Tag: District Administration

  • ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಜಿಲ್ಲಾಡಳಿತದಿಂದ ಸನ್ಮಾನ

    ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಜಿಲ್ಲಾಡಳಿತದಿಂದ ಸನ್ಮಾನ

    ಮಂಗಳೂರು: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹರೇಕಳ ಹಾಜಬ್ಬರನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಇಂದು ಅಭಿನಂದಿಸಲಾಯಿತು. ನೆಹರೂ ಮೈದಾನದಲ್ಲಿ ನಡೆದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಹಾಜಬ್ಬರನ್ನು ಸನ್ಮಾನಿಸಿ ಗೌರವಿಸಿದರು.

    ಸರಳ ಸಜ್ಜನಿಕೆಯ ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣನ್ನು ಮಾರಿ 2000ನೇ ಇಸವಿಯಲ್ಲಿ ಶಾಲೆ ಕಟ್ಟಿದ್ದು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಹಾಜಬ್ಬರು ನಡೆಸುತ್ತಿದ್ದು, ಒಟ್ಟು 170 ಮಂದಿ ಬಡ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

    ಹಾಜಬ್ಬರು ಇಂದೂ ಕಿತ್ತಳೆ ಹಣ್ಣನ್ನು ಮಾರಿ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಅಕ್ಷರ ಸಂತ ಹಾಜಬ್ಬರ ಈ ನಿಸ್ವಾರ್ಥ ಸೇವೆಯನ್ನು ಗಮನಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಅಪೂರ್ವ ಸಾಧಕನಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸನ್ಮಾನಿಸಿ ಅಭಿನಂದಿಸಿದೆ. ಇದನ್ನು ಓದಿ: ಕಿತ್ತಳೆ ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ

  • ಜಿಲ್ಲಾಡಳಿತದ ಎಚ್ಚರಿಕೆಗೆ ಥಂಡಾ ಹೊಡೆದ ಶಿವಸೇನೆಯ ರಾವತ್

    ಜಿಲ್ಲಾಡಳಿತದ ಎಚ್ಚರಿಕೆಗೆ ಥಂಡಾ ಹೊಡೆದ ಶಿವಸೇನೆಯ ರಾವತ್

    ಬೆಳಗಾವಿ: ಗಡಿ ಹಾಗೂ ಭಾಷಾ ವಿವಾದಾತ್ಮಕ ಹೇಳಿಕೆ, ಬರವಣಿಗೆಯ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಮೇಲಿಂದ ಮೇಲೆ ಕೆಣಕುತ್ತಿದ್ದ ಶಿವಸೇನೆಯ ಮುಖಂಡ ಸಂಜಯ್ ರಾವತ್‍ಗೆ ಬೆಳಗಾವಿ ಜಿಲ್ಲಾಡಳಿತ ಖಡಕ್ ಎಚ್ವರಿಕೆ ನೀಡಿದ್ದು, ಇದರಿಂದ ಮೆತ್ತಗಾಗಿ ರಾವತ್ ತಮ್ಮ ಕಾರ್ಯಕರ್ತರನ್ನೇ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

    ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಒಡೆತನದ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಸಂಜಯ್ ರಾವತ್ ಗಡಿ ಹಾಗೂ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಹಾಗೂ ಬರಹಗಳಿಂದ ಖ್ಯಾತಿ ಪಡೆದಿದ್ದಾರೆ. ಬೆಳಗಾವಿಯಲ್ಲಿನ ಮರಾಠಿಗರು ಗಡಿ ವಿವಾದ ಕೆದಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಮಹಾರಾಷ್ಟ್ರದಿಂದ ಸಂಜಯ್ ರಾವತ್ ಅವರನ್ನು ಬೆಳಗಾವಿಗೆ ಕರೆಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಭಾರೀ ಮುಖಭಂಗವಾಗಿದೆ.

    ರಾವತ್‍ಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಪೊಲೀಸರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತಂದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಗಡಿ ವಿಷಯ ಕುರಿತಂತೆ ಮಾತನಾಡಲು ಹಿಂದೇಟು ಹಾಕುವುದರ ಮೂಲಕ ಎಂಇಎಸ್ ಆಸೆಗೆ ತಣ್ಣೀರು ಎರಚಿದ್ದಾರೆ.

    ಶುಕ್ರವಾರ ಕರ್ನಾಟಕ ಸರ್ಕಾರದ ವಿರುದ್ಧ ವೀರಾವೇಶದಿಂದ ಮಾತನಾಡಿ, ಇಂದು ಬೆಳಗಾವಿಗೆ ಆಗಮಿಸಿದ್ದ ಶಿವಸೇನೆ ವಕ್ತಾರ ಸಂಜಯ್ ರಾವತ್ ಉಗ್ರ ಹೇಳಿಕೆಯನ್ನು ನೀಡುವ ಮೂಲಕ ಗಡಿ ವಿವಾದಕ್ಕೆ ಜೀವ ತುಂಬುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಎಂಇಎಸ್ ಇತ್ತು. ಹೀಗಾಗಿ ರಾವತ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಘೊಷಣೆಗಳನ್ನು ಕೂಗುವ ಮೂಲಕ ಪ್ರಚೋದನೆ ನೀಡಿ ವಿವಾದ ಸೃಷ್ಟಿಸಲು ಮುಂದಾದರೂ ಕೂಡ ರಾವತ್ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೆ ಸುಮ್ಮನಿದ್ದರು.

    ಅಲ್ಲದೆ ಮಹಾರಾಷ್ಟ್ರದಿಂದ ಬಂದ ಶಿವಸೇನೆ ನಾಯಕನಿಂದ ನೀತಿ ಪಾಠ ಹೇಳಿಸಿಕೊಂಡ ಎಂಇಎಸ್ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ನಿರಾಸೆಯಿಂದ ಮನೆಯತ್ತ ಮುಖಮಾಡಿದರು.

  • ಕೆಆರ್‌ಎಸ್‌ ನೀರು ಬಳಕೆ ಮಾಡಿಕೊಂಡು ಜಲಪಾತೋತ್ಸವ ಮಾಡಲಾಗುತ್ತಿದೆ ಎಂಬ ಆರೋಪ

    ಕೆಆರ್‌ಎಸ್‌ ನೀರು ಬಳಕೆ ಮಾಡಿಕೊಂಡು ಜಲಪಾತೋತ್ಸವ ಮಾಡಲಾಗುತ್ತಿದೆ ಎಂಬ ಆರೋಪ

    – ರೈತರ ಬೆಳೆಗಳಿಗೆ ಇಲ್ಲದ ನೀರು ಮೋಜು ಮಸ್ತಿಗೆ ಬೇಕಂತೆ

    ಮಂಡ್ಯ: ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ರಾಜ್ಯದಲ್ಲೆಡೆ ಭಾರೀ ಮಳೆ ಸುರಿದು ಹಳ್ಳ ತೊರೆಗಳು ತುಂಬಿ ಹರಿಯುತ್ತಿದ್ದವು. ಅದೇ ರೀತಿ ವಿಶ್ವಪ್ರಸಿದ್ಧ ಗಗನಚುಕ್ಕಿ ಜಲಪಾತವೂ ಭೋರ್ಗರೆದು ಧುಮ್ಮಿಕ್ಕುತ್ತಿತ್ತು. ಆಗ ಜಲಪಾತ ಉತ್ಸವ ಮಾಡದ ಜಿಲ್ಲಾಡಳಿತ ಈಗ ನೀರೇ ಇಲ್ಲದೆ ಖಾಲಿ ಖಾಲಿಯಾಗಿರುವ ಗಗನಚುಕ್ಕಿ ಜಲಪಾತದಲ್ಲಿ ಜಲಪಾತೋತ್ಸವ ಮಾಡಲು ಮುಂದಾಗಿದೆ.

    ಇದೇ ತಿಂಗಳ 18 ಹಾಗೂ 19ರಂದು ಎರಡು ದಿನಗಳ ಕಾಲ ಉತ್ಸವ ನಡೆಸುವುದಕ್ಕಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಯನ್ನು ನಡೆಸಿದೆ. ಇದು ವಿವಾದಕ್ಕೆ ಕಾರಣವಾಗಿದ್ದು, ಕೆಆರ್‌ಎಸ್‌ ನೀರನ್ನು ಬಳಕೆ ಮಾಡಿಕೊಂಡು ಜಲಪಾತೋತ್ಸವ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯ ರೈತರು ಹಿಂಗಾಳು ಬೆಳೆ ಬೆಳೆಯುವುದಕ್ಕೆ ನೀರು ಬಿಡುವ ಬಗ್ಗೆ ನಿರ್ಧಾರವೇ ಆಗಿಲ್ಲ ಅಂತಹದರಲ್ಲಿ ಈಗ ಜಲಪಾತೋತ್ಸವ ಮಾಡುವ ಅಗತ್ಯವಿದಿಯಾ ಎಂದು ರೈತರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ.

    ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಮಳೆ ಸುರಿದು ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ಸಂದರ್ಭದಲ್ಲಿ ಜಲಪಾತ ತುಂಬಿ ಹರಿಯುತ್ತಿತ್ತು. ಆಗ ಪ್ರತಿ ವರ್ಷ ಜಲಪಾತೋತ್ಸವ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಳೆ ಇಲ್ಲದೆ ಡ್ಯಾಂ ಭರ್ತಿಯಾಗಿರಲಿಲ್ಲ. ಹೀಗಾಗಿ ಜಲಪಾತೋತ್ಸವವನ್ನೂ ಮಾಡಲಾಗಿರಲಿಲ್ಲ. ಆದರೆ ಈ ವರ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆಯಾಗಿ ಡ್ಯಾಂ ಭರ್ತಿ ಆಯಿತು.

    ನಿರಂತರವಾಗಿ ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಡ್ಯಾಂನ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಈಗಲೂ ಡ್ಯಾಂನಲ್ಲಿ 120 ಅಡಿಯಷ್ಟು ನೀರು ಸಂಗ್ರಹವಾಗಿದೆ. ಹೀಗೆ ಎರಡೂ ತಿಂಗಳಿಗೂ ಅಧಿಕ ದಿನಗಳ ಕಾಲ ಗಗನಚುಕ್ಕಿ ಜಲಪಾತ ತುಂಬಿ ಹರಿಯುತ್ತಿತ್ತು. ಆಗ ಜಲಪಾತೋತ್ಸವ ಮಾಡುವ ಬದಲು ಈಗ ಗಗನಚುಕ್ಕಿ ಜಲಪಾತ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಇದರ ಮದ್ಯೆಯೇ ಇದೇ ತಿಂಗಳ 18 ಹಾಗೂ 19ರಂದು ಗಗನಚುಕ್ಕಿ ಜಲಪಾತೋತ್ಸವ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದು ರೈತರನ್ನು ಕೆರಳಿಸಿದ್ದು ಜಿಲ್ಲೆಯ ರೈತರಿಗೆ ಹಿಂಗಾಳು ಬೆಳೆ ಬೆಳೆಯಲು ನೀರನ್ನು ಬಿಡಬೇಕೆಂಬ ಬಗ್ಗೆ ನಿರ್ಧಾರವೇ ಆಗಿಲ್ಲ. ಅಂತಹದರಲ್ಲಿ ಈಗ ಜಲಪಾತೋತ್ಸವ ಮಾಡುವ ಮೂಲಕ ನೀರನ್ನು ಪೋಲು ಮಾಡಲಾಗುತ್ತಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಬೆಂಗಳೂರು, ಮೈಸೂರು ಮಂಡ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ.

    ಯಾರೂ ಏನೇ ಅಂದರು ಇದೇ ತಿಂಗಳ 18ರಂದು ಹಾಗೂ 19ರಂದು ಗಗನಚುಕ್ಕಿ ಜಲಪಾತೋತ್ಸವ ಮಾಡಲು ನಿರ್ಧರಿಸಿದ್ದು, ಜಲಪಾತದ ಪಕ್ಕದಲ್ಲೇ ಬೃಹತ್ ವೇದಿಕೆ ನಿರ್ಮಿಸಲಾಗುತ್ತಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, 18ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎರಡು ದಿನ ಸಿನಿಮಾ ನಟ-ನಟಿಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ನೀರು ಹರಿಯುವಾಗ ಗಗನ ಚುಕ್ಕಿ ಜಲಪಾತೋತ್ಸವ ಮಾಡುವ ಬದಲು ಈಗ ಖಾಲಿ ಖಾಲಿಯಾಗಿರುವ ಸಂದರ್ಭದಲ್ಲಿ ಉತ್ಸವ ಮಾಡುವ ಅಗತ್ಯವೇನಿತ್ತು. ತಮಿಳು ನಾಡಿಗೆ ನೀರು ಬಿಡುವುದಕ್ಕಾಗಿಯೇ ಉತ್ಸವ ಮಾಡಲಾಗುತ್ತಿದೆ ಎನ್ನುವ ರೈತರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಅನ್ನದಾನಿ ನಾವು ಕೆಆರ್‌ಎಸ್‌ ನೀರನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಸ್ಥಳೀಯವಾಗಿರುವ ಖಾಸಗಿ ಪವರ್ ಸ್ಟೇಷನ್‍ನವರ ಬಳಿ ನೀರು ಪಡೆದುಕೊಂಡು ನಾವು ಉತ್ಸವ ಮಾಡುತ್ತಿದ್ದೀವಿ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ.

  • ನಿರಾಶ್ರಿತರನ್ನ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಪ್ಲಾನ್!- 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ನಿರಾಶ್ರಿತರನ್ನ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಪ್ಲಾನ್!- 11ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

    ಮಡಿಕೇರಿ: ನಿವೇಶನಕ್ಕೆ ಆಗ್ರಹಿಸಿ ನಿರಾಶ್ರಿತ ಆದಿವಾಸಿ, ದಲಿತ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಧರಣಿ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ತಿರುಗಿಯೂ ನೋಡದ ಅಧಿಕಾರಿ ವರ್ಗ, ಇದೀಗ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದು, ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಆದರೆ ಪ್ರತಿಭಟನಾಕಾರರು ನಿವೇಶನ ಸಿಗೋವರೆಗೆ ನಿರಂತರ ಧರಣಿ ನಡೆಸುವುದಾಗಿ ಪಟ್ಟುಹಿಡಿದು ಕುಳಿತಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡಿನ ಪರಂಬು ಪೈಸಾರಿ ಜಾಗದಲ್ಲಿ ನಿವೇಶನ ರಹಿತ ಆದಿವಾಸಿ, ದಲಿತ ಹಾಗೂ ಇತರೆ ಹಿಂದುಳಿದ ಸಮುದಾಯದ 55 ಕುಟುಂಬಗಳು ನಡೆಸುತ್ತಿರುವ ಆಹೋರಾತ್ರಿ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಡಕೊಲ್ಲಿಯ ಸರ್ವೇ ನಂಬರ್ 337/1 ರ ಸರ್ಕಾರಿ ಪೈಸಾರಿ ಜಾಗದಲ್ಲಿ ಪ್ರತಿಭಟನಾಕಾರರು ಹಾಕಿದ್ದ ಗುಡಿಸಲುಗಳನ್ನು ಜನವರಿ 5 ರಂದು ಕಂದಾಯ ಅಧಿಕಾರಿಗಳು ಕಿತ್ತೆಸೆದಿದ್ದರು. ಇದನ್ನು ಖಂಡಿಸಿ ಹಾಗೂ ನಿವೇಶನಕ್ಕಾಗಿ ಅಂದಿನಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಿ ಪ್ರತಿಭಟನಾಕಾರರು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.

    ಇಂದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹೇಶ್ ಪ್ರತಿಭಟನಾಕಾರರನ್ನು ಅಲ್ಲಿಂದಲೂ ಹೊರದಬ್ಬಲು ಪ್ಲಾನ್ ರೂಪಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರು ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯವರಾಗಿದ್ದು, ಅವರು ಆಯಾ ಪಂಚಾಯಿತಿಗಳಲ್ಲೇ ಅರ್ಜಿ ಸಲ್ಲಿಸಲಿ. ಬಳಿಕ ಅವರಿಗೆ ಅಲ್ಲಿಯೇ ಅವರಿಗೆ ನಿವೇಶನ ಕೊಡಲಾಗುವುದು ಎನ್ನುತ್ತಿದ್ದಾರೆ. ಆದರೆ ನಿವೇಶನ ಸಿಗೋವರೆಗೆ ಇಲ್ಲಿಂದ ಕದಲೋದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದು ಕುಳಿತಿದ್ದಾರೆ.

    ಗುಡಿಸಲುಗಳನ್ನು ಕಿತ್ತೆಸೆದಿದ್ದ ಜಾಗದಲ್ಲೇ ಪ್ರತಿಭಟನಾಕಾರರು ಮತ್ತೆ ಗುಡಿಸಲು ಕಟ್ಟಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಪ್ರತಿಭಟನೆ ನಡೆಸುತ್ತಿರುವ ಕುಟುಂಬಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಸರ್ಕಾರಿ ಜಾಗದಲ್ಲಿ ಶೆಡ್ಡು ಹಾಕಿದ್ರೆ ಕಿತ್ತು ಬಿಸಾಡಿ ಹೋದವರು ಇಂದು ಬಂದಿದ್ದೀರಾ. ಇದೀಗ ಬಂದಿರುವುದಾದ್ರೂ ನಿವೇಶನ ನೀಡುವ ಭರವಸೆ ನೀಡುತ್ತಿಲ್ಲ. ಬದಲಾಗಿ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲಿ. ಬಳಿಕ ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಾ. ಇಂತಹ ಭರವಸೆಗಳನ್ನು 20 ವರ್ಷಗಳಿಂದ ಕೇಳಿ ಸಾಕಾಗಿ ಹೋಗಿದೆ. ಹೀಗಾಗಿ ನಮಗೇ ಇದೇ ಸ್ಥಳದಲ್ಲಿ ನಿವೇಶ ಸಿಗೋವರೆಗೆ ಸ್ಥಳ ಬಿಟ್ಟು ಕದಲೋದಿಲ್ಲ ಎಂದಿದ್ದಾರೆ.

  • ಚಿಕ್ಕಲ್ಲೂರಲ್ಲಿ ಸಮಾನತೆ ಬಿಂಬಿಸುವ ಪಂಕ್ತಿ ಸೇವೆ – ಜಿಲ್ಲಾಡಳಿತದಿಂದ ಕಳೆಗುಂದುತ್ತಿದೆ ಸಿದ್ದಾಪ್ಪಾಜಿ ಜಾತ್ರೆ

    ಚಿಕ್ಕಲ್ಲೂರಲ್ಲಿ ಸಮಾನತೆ ಬಿಂಬಿಸುವ ಪಂಕ್ತಿ ಸೇವೆ – ಜಿಲ್ಲಾಡಳಿತದಿಂದ ಕಳೆಗುಂದುತ್ತಿದೆ ಸಿದ್ದಾಪ್ಪಾಜಿ ಜಾತ್ರೆ

    ಚಾಮರಾಜನಗರ: ಜಿಲ್ಲೆಯಲ್ಲಿ 8 ಶತಮಾನಗಳ ಹಿಂದೆ ಸಮಾನತೆ ಸಾರಿದ ಮಹಾಪುರುಷರ ಐತಿಹಾಸಿಕ ಜಾತ್ರೆ ನಡೆಯುತ್ತದೆ. ಶತಮಾನಗಳ ಹಿಂದೆ ಸಮಾಜದಲ್ಲಿ ಇದ್ದ ಮೇಲು ಕೀಳು, ಆಹಾರ ಪದ್ಧತಿಯ ತಾರಮ್ಯದ ವಿರುದ್ಧ ಸಿಡಿದೆದ್ದು ಪಂಕ್ತಿ ಭೋಜನದ ಮೂಲಕ ನಾವೆಲ್ಲರೂ ಮನುಷ್ಯರು ಎಂದು ಸಂತರು ಸಾರಿ ಹೇಳಿದ್ದರು. ಪ್ರತಿ ವರ್ಷಕ್ಕೊಮ್ಮೆ 5 ದಿನಗಳ ಕಾಲ ಲಕ್ಷಾಂತರ ಮಂದಿ ಸೇರಿ ವಿಜೃಂಭಣೆಯಿಂದ ಮಹಾಪುರುಷರ ಹೆಸರಿನಲ್ಲಿ ಜಿಲ್ಲೆಯಲ್ಲಿ ಜಾತ್ರೆ ಮಾಡಿಕೊಂಡು ಬರುತ್ತಿದ್ದಾರೆ. ಜಾತ್ರೆ ಆರಂಭದ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆಗೆ ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದರು. ಆದರೆ ಜಿಲ್ಲಾಡಳಿತ ಭಕ್ತರ ಆಚರಣೆಗೆ ಕೊಡಲಿ ಪೆಟ್ಟು ನೀಡಿದ ಪರಿಣಾಮ ಬರುವ ಭಕ್ತರಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ.

    ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಸಿದ್ದಾಪ್ಪಾಜಿ ಜಾತ್ರೆ ಪ್ರತಿ ವರ್ಷ ಮೊದಲನೇ ಹುಣ್ಣಿಮೆಯಂದು ಆರಂಭವಾಗುತ್ತದೆ. ಜಾನಪದ ಗ್ರಂಥಗಳ ದಾಖಲೆ ಪ್ರಕಾರ, 8 ಶತಮಾನಗಳಿಂದ ಜಾತ್ರೆ ನಡೆಯುತ್ತಾ ಬಂದಿದೆ. ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರು ದೇವಾಲಯದ ಆವರಣ ಇಲ್ಲವೇ ಸುತ್ತಮುತ್ತಲ ಖಾಸಗಿ ಜಾಗದಲ್ಲಿ ಬಿಡಾರ ಹೂಡಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.

    ದೂರದ ಊರಿನಿಂದ ಜಾತ್ರೆಗೆ ಬಂದ ಜನರು ಪವಾಡ ಪುರುಷ ಸಿದ್ದಾಪ್ಪಾಜಿಯ ಕಂಡಾಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸುಗ್ಗಿಯ ನಂತರ ಬರುವ ಜಾತ್ರೆಯಲ್ಲಿ ಈ ಭಾಗದ ಜನರು ಸಡಗರ ಸಂಭ್ರದಿಂದ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯಲ್ಲಿ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆ ಹೆಚ್ಚು ಆಕರ್ಷಣೀಯ ಮತ್ತು ಪ್ರಸಿದ್ಧಿ ಪಡೆದಿದೆ. ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನ ಬಲಿ ಕೊಡುತ್ತಾರೆ. ಆದರೆ ಸಿದ್ದಪ್ಪಾಜೀ ದೇವಾಲಯ ಮುಂಭಾಗ ಯಾವುದೇ ಬಲಿ ಪೀಠ ಇಲ್ಲ. ಹೀಗಾಗಿ ನೀಲಗಾರ ಸಿದ್ದಪ್ಪಾಜಿಯ ತೀರ್ಥ ತಂದು ಕುರಿ ಕೋಳಿಗಳಿಗೆ ಸಿಂಪಡಿಸಿ ನಂತರ ದೇವರ ಹೆಸರಿನಲ್ಲಿ ತಾವು ಹಾಕಿದ್ದ ಬಿಡಾರದ ಬಳಿ ಪ್ರಾಣಿಗಳನ್ನ ಭಕ್ತರು ಬಲಿಕೊಡುತ್ತಾರೆ.

    ನಂತರ ಆದೇ ಮಾಂಸದಿಂದ ಬಗೆ ಬಗೆಯ ಅಡುಗೆ ತಯಾರಿಸಿ ಬರುವ ಭಕ್ತರಿಗೆ ಜಾತಿ ಬೇಧ ಇಲ್ಲದೆ ಊಟ ಬಡಿಸುವುದೇ ಪಂಕ್ತಿ ಸೇವೆ. ಪಂಕ್ತಿ ಸೇವೆಗೆ ಪ್ರಾಣಿ ಬಲಿ ಕೊಡಲಾಗುತ್ತಿದೆ ಎಂದು ಪ್ರಾಣಿ ದಯಾ ಕಲ್ಯಾಣ ಸಮಿತಿ ಆರೋಪಿಸಿ ನ್ಯಾಯಾಲದ ಮೆಟ್ಟಿಲೇರಿತ್ತು. ಆ ನಂತರ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಭಕ್ತರಿಗೆ ಪಂಕ್ತಿ ಸೇವೆಗೆ ಅಡಚಣೆ ಮಾಡದೇ ಕರ್ನಾಟಕ ಪ್ರಾಣಿ ಬಲಿ ಕಾಯ್ದೆ ಉಲ್ಲಂಘನೆ ಮಾಡದಂತೆ ಜಾತ್ರೆ ನಡೆಸಿ ಎಂದು ಆದೇಶ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ಪ್ರಾಣಿ ಬಲಿ ತಡೆಗೆ ಕಳೆದ 3 ವರ್ಷಗಳಿಂದ ಕ್ರಮ ತೆಗೆದುಕೊಂಡಿತ್ತು. ಆದರೆ ಅಧಿಕಾರಿಗಳು ಕಾನೂನು ಪಾಲನೆ ನೆಪದಲ್ಲಿ ಭಕ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಭಕ್ತರ ಆರೋಪಿಸುತ್ತಿದ್ದಾರೆ. ನಾವು ಕಷ್ಟ ಸುಖದ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತುಕೊಂಡಿರುತ್ತೇವೆ. ಹರಕೆಯ ಸಂದರ್ಭದಲ್ಲಿ ಬಂದು ಬಳಗವನ್ನ ಕರೆದುಕೊಂಡು ಹಬ್ಬ ಆಚರಿಸುತ್ತೇವೆ. ಆದರೆ ಪೊಲೀಸರು ತಾವು ತಂದಿದ್ದ ಕುರಿ ಕೋಳಿಗಳನ್ನ ವಶಪಡಿಸಿಕೊಂಡು ನಮಗೆ ಕಿರುಕುಳ ನೀಡುತ್ದಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯಲ್ಲಿ ಭಾಗವಹಿಸುವವರೇಲ್ಲ ಬಹುತೇಕ ರೈತರು. ಇಲ್ಲಿ ಹುಣ್ಣಿಮೆ ದಿನದಂದು ಚಂದ್ರ ಮಂಡಲೋತ್ಸವ ನಡೆಯುತ್ತದೆ. ಈ ವೇಳೆ ಚಂದ್ರ ಮಂಡಲಕ್ಕೆ ಬೆಂಕಿ ಹಾಕಿದ ವೇಳೆ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆ ಆ ದಿಕ್ಕಿನಲ್ಲಿ ಸಮೃದ್ಧಿಯಾಗಿ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಹೀಗಾಗಿ ಈ ಕುತೂಹಲ ವೀಕ್ಷಣೆ ಮಾಡಲು ಸಾಗರೋಪಾದಿಯಲ್ಲಿ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೋಳ್ಳುತ್ತಾರೆ.

