ್ ಹಾಕ್ಕೋಬೇಕು- ಧಾರವಾಡ ಜಿಲ್ಲಾಡಳಿತದ ಹೊಸ ಪ್ಲಾನ್

    ಮದುವೆ ಮಾಡ್ಬೇಕಾದ್ರೆ ಅನುಮತಿ ಜೊತೆ ಕೈ ಬ್ಯಾಂಡ್ ಹಾಕ್ಕೋಬೇಕು- ಧಾರವಾಡ ಜಿಲ್ಲಾಡಳಿತದ ಹೊಸ ಪ್ಲಾನ್

    ಧಾರವಾಡ: ಜಿಲ್ಲೆಯಲ್ಲಿ ಮದುವೆ ಮಾಡಬೇಕಾದ್ರೆ, ಮದುವೆ ಅನುಮತಿ ಜೊತೆಗೆ ಕೈಗೆ ಬ್ಯಾಂಡ್ ಕೂಡ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇದು ಜಿಲ್ಲೆಯಲ್ಲಿ ನಡೆಯುವ ಮದುವೆಗಳಿಗಾಗಿಯೇ ಐವತ್ತು ಜನರಿಗೆ ಅನುಮತಿ ನೀಡಲು ಜಿಲ್ಲಾಧಿಕಾರಿಗಳು ಮಾಡಿರೋ ಹ್ಯಾಂಡ್ ಬ್ಯಾಂಡ್ ಐಡಿಯಾ.

    ಧಾರವಾಡ ಜಿಲ್ಲಾಡಳಿತ ಅನುಮತಿ ಜೊತೆಗೆ ಮದುವೆ ಆಯೋಜಕರಿಗೆ ವಿಶೇಷವಾದ ಬ್ಯಾಂಡ್‍ಗಳನ್ನು ನೀಡುತ್ತಿದ್ದು, ಮದುವೆಗಳಲ್ಲಿ ಭಾಗವಹಿಸುವ 50 ಜನರ ಕೈಗಳಿಗೆ ಧರಿಸಲು ಸೂಚಿಸುತ್ತಿದೆ. ಈ ಬ್ಯಾಂಡ್ ಇದ್ದವರಿಗಷ್ಟೇ ಮದುವೆಗೆ ಅವಕಾಶ ಇರುತ್ತದೆ. ಆಯೋಜಕರಿಗೆ ಹಾಗೂ ಅಧಿಕಾರಿಗಳಿಗೆ ಥಟ್ಟಂತ ಸಂಖ್ಯಾ ನೀತಿಯನ್ನು ಖಾತರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ಈ ವಿಶೇಷ ಬ್ಯಾಂಡ್ ತಯಾರಿಸಿದ್ದಾರೆ.

    ಧಾರವಾಡ ಜಿಲ್ಲಾಡಳಿತವೇ ಈ ಬ್ಯಾಂಡ್ ನೀಡುತ್ತಿದ್ದು, ಮದುವೆ ಅನುಮತಿ ಜೊತೆಗೆನೇ ಇದನ್ನು ನೀಡಲಾಗುತ್ತದೆ. ಬ್ಯಾಂಡ್ ಮೇಲೆ ಕೊವಿಡ್ 19 ಪಾಸ್ ಎಂದು ಬರೆಯಲಾಗಿದೆ. ಅಲ್ಲದೆ ಧಾರವಾಡ ಜಿಲ್ಲೆ ಎಂದು ಬರೆದು, ಅದರ ಕೆಳಗೆ ಬ್ಯಾಂಡ್ ಸಂಖ್ಯೆ ಹಾಕಲಾಗಿದೆ. ಅವರವರ ಹೆಸರಿಗೆ ತಕ್ಕಂತೆ ರಜಿಸ್ಟರ್ ಸಂಖ್ಯೆ ಹಾಕಿ ಈ ಬ್ಯಾಂಡ್‍ಗಳನ್ನು ನೀಡಲಾಗಿದ್ದು, ಒಂದು ಸಲ ಇದನ್ನು ಕೈಗೆ ಹಾಕಿಕೊಂಡರೆ ತೆಗೆದು ಮತ್ತೊಬ್ಬರಿಗೆ ಹಾಕಲು ಬರುವುದಿಲ್ಲ. ಆ ಪ್ರಯತ್ನ ಮಾಡಿದರೆ ಬ್ಯಾಂಡ್ ತುಂಡಾಗಿ ಬಿಡುತ್ತದೆ. ಇದರಿಂದ ಕೇವಲ 50 ಜನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ನಿಗಾವಹಿಸಲು ಸಾಧ್ಯವಾಗುತ್ತದೆ. ಈ ರೀತಿ ಬ್ಯಾಂಡ್ ಕೊಡುತ್ತಿರುವುದು ನಮಗೂ ಅನುಕೂಲ ಆಗಿದೆ ಹಾಗೂ ಜಿಲ್ಲಾಡಳಿತದ ಈ ಕೆಲಸ ಶ್ಲಾಘನಿಯ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ 10 ಸಾವಿರ ಬ್ಯಾಂಡ್‍ಗಳನ್ನು ಮದುವೆ ಮನೆಯವರಿಗೆ ವಿತರಣೆ ಮಾಡಲಾಗಿದೆ. ಇನ್ನೂ 10 ಸಾವಿರ ತಯಾರಿಸಲು ಹೇಳಲಾಗಿದೆ. ಇವತ್ತು ನಡೆದ ಹಲವು ಮದುವೆಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಮದುವೆಯಲ್ಲಿ ಇದ್ದ ಜನರಿಗೆ ಪರಿಶೀಲನೆ ಕೂಡಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದರು.

