Tag: dissatisfied MLAs

  • ಸಮ್ಮಿಶ್ರ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ: ಎನ್ ಮಹೇಶ್

    ಸಮ್ಮಿಶ್ರ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ: ಎನ್ ಮಹೇಶ್

    ರಾಮನಗರ: ಕಡೆಗೂ ಬಿಎಸ್‍ಪಿ ಶಾಸಕ ಎನ್.ಮಹೇಶ್ ತಮ್ಮ ನಿಲುವನ್ನು ಪ್ರಕಟಿಸಿದ್ದು, ಸಮಿಶ್ರ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

    ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಮ್ಮಿಶ್ರ ಸರ್ಕಾರದ ಒಂದು ಭಾಗವಾಗಿದ್ದೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರ ಆದೇಶದ ಮೇಲೆ ಸಮಿಶ್ರ ಸರ್ಕಾರದ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವು. ಬಿಜೆಪಿ ಸೇರಿ 3 ಪಕ್ಷಕ್ಕೂ ನೀವು ಸ್ವತಂತ್ರವಾಗಿರಿ ಎಂದು ಮಾಯಾವತಿ ಅವರು 15 ದಿನಗಳ ಹಿಂದೆಯೇ ಹೇಳಿದ್ದಾರೆ ಎಂದು ತಿಳಿಸಿದರು.

    ನನಗೆ ಪ್ರತ್ಯೇಕ ಆಸನ ಕೊಡುವಂತೆ ಸ್ಪೀಕರ್‍ಗೆ ಮನವಿ ಮಾಡಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನಾನು ವಿಷಯಾಧಾರಿತ ಬಾಹ್ಯ ಬೆಂಬಲ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

    ಸಂಜೆಯವರೆಗೂ ಮಹೇಶ್ ಅವರು ಈ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಇಂದು ರಾತ್ರಿ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಮಾಯಾವತಿ ಅವರ ತೀರ್ಮಾನವೇ ಅಂತಿಮ. ಸದನಕ್ಕೆ ಹಾಜರಾಗುತ್ತೇನೆ. ಮತ ಯಾರಿಗೆ ಹಾಕಬೇಕು ಎಂಬುದನ್ನು ಮಾಯಾವತಿಯವರು ತೀರ್ಮಾನಿಸುತ್ತಾರೆ. ಅವರ ಸೂಚನೆಯಂತೆ ನಾಳೆ ಮತ ಹಾಕುತ್ತೇನೆ ಎಂದು ಹೇಳಿದ್ದರು. ಇದೀಗ ಅಂತಿಮವಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ.

    ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಆರಂಭದಲ್ಲಿ ನಾನು ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದರು. ಆದರೆ, ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿ, ನಾನು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ. ನನಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಸ್ಪೀಕರ್‍ಗೆ ಮನವಿ ಮಾಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದರು. ಇದೀಗ ನಾಳೆಯೇ ಮೈತ್ರಿ ಸರ್ಕಾರ ವಿಶ್ವಾಸ ಮತ ಯಾಚಿಸಬೇಕಿದ್ದು, ಸಂಜೆಯವರೆಗೂ ಎನ್.ಮಹೇಶ್ ನಡೆ ನಿಗೂಢವಾಗಿತ್ತು.

    ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎನ್.ಮಹೇಶ್, ನಾನೀಗ ತಾಂತ್ರಿಕವಾಗಿ ಸಮ್ಮಿಶ್ರ ಸರ್ಕಾರದ ಭಾಗವಾಗಿಲ್ಲ, ವಿರೋಧ ಪಕ್ಷದಲ್ಲಿದ್ದೇನೆ. ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಹೇಳಿದರೆ ಖಂಡಿತ ಬಿಜೆಪಿಗೆ ಬೆಂಬಲ ನೀಡುತ್ತೇನೆ. ನಾನು ಬಿಎಸ್‍ಪಿಯ ಕಟ್ಟಾ ಕಾರ್ಯಕರ್ತ, ಬಿಎಸ್‍ಪಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ನಾನು ಬಿಎಸ್‍ಪಿ ಪಕ್ಷ ತೊರೆದು ಬಿಜೆಪಿಗೆ ಹೋಗುವುದು ಕೇವಲ ವದಂತಿಯಷ್ಟೇ ಎಂದು ಹೇಳಿದ್ದರು.

