Tag: District Administration

  • ಕೊರೊನಾ ಭೀತಿ- ಇಂದಿನಿಂದ ಕರಾವಳಿಯಲ್ಲಿ ಯಕ್ಷಗಾನ ಬಂದ್

    ಕೊರೊನಾ ಭೀತಿ- ಇಂದಿನಿಂದ ಕರಾವಳಿಯಲ್ಲಿ ಯಕ್ಷಗಾನ ಬಂದ್

    ಮಂಗಳೂರು: ಕೊರೊನಾ ವೈರಸ್ ಭೀತಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ತಟ್ಟಿದ್ದು, ಇಂದಿನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತವಾಗಲಿದೆ.

    ಜಿಲ್ಲಾಡಳಿತದ ಆದೇಶದ ಮೇರೆಗೆ ಯಕ್ಷಗಾನ ಪ್ರದರ್ಶನಗಳು ಸ್ಥಗಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನ ಮೇಳದ ತಿರುಗಾಟವೂ ಬಂದ್ ಆಗಲಿದೆ. ಇಂದಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನಕ್ಕೆ ತಡೆ ಬಿದ್ದಿದೆ. ಆದರೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇರುವ ಹಿನ್ನಲೆಯಲ್ಲಿ ಕಟೀಲು ದೇವಸ್ಥಾನದ ಮುಂಭಾಗ ಒಂದು ಗಂಟೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 7 ಗಂಟೆಯಿಂದ 8 ಗಂಟೆ ತನಕ ಪ್ರದರ್ಶನ ನಡೆಯಲಿದೆ ಎಂದು ಕಟೀಲು ಯಕ್ಷಗಾನ ಮೇಳ ಆಡಳಿತ ಮಂಡಳಿ ಹಾಗೂ ದೇವಳದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದ್ದಾರೆ.

    ಕೊರೊನಾ ಮಹಾಮಾರಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇಂದಿನಿಂದ ಕಟೀಲು ಆರು ಮೇಳಗಳ ಯಕ್ಷಗಾನ ಪ್ರದರ್ಶನ ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ವರೆಗೆ ಇರುವುದಿಲ್ಲ. ಆದರೆ ಮೇಳ ಹೊರಟ ಮೇಲೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ. ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ಹೀಗಾಗಿ ಮೇಳದ ದೇವರಿಗೆ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ ಎಂದು ಮಂಡಳಿ ತಿಳಿಸಿದೆ.

    ರಂಗಸ್ಥಳದಲ್ಲಿ ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಅಲ್ಲಿಯವರೆಗಿನ ವ್ಯವಸ್ಥೆ ದೇವರ ಪೂಜೆ ಎಂಬ ನಂಬಿಕೆ ಇದೆ. ಅದೇ ರೀತಿ ಮುಖ್ಯ ಸ್ತ್ರೀ ವೇಷದ ನಂತರ ಯಕ್ಷಗಾನ ಪ್ರದರ್ಶನ ಎನ್ನುವ ಕಲ್ಪನೆಯೂ ಇದೆ. ಈ ಹಿನ್ನಲೆಯಲ್ಲಿ ದೇವರ ಪೂಜಾರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ಇಂದಿನಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.

    ಸಂಜೆ ಏಳು ಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ, ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ(ಕೋಡಂಗಿ) ಬರಲಿದೆ. ಸೀಮಿತ ಹಾಡುಗಳ ನಂತರ ಕುಕ್ಕೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬರಲಿದ್ದಾರೆ ದೇವರ ಪೂಜೆ ಬಾಲಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಗಿಯುತ್ತದೆ. ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ನಂತರ ಇಡೀ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದೆ.

    ದೇವಳದ ಮುಂಭಾಗ ಸುಮಾರು ಅರ್ಧ ಗಂಟೆ ಮಾತ್ರ ಈ ವಿಧಿ ನೆರವೇರಲಿದೆ. ದ.ಕ ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳ ಭಾಗವಹಿಸುವಿಕೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

