Tag: District Administration

  • ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು – ಗರ್ಭಿಣಿ ರಕ್ಷಣೆ

    ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು – ಗರ್ಭಿಣಿ ರಕ್ಷಣೆ

    ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದಾಗಿ ಹುಣಸಿಗಿ ತಾಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮವು ನಡುಗಡ್ಡೆಯಾಗಿತ್ತು. ಗ್ರಾಮದ ಗರ್ಭಿಣಿಯೊಬ್ಬರು ಚಿಕಿತ್ಸೆ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಯಾದಗಿರಿ ಜಿಲ್ಲಾಡಳಿತವು ಗರ್ಭಿಣಿಯನ್ನು ರಕ್ಷಣೆ ಮಾಡಿದೆ.

    ನೀಲಕಂಠರಾಯನ ಗಡ್ಡಿ ಗ್ರಾಮ ನಡುಗಡ್ಡೆಯಾಗಿದ್ದು, ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಿಂದ ಹೊರಬಾರದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರೆಳಲು ಮಾರ್ಗವಿಲ್ಲದೆ ವೃದ್ಧರು ಹಾಗೂ ಗರ್ಭಿಣಿ ನರಳಾಡುತ್ತಿದ್ದರು. ನೀಲಕಂಠರಾಯನ ಗಡ್ಡಿಯ ನಿವಾಸಿ ಬಸಮ್ಮ(80) ಮತ್ತು ಗರ್ಭಿಣಿ ಹನುಮಂತಮ್ಮ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸಹಾಯಕ್ಕೆ ಯಾರೂ ಕೂಡ ಬರುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದರು.

    ಗರ್ಭಿಣಿ ಹನುಮಂತಮ್ಮ ಅನುಭವಿಸುತ್ತಿರುವ ಯಾತನೆಯನ್ನು ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಪಬ್ಲಿಕ್ ಟಿವಿಗೆ ನೀಡಿದ್ದರು. ಪಬ್ಲಿಕ್ ಟಿವಿಯಲ್ಲಿ ಆಗಸ್ಟ್ 13ರಂದು ಸುದ್ದಿ ಪ್ರಸಾರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹನುಮಂತಮ್ಮ ಅವರ ರಕ್ಷಣೆಗೆ ಮುಂದಾಗಿತ್ತು. ಆದರೆ ಕೃಷ್ಣಾ ನದಿಯ ಆರ್ಭಟ ಜೋರಾಗಿದ್ದರಿಂದ ರಕ್ಷಣಾ ಕಾರ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಶನಿವಾರ ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆ ಸಂಜೆ ಅಗ್ನಿಶಾಮಕದಳ ಸಿಬ್ಬಂದಿ ಬೋಟ್ ಮೂಲಕ ಗರ್ಭಿಣಿ ಹನುಮಂತಮ್ಮ ಅವರನ್ನು ರಕ್ಷಣೆ ಮಾಡಿದ್ದಾರೆ.

    ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಮತ್ತು ಎಸ್ ಪಿ ಋಷಿಕೇಶ್ ಭಗವಾನ್ ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯ ನಡೆದಿದೆ. ಸದ್ಯ ಜಿಲ್ಲಾಡಳಿತ ಹನುಮಂತಮ್ಮ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದೆ.

  • ಅಯ್ಯಪ್ಪ, ನೆಹರು ನಗರ ಬೆಟ್ಟಗಳು ವಾಸಕ್ಕೆ ಯೋಗ್ಯವಲ್ಲ- ಭೂ ವಿಜ್ಞಾನಿಗಳ ತಂಡ

    ಅಯ್ಯಪ್ಪ, ನೆಹರು ನಗರ ಬೆಟ್ಟಗಳು ವಾಸಕ್ಕೆ ಯೋಗ್ಯವಲ್ಲ- ಭೂ ವಿಜ್ಞಾನಿಗಳ ತಂಡ

    ಮಡಿಕೇರಿ: ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಮತ್ತು ನೆಹರು ನಗರ ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಿಸಲು ಸುರಕ್ಷಿತವಲ್ಲ ಎಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ.