  • ಅತೃಪ್ತರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು – ಸ್ಪೀಕರ್ ಕಚೇರಿಯಲ್ಲಿ ದೋಸ್ತಿಗಳಿಂದ ಚರ್ಚೆ

    ಅತೃಪ್ತರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು – ಸ್ಪೀಕರ್ ಕಚೇರಿಯಲ್ಲಿ ದೋಸ್ತಿಗಳಿಂದ ಚರ್ಚೆ

    ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಮೈತ್ರಿ ನಾಯಕರು ತೀರ್ಮಾನಿಸಿದ್ದು, ಕೋರ್ಟ್ ಬಿಗ್ ರಿಲೀಫ್ ನೀಡಿದ ಹಿನ್ನೆಲೆಯಲ್ಲಿ ಸದನದ ಮೂಲಕ ಕ್ರಮ ಕೈಗೊಳ್ಳಬಹುದೇ ಎಂಬ ದಾರಿಯನ್ನು ಹುಡುಕುತ್ತಿದ್ದಾರೆ.

    ಈ ಸಂಬಂಧ ದೋಸ್ತಿ ನಾಯಕರು ಸ್ಪೀಕರ್ ರಮೇಶ್ ಕುಮಾರ್ ಜೊತೆ ಚರ್ಚೆ ನಡೆಸಿ ಮಾತನಾಡಿದ್ದಾರೆ. ಸ್ಪೀಕರ್ ಭೇಟಿಯ ಬಳಿಕ ಸಚಿವ ಕೃಷ್ಣಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದನದಿಂದ ಹೊರಗುಳಿದರೆ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ? ಶಾಸಕಾಂಗ ಪಕ್ಷದ ನಿರ್ದೇಶನ ಉಲ್ಲಂಘಿಸಿದ್ದಕ್ಕೆ ಕ್ರಮ ಕೈಗೊಳ್ಳಬಹುದೇ ಎನ್ನುವುದರ ಕುರಿತು ಸ್ಪಷ್ಟೀಕರಣ ಪಡೆಯಲು ಸ್ಪೀಕರ್ ಭೇಟಿಯಾಗಿದ್ದೆವು ಎಂದು ಸ್ಪಷ್ಟಪಡಿಸಿದರು.

    ಸದನದಲ್ಲಿ ಭಾಗವಹಿಸಬೇಕೋ? ಬೇಡವೋ ಎನ್ನುವುನ್ನು ಕೋರ್ಟ್ ಶಾಸಕರ ವಿವೇಚನೆ ಬಿಟ್ಟಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನಾವು ವಾದ ಮಂಡಿಸಲು ಅವಕಾಶವನ್ನೂ ನೀಡದೇ ನಮ್ಮನ್ನು ವಿಚಾರಣೆಗೂ ಕರೆಯದೆ, ತೀರ್ಪು ನೀಡಿ ನಮ್ಮ ಹಕ್ಕುಗಳನ್ನು ಕಟ್ಟಿ ಹಾಕಿದೆ ಎಂದರು.