  • ಕೊರೊನಾ ಭೀತಿ- ಕೋಲಾರದಲ್ಲಿ ಸೆಕ್ಷನ್ 144 ಜಾರಿ

    ಕೊರೊನಾ ಭೀತಿ- ಕೋಲಾರದಲ್ಲಿ ಸೆಕ್ಷನ್ 144 ಜಾರಿ

    – ಚಿಕನ್, ಮಟನ್, ಬಾರ್ ಬಂದ್
    – ಹೋಟೆಲ್, ದಿನಸಿ ಅಂಗಡಿ ಎಂದಿನಂತೆ

    ಕೋಲಾರ: ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೋಲಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಜಿಲ್ಲೆಯ ಗಡಿಯಲ್ಲಿ ಕೊರೊನಾ ಚೆಕ್ ಪೋಸ್ಟ್ ತೆರೆಯಲು ಸೂಚಿಸಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ, ಆದರೂ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ. ಹೀಗಾಗಿ ಮುಂದಿನ ಆದೇಶದ ವರೆಗೆ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೀಗಾಗಿ ಜನರು ಒಟ್ಟಿಗೆ ಸೇರುವಂತಿಲ್ಲ, ಯಾವುದೇ ಸಂತೆ, ಜಾತ್ರೆ, ರಥೋತ್ಸವಗಳನ್ನು ಮಾಡುವಂತಿಲ್ಲ, ಸಭೆ ಸಮಾರಂಭಗಳನ್ನು ಕೂಡಾ ಮಾಡುವಂತಿಲ್ಲ, ಮಾಡಿದರೂ ಹೆಚ್ಚು ಜನ ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಕೋಲಾರ ಆಂಧ್ರ ಮತ್ತು ತಮಿಳುನಾಡಿನ ಗಡಿ ಜಿಲ್ಲೆಯಾಗಿರುವ ಹಿನ್ನೆಲೆ ಆಂಧ್ರ ಮತ್ತು ತಮಿಳುನಾಡಿನ ಗಡಿ ಸಂಪರ್ಕ ಮಾಡುವ ಜಿಲ್ಲೆಯ 6 ಕಡೆಗಳಲ್ಲಿ ಕೊರೊನಾ ಚೆಕ್ ಪೋಸ್ಟ್‍ಗಳನ್ನು ಹಾಕಲಾಗಿದ್ದು, ಅಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಈ ವರೆಗೆ ಜಿಲ್ಲೆಯಲ್ಲಿ ಹೊರ ದೇಶಗಳಿಂದ ಬಂದಿರುವ ಒಟ್ಟು 36 ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಪ್ರತಿನಿತ್ಯ ಕೊರೊನಾಗೆ ಸಂಬಂದಿಸಿದಂತೆ ಸಭೆ ಕರೆಯಲಾಗುತ್ತಿದ್ದು, ನಿತ್ಯ ಜಿಲ್ಲೆಗೆ ಬರುವ, ಹೋಗುವವರ ಮೇಲೆ ನಿಗಾ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಕೋಲಾರ ಉಪ ಕಾರಾಗೃಹದಲ್ಲೂ ಖೈದಿಗಳ ಸಂದರ್ಶನ ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಈಗಾಗಲೇ ಜಿಲ್ಲೆಯ ಎಲ್ಲ ಪುರಸಭೆ ಹಾಗೂ ನಗರಸಭೆಗಳು ಮಾಂಸದಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

    ಜನರಿಗೆ ತೊಂದರೆಯಾಗದಂತೆ ಹೋಟೆಲ್, ದಿನಸಿ ಅಂಗಡಿ, ಬೇಕರಿಗಳು ಸೇರಿದಂತೆ ದಿನ ಬಳಕೆ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಒಂದೆಡೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಬೇಸಿಗೆಯ ತಾಪಮಾನ ಕೂಡಾ ಹೆಚ್ಚಾಗುತ್ತಿದ್ದು, ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮನೆಯಲ್ಲೂ ಇರಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಕನಸು, ಮನಸಲ್ಲೂ ಕೊರೊನಾ ಕೊರೊನಾ ಎನ್ನುವಂತಾಗಿದೆ.

  • ಗಣಿ ಜಿಲ್ಲೆಯಲ್ಲಿ ಎರಡು ಶಂಕಿತ ಕೊರೊನಾ ವೈರಸ್ ಪ್ರಕರಣ ಪತ್ತೆ

    ಗಣಿ ಜಿಲ್ಲೆಯಲ್ಲಿ ಎರಡು ಶಂಕಿತ ಕೊರೊನಾ ವೈರಸ್ ಪ್ರಕರಣ ಪತ್ತೆ

    ಬಳ್ಳಾರಿ: ಕೊರೊನಾ ವೈರಸ್ ಗಣಿಜಿಲ್ಲೆಗೂ ಒಕ್ಕರಿಸಿತೆ ಎಂಬ ಅನುಮಾನ ಇದೀಗ ಎದ್ದಿದೆ.

    ಹೊಸಪೇಟೆ ಹಾಗೂ ಸಂಡೂರು ತಾಲೂಕಿನ ತೋರಣಗಲ್ಲಿನರುವ ಜಿಂದಾಲ್ ನಲ್ಲಿ ಶಂಕಿತ ಎರಡು ಪ್ರಕರಣಗಳು ಪತ್ತೆಯಾಗಿವೆ. ಹೊಸಪೇಟೆಯಲ್ಲಿ ಕಾಣಿಸಿಕೊಂಡಿರುವ ಶಂಕಿತ ವ್ಯಕ್ತಿ ದುಬೈನಿಂದ ಬಂದಿದ್ದು, ಕೊರೊನಾದ ಲಕ್ಷಣಗಳು ಕಂಡು ಬಂದಿದೆ ಎನ್ನಲಾಗುತ್ತಿದೆ.

    ಇಬ್ಬರು ವ್ಯಕ್ತಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೆ ಗುರುವಾರ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯ. ಹೊರಗಿನಿಂದ ಬಂದ ವ್ಯಕ್ತಿಗಳಿಗೆ ಇರಬಹುದು ಎಂಬ ಉದ್ದೇಶದಿಂದ ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯ ಜನರಲ್ಲಿ ಕರೊನಾ ವೈರಸ್ ಇರುವ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದಿದ್ದಾರೆ.