    ಎರಡೂ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಇಂದು ವಿಜ್ಞಾನಿಗಳ ತಂಡ ಬೆಟ್ಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜ್ಞಾನಿ ಕಪಿಲ್ ಸಿಂಗ್, ಸದ್ಯ ಬೆಟ್ಟದಲ್ಲಿ ಮೂಡಿರುವ ಬಿರುಕುಗಳು ಮುಂದೆ ಗುಡ್ಡ ಕುಸಿತದ ಮುನ್ಸೂಚನೆಯಂತಿವೆ. ಹೀಗಾಗಿ ಅಯ್ಯಪ್ಪ ಹಾಗೂ ನೆಹರು ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಕ್ಕೆ ಸುರಕ್ಷಿತವಾದ ಸ್ಥಳಗಳಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಯಾವಾಗ ಬೇಕಾದರೂ ಬೆಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಅಧ್ಯಯನ ತಂಡ ಹೇಳಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 54 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಆಗಸ್ಟ್ 31 ರವರೆಗೆ ಈ ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುವುದು. ಬಳಿಕ ವಿಜ್ಞಾನಿಗಳ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಇತ್ತೀಚೆಗೆ ಎರಡೂ ಬೆಟ್ಟಗಳು ಭಾರೀ ಬಿರುಕು ಬಿಟ್ಟಿದ್ದವು. ಹೀಗಾಗಿ ಇಂದು ಬೆಂಗಳೂರಿನಿಂದ ಭೂವಿಜ್ಞಾನಿಗಳ ತಂಡ ಆಗಮಿಸಿ, ಎರಡೂ ಬೆಟ್ಟಗಳ ಮಣ್ಣು ಪರೀಕ್ಷೆ ನಡೆಸಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೇತೃತ್ವದಲ್ಲಿ ತಂಡ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಿಲ್ ಸಿಂಗ್ ಮತ್ತು ಸುನಂದ ಬಸು ವಿಜ್ಞಾನಿಗಳ ತಂಡ ಮಳೆಗಾಲದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಇದೆ, ಹೀಗಾಗಿ ಅಲ್ಲಿ ವಾಸ ಮಾಡುವುದು ಯೋಗ್ಯವಲ್ಲ ಎಂದು ದೃಢಪಡಿಸಿದೆ.

    ಈ ಹಿಂದೆಯೇ ವಿರಾಜಪೇಟೆ ನಗರದ ನೆಹರು ನಗರ ಬೆಟ್ಟ ಮತ್ತು ಅಯ್ಯಪ್ಪ ಬೆಟ್ಟ ಕುಸಿಯುವ ಭೀತಿಯಲ್ಲಿವೆ. ನೆಹರು ನಗರದಲ್ಲಿ ಬೆಟ್ಟ ಸಂಪೂರ್ಣ ಬಾಯ್ತೆರಿದಿದ್ದು, ಬೆಟ್ಟದ ಬಿರುಕು ಕ್ಷಣ ಕ್ಷಣಕ್ಕೂ ಅಗಲವಾಗುತ್ತಿದೆ. ಅಲ್ಲದೆ, ಅಯ್ಯಪ್ಪ ಬೆಟ್ಟದಲ್ಲಿ ಸಹ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬೆಟ್ಟ ಕುಸಿಯಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಮುನ್ನೆಚ್ಚರಿಕಾ ಕ್ರಮವಾಗಿ ನೆಹರು ಬೆಟ್ಟದ 8 ಕುಟುಂಬಗಳನ್ನು ಹಾಗೂ ಅಯ್ಯಪ್ಪ ಬೆಟ್ಟದ ಬಳಿಯ 25 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ಎಲ್ಲ ಕುಟುಂಬಗಳಿಗೆ ವಿರಾಜಪೇಟೆಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸ್ಥಳಾಂತರಿಸಿದರೂ ಯಾವ ಪ್ರಮಾಣದಲ್ಲಿ ಗುಡ್ಡ ಕುಸಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ವಿರಾಜಪೇಟೆ ನಗರದ ಜನತೆ ತೀವ್ರ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

  • ಆ.30ರವರೆಗೆ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರಕ್ಕೆ ಬ್ರೇಕ್

    ಆ.30ರವರೆಗೆ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆ ಸಂಚಾರಕ್ಕೆ ಬ್ರೇಕ್