    ವಿಪ್ ಜಾರಿಗೊಳಿಸುವುದು ಶಾಸಕಾಂಗ ಪಕ್ಷಗಳ ಹಕ್ಕು. ಅಲ್ಲದೆ, ಶಾಸಕರು ಸದನದಲ್ಲಿ ಭಾಗವಹಿಸುವುದಕ್ಕೆ ವಿನಾಯಿತಿ ನೀಡುವುದು ಹಕ್ಕು ಕಿತ್ತುಕೊಂಡಂತೆ. ಸದನದ ಹೊರಗುಳಿದರೆ, ಕ್ರಮ ಕೈಗೊಳ್ಳುವ ನಿಯಮ ಸದನಲ್ಲಿದೆ. ಆ ಕ್ರಮಕ್ಕೆ ವಿನಾಯಿತಿ ಇದೆಯೇ ಎಂದು ಸ್ಪೀಕರ್ ಬಳಿ ಪ್ರಶ್ನಿಸಿದೆವು. ಇದಕ್ಕೆ ಸ್ಪೀಕರ್ ಉತ್ತರಿಸಿ, ಸದನದ ಹೊರಗುಳಿಯಬೇಕಿದ್ದರೆ ಸದನದ ಒಪ್ಪಿಗೆ ಪಡೆಯಬೇಕು. ಇಲ್ಲವೆ, ಸಭಾಧ್ಯಕ್ಷರ ಮೂಲಕ ಅನುಮತಿ ಪಡೆಯಬೇಕು ಎಂಬ ನಿಯಮ ಕರ್ನಾಟಕದಲ್ಲಿದೆ. ಇದಕ್ಕೂ ವಿನಾಯಿತಿ ನೀಡಲಾಗಿದೆಯೇ ಎಂದು ನಾವು ಪ್ರಶ್ನಿಸಿದ್ದೇವೆ. ಇದಕ್ಕೆ ಸ್ಪೀಕರ್ ಉತ್ತರಿಸಿ, ಹೊರಗುಳಿದರೆ ಸದನದ ಒಪ್ಪಿಗೆ ಪಡೆಯಲೇಬೇಕೆಂದು ತಿಳಿಸಿದ್ದಾರೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

    ವಿಪ್ ಜಾರಿ ಕುರಿತು ಸಹ ಸ್ಪೀಕರ್ ಸ್ಪಷ್ಟಪಡಿಸಿದ್ದು, ನೀವು ನೀಡಿರುವ ಶಾಸಕಾಂಗ ಪಕ್ಷಗಳ ಹಕ್ಕುಗಳು ನಿಮ್ಮ ವಿವೇಚನೆಗೆ ಬಿಟ್ಟದ್ದು, ಅದರ ಕುರಿತು ನಾನು ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ. ಆದರೆ, ನಿಮಗಿರುವ ಹಕ್ಕುಗಳ ಪ್ರಕಾರ, ನಿಮ್ಮ ನಿರ್ದೇಶನ ಉಲ್ಲಂಘನೆಯಾಗಿದ್ದಲ್ಲಿ ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ, ಶಾಸಕಾಂಗ ಪಕ್ಷಗಳು ನನಗೆ ಅರ್ಜಿ ಸಲ್ಲಿಸಿದರೆ, ಕರೆದು ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

    ಅತೃಪ್ತ ಶಾಸಕರ ವಿರುದ್ಧ ಏನು ನಿರ್ಧಾರ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪಕ್ಷಗಳು ಸಭೆ ನಡೆಸಿ ನಾಳೆಯೊಳಗೆ ನಿರ್ಧಾರ ಕೈಗೊಳ್ಳುತ್ತವೆ. ವಿಪ್ ನೀಡುವ ಕುರಿತು ಪಕ್ಷದ ಮಟ್ಟದಲ್ಲಿ ತೀರ್ಮಾನ ಮಾಡಲಾಗುವುದು. ಇಲ್ಲಿಯವರೆಗೆ ಚರ್ಚೆ ನಡೆದ ಪ್ರಕಾರ ವಿಪ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

  • ಸುಪ್ರೀಂ ಆದೇಶದ ಬೆನ್ನಲ್ಲೇ ಬೆಂಗ್ಳೂರಿನತ್ತ ಅತೃಪ್ತ ಶಾಸಕರು

    ಸುಪ್ರೀಂ ಆದೇಶದ ಬೆನ್ನಲ್ಲೇ ಬೆಂಗ್ಳೂರಿನತ್ತ ಅತೃಪ್ತ ಶಾಸಕರು

    ಮುಂಬೈ: ಇಂದು ಸಂಜೆ ವೇಳೆಗೆ ಅರ್ಜಿ ಸಲ್ಲಿಸಿರುವ ಶಾಸಕರನ್ನು ವಿಚಾರಣೆ ನಡೆಸಿ ರಾಜೀನಾಮೆ ತೀರ್ಮಾನ ಕೈಗೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರೆಬೆಲ್ ಶಾಸಕರು ಬೆಂಗಳೂರಿಗೆ ಬರಲು ಸಿದ್ಧತೆ ನಡೆಸಿದ್ದಾರೆ.

    ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು, ಉಳಿದ ರೆಬೆಲ್ ಶಾಸಕರು ಇಂದು ಸಂಜೆ ವೇಳೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಮುಖ್ಯಮಂತ್ರಿಗಳು ಕರೆದಿರುವ ಸಚಿವ ಸಂಪುಟ ಸಭೆಯತ್ತ ಎಲ್ಲ ಅತೃಪ್ತರ ಚಿತ್ತ ಹರಿದಿದ್ದು, ಸಂಪುಟದಲ್ಲಿ ಕೈಗೊಳ್ಳುವ ತೀರ್ಮಾನ ಮೇಲೆ ಎಲ್ಲ ಶಾಸಕರ ಗಮನ ಕೇಂದ್ರಿಕೃತವಾಗಿದೆ. ಬುಧವಾರ ನಡೆದ ರಾಜಕೀಯ ಹೈಡ್ರಾಮಾ ಹಿನ್ನೆಲೆ ಕಾದು ನೋಡುವ ತಂತ್ರವನ್ನು ಅತೃಪ್ತ ಶಾಸಕರು ಅನುಸರಿಸುತ್ತಿದ್ದಾರೆ.

    ಬೆಳಗ್ಗೆ ಎಲ್ಲ ಶಾಸಕರು ಒಂದೆ ಕಡೆ ಸೇರಿ ಮುಂದಿನ ನಿರ್ಧಾರ ಬಗ್ಗೆ ಚರ್ಚೆಸಿದ್ದು, ಅತ್ತ ಮಹಾರಾಷ್ಟ್ರ ಬಿಜೆಪಿ ಮುಖಂಡರು ಹೋಟೆಲ್‍ನಲ್ಲಿಯೇ ಇದ್ದಾರೆ. ಹೋಟೆಲ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.

  • ನನ್ನನ್ನು ಬಲವಂತವಾಗಿ ಹೊರ ಹಾಕಿದ್ದಾರೆ – ಮುಂಬೈ ಪೊಲೀಸರ ವಿರುದ್ಧ ಡಿಕೆಶಿ ಕಿಡಿ

    ನನ್ನನ್ನು ಬಲವಂತವಾಗಿ ಹೊರ ಹಾಕಿದ್ದಾರೆ – ಮುಂಬೈ ಪೊಲೀಸರ ವಿರುದ್ಧ ಡಿಕೆಶಿ ಕಿಡಿ

    ಮುಂಬೈ: ಅತೃಪ್ತ ಶಾಸಕರನ್ನು ಭೇಟಿ ಮಾಡಲು ಬಂದಿದ್ದ ನನ್ನನ್ನು ಮುಂಬೈ ಪೊಲೀಸರು ಬಲವಂತವಾಗಿ ಹೊರ ಹಾಕಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಬೆಂಗಳೂರಿಗೆ ಬರುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ನಮ್ಮ ಶಾಸಕರನ್ನು ಭೇಟಿ ಮಾಡಲು ಬಂದಿದ್ದೆವು. ಅಲ್ಲಿದ್ದ ಶಾಸಕರೂ ಸಹ ಕರೆ ಮಾಡಿ ದಯವಿಟ್ಟು ನೀವು ಬರಬೇಕು ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆ ಹೋಟೆಲ್ ರೂಂ ಬುಕ್ ಮಾಡಿಕೊಂಡು ಶಾಸಕರಾದ ಜಿ.ಟಿ.ದೇವೇಗೌಡ, ಬಾಲಕೃಷ್ಣ ಹಾಗೂ ಶಿವಲಿಂಗೇ ಗೌಡ ಅವರೊಂದಿಗೆ ಆಗಮಿಸಿದ್ದೆವು. ಆದರೆ ಪೊಲೀಸರು 144 ಸೆಕ್ಷನ್ ಜಾರಿ ಮಾಡಿ ತಡೆದರು ಎಂದು ಆರೋಪಿಸಿದರು.