    ಅಲ್ಲದೆ ಸಕಾಲಕ್ಕೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮತ್ತೊಂದು ಪ್ರಕರಣ ತೋರಣಗಲ್ಲಿನ ಜಿಂದಾಲ್ ಪ್ರದೇಶದಿಂದ ವರದಿಯಾಗಿದ್ದು, ಆ ವ್ಯಕ್ತಿಯ ರಕ್ತದ ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

  • ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕಾರವಾರ: ನಗರದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ, ದೊಡ್ಡ ದೊಡ್ಡ ಸದ್ದುಗಳು. ಭೂಕಂಪವೇ ಆಯಿತೇನೋ ಎನ್ನುವಂತೆ ಮನೆಗಳು ಕಂಪಿಸುತ್ತಿವೆ. ಆರೇ ಏನಾಯಿತು ಎಂದು ಜನರು ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಎಲ್ಲವೂ ಶಾಂತವಾಗಿದೆ.

    ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಕಾರವಾರ ನಗರದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವರು ಪೊಲೀಸರಿಗೆ ಸಹ ಕರೆ ಮಾಡಿ ಭೂಕಂಪವಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಯಾವ ಸದ್ದು? ಭೂಕಂಪನವೇ ಅಥವಾ ಇನ್ನೇನೋ ಆಗಿರಬಹುದೇ ಎಂಬ ಅನುಮಾನಗಳು ಜನರಲ್ಲಿ ಭಯ ಹುಟ್ಟಿಸಿತ್ತು.

    ಭೂಮಿ ಕಂಪಿಸಿದ್ದು ಹೇಗೆ?
    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ನೌಕಾದಳದ ಹಡಗು ನಿಲ್ದಾಣ ಹಾಗೂ ಸಬ್‍ಮೆರಿನ್ ಗಳ ನಿಲ್ದಾಣಕ್ಕಾಗಿ ಅರಗಾ ಬಳಿ ಸಮುದ್ರ ತೀರದಲ್ಲಿ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದೆ. ಸುರಂಗಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಕಲ್ಲನ್ನು ತೆರವುಗೊಳಿಸಲು ದೊಡ್ಡ ಮಟ್ಟದ ಸ್ಫೋಟವನ್ನು ಮಾಡುತ್ತಿದೆ.

    ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಕೋಲ ಭಾಗದಿಂದ ಕಾರವಾರ ಹಾಗೂ ಗೋವಾ ಗಡಿಯಲ್ಲೂ ಭೂಮಿ ಕಂಪಿಸಿದೆ. ಇಂದು ಕೂಡ ಸ್ಫೋಟ ನಡೆಸಿದ್ದು ಅರಗಾ ದಿಂದ ಕಾರವಾರದ ಬಳಿ ದಟ್ಟ ಮಣ್ಣು ಮಿಶ್ರಿತ ಹೊಗೆಯ ಆವರಿಸಿದ್ದು ಮತ್ತೊಮ್ಮೆ ಜನರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಕಾರವಾರದ ಸುತ್ತಮುತ್ತ ಪ್ರಾಚೀನ ಕಾಲದ ಏಕ ಶಿಲೆಗಳಿದ್ದು ಇವು ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಸ್ಫೋಟಿಸಿ ರಸ್ತೆ ಅಗಲೀಕರಣ ಮಾಡಲಾಗಿತ್ತು. ಆದರೆ ಈಗ ನೌಕಾದಳ ಕೂಡ ತನ್ನ ನೆಲೆಯನ್ನು ವಿಸ್ತರಿಸುವ ಕಾಮಗಾರಿ ಪ್ರಾರಂಭಿಸಿದೆ.

    ನೌಕನೆಲೆ ಸ್ಫೋಟ ನಡೆಸಲು ಅನುಮತಿ ಸಹ ಪಡೆದಿದ್ದು ಮುಂಜಾನೆ ವೇಳೆಯಲ್ಲಿ ಮಾತ್ರ ಸ್ಫೋಟಿಸಲು ಹಾಗೂ ಲಘು ಸಿಡಿತಲೆ ಮಾಡುವಂತೆ ಷರತ್ತುಬದ್ಧ ಮಂಜೂರು ನೀಡಲಾಗಿತ್ತು. ಆದರೆ ಗುತ್ತಿಗೆ ಕಂಪನಿ ಕಾಮಗಾರಿಗೆ ಚುರುಕು ನೀಡುವ ನೆಪದಲ್ಲಿ ಅತೀ ಹೆಚ್ಚು ಸಾಂದ್ರತೆಯುಳ್ಳ ಸಿಡಿತಲೆ ಬಳಸಿ ಸುರಂಗ ಮಾರ್ಗದಲ್ಲಿ ಸ್ಫೋಟ ನಡೆಸುತ್ತಿದೆ. ಇದರಿಂದಾಗಿ ಕಾರವಾರ, ಅಂಕೋಲ ಹಾಗೂ ಗೋವಾ ಗಡಿ ಭಾಗದಲ್ಲಿಯೂ ಕಂಪನದ ಅನುಭವ ಆಗುತಿದ್ದು ಜನರು ಭಯ ಪಡುವಂತೆ ಮಾಡಿದೆ.

    ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಮತ್ತೆ ದೊಡ್ಡ ಸ್ಫೋಟವನ್ನು ಬಳಸಿ ಸುರಂಗ ನಿರ್ಮಾಣ ಮಾಡಿದರೆ ಕಾರವಾರ ನಗರದ ಹಲವು ಮನೆಗಳು ಬಿರುಕು ಬಿಡುವ ಸಾಧ್ಯತೆಗಳಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಕಾರವಾರ ನಗರದ ಜನತೆ ಆಗ್ರಹಿಸಿದ್ದಾರೆ.

  • ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    ಯೋಧನ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ – ಕುಟುಂಬದ ಜೊತೆ ಮಾತನಾಡಿದ್ರೆ 5 ಸಾವಿರ ದಂಡ

    – ಈ ಕುಟುಂಬಕ್ಕೆ ಊರ ಜಾತ್ರೆಗೂ ನೋ ಎಂಟ್ರಿ

    ಬೆಳಗಾವಿ/ಬೆಂಗಳೂರು: ಪುಲ್ವಾಮ ದಾಳಿ ನಡೆದಾಗ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದರು. ಯೋಧರ ಛಿದ್ರ ಛಿದ್ರವಾದ ದೇಹಗಳನ್ನು ನೋಡಿ ಮನಸ್ಸು ವಿಲ ವಿಲ ಅಂದಿತ್ತು. ಮೊಂಬತ್ತಿಯ ಮಂದಬೆಳಕಿನಲ್ಲಿ ಮೌನವೇ ಮಾತಾಗಿತ್ತು. ಆದರೆ ಕರುನಾಡಿನ ಹೆಮ್ಮೆಯ ಯೋಧರೊಬ್ಬರ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಅವರ ಜೊತೆ ಯಾರಾದರೂ ಮಾತನಾಡಿದರೆ ಐದು ಸಾವಿರ ದಂಡ ವಿಧಿಸುವ ನೀಚ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.

    ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.

    ಇದರಿಂದ ಯೋಧ ವಿಠಲ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಕೂಡ ಮುಂದೂಡುವ ಪರಿಸ್ಥಿತಿಗೆ ಬಂದಿದ್ದಾರೆ. ದೇಶ ಕಾಯುವ ಯೋಧನಿಗೆ ಶತ್ರುಗಳ ಕಾಟಕ್ಕಿಂತ ಈಗ ನೆರೆಹೊರೆಯವರ ಕಾಟವೇ ಹೆಚ್ಚಾಗಿ ಬದುಕೇ ಸಾಕಾಗಿದೆ ಎನ್ನುವ ನೋವು ತುಂಬಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಿಠಲ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಮನೆ ಮುಂದೆ ಒಂದು 30*40 ಜಾಗ ಇದೆ. ಹೊಲದಲ್ಲೂ ಮನೆ ಕಟ್ಟಿದ್ದೀವಿ. ಆ ಜಾಗವನ್ನು ಅಂಗನವಾಡಿಗೆ ತಗೋಳ್ತೀವಿ, ಸರ್ಕಾರಿ ಜಾಗ ಅಂತ ಹೇಳಿ ಒತ್ತಾಯವಾಗಿ ತಗೊಳೋಕೆ ಗ್ರಾಮದ ಕೆಲವರು ಪ್ರಯತ್ನಿಸಿದರು. ಎಲ್ಲಾ ನಮ್ಮ ಅಪ್ಪನ ಹೆಸರಲ್ಲೇ ದಾಖಲೆಗಳು ಇದೆ. ಡಿಸಿ ಅವರಿಗೂ ಈ ಬಗ್ಗೆ ಕಂಪ್ಲೆಂಟ್ ಕೊಟ್ಟಿದ್ದೆವು. ಯಾರು ಏನೂ ಮಾಡಲಿಲ್ಲ. ನಾನು ತುರ್ತು ರಜೆ ಹಾಕಿ ಬಂದು ಡಿಸಿಗೆ ಕೇಳಿದೆ, ಇವೆಲ್ಲಾ ನಾರ್ಮಲ್, ಊರಲ್ಲಿ ಇದೆಲ್ಲಾ ಇದ್ದೀದ್ದೆ ಅಂತ ಹೇಳಿ ಕಳುಹಿಸಿದರು. ಆದರೆ ಜಾಗ ಕೊಟ್ಟಿಲ್ಲ ಅಂತ ನಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಯಾರು ನಮ್ಮ ಬಳಿ ಮಾತಾಡೊ ಹಂಗಿಲ್ಲ, ಮಾತಾಡಿದರೆ ಅವರಿಗೆ 5 ಸಾವಿರ ದಂಡ, ಯಾವುದೇ ಕಾರ್ಯಕ್ರಮ ಇದ್ದರೂ ನಮ್ಮ ಜನ ಕರೆಯೋ ಹಂಗಿಲ್ಲ ಎಂದು ಕಷ್ಟವನ್ನು ಹೇಳಿಕೊಂಡರು.

