Tag: dissident

  • 20 ದಿನದಲ್ಲಿ 2ನೇ ಬಾರಿಗೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    20 ದಿನದಲ್ಲಿ 2ನೇ ಬಾರಿಗೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    – ಮತ್ತೆ ಅತೃಪ್ತರ ಗುಂಪು ಕಟ್ಟಿದ ಯತ್ನಾಳ್

    ಬೆಂಗಳೂರು: ಬಿಜೆಪಿಯಲ್ಲಿ 20 ದಿನದಲ್ಲಿ 2ನೇ ಬಾರಿಗೆ ಭಿನ್ನಮತ ಸ್ಫೋಟವಾಗಿದ್ದು, ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ಅತೃಪ್ತರ ಗುಂಪು ಕಟ್ಟಿದ್ದಾರೆ. ಈ ಮೂಲಕ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಭಿನ್ನಮತದ ಆತಂಕ ಶುರುವಾಗಿದೆ.

    ರಾಜ್ಯಸಭೆ ಚುನಾವಣೆ ಮೊದಲು ಕತ್ತಿ, ನಿರಾಣಿ ಜೊತೆಗೂಡಿ ಸಿಎಂ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನಮತದ ಕಹಳೆ ಊದಿದ್ದರು. ಈ ಬೆನ್ನಲ್ಲೇ ಫೀಲ್ಡಿಗೆ ಇಳಿದಿದ್ದ ಯಡಿಯೂರಪ್ಪ, ಕತ್ತಿ, ನಿರಾಣಿ ಕರೆಯಿಸಿ ಬಂಡಾಯ ತಣ್ಣಗೆ ಮಾಡಿದ್ದರು. ಈ ಮೂಲಕ ರೆಬೆಲ್ ಸ್ಟಾರ್ ಯತ್ನಾಳರನ್ನು ಒಬ್ಬಂಟಿಯನ್ನಾಗಿಸಿದ್ದರು. ಆದರೆ ಬಸನಗೌಡ ಪಾಟೀಲ್ ಮತ್ತೊಮ್ಮೆ ಭಿನ್ನಮತದ ಕಹಳೆ ಮೊಳಗಿಸಿದ್ದಾರೆ.

    ಕಳೆದ 20 ದಿನಗಳಿಂದ ಅತೃಪ್ತರನ್ನು ಸಂಪರ್ಕಿಸಿ ಒಂದು ಕಡೆ ಸೇರಿಸಿ ಸಿಎಂ ವಿರುದ್ಧ ಮತ್ತೆ ಬಂಡೆದಿದ್ದಾರೆ. ಕಳೆದೊಂದು ತಿಂಗಳಿಂದ ಮುಖ್ಯಮಂತ್ರಿ ಮನೆ ಕಡೆ ತಿರುಗಿಯೂ ನೋಡದ ವಿಜಯಪುರದ ಸರದಾರ, ಈಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದಾರೆ.

    ಯತ್ನಾಳ್‍ಗೆ ಮೊದಲೆಲ್ಲಾ ಉತ್ತರ ಕರ್ನಾಟಕದ ಅತೃಪ್ತ ಶಾಸಕರು ಸಾಥ್ ಕೊಡುತ್ತಿದ್ದರು. ಮಹತ್ವದ ಬೆಳವಣಿಗೆಯಲ್ಲಿ ಕರಾವಳಿ ಭಾಗದ ಶಾಸಕರು ಕೂಡ ಯತ್ನಾಳ್‍ಗೆ ಸಾಥ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