    ಹೋಟೆಲ್ ಬಳಿ ಬಂದಾಗ ಸಿಬ್ಬಂದಿ ರೂಂ ಕೀ ಸಹ ತಂದುಕೊಟ್ಟಿದ್ದರು. ನಂತರ ಇಲ್ಲ ನಿಮ್ಮ ರಿಸರ್ವೇಶನ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಹೋಟೆಲ್ ಮ್ಯಾನೇಜ್‍ಮೆಂಟ್‍ನವರು ಹೇಳಿದರು. ನಾವು ಕಾನೂನು ಬಾಹಿರವಾಗಿ ಬಂದಿರಲಿಲ್ಲ. ನಾಲ್ಕೇ ಜನ ಬಂದಿದ್ದೇವು. ಐದಾರು ಗಂಟೆಗಳ ನಂತರ ನನ್ನನ್ನು ಈ ಗೆಸ್ಟ್ ಹೌಸ್‍ಗೆ ಕರೆ ತಂದಿದ್ದರು. ಇದೀಗ ನನ್ನನ್ನು ಹೊರ ಹಾಕಿದ್ದಾರೆ. ಆದರೆ, ನಾನು ಇಲ್ಲೇ ಇರಬೇಕು, ಏನೇ ಆದರೂ ಅವರನ್ನು ಭೇಟಿ ಮಾಡಿಯೇ ಹೋಗಬೇಕೆಂದು ನಿರ್ಧರಿಸಿದ್ದೆ ಎಂದರು.

    ಪೊಲೀಸರು ನನಗೆ ಮುಂಬೈನಿಂದ ನೀವು ಹೋಗಬೇಕು, ವಿಮಾನ ನಿಲ್ದಾಣದವರೆಗೆ ನಿಮ್ಮನ್ನು ಬಿಡಲೇಬೇಕೆಂದು ನಮಗೆ ಆದೇಶವಿದೆ ಎಂದು ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ವಿರೋಧಿ ನೀತಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರಿಗಳು ಈ ರೀತಿ ದುರ್ನಡತೆ ತೋರುತ್ತಿರುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.

    ಬಿಜೆಪಿಯವರು ನಮ್ಮದೇನು ಕೈವಾಡ ಇಲ್ಲ ಎಂದು ಹೇಳುತ್ತಾರೆ. ಆದರೆ ಹೋಟೆಲ್ ಒಳಗಡೆ ಬಿಜೆಪಿಯವರಿದ್ದಾರೆ. ನಮ್ಮ ಮಿತ್ರರು ಬರುತ್ತಾರೆಂದು ಈಗಲೂ ನನಗೆ ನಂಬಿಕೆ ಇದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉಳಿಸಿಕೊಳ್ಳುತ್ತಾರೆ. ಎಲ್ಲ ನೋವನ್ನು ಮರೆತು ಚರ್ಚೆ ಮಾಡಿ ಒಗ್ಗಟ್ಟಿನಿಂದ ಇರುತ್ತೇವೆ ಎಂದರು.

    ನನ್ನನ್ನು ಮುಂಬೈಯಿಂದ ಹೊರಗಡೆ ಹಾಕಿದ್ದಾರೆ. ಬೆಳಗಿನಿಂದಲೂ ಮುಂಬೈನ ಎಲ್ಲ ಪಕ್ಷದ ಮುಖಂಡರು ಒಟ್ಟಿಗೆ ಬಂದು ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅಲ್ಲದೆ, ನಮ್ಮ ಪಕ್ಷದ ಕಾರ್ಯಕರ್ತರು ಸೈನ್ಯದ ರೀತಿ ನಿಂತು ಹೋರಾಟ ನಡೆಸಿದ್ದಾರೆ ಎಂದು ಹೇಳಿದರು.