    ಯೋಧನ ಕುಟುಂಬ ಕಳೆದ ಮೂರು ವರ್ಷದಿಂದ ನರಕ ನೋಡುತ್ತಿದ್ದರೂ, ಇಂತಹ ಬಹಿಷ್ಕಾರದಂತಹ ಅನಿಷ್ಠ ಪದ್ಧತಿ ನಡೆಯುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಮಾತ್ರ ಮೌನವಾಗಿದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿಯ ರಾಜಕೀಯ ಶೂರರ ಮನಸ್ಸುಗಳು, ಈ ಯೋಧನ ಕುಟುಂಬದ ಪರ ನಿಲ್ಲುತ್ತಾ? ಅವರ ಕುಟುಂಬವನ್ನು ಬಹಿಷ್ಕಾರದ ಶಿಕ್ಷೆಯಿಂದ ಪಾರು ಮಾಡುತ್ತಾರಾ? ಇಲ್ಲವೋ ಎನ್ನುವುದನ್ನ ಕಾದು ನೋಡಬೇಕಿದೆ.

  • ಬಿಜೆಪಿ ತೆಕ್ಕೆಗೆ ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಆಕ್ರೋಶ

    ಬಿಜೆಪಿ ತೆಕ್ಕೆಗೆ ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಆಕ್ರೋಶ

    ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಸದಸ್ಯ ಬಿ.ಜಿ.ಅಜಯ್ ಕುಮಾರ್ ಮೇಯರ್ ಆಗಿ ಹಾಗೂ ಸೌಮ್ಯ ನರೇಂದ್ರ ಕುಮಾರ್ ಉಪಮೇಯರ್ ಆಗಿ ಆಯ್ಕೆಯಾದರು. ಈ ಮೂಲಕ ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಗೆ ಜಾರಿತು.

    ಗದ್ದಲದ ನಡುವೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್‍ನ ಮೇಯರ್ ಹಾಗೂ ಉಪಮೇಯರ್ ಕೋಪಗೊಂಡರು. ಇತ್ತ ಕಾಂಗ್ರೆಸ್ ನಾಯಕರು ಮತದಾನ ಬಹಿಷ್ಕರಿಸಿದರು. ಅಲ್ಲದೆ ಜಿಲ್ಲಾ ಚುನಾವಣಾಧಿಕಾರಿ ವಿ.ಪಿ.ಇಕ್ಕೇರಿ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್‍ನ ಆರು ಜನ ವಿಧಾನ ಪರಿಷತ್ ಸದಸ್ಯರು, 19 ಕಾರ್ಪೊರೇಟರ್‍ಗಳು ಮತದಾನದಲ್ಲಿ ಭಾಗವಹಿಸಿದ್ದರು. ಕೈ ಸದಸ್ಯರಾದ ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್, ಯಶೋದಾ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿತ್ತು. ಇಕ್ಕೇರಿಯವರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರು ಚುನಾವಣಾ ಪಟ್ಟಿಯಲ್ಲಿ ಸ್ಥಳೀಯರಲ್ಲದ ಎಂಎಲ್‍ಸಿಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದರು.

    ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಚುನಾವಣೆಗೆ ಮಾತ್ರ ಸೇರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾದರೂ ಮತದಾನಕ್ಕೆ ಅವಕಾಶ ಕೊಟ್ಟಿರುವುದು ಕಾನೂನು ಬಾಹಿರ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿ, ಸಭಾತ್ಯಾಗ ಮಾಡಿದರು. ನಂತರ ಗದ್ದಲದ ನಡುವೆಯೇ ಚುನಾವಣೆ ನಡೆಯಿತು.

    ಈ ಕುರಿತು ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಂಗ್ರೆಸ್‍ನ ಮೂವರು ಸದಸ್ಯರನ್ನು ಬಿಜೆಪಿ ಹಣ ಕೊಟ್ಟು ಖರೀದಿಸಿದೆ. ಈ ಮೂಲಕ ವಾಮಮಾರ್ಗದಿಂದ ಅಧಿಕಾರಕ್ಕೇರಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ

    ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬಗ್ಗೆ ಮೈಸೂರು ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಸಾಕಷ್ಟು ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ನಗರದ ಹೃದಯ ಭಾಗವಾದ ಕೆ.ಆರ್ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಇದೆ. ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿನಾರ್ಥವಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಉದ್ಘಾಟಿಸಿದ್ದರು.

    ಆದರೆ ಈಗ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿವೆ. ಪ್ರತಿಮೆ ಸರಿಪಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇತ್ತ ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕೆಲವರು ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ನಂದಿ ವಿಗ್ರಹ ಪರಿಶೀಲನೆ ನಡೆಸಿದೆ.

    ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು, 1659-73ರಲ್ಲಿ ನಿರ್ಮಾಣಗೊಂಡಿದೆ ಎನ್ನುವ ಉಲ್ಲೇಖವಿದೆ. ಚಾಮುಂಡಿಬೆಟ್ಟದ ಪ್ರಮುಖ ಕೇಂದ್ರ ಬಿಂದು. ನಂದಿ ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಭಕ್ತರು ಜಿಲ್ಲಾಡಳಿತಕ್ಕೆ ತಿಳಿಸಿದ್ದರು.