  • ಕೊರೊನಾ ಎಫೆಕ್ಟ್- ಮಡಿಕೇರಿ ದಸರಾದ ಕರಗ ಎರಡು ದಿನಕ್ಕೆ ಸೀಮಿತ

    ಕೊರೊನಾ ಎಫೆಕ್ಟ್- ಮಡಿಕೇರಿ ದಸರಾದ ಕರಗ ಎರಡು ದಿನಕ್ಕೆ ಸೀಮಿತ

    ಮಡಿಕೇರಿ: ಕೊರೊನಾ ವೈರಸ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಸರಳ ದಸರಾಗೆ ಮುಂದಾಗಿದ್ದು, ಕರಗ ಮಹೋತ್ಸವವನ್ನು ಸಹ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.

    ಜಿಲ್ಲಾಡಳಿತದ ನಿರ್ಧಾರಕ್ಕೆ ದಸರಾ ಸಮಿತಿಯವರು ಸಹ ಸಮ್ಮತಿಸಿದ್ದಾರೆ. ಹೀಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡಿ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಮಂಜಿನನಗರಿ ಮಡಿಕೇರಿಯ ದಸರಾ ಈ ಬಾರಿ ನಿರಾಡಂಬರವಾಗಿ ನಡೆಯಲಿದೆ.

    ದಸರಾ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಳ ಹಾಗೂ ಸಂಪ್ರದಾಯಿಕವಾಗಿ ತಲಕಾವೇರಿ ಜಾತ್ರೆ ಹಾಗೂ ಮಡಿಕೇರಿ ದಸರಾ ಆಚರಿಸಬೇಕು. ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಪ್ರತಿಯೊಬ್ಬರು ಸೂಕ್ಷ್ಮತೆಯಿಂದ ವರ್ತಿಸಬೇಕಾಗಿದೆ. ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಚಾರ ಅಥವಾ ಲೋಪ ಉಂಟಾಗದಂತೆ ಹಾಗೂ ವಿಜೃಂಭಣೆಯಿಂದ ದಸರಾ ಆಚರಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಕರಗ ಉತ್ಸವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಂಪ್ರದಾಯಬದ್ಧವಾಗಿ ನಡೆಸಲು ಸೂಚಿಸಿದ್ದಾರೆ. ಅದರಂತೆ ಕರಗ ಆಚರಣೆ ನಡೆಯಲಿದೆ.