    12ನೇ ಶತಮಾನದಲ್ಲಿ ಇದ್ದ ಜಾತಿ ಪದ್ಧತಿ, ಪಂಕ್ತಿ ಸೇವೆ ತಾರತಮ್ಯಗಳ ವಿರುದ್ಧ ಹೋರಾಟ ಮಾಡಿದ ರಾಚಪ್ಪಜೀ ಅವರು ಉತ್ತರದಿಂದ ದಕ್ಷಿಣಾಭಿಮುಕವಾಗಿ ಬಂದರು. ಅವರ ಶಿಷ್ಯರೇ ನೀಲಗಾರ ಸಿದ್ದಪ್ಪಾಜಿ. ಜಾತಿ ಭೇದ ದಿಕ್ಕರಿಸಿ ಎಲ್ಲರೂ ಸಹಪಂಕ್ತಿಯಲ್ಲಿ ಊಟ ಮಾಡಬೇಕು ಎಂಬ ಕಲ್ಪನೆಯೊಂದಿಗೆ ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ನೆಲೆಸಿದರು. ಅವರು ಐಕ್ಯವಾದ ನಂತರ ವರ್ಷದ ಮೊದಲ ಹುಣ್ಣಿಮೆ ದಿನದಿಂದ ಐದು ದಿನಗಳ ಕಾಲ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಭಕ್ತರ ಹರಕೆಗೆ ತಡೆಯೊಡ್ಡಿದ್ದರಿಂದ ಕಳೆದ 4 ವರ್ಷಗಳಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಹೀಗೆ ಮುಂದುವರಿದರೆ ಜಾತ್ರೆಯ ಜನಪ್ರಿಯತೆ ಕುಗ್ಗಲಿದೆ ಎಂದು ಅರ್ಚಕರು ಹೇಳಿದರು.

    ಐತಿಹಾಸಿಕ ಪ್ರಸಿದ್ಧಿ ಗಳಿಸಿರುವ ಸಿದ್ದಪ್ಪಾಜೀ ಜಾತ್ರೆಯಲ್ಲಿನ ಪಂಕ್ತಿ ಸೇವೆ ಸ್ಥಗಿತಗೊಳಿಸಿರುವುದರಿಂದ ಜಾತ್ರೆಯ ಜನಪ್ರಿಯತೆ ದಿನದಿಂದ ದಿನಕ್ಕೆ ಕಳೆಗುಂದುವಂತೆ ಮಾಡಿದೆ. ಜಾತ್ರೆ ವೇಳೆ ಮಾತ್ರ ಪ್ರಾಣಿ ವಧೆಗೆ ನಿರ್ಬಂಧ ಹೇರುವ ಜಿಲ್ಲಾಡಳಿತ ನಂತ್ರ ದಿನಗಳಲ್ಲಿ ಏಕೆ ತಾರತಮ್ಯ ಮಾಡುತ್ತಿದೆ ಎಂಬುದು ಭಕ್ತರ ಪ್ರಶ್ನೆಯಾಗಿದೆ. ಬರುವ ದಿನಗಳಲ್ಲಿ ಜಿಲ್ಲಾಡಳಿತ ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರ ಆಗ್ರಹವಾಗಿದೆ. ಜೊತೆಗೆ ಕರಗದ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ವಸೂಲಿಗೆ ಬರುತ್ತಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಬ್ರೇಕ್ ಹಾಕಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

  • ಕರಾವಳಿ ಉತ್ಸವಕ್ಕೆ ಚಾಲನೆ: ಆಕರ್ಷಕ ಮೆರವಣಿಗೆ

    ಕರಾವಳಿ ಉತ್ಸವಕ್ಕೆ ಚಾಲನೆ: ಆಕರ್ಷಕ ಮೆರವಣಿಗೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿದ 10 ದಿನಗಳ ಕಾಲ ನಡೆಯುವ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ ದೊರೆಯಿತು.

    ತುಳುನಾಡು-ಹೊರ ಜಿಲ್ಲೆಗಳ ಸಾಂಸ್ಕೃತಿಕ ಕಲಾ ಲೋಕದ ಸಂಗಮದ ಈ ಉತ್ಸವವನ್ನು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಮುಟ್ಟಾಳೆಯನ್ನು ಅತಿಥಿಗಳಿಗೆ ತೊಡಿಸುವುದರ ಮೂಲಕ ಸ್ವಾಗತ ನೀಡಲಾಯಿತು. ಮಂಗಳೂರಿನ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಕರಾವಳಿ ಉತ್ಸವದ ಮೆರವಣಿಗೆಗೆ ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಣರಂಜಿತ ಜಾನಪದ-ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

    ತುಳುನಾಡಿನ ಸಂಪ್ರದಾಯದಂತೆ ಅತಿಥಿಗಳಿಗೆ ಮುಟ್ಟಾಳೆ ತೊಡಿಸಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು. ಮೆರವಣಿಗೆಯು ನೆಹರೂ ಮೈದಾನದಿಂದ ಆರಂಭಗೊಂಡು ಕೆ.ಎಸ್.ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್‍ಬಾಗ್ ಮೂಲಕ ಕರಾವಳಿ ಉತ್ಸವ ಮೈದಾನ ತಲುಪಿತು. ಉತ್ಸವದ ಕಲಾ ಸಿರಿವಂತಿಕೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿವಿಧ ಕಲಾ ತಂಡಗಳು ಭಾಗವಹಿಸಿ ಕರಾವಳಿ ಉತ್ಸವ ಮೆರವಣಿಗೆಗೆ ಮೆರುಗು ನೀಡಿದವು.

  • ಮನೆ ಮನೆಗೆ ತೆರಳಿ ಅರಿಶಿನ, ಕುಂಕಮ ಕೊಟ್ಟು ಆನೆಗುಂದಿ ಉತ್ಸವಕ್ಕೆ ಆಹ್ವಾನಿಸಿದ ಡಿಸಿ

    ಮನೆ ಮನೆಗೆ ತೆರಳಿ ಅರಿಶಿನ, ಕುಂಕಮ ಕೊಟ್ಟು ಆನೆಗುಂದಿ ಉತ್ಸವಕ್ಕೆ ಆಹ್ವಾನಿಸಿದ ಡಿಸಿ

    – ಜಿಲ್ಲಾಡಳಿತದ ಕೆಲಸಕ್ಕೆ ಸಾಥ್ ಕೊಟ್ಟ ಶ್ರೀ ಕೃಷ್ಣದೇವರಾಯ ವಂಶಸ್ಥರು

    ಕೊಪ್ಪಳ: ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ದಿನೆ ದಿನೇ ಹೊಸ ಹೊಸ ಕಾರ್ಯಕ್ರಮಗಳು ಮತ್ತು ಕ್ರೀಡೆಗಳನ್ನು ನಡೆಸುತ್ತಿದೆ.

    ಇಂದು ಸಹ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಮತ್ತು ಜಿಲ್ಲಾಡಳಿತ ಆನೆಗುಂದಿಯಲ್ಲಿ ನೆಲೆಸಿರುವ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ ವಂಶಸ್ಥರ ಮನೆಗೆ ತೆರಳಿ ಆನೆಗುಂದಿ ಉತ್ಸವಕ್ಕೆ ಹಣ್ಣು ಹಂಪಲು ಜೊತೆಗೆ ತಾಂಬೂಲವನ್ನು ನೀಡಿದರು. ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ಮನೆ ಮನೆಗೆ ತೆರಳಿ ಉತ್ಸವಕ್ಕೆ ಆಹ್ವಾನವನ್ನು ನೀಡಿದರು. ಅಷ್ಟೆ ಅಲ್ಲದೆ ಆನೆಗುಂದಿಯಲ್ಲಿ ನೆಲಸಿರುವ ಪ್ರತಿಯೊಬ್ಬರ ಮನೆಗೆ ತೆರಳಿ ಅರಿಶಿನ, ಕುಂಕಮ, ಎಲೆ-ಅಡಿಕೆ ನೀಡಿ ಆಹ್ವಾನಿಸಿದ್ದು ವಿಶೇಷವಾಗಿತ್ತು.

    ಅಷ್ಟೇ ಅಲ್ಲದೆ ಆನೆಗುಂದಿ ಉತ್ಸವದ ಹಿನ್ನೆಲೆ ವಿಶೇಷ ಚೇತನರಿಗಾಗಿ ಕಬಡ್ಡಿ ಸ್ಪರ್ಧೆಯನ್ನು ಇಂದು ಆಯೋಜಿಸಲಾಗಿತ್ತು. ನಾನಾ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಹುಮ್ಮಸ್ಸಿನಿಂದಾನೆ ಕಬಡ್ಡಿಯನ್ನು ಆಡಿದರು. ನಂತರ ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು ಆನೆಗುಂದಿಯಲ್ಲಿ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನಿಂದ ಬಂದಿದ್ದ ತಂಡದ ಜೋತೆಗೆ ಸ್ಥಳೀಯ ಗ್ರಾಮೀಣ ಭಾಗದ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು.

    ಈ ಸ್ಪರ್ಧೆಗಳಿಗೂ ಮುನ್ನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿಗಳು ಕ್ರೀಡಾಪಟುಗಳ ಜೊತೆ ಒಂದು ಪಂದ್ಯವನ್ನು ಸಹ ಆಡಿದ್ದರು. ಜಿಲ್ಲಾಧಿಕಾರಿಗಳ ಜೊತೆಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಹಾಗೂ ಸಿಇಒ ಮತ್ತು ತಾಲೂಕು ಪಂಚಾಯ್ತಿ ಅಧಿಕಾರಿ, ತಹಶೀಲ್ದಾರ್ ಸೇರಿ ವಾಲಿಬಾಲ್ ಪಂದ್ಯವಳಿಯನ್ನು ಆಡಿದ್ದು ಕ್ರೀಡಾಸ್ಪೂರ್ತಿಗೆ ಸಾಕ್ಷಿಯಾಯಿತು.

  • 5 ತಿಂಗಳ ನಂತರ ಮಿನಿ ಬಸ್ಸುಗಳ ಸಂಚಾರಕ್ಕೆ ಮುಕ್ತವಾಯ್ತು ಚಾರ್ಮಾಡಿ ಘಾಟ್

    5 ತಿಂಗಳ ನಂತರ ಮಿನಿ ಬಸ್ಸುಗಳ ಸಂಚಾರಕ್ಕೆ ಮುಕ್ತವಾಯ್ತು ಚಾರ್ಮಾಡಿ ಘಾಟ್

    ಚಿಕ್ಕಮಗಳೂರು: ಐದು ತಿಂಗಳ ಬಳಿಕ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗಿದೆ.

    ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಭಾರೀ ಮಳೆಯಿಂದಾಗ ಚಿಕ್ಕಮಗಳೂರಿನ ಕೊಟ್ಟಿಗೆಹಾರದಿಂದ ಮಂಗಳೂರಿನ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ 20 ಕಿ.ಮೀ. ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಜಾಗದಲ್ಲಿ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎರಡು ತಿಂಗಳ ಬಳಿಕ ಜಿಲ್ಲಾಡಳಿತ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಕಾರು, ಬೈಕು, ಆಂಬುಲೆನ್ಸ್ ಸೇರಿದಂತೆ ಸಣ್ಣ-ಸಣ್ಣ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಸರ್ಕಾರಿ ಬಸ್‍ಗಳಿಗೂ ಅವಕಾಶವಿರಲಿಲ್ಲ.