    ಕಪ್ಪಾಗಿದ್ದ ನಂದಿ ವಿಗ್ರಹವನ್ನ ಪಾಲಿಶ್ ಮಾಡಿ ಹೊಸ ರೂಪ ಕೊಡಲಾಗಿತ್ತು. ಆ ಸಂದರ್ಭದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಜಿಲ್ಲಾಡಳಿತ ಪಾರಂಪರಿಕ ತಜ್ಞರ ಸಮಿತಿಯೊಂದನ್ನ ರಚಿಸಿ ವಿಗ್ರಹ ಪರಿಶೀಲನೆಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಶಿಲ್ಪಿ ತಂಡ ವಿಗ್ರಹ ಪರಿಶೀಲನೆ ನಡೆಸಿದೆ.

    ಕೆಲವು ಕಡೆ ಬಿರುಕಿನ ರೀತಿ ಮೇಲ್ನೋಟಕ್ಕೆ ಕಾಣುತ್ತಿರೋದು ಬಿರುಕಲ್ಲ ಅದು ಕಲ್ಲಿನ ನೈಜತೆ ಎಂದು ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಿ ಸಮಿತಿಯು ವರದಿ ನೀಡಲಿದ್ದು, ವರದಿಯಲ್ಲಿ ಬಿರುಕು ಬಿಟ್ಟಿದೆ ಎಂದು ತಜ್ಞರು ಸ್ಪಷ್ಟಪಡಿಸಿದರೆ ನಂದಿ ವಿಗ್ರಹದ ಬಿರುಕು ಮುಚ್ಚಲು ಕೂಡ ಜಿಲ್ಲಾಡಳಿತ ಮುಂದಾಗಲಿದೆ.

  • ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ ಮೆಡಿಕಲ್ ಕಾಲೇಜು ರಸ್ತೆ ನಿರ್ಮಾಣದಲ್ಲಿ ಪ್ರಭಾವಿಗಳ ಹಿಂಬದಿಯಾಟ – ಭೂಮಿ ಕೊಟ್ಟವರ ಕಣ್ಣೀರು

    ಯಾದಗಿರಿ: 2018ರಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ದೃಷ್ಟಿಕೋನ ಇಟ್ಟುಕೊಂಡು ನಗರದ ಹೊರವಲಯದ ಮುದ್ನಾಳ್ ತಾಂಡಾದ ಬಳಿ 300 ಹಾಸಿಗೆಯ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ನಿರೀಕ್ಷೆಯಂತೆ ಕಳೆದ ವರ್ಷ ಕೇಂದ್ರ ಸರ್ಕಾರ ಮೆಡಿಕಲ್ ಕಾಲೇಜು ಸಹ ಮಂಜೂರು ಮಾಡಿದೆ. ವಿಪರ್ಯಾಸ ಎಂದರೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದರೂ ರಸ್ತೆಗೆ ಜಾಗ ಕೊಟ್ಟವರಿಗೆ ಸಂಕಷ್ಟ ಮಾತ್ರ ತಪ್ಪಿಲ್ಲ.

    ಆಸ್ಪತ್ರೆಗೆ 2017ರಲ್ಲಿ ನಿಗದಿಯಾಗಿದ್ದ ಜಾಗ ಬಿಟ್ಟು, ಈಗ ಬೆರೆಡೆ ಮಾರ್ಗ ಬದಲಿಸಿದ ಜಿಲ್ಲಾಡಳಿತ ಜಮೀನು ಮಾಲೀಕರ ಅನುಮತಿ ಇಲ್ಲದೆ, ರಸ್ತೆ ನಿರ್ಮಾಣ ಮಾಡುತ್ತಿದೆ. ಚಿತ್ತಾಪುರ ಮುಖ್ಯ ರಸ್ತೆಯಿಂದ ಸುಮಾರು 7 ಎಕ್ರೆ ಉದ್ದ ಮತ್ತು 100 ಅಡಿ ಅಗಲವಾದ ರಸ್ತೆ ನಿರ್ಮಿಸಲು 2017ರಲ್ಲಿ ಆಸ್ಪತ್ರೆ ಬ್ಲೂ ಪ್ರಿಂಟ್ ತಯಾರಿಸಲಾಗಿತ್ತು. ಅದರಂತೆ ಸುಮಾರು 21 ರೈತರ ಜಮೀನಲ್ಲಿ ಈ ರಸ್ತೆ ಹಾದು ಹೋಗುತ್ತದೆ. ಇದಕ್ಕೆ ಈಗಾಗಲೇ ರೈತರು ಸಹ ಸಮ್ಮತಿ ನೀಡಿ ಕೆಲವೊಬ್ಬರು ಪರಿಹಾರ ಸಹ ಪಡೆದಿದ್ದರು. ಇನ್ನೂ ಕೆಲವರು ಭೂಮಿ ಕೊಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಹೊತ್ತಿನಲ್ಲಿ ಜಿಲ್ಲಾಡಳಿತ ತನ್ನ ವರಸೆ ಬದಲಾಯಿಸಿದ್ದು, ಮೊದಲು ನಿಗದಿ ಮಾಡಿದ ಸ್ಥಳವನ್ನು ಬಿಟ್ಟು ಬೆರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದೆ.