    ಬೆಳಗ್ಗಿನಿಂದ ರಿನೈಸನ್ಸ್ ಹೋಟೆಲ್ ಮುಂದೆ ಅತೃಪ್ತರ ಭೇಟಿಗಾಗಿ ಕಾದು ಕುಳಿತಿದ್ದ ಸಚಿವ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು 6 ಗಂಟೆಯ ಹೈಡ್ರಾಮದ ಬಳಿಕ ವಶಕ್ಕೆ ಪಡೆದಿದ್ದರು. ನಂತರ ಸಂಜೆ 6.30ರ ವೇಳೆಗೆ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನು ಭದ್ರತೆಯಲ್ಲಿ ಮುಂಬೈ ವಿಮಾನ ನಿಲ್ದಾಣದವರೆಗೆ ಕರೆ ತಂದು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿದರು.

    10 ಗಂಟೆಗಳ ಡ್ರಾಮಾ:
    ಬಿಜೆಪಿ ಮುಖಂಡರಿಬ್ಬರು ಮಂಗಳವಾರ ರಾತ್ರಿ ಅತೃಪ್ತ ಶಾಸಕರನ್ನು ಭೇಟಿಯಾದ ಬೆನ್ನಲ್ಲೇ ಇಂದು ಸಚಿವ ಡಿಕೆ ಶಿವಕುಮಾರ್, ಜಿ.ಟಿ ದೇವೇಗೌಡ ಹಾಗೂ ಶಾಸಕ ಶಿವಲಿಂಗೇ ಗೌಡ ಅವರು ಮುಂಬೈಗೆ ತೆರಳಿದ್ದರು. ಮುಂಬೈಗೆ ಬರುವ ಮಾಹಿತಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಅಲರ್ಟ್ ಆಗಿದ್ದು, ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿ 144 ಸೆಕ್ಷನ್ ಹಾಕಿದ್ದರು. ಹೀಗಾಗಿ ಹೋಟೆಲ್ ಬಳಿ ಬಂದರೂ ಡಿಕೆಶಿಗೆ ಒಳಗಡೆ ಹೋಗಲು ಸಾಧ್ಯವಾಗಿರಲಿಲ್ಲ.

    ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಾವು ಒಂದೇ ಕುಟುಂಬದವರು. ನಮ್ಮ ಮಧ್ಯೆ ಸ್ವಲ್ಪ ಸಮಸ್ಯೆ ಆಗಿದೆ. ಅದನ್ನು ನಾವು ಸರಿಪಡಿಸಲು ಬಂದಿದ್ದೇವೆಯೇ ಹೊರತು, ಬೆದರಿಕೆ ಹಾಕಲು ಬಂದಿಲ್ಲ. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಸಚಿವರು ಮನವಿ ಮಾಡಿಕೊಂಡರೂ ಪೊಲೀಸರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆಶಿ ಹಠಕ್ಕೆ ಮಣಿದು ರೂಮ್ ಕೊಡಲು ನಿರ್ಧಾರ ಮಾಡಿದ್ದರು.

    ಹೋಟೆಲ್ ಸಿಬ್ಬಂದಿ ಮತ್ತು ಪೊಲೀಸರು ನಡುವೆ ಮಾತುಕತೆ ನಡೆದಿತ್ತು, ಡಿ.ಕೆ.ಶಿವಕುಮಾರ್ ಅವರಿಗೆ ಹೋಟೆಲ್‍ನಲ್ಲಿ ರೂಮ್ ಕೊಡಲು ಒಪ್ಪಿಗೆ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕರ ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ಡಿಕೆಶಿಗೆ ರೂಮ್ ಕೊಡಲು ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದರು. ನನಗೆ ಶಾಸಕರು ಇರುವ ಬಿಲ್ಡಿಂಗ್‍ನಲ್ಲೇ ರೂಮ್ ಬೇಕು ಎಂದು ಹೋಟೆಲ್ ಸಿಬ್ಬಂದಿ ಬಳಿ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದರು. ಪೊಲೀಸರು ಮತ್ತು ಸಿಬ್ಬಂದಿ ಡಿಕೆಶಿ ಅವರ ಮನವೊಲಿಸಲು ಪ್ರಯತ್ನ ಮಾಡಿದ್ದರು. ಆದರೂ ಡಿಕೆಶಿ ತನ್ನ ಪಟ್ಟು ಬಿಡದ ಹಿನ್ನೆಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

  • ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    – ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ

    ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.

    ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv