Tag: Distribution

  • ಕೆವಿಎನ್ ತೆಕ್ಕೆಗೆ ‘ಕಲ್ಕಿ’ ಕರ್ನಾಟಕದ ವಿತರಣಾ ಹಕ್ಕು

    ಕೆವಿಎನ್ ತೆಕ್ಕೆಗೆ ‘ಕಲ್ಕಿ’ ಕರ್ನಾಟಕದ ವಿತರಣಾ ಹಕ್ಕು

    ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಿಸಲು (Distribution) ಕೆವಿಎನ್ ಸಂಸ್ಥೆ ಮುಂದಾಗಿದೆ. ಮತ್ತೊಂದು ಖುಷಿ ಸಂಗತಿ ಅಂದರೆ,  ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ

    ‘ಕಾಟೇರ’ ಮೂಲಕ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಮರಳಿದ ಗುರು ದೇಶಪಾಂಡೆ

    ರ್ನಾಟಕದ ತುಂಬೆಲ್ಲ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ `ಕಾಟೇರ’ (Katera) ಕ್ರೇಜ್ ಮೇರೆ ಮೀರಿಕೊಂಡಿದೆ. ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ಥೇಟರುಗಳಿಗೆ ಆಗಮಿಸುವ ಸನ್ನಾಹದಲ್ಲಿರೋ ಈ ಚಿತ್ರದ ದಿಕ್ಕಿನಿಂದ ಕ್ಷಣಕ್ಕೊಂದರಂತೆ ಹೊಸಾ ಸುದ್ದಿಗಳು ಹೊರಬೀಳುತ್ತಿವೆ. ಇದೇ ಹೊತ್ತಿನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಕಾಟೇರ ವಿತರಣಾ (Distribution) ಹಕ್ಕನ್ನು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಪಡೆದುಕೊಂಡಿದ್ದಾರೆ.

    ಈ ಸುದ್ದಿ ಕೇಳಿದಾಕ್ಷಣ ಹಲವರಿಗೆ ಅಚ್ಚರಿಯಾದೀತೇನೋ… ಗುರು ದೇಶಪಾಂಡೆ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿಯೂ ಸದ್ದು ಮಾಡುತ್ತಿರುವವರು. ಇಂಥಾ ಗುರು ದೇಶಪಾಂಡೆ ಏಕಾಏಕಿ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆಂದರೆ, ಅಚ್ಚರಿಯಾಗೋದು ಸಹಜವೇ. ಅಸಲೀ ವಿಚಾರವೆಂದರೆ, ಅವರು ಸಿನಿಮಾ ವಿತರಣಾ ಕ್ಷೇತ್ರಕ್ಕೆ ಸೀನಿಯರ್. ದಶಕಗಳ ಹಿಂದೆ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿದ್ದ ಗುರು ದೇಶಪಾಂಡೆ ಕಾಟೇರ ಮೂಲಕ ಆ ಕ್ಷೇತ್ರಕ್ಕೆ ಮತ್ತೆ ಅಡಿಯಿರಿಸಿದ್ದಾರೆ.

    ದರ್ಶನ್ ಸಿನಿಮಾಗಳೆಂದರೆ, ದಶದಿಕ್ಕುಗಳತ್ತಲೂ ಕ್ರೇಜ್ ಹಬ್ಬಿಕೊಳ್ಳೋದು ಮಾಮೂಲು. ಸದ್ಯದ ಮಟ್ಟಿಗೆ ಕಾಟೇರ ವಿಚಾರದಲ್ಲಿ ಈ ಹಿಂದಿಗಿಂತಲೂ ತುಸು ಹೆಚ್ಚೇ ನಿರೀಕ್ಷೆಗಳಿದ್ದಾವೆ. ಅದರಲ್ಲಿಯೂ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಮಂದಿಯ ಸಿನಿಮಾ ವ್ಯಾಮೋಹ ಅತೀವವಾದದ್ದು. ಇಂಥಾ ಭಾಗದ ಕಾಟೇರ ವಿತರಣಾ ಹಕ್ಕು ಗುರು ದೇಶಪಾಂಡೆ ತೆಕ್ಕೆಗೆ ಬಿದ್ದಿದೆ. ಇದರೊಂದಿಗೆ ಸಿನಿಮಾ ವಿತರಕರಾಗಿ ಗುರು ದೇಶಪಾಡೆ ಅವರ ಸೆಕೆಂಡ್ ಇನ್ನಿಂಗ್ಸ್ ಕೂಡಾ ಭರ್ಜರಿ ಯಶ ದಕ್ಕಿಸಿಕೊಳ್ಳುವ ನಿಖರ ಸೂಚನೆಗಳೂ ಕಾಣಿಸುತ್ತಿವೆ.