    ರಾತ್ರಿ ವೇಳೆಯಲ್ಲಿ ಆಂಬುಲೆನ್ಸ್ ಹೊರತುಪಡಿಸಿ ಯಾವುದೇ ವಾಹನಗಳಿಗೆ ಅವಕಾಶವಿರಲಿಲ್ಲ. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ರು. ಸರ್ಕಾರಿ ಬಸ್‍ಗಳಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು. ಆದರೆ ಜಿಲ್ಲಾಡಳಿತ ಪ್ರವಾಸಿಗರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ದೊಡ್ಡ-ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದವರು ಸಕಲೇಶಪುರ ಮಾರ್ಗವಾಗಿ 60-70 ಕಿ.ಮೀ. ಸುತ್ತಿಬಳಸಿ ಮಂಗಳೂರು ತಲುಪಬೇಕಾಗಿತ್ತು.

    ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಪ್ರಯಾಣಿಕರ ಸಮಸ್ಯೆಯನ್ನ ಅರಿತ ಜಿಲ್ಲಾಡಳಿತ ಮಳೆ ಸಂಪೂರ್ಣ ಕ್ಷೀಣಿಸಿರೊದ್ರಿಂದ ಚಾರ್ಮಾಡಿಯಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಹಗಲಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದು, ಕೆ.ಎಸ್.ಆರ್.ಟಿ.ಸಿಯ ಮಿನಿ ಬಸ್ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗಿದೆ. ಚಾರ್ಮಾಡಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ಆದ ಸಂತೋಷಕ್ಕಿಂತ ಹೆಚ್ಚಿನ ಸಂತೋಷ ಕೊಟ್ಟಿಗೆಹಾರದ ಅಂಗಡಿ-ಮುಂಗಟ್ಟುಗಳ ಸಣ್ಣ-ಸಣ್ಣ ವ್ಯಾಪಾರಸ್ಥರಿಗೆ ಆಗಿದೆ.

    ಕಳೆದ ತಿಂಗಳು ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್  24 ಗಂಟೆಯೂ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳಿಗೆ ಸಂಚರಿಸಲು ಅನುಮತಿ ನೀಡಿದ್ದರು.  ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

  • ವಿದೇಶಿಯರ ಮೋಜಿ ಮಸ್ತಿಗಾಗಿ ಆನೆಗೊಂದಿಯಲ್ಲಿ ಅನಧಿಕೃತ ರೆಸಾರ್ಟ್ ಆರಂಭ

    ವಿದೇಶಿಯರ ಮೋಜಿ ಮಸ್ತಿಗಾಗಿ ಆನೆಗೊಂದಿಯಲ್ಲಿ ಅನಧಿಕೃತ ರೆಸಾರ್ಟ್ ಆರಂಭ

    ಕೊಪ್ಪಳ: ಜಿಲ್ಲಾಡಳಿತದ ವಿರೋಧದ ನಡುವೆಯೂ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ವರ್ಷಕ್ಕಾಗಿ ಬರೋಬ್ಬರಿ 13 ರೆಸಾರ್ಟ್‍ಗಳು ವಹಿವಾಟು ನಡೆಸಲು ಸಜ್ಜಾಗಿವೆ.

    ವಿದೇಶಿಗರ ಮೋಜಿ ಮಸ್ತಿಗಾಗಿ ರೂಪುಗೊಂಡ ತಾಲೂಕಿನ ವಿರುಪಾಪುರಗಡ್ಡಿ ರೆಸಾರ್ಟ್‍ಗಳು ವೀಕೆಂಡ್ ಪ್ರಿಯರಿಗೆ ಮಸ್ತ್ ಜಾಗವಾಗಿದೆ. ಗಡ್ಡಿಯೊಂದರಲ್ಲಿ 33 ರೆಸಾರ್ಟ್‍ಗಳು ವೀಕೆಂಡ್ ಗೆ ಅತಿಥ್ಯ ನೀಡುತ್ತಿವೆ. ಇತ್ತೀಚಿಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ರೆಸಾರ್ಟ್‍ಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಸರತ್ತು ನಡೆಸಿದರೂ ಸ್ಥಳೀಯ ಅಧಿಕಾರಿಗಳ ಅಸಹಕಾರದಿಂದ ಪ್ರಯೋಜನವಾಗಿಲ್ಲ. ರೆಸಾರ್ಟ್ ಕತೆ ಮುಗಿತು ಎನ್ನುವಷ್ಟರಲ್ಲಿ ಗಡ್ಡಿ ಹೊರಭಾಗದಲ್ಲಿ ರೆಸಾರ್ಟ್‍ಗಳು ನಿರ್ಮಾಣಗೊಂಡಿದ್ದು, ಹೊರ ಜಿಲ್ಲೆ ಉದ್ಯಮಿಗಳು ಕಾಲಿಟ್ಟಿದ್ದಾರೆ. ಪಟ್ಟಾ ಭೂಮಾಲೀಕರಿಗೆ ಸೀಮಿತವಾಗಿದ್ದ ಮೋಜು ಮಸ್ತಿ ಜಾಗಕ್ಕೀಗ ಹೊರಗಿನವರು ಲಗ್ಗೆ ಹಾಕಿದ್ದು, ಪೈಪೋಟಿ ವಹಿವಾಟುವಿಗೆ ಹಳೇ ಉದ್ಯಮಿಗಳು ಸುಸ್ತಾಗಿದ್ದಾರೆ.

    ಸಣಾಪುರ, ಹನುಮನಹಳ್ಳಿ, ಆನೆಗೊಂದಿ, ಜಂಗ್ಲಿ, ಅಂಜನಾದ್ರಿ ಬೆಟ್ಟ, ಚಿಕ್ಕರಾಂಪುರ ಬಳಿ ಅನಧಿಕೃತ ರೆಸಾರ್ಟ್‍ಗಳು ತಲೆ ಎತ್ತಿದ್ದು, ಬಳ್ಳಾರಿ, ರಾಯಚೂರು ಮತ್ತು ಗೋವಾ ಮೂಲದ ಉದ್ಯಮಿಗಳು ಗುತ್ತಿಗೆ ಆಧಾರದಡಿ ಜಾಗ ಪಡೆದು ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ರೆಸಾರ್ಟ್‍ಗಳಿಂದ ಸರ್ಕಾರಕ್ಕೆ ನಯಾಪೈಸೆ ಆದಾಯವಿಲ್ಲ. ಹಂಪಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಅನುಮತಿ ಬೇಕಿಲ್ಲ. ಹೀಗಾಗಿ ಅನಧಿಕೃತ ರೆಸಾರ್ಟ್‍ಗಳಿಗೆ ಕಡಿವಾಣವಿಲ್ಲದಂತಾಗಿದ್ದು, ಮೋಜು ಮಸ್ತಿಗೆ ತಡೆಯಬೇಕಿದ್ದ ಪೊಲೀಸರು ಆಸಕ್ತಿವಹಿಸುತ್ತಿಲ್ಲ. ಪಟ್ಟಾ ಭೂಮಿಯೊಂದಿಗೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ಕೇಳುವರಿಲ್ಲ. ಉತ್ಸವದ ವೇದಿಕೆ ಕೂಗಳತೆಯಲ್ಲಿ ರೆಸಾರ್ಟ್ ನಿರ್ಮಾಣವಾಗಿದ್ದರೂ ತಾಲೂಕು ಆಡಳಿತದ ಗಮನಕ್ಕಿಲ್ಲ.