    ಕಟೀಲ್ ಭೇಟಿ ವೇಳೆ ನಡೆದ ಮಾತುಕತೆ:
    ಯತ್ನಾಳ್: ನಮ್ಮ ಕೆಲಸಗಳು ಆಗ್ತಿಲ್ಲ, ಕ್ಷೇತ್ರಕ್ಕೆ ಅನುದಾನ ಸ್ಪಂದಿಸುತ್ತಿಲ್ಲ. ಶಿವಮೊಗ್ಗಕ್ಕೆ ಕೋಟಿ ಕೋಟಿ ಅನುದಾನ ಹರಿಸ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ನಮಗೆ ಸ್ಪಂದಿಸುತ್ತಿಲ್ಲ.
    ನಳಿನ್ ಕಟೀಲ್: ಹೌದಾ
    ಯತ್ನಾಳ್: ನೀವೇ ಹೇಳಿ.. ನಾವು ಯಾರ ಬಳಿ ಹೋಗಬೇಕು. ಇದು ಹೀಗೆ ಮುಂದುವರೆದ್ರೆ ಸರಿ ಹೋಗಲ್ಲ.. ಈ ವಿಚಾರದಲ್ಲಿ ಪಕ್ಷ ಮಧ್ಯ ಪ್ರವೇಶ ಮಾಡಬೇಕು
    ನಳಿನ್ ಕಟೀಲ್: ನಿಮ್ಮ ದೂರಿನ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೀನಿ. ಸಮಾಧಾನ ಮಾಡಿಕೊಳಿ…ಎಲ್ಲಾ ಸರಿ ಹೋಗುತ್ತೆ
    ಯತ್ನಾಳ್: ವಿಭಾಗವಾರು ಸಭೆ ಕರೆದು ನಮ್ಮ ಸಮಸ್ಯೆಗಳನ್ನು ಆಲಿಸಿ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ.. ನಾವು ಮಾತಾಡೋದು ಇದೆ.
    ನಳಿನ್ ಕಟೀಲ್ – ಆಯ್ತು.. ಸಿಎಂ ಜೊತೆ ಮಾತಾಡುತ್ತೇನೆ. ಮೊದ್ಲು ವಿಭಾಗವಾರು ಸಭೆ ಕರೆಯುತ್ತೇನೆ.. ನಂತರ ಶಾಸಕಾಂಗ ಪಕ್ಷದ ಸಭೆ ಬಗ್ಗೆ.

    ನಳಿನ್ ಕುಮಾರ್ ಕಟೀಲ್‍ಗೆ ದೂರು ನೀಡುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ವಿರುದ್ಧ ಬಂಡಾಯಕ್ಕೆ ಮರಳಿ ಯತ್ನ ಮಾಡುತ್ತಿರುವುದು ಸಿಎಂ ತಲೆ ಬಿಸಿಗೆ ಕಾರಣವಾಗಿದೆ.

    ಇತ್ತ ಮಿತ್ರಮಂಡಳಿ ಪೈಕಿ ವಿಶ್ವನಾಥ್ ಹೊರತುಪಡಿಸಿ ಎಂಟಿಬಿ ನಾಗರಾಜ್, ಶಂಕರ್ ಮೇಲ್ಮನೆ ಸದಸ್ಯರಾಗುತ್ತಿದ್ದಾರೆ. ಈ ಹಿಂದೆ ಕೊಟ್ಟ ಮಾತಿನಂತೆ, ಈಗ ಇವರನ್ನು ಸಿಎಂ ಯಡಿಯೂರಪ್ಪ ಮಂತ್ರಿ ಮಾಡಬೇಕಿದೆ. ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಹೊತ್ತಲ್ಲಿ, ಈಗಿನ ಕೆಲವರನ್ನು ಸಚಿವ ಸ್ಥಾನ ತೆಗೆಯುವ ಜೊತೆಗೆ ಮೂಲ ಬಿಜೆಪಿಗರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಡ ಸಿಎಂ ಮೇಲೆ ಬರುತ್ತಿದೆ.

    ಆಷಾಢದ ಹೊತ್ತಲ್ಲಿ ಈ ಸಂಪುಟ ಲಾಬಿ ಜೋರಾಗುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ ಕೊರೊನಾ ನೆಪ ಹೇಳಿ ಸಂಪುಟ ವಿಸ್ತರಣೆ ಮುಂದೂಡುವಂತೆ ಮಾಡಲು ಬಿಜೆಪಿಯ ಇನ್ನೊಂದು ಬಣ ಪ್ಲಾನ್ ಮಾಡುತ್ತಿದೆ. ಒಳಗೊಳಗೆ ನಡೆಯುತ್ತಿರುವ ಈ ಬೆಳವಣಿಗೆಯೂ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕಂಗಾಲು ಮಾಡಿದೆ ಎನ್ನಲಾಗಿದೆ.