    ಚಿಕ್ಕಮಗಳೂರು: ದತ್ತಪೀಠ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ ರಸ್ತೆ ಭಾಗದಲ್ಲಿ ಗುಡ್ಡ ಕುಸಿತ ಹಿನ್ನೆಲೆ ಗಿರಿಭಾಗದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಆಗಸ್ಟ್ 30ರವರೆಗೆ ಈ ಮಾರ್ಗದ ಸಂಚಾರ ನಿಷೇಧಿಸಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

    ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಗಿರಿಭಾಗದ ಪದೇ-ಪದೇ ಗುಡ್ಡಗಳು ಕುಸಿದು, ಅದರ ಮಣ್ಣು ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನಹಳ್ಳ ರಸ್ತೆಯಲ್ಲಿ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಈ ಮಾರ್ಗದ ಸಂಚಾರಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದೆ.

    ಈಗಾಗಲೇ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಭಾರೀ ಮಳೆಗೆ ಚಾರ್ಮಾಡಿ ಘಾಟಿನ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15ರಿಂದ ಸೆಪ್ಟೆಂಬರ್ 14ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.

    ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟಿನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

  • ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ನಾರಾಯಣಪುರ ಡ್ಯಾಂನಿಂದ ನದಿಗೆ ನೀರು – ಆಹಾರಕ್ಕಾಗಿ ಗ್ರಾಮಸ್ಥರ ಪರದಾಟ

    ರಾಯಚೂರು: ನಾರಾಯಣಪುರ ಜಲಾಶಯದಿಂದ ನದಿಗೆ ಹೆಚ್ಚು ನೀರು ಬಿಟ್ಟ ಹಿನ್ನೆಲೆ ರಾಯಚೂರಿನ ನಡುಗಡ್ಡೆಗಳ ಜನ ಆಹಾರ ಪದಾರ್ಥಗಳಿಗಾಗಿ ನದಿ ದಾಟಲು ಆಗದೆ ಪರದಾಡುತ್ತಿದ್ದಾರೆ.

    ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದರೂ, ಅಗತ್ಯ ವಸ್ತುಗಳಿಗಾಗಿ ಕುರ್ವಕುರ್ದ ಮತ್ತು ಕುರ್ವಕುಲ ನಡುಗಡ್ಡೆಗಳ ಜನ ಅರಗೋಲಿನಲ್ಲೇ ನದಿ ಪಕ್ಕದ ಡೊಂಗರಾಂಪುರಕ್ಕೆ ಬರುತ್ತಿದ್ದಾರೆ. ಜಿಲ್ಲಾಡಳಿತ ಡಂಗೂರ ಸಾರುವ ಮೂಲಕ ಜನರನ್ನು ಶಿಫ್ಟ್ ಆಗುವಂತೆ ಸೂಚನೆ ನೀಡಿತ್ತು. ಸ್ಥಳಾಂತರಗೊಳ್ಳಲು ಒಪ್ಪದ ಗ್ರಾಮಸ್ಥರು ತೆಪ್ಪದಲ್ಲೇ ಓಡಾಡುತ್ತಿದ್ದಾರೆ.

    ಜೀವ ರಕ್ಷಕ ಜಾಕೆಟ್‍ಗಳನ್ನು ನೀಡಿ ಗ್ರಾಮಸ್ಥರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ನಡುಗಡ್ಡೆಗಳ ಜನರ ಸುರಕ್ಷತೆಗಾಗಿ ಎನ್.ಡಿ.ಆರ್.ಎಫ್ ತಂಡ ಸ್ಥಳದ ವೀಕ್ಷಣೆಯನ್ನೂ ನಡೆಸಿದೆ. ಇನ್ನೂ ಕುರ್ವಕುಲ ದತ್ತಾತ್ರೇಯ ಪೀಠಕ್ಕೆ ಭಕ್ತರು ಅರಗೋಲಿನಲ್ಲೇ ಬಂದು ಹೋಗುತ್ತಿದ್ದಾರೆ. ಭಕ್ತರು ಸೆಫ್ಟಿ ಜಾಕೆಟ್ ಹಾಕಿಕೊಂಡು ಪೊಲೀಸ್ ಭದ್ರತೆಯಲ್ಲಿ ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ನದಿಯಲ್ಲಿ ನೀರು ಹೆಚ್ಚಾಗಿರುವುದರಿಂದ ಬೋಟ್ ವ್ಯವಸ್ಥೆ ಮಾಡಬೇಕು ಎಂದು ನಡುಗಡ್ಡೆಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

  • ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಪಾರ್ಕಿಗೆ ಪ್ರವೇಶ ಶುಲ್ಕ ನಿಗದಿ-ಸ್ಥಳೀಯರ ಪ್ರತಿಭಟನೆ

    ಬೆಳಗಾವಿ: ನಗರದಲ್ಲಿರುವ ಪ್ರಸಿದ್ಧ ಕೋಟೆ ಕೆರೆಯ ಗಾರ್ಡನ್ ಪ್ರವೇಶಕ್ಕೆ ಜಿಲ್ಲಾಡಳಿತ ಪ್ರವೇಶ ಶುಲ್ಕ ನಿಗದಿ ಮಾಡಿದ್ದನ್ನು ಖಂಡಿಸಿ ಇಂದು ಬೆಳಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

    ಸ್ಥಳೀಯ ಮತ್ತು ಅಕ್ಕಪಕ್ಕದ ಕಾಲೋನಿ ಜನರಿಗೆ ಕೆರೆಯ ಮೇಲಿರುವ ಗಾರ್ಡನ್ ವಾಯುವಿವಾರ ಸೇರಿದಂತೆ ಮಕ್ಕಳಿಗೆ ಆಟವಾಡಲು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದ ಜನರಿಗೆ ಕುಳಿತು ರಿಲ್ಯಾಕ್ಸ್ ಮಾಡಲು ಅನುಕೂಲ ಆಗಿತ್ತು. ಈಗ ಪ್ರತಿಯೊಬ್ಬರಿಗೂ ಹತ್ತು ರೂಪಾಯಿ ಶುಲ್ಕ ವಿಧಿಸಿದ್ದರಿಂದ ನಿತ್ಯವೂ ಹಣ ಕೊಟ್ಟು ಕೆರೆಯ ಉದ್ಯಾನವನಕ್ಕೆ ಹೋಗಲು ಆಗುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಇಂದು ಬೆಳಗ್ಗೆ ಜಿಲ್ಲಾಡಳಿತದ ವಿರುದ್ಧ ಧರಣಿ ಮಾಡಿ ಆಕ್ರೋಶ ಹೊರ ಹಾಕಿದ್ದು, ಕೂಡಲೇ ಪ್ರವೇಶ ಶುಲ್ಕ ಪಡೆಯುವ ಆದೇಶ ಹಿಂಪಡೆಯುವಂತೆ ಸ್ಥಳೀಯರು ಆಗ್ರಹಿಸಿದರು.

  • ಕೊಡಗಿನಲ್ಲಿ ಜೂನ್ 13ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ

    ಕೊಡಗಿನಲ್ಲಿ ಜೂನ್ 13ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ

    ಮಡಿಕೇರಿ: ಕೊಡಗಿನಲ್ಲಿ ಜೂನ್ 13 ರವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

    ಈ ಮಾಹಿತಿ ಆಧರಿಸಿ ಜಿಲ್ಲೆಯ ಜನರಿಗೆ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೆ ಮುನ್ನೆಚ್ಚರಿಕೆಯಿಂದಿರಿ, ತುರ್ತು ಪರಿಸ್ಥಿತಿಯಲ್ಲಿ ಕಂಟ್ರೋಲ್ ರೂಮ್‍ಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಅವರು ಮನವಿ ಮಾಡಿದ್ದಾರೆ.

    ಅಲ್ಲದೆ ಜೂನ್ 13ರವರೆಗೆ ಮಳೆರಾಯನ ಆರ್ಭಟ ಜೋರಾಗಿರುವ ಸಾಧ್ಯತೆ ಇದ್ದರೂ, ಜೂನ್ 14 ರಿಂದ 29 ರವರೆಗೆ ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ ಹಿನ್ನೆಲೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಈ ಸೂಚನೆ ರವಾನಿಸಲಾಗಿದೆ.

  • ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ವಿಷವಾಗಿದೆ ಜೀವಜಲ – ಗ್ರಾಮದಲ್ಲಿ ನೀರು ಕುಡಿದ್ರೆ ಬರುತ್ತೆ ಕ್ಯಾನ್ಸರ್!

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ, ಏವೂರ ದೊಡ್ಡ ತಾಂಡದ ಜನರಿಗೆ ಕುಡಿಯುವ ನೀರು ವಿಷವಾಗಿ ಪರಿಣಮಿಸಿದೆ. ಈ ಗ್ರಾಮದ ನೀರು ಕುಡಿಯಲು ಯೋಗ್ಯವಲ್ಲ ಎಂದು ಸ್ವತಃ ಜಿಲ್ಲಾಡಳಿತವೇ ಒಪ್ಪಿಕೊಂಡಿದೆ.

    ಏವೂರ ಗ್ರಾಮದ ಕುಡಿಯುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಆರ್ಸೆನಿಕ್ ಪತ್ತೆಯಾಗಿದ್ದು, ಈ ಊರಿನ ಜನ ನಿತ್ಯ ಕುಡಿಯುವ ನೀರಿನ ಬದಲು ವಿಷ ಕುಡಿಯುತ್ತಿದ್ದಾರೆ. ಏವೂರ ತಾಂಡದ ನೀರು ಕುಡಿಯಲು ಯೋಗ್ಯವಲ್ಲ ಅಂತ ಸ್ವತಃ ಜಿಲ್ಲಾಡಳಿತ ಒಪ್ಪಿಕೊಂಡಿದೆ. ಆದರೆ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು, ಜನರ ಜೀವನದ ಜೊತೆ ಆಟವಾಡುತ್ತಿದೆ.

    ಗ್ರಾಮದ ನೀರಿನಲ್ಲಿ ಕೇವಲ ಆರ್ಸೆನಿಕ್ ಮಾತ್ರವಲ್ಲದೆ, ಅತಿ ಹೆಚ್ಚು ಫ್ಲೋರೈಡ್, ಮತ್ತು ವಿವಿಧ ವಿಷಕಾರಿ ಅಂಶಗಳ ಮಿಶ್ರಣವಾಗಿದ್ದು, ನಿತ್ಯ ನೀರನ್ನು ಕುಡಿಯುವ ಊರಿನ ಜನರಲ್ಲಿ ಕ್ಯಾನ್ಸರ್ ಮಾತ್ರವಲ್ಲದೆ ಬುದ್ಧಿಮಾಂದ್ಯತೆ, ವಿಕಲಾಂಗ, ಮೂಳೆ ರೋಗ, ಚರ್ಮ ರೋಗಗಳು ತಾಂಡವಾಡುತ್ತಿದೆ. ಅಷ್ಟೇ ಅಲ್ಲದೆ ನೀರನ್ನು ಶುದ್ಧೀಕರಣ ಮಾಡಿದರೂ ಕೂಡ ವಿಷಕಾರಿ ಅಂಶ ಕಡಿಮೆ ಆಗುವುದಿಲ್ಲವಂತೆ. ಹೀಗಾಗಿ ಬೇರೆ ದಾರಿ ಇಲ್ಲದೆ ಏವೂರ ತಾಂಡದ ಜನ ಇದೇ ನೀರನ್ನು ಕುಡಿಯುತ್ತಿದ್ದಾರೆ.

    ಇದರಿಂದ ಅಕ್ಕ-ಪಕ್ಕದ ಊರಿನವರು ಈ ತಾಂಡವನ್ನು ರೋಗಸ್ತ ತಾಂಡ ಎಂದು ಕರೆಯುವಂತಾಗಿದೆ. ಇಷ್ಟೇ ಅಲ್ಲದೇ ಈ ಊರಿನ ಹೆಣ್ಣು ಮಕ್ಕಳನ್ನು ಮದುವೆ ಆಗಲು ಸಹ ಯಾರು ಮುಂದಾಗುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಊರಿನ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

    ಈ ಬಗ್ಗೆ 2018ರಲ್ಲಿ ನ್ಯಾಷನಲ್ ಸೇವಾ ಡಾಕ್ಟರ್ ಅಸೋಸಿಯೇಷನ್ ಮತ್ತು ತಾಂಡ ಅಭಿವೃದ್ಧಿ ನಿಗಮ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಏವೂರು ತಾಂಡದ ಜನ ನಿತ್ಯ ಕಣ್ಣಿನೀರಿನಲ್ಲಿ ಕೈತೊಳೆಯುವಂತಾಗಿದೆ.