     

    ಗುರು ದೇಶಪಾಂಡೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಸಕ್ರಿಯರಾಗಿದ್ದರೂ ಕೂಡಾ, ಪ್ರಧಾನವಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, 2010-11ನೇ ಸಾಲಿನಲ್ಲಿ ಅವರು ಸಿನಿಮಾ ವಿತರಕರಾಗಿ ಸಕ್ರಿಯರಾಗಿದ್ದರು. ಆ ಕಾಲದಲ್ಲಿ ರಜನೀಕಾಂತ್ ಮಾಜೀ ಅಳಿಯ ಧನುಶ್ ನಟಿಸಿದ್ದ ಅಡುಗಳಂ, ದೈವ ತಿರುಮಗಳ್, ದಳಪತಿ ವಿಜಯ್ ನಟಿಸಿದ್ದ ವೇಲಾಯುಧನ್, ಯಶ್ ಅಭಿನಯದ ಕಿರಾತಕ, ಸಂಜು ವೆಡ್ಸ್ ಗೀತಾದಂಥಾ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಆ ನಂತರದಲ್ಲಿ ನಿರ್ದೇಶನದತ್ತ ಹೊರಳಿಕೊಂಡಿದ್ದ ಗುರು ದೇಶಪಾಂಡೆ ವಿತರಣಾ ಕ್ಷೇತ್ರದಿಂದ ಹಿಂದೆ ಸರಿದ್ದರು. ಇದೀಗ ದಶಕದ ನಂತರ, ಕಾಟೇರನ ಪ್ರಭೆಯಲ್ಲವರು ಹಳೇ ಹಾದಿಯಲ್ಲಿ ಹೊಸಾ ಹುರುಪಿನೊಂದಿಗೆ ಹೆಜ್ಜೆಯೂರಿದ್ದಾರೆ

  • ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಕಳಪೆ ಆಹಾರ ವಿತರಣೆ ಸಮಸ್ಯೆ ಡಿಸಿಗೆ ಹೇಳಲು 10 ಕಿ.ಮೀ ನಡೆದ ವಿದ್ಯಾರ್ಥಿನಿಯರು

    ಯಾದಗಿರಿ: ವಸತಿ ಶಾಲೆಯಲ್ಲಿ ನೀಡುತ್ತಿರುವ ಕಳಪೆ ಆಹಾರ ವಿತರಣೆ ಸಮಸ್ಯೆಯನ್ನು ವಿದ್ಯಾರ್ಥಿನಿಯರು ಡಿಸಿಗೆ ಹೇಳಲು 10 ಕಿ.ಮೀ ನಡೆದು ಜಿಲ್ಲಾಧಿಕಾರಿ ಆಫೀಸ್‍ಗೆ ಬಂದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ಮುಂಡರಗಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಕಳಪೆ ಆಹಾರ ನೀಡುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಊಟ ಮಾಡದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ 7 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: 5-6 ದಿನ ಪುನೀತ್ ಸಮಾಧಿ ಬಳಿ ಯಾರನ್ನೂ ಬಿಡಲ್ಲ: ಅರಗ ಜ್ಞಾನೇಂದ್ರ

    ಒಂದು ಕಡೆ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ವಿದ್ಯಾರ್ಥಿನಿಯರು ವಸತಿ ಶಾಲೆಯಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ವಾರ್ಡನ್ ಹಾಗೂ ಪ್ರಾಂಶುಪಾಲರನ್ನು ಬದಲಾವಣೆ ಮಾಡಬೇಕೆಂದು ಒತ್ತಾಯ ಮಾಡಿದರು. ಸುಮಾರು 10ಕಿ.ಮೀ ವರಗೆ ನಡೆದುಕೊಂಡು ಬಂದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ:  ಕಾಂಗ್ರೆಸ್‍ನವರು ಮತದಾರರಿಗೆ ನೇರವಾಗಿ ಹಣ ಹಂಚಿದ್ದಾರೆ: ಈಶ್ವರಪ್ಪ

    ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು ಪ್ರತಿಭಟನೆ ನಿರತ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕೂಡಲೇ ಸಮಸ್ಯೆ ಬಗೆಹರಿಸಲಾಗುತ್ತದೆಂದು ಭರವಸೆಯನ್ನು ನೀಡಿದ್ದಾರೆ. ಇದನ್ನೂ ಓದಿ:  ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನ ಸಹಜ ಎನ್ನುವ ರೀತಿ ಬಿಂಬಿಸುವ ಕೆಲಸ ನಡೆಯುತ್ತಿದೆ: ಸಿ.ಟಿ.ರವಿ

  • ಆರಂಭದಲ್ಲಿ ದೇಶದ 30 ಕೋಟಿ ಜನರಿಗೆ ಲಸಿಕೆ – ಚುನಾವಣಾ ಬೂತ್‍ಗಳ ಮಾದರಿಯಲ್ಲಿ ಹಂಚಿಕೆ

    ಆರಂಭದಲ್ಲಿ ದೇಶದ 30 ಕೋಟಿ ಜನರಿಗೆ ಲಸಿಕೆ – ಚುನಾವಣಾ ಬೂತ್‍ಗಳ ಮಾದರಿಯಲ್ಲಿ ಹಂಚಿಕೆ

    – ವಿತರಣೆಗೆ ರಾಜ್ಯದಲ್ಲಿ ಮೂರು ಸಮಿತಿ ರಚನೆ
    – ಕೊರೊನಾ ವಾರಿಯರ್ಸ್‍ಗೆ ಮೊದಲ ಆದ್ಯತೆ
    – ಬಳಿಕ 50, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ

    ಬೆಂಗಳೂರು: ದೇಶದಲ್ಲಿ ಆರಂಭಿಕವಾಗಿ 30 ಕೋಟಿ ಜನರಿಗೆ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ಲಸಿಕೆ ವಿತರಣೆಯ ತಯಾರಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ರಾಜ್ಯಗಳ ಸಿಎಂಗಳ ಜೊತೆ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಈ ಕುರಿತು ವಿವರಿಸಿದ್ದಾರೆ.

    ಸಭೆಯ ಬಳಿಕ ಮಾತನಾಡಿದ ಅವರು, ಕೊರೊನಾ ಲಸಿಕೆ ಬಗ್ಗೆ ವಿವರವಾದ ಚರ್ಚೆ ನಡೆಸಲಾಗಿದೆ. ಹೆಚ್ಚು ಕೋವಿಡ್ ಪ್ರಕರಣಗಳು ಹಾಗೂ ಕಡಿಮೆ ಪ್ರಕರಣಗಳು ಇರುವ ರಾಜ್ಯಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ ಎಂದು ತಿಳಿಸಿದರು.

    ಸಭೆಯಲ್ಲಿ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಅವರು ಭಾಗವಹಿಸಿ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಯಾವ್ಯಾವ ದೇಶಗಳಲ್ಲಿ ಲಸಿಕೆ ತಯಾರಿಕೆ ಸ್ಥಿತಿ ಯಾವ ಹಂತದಲ್ಲಿದೆ ಎಂಬ ಬಗ್ಗೆ ತಿಳಿಸಿದರು. ಇಡೀ ವಿಶ್ವದಲ್ಲಿ ಹಲವು ಕಡೆ ಲಸಿಕೆ ತಯಾರಾಗುತ್ತಿದೆ. ಈ ಪೈಕಿ ನಮ್ಮ ದೇಶದಲ್ಲಿ 50 ಲಸಿಕೆಗಳು ಕ್ಲಿನಿಕಲ್ ಸಂಶೋಧನೆಗಳ ಹಂತದಲ್ಲಿವೆ. 25 ಲಸಿಕೆಗಳು ಅಡ್ವಾನ್ಸ್ ಟ್ರಯಲ್ ನಲ್ಲಿವೆ. 5 ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ಭಾರತದಲ್ಲಿ ಒಟ್ಟು 24 ಸಂಸ್ಥೆಗಳಿಗೆ ಲಸಿಕೆ ತಯಾರಿಸುವ ಸಾಮರ್ಥ್ಯ ಇದೆ ಎಂಬ ಮಾಹಿತಿ ನೀಡಿದರು ಎಂದು ಬೊಮ್ಮಾಯಿ ತಿಳಿಸಿದರು.