    ಕರಗ ಉತ್ಸವ ಎರಡೇ ದಿನ
    ಅ.17ರಂದು ಸಂಜೆ ವೇಳೆಗೆ ಮಡಿಕೇರಿ ನಗರದ ಪಂಪಿನ ಕೆರೆಯಿಂದ ಕರಗೋತ್ಸವಕ್ಕೆ ಚಾಲನೆ ದೊರೆಯಲಿದೆ. ಅ.17 ಹಾಗೂ 26 ರಂದು ಮಾತ್ರ ಕರಗ ನಗರ ಪ್ರದಕ್ಷಿಣೆ ನಡೆಯಲಿದ್ದು, ಈ ಸಂದರ್ಭ ಹೆಚ್ಚು ಮಂದಿ ಸೇರುವುದಿಲ್ಲ. ಅಲ್ಲದೆ ಕರಗ ಹೋರುವ ವೃತ್ತದಾರಿಗಳು ಹಾಗೂ ದೇವಾಲಯದ ಸಮಿತಿ ಸದಸ್ಯರುಗಳಿಗೆ ಇಂದು ಮಡಿಕೇರಿ ನಗರದ ನಗರಸಭೆಯಲ್ಲಿ ಕೋವಿಡ್ ಟೇಸ್ಟ್ ಮಾಡಿಸಲಾಗುತ್ತಿದೆ. ಕರಗ ಮಹೋತ್ಸವ 17 ರಂದು ಸಂಜೆ ಆರಂಭಗೊಂಡು ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ಬಳಿಕ ತಮ್ಮ ದೇವಾಲಯಗಳಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳು ತೆರಳಿದೆ ಎಂದು ಸಮಿತಿ ಮಾಹಿತಿ ನೀಡಿದೆ.

    ಮಂಟಪ ಮೆರವಣಿಗೆ ಇಲ್ಲ
    ದಸರಾದ ಪ್ರಮುಖ ಆಕರ್ಷಣೆಯಾದ ಮಂಟಪ ಮೆರವಣಿಗೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಮಂಟಪ ಮೆರವಣಿಗೆ ನಡೆಸಿದರೆ ಜನಸಂದಣಿ ನಿಯಂತ್ರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುವುದರಿಂದ ಅ.26ರ ವಿಜಯದಶಮಿಯಂದು ಮಂಟಪ ಸಮಿತಿಗಳು ಕಳಸ ಪ್ರತಿಷ್ಠಾಪನೆ ಮಾಡಲಿವೆ. ಪ್ರತಿ ಮಂಟಪ ಸಮಿತಿಯಿಂದಲೂ ಹತ್ತು ಮಂದಿ ಕಳಸದೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ, ಬನ್ನಿ ಕಡಿಯುವುದರ ಮೂಲಕ ಮಡಿಕೇರಿ ದಸರಾಗೆ ಮಂಗಳ ಹಾಡಲಾಗುತ್ತದೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.

  • ಕೊಡಗಿನ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ

    ಕೊಡಗಿನ ಅನಧಿಕೃತ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮ

    – 935 ಹೋಂ ಸ್ಟೇಗಳಿಗಾಗಿ ಅರ್ಜಿ

    ಮಡಿಕೇರಿ: ಕೊರೊನಾ ಲಾಕ್‍ಡೌನ್ ಸಡಿಲಿಕೆಯ ನಂತರ ಹೋಂಸ್ಟೇಗಳ ಪುನರ್ ಆರಂಭಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಕೊರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸುವುದಕ್ಕಾಗಿ ಹೋಂಸ್ಟೇಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಿಣಿ ಜಾಯ್ ಎಚ್ಚರಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಈ ವರೆಗೆ 935 ಹೋಂಸ್ಟೇಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದು, 480 ಹೋಂಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 397 ಹೋಂಸ್ಟೇಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಉಳಿದ ಹೋಂಸ್ಟೇಗಳನ್ನು ತೆರೆದಲ್ಲಿ ಅವುಗಳ ಮೇಲೂ ಕಾನೂನಾತ್ಮಕವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಹೋಂಸ್ಟೇ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳಲ್ಲದಿದ್ದರೆ, ಅವುಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    ನೋಂದಣಿಗಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಹೋಂಸ್ಟೇಗಳ ನೋಂದಣಿ ಮಾಡಲು ತುಂಬಾ ವಿಳಂಬವಾಗುತ್ತಿದೆ. ಇದನ್ನು ಸರಿಮಾಡಲು, ಕಂದಾಯ ಇಲಾಖೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕಂದಾಯ ಇಲಾಖೆ ಮತ್ತು ಪಿಡಿಓಗಳಿಗೆ ಹೋಂಸ್ಟೇಗಳ ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೀಗಾಗಿ ನೋಂದಣಿಯಲ್ಲಿ ಗೊಂದಲವಾಗುತ್ತಿದ್ದು, ಹೋಂಸ್ಟೇ ಮಾಲೀಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಹೋಂಸ್ಟೇ ಮಾಲೀಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.