  • ನಂದಿಗಿರಿಧಾಮದಲ್ಲಿ ಪ್ರವಾಸಿಗರ ಮನಸೆಳೆದ ಮಾವು ಮೇಳ

    ನಂದಿಗಿರಿಧಾಮದಲ್ಲಿ ಪ್ರವಾಸಿಗರ ಮನಸೆಳೆದ ಮಾವು ಮೇಳ

    – ನಿಮಿಷಗಳಲ್ಲೇ ಮಾವು ತಿಂದು ಮುಗಿಸಿದ ಮಹಿಳೆಯರು

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ, ಪ್ರವಾಸಿಗರಿಗೆ ಮಾವು ಮಾರಾಟ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ವಿಶೇಷ ಮಾವು ಮೇಳ ಆಯೋಜಿಸಿದೆ.

    ಮಾವು ಬೆಳೆಗಾರ ರೈತರಿಂದ ನೇರವಾಗಿ ಪ್ರವಾಸಿಗರಿಗೆ ಮಾವು ಮಾರಾಟ ಮಾಡುವ ಉದ್ದೇಶದ ಮಾವು ಮೇಳಕ್ಕೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಚಾಲನೆ ನೀಡಿದರು. ಮೇಳದಲ್ಲಿ ಪ್ರಮುಖವಾಗಿ ಮಲ್ಲಿಕಾ, ಮಲಗೋವಾ, ಬಾದಾಮಿ, ರಸಪೂರಿ ಸೇರಿದಂತೆ ವಿವಿಧ ತರಹವೇವಾರಿ ಮಾವುಗಳ ಪ್ರದರ್ಶನ ಮಾಡಲಾಗಿದ್ದು. ತರಹೇವಾರಿ ಮಾವು ಕಂಡ ಪ್ರವಾಸಿಗರು ಮಾವು ಸವಿದು ಫುಲ್ ಖುಷ್ ಆಗಿದ್ದಾರೆ.

    ಪ್ರವಾಸಿ ತಾಣದಲ್ಲಿ ಬಾಯಿಯಲ್ಲಿ ನೀರೂರಿಸುವ ಮಾವು ಕಂಡ ಪ್ರವಾಸಿಗರು, ರಿಯಾಯಿತಿ ದರದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಿದರು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಈ ಮಾವು ಮೇಳ ನಡೆಯಲಿದ್ದು, ಪ್ರವಾಸಿಗರು ಮಾವುಗಳನ್ನು ನೇರವಾಗಿ ರೈತರಿಂದ ಖರೀದಿಸಿ ರೈತರಿಗೆ ಉತ್ತೇಜನ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

    ಮೇಳದಲ್ಲಿ ಮಾವು ತಿನ್ನೋ ಸ್ಫರ್ಧೆಯನ್ನ ಮಹಿಳೆಯರಿಗಂತಲೇ ವಿಶೇಷವಾಗಿ ಆಯೋಜನೆ ಮಾಡಲಾಗಿತ್ತು. ನಿಗದಿತ ಸಮಯದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನ ತಿಂದವರಿಗೆ 8 ಕೆಜಿಯ ಮಾವಿನ ಹಣ್ಣಿನ ಬಾಕ್ಸ್ ಬಹುಮಾನವಾಗಿ ನೀಡಲಾಯಿತು. ಈ ವೇಳೆ ಮಾವು ತಿನ್ನೋ ಸ್ಫರ್ಧೆಯಲ್ಲಿ ಭಾಗವಹಿಸಿದ ಪ್ರವಾಸಿಗರು ನಾ ಮುಂದು ತಾ ಮುಂದು ಅಂತ ಮಾವು ಸವಿದರು.

  • ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೂ ತಟ್ಟಿದ ನೀರಿನ ಅಭಾವದ ಬಿಸಿ

    ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೂ ತಟ್ಟಿದ ನೀರಿನ ಅಭಾವದ ಬಿಸಿ

    ಮಂಗಳೂರು: ಬೇಸಿಗೆಯ ಬಿಸಿಲಿನ ತೀವ್ರತೆಯಿಂದಾಗಿ ಧರ್ಮಸ್ಥಳ ಕ್ಷೇತ್ರದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕ್ಷೇತ್ರಕ್ಕೆ ಬರುವವರು ಕೆಲವು ದಿನ ಬಿಟ್ಟು ಬರಲು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ಬೇಸಿಗೆಯ ತೀವ್ರತೆಗೆ ದೇಶಾದ್ಯಂತ ನೀರಿನ ಅಭಾವವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀರಿಗಾಗಿ ಜನರು ತುಂಬಾ ಕಷ್ಟಪಡುತ್ತಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾದಂತೆ ರೇಶನ್ ಮುಖಾಂತರ ನೀರನ್ನು ಜಿಲ್ಲಾಡಳಿತವು ವಿತರಣೆ ಮಾಡುತ್ತಿದ್ದು, ವಾರಕ್ಕೆ 2 ಅಥವಾ 3 ದಿನ ಮಾತ್ರ ಜನರಿಗೆ ನೀರು ದೊರಕುತ್ತಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೂಡಾ ನೀರಿನ ಅಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ತೀವ್ರ ರೀತಿಯಲ್ಲಿ ಕಡಿಮೆಯಾಗುತ್ತಿದೆ. ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ಉಪಯೋಗಕ್ಕೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಆದ್ದರಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಪ್ರಕಟಣೆಯಲ್ಲಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

  • ಜೀವದ ಹಂಗು ತೊರೆದು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ ಜನ!

    ಜೀವದ ಹಂಗು ತೊರೆದು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ ಜನ!

    ಬೀದರ್: ಗುಟುಕು ನೀರಿಗಾಗಿ ಜೀವದ ಹಂಗು ತೊರೆದು ಬಾವಿಯಿಂದ ನೀರು ಸೇದುತ್ತಿರುವ ಸಾಹಸಮಯ ದೃಶ್ಯಗಳು ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ಗ್ರಾಮದಲ್ಲಿ ಕಂಡು ಬಂದಿದೆ.

    ಚಿಮ್ಮೆಗಾಂವ್ ಗ್ರಾಮದಲ್ಲಿ ಸುಮಾರು 70 ರಿಂದ 80 ಕುಟುಂಬಗಳು ವಾಸವಾಗಿದ್ದು, ಈ ಗ್ರಾಮದಲ್ಲಿ ಜಾನುವಾರಗಳು ಸೇರಿದಂತೆ ಮನುಷ್ಯ ಕುಲಕ್ಕೆ ನೀರಿನ ದಾಹ ತಣಿಸಲು ಒಂದೇ ಬಾವಿ ಇದೆ. ಪ್ರತಿದಿನ ಒಂದು ಕೊಡ ನೀರಿಗಾಗಿ ಗ್ರಾಮಸ್ಥರು ಕಿತ್ತಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಜನರು 50 ಅಡಿ ಬಾವಿಯಿಂದ ನೀರು ಸೇದುತ್ತಿದ್ದಾರೆ. ಜನರು ಬಾವಿ ಸುತ್ತ ನಿಂತುಕೊಂಡು ಹಗ್ಗಕ್ಕೆ ಬಿಂದಿಗೆ ಕಟ್ಟಿಕೊಂಡು ಆಳವಾದ ಬಾವಿಗೆ ಬಿಟ್ಟು ನೀರು ಸೇದುತ್ತಿರುವುದನ್ನು ಕಾಣಬಹುದಾಗಿದೆ. ಬಾವಿ ಮೇಲೆ ನಿಂತಿರುವ ಜನರಿಗೆ ಯಾವುದೇ ರೀತಿ ಸುರಕ್ಷತೆಯೂ ಇಲ್ಲ.

    ಒಂದು ವೇಳೆ ನಿಂತಿರುವ ಜನರು ಸಮತೋಲನ ಕಳೆದುಕೊಂಡರೆ 50 ಅಡಿ ಆಳದ ಬಾವಿಗೆ ಬೀಳಬೇಕಾಗುತ್ತಿದೆ. ಇಂತಹ ಭೀಕರ ಬರಗಾಲ ಎದುರಾದರೂ ಗ್ರಾಮಸ್ಥರಿಗೆ ನೀರು ಕೊಡಲು ಜಿಲ್ಲಾಡಳಿತ ವಿಫಲವಾಗಿದೆ.