    30 ಕೋಟಿ ಜನರಿಗೆ ಲಸಿಕೆ:
    ಲಸಿಕೆ ಬರುವಾಗ ಸರಿಯಾದ ರೀತಿಯಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಅದ್ಯತೆ ಮೇರೆಗೆ ವಿತರಣೆ ಬಗ್ಗೆ ಸಭೆಯಲ್ಲಿ ಹೇಳಲಾಯಿತು. ದೇಶದಲ್ಲಿ ಆರಂಭಿಕವಾಗಿ 30 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಂಚುವ ಉದ್ದೇಶ ಹೊಂದಲಾಗಿದೆ. ಈ ಪೈಕಿ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ, 2 ಕೋಟಿ ಕೊರೊನಾ ವಾರಿಯರ್ಸ್‍ಗೆ ಹಾಗೂ 26 ಕೋಟಿ 50, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

    ಬೂತ್ ಮಾದರಿಯಲ್ಲಿ ಹಂಚಿಕೆ:
    ಲಸಿಕೆ ವಿತರಣೆಗೆ ರಾಜ್ಯದಲ್ಲಿ ಮೂರು ಸಮಿತಿಗಳ ರಚನೆಗೆ ನಿರ್ಧರಿಸಲಾಗಿದ್ದು, ಸಿಎಂ ನೇತೃತ್ವದಲ್ಲಿ, ಡಿಸಿಗಳ ನೇತೃತ್ವದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆಗೆ ನಿರ್ಧಾರಿಸಲಾಗಿದೆ. ಲಸಿಕೆ ಹಂಚಿಕೆಗೆ ಬೂತ್ ಗಳನ್ನು ರಚನೆ ಮಾಡಲಾಗುತ್ತಿದ್ದು, ಚುನಾವಣಾ ಬೂತ್ ಗಳ ಮಾದರಿಯಲ್ಲಿ ವಿತರಣೆ ಕೇಂದ್ರಗಳನ್ನು ರಚಿಸಲಾಗುತ್ತಿದೆ. ಅಲ್ಲದೆ ಕೊರೊನಾ ಲಸಿಕೆ ಕೊಟ್ಟ ಬಳಿಕ ಟ್ರ್ಯಾಕ್ ರಿಪೋರ್ಟ್ ಸಂಗ್ರಹಕ್ಕೆ ಸಹ ಸೂಚಿಸಲಾಗುತ್ತದೆ. ಲಸಿಕೆಯ ಡೋಸ್ ಕೊಟ್ಟ ವ್ಯಕ್ತಿಗಳ ಟ್ರ್ಯಾಕ್ ರಿಪೋರ್ಟ್ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಲಸಿಕೆ ಬರುವ ದಿನಾಂಕದ ಬಗ್ಗೆ ಪ್ರಧಾನಿ ಮೋದಿಯವರು ಮಾಹಿತಿ ಕೊಡಲಿಲ್ಲ. ನಿಖರ ದಿನಾಂಕ ಹೇಳಲು ಸಾಧ್ಯವಿಲ್ಲ ಎಂದರು. ಲಸಿಕೆ ತಯಾರಿಕೆ ಹಂತಗಳ ಬಗ್ಗೆ ಮಾತ್ರ ಮಾಹಿತಿ ನೀಡಿದರು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದರು.

    ಈ ವಿಡಿಯೋ ಸಂವಾದದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೈದರಾಬಾದ್‍ನಿಂದ ಭಾಗವಹಿಸಿ, ಕೇಂದ್ರ ಸರ್ಕಾರದ ಸೂಚನೆಯಂತೆ ಲಸಿಕೆ ವಿತರಣೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳು, 10,000 ವ್ಯಾಕ್ಸಿನೇಟರ್ ಸಿಬ್ಬಂದಿ ಗುರುತಿಸಲಾಗಿದೆ. ರಾಜ್ಯದಲ್ಲಿ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದ್ದು, ಪಶು ಸಂಗೋಪನೆ ಇಲಾಖೆ, ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನೂ ಬಳಸಲಾಗುವುದು ಎಂದು  ತಿಳಿಸಿದರು.

  • ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    – 5 ಸಾವಿರ ಮಾಸ್ಕ್ ಹಂಚಿ ಮಾನವೀಯತೆ ಮೆರೆದ ಯುವ ಡಾಕ್ಟರ್

    ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ.

    ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಹಾವಳಿ ಮಿತಿ ಮೀರಿ ಹೋಗಿತ್ತು. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಯಲ್ಲಿರೋ ಜನರು ಕೆಲಸ ಮಾಡಲು ಹಿಂದೇಟು ಹಾಕೋ ಸಮಯದಲ್ಲಿಯೇ, ಇವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

    ಕೆಲಸಕ್ಕೆ ಬಂದ ಕೂಡಲೇ ಇವರನ್ನು ಕೋವಿಡ್ ವಾರ್ಡಿಗೆ ಕೆಲಸಕ್ಕೆ ನಿಯೋಜಿಸಲಾಯಿತು. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕೋವಿಡ್ ವಾರ್ಡ್ ನಲ್ಲಿಯೇ ಕೆಲಸ ಮಾಡಿದ ಡಾ. ಮಯೂರೇಶ, ತಮಗೆ ಬಂದ ಸಂಬಂಳದಿಂದ ಇದೀಗ ಎನ್-95 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಡಾ. ಮಯೂರೇಶ್ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿ, ಅಲ್ಲಿ ಬಂದ ಸಂಬಳ ಹಾಗೂ ಸರ್ಕಾರಿ ಸಂಬಳವನ್ನು ಒಟ್ಟಾರೆ ಸೇರಿಸಿ, ಒಂದೂವರೆ ಲಕ್ಷ ರೂಪಾಯಿಯ ಮಾಸ್ಕ್ ಖರೀದಿಸಿ ಉಚಿತವಾಗಿ ಹಂಚಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಳದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುತ್ತಿರೋ ಇವರ ಸೇವೆಗೆ ಗೆಳೆಯರು ಸಾಥ್ ನೀಡಿದ್ದಾರೆ. ಒಟ್ಟು 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್‍ಗಳನ್ನು ಇದುವರೆಗೂ ಹಂಚಿರುವ ಈ ವೈದ್ಯ, ಶಾಲೆಗಳು ಆರಂಭವಾಗೋ ಸಾಧ್ಯತೆ ಇರುವುದರಿಂದ ಬಿಇಓ ಕಚೇರಿಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿದಂತೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಿದ್ದಾರೆ.

  • ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಸಂತ್ರಸ್ತರಿಗೆ ದಾನಿಗಳಿಂದ ಆಹಾರ ಕಿಟ್ ವಿತರಣೆ

    ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಸಂತ್ರಸ್ತರಿಗೆ ದಾನಿಗಳಿಂದ ಆಹಾರ ಕಿಟ್ ವಿತರಣೆ

    ರಾಯಚೂರು: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಗೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನ ಅಕ್ಷರಶಃ ಬೀದಿಗೆ ಬಂದಿದ್ದರು. ಇಲ್ಲಿನ ಜನರ ಪರಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದಾರೆ.

    ಅತೀವೃಷ್ಟಿಯಿಂದ ರಾಯಚೂರು ಜಿಲ್ಲೆ ಈಗ ತತ್ತರಿಸಿ ಹೋಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಾಯಚೂರು ತಾಲೂಕಿನ ಬಹುತೇಕ ಹಳ್ಳಿಗಳು ಅಲ್ಲೋಲ ಕಲ್ಲೋಲವಾಗಿವೆ. ನೂರಾರು ಮನೆಗಳು ಬಿದ್ದಿವೆ, ಸಾವಿರಾರು ಎಕ್ರೆ ಜಮೀನು ಹಾಳಾಗಿದೆ. ರೈತರ ಬದುಕು ಬೀದಿಗೆ ಬಂದಿದೆ. ಇಲ್ಲಿನ ಇಡಪನೂರು ಗ್ರಾಮದ ಪರಸ್ಥಿತಿಯಂತೂ ಹೇಳತೀರದು. ಗ್ರಾಮದಲ್ಲಿ 56 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು 100ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಹೀಗಾಗಿ ಜನ ಸೂರಿಲ್ಲದೆ ಸಂತ್ರಸ್ತರಾಗಿದ್ದಾರೆ.

    ಜಿಲ್ಲಾಡಳಿತ ಒಂದೆರಡು ಬಾರಿ ದಿನಸಿ ಪದಾರ್ಥ ನೀಡಿ ಕೈ ತೊಳೆದುಕೊಂಡಿತ್ತು. ಗ್ರಾಮದ ಶಾಲೆ, ಸಮುದಾಯ ಭವನದಲ್ಲಿ ಸಂತ್ರಸ್ತರು ಒಂದು ತಿಂಗಳಿಂದ ಆಶ್ರಯ ಪಡೆದಿದ್ದಾರೆ. ಆದರೆ ಊಟಕ್ಕೆ ಕಷ್ಟಪಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ರಾಯಚೂರು ರೋಟರಿ ಕ್ಲಬ್ ಹಾಗೂ ಸಾವಿತ್ರಿ ಗ್ರೂಪ್ ರಾಯಚೂರು ಸಹಯೋಗದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

    ಪಬ್ಲಿಕ್ ಟಿವಿ ವರದಿ ಬಳಿಕ ಜಿಲ್ಲಾಡಳಿತ ಸಹ ಎಚ್ಚೆತ್ತು ಸಂತ್ರಸ್ತರು ಶೆಡ್ ನಿರ್ಮಿಸಿಕೊಳ್ಳಲು ಟಿನ್ ಹಾಗೂ ಪೊಲೀಸ್ ವಿತರಣೆ ಮಾಡಿದ್ದಾರೆ. ಆದರೆ ಸಂಪೂರ್ಣ ಮನೆಗಳು ಬಿದ್ದು ಮನೆಯಲ್ಲಿನ ದವಸ ಧಾನ್ಯವನ್ನೂ ಕಳೆದುಕೊಂಡ ಜನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಪ್ರತಿದಿನ ಕೂಲಿ ಕೆಲಸ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಶಾಲೆ ಸಮುದಾಯ ಭವನದಲ್ಲೇ ವಾಸವಾಗಿದ್ದಾರೆ. ಆದರೆ ಈಗ ಮತ್ತೆ ಮಳೆ ಬಂದಿದ್ದರಿಂದ ಕೂಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದರು. ಸಂತ್ರಸ್ತರ ಸಂಕಷ್ಟದ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ವರದಿಗೆ ಸ್ಪಂದನೆ ಸಿಕ್ಕಿದ್ದರಿಂದ ನಿರಾಶ್ರಿತರಿಗೆ ಆಹಾರದ ಕಿಟ್ ಸಿಕ್ಕಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

  • ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಪಬ್ಲಿಕ್ ಟಿವಿಯಲ್ಲಿ ನೋವು ತೋಡಿಕೊಂಡ ಪದ್ಮಾವತಿಗೆ ಫುಡ್ ಕಿಟ್ ವಿತರಣೆ

    ಹುಬ್ಬಳ್ಳಿ: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಶುಕ್ರವಾರ ಹುಬ್ಬಳ್ಳಿಯ ಪದ್ಮಾವತಿಯವರು ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಆಹಾರವಿಲ್ಲದೇ ಜೀವನ ನಡೆಸುವಂತಾಗಿದೆ ಎಂದು ಪಬ್ಲಿಕ್ ಟಿವಿಯ ಕಾರ್ಯಕ್ರಮದ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಮುಖಂಡ ದೀಪಕ್ ನಾಯ್ಡು ಅವರು ಪದ್ಮಾವತಿಯವರಿಗೆ ಮನೆಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹುಬ್ಬಳ್ಳಿಯ ಆನಂದನಗರದಲ್ಲಿರುವ ಪದ್ಮಾವತಿಯವರ ಸ್ವಗೃಹಕ್ಕೆ ಭೇಟಿ ನೀಡಿದ ದೀಪಕ್ ನಾಯ್ಡು ಅವರು, ಅಕ್ಕಿ, ರವಾ, ಅವಲಕ್ಕಿ, ಬೆಳೆ, ಎಣ್ಣೆ, ತೊಗರಿಬೆಳೆ, ಸಕ್ಕರೆ ಚಹಾಪುಡಿ ಇರುವ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಈ ಮೂಲಕ ಮನೆಯ ಮಂತ್ರಾಲಯ ಕಾರ್ಯಕ್ರಮದಲ್ಲಿ ನೋವನ್ನು ತೋಡಿಕೊಂಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

  • ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ರೈತರಿಂದ 70 ಸಾವಿರ ಕಲ್ಲಂಗಡಿ ಖರೀದಿಸಿ ಬಡವರಿಗೆ ನೀಡಿದ ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ಮಹಾಮಾರಿ ಸೋಂಕು ರೈತರಿಗೂ ಬೆಂಬಿಡದೇ ಕಾಡುತ್ತಿದ್ದು, ತಾವು ಬೆಳೆದ ಬೆಳೆ, ಹಣ್ಣುಗಳನ್ನು ಮಾರಾಟ ಮಾಡಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ವೇಳೆ ಸರ್ಕಾರವೇನಾದರೂ ಸಹಾಯ ಮಾಡಲಿ ಎಂದು ಗೋಗರೆಯುತ್ತಿದ್ದಾರೆ.

    ಈ ರೀತಿಯ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಬೆಂಬಲವಾಗಿ ನಿಂತಿದ್ದು, ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ತಾವೇ ಸ್ವಂತ ಹಣದಿಂದ ಖರೀದಿ ಮಾಡಿದ್ದಾರೆ. ಜೊತೆಗೆ ಇದನ್ನು ಸಾರ್ವಜನಿಕರಿಗೆ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.

    ಹಣ್ಣು ಬೆಳೆಗಾರರಿಗೆ ನಷ್ಟವುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಚಿವರು ತಾವೇ ಖರೀದಿಸಿ, ರೈತರ ಕೈ ಹಿಡಿದಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರು ವಿವಿಧ ಹಣ್ಣುಗಳನ್ನು ಬೆಳೆದು ಕೆಲವು ಕಡೆಗಳಲ್ಲಿ ನಾಶ ಮಾಡಿದ್ದರು. ಆದರೆ ಕೆಲವು ಭಾಗದಲ್ಲಿ ಕಲ್ಲಂಗಡಿ ಬೆಳೆದು ಮಾರಾಟ ಮಾಡಲಾಗದೆ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಬೆಳಗಾರರಿಗೆ ಸಚಿವ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ವಿವಿಧ ಬೆಳೆಗಾರರಿಂದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.

    ಅದರಂತೆ ಇಂದು ಈ ಹಣ್ಣುಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಬಳಿ ಹಣ್ಣುಗಳು ತುಂಬಿದ್ದ ವಾಹನಗಳಿಗೆ ಚಾಲನೆ ನೀಡಿದರು. ನಗರದ 35 ವಾರ್ಡ್ ಗಳಿಗೆ ತೆರಳಿ ಅಲ್ಲಿನ ಅರ್ಹ ಬಡವರಿಗೆ ಈ ಹಣ್ಣನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಇಂದು ಸಚಿವ ಈಶ್ವರಪ್ಪ ಮಾಡುತ್ತಿದ್ದಾರೆ.

  • ಜೆಡಿಎಸ್ ಶಾಸಕನಿಂದ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ – ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ

    ಜೆಡಿಎಸ್ ಶಾಸಕನಿಂದ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ – ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್‍ಡೌನ್‍ನಿಂದ ಯಾವುದೇ ವಸ್ತುಗಳು ಸಿಗದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಟಿ.ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಬರೋಬ್ಬರಿ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ ಮಾಡಲು ಸಿದ್ಧರಾಗಿದ್ದಾರೆ.

    ನೂರಾರು ಸ್ವಯಂ ಸೇವಕ ಯುವಕ-ಯುವತಿಯರ ತಂಡದಿಂದ ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ ಮಾಡಿಸುತ್ತಿದ್ದಾರೆ. ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಶಾಸಕರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅಕ್ಕಿ, ನಾಲ್ಕು ಬಗೆಯ ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸೇರಿದಂತೆ ಇನ್ನಿತರ ಪದಾರ್ಥಗಳ ಪ್ಯಾಕೇಜ್ ಮಾಡಿ ಎಲ್ಲಾ ಹಸಿದ ಬಡ ಜನರ ಕುಟುಂಬಕ್ಕೆ ವಿತರಣೆ ಮಾಡಲಾಗುತ್ತಿದೆ.

    ಈ ವೇಳೆ ಶಾಸಕ ಮಂಜುನಾಥ್ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಈ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಜನರು ಕಂಗಾಲಾಗಿದ್ದಾರೆ. ಲಾಕ್‍ಡೌನ್‍ನಿಂದ ಜನರು ಪರದಾಡುತ್ತಿದ್ದು, ಪಕ್ಷ ಭೇದ ಮರೆತು ಎಲ್ಲರಿಗೂ ದವಸ ಧಾನ್ಯಗಳನ್ನ ನೀಡುವ ತೀರ್ಮಾನಕ್ಕೆ ನಾವು ಹಾಗೂ ನಮ್ಮ ಮುಖಂಡರು ಬಂದಿದ್ದೇವೆ. ಹೀಗಾಗಿ ಉತ್ತಮ ಗುಣಮಟ್ಟದ ದಿನಸಿ ಧಾನ್ಯಗಳನ್ನ ತಂದು ಸರಿ ಸಮನಾಗಿ ಪ್ಯಾಕೆಟ್ ಮಾಡಿ ಹಸಿದವರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

    ಇಂತಹ ಲಾಕ್‍ಡೌನ್ ವೇಳೆ ನಮ್ಮ ಸ್ವಯಂ ಸೇವಕ ಯುವಕ-ಯುವತಿಯರು ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಅಂತರವನ್ನ ಕಾಯ್ದುಕೊಂಡು ಎಲ್ಲಾ ಪದಾರ್ಥಗಳನ್ನ ಪ್ಯಾಕೆಟ್ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ಗೋಲ್ಡ್ ಫಿಂಚ್ ಸಂಸ್ಥೆಯಿಂದ 1 ಕೋಟಿ ಮೌಲ್ಯದ ದಿನಬಳಕೆ ವಸ್ತುಗಳ ವಿತರಣೆ

    ಗೋಲ್ಡ್ ಫಿಂಚ್ ಸಂಸ್ಥೆಯಿಂದ 1 ಕೋಟಿ ಮೌಲ್ಯದ ದಿನಬಳಕೆ ವಸ್ತುಗಳ ವಿತರಣೆ

    ಮಂಗಳೂರು: ಕೊರೊನಾ ವೈರಸ್ ಮಹಾಮಾರಿಗೆ ಜನ ಕಂಗೆಟ್ಟಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾನಿಯೊಬ್ಬರು ನೆರವಾಗಲು ಮುಂದೆ ಬಂದಿದ್ದಾರೆ.

    ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲಕ, ಉದ್ಯಮಿ ಪ್ರಕಾಶ್ ಶೆಟ್ಟಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ವಿತರಣೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಡ ಜನರಿಗೆ ಈ ಕಿಟ್ ವಿತರಣೆಯಾಗಲಿದೆ. ಒಂದೊಂದು ಕಿಟ್‍ನಲ್ಲಿ 10ಕೆಜಿ ಅಕ್ಕಿ, 2ಕೆಜಿ ಸಕ್ಕರೆ, 1ಕೆಜಿ ಬೇಳೆ, 1/2ಕೆಜಿ ಚಾಪುಡಿ, 1/2ಕೆಜಿ ರಸಂ ಪುಡಿ ಒಳಗೊಂಡಿದೆ.

    ಒಟ್ಟು 10 ಸಾವಿರ ಕಿಟ್‍ಗಳು ಇದ್ದು ಎರಡು ಜಿಲ್ಲೆಗೆ ತಲಾ 5 ಸಾವಿರ ಕಿಟ್ ಹಂಚಲಾಗಿದೆ. ಎರಡು ಜಿಲ್ಲೆಯ ಎಲ್ಲಾ ಶಾಸಕರ ಮುಖಾಂತರ ಇದು ಬಡ ಜನರಿಗೆ ತಲುಪಲಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಕಿಟ್ ವಿತರಣೆಗೆ ಚಾಲನೆ ನೀಡಿದರು. ಪ್ರಕಾಶ್ ಶೆಟ್ಟಿ ಅವರ ಈ ಕಾರ್ಯ ಇತರ ದಾನಿಗಳಿಗೂ ಪ್ರೇರಣೆಯಾಗಲಿ ಎಂದು ಪಾಲಿಕೆ ಆಯುಕ್ತರು ಇದೇ ಸಂದರ್ಭ ಹೇಳಿದರು.