    ರೆಸಾರ್ಟ್‍ಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಿದ್ದು, ಬೃಹತ್ ಕಲ್ಲು ಬಂಡೆಗಳಿಗೆ ಹೊಂದಿಕೊಂಡು ನಿರ್ಮಿಸಿದ್ದರೂ ಅರಣ್ಯ ಇಲಾಖೆ ಗಮನಹರಿಸಿಲ್ಲ. ವಿಎನ್‍ಸಿ ಕಾಲುವೆ ನೀರನ್ನು ರೆಸಾರ್ಟಿನತ್ತ ಬರುವ ರೀತಿಯಲ್ಲಿ ಸೋರಿಕೆ ವ್ಯವಸ್ಥೆ ಮಾಡಿದ್ದರೂ ನೀರಾವರಿ ಇಲಾಖೆ ನೋಡುತ್ತಿಲ್ಲ. ಅರಣ್ಯ ಒತ್ತುವರಿಯಾಗಿರುವುದು ರೆಸಾರ್ಟ್‍ಗಳಿಂದ ಗೊತ್ತಾದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೈಪೋಟಿ ಉದ್ಯಮಿ ಹಿನ್ನೆಲೆಯಲ್ಲಿ ಬಹುತೇಕ ರೆಸಾರ್ಟ್‍ಗಳು ಗುತ್ತಿಗೆ ಆಧಾರದಡಿ ನಡೆಯುತ್ತಿದ್ದು, ಮಾಲೀಕರು ಮೆಟ್ರೋಪಾಲಿಟಿನ್ ಸಿಟಿ ಸೇರಿದ್ದಾರೆ. ಹೊರಗಿನಿಂದ ಬಂದ ವಹಿವಾಟುಗಾರರಿಗೆ ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಹಾಳು ಮಾಡುತ್ತಿದ್ದು, ಮೋಜು ಮಸ್ತಿ ಹೆಸರಿನಲ್ಲಿ ಸಂಸ್ಕೃತಿ ನಾಶ ಮಾಡುತ್ತಿದ್ದಾರೆ.

  • ಸಂತಸದಲ್ಲಿ ಸಂತ್ರಸ್ತರು – 4 ತಿಂಗಳ ನಂತರ ತಮ್ಮ ಮನೆಗಳಿಗೆ ತೆರಳಿದ 68 ಕುಟುಂಬಗಳು

    ಸಂತಸದಲ್ಲಿ ಸಂತ್ರಸ್ತರು – 4 ತಿಂಗಳ ನಂತರ ತಮ್ಮ ಮನೆಗಳಿಗೆ ತೆರಳಿದ 68 ಕುಟುಂಬಗಳು

    ಕೊಡಗು: ನೆರೆ ಸಂಸತ್ರಸ್ತರಿಗೆ ಜಿಲ್ಲಾಡಳಿತದಿಂದ ಜಾಗ ಗುರುತಿಸಿದ ಹಿನ್ನೆಲೆಯಲ್ಲಿ 68 ಕುಟುಂಬಗಳು ಸಂತ್ರಸ್ತರ ನಿರಾಶ್ರಿತ ಕೇಂದ್ರದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

    ಮಡಿಕೇರಿ ತಾಲೂಕಿನ ನೆಲ್ಯಹುದಿಕೇರಿ ಸರ್ಕಾರಿ ಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಮನೆ ಮಠ ಕಳೆದುಕೊಂಡವರಿಗೆ ಸಂತ್ರಸ್ತರ ಕೇಂದ್ರ ತೆರೆದು ಆಶ್ರಯ ನೀಡಿತ್ತು. ಪ್ರವಾಹ ಇಳಿದ ಮೇಲೆ ಅವರನ್ನು ಪುನಃ ತಮ್ಮ ಗ್ರಾಮಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿತ್ತು.

    ಆದರೆ ಸಂತ್ರಸ್ತರು ಮಾತ್ರ ತಮಗೆ ಶಾಶ್ವತ ಪರಿಹಾರ ನೀಡದ ಹೊರತ್ತು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ನಿವೇಶನ ನೀಡುವಂತೆ ಆಗ್ರಹಿಸಿ ಬರೋಬ್ಬರಿ ನಾಲ್ಕು ತಿಂಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು. ಇಡೀ ಜಿಲ್ಲೆಯಲ್ಲಿ ಇದೊಂದೇ ನಿರಾಶ್ರಿತ ಕೇಂದ್ರದಲ್ಲಿ 176 ಜನರು ಇದುವರೆಗೆ ಇದ್ದರು. ಇದೀಗ ಜಿಲ್ಲಾಡಳಿತ ಮಡಿಕೇರಿ ತಾಲೂಕಿನ ಅಭ್ಯಂತಮಂಗಲದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಿ ಸಂತ್ರಸ್ತರಿಗಾಗಿ ಜಾಗ ಗುರುತಿಸುತ್ತಿದೆ.

    ಜಾಗವನ್ನು ಸಮತಟ್ಟು ಮಾಡುತ್ತಿದ್ದು, ನಿವೇಶನವಾಗಿ ಪರಿವರ್ತಿಸಿ ಕೊಡುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರು ನಾಲ್ಕು ತಿಂಗಳ ಹೋರಾಟವನ್ನು ಕೊನೆಗೂ ಅಂತ್ಯಗೊಳಿಸಿ ತಮ್ಮ ತಮ್ಮ ಊರುಗಳಿಗೆ ಖುಷಿಯಿಂದ ತೆರಳುತ್ತಿದ್ದಾರೆ. ಒಟ್ಟಿನಲ್ಲಿ 4 ತಿಂಗಳಿಂದ ಶಾಶ್ವತ ಪರಿಹಾರಕ್ಕಾಗಿ ಹೋರಾಡುತ್ತಿದ್ದ ಜನರಿಗೆ ನಿವೇಶನ ಸಿಗುತ್ತಿರುವುದು ಸಂತಸ ತಂದಿದೆ.