    ಅಲ್ಲದೇ ಇದಕ್ಕೆ ರೈತರಿಂದ ಯಾವುದೇ ಅನುಮತಿ ಕೂಡ ಜಿಲ್ಲಾಡಳಿತ ಪಡೆದಿಲ್ಲ. ಹೀಗಾಗಿ ಕೆಲ ರೈತರ ಅರ್ಧ ಜಮೀನು ಈ ರಸ್ತೆಯ ಪಾಲಾಗುತ್ತಿದೆ. ಇದು ಭೂಮಿ ಮಾಲೀಕರ ನೋವಿಗೆ ಕಾರಣವಾಗಿದೆ. ರುಕ್ಮಿಣಿ ಬಾಯಿ ಮತ್ತು ತಾರಾಬಾಯಿ ಚವ್ಹಾಣ ಅವರಿಗೆ ಸೇರಿದ ಜಾಗ ಸರ್ವೆ ನಂಬರ್ 2/2ರಲ್ಲಿ ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚಿಗೆ ಜಾಗವನ್ನು ರಸ್ತೆ ಕಾಮಗಾರಿಗೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದರ ಪರಿಣಾಮ ಈ ಮಹಿಳೆಯರ ಬಳಿ ಇರುವ ಹೊಲದಲ್ಲಿ ಶೇ. 95ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಇದರಿಂದ ಈ ಕುಟುಂಬಕ್ಕೆ ತಾವು ಬೀದಿಗೆ ಬೀಳುವ ಆತಂಕ ಎದುರಾಗಿದೆ.

    2017ರಲ್ಲಿ ಸಿದ್ಧವಾಗಿದ್ದ ರಸ್ತೆ ಕಾಮಾಗರಿ ನಕ್ಷೆಯಲ್ಲಿ ಸರ್ವೆ ನಂಬರ್ 2/2ರ 2 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಪರಿಷ್ಕೃತ ರಸ್ತೆ ನಕ್ಷೆಯಲ್ಲಿ 14 ಗುಂಟೆ ಜಾಗವನ್ನ ಸ್ವಾಧೀನ ಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೆಚ್ಚುವರಿ ಜಾಗ ಪಡೆದುಕೊಳ್ತಿರುವ ಬಗ್ಗೆ ಮಾಲೀಕರಿಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ. ಇತ್ತ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸರ್ವೆ ಮಾಡಿ, ಯಾವುದೇ ಮುನ್ಸೂಚನೆ ನೀಡದೆ ಜಾಗದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.

    ಇದರ ಹಿಂದೆ ಕೆಲ ಕಾಣದ ಕೈಗಳಿದ್ದು, ಪ್ರಭಾವಿಯೊಬ್ಬರ ಜಮೀನು ಉಳಿಸಲು ಕೆಲ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣವಾಗುತ್ತಿರುವ ಹಿನ್ನೆಲೆ ಈ ಭೂಮಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡಯಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

  • ಕಪಾಲ ಬೆಟ್ಟದಲ್ಲಿ ಜಾಗರಣೆಗೆ ಅವಕಾಶ ನೀಡಿ: ಹಿಂದೂ ಜಾಗೃತಿ ಸೇನೆ

    ಕಪಾಲ ಬೆಟ್ಟದಲ್ಲಿ ಜಾಗರಣೆಗೆ ಅವಕಾಶ ನೀಡಿ: ಹಿಂದೂ ಜಾಗೃತಿ ಸೇನೆ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿ, ಇದೀಗ ತಕ್ಕಮಟ್ಟಿಗೆ ಸೈಲೆಂಟ್ ಆಗಿದೆ. ಆದರೆ ವರದಿ ಕೇಳಿದ್ದ ಕಂದಾಯ ಸಚಿವರು ಇನ್ನೂ ಕೂಡಾ ವರದಿಯನ್ನ ಪಡೆಯುವ ಮನಸ್ಸು ಮಾತ್ರ ಮಾಡಿಲ್ಲ. ಇದೀಗ ಕಪಾಲ ಬೆಟ್ಟದ ವಿಚಾರಕ್ಕೆ ಮತ್ತೆ ಕಿಚ್ಚು ಹತ್ತಿಕೊಳ್ಳುವ ಲಕ್ಷಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ತಿದ್ದು, ಶಿವರಾತ್ರಿ ಜಾಗರಣೆ ಮಾಡಲು ಅವಕಾಶ ನೀಡುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಇದೇ ಫೆಬ್ರವರಿ 21 ರಂದು ಶಿವರಾತ್ರಿ ವಿಶೇಷವಾಗಿ ಕಪಾಲ ಬೆಟ್ಟದಲ್ಲಿ ಜಾಗರಣ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರ ಬಳಿ ಮನವಿ ಪತ್ರ ಸಲ್ಲಿಸಿದ್ದಾರೆ.

    ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಶಿವರಾತ್ರಿಯ ಅಂಗವಾಗಿ ಜಾಗರಣೆಯನ್ನ ಕಪಾಲಿ ಬೆಟ್ಟದಲ್ಲಿ ಆಯೋಜಿಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಕಾಲಭೈರವೇಶ್ವರನ ಸ್ವರೂಪವಾದ ಶ್ರೀಮುನೇಶ್ವರ ಸ್ವಾಮಿಯ ನಾಮಸ್ಮರಣೆ, ಜಪತಪ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಸೇನೆಯ ಶಿವು ಭಗತ್ ತಿಳಿಸಿದರು.

    ಸಂಘಟನೆಯ ಮನವಿಯನ್ನ ಸ್ವೀಕರಿಸಿದ್ದು, ಜಾಗರಣೆ ವಿಚಾರವಾಗಿ ಅನುಮತಿ ಪಡೆಯುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಾಗರಣೆಗೆ ಅನುಮತಿ ನೀಡದಿದ್ದರೂ ಸಹ ಶಿವರಾತ್ರಿ ಜಾಗರಣೆಯನ್ನು ಕಪಾಲ ಬೆಟ್ಟದಲ್ಲಿಯೇ ಮಾಡಿಯೇ ತೀರುವುದಾಗಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಹೇಳಿದ್ದಾರೆ.

  • ಕೊರೊನಾ ವೈರಸ್ ಭೀತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

    ಕೊರೊನಾ ವೈರಸ್ ಭೀತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್

    – ಗೊಂದಲಕ್ಕೊಳಗಾಗದೆ ಎಚ್ಚರದಿಂದಿರಿ: ಡಿಸಿ ಸಿಂಧೂ ರೂಪೇಶ್

    ಮಂಗಳೂರು: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ ಕೊರೊನಾ ವೈರಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಲ್ಲಣ ಮೂಡಿಸಿದೆ. ಕೇರಳದಲ್ಲಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಕಾಯ್ದಿದಿರಿಸಲಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು,ಬಸ್ ನಿಲ್ದಾಣದಲ್ಲೂ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಭಾರತದಲ್ಲಿ ಮೊದಲ ಕೊರೊನಾ ಸೋಂಕು ಕೇರಳದ ವಿದ್ಯಾರ್ಥಿಯಲ್ಲಿ ಪತ್ತೆಯಾಗಿದ್ದು ಕೇರಳದೊಂದಿಗೆ ಗಡಿ ಭೂಭಾಗ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಸೋಂಕು ಬಾಧಿತರು ಕಂಡು ಬರದಿದ್ದರೂ ಅತೀ ಹೆಚ್ಚಾಗಿ ಕೇರಳದಿಂದ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವುದರಿಂದ ಜನ ಕೊರೊನಾ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವಮಂಗಳೂರು ಬಂದರು, ರೈಲ್ವೆ ಸ್ಟೇಷನ್, ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಜಾಗೃತಿ ನೀಡುವ ಕಾರ್ಯ ನಡೆಯುತ್ತಿದೆ.

    ಮಂಗಳೂರು ವಿಮಾನ ನಿಲ್ದಾಣದ ಆಯಕಟ್ಟಿನ ಜಾಗಗಳಲ್ಲಿ ಎಲ್‍ಇಡಿ ಫಲಕದಲ್ಲಿ ಕೊರೊನಾ ಸೋಂಕಿನ ಎಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಆದರೆ ಚೀನಾದಿಂದ ನೇರವಾಗಿ ಮಂಗಳೂರಿಗೆ ವಿಮಾನ ಯಾನ ಸೇವೆ ಇಲ್ಲ. ಹೀಗಾಗಿ ಜನರು ನಿರಾಳವಾಗಿರಬಹುದು ಎಂದು ಜಿಲ್ಲಾಡಳಿತ ಸೂಚಿಸಿದೆ. ಈ ನಡುವೆ ಕೊರೊನಾ ಬಾಧಿತರು ಎಲ್ಲಾದರೂ ಖಾಸಗಿ ಆಸ್ಪತ್ರೆಗಳಲ್ಲಿ ಇದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕೊರೊನಾ ಬಗ್ಗೆ ಯಾವುದೇ ಗೊಂದಲ ಇಲ್ಲದೆ ಜಾಗೃತಿ ವಹಿಸುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.

    ಕೊರೊನಾ ವೈರಸ್ ಬಾಧಿತರು ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ 10 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಪ್ರತಿ ಖಾಸಗಿ ಆಸ್ಪತ್ರೆಯಲ್ಲೂ ತಲಾ 5 ಬೆಡ್‍ಗಳನ್ನು ಮೀಸಲಿಡಲಾಗಿದೆ. ಕೊರೊನಾ ಬಗ್ಗೆ ಜಿಲ್ಲಾಡಳಿತ ಹೆಲ್ಪ್ ಲೈನ್ ನಂಬರನ್ನೂ ತೆರೆದಿದ್ದು, ಯಾವುದೇ ಭಯ ಮತ್ತು ಗೊಂದಲವಿದ್ದರೂ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಕೋರಿದೆ. ಕೊರೊನಾ ವೈರಸ್ ಕಡಲನಗರಿಯಲ್ಲೂ ಆತಂಕ ಮೂಡಿಸಿದ್ದು, ವೈರಸ್‍ನ ಸೋಂಕು ಜಿಲ್ಲೆಗೆ ತಾಗದಂತೆ ಜಿಲ್ಲಾಡಳಿತ ಸಕಲ ಕ್ರಮಕೈಗೊಂಡಿದೆ.